Tag: recipe

  • ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮುಗಲಾಯಿ ಚಿಕನ್ ಗ್ರೇವಿ ರೆಸಿಪಿ

    ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮುಗಲಾಯಿ ಚಿಕನ್ ಗ್ರೇವಿ ರೆಸಿಪಿ

    ರೆಸ್ಟೋರೆಂಟ್, ಡಾಬಾಗಳಲ್ಲಿ ಸಿಗುವ ಚಿಕನ್ ಖಾದ್ಯ ತಿಂದವರಿಗೆ ಮನೆಯಲ್ಲಿ ಇದನ್ನ ಹೇಗೆ ಮಾಡೋದು ಅಂತ ತಲೆ ಕೆಡಿಸಿಕೊಂಡಿರುತ್ತಾರೆ. ಹಾಗಾಗಿ ಇದೀಗ ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮುಗಲಾಯಿ ಚಿಕನ್ ಗ್ರೇವಿ ಮಾಡುವ ವಿಧಾನ ನಿಮ್ಮ ಮುಂದಿದೆ. ಸಾಮಾನ್ಯವಾಗಿ ಭಾನುವಾರದ ದಿನ ಬಹುತೇಕರ ಮನೆಯಲ್ಲಿ ಬಾಡುಟದ ಪರಿಮಳ ಇರಲೇಬೇಕು. ಪ್ರತಿವಾರ ಸಾಮಾನ್ಯ ಚಿಕನ್ ರೆಸಿಪಿ ಮಾಡಿ ಬೇಜಾರು ಆಗಿದ್ರೆ ಒಮ್ಮೆ ರೆಸ್ಟೊರೆಂಟ್ ಶೈಲಿಯ ಸ್ಪೈಸಿ ಮೊಗಲಾಯಿ ಚಿಕನ್ ಗ್ರೇವಿ ರೆಸಿಪಿ ಮಾಡಿ. ಮನೆಗೆ ವಿಶೇಷ ಅತಿಥಿ, ಪಾರ್ಟಿ ಸಂದರ್ಭಗಳಲ್ಲಿ ಈ ರೀತಿಯ ರುಚಿಕರ ಖಾದ್ಯ ಮಾಡಬಹುದು.

    ಬೇಕಾಗುವ ಸಾಮಾಗ್ರಿಗಳು
    * ಚಿಕನ್-1 ಕೆಜಿ
    * ಈರುಳ್ಳಿ- 3 (ಮಧ್ಯಮ ಗಾತ್ರದ್ದು)
    * ಮೊಸರು-1 ಕಪ್
    * ಹಾಲು- 1 ಕಪ್
    * ತುಪ್ಪ- 1 ಕಪ್
    * ಬದಾಮಿ- 50 ಗ್ರಾಂ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಟಿ ಸ್ಪೂನ್
    * ಹಸಿ ಮೆಣಸಿನಕಾಯಿ- 3 ರಿಂದ 4
    * ಧನಿಯಾ ಪೌಡರ್- 1 ಟೀ.ಸ್ಪೂನ್
    * ಅಚ್ಚ ಖಾರದ ಪುಡಿ-1/2 ಟೀ ಸ್ಪೂನ್
    * ಅರಿಶಿನ- 1/2 ಟೀ ಸ್ಪೂನ್
    * ಉಪ್ಪು- ರುಚಿಗೆ ತಕ್ಕಷ್ಟು
    * ಕೆಂಪು ಮೆಣಸಿನಕಾಯಿ- 4
    * ಧನಿಯಾ- 1 ಟೀಸ್ಪೂನ್
    * ಜೀರಿಗೆ- 1 ಟೀ ಸ್ಪೂನ್
    * ಕಾಳು ಮೆಣಸು- 1 ಟೀ ಸ್ಪೂನ್

    ಮಾಡುವ ವಿಧಾನ
    * ಮೊದಲಿಗೆ ಸ್ಟೌವ್ ಮೇಲೆ ಪ್ಯಾನ್ ಇರಿಸಿ ಕಡಿಮೆ ಉರಿಯಲ್ಲಿ ಬದಾಮಿ, ಕಾಳು ಮೆಣಸು, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಧನಿಯಾ ಹಾಕಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಮಿಕ್ಸಿ ಬೌಲಿಗೆ ಹಾಕಿ ಪೌಡರ್ ಮಾಡಿಕೊಳ್ಳಿ.
    * ಮತ್ತೊಂದು ಪ್ಯಾನ್ ಇಟ್ಟುಕೊಂಡು ಒಂದು ಟೀ ಸ್ಪೂನ್ ತುಪ್ಪ ಹಾಕಿ. ಉದ್ದವಾಗಿ ಕತ್ತರಿಸಿಕೊಂಡಿರುವ ಈರುಳ್ಳಿಯನ್ನು ಹಾಕಿ ಗೋಲ್ಡನ್ ಕಲರ್ ಬರೋವರೆಗೂ ಹುರಿದು ಎತ್ತಿಟ್ಟುಕೊಳ್ಳಿ.

    * ಇನ್ನೊಂದು ಮಿಕ್ಸಿಂಗ್ ಬೌಲ್ ನಲ್ಲಿ ತೊಳೆದುಕೊಂಡಿರುವ ಚಿಕನ್ ಹಾಕಿ. ಅದಕ್ಕೆ ಅಚ್ಚ ಖಾರದ ಪುಡಿ, ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರ್ಧ ಕಪ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 15 ನಿಮಿಷ ಎತ್ತಿಡಿ.
    * ಈರುಳ್ಳಿ ಫ್ರೈ ಮಾಡಿದ ಪಾತ್ರೆಯಲ್ಲಿ ಮಸಾಲೆಯಲ್ಲಿ ಮಿಕ್ಸ್ ಮಾಡಿರುವ ಚಿಕನ್ ಹಾಕಿ. ತುಪ್ಪದಲ್ಲಿ ಚಿಕನ್ ಚೆನ್ನಾಗಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿ, ರುಬ್ಬಿಕೊಂಡಿರುವ ಮಸಾಲೆಯನ್ನ ಸೇರಿಸಿ.

    * ಮಸಾಲೆ ಸೇರಿಸಿದ ನಂತರ ಕಡಿಮೆ ಉರಿಯಲ್ಲಿ ಚಿಕನ್ ಚೆನ್ನಾಗಿ ಎರಡು ನಿಮಿಷ ಬೇಯಿಸಿ. ತದನಂತರ ಅರ್ಧ ಕಪ್ ಮೊಸರು, ಒಂದು ಕಪ್ ಹಾಲು ಹಾಗೂ ಫ್ರೈ ಮಾಡಿಕೊಂಡಿರುವ ಈರುಳ್ಳಿ ಸೇರಿಸಿ ಚೆನ್ನಾಗಿ ಪ್ಲಿಪ್ ಮಾಡಬೇಕು.
    * ಕೊನೆಗೆ ಒಂದು ಕಪ್ ನೀರು, ಮೂರು ಹಸಿ ಮೆಣಸಿನಕಾಯಿ ಹಾಕಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿದ್ರೆ ಮುಗಲಾಯಿ ಚಿಕನ್ ರೆಡಿ.

     

  • ಮನೆಗೆ ಗೆಸ್ಟ್ ಬರ್ತಿದ್ದೀರಾ? ಲೆಮನ್ ಪೆಪ್ಪರ್ ಚಿಕನ್ ಫ್ರೈ ಮಾಡಿ

    ಮನೆಗೆ ಗೆಸ್ಟ್ ಬರ್ತಿದ್ದೀರಾ? ಲೆಮನ್ ಪೆಪ್ಪರ್ ಚಿಕನ್ ಫ್ರೈ ಮಾಡಿ

    -ಒಮ್ಮೆ ತಿಂದವರು ನಿಮ್ಮ ಮನೆಯೂಟ ಮರೆಯಲ್ಲ

    ಭಾನುವಾರ ಬಂದ್ರೆ ಸಾಕು ಮನೆಯಲ್ಲಿ ನಾನ್-ವೆಜ್ ಬೇಕು ಎಂಬುವುದು ಕುಟುಂಬಸ್ಥರ ಆಸೆ. ನಾರ್ಮಲ್ ಆಗಿ ಚಿಕನ್ ಕಬಾಬ್, ಚಿಕನ್ ಸಾಂಬಾರ್ ತಿಂದು ಬೇಜಾರು ಆಗಿರುತ್ತೆ. ಭಾನುವಾರ ರಜಾ ದಿನ ಆಗಿದ್ದರಿಂದ ನಿಧಾನವಾಗಿ ಅಡುಗೆ ಮಾಡಲು ಸಮಯ ಇರುತ್ತೆ. ಯಾರಾದ್ರೂ ಗೆಸ್ಟ್ ನಿಮ್ಮ ಮನೆಗೆ ಬರುತ್ತಿದ್ರೆ ಲೆಮನ್ ಪೆಪ್ಪರ್ ಚಿಕನ್ ಫ್ರೈ ಮಾಡಿ ಉಣಬಡಿಸಿ. ಒಮ್ಮೆ ಲೆಮನ್ ಪೆಪ್ಪರ್ ಚಿಕನ್ ಫ್ರೈ ತಿಂದವರು ನಿಮ್ಮ ಮನೆಯೂಟವನ್ನ ಮರೆಯಲು ಸಾಧ್ಯವಿಲ್ಲ. ಲೆಮನ್ ಪೆಪ್ಪರ್ ಚಿಕನ್ ಫ್ರೈ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    ಚಿಕನ್-1/2 ಕೆಜಿ
    ಮೊಸರು- 1 ಕಪ್
    ಬೆಣ್ಣೆ- 1 ಟಿ ಸ್ಪೂನ್
    ಪೆಪ್ಪರ್ ಪೌಡರ್- 1 ಟೀ ಸ್ಪೂನ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
    ನಿಂಬೆ ರಸ- 2 ಟೀ ಸ್ಪೂನ್
    ಕಾಳು ಮೆಣಸು- 4 ರಿಂದ 5
    ಚಕ್ಕೆ- ಸ್ಪಲ್ಪ
    ಲವಂಗ-3 ರಿಂದ 4
    ಏಲಕ್ಕಿ -2 ರಿಂದ 3
    ಹಸಿ ಮೆಣಸಿನಕಾಯಿ- 4 ರಿಂದ 8
    ಕೋತಂಬರಿ ಸೊಪ್ಪು
    ಎಣ್ಣೆ
    ಉಪ್ಪು-ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    * ಮೊದಲಿಗೆ ಚಿಕನ್ ದೊಡ್ಡ ಪೀಸ್ ಗಳಲ್ಲಿ ಕತ್ತರಿಸಿಕೊಳ್ಳಿ (ಲೆಗ್ ಪೀಸ್). ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು ಮಿಕ್ಸಿಂಗ್ ಬೌಲ್ ಗೆ ಹಾಕಿಕೊಳ್ಳಿ. ಮಿಕ್ಸಿಂಗ್ ಬೌಲ್ ಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ನಿಂಬೆ ರಸ, ಎರಡು ಟೀ ಸ್ಪೂನ್ ಮೊಸರು, ಪೆಪ್ಪರ್ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಒಂದು ಗಂಟೆ ಎತ್ತಿಡಿ. (ಚಿಕನ್ ಮಸಾಲೆಯಲ್ಲಿ ನೆನೆಯಬೇಕು)
    * ಸ್ಟೌವ್ ಮೇಲೆ ಪ್ಯಾನ್ ಇಟ್ಟುಕೊಂಡು ಮೂರು ಟೀ ಸ್ಪೂನ್ ಎಣ್ಣೆ, ಒಂದು ಟೀ ಸ್ಪೂನ್ ಬೆಣ್ಣೆ ಹಾಕಿ. ಎಣ್ಣೆ ಬಿಸಿಯಾಗತ್ತಿದ್ದಂತೆ ಕಡಿಮೆ ಉರಿಯಲ್ಲಿ ಕಾಳು ಮೆಣಸು, ಚಕ್ಕೆ, ಲವಂಗ ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ.

    * ಮಸಾಲೆ ಕಂದು ಬಣ್ಣಕ್ಕೆ ತಿರುಗಿದಾದ ಮಸಾಲೆಯಲ್ಲಿ ಮಿಕ್ಸ್ ಮಾಡಿರುವ ಚಿಕನ್ ಪೀಸ್ ಒಂದೊಂದಾಗಿ ಬಾಣಲೆಗೆ ಹಾಕಿಕೊಳ್ಳಿ. ಎರಡು ನಿಮಿಷ ನಂತರ ಚಿಕನ್ ಪೀಸ್ ಪ್ಲಿಪ್ ಮಾಡಿ.
    * ಐದು ನಿಮಿಷಗಳ ನಂತರ ಚಿಕನ್ ಗೆ ಮೂರರಿಂದ ನಾಲ್ಕು ಟೀ ಸ್ಪೂನ್ ಮೊಸರು, ಪೆಪ್ಪರ್ ಪೌಡರ್, ಕತ್ತರಿಸಿ ಮೆಣಸಿನ ಕಾಯಿ ಹಾಕಿ ಕಡಿಮೆ ಉರಿಯಲ್ಲಿ ಮೂರು ನಿಮಿಷವರೆಗೆ ಬೇಯಿಸಿ, ಕೋತಂಬರಿ ಸೊಪ್ಪು ಉದುರಿಸಿದ್ರೆ ಲೆಮನ್ ಪೆಪ್ಪರ್ ಚಿಕನ್ ಫ್ರೈ ರೆಡಿ.

  • ರುಚಿಯಾಗಿ ಸಿಂಪಲ್ ಎಗ್ ಬಿರಿಯಾನಿ ಮಾಡೋ ವಿಧಾನ

    ರುಚಿಯಾಗಿ ಸಿಂಪಲ್ ಎಗ್ ಬಿರಿಯಾನಿ ಮಾಡೋ ವಿಧಾನ

    ನಾಳೆ ಭಾನುವಾರ ಹೀಗಾಗಿ ಎಲ್ಲರೂ ಮನೆಯಲ್ಲಿರುತ್ತೀರ. ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಆದರೆ ಪ್ರತಿ ಬಾರಿಯೂ ಚಿಕನ್ ಬಿರಿಯಾನಿ, ಕಬಾಬ್, ಮಟನ್ ತಿಂದು ಬೇಸರವಾಗಿರುತ್ತದೆ. ಹೊಸದಾಗಿ ಏನಾದರೂ ಮಾಡೋಣ ಎಂದು ಪ್ಲಾನ್ ಮಾಡುತ್ತಿರುತ್ತೀರಿ. ಮೊಟ್ಟೆ ಅಂದರೆ ಎಲ್ಲರಿಗೂ ಇಷ್ಟ. ಮೊಟ್ಟೆಯಲ್ಲಿ ಅನೇಕ ಅಡುಗೆಯನ್ನು ತಯಾರಿಸಬಹುದು. ಆದ್ದರಿಂದ ನಿಮಗಾಗಿ ಸ್ಪೈಸಿ ಆದ ಎಗ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    1. ಮೊಟ್ಟೆ – 5
    2. ಅಕ್ಕಿ – ಒಂದು ಗ್ಲಾಸ್
    3. ಈರುಳ್ಳಿ – 2
    4. ಟೊಮೆಟೊ – 3
    5. ಹಸಿರು ಮೆಣಸಿನಕಾಯಿ – 3
    6. ಖಾರದ ಪುಡಿ- 1.5 ಚಮಚ
    7. ಗರಂ ಮಸಾಲ – 1.5 ಚಮಚ
    8. ದನಿಯಾ ಪುಡಿ – 1.5 ಚಮಚ
    9. ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 2 ಚಮಚ


    10. ಎಣ್ಣೆ – 3 ಚಮಚ
    11. ಉಪ್ಪು – ರುಚಿಗೆ ತಕ್ಕಷ್ಟು
    12. ಪುದಿನ, ಕೊತ್ತಂಬರಿ ಸೊಪ್ಪು
    13. ಲವಂಗ, ಚಕ್ಕೆ, ಸ್ಟಾರ್ ಹೂ – 2
    14. ಏಲಕ್ಕಿ, ಪಲವ್ ಎಲೆ – 2
    15. ಅರಿಶಿಣ – 1 ಚಮಚ

    ಮಾಡುವ ವಿಧಾನ
    * ಮೊದಲಿಗೆ 5 ಮೊಟ್ಟೆಯನ್ನು ಬೇಯಿಸಿ ಇಟ್ಟುಕೊಳ್ಳಬೇಕು.
    * ಸ್ಟೌವ್ ಮೇಲೆ ಒಂದು ಕುಕ್ಕರ್ ಇಟ್ಟು ಒಂದು ಚಮಚ ಎಣ್ಣೆ ಹಾಕಿ. ಅದಕ್ಕೆ ಅರ್ಧ ಚಮಚ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಲಾ, ಸ್ವಲ್ಪ ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ.
    * ಅದಕ್ಕೆ ಬೇಯಿಸಿ ಇಟ್ಟುಕೊಂಡಿದ್ದ ಮೊಟ್ಟೆ ಹಾಕಿ ಚೆನ್ನಾಗಿ ಫ್ರೈ ಮಾಡಿ ಒಂದು ಬೌಲ್‍ಗೆ ಎತ್ತಿಟ್ಟುಕೊಳ್ಳಿ.
    * ಈಗ ಅದೇ ಕುಕ್ಕರ್‌ಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಲವಂಗ, ಚಕ್ಕೆ, ಸ್ಟಾರ್ ಹೂ, ಏಲಕ್ಕಿ ಮತ್ತು ಪಲಾವ್ ಎಲೆ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ನಂತರ ಹಸಿರು ಮೆಣಸಿನ ಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.


    * ನಂತರ ಟೊಮೆಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ (ಸಣ್ಣದಾಗಿ ಕಟ್ ಮಾಡಿರಬೇಕು)
    * ಈಗ ಪುದಿನ, ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ. ದನಿಯಾ, ಗರಂ ಮಸಲಾ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ.
    * ಅದಕ್ಕೆ ಒಂದು ಗ್ಲಾಸ್ ಅಕ್ಕಿ ತೆಗೆದುಕೊಂಡಿದ್ದರೆ ಅದಕ್ಕೆ 2 ಗ್ಲಾಸ್ ನೀರು ಹಾಕಿ. (ನೀವು ಅಕ್ಕಿ ತೆಗೆದುಕೊಳ್ಳುವುದರ ಮೇಲೆ ನೀರು ಹಾಕಿಕೊಳ್ಳಬೇಕು.)
    * ಮತ್ತೆ ಸ್ವಲ್ಪ ಪುದಿನ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕುದಿಸಿ.
    * ಕೊನೆಯಲ್ಲಿ ಬೇಯಿಸಿದ ಮೊಟ್ಟೆ ಹಾಕಿ ಕುಕ್ಕರ್ ಮುಚ್ಚಿ 2 ವಿಷಲ್ ಕೂಗಿಸಿದರೆ ರುಚಿಯಾದ ಎಗ್ ಬಿರಿಯಾನಿ ಸವಿಯಲು ಸಿದ್ಧ

  • ಒಮ್ಮೆ ತಿಂದ್ರೆ ಪದೇ ಪದೇ ಬೇಕೆನಿಸುವ ಗರಂ ಚಿಕನ್ ಫ್ರೈ

    ಒಮ್ಮೆ ತಿಂದ್ರೆ ಪದೇ ಪದೇ ಬೇಕೆನಿಸುವ ಗರಂ ಚಿಕನ್ ಫ್ರೈ

    ಭಾನುವಾರ ಬಂದ್ರೆ ಸಾಕು ಬಾಡೂಟ ಬೇಕೇ ಬೇಕು. ಅದೇ ಚಿಕನ್ ಸಾಂಬಾರ್, ಚಿಕನ್ 65 ತಿಂದು ಬೇಜಾರಾಗಿರುತ್ತೆ. ಮನೆಯಲ್ಲಿಯೇ ಗರಂ ಮಸಾಲಾ ಪೌಡರ್ ಮಾಡಿಕೊಂಡು ಈರುಳ್ಳಿ ಮಿಕ್ಸಡ್ ಚಿಕನ್ ಫ್ರೈ ಮಾಡಿದ್ರೆ ತಿಂದವರು ಮತ್ತೊಮ್ಮೆ ಕೇಳುತ್ತಾರೆ.

    ಬೇಕಾಗುವ ಸಾಮಾಗ್ರಿಗಳು
    ಚಿಕನ್-1 ಕೆಜಿ
    ಅರುಳ್ಳಿ – 4 (ಮಧ್ಯಮ ಗಾತ್ರದ್ದು)
    ಟೊಮೆಟೋ-1 (ದೊಡ್ಡದು)
    ಅರಿಶಿನ- 1/2 ಟೀ ಸ್ಪೂನ್
    ಧನಿಯಾ ಪೌಡರ್- 1/2 ಟೀ ಸ್ಪೂನ್
    ಗರಂ ಮಸಾಲ- 1/2 ಟೀ ಸ್ಪೂನ್
    ಅಚ್ಚು ಖಾರದ ಪುಡಿ- 2 ಟೀ ಸ್ಪೂನ್
    ಉಪ್ಪು- ರುಚಿಗೆ ತಕ್ಕಷ್ಟು
    ನಿಂಬೆಹಣ್ಣು- 1
    ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಟೀ ಸ್ಪೂನ್
    ಕೋತಂಬರಿ ಸೊಪ್ಪು
    ಎಣ್ಣೆ

    ಮಸಾಲಾ ಪೌಡರ್ ಮಾಡಲು ಬೇಕಾಗುವ ಸಾಮಾಗ್ರಿಗಳು:
    ಧನಿಯಾ-2 ಟೀ ಸ್ಪೂನ್
    ಚಕ್ಕೆ- 4 ರಿಂದ 5 ಇಂಚು
    ಲವಂಗ- 5 ರಿಂದ 6
    ಕೆಂಪು ಮೆಣಸಿನಕಾಯಿ- 8 ರಿಂದ 10
    ಏಲಕ್ಕಿ- 3 ರಿಂದ 4
    ಕಾಳು ಮೆಣಸು- 5 ರಿಂದ 6
    ಸೋಂಪು- 1 ಟೀ ಸ್ಪೂನ್
    ಜೀರಿಗೆ- 1/2 ಟೀ ಸ್ಪೂನ್

    ಮಾಡುವ ವಿಧಾನ:
    * ಚಿಕನ್ ನನ್ನ ದೊಡ್ಡ ಪೀಸ್ ಗಳಲ್ಲಿ ಕತ್ತರಿಸಿಕೊಂಡು ಬಿಸಿನೀರಿನಲ್ಲಿ ಎರಡರಿಂದ ಮೂರು ಬಾರಿ ತೊಳೆದುಕೊಂಡು ಮಿಕ್ಸಿಂಗ್ ಬೌಲ್ ಗೆ ಹಾಕಿಕೊಳ್ಳಿ.
    * ಚಿಕನ್ ಗೆ ಅರಿಶಿನ, ಧನಿಯಾ ಪೌಡರ್, ಗರಂ ಮಸಾಲಾ, ನಿಂಬೆ ಹಣ್ಣಿನ ರಸ, ಉಪ್ಪು, ಕತ್ತರಿಸಿದ ಒಂದು ಈರುಳ್ಳಿ, ಅಚ್ಚು ಖಾರದ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಾತ್ರೆಗೆ ಮುಚ್ಚಳ ಮುಚ್ಚಿ 10 ರಿಂದ 15 ನಿಮಿಷ ಎತ್ತಿಡಿ.

    * ಮಸಾಲಾ ಪೌಡರ್: ಸ್ಟೌವ್ ಮೇಲೆ ಪ್ಯಾನ್ ಇಟ್ಟುಕೊಂಡು ಧನಿಯಾ, ಚಕ್ಕೆ, ಲವಂಗ, ಕೆಂಪು ಮೆಣಸಿನಕಾಯಿ, ಏಲಕ್ಕಿ, ಕಾಳು ಮೆಣಸು, ಸೋಂಪು ಮತ್ತು ಜೀರಿಗೆ ಹಾಕಿ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ಹುರಿದುಕೊಂಡಿರುವ ಮಸಾಲಾ ತಣ್ಣಗಾದ ಕೂಡಲೇ ಮಿಕ್ಸಿಗೆ ಹಾಕಿ ರುಬ್ಬಿಕೊಂಡ್ರೆ ಹೋಮ್ ಮೇಡ್ ಗರಂ ಮಸಾಲಾ ಸಿದ್ಧವಾಗುತ್ತೆ.
    * ಸ್ಟೌವ್ ಆನ್ ಮಾಡಿಕೊಂಡು ಪ್ಯಾನ್ ಇಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಕತ್ತರಿಸಿಕೊಂಡಿರುವ ಈರುಳ್ಳಿ ಹಾಕಿ ಹಸಿ ವಾಸನೆ ಹೋಗುವರೆಗೂ ಬೇಯಿಸಿಕೊಳ್ಳಬೇಕು. ಈರುಳ್ಳಿ ಗೋಲ್ಡನ್ ಕಲರ್ ಬರುತ್ತಿದ್ದಂತೆ ಟೊಮೆಟೋ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮಿಕ್ಸ್ ಮಾಡಿ ಪ್ಲಿಫ್ ಮಾಡುತ್ತಿರಬೇಕು.

    * ಟೊಮೆಟೋ ಬೆಂದ ನಂತರ ಈ ಮೊದಲು ಮಸಾಲಾದಲ್ಲಿ ಮಿಕ್ಸ್ ಮಾಡಿಕೊಂಡಿರುವ ಚಿಕನ್ ಹಾಕಿ ಮುಚ್ಚಳ ಮುಚ್ಚಿ 4 ರಿಂದ 5 ನಿಮಿಷ ಬೇಯಿಸಿಕೊಳ್ಳಿ.
    * ಚಿಕನ್ ಬೆಂದ ನಂತರ ರುಬ್ಬಿಕೊಂಡಿರುವ ಮಸಾಲಾ ಜೊತೆಗೆ ಸ್ಪಲ್ಪ ಉಪ್ಪು ಸೇರಿಸಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಳ್ಳಿ.
    * ಫ್ರೈ ಆಗುತ್ತಿದ್ದಂತೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು ಹಾಕಿದ್ರೆ ನಿಮ್ಮ ಚಿಕನ್ ಫ್ರೈ ಸಿದ್ಧ.

  • ಡಾಬಾ ಶೈಲಿಯ ಆಲೂ ಎಗ್ ಬುರ್ಜಿ ಮಾಡುವ ವಿಧಾನ

    ಡಾಬಾ ಶೈಲಿಯ ಆಲೂ ಎಗ್ ಬುರ್ಜಿ ಮಾಡುವ ವಿಧಾನ

    ಬ್ಯಾಚೂಲರ್ ಗಳಿಗೆ ಪ್ರತಿ ದಿನ ಊಟಕ್ಕೆ ಏನು ಮಾಡಿಕೊಳ್ಳುವುದು ಅನ್ನೋದು ದೊಡ್ಡ ಪ್ರಶ್ನೆ. ಇತ್ತ ಗೃಹಿಣಯರಿಗೆ ಪ್ರತಿದಿನ ಹೊಸ ರುಚಿ ಕೇಳುವ ಮಕ್ಕಳಿಗೆ ಏನ್ ಮಾಡಿ ಕೊಡಬೇಕು ಅನ್ನೋದರ ಬಗ್ಗೆ ಉತ್ತರ ಹುಡುಕುತ್ತಿರುತ್ತಾರೆ. ಎಗ್ ಕರ್ರಿ, ಎಗ್ ಸಾಂಬಾರ್ ಮಾಡಿ ಬೇಜಾರು ಆಗಿದ್ರೆ ಒಮ್ಮೆ ಡಾಬಾ ಶೈಲಿಯ ಆಲೂ ಎಗ್ ಬುರ್ಜಿ ಟ್ರೈ ಮಾಡಿ.

    ಬೇಕಾಗುವ ಸಾಮಾಗ್ರಿಗಳು
    * ಆಲೂಗಡ್ಡೆ- 1 (ಮಧ್ಯಮ ಗಾತ್ರದ್ದು)
    * ಮೊಟ್ಟೆ- 2
    * ಈರುಳ್ಳಿ- 2 (ಮಧ್ಯಮ ಗಾತ್ರದ್ದು)
    * ಟೊಮ್ಯಾಟೋ -1
    * ಹಸಿಮೆಣಸಿನಕಾಯಿ – 2 ರಿಂದ 3
    * ಗರಂ ಮಸಾಲಾ
    * ಕೋತಂಬರಿ ಸೊಪ್ಪು
    * ಕರಿಬೇವು- 3 ರಿಂದ 4 ದಳ
    * ಜೀರಿಗೆ- 1/2 ಟೀ ಸ್ಪೂನ್
    * ಸಾಸವೆ-1-/ ಟೀ ಸ್ಪೂನ್
    * ಅರಿಶಿನ- ಚಿಟಿಕೆ
    * ಉಪ್ಪು- ರುಚಿಗೆ ತಕ್ಕಷ್ಟು
    * ಎಣ್ಣೆ

    ಮಾಡುವ ವಿಧಾನ:
    * ಮೊದಲಿಗೆ ಆಲೂಗಡೆಯ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಈರುಳ್ಳಿ, ಟೊಮ್ಯಾಟೋ ಮತ್ತು ಹಸಿ ಮೆಣಸಿನಕಾಯಿ ಸಣ್ಣದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ.
    * ಸ್ಟೌವ್ ಆನ್ ಮಾಡಿಕೊಂಡು ಪ್ಯಾನ್ ಇಟ್ಟುಕೊಳ್ಳಿ. ಪ್ಯಾನ್ ಬಿಸಿಯಾಗುತ್ತಿದ್ದಂತೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಕರಿಬೇವು, ಜೀರಿಗೆ, ಸಾಸವೆ ಹಾಕಿ ಫ್ರೈ ಮಾಡಿಕೊಳ್ಳಿ. ತದನಂತರ ಕತ್ತರಿಸಿಕೊಂಡಿರುವ ಆಲೂಗಡ್ಡೆ ಮತ್ತು ಈರುಳ್ಳಿ ಸೇರಿಸಿ ಹಸಿ ವಾಸನೆ ಹೋಗುವರೆಗೂ ಬೇಯಿಸಿಕೊಳ್ಳಿ.
    * ಈರುಳ್ಳಿ ಮತ್ತು ಆಲೂಗಡ್ಡೆ ಬೇಯಿಸಿದ ಬಳಿಕ ಅದೇ ಪ್ಯಾನ್ ಗೆ ಟೊಮ್ಯಾಟೋ ಮಿಕ್ಸ್ ಮಾಡಿ. ನಂತರ ಅರಿಶಿನ, ಉಪ್ಪು, ಗರಂ ಮಸಲಾ ಸೇರಿಸಿ ಕಡಿಮೆ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷ ಫ್ರೈ ಮಾಡಿಕೊಳ್ಳಿ.
    * ಮಿಶ್ರಣ ಫ್ರೈ ಆಗ್ತಿದ್ದಂತೆ ಎರಡು ಮೊಟ್ಟೆಯ ಒಡೆದು ಹಾಕಿ ಚೆನ್ನಾಗಿ ಕಲಕಬೇಕು. ಎರಡರಿಂದ ಮೂರು ನಿಮಿಷ ಮಸಲಾ ಬೇಯಿಸಿದ್ರೆ ಆಲೂ ಎಗ್ ಬುರ್ಜಿ ರೆಡಿ.
    (ಇದನ್ನು ಚಪಾತಿ, ರೊಟ್ಟಿ ಅಥವಾ ದೋಸೆ ಜೊತೆ ತಿನ್ನಬಹುದು)

  • ಗರಿ ಗರಿಯಾದ ಈರುಳ್ಳಿ ಬೋಂಡಾ ಮಾಡುವ ವಿಧಾನ

    ಗರಿ ಗರಿಯಾದ ಈರುಳ್ಳಿ ಬೋಂಡಾ ಮಾಡುವ ವಿಧಾನ

    ಸಂಜೆಯಾದ್ರೆ ತಂಪು ಗಾಳಿ, ಚುಮು ಚುಮು ಚಳಿ. ಖಾರ ಖಾರ ತಿಂಡಿ ಜೊತೆ ಗರಂ ಚಹಾ ಸೇವಿಸುವ ಖುಷಿ ಮುಂದೆ ಮತ್ತೊಂದಿಲ್ಲ. ಚಹಾ ಜೊತೆ ಖಾರ ಖಾರವಾಗಿ ತಿಂಡಿಗೆ ಏನ್ ಮಾಡೋದು ಅನ್ನೋ ಪ್ರಶ್ನೆಗೆ ಗೃಹಿಣಿಯರು ಪ್ರತಿನಿತ್ಯ ಹೊಸ ಉತ್ತರ ಕಂಡುಕೊಳ್ಳಲೇಬೇಕು. ಮಾಡುವ ತಿಂಡಿ ರುಚಿಕರ ಜೊತೆ ಆರೋಗ್ಯಕ್ಕೂ ಹಿತವಾಗಿರಬೇಕು. ಚಟಾಪಟ್ ಅಂತ ಈರುಳ್ಳಿ ಬೋಂಡಾ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಈರುಳ್ಳಿ- 3 (ಮಧ್ಯಮ ಗಾತ್ರದ್ದು)
    * ಹಸಿ ಮೆಣಸಿನಕಾಯಿ-2 ರಿಂದ 3
    * ಹುರಿಗಡಲೆ ಹಿಟ್ಟು- ಮುಕ್ಕಾಲು ಕಪ್ (ಪುಟಾಣಿ ಹಿಟ್ಟು)
    * ಅಕ್ಕಿ ಹಿಟ್ಟು- ಅರ್ಧ ಕಪ್
    * ಕಡಲೆ ಹಿಟ್ಟು- ಅರ್ಧ ಕಪ್
    * ಕರಿಬೇವು- 4 ರಿಂದ 5 ದಳ
    * ಹಸಿ ಶುಂಠಿ- 1 ಇಂಚು
    * ಅಡುಗೆ ಸೋಡಾ- ಚಿಟಿಕೆ
    * ಕೋತಂಬರಿ ಸೊಪ್ಪ
    * ಎಣ್ಣೆ – ಕರಿಯಲು
    * ಉಪ್ಪು- ರುಚಿಗೆ ತಕ್ಕಷ್ಟು.

    ಮಾಡುವ ವಿಧಾನ
    * ಮೊದಲಿಗೆ ಈರುಳ್ಳಿಯ್ನು ಸಾಧ್ಯವಾದಷ್ಟು ತೆಳ್ಳಗೆ ಉದ್ದವಾಗಿ ಕತ್ತರಿಸಿಕೊಳ್ಳಬೇಕು. ಕತ್ತರಿಸಿದ ಈರುಳ್ಳಿಯನ್ನು ಬಿಡಿ ಬಿಡಿಯಾಗಿ ಮಾಡಿಕೊಂಡು, ಹುರಿಗಡಲೆ ಹಿಟ್ಟು, ಅಕ್ಕಿ ಹಿಟ್ಟು ಮತ್ತು ಕಡಲೆ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ನಂತ್ರ ಇದೇ ಮಿಶ್ರಣಕ್ಕೆ ಸಣ್ಣದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ, ಹಸಿ ಶುಂಠಿ, ಕರಿಬೇವು ಮತ್ತು ಕೋತಂಬರಿ ಸೊಪ್ಪು ಸೇರಿಸಿ. ನಂತ್ರ ಉಪ್ಪು, ಅಡುಗೆ ಸೋಡಾ ಸೇರಿಸಿ. ಎರಡರಿಂದ ಮೂರು ಸ್ಪೂನ್ ನಷ್ಟು ಬಿಸಿ ಮಾಡಿದ ಅಡುಗೆ ಎಣ್ಣೆ ಮಿಕ್ಸ್ ಮಾಡಬೇಕು.
    * ಎಣ್ಣೆ ತಣ್ಣಗಾಗುತ್ತಿದ್ದಂತೆ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಕಲಿಸಿಕೊಳ್ಳಬೇಕು. ಬಜ್ಜಿ ಹಿಟ್ಟಿನ ಹದಕ್ಕೆ ಬರುತ್ತಿದ್ದಂತೆ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ.
    * ಒಂದು ಪಾತ್ರೆ ಸ್ಟೌವ್ ಮೇಲಿಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗ್ತಿದ್ದಂತೆ ಮಾಡಿಟ್ಟುಕೊಂಡಿರುವ ಉಂಡೆಗಳನ್ನು ಸಣ್ಣ ಉರಿಯಲ್ಲಿ ಫ್ರೈ ಮಾಡಬೇಕು. ಬೋಂಡಾವನ್ನು ಆಗಾಗ ಪ್ಲಿಪ್ ಮಾಡುತ್ತಿರಬೇಕು. ಬೋಂಡಾ ಹೊಂಬಣ್ಣಕ್ಕೆ ಬಂದ ಕೂಡಲೇ ತೆಗೆದ್ರೆ ಗರಂ ಗರಂ ಈರುಳ್ಳಿ ಬೋಂಡಾ ರೆಡಿ

  • ಸಂಜೆ ಟೀ ಜೊತೆಗಿರಲಿ ಕ್ರಿಸ್ಪಿಯಾದ ಅಕ್ಕಿ ಹಿಟ್ಟಿನ ಆಂಬೋಡೆ

    ಸಂಜೆ ಟೀ ಜೊತೆಗಿರಲಿ ಕ್ರಿಸ್ಪಿಯಾದ ಅಕ್ಕಿ ಹಿಟ್ಟಿನ ಆಂಬೋಡೆ

    ಗ ಎಲ್ಲಿ ನೋಡಿದ್ರೂ ಮಳೆ, ಮೋಡ ಮುಸುಕಿದ ವಾತಾವರಣ. ಸಂಜೆಯಾದ ಕೂಡಲೇ ಬಿಸಿ ಬಿಸಿ ಕಾಫೀ ಬೇಡುವ ಮನಸ್ಸು ಜೊತೆಗೆ ಸ್ನಾಕ್ಸ್ ಸಹ ಕೇಳುತ್ತೆ. ಏನಾದ್ರೂ ಹೋಟೆಲಿನಿಂದ ತರೋಣ ಅಂದ್ರೆ ಮಳೆಯ ಕಾಟದ ಕೊರೊನಾ ಭಯ. ಹಾಗಾಗಿ ಮನೆಯಲ್ಲಿ ನಾಲಿಗೆ ಹಿತ ನೀಡುವ ಅಕ್ಕಿ ಹಿಟ್ಟಿನ ಆಂಬೋಡೆ ಮಾಡಿಕೊಂಡು ತಿನ್ನಿ.

    ಬೇಕಾಗುವ ಸಾಮಾಗ್ರಿಗಳು
    ಅಕ್ಕಿ ಹಿಟ್ಟು- 1 ಕಪ್
    ಮೈದಾಹಿಟ್ಟು- 2 ಟೀ ಸ್ಪೂನ್
    ಗಟ್ಟಿ ಮೊಸರು- ಮುಕ್ಕಾಲು ಕಪ್
    ಕರಿಬೇವು- ಎರಡರಿಂದ ಮೂರು ಎಲೆ
    ಜೀರಿಗೆ- 1/2 ಟೀ ಸ್ಪೂನ್
    ಒಣ ಮೆಣಸಿನಕಾಯಿ- 1
    ಅಡುಗೆ ಸೋಡಾ- 1/2 ಟೀ ಸ್ಪೂನ್
    ಎಣ್ಣೆ- ಕರಿಯಲು
    ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ ಗೆ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಗಟ್ಟಿ ಮೊಸರು ಹಾಕಿಕೊಳ್ಳಬೇಕು.
    * ತದನಂತರ ಇದೇ ಬೌಲ್ ಗೆ ಸಣ್ಣದಾಗಿ ಕತ್ತರಿಸಿದ ಒಣ ಮೆಣಸಿನಕಾಯಿ, ಕರಿಬೇವು ಹಾಕಿ. ಬಳಿಕ ಜೀರಿಗೆ, ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮೊಸರು ಹಾಕಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಹಾಕಿ ಮಿಶ್ರಣವನ್ನು ಬಜ್ಜಿ ಹಿಟ್ಟಿನ ಹದಕ್ಕೆ ಬರೋವರೆಗೆ ಮಿಕ್ಸ್ ಮಾಡಿ.
    * ಒಂದು ಪ್ಯಾನ್ ನಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ನಂತ್ರ ಈಗಾಗಲೇ ರೆಡಿ ಮಾಡಿಕೊಂಡಿರುವ ಮಿಶ್ರಣದಿಂದ ಒಂದೊಂದೆ ಚಿಕ್ಕ ಉಂಡೆಗಳನ್ನಾಗಿ ಮಾಡಿ ಪ್ಯಾನ್ ಗೆ ಹಾಕಿ.
    * ಆಂಬೊಡೆಯನ್ನ ಆಗಾಗ್ಗೆ ಪ್ಲಿಪ್ ಮಾಡ್ತಿರಬೇಕು. ಗೋಲ್ಡನ್ ಕಲರ್ ಬರೋವರೆಗೆ ಫ್ರೈ ಮಾಡಿ ತೆಗೆದ್ರೆ ಕ್ರಿಸ್ಪಿಯಾದ ಆಂಬೋಡೆ ರೆಡಿ.

  • ಬೇಳೆ ಬಳಸದೇ ಗರಿ ಗರಿಯಾದ ಮಸಲಾ ವಡೆ ಮಾಡುವ ವಿಧಾನ

    ಬೇಳೆ ಬಳಸದೇ ಗರಿ ಗರಿಯಾದ ಮಸಲಾ ವಡೆ ಮಾಡುವ ವಿಧಾನ

    ಹಾಮಾರಿ ಕೊರೊನಾ ಆತಂಕದಿಂದ ಹೊರಗಿನ ತಿಂಡಿ ತಿನ್ನೋದಕ್ಕೆ ಜನರು ಭಯಪಡುತ್ತಿದ್ದಾರೆ. ಇನ್ನು ಕೊರೊನಾ ಭಯದಿಂದಾಗಿ ಮಕ್ಕಳು ಸಹ ಮನೆಯಲ್ಲಿರೋದರಿಂದ ಪ್ರತಿನಿತ್ಯ ಹೊಸ ತಿಂಡಿಯನ್ನು ಕೇಳುತ್ತಿರುತ್ತಾರೆ. ಇನ್ನೂ ಪೋಷಕರು ಉದ್ಯೋಗಿಗಳಾಗಿದ್ರೆ ರುಚಿ ರುಚಿಯಾದ ತಿಂಡಿ ಮಾಡೋದಕ್ಕೆ ಸಮಯವೇ ಇರಲ್ಲ. ಕೇವಲ 15 ನಿಮಿಷದಲ್ಲಿ ಮಕ್ಕಳು ಇಷ್ಟಪಡುವ ಯಾವುದೇ ಬೇಳೆ ಬಳಸದೇ ಗರಿ ಗರಿಯಾದ ಮಸಾಲೆ ವಡೆ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಸಣ್ಣ ರವೆ- 1 ಕಪ್
    * ಮೊಸರು- ಮುಕ್ಕಾಲು ಕಪ್
    * ಆಲೂಗಡ್ಡೆ- ಎರಡು ಕಪ್ (ಮಧ್ಯಮ ಗಾತ್ರದ್ದು)
    * ಈರುಳ್ಳಿ- 1 (ಮಧ್ಯಮ ಗಾತ್ರದ್ದು)
    * ಹಸಿ ಮೆಣಸಿನಕಾಯಿ – ಎರಡರಿಂದ ಮೂರು
    * ಸಬ್ಬಕ್ಕಿ ಸೊಪ್ಪು- ಅರ್ಧ ಕಪ್
    * ಕೋತಂಬರಿ- ಸ್ವಲ್ಪ
    * ಅಡುಗೆ ಸೋಡಾ- ಅರ್ಧ ಟೀ ಸ್ಪೂನ್
    * ಉಪ್ಪು- ರುಚಿಗೆ ತಕ್ಕಷ್ಟು
    * ಎಣ್ಣೆ- ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ಆಲೂಗಡ್ಡೆಯನ್ನು ಕುದಿಸಿ, ಸಿಪ್ಪೆ ಬೇರ್ಪಡಿಸಿ ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಿ
    * ನಂತರ ಒಂದು ಬೌಲ್ ನಲ್ಲಿ ರವೆ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ ಮತ್ತು ಮೊಸರು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ. ಮುಚ್ಚಳ ಮುಚ್ಚಿ 5 ರಿಂದ 10 ನಿಮಿಷ ನೆನೆಯಲು ಬಿಡಿ.
    * 5 ನಿಮಿಷದ ಬಳಿಕ ಹಿಟ್ಟಿಗೆ ಕತ್ತಿರಿಸಿಕೊಂಡಿಟ್ಟುಕೊಂಡಿರುವ ಈರುಳ್ಳಿ, ಹಸಿ ಮೆಣಸಿನಕಾಯಿ, ಸಬ್ಬಕ್ಕಿ ಸೊಪ್ಪು, ಕೋತಂಬರಿ ಸೊಪ್ಪು, ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು.
    * ಸ್ಟೌವ್ ಆನ್ ಮಾಡಿಕೊಂಡು ಒಂದು ಬಾಣಲೆಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ. ಬಾಣಲೆಯಲ್ಲಿನ ಎಣ್ಣೆ ಬಿಸಿಯಾಗ್ತಿದ್ದಂತೆ ಕಲಿಸಿದ ಹಿಟ್ಟನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಉಂಡೆಯನ್ನಾಗಿ ತಟ್ಟಿ ಎಣ್ಣೆಯಲ್ಲಿ ಕರಿದ್ರೆ ಗರಿ ಗರಿಯಾದ್ರೆ ಮಸಲಾ ವಡೆ ರೆಡಿ.
    * ಮಸಲಾ ವಡೆ ಜೊತೆ ಕಾಯಿ ಚಟ್ನಿ ಇದ್ರೆ ತಿನ್ನಲು ಮತ್ತಷ್ಟು ರುಚಿಯಾಗಿರುತ್ತದೆ.

  • ಒಮ್ಮೆ ತಿಂದ್ರೆ ಪದೇ ಪದೇ ಬೇಕೆನಿಸುವ ಮೈದಾ ಆಲೂ ಪೂರಿ

    ಒಮ್ಮೆ ತಿಂದ್ರೆ ಪದೇ ಪದೇ ಬೇಕೆನಿಸುವ ಮೈದಾ ಆಲೂ ಪೂರಿ

    ಕೊರೊನಾದಿಂದಾಗಿ ಮಕ್ಕಳು ಮನೆಯಲ್ಲಿಯೇ ಇದ್ದಾರೆ. ಪ್ರತಿದಿನ ಹೊಸ ರುಚಿ ಕೇಳುವ ಮಕ್ಕಳಿಗೆ ಏನ್ ಮಾಡಿಕೊಡೋದು ಅನ್ನೋ ಗೊಂದಲದಲ್ಲಿಯೇ ಇರುತ್ತಾರೆ. ಹಾಗಾಗಿ ಈ ತಿಂಡಿಯನ್ನು ಒಮ್ಮೆ ಮಾಡಿಕೊಟ್ಟರೆ ಮಕ್ಕಳು ಪದೇ ಪದೇ ಇದನ್ನೇ ಕೇಳುತ್ತಾರೆ. ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣದಲ್ಲಿ ಮೈದಾ ಆಲೂ ಪೂರಿ ಸವಿಯುವ ಮಜಾ ಬೇರೆ ಇರುತ್ತೆ. ಮೈದಾ ಆಲೂ ಪೂರಿ ಮಾಡುವ ವಿಧಾನ ಇಲ್ಲಿದೆ

    ಬೇಕಾಗುವ ಸಾಮಗ್ರಿಗಳು
    * ಮೈದಾ ಹಿಟ್ಟು – ಒಂದು ಕಪ್
    * ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
    * ಹುರಿದು ಪುಡಿ ಮಾಡಿದ ಜೀರಿಗೆ ಪೌಡರ್ – ಅರ್ಧ ಸ್ಪೂನ್
    * ಉಪ್ಪು – ರುಚಿಗೆ ತಕ್ಕಷ್ಟು
    * ಕೊತ್ತಂಬರಿ ಸೊಪ್ಪು
    * ಎಣ್ಣೆ ಕರಿಯಲು

    ಮಾಡುವ ವಿಧಾನ
    * ಒಂದು ಮಿಕ್ಸಿಂಗ್ ಬೌಲ್‍ಗೆ ಜರಡಿ ಹಿಡಿದ ಮೈದಾಹಿಟ್ಟು, ಮೆಣಸಿನ ಪುಡಿ, ಹುರಿದು ಪುಡಿ ಮಾಡಿದ ಜೀರಿಗೆ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ.
    * ಈಗ ಆ ಮಿಶ್ರಣಕ್ಕೆ ಬೇಯಸಿ ತುರಿದ ಆಲೂಗಡ್ಡೆಯನ್ನು ಸೇರಿಸಿ ನೀರು ಸೇರಿಸದೇ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
    * ಈಗ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಕ್ಸ್ ಮಾಡಿ.
    * ಅಗತ್ಯವಿದ್ದರೆ ಮಾತ್ರ ಸ್ಪೂನ್ ಅಳತೆಯಲ್ಲಿ ನೀರು ಸೇರಿಸಿಕೊಳ್ಳಿ.
    * ಮಿಶ್ರಣವನ್ನು ಅರ್ಧಗಂಟೆ ಕಾಲ ನೆನೆಯಲು ಬಿಡಿ.
    * ಈಗ ಎಣ್ಣೆಯನ್ನು ಕಾಯಲು ಇಟ್ಟು.
    * ಮಿಶ್ರಣದಲ್ಲಿ ಪೂರಿಯನ್ನು ಲಟ್ಟಿಸಿಕೊಳ್ಳಿ.
    * ಕಾದ ಎಣ್ಣೆಗೆ ಒಂದೊಂದೆ ಪೂರಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬರೋವರೆಗೂ ಫ್ರೈ ಮಾಡಿದ್ರೆ ಮೈದಾ ಆಲೂ ಪೂರಿ ರೆಡಿ

  • ಬೇಯಿಸಿ ತಿಂದ್ರೆ ಪೋಷಕಾಂಶ ಸಿಗಲ್ಲ- ಹೆಸರುಕಾಳನ್ನ ಮೊಳಕೆ ಬರಿಸೋ ವಿಧಾನ

    ಬೇಯಿಸಿ ತಿಂದ್ರೆ ಪೋಷಕಾಂಶ ಸಿಗಲ್ಲ- ಹೆಸರುಕಾಳನ್ನ ಮೊಳಕೆ ಬರಿಸೋ ವಿಧಾನ

    – ಇಮ್ಯೂನಿಟಿ ಪವರ್ ಹೆಚ್ಚಿಸೋ ಮೊಳಕೆ ಕಾಳು

    ದೇಶದೆಲ್ಲೆಡೆ ಕೊರೊನಾ ವೈರಸ್ ಮಾರಕವಾಗಿ ಕಾಡುತ್ತಿದೆ. ಹೀಗಾಗಿ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯಸ್ಸಿನವರು ಇಮ್ಯೂನಿಟಿ ಪವರ್ ಹೆಚ್ಚಿಸುವ ವಿಧವಿಧದ ಫುಡ್ ಸವಿದರೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬರ ಮನೆಯಲ್ಲೂ ಹೆಸರುಕಾಳು ಇದ್ದೆ ಇರುತ್ತೆ. ಆದ್ದರಿಂದ ಹೆಸರುಕಾಳನ್ನು ಬೇಯಿಸಿ ತಿನ್ನುವುದಕ್ಕಿಂತ ಮೊಳಕೆ ಮಾಡಿ ತಿಂದರೆ ಆರೋಗ್ಯವೂ ವೃದ್ಧಿಯಾಗುತ್ತದೆ.

    ಹೆಸರುಕಾಳಿನಲ್ಲಿ ವಿಟಮಿನ್ ಸಿ, ಪ್ರೋಟೀನ್, ಕಬ್ಬಿಣದ ಅಂಶ, ಫೈಬರ್ ಪೋಷಕಾಂಶ ಇರುತ್ತದೆ. ಹೀಗಾಗಿ ಮೊಳಕೆ ಕಾಳನ್ನು ಸೇವಿಸಿದರೆ ರಕ್ತದೊತ್ತಡವನ್ನು ಕೂಡ ಕಡಿಮೆ ಮಾಡುತ್ತದೆ. ಒಂದು ವೇಳೆ ಹೆಸರುಕಾಳನ್ನು ಬೇಯಿಸಿ ಸೇವಿದರೆ ಅದರ ಪೋಷಕಾಂಶ ದೇಹಕ್ಕೆ ಸಿಗುವುದಿಲ್ಲ. ಹೀಗಾಗಿ ಅದನ್ನು ಮೊಳಕೆ ಬರಿಸಿ ಸೇವಿಸಿ. ನಿಮಗಾಗಿ ಹೆಸರುಕಾಳನ್ನು ಮೊಳಕೆ ಮಾಡುವ ವಿಧಾನ…

    ಹೆಸರುಕಾಳು ಮೊಳಕೆ ಮಾಡುವ ವಿಧಾನ
    * ಮೊದಲಿಗೆ ಹೆಸರು ಕಾಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದುಕೊಳ್ಳಿ
    * ಈಗ ಒಂದು ಬೌಲ್‍ಗೆ ನೀರು ಹಾಕಿ ಹೆಸರುಕಾಳನ್ನು ಸುಮಾರು 8 ರಿಂದ 12 ಗಂಟೆಗಳವರೆಗೂ ನೆನೆಸಿಡಿ
    * 12 ಗಂಟೆಯ ನಂತರ ಕಾಳನ್ನು ಸೋಸಿಕೊಂಡು ಒಂದು ಬಟ್ಟೆ ತೆಗೆದುಕೊಂಡು ನೆನೆಸಿದ ಕಾಳು ಹಾಕಿಕೊಳ್ಳಿ
    * ನಂತರ ಬಟ್ಟೆಯನ್ನು ಬಿಗಿಯಾಗಿ ಕಟ್ಟಿಡಿ. ನಂತರ ಅದನ್ನು ಸುಮಾರು 12 ಗಂಟೆಯವರೆಗೂ ಬಿಡಿ
    * 12 ಗಂಟೆಯ ನಂತರ ಬಟ್ಟೆ ಬಿಚ್ಚಿ ನೋಡಿದರೆ ಹೆಸರುಕಾಳು ಮೊಳಕೆ ಬಂದಿರುತ್ತದೆ.
    * ನಂತರ ಇದನ್ನು ಹಸಿಯಾಗಿಯೇ ಸೇವಿಸಬೇಕಾಗುತ್ತದೆ.

    ಹೆಸರು ಕಾಳನ್ನು ನೀರಿನಲ್ಲಿ ನೆನಸಿಟ್ಟು, ಬಳಿಕ ಮೊಳಕೆ ಬಂದ ಮೇಲೆ ಸೇವಿಸುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತೆ. ಇದರಲ್ಲಿರೋ ಪೌಷ್ಟಿಕಾಂಶ ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ. ಅಲ್ಲದೆ ಫೈಬರ್ ಅಂಶವು ದೇಹದಲ್ಲಿ ಆಹಾರದ ಸಂಚಾರ ಸರಿಯಾಗಿ ಆಗುವಂತೆ ನೋಡಿಕೊಂಡು ಮಲಬದ್ಧತೆ ತೊಂದರೆಯನ್ನು ನಿವಾರಿಸುತ್ತದೆ.

    ಜೊತೆಗೆ ಇದರಲ್ಲಿರುವ ವಿಟಮಿನ್ ಸಿ ದೇಹಕ್ಕೆ ಇನ್ಫೆಕ್ಷನ್ ಆಗೋದನ್ನ ತಡೆಯುತ್ತದೆ. ಇದರ ಜೊತೆ ವಿಟಮಿನ್ ಎ ಅಂಶ ಕೂಡ ಹೆಚ್ಚಾಗಿ ಇರೋದ್ರಿಂದ ದೇಹಕ್ಕೆ ಹೆಚ್ಚಿನ ಆಂಟಿ ಆಕ್ಸಿಡೆಂಟ್ಸ್ ಸಿಗುವ ರೀತಿ ನಿಗಾವಹಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.