Tag: recipe

  • ಚಾಟ್ಸ್ ತಿನ್ನೋಕೆ ಆಗ್ತಿಲ್ಲ, ಮನೆಯಲ್ಲೇ ಮಾಡಿ ಗರಿಗರಿ ಅವಲಕ್ಕಿ

    ಚಾಟ್ಸ್ ತಿನ್ನೋಕೆ ಆಗ್ತಿಲ್ಲ, ಮನೆಯಲ್ಲೇ ಮಾಡಿ ಗರಿಗರಿ ಅವಲಕ್ಕಿ

    ಕೊರೊನಾ ವೈರಸ್‍ನಿಂದ ಇಡೀ ದೇಶವೇ 21 ದಿನ ಲಾಕ್ ಆಗಿದೆ. ಹೊರಗಡೆ ಹೋಗಿ ಸುತ್ತಾಡಿಕೊಂಡು ಟೈಂ ಪಾಸ್ ಮಾಡೋಣ ಎಂದರೆ ಅದು ಸಾಧ್ಯವಿಲ್ಲ. ಸಂಜೆಯಾದರೆ ಚಾಟ್ಸ್ ಇಲ್ಲ, ಟೀ ಟೈಂನಲ್ಲಿ ತಿನ್ನಲು ಚುರುಮುರಿ, ಚೌಚೌನೂ ಸಿಗುತ್ತಿಲ್ಲ. ಇದೆಲ್ಲರ ನಡುವೆ ಹೇಗಪ್ಪ ಮನೆಯಲ್ಲಿ ಟೈಂ ಪಾಸ್ ಮಾಡೋದು ಅಂತ ಬೇಸರದಲ್ಲಿದ್ದೀರಾ?. ಹೀಗಾಗಿ ನಾವು ನಿಮಗೆ ಚುರುಮುರಿ ಮಾಡುವುದನ್ನು ಹೇಳಿಕೊಡುತ್ತೇವೆ. ದಿನಸಿ ಅಂಗಡಿಯನ್ನು ಸರ್ಕಾರ ಬಂದ್ ಮಾಡಿಲ್ಲ. ಹೀಗಾಗಿ ನಿಮ್ಮ ಮನೆಯಿಂದ ಯಾರಾದರೂ ಒಬ್ಬರೂ ಮಾಸ್ಕ್ ಧರಿಸಿಕೊಂಡು ದಿನಸಿ ಅಂಗಡಿಗೆ ಹೋಗಿ, ಸಾಮಾಜಿಕ ಅಂತರ ಕಾಯ್ದುಕೊಂಡು ಅವಲಕ್ಕಿ, ಕಡಲೆಹಿಟ್ಟು, ಕಡಲೆಬೇಳೆ, ಹೆಸರು ಬೇಳೆ, ಬಟಾಣಿ, ಕಡ್ಲೆಬೀಜ, ಕಡ್ಲೆಕಾಳನ್ನು ತೆಗೆದುಕೊಂಡು ಬನ್ನಿ. ನಿಮಗಾಗಿ ಗರಿಗರಿ ಅವಲಕ್ಕಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಗಟ್ಟಿ ಅವಲಕ್ಕಿ – ಕಾಲು ಕೆ.ಜಿ
    2. ಎಣ್ಣೆ – ಕರಿಯಲು

    ಒಗ್ಗರಣೆಗೆ
    1. ಎಣ್ಣೆ – 2-3 ಚಮಚ
    2. ಸಾಸಿವೆ – ಸ್ವಲ್ಪ
    3. ಕೆಂಪು ಮೆಣಸಿನಕಾಯಿ – 6-7
    4. ಕಡ್ಲೆಕಾಯಿ ಬೀಜ – 50 ಗ್ರಾಂ
    5. ಹುರಿಗಡಲೆ – 50 ಗ್ರಾಂ
    6. ಉಪ್ಪು – ರುಚಿಗೆ ತಕ್ಕಷ್ಟು
    7. ಇಂಗು – ಚಿಟಿಕೆ
    8. ಬೆಳ್ಳುಳ್ಳಿ -2-3 ಎಸಳು
    9. ಕರಿಬೇವು – ಸ್ವಲ್ಪ

    ಮಾಡುವ ವಿಧಾನ
    * ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಕಾಯಲು ಬಿಡಿ.
    * ಈಗ ಕ್ಲೀನ್ ಮಾಡಿದ ಅವಲಕ್ಕಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ.
    * ಸಣ್ಣ ಸಣ್ಣ ತೂತಿರುವ ಜಾಲರಿ ಬಳಸಿದರೆ ಅವಲಕ್ಕಿ ಫ್ರೈಗೆ ಉತ್ತಮ.
    * ಹೆಚ್ಚು ಹೊತ್ತು ಬಿಡಬೇಡಿ. ಕೇವಲ ಸೆಕೆಂಡ್‍ಗಳಲ್ಲಿ ಅವಲಕ್ಕಿ ಫ್ರೈ ಆಗುತ್ತದೆ. ಹೀಗೆ ಎಲ್ಲಾ ಅವಲಕ್ಕಿಯನ್ನು ಫ್ರೈ ಮಾಡಿಕೊಳ್ಳಿ.
    * ಈಗ ಒಗ್ಗರಣೆಗೆ ರೆಡಿ ಮಾಡಿಕೊಳ್ಳಿ.
    * ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ
    * ಈಗ ಸಾಸಿವೆ, ಕರಿಬೇವು, ಕೆಂಪು ಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿ ಹಾಕಿ.
    * ನಂತರ ಕಡ್ಲೆಕಾಯಿ ಬೀಜ, ಹುರಿಗಡಲೆ ಹಾಕಿ ಫ್ರೈ ಮಾಡಿ ಸ್ಟೌ ಆರಿಸಿ.
    * ಒಗ್ಗರಣೆಗೆ ಫ್ರೈ ಮಾಡಿಕೊಂಡ ಅವಲಕ್ಕಿಯನ್ನು ಸೇರಿಸಿ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಫಟಾಫಟ್ ಅಂತ ಗರಿಗರಿ ಅವಲಕ್ಕಿ ಸವಿಯಲು ರೆಡಿ.

    ಈ ಲಾಕ್‍ಡೌನ್ ದಿನದಲ್ಲಿ ಸ್ವಲ್ಪ ಜಾಸ್ತಿನೇ ಮಾಡಿಕೊಂಡು ಟೈಂ ಪಾಸ್ ಮಾಡಿ. ಇದನ್ನು ಒಂದು ವಾರಗಳ ಕಾಲ ಇಟ್ಟುಕೊಂಡು ತಿನ್ನಬಹುದು.

  • ಹೊರಗೆ ಕೊರೊನಾ ಭೀತಿ- ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಆಲೂ ಮಂಚೂರಿ

    ಹೊರಗೆ ಕೊರೊನಾ ಭೀತಿ- ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಆಲೂ ಮಂಚೂರಿ

    ವೀಕೆಂಡ್ ಬಂದ್ರೆ ಮಕ್ಕಳನ್ನ ಹೊರಗೆ ಕರೆದುಕೊಂಡು ಹೋಗಬೇಕು. ವೀಕೆಂಡ್ ಮಸ್ತಿ ಮಾಡೋಣ ಅಂದ್ರೆ ಎಲ್ಲೆಡೆ ಕೊರೊನಾ ಭೀತಿ. ಇನ್ನು ಸರ್ಕಾರ ಜನಸಂದಣಿ ಇರುವ ಪ್ರದೇಶಗಳಿಗೆ ತೆರಳಬೇಡಿ ಎಂದು ಎಚ್ಚರಿಕೆಯನ್ನು ನೀಡಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರೋದರಿಂದ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳನ್ನು ಮನೆಯಲ್ಲಿ ಹಿಡಿದಿಟ್ಟುಕೊಳ್ಳುವುದು ಅಷ್ಟು ಸುಲಭವಲ್ಲ. ಹೊರಗಿನ ಫಾಸ್ಟ್ ಫುಡ್ ಗಾಗಿ ಹಠ ಹಿಡಿಯುತ್ತವೆ. ಹಾಗಾಗಿ ಮನೆಯಲ್ಲಿಯೇ ಚಿಕ್ಕವರಿಂದ ದೊಡ್ಡ ವಯಸ್ಸಿನವರಗೆ ಎಲ್ಲರಿಗೂ ಇಷ್ಟವಾಗುವ ಆಲೂ ಮಂಚೂರಿ ಮಾಡಿ ವೀಕೆಂಡ್ ಆನಂದಿಸಿ.

    ಬೇಕಾಗುವ ಸಾಮಾಗ್ರಿಗಳು
    * ದೊಡ್ಡ ಆಲೂಗಡ್ಡೆ – 4
    * ಮೈದಾ ಹಿಟ್ಟು – ಅರ್ಧ ಬಟ್ಟಲು
    * ಜೋಳದ ಹಿಟ್ಟು – ಮುಕ್ಕಾಲು ಬಟ್ಟಲು
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ಅರ್ಧ ಸ್ಪೂನ್
    * ಖಾರದ ಪುಡಿ- 1 ಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ ಕರಿಯಲು

    ಬೇಕಾಗುವ ಸಾಮಾಗ್ರಿಗಳು
    * ಹಸಿಮೆಣಸಿನ ಕಾಯಿ – 3 ಸಣ್ಣಗೆ ಹೆಚ್ಚಿದ್ದು
    * ಬೆಳ್ಳುಳ್ಳಿ – 2-3 ಎಸಳು ಸಣ್ಣಗೆ ಹೆಚ್ಚಿದ್ದು
    * ಕ್ಯಾಪ್ಸಿಕಂ – ಸಣ್ಣಗೆ ಹೆಚ್ಚಿದ್ದು
    * ಈರುಳ್ಳಿ – ಸಣ್ಣಗೆ ಹೆಚ್ಚಿದ್ದು
    * ಸೋಯಾ ಸಾಸ್ – ಸ್ವಲ್ಪ
    * ಟೊಮೆಟೋ ಸಾಸ್- 1 ಚಮಚ
    * ಚಿಲ್ಲಿ ಸಾಸ್- ಅರ್ಧ ಚಮಚ
    * ಪೆಪ್ಪರ್ ಪೌಡರ್ – ಸ್ವಲ್ಪ

    ಮಾಡುವ ವಿಧಾನ
    * ಮೊದಲಿಗೆ ಆಲೂಗಡ್ಡೆಯ ಸಿಪ್ಪೆ ತೆಗೆಯಬೇಕು.
    * ಬಳಿಕ ಕ್ಯೂಬ್ ರೀತಿಯಲ್ಲಿ ಆಲೂಗಡ್ಡೆಯನ್ನು ಸಣ್ಣಗೆ ಹೆಚ್ಚಿಕೊಂಡು ಅರ್ಧಂಬರ್ಧ ಬೇಯಿಸಿಕೊಳ್ಳಬೇಕು. ಬಳಿಕ ನೀರು ಸೋಸಿ ಒಂದು ಬದಿಗಿಡಿ.
    * ಈಗ ಒಂದು ಮಿಕ್ಸಿಂಗ್ ಬೌಲ್‍ಗೆ ಮೈದಾ ಹಿಟ್ಟು, ಜೋಳದ ಹಿಟ್ಟು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ನೀರು ಸೋಸಿದ ಆಲೂಗಡ್ಡೆಯನ್ನು ಮಿಶ್ರಣ ಹಾಕಿ 5-10 ನಿಮಿಷ ನೆನೆಯಲು ಬಿಡಿ.
    * ಈಗ ಕರಿಯುವ ಪಾತ್ರೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ.
    * ಈಗ ಕಾದ ಎಣ್ಣೆಗೆ ಆಲೂಗಡ್ಡೆಯನ್ನು ಗೋಲ್ಡನ್ ಬ್ರೌನ್ ಬರೋವರೆಗೆ ಕರಿಯಿರಿ.
    * ಆಲೂಗಡ್ಡೆ ಎಲ್ಲವನ್ನು ಕರಿದಿಟ್ಟುಕೊಳ್ಳಿ.
    * ಈಗ ಒಗ್ಗರಣೆ ಹಾಕಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ್ದ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಪ್ಸಿಕಂ ಅನ್ನು ಹಾಕಿ ಹುರಿದುಕೊಳ್ಳಿ.
    * ಬಳಿಕ ಬಾಣಲೆಗೆ ಸೋಯಾ ಸಾಸ್, ಟೊಮೆಟೋ ಸಾಸ್, ಪೆಪ್ಪರ್ ಪೌಡರ್ ಹಾಕಿ ಫ್ರೈ ಮಾಡಿ ಬಳಿಕ ಉಪ್ಪು ಹಾಕಿ.
    * ಈಗ ಒಂದು ಚಮಚದಷ್ಟು ಜೋಳದ ಹಿಟ್ಟಿಗೆ ನೀರು ಸೇರಿಸಿ ಒಗ್ಗರಣೆಗೆ ಸೇರಿಸಿ.
    * ಬಳಿಕ ಕರಿದಿಟ್ಟುಕೊಂಡ ಆಲೂಗಡ್ಡೆಯನ್ನು ಮಿಕ್ಸ್ ಮಾಡಿ. 2-3 ನಿಮಿಷ ಫ್ರೈ ಮಾಡಿ.
    * ಸಿಂಪಲ್ ಆಲೂ ಮಂಚೂರಿ ಸರ್ವ್ ಮಾಡುವಾಗ ಮೇಲೆ ಕೊತ್ತಂಬರಿ ಸೊಪ್ಪು ಅಥವಾ ಈರುಳ್ಳಿ ಸೊಪ್ಪು ಉದುರಿಸಿ. ಸಾಸ್ ಜೊತೆ ಸವಿಯಲು ಕೊಡಿ.

    https://www.facebook.com/publictv/videos/633247700794599/

  • ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿ ಚಟ್ನಿ ಮಾಡುವ ವಿಧಾನ

    ಉತ್ತರ ಕರ್ನಾಟಕ ಶೈಲಿಯ ಬದನೆಕಾಯಿ ಚಟ್ನಿ ಮಾಡುವ ವಿಧಾನ

    ದನೆಕಾಯಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೂ ಬದನೆಕಾಯಿ ಬಾತ್ ಅಂದ್ರೆ ಕೆಲವರಿಗೆ ಬಲು ಇಷ್ಟ. ಖಡಕ್ ರೊಟ್ಟಿ ಜೊತೆ ಎಣ್ಣೆಗಾಯಿ ಇದ್ರೆ ಆ ಊಟದ ಗಮ್ಮತ್ತೇ ಬೇರೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಬದನೆಕಾಯಿಗೆ ವಿಶೇಷ ಸ್ಥಾನಮಾನ. ಗೃಹಿಣಿಯರು ಬದನೆಕಾಯಿ ಬಳಸಿ ವಿವಿಧ ರಸಾಯನಗಳನ್ನ ಮಾಡ್ತಾರೆ. ಅಂತಹ ವಿಶೇಷ ಪಾಕಗಳಲ್ಲೊಂದು ಬದನೆಕಾಯಿ ಚಟ್ನಿ. ದಿನನಿತ್ಯ ದೋಸೆ, ರೊಟ್ಟಿ, ಚಪಾತಿ ಜೊತೆ ಒಂದೇ ರೀತಿಯ ಚಟ್ನಿ ತಿಂದು ಬೇಜಾರಾಗಿದ್ರೆ ಒಮ್ಮೆ ಬದನೆಕಾಯಿ ಚಟ್ನಿ ತಯಾರಿಸಿ ನೋಡಿ.

    ಬೇಕಾಗುವ ಸಾಮಗ್ರಿಗಳು
    * ಬದನೆಕಾಯಿ(ಕೆಂಪು)- 2-3
    * ಕಾಯಿ ತುರಿ – 1 ಕಪ್
    * ಹುರಿಗಡಲೆ – 2-3 ಸ್ಪೂನ್
    * ಹಸಿಮೆಣಸಿನಕಾಯಿ – 5-6
    * ಬೆಳ್ಳುಳ್ಳಿ – 6 ಎಸಳು
    * ಕೊತ್ತಂಬರಿ – ಸ್ವಲ್ಪ
    * ಎಣ್ಣೆ – ಒಗ್ಗರಣೆಗೆ
    * ಸಾಸಿವೆ – ಸ್ವಲ್ಪ
    * ಕರಿಬೇವು – ಸ್ವಲ್ಪ

    ಮಾಡುವ ವಿಧಾನ
    * ಮೊದಲಿಗೆ ಬದನೆಕಾಯಿಯನ್ನು ಚೆನ್ನಾಗಿ ತೊಳೆಯಿರಿ.
    * ಒಂದು ಪಾತ್ರೆ ಬಿಸಿಗಿಟ್ಟು ನೀರು ಕುದಿಯಲು ಬಿಡಿ
    * ಈಗ ಕುದಿಯುತ್ತಿರುವ ನೀರಿಗೆ ಬೆಳ್ಳುಳ್ಳಿ, ಬದನೆಕಾಯಿ ಸೇರಿಸಿ ಬೇಯಿಸಿಕೊಳ್ಳಿ.
    * ಬದನೆ, ಬೆಳ್ಳುಳ್ಳಿ ಬೆಂದ ಬಳಿಕ ನೀರು ಸೋಸಿಕೊಳ್ಳಿ
    * ಈಗ ಒಂದು ಜಾರ್‍ಗೆ ಬೆಂದ ಬದನೆ, ಬೆಳ್ಳುಳ್ಳಿ, ಕಾಯಿ ತುರಿ, ಹಸಿಮೆಣಸಿನಕಾಯಿ, ಹುರಿಗಡಲೆ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ.
    * ಚಟ್ನಿ ನುಣ್ಣಗೆ ಆಗಿದೆ ಅನ್ನೋವಾಗ ಕೊನೆಗೇ ಕೊತ್ತಂಬರಿ ಸೊಪ್ಪು ಸೇರಿಸಿ ಒಂದು ಸುತ್ತು ಮಿಕ್ಸಿ ಆಡಿಸಿ.
    (ಕೊತ್ತಂಬರಿ ಸೊಪ್ಪು ಪೂರ್ತಿ ನುಣ್ಣಗೆ ಆಗದಿರಲಿ, ಸೊಪ್ಪು ತರಿತರಿಯಾಗಿ ಕಾಣುತ್ತಿದ್ದರೆ ಚಟ್ನಿ ಸವಿಯಲು ಚೆಂದ ಮತ್ತು ನೋಡೋಕು ಚೆಂದ)
    * ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಒಗ್ಗರಣೆಗೆ ಸಾಸಿವೆ, ಕರಿಬೇವು ಹಾಕಿ ಸಿಡಿಸಿ.
    * ಈಗ ಒಗ್ಗರಣೆಯನ್ನು ಚಟ್ನಿಗೆ ಮಿಶ್ರಣ ಮಾಡಿ.. ಸರ್ವ್ ಮಾಡಿ.
    ಇದು ಚಪಾತಿ, ದೋಸೆ, ರೊಟ್ಟಿಗೆ ಮ್ಯಾಚ್ ಆಗುವಂತ ಚಟ್ನಿ, ಜೊತೆಗೆ ಬಿಸಿಬಿಸಿ ಅನ್ನಕ್ಕೂ ಹೊಂದಿಕೊಳ್ಳುತ್ತದೆ.

  • ಪದೇ ಪದೇ ಬೇಕು ಎನಿಸುವ ಚಿಕನ್ ಬೋಂಡಾ

    ಪದೇ ಪದೇ ಬೇಕು ಎನಿಸುವ ಚಿಕನ್ ಬೋಂಡಾ

    ಪ್ರತಿದಿನ ಕೆಲಸದ ಒತ್ತಡಗಳ ನಡುವೆ ಸರಿಯಾದ ಅಡುಗೆ ಮಾಡಿಕೊಳ್ಳಲು ಸಮಯ ಸಾಕಾಗಲ್ಲ. ಇನ್ನು ಪತಿ-ಪತ್ನಿ ಉದ್ಯೋಗಿಗಳಾಗಿದ್ರೆ ಮಕ್ಕಳಿಗೂ ಒಂದೇ ರೀತಿಯ ತಿಂಡಿ ತಿಂದು ಬೇಸರವಾಗಿರುತ್ತದೆ. ಭಾನುವಾರ ರಜೆ ದಿನ. ಏನಾದ್ರೂ ಸ್ಪೆಷಲ್ ಬಾಡೂಟ ಮಾಡೋಣ ಅಂತ ಪ್ಲಾನ್ ಮಾಡಿಕೊಂಡಿದ್ದರೆ ಒಮ್ಮೆ ಚಿಕನ್ ಬೋಂಡಾ ಟ್ರೈ ಮಾಡಿ. ಒಮ್ಮೆ ತಿಂದ್ರೆ ಪದೇ ಪದೇ ಬೇಕೆನಿಸುವ ಚಿಕನ್ ಬೋಂಡಾ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    * ಮೊಳೆ ಇಲ್ಲದ ಚಿಕನ್ ಪೀಸ್ – ಅರ್ಧ ಕೆಜಿ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಜೋಳದ ಹಿಟ್ಟು- ಮುಕ್ಕಾಲು ಬಟ್ಟಲು
    * ಮೈದಾ ಹಿಟ್ಟು- ಅರ್ಧ ಬಟ್ಟಲು
    * ಪೆಪ್ಪರ್ ಪುಡಿ – ಖಾರಕ್ಕೆ ತಕ್ಕಷ್ಟು
    * ಸೋಯಾ ಸಾಸ್ – 1 ಸ್ಪೂನ್
    * ಕೆಂಪು ಮೆಣಸಿನಕಾಯಿ ಪುಡಿ – 1 ಸ್ಪೂನ್
    * ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ಮೊಳೆ ಇಲ್ಲದ ಚಿಕನ್ ಅನ್ನು ಸಣ್ಣಗೆ ಕತ್ತರಿಸಿಕೊಂದು ಚೆನ್ನಾಗಿ ನೀರಿನಲ್ಲಿ ತೊಳೆದಿಟ್ಟುಕೊಳ್ಳಬೇಕು.
    * ಬಳಿಕ ತೊಳೆದ ಚಿಕನ್ ಅನ್ನು ಒಂದು ಮಿಕ್ಸಿಂಗ್ ಬೌಲ್‍ಗೆ ಹಾಕಿಕೊಳ್ಳಿ.
    * ಬೌಲ್‍ಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಸೋಯಾ ಸಾಸ್, ಖಾರದ ಪುಡಿ, ಪೆಪ್ಪರ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 15ರಿಂದ 20 ನಿಮಿಷ ನೆನೆಯಲು ಬಿಡಿ.
    * ಈಗ ಒಂದು ಬೌಲ್‍ಗೆ ಜೋಳದ ಹಿಟ್ಟು, ಮೈದಾ ಹಿಟ್ಟು, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಸ್ವಲ್ಪ ನೀರು ಹಾಕಿಕೊಂಡು ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
    * ಹಿಟ್ಟು ತೀರಾ ತೆಳ್ಳಗೆ ಇರಬಾರದು. ಚಿಕನ್ ಪೀಸ್ ಅನ್ನು ಹಿಟ್ಟಿನಲ್ಲಿ ಅದ್ದಬೇಕು.
    * ಈಗ ಕಾದ ಎಣ್ಣೆಗೆ ಹಿಟ್ಟಿನಲ್ಲಿ ಅದ್ದಿದ್ದ ಚಿಕನ್ ಪೀಸ್ ಅನ್ನು ಹಾಕಿ ಗೋಲ್ಡನ್ ಬ್ರೌನ್ ಆಗೋ ತನಕ ಬೇಯಿಸಿ ಸವಿಯಿರಿ.
    * ಸರ್ವ್ ಮಾಡುವಾಗ ಈರುಳ್ಳಿ, ನಿಂಬೆಹಣ್ಣಿನ ಜೊತೆ ಸರ್ವ್ ಮಾಡಿದ್ರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

  • ಸಿಂಪಲ್ ಕಡ್ಲೆಕಾಯಿಬೀಜ ಆಲೂ ಪಲ್ಯ

    ಸಿಂಪಲ್ ಕಡ್ಲೆಕಾಯಿಬೀಜ ಆಲೂ ಪಲ್ಯ

    ಸಾಮಾನ್ಯವಾಗಿ ದೋಸೆ ಜೊತೆ ಆಲೂ ಪಲ್ಯ ಇರಲೇಬೇಕು. ಇನ್ನು ಚಪಾತಿ ಜೊತೆಯಲ್ಲಿ ಆಲೂ ಪಲ್ಯ ಇದ್ರೆ ಊಟ ಮತ್ತಷ್ಟು ರುಚಿಯಾಗಿರುತ್ತದೆ. ಪ್ರತಿನಿತ್ಯ ಒಂದೇ ರೀತಿಯಲ್ಲಿ ಆಲೂ ಪಲ್ಯ ಮಾಡಿದ್ರೆ ಮಕ್ಕಳಿಗೆ ಇಷ್ಟವಾಗಲ್ಲ. ಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿ ಆಲೂ ಪಲ್ಯವನ್ನು ಮತ್ತಷ್ಟು ರುಚಿಕರವಾಗಿ ಮಾಡಬಹುದು. ಸುಲಭವಾಗಿ ಸಿಂಪಲ್ ಕಡ್ಲೆಕಾಯಿಬೀಜ ಬೀಜ ಆಲೂ ಪಲ್ಯ ಮಾಡುವ ವಿಧಾನ ಇಲ್ಲಿದೆ.

    ಬೇಕಾಗಿರುವ ಸಾಮಗ್ರಿಗಳು
    * ಆಲೂಗಡ್ಡೆ – 2-3
    * ಕಡ್ಲೆಕಾಯಿ ಬೀಜ (ಶೇಂಗಾ)- 4-5 ಸ್ಪೂನ್
    * ಜೀರಿಗೆ – ಸ್ವಲ್ಪ
    * ಹಸಿಮೆಣಸಿನಕಾಯಿ – 1-2
    * ಕೊತ್ತಂಬರಿ ಸೊಪ್ಪು
    * ಎಣ್ಣೆ – 2-3 ಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲು ಒಂದು ಪ್ಯಾನ್ ಇಟ್ಟು ಎಣ್ಣೆ ಬಿಸಿಯಾದ ಮೇಲೆ ಕಡ್ಲೆಕಾಯಿ ಬೀಜ ಹಾಕಿ ಫ್ರೈ ಮಾಡಿ.
    * ಈಗ ಜೀರಿಗೆ ಹಾಕಿ ಫ್ರೈ ಮಾಡಿ.
    * ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
    * ಈಗ ಬೇಯಿಸಿ ಸಣ್ಣಗೆ ಕತ್ತರಿಸಿದ ಆಲೂಗಡ್ಡೆಯನ್ನು ಸೇರಿಸಿ
    * ಈಗ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿಯನ್ನು ಸೇರಿಸಿ ಫ್ರೈ ಮಾಡಿ.
    * ಕೊನೆಗೆ ಕೊತ್ತಂಬರಿ ಸೊಪ್ಪು ಸೇರಿಸಿ 2-3 ನಿಮಿಷ ಫ್ರೈ ಮಾಡಿ ಕೆಳಗಿಳಿಸಿ.
    ( ಇದಕ್ಕೆ ನಿಮಗೆ ಬೇಕಿನಿಸಿದರೆ ಟೊಮಟೊವನ್ನು ಸಣ್ಣಗೆ ಹೆಚ್ಚಿ ಹಾಕಿಕೊಳ್ಳಬಹುದು ಮತ್ತು ಬಿಳಿ ಎಳ್ಳು ಬಳಸಬಹುದು)

  • ದೋಸೆ ಚಟ್ನಿ ಮಾಡುವ ವಿಧಾನ

    ದೋಸೆ ಚಟ್ನಿ ಮಾಡುವ ವಿಧಾನ

    ಸಾಮಾನ್ಯವಾಗಿ ಭಾನುವಾರ ಬಂದ್ರೆ ಮಕ್ಕಳೆಲ್ಲಾ ಮನೆಯಲ್ಲಿರುತ್ತಾರೆ. ಗೃಹಿಣಿಯರು ಮಕ್ಕಳಿಗೆ ಸ್ಪೆಷಲ್ ತಿಂಡಿ ಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿರುತ್ತಾರೆ. ಪ್ರತಿದಿನ ಉಪ್ಪಿಟ್ಟು, ಅವಲಕ್ಕಿ, ರೈಸ್‍ಬಾತ್ ಅಂತ ತಿಂದು ಬೇಜಾರು ಆಗಿರುತ್ತಾರೆ. ಸಂಡೇಗಾಗಿ ಬಹುತೇಕರ ಮನೆಯಲ್ಲಿ ದೋಸೆ ಪರಿಮಳ ಹರಿದಾಡುತ್ತಿರುತ್ತದೆ. ದೋಸೆ ಮಾಡಿದ್ರೆ ಜೊತೆಗೆ ಯಾವ ಚಟ್ನಿ ಮಾಡೋದು ಅನ್ನೋದು ದೊಡ್ಡ ಪ್ರಶ್ನೆಯಾಗಿರುತ್ತದೆ. ಹಾಗಾಗಿ ಫಟಾಫಟ್ ಚಟ್ನಿ ಮಾಡುವ ಸುಲಭ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಕಾಯಿ ತುರಿ- ಅಗತ್ಯಕ್ಕನುಸಾರ (ಚಟ್ನಿಗೆ ಇದೇ ಮುಖ್ಯ ಪದಾರ್ಥ)
    * ಶುಂಠಿ- ಸ್ವಲ್ಪ
    * ಹಸಿ ಮೆಣಸಿನಕಾಯಿ- ಖಾರಕ್ಕೆ ಬೇಕಾದಷ್ಟು
    * ಹುಣಸೆಹಣ್ಣು- ಸ್ವಲ್ಪ
    * ಉಪ್ಪು- ರುಚಿಗೆ ತಕ್ಕಷ್ಟು
    * ಎಣ್ಣೆ- ಒಗ್ಗರಣೆಗೆ

    ಮಾಡುವ ವಿಧಾನ
    * ಜಾರ್ ಗೆ ಕಾಯಿ ತುರಿ, ಶುಂಠಿ, ಹಸಿಮೆಣಸಿನಕಾಯಿ, ಹುಣಸೆಹಣ್ಣು, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
    * ತೀರ ಗಟ್ಟಿ ಅನ್ನಿಸಿದರೆ ನೀರು ಸೇರಿಸಿ ತೆಳ್ಳಗೆ ಮಾಡಿಕೊಳ್ಳಿ.
    * ಈಗ ಒಗ್ಗರಣೆಗೆ ಎಣ್ಣೆ ಕಾಯಿಸಿ. ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿ
    * ಚಟ್ನಿಗೆ ಒಗ್ಗರಣೆ ಮಿಶ್ರಣ ಮಾಡಿ. ಈಗ ರುಚಿ ರುಚಿಯಾದ ಚಟ್ನಿ ರೆಡಿ.

    ಹೀಗೆ ರೆಡಿಯಾದ ಚಟ್ನಿಯನ್ನು ಕೇವಲ ದೋಸೆಗೆ ಮಾತ್ರವಲ್ಲದೇ ಇಡ್ಲಿ, ಚಪಾತಿ, ಪೂರಿ, ರೊಟ್ಟಿ ಮತ್ತು ಬಿಸಿ ಬಿಸಿಯಾದ ಅನ್ನದ ಜೊತೆಗೆ ತಿನ್ನಬಹುದು.

  • ರುಚಿಯಾದ ಸೋಯಾ ಬೀನ್ ಕುರ್ಮಾ ಮಾಡೋ ವಿಧಾನ

    ರುಚಿಯಾದ ಸೋಯಾ ಬೀನ್ ಕುರ್ಮಾ ಮಾಡೋ ವಿಧಾನ

    ನಾವು ತಿನ್ನುವ ಅನೇಕ ಪದಾರ್ಥಗಳಲ್ಲಿ ವಿಟಮಿನ್ ಇರುತ್ತವೆ. ಅದರಲ್ಲಿ ಸೋಯಾ ಬೀನ್ ಕೂಡ ಒಂದಾಗಿದ್ದು, ಮಕ್ಕಳಿಗೆ-ವೃದ್ಧರಿಗೆ ಎಲ್ಲರಿಗೂ ಮಾಡಿಕೊಡಬಹುದು. ಇದೊಂದು ಆರೋಗ್ಯಕರವಾದ ಅಡುಗೆಯಾಗಿದೆ. ಪ್ರತಿ ಸಂಡೇ ಬಂದರೆ ನಾನ್‍ವೆಜ್ ಅಡುಗೆ ಮಾಡಲು ಸಾಧ್ಯವಿಲ್ಲ. ಆದರೆ ಮಕ್ಕಳು ರುಚಿಯಾಗಿ ತಿನ್ನಲು ಕೇಳುತ್ತಿರುತ್ತಾರೆ. ಹೀಗಾಗಿ ನಿಮಗಾಗಿ ಸೋಯಾ ಬೀನ್ ಕುರ್ಮಾ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಸೋಯಾ ಬೀನ್ – ಅರ್ಧ ಕಪ್
    2. ಹಸಿ ಬಟಾಣಿ – ಅರ್ಧ ಕಪ್
    3. ಈರುಳ್ಳಿ – 2
    4. ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    5. ಮೆಣಸಿನ ಪುಡಿ – 1/2 ಚಮಚ
    6. ಗರಂ ಮಸಾಲ – 1/2 ಚಮಚ
    7. ಅರಿಶಿಣ – 1/4 ಟೀ ಸ್ಪೂನ್
    8. ದನಿಯಾ ಪುಡಿ – 1/2 ಚಮಚ
    9. ಕೊತ್ತಂಬರಿ ಸೊಪ್ಪು – ಸ್ವಲ್ಪ
    10. ತೆಂಗಿನ ಕಾಯಿ ಪೀಸ್ – 3 ಚಮಚ
    11. ಏಲಕ್ಕಿ – 2
    12. ಜೀರಿಗೆ – 1 ಚಮಚ
    13. ಟೊಮೆಟೊ – 3
    14. ಉಪ್ಪು – ರುಚಿಗೆ ತಕ್ಕಷ್ಟು
    15. ಎಣ್ಣೆ – 3 ಚಮಚ
    16. ಗೋಡಂಬಿ – 8-10
    17. ಗಸಗಸೆ – 1 ಟೀ ಚಮಚ

    ಮಾಡುವ ವಿಧಾನ
    * ಮೊದಲಿಗೆ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಸೋಯಾ ಬೀನ್ ಹಾಕಿ 5 ನಿಮಿಷ ನೆನೆಸಿರಬೇಕು.
    * ಈಗ ಮಿಕ್ಸ್ ಜಾರಿಗೆ ಗೋಡಂಬಿ, ಗಸಗಸೆ, ತೆಂಗಿನ ಕಾಯಿ ಪೀಸ್ ಹಾಕಿಕೊಂಡು ರುಬ್ಬಿಕೊಳ್ಳಿ.
    * ಬಾಣಲೆಗೆ 3 ಚಮಚ ಎಣ್ಣೆ ಹಾಕಿ, ಕಾದ ನಂತರ ಜೀರಿಗೆ, ಏಲಕ್ಕಿ, ಪಲಾವ್ ಎಲೆ, ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಬಟಾಣಿ, ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಕಿ ಫ್ರೈ ಮಾಡಿಕೊಳ್ಳಿ.
    * ಈಗ ರುಬ್ಬಿದ ಟಮೋಟೋ ಪೇಸ್ಟ್, ಸ್ವಲ್ಪ ಉಪ್ಪು, ಮೊದಲೇ ರುಬ್ಬಿಕೊಂಡಿದ್ದ ಗೋಡಂಬಿ ಪೇಸ್ಟ್ ಹಾಕಿ ಫ್ರೈ ಮಾಡಿಕೊಳ್ಳಿ, ಸ್ವಲ್ಪ ನೀರು ಹಾಕಿ 5 ನಿಮಿಷ ಬೇಯಿಸಿ.
    * ನೆನೆಸಿಟ್ಟ ಸೋಯಾ ಬೀನ್, ಗರಂ ಮಸಲಾ ಹಾಕಿ ಮಿಕ್ಸ್ ಮಾಡಿ. ರುಚಿ ನೋಡಿಕೊಂಡು ಉಪ್ಪು ಹಾಕಿ 5 ನಿಮಿಷ ಬೇಯಿಸಬೇಕು.
    * ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಸೋಯಾ ಬೀನ್ ಕುರ್ಮಾ ಸವಿಯಲು ಸಿದ್ಧ

    ಇದನ್ನು ಅನ್ನ, ದೋಸೆ, ಚಪಾತಿ ಯಾವುದಕ್ಕಾದರೂ ಹಾಕಿಕೊಂಡು ಸವಿಯಬಹುದು.

  • ಟ್ರೆಂಡ್ ಆಗ್ತಿವೆ ಚಿತ್ರ ವಿಚಿತ್ರ ರೆಸಿಪಿಗಳು- ನೀವೂ ಟ್ರೈ ಮಾಡ್ಬಹುದು

    ಟ್ರೆಂಡ್ ಆಗ್ತಿವೆ ಚಿತ್ರ ವಿಚಿತ್ರ ರೆಸಿಪಿಗಳು- ನೀವೂ ಟ್ರೈ ಮಾಡ್ಬಹುದು

    ಳೆದ ಕೆಲ ದಿನಗಳಿಂದ ಟ್ವಿಟ್ಟರ್ ನಲ್ಲಿ ವಿಚಿತ್ರ ರೆಸಿಪಿಗಳನ್ನು ನೆಟ್ಟಿಗರು ತಮ್ಮ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಿತ್ರ ರೆಸಿಪಿಗಳನ್ನು ನೋಡಿದ್ರೆ ಅರೇ, ಇಷ್ಟೆನಾ ಇದು ನಾವು ಮಾಡ್ತೀವಿ ಎಂದು ಚಿಕ್ಕ ಮಕ್ಕಳು ಹೇಳುತ್ತಾರೆ. ಅಂತಹ ರೆಸಿಪಿಗಳೇ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಅಡುಗೆ ಮಡೋದು ಸಹ ಒಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸಲ್ಲ. ಇಂದು ಇಂಟರ್ ನೆಟ್ ನಲ್ಲಿ ಮನೆ ಅಡುಗೆಯಿಂದ ವಿದೇಶಗಳ ರೆಸಿಪಿಗಳು ಸಿಗುತ್ತವೆ. ಇಂತಹ ರೆಸಿಪಿಗಳ ನಡುವೆ ಈ ವಿಚಿತ್ರ ಅಡುಗೆ ಟಿಪ್ಸ್ ಗಳು ಸದ್ದು ಮಾಡುತ್ತಿವೆ. ಕೆಲವರು ಬಾಳೆಹಣ್ಣಿನ ಸಿಪ್ಪೆ ತೆಗೆದು ಪ್ಲೇಟ್ ನಲ್ಲಿರಿಸಿ, ಇದೇ ರೀತಿಯ ಟಿಪ್ಸ್ ಗಳಿಗಾಗಿ ನಮ್ಮನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡಿ ಎಂದು ಬರೆದುಕೊಂಡಿದ್ದಾರೆ.

    https://twitter.com/teriinext/status/1221037564288696320

    ಮತ್ತೋರ್ವ ಟ್ವಿಟ್ಟರ್ ಬಳಕೆದಾರ, ದಾಳಿಂಬೆ ಕಾಳುಗಳನ್ನು ಬಿಡಿಸಿ ತಟ್ಟೆಯಲ್ಲಿರಿಸಿದ್ದಾರೆ. ಇನ್ನೊಬ್ಬರು ಬ್ರೆಡ್‍ಗೆ ಜಾಮ್ ಹಚ್ಚಿ ಫೋಟೋ ಹಂಚಿಕೊಂಡಿದ್ದಾರೆ. ಇದೇ ರೀತಿ ಜ್ಯೂಸ್ ಗ್ಲಾಸ್‍ಗೆ ತುಂಬಿಸೋದು, ಮೊಟ್ಟೆಯನ್ನು ಕುದಿಸೋದು, ಕಡಲೆಬೀಜವನ್ನು ಕಾಯಿಯಿಂದ ಬೇರ್ಪಡಿಸೋದು, ರೆಡಿ ಮಾಡಿದ ಬಜ್ಜಿ ತಿಂದು ಖಾಲಿ ಮಾಡೋದನ್ನು ಸಹ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಸದ್ಯ ಟ್ವಿಟ್ಟರ್ ನಲ್ಲಿ ಈ ರೀತಿಯ ರೆಸಿಪಿಗಳು ಕಾರುಬಾರು ಜೋರಾಗಿಯೇ ನಡೆಯುತ್ತಿದೆ. ನೆಟ್ಟಿಗರು ತಮಗೆ ತೋಚಿದ ಸಣ್ಣ ಸಣ್ಣ ಅಡುಗೆ ಕೆಲಸಗಳನ್ನು ಮಾಡಿ, ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    https://twitter.com/regal_kingg/status/1220180952585891840

  • ಸಿಂಪಲ್ ಕಡ್ಲೆಬೀಜದ ಲಡ್ಡು ಮಾಡೋ ವಿಧಾನ

    ಸಿಂಪಲ್ ಕಡ್ಲೆಬೀಜದ ಲಡ್ಡು ಮಾಡೋ ವಿಧಾನ

    ನಾಳೆ ಭಾನುವಾರವಾಗಿದ್ದು ಏನಾದರೂ ಸ್ಪೆಷಲ್ ಆಗಿ ಮಾಡಬೇಕು ಅನಿಸೋದು ಸಹಜ. ಹೀಗಾಗಿ ಸಿಂಪಲ್ ಹಾಗೂ ಟೇಸ್ಟಿಯಾದ ಕಡ್ಲೆಬೀಜ ಲಡ್ಡು ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಕಡ್ಲೆ ಬೀಜ – 1 ಬಟ್ಟಲು
    * ಬೆಲ್ಲ – 1 ಅಚ್ಚು
    * ತುಪ್ಪ – 4 ಸ್ಪೂನ್

    ಮಾಡುವ ವಿಧಾನ:
    * ಮೊದಲಿಗೆ ಕಡ್ಲೆಕಾಯಿ ಬೀಜವನ್ನು ಹುರಿದುಕೊಂಡು ಸಿಪ್ಪೆ ತೆಗೆಯಿರಿ
    * ಬಳಿಕ ಒಂದು ಪ್ಯಾನ್‍ಗೆ ಬೆಲ್ಲವನ್ನು ಹಾಕಿ ಸ್ವಲ್ಪ ನೀರು ಸೇರಿಸಿ ಕುದಿಯಲು ಬಿಡಿ
    * ಬೆಲ್ಲದ ಪಾಕ ಒಂದು ಹದಕ್ಕೆ ಬರುವವರೆಗೂ ಸೌಟಿನಿಂದ ತಿರುಗಿಸುತ್ತಲೇ ಇರಿ
    * ಒಂದು ಸಣ್ಣ ನೀರಿನ ಬಟ್ಟಲಿಗೆ ಪಾಕವನ್ನು ಹಾಕಿ ಪಾಕ ಕರಗದಿದ್ದರೆ ಪಾಕ ಸಿದ್ಧವಾಗಿದೆ ಎಂದು ಅರ್ಥ
    * ಈಗ ರೆಡಿಯಾದ ಪಾಕಕ್ಕೆ ಸಿಪ್ಪೆ ತೆಗೆದ ಕಡ್ಲೆಬೀಜವನ್ನು ಸೇರಿಸಿ, ಸ್ವಲ್ಪ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
    * ಮಿಶ್ರಣ ಬಿಸಿ ಇರುವಾಗಲೇ ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿ
    * ಉಂಡೆ ಆರಿದ ಮೇಲೆ ಸಿಂಪಲ್ ಕಡ್ಲೆಬೀಜದ ಲಡ್ಡು ಸವಿಯಲು ಸಿದ್ಧ

  • ಭಾನುವಾರದ ಬಾಡೂಟಕ್ಕೆ ಮಾಡಿ ತಿನ್ನಿ ರುಚಿ ರುಚಿಯಾದ ಚೈನೀಸ್ ಫಿಶ್ ಕರ್ರಿ

    ಭಾನುವಾರದ ಬಾಡೂಟಕ್ಕೆ ಮಾಡಿ ತಿನ್ನಿ ರುಚಿ ರುಚಿಯಾದ ಚೈನೀಸ್ ಫಿಶ್ ಕರ್ರಿ

    ಭಾನುವಾರ ಬಂತೆಂದರೆ ಸಾಕು ನಾಲಿಗೆಗೆ ರುಚಿ ರಚಿಯಾದ ಅಡುಗೆಗಳು ಬೇಕೇ ಬೇಕು. ಹಾಗಂತ ರುಚಿ ರುಚಿಯಾದ ಅಡುಗೆಯನ್ನು ಸವಿಯಲು ಹೋಟೆಲ್‍ಗೆ ಹೋಗೋದೇನು ಬೇಕಾಗಿಲ್ಲ. ಬದಲಿಗೆ ನಿಮ್ಮ ಮನೆಯಲ್ಲೇ ಅತ್ಯಂತ ಸರಳವಾದ ಮತ್ತು ರುಚಿ ರುಚಿಯಾದ ಅಡುಗೆಯನ್ನು ಮಾಡಬಹುದು. ಅದಕ್ಕೆ ಈ ಚೈನೀಸ್ ಫಿಶ್ ಕರ್ರಿಯೇ ಸಾಕ್ಷಿ.

    ಚೈನೀಸ್ ಫಿಶ್ ಕರ್ರಿ ಮಾಡಲು ಬೇಕಾಗು ಸಾಮಾಗ್ರಿಗಳು
    * 4 ಮೀನು (ಮಧ್ಯಮಗಾತ್ರದ ಮೀನು)
    * ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 2 ಟೇಬಲ್ ಸ್ಪೂನ್
    * ಈರುಳ್ಳಿ 4
    * ಕಾಳು ಮೆಣಸಿನ ಪುಡಿ 2 ಟೇಬಲ್ ಸ್ಪೂನ್
    * ಧನಿಯಾ ಪುಡಿ 2 ಟೇಬಲ್ ಸ್ಪೂನ್
    * ಅರಿಶಿನ ಪುಡಿ ಒಂದು ಚಿಟಿಕೆ
    * ಕೆಂಪು ಮೆಣಸಿನ ಪುಡಿ 2 ಟೇಬಲ್ ಸ್ಪೂನ್
    * ಹುಣಸೆ ಹುಳಿ ರಸ ಅರ್ಧ ಕಪ್
    * ಟೊಮೆಟೊ 2
    * ಉಪ್ಪು
    * ಕೊತ್ತಂಬರಿ ಸೊಪ್ಪು
    * ಕೊಬ್ಬರಿ ಎಣ್ಣೆ 2 ಚಮಚ
    * ಕುಕ್ಕಿಂಗ್ ವೈನ್ ಅರ್ಧ ಟೆಬಲ್ ಸ್ಪೂನ್

    ಚೈನೀಸ್ ಫಿಶ್ ಕರ್ರಿ ಮಾಡುವ ವಿಧಾನ
    * ಮೊದಲು ಒಂದು ಜಾರ್‍ಗೆ ಹೆಚ್ಚಿದ 2 ಈರುಳ್ಳಿ, 1 ಟೇಬಲ್ ಸ್ಪೂನ್ ಧನಿಯಾಪುಡಿ, 1 ಟೇಬಲ್ ಸ್ಪೂನ್ ಕಾಳು ಮೆಣಸಿನ ಪುಡಿ, 1 ಟೇಬಲ್ ಸ್ಪೂನ್ ಕೆಂಪು ಮೆಣಸಿನ ಪುಡಿ ಮತ್ತು ಹೆಚ್ಚಿದ 2 ಟೊಮೆಟೊವನ್ನು ಮಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
    * ಒಂದು ದೊಡ್ಡ ಪ್ಯಾನ್‍ಗೆ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಆದ ನಂತರ ಅದಕ್ಕೆ ಉಳಿದ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ನಂತರ ಮಿಕ್ಸಿಯಲ್ಲಿ ಕಡೆದ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ.

    * ಅದಕ್ಕೆ ಹುಣಸೆ ರಸವನ್ನು ಹಾಕಿ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ತಿರುವಿ.
    * ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.
    * ನಂತರ ಕುದಿಯುತ್ತಿರುವಾಗ ತೊಳೆದ ಮೀನನ್ನು ಹಾಕಿ ಮಿಕ್ಸ್ ಮಾಡಿ ಪ್ಯಾನ್ ಮುಚ್ಚಳವನ್ನು ಮುಚ್ಚಿ 10 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
    * ನಂತರ ಮೀನು ಬೆಂದ ಬಳಿಕ ಅದನ್ನು ಒಂದು ಬೌಲ್‍ಗೆ ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಅದಕ್ಕೆ ಮುಚ್ಚಳವನ್ನು ಮುಚ್ಚಿ ಅರ್ಧ ಗಂಟೆ ಬಿಡಿ.
    * ನಂತರ ಆ ಮುಚ್ಚಳವನ್ನು ತೆಗೆದರೆ ಚೈನೀಸ್ ಫಿಶ್ ಕರ್ರಿ ಸವಿಯಲು ಸಿದ್ಧ.