Tag: recipe

  • ದಿಢೀರನೇ ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನ

    ದಿಢೀರನೇ ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನ

    ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ಮಕ್ಕಳು, ಮನೆಯವರು ಯಾರು ಅಷ್ಟಾಗಿ ಬೆಳ್ಳುಳ್ಳಿ ತಿನ್ನುವುದಿಲ್ಲ. ಈಗ ಹೇಗಿದ್ದರೂ ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿದ್ದೀರಿ. ಆದ್ದರಿಂದ ದೋಸೆ, ಚಪಾತಿ, ರೊಟ್ಟಿಗೆ ಬೆಳ್ಳುಳ್ಳಿ ಚಟ್ನಿ ಮಾಡಿ. ಕೆಲವೇ ನಿಮಿಷದಲ್ಲಿ ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಗ್ರಿಗಳು
    1. ಬ್ಯಾಡಗಿ ಮೆಣಸಿನಕಾಯಿ – 15
    2. ಬೆಳ್ಳುಳ್ಳಿ – 20 ಎಸಳು
    3. ಟೊಮೆಟೊ – 1
    4. ಉಪ್ಪು- ರುಚಿಗೆ ತಕ್ಕಷ್ಟು
    5. ಎಣ್ಣೆ- 2 ಟೀ ಸ್ಪೂನ್

    ಮಾಡುವ ವಿಧಾನ
    * ಮೊದಲಿಗೆ ಬ್ಯಾಡಗಿ ಮೆಣಸಿನಕಾಯಿಯನ್ನು ನೀರಿನಲ್ಲಿ ಒಂದು ಗಂಟೆ ನೆನೆಸಿಟ್ಟುಕೊಳ್ಳಿ.
    * ಒಂದು ಗಂಟೆ ಬಳಿಕ ಮಿಕ್ಸಿ ಜಾರಿಗೆ ನೆನೆಸಿಟ್ಟುಕೊಂಡಿರುವ ಮೆಣಸಿನಕಾಯಿ, ಬೆಳ್ಳುಳ್ಳಿ, ಕತ್ತರಿಸಿ ಟೊಮೆಟೊ ಮತ್ತು ಉಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. (ರುಬ್ಬಿಕೊಳ್ಳುವಾಗ ನೀರು ಹಾಕಿಕೊಳ್ಳಬಾರದು)
    * ಸ್ಟೌವ್ ಮೇಲೆ ಒಂದು ಪ್ಯಾನ್ ಇಟ್ಟಿಕೊಂಡು ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ರುಬ್ಬಿಕೊಂಡು ಮಿಶ್ರಣ ಸೇರಿಸಿ. ಈಗ ಅರ್ಧ ಕಪ್ ನೀರು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
    * ಮಿಶ್ರಣ ಗಟ್ಟಿಯಾಗುವರೆಗೂ ಕಡಿಮೆ ಉರಿಯಲ್ಲಿ ಫ್ರೈ ಮಾಡಿದ್ರೆ ಬೆಳ್ಳುಳ್ಳಿ ಚಟ್ನಿ ರೆಡಿ.
    * ಈ ಬೆಳ್ಳುಳ್ಳಿ ಚಟ್ನಿಯನ್ನ ಬಿಸಿ ಬಿಸಿಯಾದ ದೋಸೆ, ಜೋಳದ ರೊಟ್ಟಿ, ಚಪಾತಿ ಮತ್ತು ವೈಟ್ ರೈಸ್ ಜೊತೆ ತಿನ್ನಬಹುದು.

  • ತರಕಾರಿಗಳಿಲ್ಲದೇ ಇರುವಾಗ ಗ್ರೀನ್ ಚಿಲ್ಲಿ ಕರ್ರಿ ಮಾಡಿ

    ತರಕಾರಿಗಳಿಲ್ಲದೇ ಇರುವಾಗ ಗ್ರೀನ್ ಚಿಲ್ಲಿ ಕರ್ರಿ ಮಾಡಿ

    ಲಾಕ್‍ಡೌನ್ ಪರಿಣಾಮದಿಂದಾಗಿ ಸರಿಯಾಗಿ ತರಕಾರಿ ಸಿಗುತ್ತಿಲ್ಲ. ಹೊರಗೆ ಹೋಗಿ ತರೋಣ ಎಂದರೆ ಅಂಗಡಿಗಳು ನಿಗದಿತ ಸಮಯದಲ್ಲಿ ಮಾತ್ರ ತೆರೆದಿರುತ್ತೆ. ಹೀಗಾಗಿ ಮನೆಯಲ್ಲಿಯೇ ಇದ್ದು ಹೊಸ ರೀತಿಯ ಅಡುಗೆ ಮಾಡಿ. ತರಕಾರಿಗಳಿಲ್ಲದೇ ಇರುವಾಗ ಗ್ರೀನ್ ಚಿಲ್ಲಿ ಕರ್ರಿ ಮಾಡಿ. ನಿಮಗಾಗಿ ಗ್ರೀನ್ ಚಿಲ್ಲಿ ಕರ್ರಿ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಗ್ರಿಗಳ
    1. ಹಸಿ ಮೆಣಸಿನಕಾಯಿ – 10
    2. ಸಾಸಿವೆ – 1/2 ಟೀ ಸ್ಪೂನ್
    3. ಜೀರಿಗೆ – 1/2 ಟೀ ಸ್ಪೂನ್
    4. ಮೆಂತೆ – 1/2 ಟೀ ಸ್ಪೂನ್
    5. ಕರಿಬೇವು- 10 ರಿಂದ 15 ಎಲೆ
    6. ಇಂಗು – 1/2 ಟೀ ಸ್ಪೂನ್
    7. ಹುಣಸೆ ಹಣ್ಣಿನ ರಸ – 6 ಟೀ ಸ್ಪೂನ್
    8. ಬೆಲ್ಲದ ಪುಡಿ – 3 ಟೀ ಸ್ಪೂನ್
    9. ಅರಿಶಿಣ – ಚಿಟಿಕೆ
    10. ನೀರು – 1/4 ಕಪ್
    11. ಎಣ್ಣೆ – 4 ಟೀ ಸ್ಪೂನ್
    12. ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಗ್ಯಾಸ್ ಆನ್ ಮಾಡಿಕೊಂಡು ಪ್ಯಾನ್ ಇಟ್ಟಿಕೊಳ್ಳಿ.
    * ಮೊದಲಿಗೆ ಮೂರು ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸಿವೆ, ಜೀರಿಗೆ, ಮೆಂತೆ, ಕರಿಬೇವು ಹಾಕಿ ಫ್ರೈ ಮಾಡಿ.
    * ಫ್ರೈ ಆದಮೇಲೆ ಉದ್ದವಾಗಿ ಕತ್ತರಿಸಿಕೊಂಡಿದ್ದ ಮೆಣಸಿನಕಾಯಿ ಸೇರಿಸಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 4 ನಿಮಿಷ ಬೇಯಿಸಿಕೊಳ್ಳಿ.
    * ಮೆಣಸಿನಕಾಯಿ ಬೆಂದ ಮೇಲೆ ಅದಕ್ಕೆ ಇಂಗು ಪುಡಿ, ಹುಣಸೆ ಹಣ್ಣಿನ ರಸ, ಬೆಲ್ಲದ ಪುಡಿ, ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬಾಡಿಸಿಕೊಳ್ಳಿ.
    * ಕೊನೆಗೆ ಕಾಲು ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ಮೂರು ನಿಮಿಷ ಬೇಯಿಸಿಕೊಂಡ್ರೆ ಗ್ರೀನ್ ಚಿಲ್ಲಿ ಕರ್ರಿ ರೆಡಿ.

  • 2 ಕಪ್ ಅಕ್ಕಿ, 2 ಆಲೂಗಡ್ಡೆಯಿಂದ ಮಾಡ್ಕೊಳ್ಳಿ ಹೊಸ ತಿಂಡಿ

    2 ಕಪ್ ಅಕ್ಕಿ, 2 ಆಲೂಗಡ್ಡೆಯಿಂದ ಮಾಡ್ಕೊಳ್ಳಿ ಹೊಸ ತಿಂಡಿ

    ರಡನೇ ಹಂತದ ಲಾಕ್‍ಡೌನ್ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲ ಭಾಗಗಳಿಗೆ ಸಡಿಲಿಕೆ ನೀಡದಿದ್ರೂ ಹೊರಗಡೆ ಹೋಗಿ ತಿಂಡಿ ತಿನ್ನಲು ಕೊರೊನಾ ಭಯ ಕಾಡುತ್ತೆ. ಒಂದೂವರೆ ತಿಂಗಳಿನಿಂದ ಗೃಹ ಬಂಧನದಲ್ಲಿರೋ ಜನರಿಗೆ ಹೊಸ ಹೊಸ ತಿಂಡಿ ತಿನ್ನಬೇಕೆನಿಸುತ್ತಿದೆ. ಕೆಲವು ಭಾಗಗಳಲ್ಲಿ ಮಳೆ ಆಗುತ್ತಿದ್ದು, ಮೋಡ ಮುಸುಕಿದ ವಾತಾವರಣದಲ್ಲಿ ಏನಾದ್ರೂ ತಿಂಡಿ ಬೇಕೆನಿಸುತ್ತೆ. ಹಾಗಾದ್ರೆ ಎರಡು ಆಲೂಗಡ್ಡೆ, ಎರಡು ಕಪ್ ನಿಂದ ಹೊಸ ಗರಿ ಗರಿಯಾದ ತಿಂಡಿ ಮಾಡ್ಕೊಳ್ಳಿ.

    ಬೇಕಾಗುವ ಸಾಮಾಗ್ರಿಗಳು
    ಅಕ್ಕಿ- 2 ಕಪ್
    ಆಲೂಗಡ್ಡೆ-2
    ಜೀರಿಗೆ- 1/2 ಟೇಬಲ್ ಸ್ಪೂನ್
    ಹಸಿ ಮೆಣಸಿನಕಾಯಿ-2
    ಬೆಳ್ಳುಳ್ಳಿ-ಶುಂಠಿ ಪೇಸ್ಟ್- 1/2 ಟೇಬಲ್ ಸ್ಪೂನ್
    ಕೋತಂಬರಿ ಸೊಪ್ಪು
    ಎಣ್ಣೆ
    ಉಪ್ಪು-ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಎರಡು ಕಪ್ ಅಕ್ಕಿಯನ್ನು ತೊಳೆದುಕೊಂಡು ಮೂರು ಗಂಟೆ ನೆನಸಿಟ್ಟುಕೊಳ್ಳಬೇಕು.
    * ಆಲೂಗಡ್ಡೆಯ ಸಿಪ್ಪೆ ತೆಗೆದು ಸ್ಲೈಸ್ ಮಾಡಿಕೊಂಡು 10 ರಿಂದ 15 ನಿಮಿಷ ಸ್ಟೀಮ್ ಮಾಡಿಕೊಳ್ಳಬೇಕು.
    ( ಜರಡಿಗೆ ಎಣ್ಣೆ ಸವರಿ ಸ್ಲೈಸ್ ಮಾಡಿರುವ ಆಲೂಗಡ್ಡೆ ಹಾಕಿ. ದೊಡ್ಡ ಪಾತ್ರೆಯಲ್ಲಿ ಒಂದರಿಂದ ಎರಡು ಗ್ಲಾಸ್ ನೀರು ಹಾಕಿ ಜರಡಿಯನ್ನ ಮೇಲಿಟ್ಟು ಮುಚ್ಚಳದಿಂದ ಮುಚ್ಚಿದ್ರೆ ಆಲೂಗಡ್ಡೆ ಸ್ಟೀಮ್ ಆಗುತ್ತೆ)


    * ನೆನದ ಅಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿ ಕಡಿಮೆ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಅಕ್ಕಿ ಹಿಟ್ಟನ್ನು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿಕೊಂಡು ಜೀರಿಗೆ, ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಕೋತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
    * ಇನ್ನು ಸ್ಟೀಮ್ ಆಗಿರುವ ಆಲೂಗಡ್ಡೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. (ಆಲೂಗಡ್ಡೆ ರುಬ್ಬಿಕೊಳ್ಳುವಾಗ ನೀರು ಮಿಕ್ಸ್ ಮಾಡಬಾರದು)
    * ರುಬ್ಬಿದ ಆಲೂಗಡ್ಡೆಯನ್ನು ಅಕ್ಕಿಹಿಟ್ಟಿನ ಮಿಶ್ರಣದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪಾತ್ರೆಯ ಮುಚ್ಚಳ ಮುಚ್ಚಿ ಐದು ನಿಮಿಷ ಬಿಟ್ಟರೆ ಹಿಟ್ಟು ಹದವಾಗುತ್ತೆ.


    * ಸ್ಟೌವ್ ಮೇಲಿಟ್ಟುಕೊಂಡು ಒಂದು ಪ್ಯಾನ್ ಗೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.
    * ಆಲೂಗಡ್ಡೆ ಮತ್ತು ಅಕ್ಕಿ ಮಿಶ್ರಣ ರೆಡಿಯಾದ ಮೇಲೆ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಬೇಕು. ಉಂಡೆಗಳನ್ನು ಕಾದ ಎಣ್ಣೆಗೆ ಹಾಕಿ ಫ್ರೈ ಮಾಡಿದ್ರೆ ನಿಮ್ಮ ತಿಂಡಿ ರೆಡಿ.

  • ಫಟಾಫಟ್ ಅಂತ ಮಾಡಿ ಪಾಲಕ್ ಆಮ್ಲೆಟ್

    ಫಟಾಫಟ್ ಅಂತ ಮಾಡಿ ಪಾಲಕ್ ಆಮ್ಲೆಟ್

    ಕೊರೊನಾ ಲಾಕ್‍ಡೌನ್ ಶುರುವಾದಗಿನಿಂದ ಎಲ್ಲರೂ ಮನೆಯಲ್ಲಿದ್ದೀರಿ, ಸಂಜೆ ಹೊರಗೆ ಹೋಗಿ ರುಚಿರುಚಿಯಾದ ಸ್ನ್ಯಾಕ್ಸ್ ತಿನ್ನೋಣ ಎಂದರೆ ಸಾಧ್ಯವಿಲ್ಲ. ಮಕ್ಕಳಂತೂ ಸಂಜೆ ತಿನ್ನಲೂ ಸ್ನ್ಯಾಕ್ಸ್ ಕೇಳುತ್ತಿರುತ್ತಾರೆ. ಆದ್ದರಿಂದ ಮನೆಯಲ್ಲಿಯೇ ಇದ್ದು ರುಚಿಯಾದ ಪಾಲಕ್ ಆಮ್ಲೆಟ್ ಮಾಡಿಕೊಡಿ. ನಿಮಗಾಗಿ ಪಾಲಕ್ ಆಮ್ಲೆಟ್ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಗ್ರಿಗಳು
    1. ಮೊಟ್ಟೆ – 2
    2. ಕಾಳು ಮೆಣಸಿನ ಪುಡಿ – 1/2 ಟೀ ಸ್ಪೂನ್
    3. ಲಿಂಬೆ ರಸ – 1/4 ಟೀ ಸ್ಪೂನ್
    4. ಸಣ್ಣಗೆ ಕತ್ತರಿಸಿದ ಪಾಲಕ್ ಸೊಪ್ಪು- 1 ಕಪ್
    5. ಉಪ್ಪು – ರುಚಿಗೆ ತಕ್ಕಷ್ಟು
    6. ಎಣ್ಣೆ – 2 ಟೀ ಸ್ಪೂನ್

    ಮಾಡುವ ವಿಧಾನ

    * ಮೊದಲಿಗೆ ಒಂದು ಬೌಲ್ ನಲ್ಲಿ ಎರಡು ಮೊಟ್ಟೆ ಒಡೆದು ಹಾಕಿಕೊಂಡು, ಅದಕ್ಕೆ ಲಿಂಬೆ ರಸ, ಕಾಳು ಮೆಣಸಿನ ಪುಡಿ, ರುಚಿಗೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ತೊಳೆದು ಕತ್ತರಿಸಿ ಪಾಲಕ್ ಸೊಪ್ಪನ್ನು ಮಿಶ್ರಣಕ್ಕೆ ಮಿಕ್ಸ್ ಮಾಡಿ ಕಲಸಿಕೊಳ್ಳಿ.
    * ಸ್ಟೌವ್ ಮೇಲೆ ತವ ಇಟ್ಟು ಎಣ್ಣೆ ಹಾಕಿ. ತವ ಬಿಸಿ ಆಗುತ್ತಿದ್ದಂತೆ ಕಲಿಸಿಕೊಂಡ ಮಿಶ್ರಣವನ್ನು ತವ ಮೇಲೆ ಹಾಕಿ.
    * ಕಡಿಮೆ ಉರಿಯಲ್ಲಿ ಎರಡು ಕಡೆ ಬೇಯಿಸಿದ್ರೆ ಪಾಲಕ್ ಆಮ್ಲೆಟ್ ರೆಡಿ.

  • ಆಲೂ, ಬದನೆಕಾಯಿ ಮಿಕ್ಸಡ್ ಡ್ರೈ ಫ್ರೈ ಮಾಡೋ ವಿಧಾನ

    ಆಲೂ, ಬದನೆಕಾಯಿ ಮಿಕ್ಸಡ್ ಡ್ರೈ ಫ್ರೈ ಮಾಡೋ ವಿಧಾನ

    ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ದಿನಪೂರ್ತಿ ಮನೆಯಲ್ಲಿಯೇ ಇರಬೇಕು. ಬೇಸರವಾದಾಗ ಹೊರಗೆ ಹೋಗಿ ಏನಾದರೂ ತಿಂದುಕೊಂಡು ಬರೋಣ ಎಂದರೂ ಆಗುವುದಿಲ್ಲ. ಇತ್ತ ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಇರುವುದರಿಂದ ರುಚಿರುಚಿಯಾದ ಅಡುಗೆ ಕೇಳುತ್ತಿರುತ್ತಾರೆ. ಹೀಗಾಗಿ ದೋಸೆ, ಚಪಾತಿ, ರೊಟ್ಟಿಗೆ ಅದೇ ಚಟ್ನಿ, ಪಲ್ಯ ತಿಂದು ಬೇಸರವಾಗಿರುತ್ತದೆ. ಆದ್ದರಿಂದ ನಿಮಗಾಗಿ ಕೆಲವೇ ನಿಮಿಷಗಳಲ್ಲಿ ರೆಡಿಯಾಗುವ ಆಲೂ, ಬದನೆಕಾಯಿ ಮಿಕ್ಸಡ್ ಡ್ರೈ ಫ್ರೈ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು
    1. ಮೈಸೂರು ಬದನೆಕಾಯಿ – 3 ರಿಂದ 4
    2. ಆಲೂಗಡ್ಡೆ – 2
    3. ಮೆಣಸಿನಕಾಯಿ – 2
    4. ಕರಿಬೇವು – 4 ರಿಂದ 5
    5. ಈರುಳ್ಳಿ – 1
    6. ಟೊಮೆಟೊ- 1
    7. ಜೀರಿಗೆ – 1/2 ಟೀ ಸ್ಪೂನ್
    8. ಗರಂ ಮಸಾಲ – 1/2 ಟೀ ಸ್ಪೂನ್
    9. ಖಾರದ ಪುಡಿ – 1 ಟೀ ಸ್ಪೂನ್
    10. ಅರಿಶಿಣ – ಚಿಟಿಕೆ
    11. ಉಪ್ಪು – ರುಚಿಗೆ ತಕ್ಕಷ್ಟು
    12. ಎಣ್ಣೆ – ಒಗ್ಗರಣೆಗೆ

    ಮಾಡುವ ವಿಧಾನ
    * ಆಲೂಗಡ್ಡೆಯ ಸಿಪ್ಪೆ ತೆಗೆದು ಉದ್ದವಾಗಿ ಕತ್ತರಿಸಿಕೊಳ್ಳಿ. ಹಾಗೆಯೇ ಮೈಸೂರು ಬದನೆಕಾಯಿಯನ್ನು ತೊಳೆದುಕೊಂಡು ಕತ್ತರಿಸಿಕೊಳ್ಳಿ.
    * ಗ್ಯಾಸ್ ಆನ್ ಮಾಡ್ಕೊಂಡು ಪ್ಯಾನ್ ಇಟ್ಟು ಮೂರು ಚಮಚ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿಕೊಳ್ಳಿ. ಜೀರಿಗೆ ಫ್ರೈ ಆಗ್ತಿದ್ದಂತೆ ಈರುಳ್ಳಿ, ಕರಿಬೇವು, ಹಸಿ ಮೆಣಸಿನಕಾಯಿ ಮತ್ತು ಟೊಮೆಟೊ ಹಾಕಿ ಫ್ರೈ ಮಾಡಿಕೊಳ್ಳಿ.
    * ಹಸಿ ವಾಸನೆ ಕಡಿಮೆಯಾಗ್ತಿದ್ದಂತೆ ಕತ್ತರಿಸಿದ ಆಲೂಗಡ್ಡೆ ಮಿಕ್ಸ್ ಮಾಡಿ 4 ರಿಂದ 5 ನಿಮಿಷ ಚೆನ್ನಾಗಿ ಬೇಯಿಸಿ.
    * ಆಲೂಗಡ್ಡೆ ಸಾಫ್ಟ್ ಆಗುತ್ತಿದ್ದಂತೆ ಬದನೆಕಾಯಿ ಮಿಕ್ಸ್ ಮಾಡಿ ಬಾಡಿಸಿಕೊಳ್ಳಿ. ಬದನೆಕಾಯಿ ಹಾಕುತ್ತಿದ್ದಂತೆ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲ, ಖಾರದ ಪುಡಿ ಹಾಕಿ ಫ್ರೈ ಮಾಡಿಕೊಳ್ಳಿ
    * ಈಗ 1/4 ಲೋಟ ನೀರು ಹಾಕಿ ಮೂರು ನಿಮಿಷ ಬೇಯಿಸಿ (ನೀರು ಸಂಪೂರ್ಣವಾಗಿ ಹೀರಿಕೊಳ್ಳೋವರೆಗೂ ಬೇಯಿಸಿ) ದರೆ ಆಲೂ-ಬದನೆಕಾಯಿ ಮಿಕ್ಸಡ್ ಡ್ರೈ ಫ್ರೈ ರೆಡಿ

  • ಟೇಸ್ಟಿಯಾದ ಎಗ್ ಮಸಾಲ ಫ್ರೈ ಮಾಡೋ ವಿಧಾನ

    ಟೇಸ್ಟಿಯಾದ ಎಗ್ ಮಸಾಲ ಫ್ರೈ ಮಾಡೋ ವಿಧಾನ

    ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲಿದ್ದೀರಿ. ಭಾನುವಾರದ ಸ್ಪೆಷಲ್ ಎಂದು ಇವತ್ತು ಮನೆಯಲ್ಲಿ ನಾನ್‍ವೆಜ್ ಮಾಡುತ್ತೀರ. ಮೊಟ್ಟೆಯಂತೂ ಎಲ್ಲರ ಮನೆಯಲ್ಲೂ ಇರುತ್ತದೆ. ಚಿಕನ್ ಜೊತೆಗೆ ಮೊಟ್ಟೆ ಇದ್ದರೆ ತುಂಬಾ ಚೆನ್ನಾಗಿರುತ್ತೆ. ಅದರಲ್ಲೂ ಮಕ್ಕಳಿಗೆ ಮೊಟ್ಟೆ ಎಂದರೆ ತುಂಬಾ ಇಷ್ಟ. ಮೊಟ್ಟೆಯಿಂದ ನಾನಾ ರೀತಿಯ ಅಡುಗೆ ಸಹ ಮಾಡಬಹುದು. ಆದ್ದರಿಂದ ಮಕ್ಕಳಿಗೆ ಎಗ್ ಮಸಾಲ ಫ್ರೈ ಮಾಡಿಕೊಡಿ ತುಂಬಾ ಟೇಸ್ಟಿಯಾಗಿರುತ್ತೆ. ಎಗ್ ಮಸಾಲ ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಗ್ರಿಗಳು
    1. ಮೊಟ್ಟೆ – 5 (ಬೇಯಿಸಿದ)
    2. ಅರಿಶಿಣ – 1/4 ಟೀ ಸ್ಪೂನ್
    3. ಖಾರದ ಪುಡಿ – 1/2 ಟೀ ಸ್ಪೂನ್
    4. ಗರಂ ಮಸಾಲ – 1/2 ಟೀ ಸ್ಪೂನ್
    5. ಪೆಪ್ಪರ್ ಪುಡಿ – 1/4 ಟೀ ಸ್ಪೂನ್
    6. ಉಪ್ಪು – ರುಚಿಗೆ ತಕ್ಕಷ್ಟು
    7. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ

    ಮಾಡುವ ವಿಧಾನ
    * ಮೊದಲಿಗೆ ಬೇಯಿಸಿದ 5 ಮೊಟ್ಟೆಗಳನ್ನು ಎರಡು ಭಾಗವಾಗಿ ಕಟ್ ಮಾಡಿಕೊಳ್ಳಿ.
    * ಈಗ ಸಣ್ಣ ಬೌಲ್‍ನಲ್ಲಿ ಅರಿಶಿಣ, ಖಾರದ ಪುಡಿ, ಗರಂ ಮಸಾಲ, ಪೆಪ್ಪರ್ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ. ನಂತರ ಮೂರು ಚಮಚ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತರ ಸ್ಟೌವ್ ಆನ್ ಮಾಡಿ ಪ್ಯಾನ್ ಇಟ್ಟು, ಮೂರು ಚಮಚ ಎಣ್ಣೆ ಹಾಕಿ.
    * ಎಣ್ಣೆ ಬಿಸಿಯಾಗುತ್ತಿದ್ದಂತೆ ಕಟ್ ಮಾಡಿಕೊಂಡಿದ್ದ ಎಗ್ ಹಾಕಿ ಎರಡು ಕಡೆ ಬೇಯಿಸಿ (ಎಗ್ ಬ್ರೌನ್ ಕಲರ್ ಬರೋವರೆಗೆ ಒಂದು ನಿಮಿಷ ಫ್ರೈ ಮಾಡಿ)
    * ಈಗ ಮಿಕ್ಸ್ ಮಾಡಿದ್ದ ಮಸಾಲವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ನೀರು ಸಂಪೂರ್ಣವಾಗಿ ಹೀರಿಕೊಳ್ಳುವರೆಗೂ ಫ್ರೈ ಮಾಡಿದರೆ ಎಗ್ ಮಸಾಲ ಫ್ರೈ ಸವಿಯಲು ರೆಡಿ.

  • ಒಂದು ತಿಂಗ್ಳು ಸ್ಟೋರ್ ಮಾಡಬಹುದಾದ ಟೊಮೆಟೊ ಗೊಜ್ಜು ಮಾಡೋ ವಿಧಾನ

    ಒಂದು ತಿಂಗ್ಳು ಸ್ಟೋರ್ ಮಾಡಬಹುದಾದ ಟೊಮೆಟೊ ಗೊಜ್ಜು ಮಾಡೋ ವಿಧಾನ

    ಕೊರೊನಾ ಲಾಕ್‍ಡೌನ್‍ನಿಂದಾಗಿ ಎಲ್ಲರೂ ಮನೆಯಲ್ಲಿದ್ದೀರಿ, ಹೀಗಾಗಿ ಮನೆಯವರಿಗೆ, ಮಕ್ಕಳಿಗೆ ವಿಧ-ವಿಧವಾದ ಅಡುಗೆ ಮಾಡಿಕೊಡಿ. ಸಾಮಾನ್ಯವಾಗಿ ಪಲ್ಯ, ಗೊಜ್ಜು ಮಾಡಿದರೆ ಒಂದು ದಿನದಲ್ಲೇ ಹಾಳಾಗುತ್ತದೆ. ಆದರೆ ನಾವು ಹೇಳಿಕೊಡು ಟೊಮೆಟೊ ಗೊಜ್ಜು ಮಾಡಿದ್ರೆ, ಅದನ್ನು ಒಂದು ತಿಂಗಳು ಇಟ್ಟುಕೊಂಡು ತಿನ್ನಬಹುದು. ಸುಲಭವಾಗಿ ಟೊಮೆಟೋ ಗೊಜ್ಜು ಮಾಡುವ ವಿಧಾನ ಇಲ್ಲಿದೆ….

    ಬೇಕಾಗುವ ಸಾಮಗ್ರಿಗಳು
    1. ಟೊಮೆಟೊ – 8 ರಿಂದ 10
    2. ಬ್ಯಾಡಗಿ ಮೆಣಸಿನಕಾಯಿ – 10
    3. ಸಾಸಿವೆ – 1 ಟೀ ಸ್ಪೂನ್
    4. ಜೀರಿಗೆ – 1 ಟಿ ಸ್ಪೂನ್
    5. ದನಿಯಾ – 1 ಟೀ ಸ್ಪೂನ್
    6. ಮೆಂತೆ – 1/2 ಟೀ ಸ್ಪೂನ್
    7. ಇಂಗು – 1/2 ಟೀ ಸ್ಪೂನ್
    8. ಅರಿಶಿಣ – ಚಿಟಿಕೆ
    9. ಉಪ್ಪು – ರುಚಿಗೆ ತಕ್ಕಷ್ಟು
    10. ಎಣ್ಣೆ – ಒಗ್ಗರಣೆಗೆ
    11. ಬೆಳ್ಳುಳ್ಳಿ – 7-8

    ಮಾಡುವ ವಿಧಾನ
    * ಮೊದಲಿಗೆ ಒಂದು ದೊಡ್ಡ ಬೌಲ್‍ನಲ್ಲಿ ಎಲ್ಲ ಟೊಮೆಟೊಗಳನ್ನು ಹಾಕಿ 5 ನಿಮಿಷ ಕುದಿಸಿಕೊಳ್ಳಬೇಕು. (ಟೊಮಾಟೊ ಕಟ್ ಮಾಡಬಾರದು)
    * ಒಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು 1/2 ಟೀ ಸ್ಪೂನ್ ಜೀರಿಗೆ, ದನಿಯಾ, ಮೆಂತೆ ಹಾಕಿ ಹುರಿದುಕೊಂಡು ಕುಟಾಣಿಯಲ್ಲಿ ಪುಡಿ ಮಾಡಿ ಮಾಡಿಕೊಳ್ಳಬೇಕು.
    * ಅದೇ ಪ್ಯಾನ್ ನಲ್ಲಿ ಬ್ಯಾಡಗಿ ಮೆಣಸಿನಕಾಯಿಗಳನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
    * ಕುದಿಸಿಕೊಂಡಿದ್ದ ಟೊಮೆಟೊಗಳ ಮೇಲಿನ ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿ. ಅದೇ ಜಾರಿಗೆ ಹುರಿದುಕೊಂಡಿರುವ ಬ್ಯಾಡಗಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
    * ಈಗ ಒಗ್ಗರಣೆಗೆ ಎಣ್ಣೆ ಹಾಕಿಕೊಳ್ಳಿ. (ಸ್ಟೌವ್ ಸಣ್ಣ ಉರಿಯಲ್ಲಿರಬೇಕು).


    * ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸಿವೆ, ಜೀರಿಗೆ, ಇಂಗು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ.
    * ಸಾಸಿವೆ ಚಿಟಪಟ ಅನ್ನುತ್ತಿದ್ದಂತೆ ಕರಿಬೇವು ಹಾಕಿ. ರುಬ್ಬಿಕೊಂಡಿದ್ದ ಟೊಮೆಟೊ ಮಿಶ್ರಣ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಕೊನೆಗೆ ರುಚಿಗೆ ತಕ್ಕಷ್ಟು, ಚಿಟಿಕೆ ಅರಿಶಿಣ ಮತ್ತು ಕುಟಾಣಿಯಲ್ಲಿ ಪುಡಿ ಮಾಡಿದ್ದ ಮಸಲಾ ಹಾಕಿ 5 ನಿಮಿಷ ಚೆನ್ನಾಗಿ ಫ್ರೈ ಮಾಡಿದರೆ ಟೊಮೆಟೊ ಗೊಜ್ಜು ರೆಡಿ.

  • ಹೊಸ ರುಚಿಯಲ್ಲಿ ಆಲೂ ಪಾಲಕ್ ಮಾಡೋ ವಿಧಾನ

    ಹೊಸ ರುಚಿಯಲ್ಲಿ ಆಲೂ ಪಾಲಕ್ ಮಾಡೋ ವಿಧಾನ

    ಕೊರೊನಾ ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿದ್ದೀರಿ. ಹೀಗಾಗಿ ಪ್ರತಿದಿನ ಬೇರೆ ಬೇರೆ ರುಚಿಯ ಅಡುಗೆ ಮಾಡಿ ಸವಿಯಿರಿ. ಚಪಾತಿ, ದೋಸೆ, ರೊಟ್ಟಿಗೆ ಅದೇ ಚಟ್ನಿ, ಪಲ್ಯ ತಿಂದು ಬೇಸರವಾಗಿತ್ತದೆ. ಹೀಗಾಗಿ ಆಲೂಗೆಡ್ಡೆಯಿಂದ ಹೊಸ ರುಚಿಯ ಅಡುಗೆ ಮಾಡಿಕೊಂಡು ಸವಿಯಿರಿ. ಆಲೂಗೆಡ್ಡೆಯಿಂದ ಅನೇಕ ರೀತಿಯ ಅಡುಗೆಯನ್ನು ತಯಾರಿಸಬಹುದು. ಈಗ ನಿಮಗಾಗಿ ಆಲೂ ಪಾಲಕ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಆಲೂಗಡ್ಡೆ – 2
    2. ಈರುಳ್ಳಿ – 2
    3. ಟೊಮೆಟೊ – 1
    3. ಹಸಿ ಮೆಣಸಿನಕಾಯಿ – ಎರಡು
    4. ಕರಿಬೇವು – ಸ್ವಲ್ಪ
    5. ಪಲಾವ್ ಎಲೆ – ಒಂದು
    6. ಲವಂಗ – 2
    7. ಚಕ್ಕೆ – ಸ್ವಲ್ಪ
    8. ಸಾಸಿವೆ- 1/2 ಟೀ ಸ್ಪೂನ್
    9. ಎಣ್ಣೆ-ಒಗ್ಗರಣೆ
    10. ದನಿಯಾ ಪುಡಿ – 1/2 ಟೀ ಸ್ಪೂನ್
    11. ಗರಂ ಮಸಾಲ – 1/2 ಟೀ ಸ್ಪೂನ್
    12. ಕತ್ತರಿಸಿದ ಪಾಲಕ್ ಸೊಪ್ಪು – ಒಂದು ಕಪ್
    13. ಅಚ್ಚ ಖಾರದ ಪುಡಿ – ಒಂದೂವರೆ ಟೀ ಸ್ಪೂನ್
    14. ಉಪ್ಪು – ರುಚಿಗೆ ತಕ್ಕಷ್ಟು
    15. ಜೀರಿಗೆ – 1/2 ಟೀ ಸ್ಪೂನ್

    ಮಾಡುವ ವಿಧಾನ
    * ಮೊದಲಿಗೆ ಎರಡು ಆಲೂಗಡ್ಡೆಗಳ ಮೇಲಿನ ಸಿಪ್ಪೆ ತೆಗೆದು, ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ.
    * ಗ್ಯಾಸ್ ಆನ್ ಮಾಡಿಕೊಂಡು ಒಂದು ಪ್ಯಾನ್ ಇಟ್ಟುಕೊಂಡು ಒಗ್ಗರಣೆಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗ್ತಿದ್ದಂತೆ ಚಕ್ಕೆ, ಲವಂಗ, ಪಲಾವ್ ಎಲೆ, ಸಾಸಿವೆ, ಜೀರಿಗೆ ಹಾಕಿ ಫ್ರೈ ಮಾಡಿಕೊಳ್ಳಿ.
    * ನಂತರ ಕತ್ತರಿಸಿದ ಈರುಳ್ಳಿ, ಟೊಮೆಟೊ, ಹಸಿ ಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗುವರೆಗೂ ಫ್ರೈ ಮಾಡಬೇಕು.
    * ಈಗ ದನಿಯಾ ಪುಡಿ, ಗರಂ ಮಸಾಲ, ಅಚ್ಚ ಖಾರದ ಪುಡಿ, ಅರಿಶಿಣ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ.
    * ಮಿಶ್ರಣ ಫ್ರೈ ಆದ ಮೇಲೆ ಕತ್ತರಿಸಿದ ಆಲೂಗಡ್ಡೆ ಸೇರಿಸಿ, ಮೂರರಿಂದ ಐದು ನಿಮಿಷ ಫ್ರೈ ಮಾಡಿಕೊಳ್ಳಿ.
    * ಕತ್ತರಿಸಿ ತೊಳೆದಿಟ್ಟುಕೊಂಡಿದ್ದ ಪಾಲಕ್ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಪಾಲಕ್ ಸೊಪ್ಪು ಚೆನ್ನಾಗಿ ಮಿಕ್ಸ್ ಆಗ್ತಿದ್ದಂತೆ ಅರ್ಧ ಕಪ್‍ನಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮುಚ್ಚಳ ಮುಚ್ಚಿ ಆಲೂಗಡ್ಡೆ ಚೆನ್ನಾಗಿ ಬೇಯುವರೆಗೂ ಬೇಯಿಸಿದರೆ ಹೊಸ ರುಚಿಯ ಆಲೂ ಪಾಲಕ್ ರೆಡಿ.

  • ವೈಟ್ ರೈಸ್ ಜೊತೆಗಿರಲಿ ಕೆಂಪು ಈರುಳ್ಳಿ ಗೊಜ್ಜು

    ವೈಟ್ ರೈಸ್ ಜೊತೆಗಿರಲಿ ಕೆಂಪು ಈರುಳ್ಳಿ ಗೊಜ್ಜು

    ದೇಶದಲ್ಲಿ ಎರಡನೇ ಲಾಕ್‍ಡೌನ್ ಆರಂಭವಾಗಿದ್ದು, ಎಲ್ಲರೂ ಕಡ್ಡಾಯವಾಗಿ ಮನೆಯಲ್ಲಿರಬೇಕು. ಹೀಗಾಗಿ ಎಲ್ಲರೂ ಮನೆಯಲ್ಲಿ ಇದ್ದಾರೆ. ಪ್ರತಿದಿನ ಮಾಡುವ ತಿಂಡಿಯನ್ನೇ ಮಾಡುತ್ತಿದ್ದರೆ ಬೇಸರವಾಗುತ್ತದೆ. ಹೀಗಾಗಿ ಕೆಂಪು ಈರುಳ್ಳಿ ಗೊಜ್ಜು ಮಾಡುವ ವಿಧಾನ ಇಲ್ಲಿದೆ?

    ಬೇಕಾಗುವ ಸಾಮಾಗ್ರಿಗಳು
    1. ಈರುಳ್ಳಿ- 7 (ಸಂಬಾರ್ ಈರುಳ್ಳಿ-ಸಣ್ಣದು)
    2. ಬ್ಯಾಡಗಿ ಮೆಣಸಿನಕಾಯಿ -7 ರಿಂದ 8
    3. ಮೆಂತೆ – ಅರ್ಧ ಟೀ ಸ್ಪೂನ್
    4. ಜೀರಿಗೆ -1 ಟೀ ಸ್ಪೂನ್
    5. ದನಿಯಾ -ಒಂದು ಟೀ ಸ್ಪೂನ್
    6. ಉದ್ದಿನ ಬೇಳೆ -1 ಟೀ ಸ್ಪೂನ್
    7. ಹುಣಸೆ ಹಣ್ಣು – ಸ್ವಲ್ಪ
    9. ಸಾಸಿವೆ- ಅರ್ಧ ಟೀ ಸ್ಪೂನ್
    10. ಎಣ್ಣೆ- ಒಗ್ಗರಣೆಗೆ
    11. ಕಡಲೆ ಬೇಳೆ- ಅರ್ಧ ಟೀ ಸ್ಪೂನ್
    12. ಕರಿಬೇವು – ಸ್ವಲ್ಪ
    13. ಬೆಳ್ಳುಳ್ಳಿ – 8 ರಿಂದ 10 ಎಳಸು
    14. ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಗ್ಯಾಸ್ ಆನ್ ಮಾಡ್ಕೊಂಡು ಮೊದಲಿಗೆ ಒಂದು ಪ್ಯಾನ್ ಇಟ್ಟುಕೊಳ್ಳಿ. ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ.
    * ಎಣ್ಣೆ ಬಿಸಿಯಾಗುತ್ತಿದ್ದಂತೆ ಮೆಂತೆ, ದನಿಯಾ, ಜೀರಿಗೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಜೀರಿಗೆ, ಮೆಂತೆ, ದನಿಯಾ ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಬ್ಯಾಡಗಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಹುಣಸೆ ಹಣ್ಣು ಹಾಕಿ ಫ್ರೈ ಮಾಡಿ.
    * ಫ್ರೈ ಮಾಡಿಕೊಂಡ ಎಲ್ಲ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬುವ ಮುನ್ನ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
    * ಮಿಶ್ರಣ ನುಣ್ಣಗೆ ಆಗ್ತಿದ್ದಂತೆ ಆರು ಈರುಳ್ಳಿಯನ್ನು ದೊಡ್ಡದಾಗಿ ಕಟ್ ಮಾಡಿಕೊಂಡು ಮತ್ತೊಮ್ಮೆ ರುಬ್ಬಿಕೊಳ್ಳಿ.
    * ಈಗ ಮತ್ತೊಂದು ಪ್ಯಾನ್ ಇಟ್ಟುಕೊಂಡು ಜೀರಿಗೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ ಒಗ್ಗರಣೆ ಹಾಕಿ. ಎಲ್ಲವೂ ಫ್ರೈ ಮಾಡಿದ ಮೇಲೆ ಕತ್ತರಿಸಿಕೊಂಡಿರುವ ಒಂದು ಈರುಳ್ಳಿಯನ್ನು ಹಾಕಿ, ಹಸಿ ವಾಸನೆ ಹೋಗುವರೆಗೆ ಫ್ರೈ ಮಾಡಿ.
    * ಕೊನೆಗೆ ಒಗ್ಗರಣೆಗೆ ಮಿಕ್ಸಿಯಲ್ಲಿ ಸಿದ್ಧಮಾಡಿಕೊಂಡಿದ್ದ ಮಿಶ್ರಣವನ್ನು ಮಿಕ್ಸ್ ಮಾಡಿ ಚೆನ್ನಾಗಿ ಘಮ ಘಮ ಪರಿಮಳ ಬರುವರೆಗೆ ಫ್ರೈ ಮಾಡಿದ್ರೆ ಕೆಂಪು ಈರುಳ್ಳಿ ಗೊಜ್ಜು ಸಿದ್ಧ.

  • ದೋಸೆ, ಚಪಾತಿ ಜೊತೆಗಿರಲಿ ಹಸಿರು ಬಟಾಣಿ ಚಟ್ನಿ

    ದೋಸೆ, ಚಪಾತಿ ಜೊತೆಗಿರಲಿ ಹಸಿರು ಬಟಾಣಿ ಚಟ್ನಿ

    ಲಾಕ್‍ಡೌನ್ ನಿಂದಾಗಿ ಜನರು ಮನೆಯಲ್ಲಿಯೇ ಇದ್ದಾರೆ. ಕೊರೊನಾ ಆತಂಕದಿಂದಾಗಿ ಹೊರಗೆ ಬರುವಂತಿಲ್ಲ. ಪ್ರತಿನಿತ್ಯ ದೋಸೆ, ಚಪಾತಿ, ರೊಟ್ಟಿ ಜೊತೆ ಅದೇ ಕಾಯಿ ಚಟ್ನಿ, ಪಲ್ಯ ತಿಂದು ಬೇಜಾರು ಆಗ್ತಿದೆಯಾ? ಒಮ್ಮೆ ಬಟಾಣಿ ಚಟ್ನಿ ಟ್ರೈ ಮಾಡಿ. ಬಟಾಣಿ ಚಟ್ನಿ ತಿಂದವರು ಪದೇ ಪದೇ ಕೇಳುತ್ತಾರೆ.

    * ಬೇಕಾಗುವ ಸಾಮಗ್ರಿಗಳು
    * ಹಸಿ ಬಟಾಣಿ – 1 ಕಪ್
    * ಕಾಯಿ ತುರಿ – 1 ಕಪ್
    * ಈರುಳ್ಳಿ – 1
    * ಹಸಿಮೆಣಸಿನಕಾಯಿ 5-6
    * ಶುಂಠಿ – ಬೆಳ್ಳುಳ್ಳಿ – ಸ್ವಲ್ಪ
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ – ಸ್ವಲ್ಪ
    * ಕೊತ್ತಂಬರಿ – ಸ್ಪಲ್ಪ
    * ಹುಣಸೆಹಣ್ಣು – ಸ್ವಲ್ಪ

    ಒಗ್ಗರಣೆಗೆ
    * ಎಣ್ಣೆ – ಸ್ವಲ್ಪ
    * ಸಾಸಿವೆ
    * ಕರಿಬೇವು
    * ಕಡ್ಲೆಬೇಳೆ

    ಮಾಡುವ ವಿಧಾನ
    * ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾದ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ.
    * ಈಗ ಅದೇ ಪಾತ್ರೆಗೆ ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಸೇರಿಸಿ ಫ್ರೈ ಮಾಡಿ
    * ಈಗ ಕಾಯಿ ತುರಿ ಹಾಕಿ ಒಮ್ಮೆ ಕೈಯಾಡಿಸಿ
    * ಈಗ ತೊಳೆದ ಹಸಿರು ಹಸಿ ಬಟಾಣಿ, ಹುಣಸೆಹಣ್ಣು ಸೇರಿಸಿ ಅಗತ್ಯಕ್ಕೆ ಬೇಕಾದಷ್ಟು ನೀರು ಸೇರಿಸಿ ಕುದಿಸಿ.
    * ಬಟಾಣಿ ಕುದ್ದ ಮೇಲೆ ಒಲೆ ಆರಿಸಿ, ಮಿಶ್ರಣ ತಣ್ಣಗಾಗಲು ಬಿಡಿ.
    * ಈಗ ಒಂದು ಜಾರ್‍ಗೆ ಆರಿದ ಮಿಶ್ರಣ, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.


    * ಈಗ ಒಗ್ಗರಣೆಗೆ ಪ್ಯಾನ್ ಇಟ್ಟು ಎಣ್ಣೆ ಬಿಸಿ ಮಾಡಿ.
    * ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಸಾಸಿವೆ, ಕಡ್ಲೆಬೇಳೆ, ಕರಿಬೇವು ಸೇರಿಸಿ ಸಿಡಿಸಿ.
    * ಒಗ್ಗರಣೆಯನ್ನು ರುಬ್ಬಿದ ಮಿಶ್ರಣಕ್ಕೆ ಸೇರಿಸಿ ಹಸಿರು ಬಟಾಣಿ ಚಟ್ನಿ ರೆಡಿ.