Tag: recipe

  • ನೀವೂ ಟ್ರೈ ಮಾಡಿ ಉತ್ತರಕರ್ನಾಟಕದ ಪ್ರಸಿದ್ಧ ಎಣ್ಣೆಗಾಯಿಪಲ್ಯ

    ನೀವೂ ಟ್ರೈ ಮಾಡಿ ಉತ್ತರಕರ್ನಾಟಕದ ಪ್ರಸಿದ್ಧ ಎಣ್ಣೆಗಾಯಿಪಲ್ಯ

    ತ್ತರ ಕಾರ್ನಟಕದ ಅಡುಗೆ ಕೊಂಚ ಖಾರ ಜಾಸ್ತಿಯಾದರೂ ರುಚಿ ಹೆಚ್ಚು ಎನ್ನುವುದು ತಿಳಿದಿದೆ. ಉತ್ತರ ಕರ್ನಾಟಕದ ಖಾದ್ಯಗಳು ಸವಿಯಲು ಬಲುರುಚಿಯಾಗಿರುತ್ತದೆ. ಹಾಗೆಯೇ ಬಾಯಲ್ಲಿ ನೀರೂರಿಸುವ ಉತ್ತರಕರ್ನಾಟಕದ ಪ್ರಸಿದ್ಧ ಬದನೇಕಾಯಿ ಎಣ್ಣೆಗಾಯಿಪಲ್ಯ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು:
    * ಬಿಳಿ ಎಳ್ಳು- 2 ಟೇಬಲ್ ಸ್ಪೂನ್
    * ಶೇಂಗಾ- 2 ಟೇಬಲ್ ಸ್ಪೂನ್
    * ಒಣಕೊಬ್ಬರಿ- ಅರ್ಧ ಕಪ್
    * ಇರುಳ್ಳಿ -2 ದೊಡ್ಡ ಗಾತ್ರದ್ದು
    * ಶುಂಠಿ- ಒಂದು ಇಂಚಿನಷ್ಟು
    * ಬೆಳ್ಳುಳ್ಳಿ- 4 ರಿಂದ 5
    * ಲವಂಗ- ನಾಲ್ಕು
    * ಕರಿಬೇವು
    * ಚೆಕ್ಕೆ- 3 ರಿಂದ 4
    * ಅರಿಶಿಣಪುಡಿ- 1 ಟೀ ಸ್ಪೂನ್
    * ಬೆಲ್ಲ- ಒಂದು ಇಂಚು
    * ಖಾರದಪುಡಿ- 3 ಟೀ ಸ್ಪೂನ್
    * ದನಿಯಾಪುಡಿ – 1 ಟೀ ಸ್ಪೂನ್
    * ಹುಣಸೆಹಣ್ಣು ಸ್ವಲ್ಪ
    * ಸಾಸಿವೆ- ಒಂದು ಟೀ ಸ್ಪೂನ್
    * ಎಣ್ಣೆ ಒಂದು ಕಪ್
    * ಒಣಮೆಣಸು- 3 ರಿಂದ 4

     

    ಮಾಡುವ ವಿಧಾನ:
    * ಮೊದಲು ಒಂದು ತವಾಗೆ ಶೇಂಗಾವನ್ನು ಹಾಕಿ ಸಿಪ್ಪೆ ಬಿಡುವವರೆಗೆ ಚೆನ್ನಾಗಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಬೇಕು.
    * ಹಾಗೇ ಸಣ್ಣ ಉರಿ ಬೆಂಕಿಯಲ್ಲಿ ಬಿಳಿ ಎಳ್ಳನ್ನು ತವಾಗೆ ಹಾಕಿ ಬಿಳಿ ಎಳ್ಳಿನ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಬೇಕು. ಹೀಗೆಯೆ ಕೊಬ್ಬರಿಯನ್ನು ಹಸಿ ಅಂಶ ಹೋಗುವವರೆಗೂ ಹುರಿದು ತೆಗೆದಿಟ್ಟುಕೊಳ್ಳಬೇಕು.
    *ನಂತರ ಒಂದು ಪಾತ್ರೆಗೆ ಒಂದು ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಬಿಸಿಯಾದ ಮೇಲೆ ಈರುಳ್ಳಿ ಹಾಕಬೇಕು. ಈರುಳ್ಳಿ ಕೆಂಪು ಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಬೇಕು.
    * ನಂತರ ಇದೇ ಪಾತ್ರೆಗೆ ಒಂದು ಇಂಚಿನಷ್ಟು ಶುಂಠಿ, 4 ರಿಂದ 5 ಬೆಳ್ಳುಳ್ಳಿ, ನಾಲ್ಕು ಲವಂಗ ಹಾಗೂ ಕರಿಬೇವು, ಚೆಕ್ಕೆಯನ್ನು ಮೂರರಿಂದ ನಾಲ್ಕು ಹಾಕಿ ಚೆನ್ನಾಗಿ ಹುರಿದುಕೊಂಡು ತೆಗೆದಿಟ್ಟುಕೊಳ್ಳಬೇಕು.

    * ನಂತರ ಮಿಕ್ಸಿಜಾರಿಗೆ ಹುರಿದು ತೆಗೆದಿಟ್ಟ ಎಳ್ಳು, ಕೊಬ್ಬರಿ ತುರಿ, ಶೇಂಗಾವನ್ನು ಹಾಕಿ ರುಬ್ಬಿಕೊಳ್ಳಬೇಕು.
    * ಈಗ ರುಬ್ಬಿದ ಮಸಾಲೆಯನ್ನು ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಬೇಕು
    * ನಂತರ ಈ ಮೊದಲೇ ಹುರಿದು ತೆಗೆದಿಟ್ಟಿರುವ ಈರುಳ್ಳಿ ಮಸಾಲೆಯನ್ನು ಮಿಕ್ಸಿಜಾರಿಗೆ ಹಾಕಿ ನಂತರ ಇದರ ಜೊತೆಯಲ್ಲಿ ಅರಿಶಿಣಪುಡಿ ಒಂದು ಇಂಚು ಬೆಲ್ಲ, 3 ಟೀ ಸ್ಪೂನ್ ಖಾರದಪುಡಿ ಹಾಗೂ 1 ಟೀ ಸ್ಪೂನ್ ದನಿಯಾಪುಡಿ ಹಾಗೂ ಸ್ವಲ್ಪ ಗರಂ ಮಸಾಲೆಯನ್ನು ಹಾಕಿ ರುಬ್ಬಿಕೊಳ್ಳ ಬೇಕು. ಆದರೆ ರುಬ್ಬಿಕೊಳ್ಳಲು ನೀರನ್ನು ಬಳಸ ಬಾರದು ಹುಣಸೆಹಣ್ಣಿನ ರಸದಲ್ಲಿಯೇ ಮಸಸಾಲೆಯನ್ನು ರುಬ್ಬಿಕೊಳ್ಳಬೇಕು.
    * ಈಗಾಗಲೇ ರುಬ್ಬಿ ತೆಗೆದಿರುವ ಎರಡು ಮಸಾಲೆಯನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
    * ಉಪ್ಪು ನೀರಿನಲ್ಲಿ ಅದ್ದಿಟ್ಟಿರುವ ಬದನೆಕಾಯಿಗೆ ಈ ಮಸಾಲೆಯನ್ನು ತುಂಬ ಬೇಕು.


    * ನಂತರ ಒಂದು ಸ್ಟವ್ ಮೇಲೆ ಪಾತ್ರೆ ಇಟ್ಟು 4 ರಿಂದ 5 ಸ್ಪೂನ್ ಎಣ್ಣೆಹಾಕಿ ಎಣ್ಣೆ ಬಿಸಿಯಾದ ಮೇಲೆ ಸಾಸಿವೆ ಮತ್ತು ಒಣಮೆಣಸು ಹಾಕಿ ಫ್ರೈ ಮಾಡಿ ಮಸಾಲೆ ತುಂಬಿದ ಬದನೆಕಾಯಿಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
    * ಒಂದು ಕಪ್‍ನಷ್ಟು ನೀರನ್ನು ಹಾಕಿ ಸಣ್ಣ ಉರಿ ಬೆಂಕಿಯಲ್ಲಯೇ ಚೆನ್ನಾಗಿ ಬೇಯಿಸಿಕೊಳ್ಳಬೇಕು.
    * ನಂತರ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ರುಚಿಯಾದ ಎಣ್ಣೆಗಾಯಿಪಲ್ಯ ಸವಿಯಲು ಸಿದ್ಧವಾಗುತ್ತದೆ.

  • ಓವನ್ ಇಲ್ಲದೇ ಮಾಡಿ ರುಚಿ ರುಚಿಯಾದ ಕ್ರಿಸ್‍ಮಸ್ ಕೇಕ್

    ಓವನ್ ಇಲ್ಲದೇ ಮಾಡಿ ರುಚಿ ರುಚಿಯಾದ ಕ್ರಿಸ್‍ಮಸ್ ಕೇಕ್

    ಹೊಸ ಕೊರೊನಾ ಅಲೆ ಹಿನ್ನೆಲೆ ಇಡೀ ಜಗತ್ತು ತಲ್ಲಣಗೊಂಡಿದೆ. ಸರ್ಕಾರ ಸಹ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಕ್ರಿಸ್‍ಮಸ್ ಹಬ್ಬವನ್ನ ಕುಟುಂಬಸ್ಥರ ಜೊತೆ ಮನೆಯಲ್ಲಿಯೇ ಅಚರಿಸುವಂತೆ ಸರ್ಕಾರ ಮನವಿ ಸಹ ಮಾಡಿಕೊಂಡಿದೆ. ಕೊರೊನಾದಿಂದಾಗಿ ಹಬ್ಬದ ದಿನ ಹೆಚ್ಚಿನ ಸಮಯ ಮನೆಯಲ್ಲಿರಬೇಕಾಗುತ್ತೆ. ಹಾಗಾಗಿ ಹೊರಗಿನಿಂದ ಕೇಕ್ ತರದೇ ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರ ಕ್ರಿಸ್‍ಮಸ್ ಆಚರಿಸಿ. ಓವನ್ ಇಲ್ಲದೇ ಸರಳವಾಗಿ ಕೇಕ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಮೊಟ್ಟೆ-4
    * ಸಕ್ಕರೆ ಪುಡಿ – 1 ಕಪ್
    * ಮೈದಾ- 1 ಕಪ್
    * ಬೇಕಿಂಗ್ ಸೋಡಾ- 1 ಟೀ ಸ್ಪೂನ್
    * ಉಪ್ಪು- 1/4 ಟೀ ಸ್ಪೂನ್
    * ತುಪ್ಪ – 1 ಕಪ್
    * ವೆನ್ನಿಲ್ಲಾ ಎಸೆನ್ಸ್ – 1/2 ಟೀ ಸ್ಪೂನ್

    ಮಾಡುವ ವಿಧಾನ
    * ಮೊದಲಿಗೆ ಮಿಕ್ಸಿಂಗ್ ಬೌಲ್‍ಗೆ ನಾಲ್ಕು ಮೊಟ್ಟೆಗಳನ್ನ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
    * ಮೊಟ್ಟೆ ಮಿಶ್ರಣಕ್ಕೆ ಒಂದು ಕಪ್ ನಷ್ಟು ಸಕ್ಕರೆ ಪುಡಿ ಹಾಕಿ ಗಂಟು ಬರದಂತೆ ಕಲಸಿಕೊಳ್ಳಿ.
    * ಮೊಟ್ಟೆ ಮತ್ತು ಸಕ್ಕರೆ ಪುಡಿ ಚೆನ್ನಾಗಿ ಮಿಶ್ರಣವಾದ ಮೇಲೆ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಉಪ್ಪು, ತುಪ್ಪ ಮತ್ತು ವೆನ್ನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. (ನೀವು ಡ್ರೈ ಫ್ರೂಟ್ಸ್ ಪ್ರಿಯರಾಗಿದ್ರೆ, ಈ ವೇಳೆ ಸಣ್ಣದಾಗಿ ಕತ್ತರಿಸಿರುವ ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ ಇನ್ನಿತರ ಡ್ರೈ ಫ್ರೂಟ್ಸ್ ಸೇರಿಸಿಕೊಳ್ಳಬಹುದು).

    * ಒಂದು ಬೌಲ್‍ಗೆ ತುಪ್ಪ ಸವರಿ, ಅದರ ಮೇಲೆ ಒಣ ಮೈದಾ ಹಿಟ್ಟು ಹಾಕಿ ತೆಳುಬಾಗಿ ಹರಡಿ, ಸಿದ್ಧವಾಗಿರೋ ಮಿಶ್ರಣವನ್ನ ಹಾಕಿ ಗಂಟು ಬರದಂತೆ ಸಮ ಮಾಡಿಕೊಳ್ಳಿ.
    * ಒಂದು ದೊಡ್ಡ ಪ್ಯಾನ್‍ಗೆ ಎರಡು ಟೀ ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಈ ಪ್ಯಾನ್ ನಲ್ಲಿ ಚಿಕ್ಕ ಸ್ಟ್ಯಾಂಡ್ ಇರಿಸಬೇಕು. ಈ ಸ್ಟ್ಯಾಂಡ್ ಮೇಲೆ ನಿಧಾನವಾಗಿ ಮಿಶ್ರಣ ಹಾಕಿರೋ ಬೌಲ್ ಇರಿಸಿ ಮುಚ್ಚಳ ಮುಚ್ಚಿ 40 ರಿಂದ 45 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿದ್ರೆ ಕ್ರಿಸ್‍ಮಸ್ ಕೇಕ್ ಸಿದ್ಧ.

  • ಮೂರು ಸಾಮಾಗ್ರಿಗಳಲ್ಲಿ ತಯಾರಿಸಿ ಕ್ರಿಸ್‍ಮಸ್ ಕೇಕ್

    ಮೂರು ಸಾಮಾಗ್ರಿಗಳಲ್ಲಿ ತಯಾರಿಸಿ ಕ್ರಿಸ್‍ಮಸ್ ಕೇಕ್

    ದೇ ಶುಕ್ರವಾರ ಕ್ರಿಸ್‍ಮಸ್ ಹಬ್ಬ. ಮನೆಯಲ್ಲಿ ಕೇಕ್ ಇರಲೇಬೇಕು. ಕೊರೊನಾ ಹಿನ್ನೆಲೆ ಕ್ರಿಸ್‍ಮಸ್ ಆಚರಣೆ ವೇಳೆ ಜನತೆ ಎಚ್ಚರಿಕೆಯಿಂದಿರಬೇಕೆಂದು ಸರ್ಕಾರ ಸೂಚಿಸಿದೆ. ಊರುಗಳಿಂದ ದೂರವಿರೋ ಎಷ್ಟೋ ಜನಕ್ಕೆ ಕ್ರಿಸ್‍ಮಸ್ ಕುಟುಂಬದ ಜೊತೆ ಆಚರಿಸಲು ಸಾಧ್ಯವಾಗಲ್ಲ. ಕುಟುಂಬದಿಂದ ದೂರ ಇರುವವರು ಬೇಕರಿಯಿಂದ ಕೇಕ್ ತರುವ ಬದಲು ಮನೆಯಲ್ಲಿಯೇ ಸರಳವಾಗಿ ಕೇವಲ ಮೂರು ವಸ್ತುಗಳಿಂದ ರುಚಿಯಾದ ಆರೋಗ್ಯಕರ ಕೇಕ್ ತಯಾರಿಸುವ ರೆಸಿಪಿ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    * ಮನೆಯಲ್ಲಿರುವ ವಿವಿಧ ಬಿಸ್ಕಟ್‍ಗಳು – 1 ಕಪ್
    * ಹಾಲು – 1 ಕಪ್
    * ಅಡುಗೆ ಸೋಡಾ – ಅರ್ಧ ಸ್ಪೂನ್

    ಇತರೆ ಸಾಮಾಗ್ರಿಗಳು
    * ಬಟರ್ ಪೇಪರ್
    * ತುಪ್ಪ – 2 ಸ್ಪೂನ್
    * ಕುಕ್ಕರ್
    * ತವಾ

    ಮಾಡುವ ವಿಧಾನ
    * ಒಂದು ಮಿಕ್ಸಿ ಜಾರ್‍ಗೆ ಮನೆಯಲ್ಲಿರುವ ವಿವಿಧ ಬಿಸ್ಕಟ್ ಚೂರುಗಳನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಅದೇ ಜಾರ್‍ಗೆ 1 ಕಪ್ ಹಾಲು ಸೇರಿಸಿ ರುಬ್ಬಿಕೊಳ್ಳಿ.
    * ಒಂದು ಕುಕ್ಕರ್‍ಗೆ ತುಪ್ಪವನ್ನು ಸವರಿ.. ಒಳಗೆ ಬಟರ್ ಪೇಪರ್ ಅನ್ನು ಇಟ್ಟು ಮತ್ತೆ ತುಪ್ಪ ಸವರಿ.
    * ಈಗ ರುಬ್ಬಿದ ಮಿಶ್ರಣಕ್ಕೆ ಅಡುಗೆ ಸೋಡಾವನ್ನು ಮಿಕ್ಸ್ ಮಾಡಿ ಕುಕ್ಕರ್‍ನಲ್ಲಿ ಬಟರ್ ಪೇಪರ್ ಮೇಲೆ ಸಮವಾಗಿ ಹಾಕಿ.
    * ಸ್ಟೌವ್ ಮೇಲೆ ಒಂದು ತವಾ ಇಟ್ಟು.. ಅದರ ಮೇಲೆ ವಿಷಲ್ ಹಾಕದೇ ಕುಕ್ಕರ್ ಅನ್ನು ಇಟ್ಟು 15-20 ನಿಮಿಷವರೆಗೆ ಬೇಯಿಸಿ.
    * ಬಳಿಕ ಸ್ಟೌವ್ ಆಫ್ ಮಾಡಿ ತಣ್ಣಗಾದ ಬಳಿಕ ಕುಕ್ಕರ್‍ನಿಂದ ಕೇಕ್ ಅನ್ನು ಬೇರ್ಪಡಿಸಿ
    * ಕೇಕ್ ಮೇಲೆ ಬೇಕಾದ್ದಲ್ಲಿ ಚಾಕಲೇಟ್ ಗ್ರೀಸ್ ಮಾಡಬಹುದು ಅಥವಾ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಬಹುದು
    * ಇಲ್ಲವಾದಲ್ಲಿ ಪ್ಲೇನ್ ಕೇಕ್ ರೀತಿ ಸರ್ವ್ ಮಾಡಬಹುದು

  • ಮನೆಯಲ್ಲಿಯೆ ಮಾಡಿ ರುಚಿಯಾದ ಚಿಕನ್ ತವಾ ಫ್ರೈ

    ಮನೆಯಲ್ಲಿಯೆ ಮಾಡಿ ರುಚಿಯಾದ ಚಿಕನ್ ತವಾ ಫ್ರೈ

    ವಿಕೆಂಡ್‍ಗೆ ರುಚಿರುಚಿಯಾಗಿ ಸರಳವಾಗಿ ಎನನ್ನಾದರೂ ತಿನ್ನಲು ನಾಲಿಗೆ ಚಪ್ಪರಿಸುವುದ ಸಹಜ. ಪ್ರತಿನಿತ್ಯ ಕೆಲಸ ಎಂದು ಸಮಯ ಕಳೆಯುವ ಎಷ್ಟೋ ಮಂದಿ ಹೋಟೆಲ್ ನಲ್ಲಿ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಈ ವಾರ ಮನೆಯಲ್ಲಿಯೆ ಸರಳವಾಗಿ ರುಚಿಯಾದ ಚಿಕನ್ ತವಾ ಫ್ರೈಯನ್ನು ಫಟಾ ಫಟ್ ಎಂದು ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು
    * ಚಿಕನ್- ಅರ್ಧ ಕೆಜಿ
    * ಶುಂಠಿ ಬೆಳ್ಳುಳ್ಳಿ ಫೇಸ್ಟ್
    * ಧನಿಯಾ ಪೌಡರ್ – 1 ಟೀ ಸ್ಪೂನ್
    * ಅಚ್ಚ ಖಾರದ ಪುಡಿ – 1 ಟೀ ಸ್ಪೂನ್
    * ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್ -1 ಟೀ ಸ್ಪೂನ್
    * ಜೀರಿಗೆ ಪುಡಿ – 1 ಟೀ ಸ್ಪೂನ್
    * ಗರಂ ಮಸಾಲಾ ಪೌಡರ್- ಅರ್ಧ ಟೀ ಸ್ಪೂನ್
    * ನಿಂಬೆಹಣ್ಣು
    * ಮೊಸರು – ಅರ್ಧ ಕಪ್
    * ಕಸೂರಿ ಮೇತಿ – 1 ಟೀ ಸ್ಪೂನ್
    * ಅಡುಗೆ ಎಣ್ಣೆ – 1 ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ :
    * ಅರ್ಧ ಕೆಜಿ ಚಿಕನ್ ತೆಗೆದುಕೊಂಡು ಚೆನ್ನಾಗಿ ತೊಳೆದು ಒಂದು ಬೌಲ್‍ಗೆ ಹಾಕಬೇಕು.
    * ನಂತರ ಚಿಕನ್ ಇರುವ ಬೌಲ್‍ಗೆ ಶುಂಠಿ-ಬೆಳ್ಳುಳ್ಳಿ ಫೇಸ್ಟ್ ಸ್ವಲ್ಪ ಹಾಕಿ ಚೆನ್ನಾಗಿ ಚಿಕನ್ ಜೊತೆ ಹೊಂದಿಕೊಳ್ಳುವಂತೆ ಮಿಶ್ರಣ ಮಾಡಬೇಕು.
    * ನಂತರ 1 ಟೀ ಸ್ಪೂನ್ ಧನಿಯಾ ಪೌಡರ್, ಅಚ್ಚಖಾರದ ಪುಡಿ , ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್ ಹಾಕಿ ಚಿಕನ್ ನೊಂದಿಗೆ ಮಿಶ್ರಣ ಮಾಡಬೇಕು. ಖಾರ ಜಾಸ್ತಿ ತಿನ್ನುವವರಾಗಿದ್ದರೆ ಖಾರದ ಪುಡಿಯನ್ನು ಸ್ವಲ್ಪ ಜಾಸ್ತಿ ಸೇರಿಸಿಕೊಳ್ಳಬೇಕು.

    * ನಂತರ ಈ ಮಸಾಲೆಗೆ ಜೀರಿಗೆ ಪುಡಿ 1 ಟೀ ಸ್ಪೂನ್ ಹಾಕಬೇಕು. ಜೊತೆಯಲ್ಲಿ ಗರಂ ಮಸಾಲಾ ಪೌಡರ್ ಅರ್ಧ ಸ್ಪೂನ್ ಹಾಕಬೇಕು. ಮೊಸರು, ಕಸೂರಿ ಮೇತಿ ಹಾಗೂ ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಬೇಕು
    * ಚಿಕನ್‍ನ್ನು ಈ ಎಲ್ಲಾ ಮಸಾಲೆಯೊಂದಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
    * ಚಿಕನ್ ಮಸಾಲೆಯೊಂದಿಗೆ ಮಿಶ್ರಣವಾಗಬೇಕು ಹಾಗಾಗಿ ಅರ್ಧ ಗಂಟೆ ಮುಚ್ಚಳ ಮುಚ್ಚಿ ಅರ್ಧ ಗಂಟೆ ಎತ್ತಿಟ್ಟುಕೊಳ್ಳಿ.

    * ನಂತರ ಸ್ಟೋ ಮೇಲೆ ಒಂದು ತವಾವನ್ನು ಇಟ್ಟು 4 ರಿಂದ 5 ಟೀ ಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು.
    * ಎಣ್ಣೆ ಬಿಸಿ ಆಗುತ್ತಿದ್ದಂತೆ ಮಸಾಲೆಯಿಂದ ಮಿಶ್ರಣವಾದ ಚಿಕನ್ ಅನ್ನು ಬಿಸಿಯಾದ ಎಣ್ಣೆಗೆ ಹಾಕಬೇಕು.
    * ಸಣ್ಣ ಉರಿ ಬೆಂಕಿಯಲ್ಲಿ 8 ರಿಂದ 10 ನಿಮಿಷಗಳ ಕಾಲ ಚಿಕನ್ ಬೇಯಿಸಬೇಕು. ಆಗಾಗ ಚಿಕನ್ ಪ್ಲಿಪ್ ಮಾಡ್ತಿರಬೇಕು.
    * ಈಗ ರುಚಿ ರುಚಿಯಾದ ಚಿಕನ್ ತವಾ ಫ್ರೈ ಸವಿಯಸಲು ಸಿದ್ಧವಾಗುತ್ತದೆ.

  • ಚಳಿಗೆ ಬಿಸಿಬಿಸಿ ಬೆಂಡೆಕಾಯಿ ಫ್ರೈ ಮಾಡೋ ವಿಧಾನ

    ಚಳಿಗೆ ಬಿಸಿಬಿಸಿ ಬೆಂಡೆಕಾಯಿ ಫ್ರೈ ಮಾಡೋ ವಿಧಾನ

    ವಾತಾವರಣ ಬದಲಾದಂತೆ ನಾವು ತಿನ್ನುವ ಆಹಾರಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತೇವೆ. ಹೀಗಿರುವಾಗ ಈಗ ಚಳಿ ಹೆಚ್ಚು ಹೀಗಾಗಿ ಬಿಸಿ-ಬಿಸಿಯಾಗಿ ಏನನ್ನಾದರು ತಿನ್ನಬೇಕು ಎಂದು ನಾಲಿಗೆ ಚಪ್ಪರಿಸುವುದು ಸಹಜ. ಸ್ನ್ಯಾಕ್ಸ್‍ಗೆ ಅಥವಾ ಊಟಕ್ಕೆ ಬಿಸಿ ಬಿಸಿಯಾಗಿ ರುಚಿಯಾದ ಬೆಂಡೆಕಾಯಿ ಫ್ರೈ ಮಾಡುವ ಮಾಹಿತಿ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    ಬೆಳ್ಳುಳ್ಳಿ- 2
    ಕರೀಬೇವು- 4ರಿಂದ 5
    ಇಂಗು- ಚಿಟಿಕೆ
    ಕಡಲೆ ಹಿಟ್ಟು- ಒಂದು ಕಪ್
    ಬೆಂಡೆಕಾಯಿ-100 ಗ್ರಾಂ
    ಗರಂಮಸಾಲಾ- ಅರ್ಧ ಟೀ ಸ್ಪೂನ್
    ಅರಿಶಿಣ -ಚಿಟಿಕೆ
    ದನಿಯಾ ಪೌಡರ್- 1 ಟೀ ಸ್ಪೂನ್
    ಕಾರದಪುಡಿ -2 ಟೀ ಸ್ಪೂನ್
    ಲಿಂಬು -ಒಂದು
    ಎಣ್ಣೆ -ಒಂದು ಕಪ್
    ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ
    * ಸ್ಟೌ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2ರಿಂದ 3 ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು.
    * ಎಣ್ಣೆ ಬಿಸಿಯಾದ ನಂತ್ರ 4ರಿಂದ 5 ಕರಿಬೇವು ಮತ್ತು ಸಿಪ್ಪೆ ತೆಗೆದ 2 ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
    * ನಂತರ ಇದಕ್ಕೆ ಒಂದು ಕಪ್‍ನಷ್ಟು ಕಡಲೆ ಹಿಟ್ಟನ್ನು ಹಾಕಿ ಸುವಾಸನೆ ಬರುವವರೆಗೂ ಫ್ರೈ ಮಾಡಬೇಕು. ಈ ಮಸಾಲೆಯನ್ನು ಒಂದು ಕಡೆ ತೆಗೆದಿಟ್ಟುಕೊಳ್ಳಬೇಕು.
    * ಇತ್ತ 100 ಗ್ರಾಂ ಬೆಂಡೆಕಾಯಿಯನ್ನು ತೆಗೆದುಕೊಂಡು ಮಧ್ಯದಲ್ಲಿ ಸೀಳಿಕೊಳ್ಳಬೇಕು.
    * ಈಗ ಹುರಿದಿರುವ ಮಸಾಲೆಗೆ ಸ್ವಲ್ಪ ಎಣ್ಣೆ, ಅರ್ಧ ಸ್ಪೂನ್ ಗರಂಮಸಾಲಾ , ಚಿಟಿಕೆ ಅರಿಶಿಣ, ಒಂದು ಟೀ ಸ್ಪೂನ್ ದನಿಯಾ ಪೌಡರ್, 2 ಟೀ ಸ್ಪೂನ್ ಖಾರದಪುಡಿ ಹಾಗೂ
    ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
    * ಈ ಮಸಾಲೆಯನ್ನು ಸೀಳಿರುವ ಬೆಂಡೆಕಾಯಿ ಒಳಗೆ ತುಂಬಬೇಕು.
    * ನಂತರ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಕಾದ ನಂತರ ಮಸಾಲೆ ತುಂಬಿರುವ ಬೆಂಡೆಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.

    ಈಗ ರುಚಿಯಾದ ಬೆಂಡೆಕಾಯಿ ಫ್ರೈ ಸವಿಯಲು ಸಿದ್ಧವಾಗುತ್ತದೆ. ರುಚಿ ರುಚಿಯಾದ ಬೆಂಡೆಕಾಯಿ ಫ್ರೈಯನ್ನು ಊಟದ ಜೊತೆಗೆ ಅಥವಾ ಸಂಜೆ ವೇಳೆ ಸ್ನ್ಯಾಕ್ಸ್ ಆಗಿಯೂ ತಿನ್ನಬಹುದು.

  • ಫಟಾ ಫಟ್ ತಯಾರಾಗುವ ಚಿಕನ್ ಸುಕ್ಕಾ/ ಕೋರಿ ಸುಕ್ಕಾ ಮಾಡುವ ವಿಧಾನ

    ಫಟಾ ಫಟ್ ತಯಾರಾಗುವ ಚಿಕನ್ ಸುಕ್ಕಾ/ ಕೋರಿ ಸುಕ್ಕಾ ಮಾಡುವ ವಿಧಾನ

    ನಾಳೆ ಭಾನುವಾರ, ರಜೆ ಸಮ

    ಯ. ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೆ ಬಾಡೂಟ ಇಲ್ಲ ಅಂದ್ರೆ ಹೇಗೆ. ಚಿಕನ್ ಸಾಂಬಾರ್, ಚಿಕನ್-65 ಮಾಡಿ ನಿಮಗೂ ಬೇಜಾರು ಆಗಿರುತ್ತೆ, ಮಕ್ಕಳಿಗೂ ತಿನ್ನಲು ಬೇಜಾರು. ಹಾಗಾಗಿ ಪಕ್ಕಾ ನಾಟಿ ಶೈಲಿಯಲ್ಲಿ ಚಿಕನ್ ಸುಕ್ಕಾ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    ಚಿಕನ್ – 300 ಗ್ರಾಂ
    ಜೀರಿಗೆ – 1/2 ಟೀ ಸ್ಪೂನ್
    ಬೆಳ್ಳುಳ್ಳಿ – 6 ರಿಂದ 8
    ಹಸಿಕೊಬ್ಬರಿ ತುರಿ – 1 ಕಪ್
    ಕಾಳುಮೆಣಸು- 1 ಟೀ ಸ್ಪೂನ್
    ಧನಿಯಾ – 1 ಟೀ ಸ್ಪೂನ್
    ಮೆಂತೆ – 1/2 ಟೀ ಸ್ಪೂನ್
    ಹುಣಸೆ – 1/2 ಇಂಚು
    ಈರುಳ್ಳಿ- 1 (ಚಿಕ್ಕ ಗಾತ್ರದ್ದು)
    ಒಣಮೆಣಸಿನ ಕಾಯಿ- 5 ರಿಂದ 6
    ಅರಿಶಿಣ – ಚಿಟಿಕೆ
    ಎಣ್ಣೆ
    ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್ ಸ್ಟೌವ್ ಮೇಲಿಟ್ಟು ಎರಡೂ ಟೀ ಸ್ಪೂನ್ ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಒಣಮೆಣಸಿನಕಾಯಿ, ಕಾಳು ಮೆಣಸು, ಮೆಂತೆ, ಹುಣಸೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ.
    * ಇದೀಗ ಅದೇ ಪ್ಯಾನ್ ಗೆ ಮತ್ತೆರಡು ಟೀ ಸ್ಪೂನ್ ಎಣ್ಣೆ ಹಾಕಿ. ನಂತರ ಜೀರಿಗೆ, ಬೆಳ್ಳುಳ್ಳಿ ಮತ್ತು ಹಸಿಕೊಬ್ಬರಿ ತುರಿ ಸೇರಿಸಿ ಚೆನ್ನಾಗಿ ಹುರಿದುಕೊಂಡು, ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬಿಕೊಳ್ಳಬೇಕು.

    * ಒಂದು ಬಾನಲೆಯನ್ನ ಸ್ಟೌವ್ ಮೇಲಿಟ್ಟು ಎರಡರಿಂದ ಮೂರು ಟೀ ಸ್ಪೂನ್ ಎಣ್ಣೆ ಹಾಕಿ. ನಂತರ ಬಾಣಲೆಗೆ ತೊಳೆದಿಟ್ಟುಕೊಂಡಿರುವ ಚಿಕನ್ ಸೇರಿಸಿ ಬಾಡಿಸಿ. ತದನಂತರ ಚಿಟಿಕೆ ಅರಿಶಿನ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಕಿ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 5 ರಿಂದ 6 ನಿಮಿಷ ಬೇಯಿಸಿ.

    * ಬಾಣಲೆಗೆ ರುಬ್ಬಿಕೊಂಡಿರುವ ಮಸಾಲೆ ಮಿಶ್ರಣ ಸೇರಿಸಿ ಮಿಕ್ಸ್ ಮಾಡಬೇಕು. ನಂತರ ಮತ್ತೆ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 5 ನಿಮಿಷ ಬೇಯಿಸಬೇಕು.
    * 5 ನಿಮಿಷದ ಬಳಿಕ ಸಣ್ಣದಾಗಿ ಕತ್ತರಿಸಿರುವ ಈರುಳ್ಳಿ ಸೇರಿಸಿ ಮಿಕ್ಸ್ ಮಾಡಬೇಕು. ನಂತ್ರ ರುಬ್ಬಿರುವ ಕೊಬ್ಬರಿ ತುರಿಯನ್ನು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ ಮೂರರಿಂದ 5 ನಿಮಿಷ ಬೇಯಿಸಿದ್ರೆ ಚಿಕನ್ ಸುಕ್ಕಾ/ ಕೋರಿ ಸುಕ್ಕಾ ರೆಡಿ.
    * ಬಿಸಿ ಬಿಸಿ ರೊಟ್ಟಿ, ಚಪಾತಿ, ನೀರ್ ದೋಸೆ ಚಿಕನ್ ಸುಕ್ಕಾ ಸವಿದ್ರೆ ಬೆಸ್ಟ್.

  • ಸಂಜೆ ತಿಂಡಿಗೆ ಸ್ಪೆಷಲ್ ಮಸಾಲೆ ಬಟಾಣಿ ಉಸ್ಲಿ ಮಾಡಿ

    ಸಂಜೆ ತಿಂಡಿಗೆ ಸ್ಪೆಷಲ್ ಮಸಾಲೆ ಬಟಾಣಿ ಉಸ್ಲಿ ಮಾಡಿ

    ಇಂದು ವೀಕೆಂಡ್, ನಾಳೆ ಪೂರ್ತಿ ದಿನ ಮನೆಯಲ್ಲಿತೇ ಇರುತ್ತೀರಿ. ದಂಪತಿ ಉದ್ಯೋಗಿಗಳಾಗಿದ್ರೆ ಇಡೀ ವಾರದ ಕೆಲಸವೆಲ್ಲಾ ಬಾಕಿ ಉಳಿದಿರುತ್ತೆ. ಮನೆ ಸ್ವಚ್ಛ, ಬಟ್ಟೆ ತೊಳೆಯುವುದು ಸೇರಿದಂತೆ ಸಾಲು ಸಾಲು ಕೆಲಸಗಳು ಕ್ಯೂನಲ್ಲಿರುತ್ತವೆ. ಅಬ್ಬಾ ಎಲ್ಲ ಕೆಲಸ ಮುಗಿತು ಅನ್ನೋಷ್ಟರಲ್ಲಿ ಸಂಜೆ ಆಗಿರುತ್ತೆ. ಬೆಳಗ್ಗೆಯಿಂದ ದಣಿದ ದೇಹಕ್ಕೆ ಒಂದು ಕಪ್ ಟೀ/ಕಾಫೀ ನೀಡೋ ರಿಲ್ಯಾಕ್ಸ್ ಗೆ ಪದಗಳೇ ಇಲ್ಲ. ಕೆಲಸದ ಒತ್ತಡ ನಡುವೆಯೂ ನೀವು ಸಂಜೆ ಸರಳವಾದ ತಿಂಡಿ ಮಾಡಬಹುದು. ಇಲ್ಲಿದೆ ಸ್ಪೆಷಲ್ ಬಟಾಣಿ ಉಸ್ಲಿ ಮಾಡುವ ವಿಧಾನ

    ಬೇಕಾಗುವ ಸಾಮಾಗ್ರಿಗಳು:
    ಬಟಾಣಿ – 1 ಕಪ್
    (ಹಸಿ ಅಥವಾ ಒಣಗಿದ್ದು, ಒಣಗಿದ ಬಟಾಣಿಯನ್ನು 6-7 ಗಂಟೆ ನೀರಿನಲ್ಲಿ ನೆನೆಸಬೇಕು)
    ಹಸಿಮೆಣಸಿನಕಾಯಿ – 2-3
    ಕೆಂಪು ಮೆಣಸಿನಕಾಯಿ – 2
    ಸಾಸಿವೆ – ಸ್ವಲ್ಪ
    ಕರಿಬೇವು – ಸ್ವಲ್ಪ
    ಇಂಗು – ಚಿಟಿಕೆ
    ಕೊಬ್ಬರಿ ತುರಿ – 3 ಸ್ಪೂನ್
    ಜೀರಿಗೆ ಪುಡಿ – ಚಿಟಿಕೆ
    ಪೆಪ್ಪರ್ ಪುಡಿ – ಚಿಟಿಕೆ
    ಎಣ್ಣೆ – 2 ಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು – ಸ್ವಲ್ಪ

    ಮಾಡುವ ವಿಧಾನ
    * ಒಣಗಿದ ಬಟಾಣಿಯಾದರೇ ಅದನ್ನು 6-7 ಗಂಟೆ ಕಾಲ ನೀರಿನಲ್ಲಿ ನೆನೆಸಿ ಬೇಯಿಸಿಕೊಳ್ಳಬೇಕು.
    * ಹಸಿ ಬಟಾಣಿಯಾದರೂ ಹಾಗೆಯೆ ಬೇಯಿಸಿಕೊಳ್ಳಬೇಕು.
    * ಬಟಾಣಿ ಬೇಯಿಸಿದ ಮೇಲೆ ಸೋಸಿಕೊಳ್ಳಿ.
    * ಈಗ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ಕಾದ ಮೇಲೆ ಸಾಸಿವೆ, ಇಂಗು, ಕರಿಬೇವು ಹಾಕಿ.
    * ಬಳಿಕ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಮುರಿದ ಕೆಂಪು ಮೆಣಸಿನಕಾಯಿಯನ್ನು ಹಾಕಿ ಫ್ರೈ ಮಾಡಿ.
    * ಈಗ ನೀರಿಲ್ಲದಂತೆ ಸೋಸಿಕೊಂಡ ಬಟಾಣಿಯನ್ನು ಪ್ಯಾನ್‍ಗೆ ಹಾಕಿ ಮಿಕ್ಸ್ ಮಾಡಿ.
    * 2 ನಿಮಿಷ ಆದ್ಮೇಲೆ ಅದಕ್ಕೆ ಜೀರಿಗೆ, ಪೆಪ್ಪರ್ ಪುಡಿ, ಕೊಬ್ಬರಿ ತುರಿ ಸೇರಿಸಿ.. ಮಿಕ್ಸ್ ಮಾಡಿ.. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕೆಳಗಿಳಿಸಿದ್ರೆ ಕಾಫಿ ಜೊತೆ ಸವಿಯಲು ಮಸಾಲೆ ಬಟಾಣಿ ಉಸ್ಲಿ ರೆಡಿ.

  • ಹಬ್ಬದ ಸ್ಪೆಷಲ್ – ಅವಲಕ್ಕಿ ಕೇಸರಿಬಾತ್ ಮಾಡುವ ವಿಧಾನ

    ಹಬ್ಬದ ಸ್ಪೆಷಲ್ – ಅವಲಕ್ಕಿ ಕೇಸರಿಬಾತ್ ಮಾಡುವ ವಿಧಾನ

    ಇಂದಿನಿಂದ ನವರಾತ್ರಿ ಆರಂಭವಾಗಿದ್ದು, 9 ದಿನ ವಿಶೇಷ ಪೂಜೆಗಳು ನಡೆಯುತ್ತವೆ. ಹಾಗಾಗಿ ಪ್ರತಿದಿನ ನೈವೇದ್ಯಕ್ಕಾಗಿ ಸಿಹಿ ಅಡುಗೆ ಮಾಡಲೇಬೇಕು. ಸಾಮಾನ್ಯವಾಗಿ ಹೋಳಿಗೆ, ಕಡಬು, ಕೇಸರಿಬಾತ್ ಮಾಡಿರ್ತೀರಿ. ಒಮ್ಮೆ ಅವಲಕ್ಕಿ ಕೇಸರಿಬಾತ್ ಟ್ರೈ ಮಾಡಿ.

     

    ಬೇಕಾಗುವ ಸಾಮಾಗ್ರಿಗಳು
    ಗಟ್ಟಿ ಅವಲಕ್ಕಿ – 1ಕಪ್
    ಸಕ್ಕರೆ – 1 ಕಪ್
    ತುಪ್ಪ- 3 ಸ್ಪೂನ್
    ಒಣ ಹಣ್ಣುಗಳು – ಸ್ವಲ್ಪ
    ಹಾಲು – ಅರ್ಧ ಕಪ್
    ಏಲಕ್ಕಿ ಪುಡಿ – ಚಿಟಿಕೆ
    ಕೇಸರಿ ಬಣ್ಣ – ಚಿಟಿಕೆ

    ಮಾಡುವ ವಿಧಾನ
    * ಮೊದಲಿಗೆ ಅವಲಕ್ಕಿಯನ್ನು ಶುದ್ದೀಕರಿಸಿ. ಮಿಕ್ಸಿಗೆ ಹಾಕಿ ತರಿತರಿ ಮಾಡಿಕೊಳ್ಳಿ. (ಹೆಚ್ಚು ನುಣ್ಣಗೆ ಮಾಡಬೇಡಿ)
    * ತುಪ್ಪದಲ್ಲಿ ಒಣ ಹಣ್ಣುಗಳನ್ನು ಫ್ರೈ ಮಾಡಿಕೊಳ್ಳಿ.
    * ಈಗ ಒಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸಕ್ಕರೆ, ಹಾಲನ್ನು ಸೇರಿಸಿ ಚೆನ್ನಾಗಿ ಕುದಿಸಿ.
    * ಕುದಿ ಬಂದ ಮೇಲೆ ಕೇಸರಿ ಬಣ್ಣ ಹಾಕಿ ಕಲಸಿ.
    * ಈಗ ನಿಧಾನವಾಗಿ ಅವಲಕ್ಕಿ ತರಿಯನ್ನು ಸೇರಿಸಿ, ಕಲಸಿರಿ.
    * ಬಳಿಕ ತುಪ್ಪ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ತಿರುಗಿಸಿ.
    * ಕೊನೆಗೆ ಇಳಿಸುವಾಗ ಒಣಹಣ್ಣುಗಳನ್ನು ಸೇರಿಸಿ
    (ಬೇಕಿದ್ದಲ್ಲಿ ತುಪ್ಪ ಸೇರಿಸಿಕೊಳ್ಳಬಹುದು)

  • ರುಚಿಯಾದ, ಆರೋಗ್ಯಕರ ಕುಂಬಳಕಾಯಿ ದೋಸೆ ಮಾಡುವ ವಿಧಾನ

    ರುಚಿಯಾದ, ಆರೋಗ್ಯಕರ ಕುಂಬಳಕಾಯಿ ದೋಸೆ ಮಾಡುವ ವಿಧಾನ

    ಖಾಲಿ, ಮಸಾಲೆ, ಸೆಟ್ ದೋಸೆ ತಿಂದು ಬೇಸರವಾಗಿದ್ರೆ ಒಮ್ಮೆ ಕುಂಬಳಕಾಯಿ ದೋಸೆ ಟ್ರೈ ಮಾಡಿ ನೋಡಿ. ನಾಲಿಗೆಗೆ ರುಚಿ ನೀಡುವದರ ಜೊತೆ ಆರೋಗ್ಯಕ್ಕೂ ಕುಂಬಳಕಾಯಿ ದೋಸೆ ಒಳ್ಳೆಯದು. ಭಾನುವಾರ ಮನೆಯಲ್ಲಿ ಎಲ್ಲರೂ ಇರ್ತಾರೆ. ರಜಾ ದಿನಗಳಲ್ಲಿ ದೋಸೆ ಮಾಡೋದು ಕಾಮನ್. ಆದ್ರೆ ಕುಂಬಳಕಾಯಿ ದೋಸೆಯ ರುಚಿಯೇ ವಿಭಿನ್ನ.

    ಬೇಕಾಗುವ ಸಾಮಾಗ್ರಿಗಳು
    * ದೋಸೆ ಅಕ್ಕಿ – 1 ಕಪ್
    * ಕಡಲೆಬೇಳೆ – 2 ಸ್ಪೂನ್
    * ಕುಂಬಳಕಾಯಿ – ಸಣ್ಣಗೆ ಹೆಚ್ಚಿದ್ದು 1 ಕಪ್
    * ಕಾಯಿ ತುರಿ – ಅರ್ಧ ಕಪ್
    * ಶುಂಠಿ – ಸ್ವಲ್ಪ
    * ಕೆಂಪು ಮೆಣಸಿನಕಾಯಿ – ಖಾರಕ್ಕೆ ತಕ್ಕಷ್ಟು
    * ಜೀರಿಗೆ – ಸ್ವಲ್ಪ
    * ಕರಿಬೇವು – ಸ್ವಲ್ಪ
    * ಉಪ್ಪು – ರುಚಿಗೆ ತಕ್ಕಷ್ಟು
    * ಎಣ್ಣೆ – ಸ್ವಲ್ಪ

    ಮಾಡುವ ವಿಧಾನ
    * ದೋಸೆ ಅಕ್ಕಿ ಮತ್ತು ಕಡ್ಲೆಬೇಳೆಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ಸೋಸಿಕೊಳ್ಳಿ.
    * ಈಗ ಸೋಸಿದ ಅಕ್ಕಿಯನ್ನು ಚೆನ್ನಾಗಿ ನುಣ್ಣಗೆ ರುಬ್ಬಿ ಒಂದು ಮಿಕ್ಸಿಂಗ್ ಬೌಲ್‍ಗೆ ಹಾಕಿ.
    * ಈಗ ಅದೇ ಜಾರ್ ಗೆ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಕುಂಬಳಕಾಯಿಯನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ.
    * ಅದೇ ಜಾರ್ ಗೆ ಕಾಯಿ ತುರಿ, ಶುಂಠಿ, ಕೆಂಪು ಮೆಣಸಿನಕಾಯಿ, ಕರಿಬೇವು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಈಗ ಎಲ್ಲವನ್ನು ಹಾಕಿ ಮಿಕ್ಸಿಂಗ್ ಬೌಲ್‍ಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಸೇರಿಸಿ.
    * 5-10 ನಿಮಿಷ ನೆನೆಯಲು ಬಿಡಿ.
    * ಈಗ ದೋಸೆ ತವ ಕಾದ ಬಳಿಕ ದೋಸೆ ರೀತಿಯೇ ಮಾಡಿ. ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ. ರುಚಿಯಾದ ಪಮ್ಕಿನ್ ದೋಸೆ ರೆಡಿ.

  • ನಾಲಿಗೆಗೆ ಹೊಸ ರುಚಿ ನೀಡುವ ಪಕ್ಕಾ ದೇಸಿ ತಿಂಡಿ-ತಿಂದವರು ಫುಲ್ ಖುಷ್

    ನಾಲಿಗೆಗೆ ಹೊಸ ರುಚಿ ನೀಡುವ ಪಕ್ಕಾ ದೇಸಿ ತಿಂಡಿ-ತಿಂದವರು ಫುಲ್ ಖುಷ್

    ಪ್ರತಿದಿನ ಬೆಳಗ್ಗೆ ಉಪ್ಪಿಟ್ಟು, ಪಲಾವ್, ಅವಲಕ್ಕಿ ಮಾಡಿ ಬೇಜಾರು ಆಗಿರುತ್ತೆ. ಸಂಡೇ ದಿನ ಹೊಸ ಅಡುಗೆ ಮಾಡೋಣ ಅಂದ್ರೆ ಹೆಚ್ಚು ಸಮಯ ಬೇಕು. ಹೊರಗೆ ತಿರುಗಾಡಿಕೊಂಡು ತಿಂದು ಬರೋಣ ಅಂದ್ರೆ ಕೊರೊನಾ ಭಯ. ಮನೆಯಲ್ಲಿಯೇ ಬೆಳಗ್ಗೆ ಅಥವಾ ಸಂಜೆ ಮನೆಯಲ್ಲಿಯೇ ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮವಿಲ್ಲದೆ ನಾಲಿಗೆಗೆ ಹೊಸ ರುಚಿ ಪಕ್ಕಾ ದೇಸಿ ತಿಂಡಿ ಮಾಡುವ ವಿಧಾನ ಇಲ್ಲಿದೆ. ಈ ತಿಂಡಿ ತಿಂದವರು ಫುಲ್ ಖುಷಿ ಆಗೋದಂತೂ ಗ್ಯಾರೆಂಟಿ

    ಬೇಕಾಗುವ ಸಾಮಾಗ್ರಿಗಳು
    ಚಿರೋಟಿ/ಸಣ್ಣ ರವೆ- ಒಂದು ಕಪ್
    ಹಸಿ ಮೆಣಸಿನಕಾಯಿ- 2 ರಿಂದ 3
    ಟೊಮಾಟೋ- 3
    ಈರುಳ್ಳಿ- 1 (ಚಿಕ್ಕದು)
    ಕರಿಬೇವು- 12 ರಿಂದ 15 ಎಲೆ
    ಜೀರಿಗೆ – 1 ಟೀ ಸ್ಪೂನ್
    ಗಟ್ಟಿ ಮೊಸರು- 1 ಕಪ್
    ಹಸಿ ಶುಂಠಿ- ಒಂದು ಇಂಚು
    ಬೆಳ್ಳುಳ್ಳಿ- 8 ರಿಂದ 10 ಎಸಳು
    ಎಣ್ಣೆ
    ಉಪ್ಪು-ರುಚಿಗೆ ತಕ್ಕಷ್ಟು
    ಕೋತಂಬರಿ ಸೊಪ್ಪು-ಸ್ವಲ್ಪ
    ಅರಿಶಿನ-ಚಿಟಿಕೆ
    ಅಚ ಖಾರದ ಪುಡಿ- ಚಿಟಿಕೆ
    ನೀರು- ಒಂದು ಕಪ್

    ಮಾಡುವ ವಿಧಾನ
    * ಮೊದಲಿಗೆ ಒಂದು ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಇದಕ್ಕೆ ಒಂದು ಚಿರೋಟಿ ರವೆ ಹಾಕಿ. ನಂತರ ಸಣ್ಣಕ್ಕೆ ಕತ್ತರಿಸಿದ ಒಂದು ಟೊಮಾಟೋ, ಹಸಿ ಮೆಣಸಿನಕಾಯಿ, ಈರುಳ್ಳಿ, 1/2 ಟೀ ಸ್ಪೂನ್ ಜೀರಿಗೆ, 5 ರಿಂದ 6 ದಳ ಕರಿಬಬೇವು ಮತ್ತು ಗಟ್ಟಿ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಮಿಶ್ರಣ ಚೆನ್ನಾಗಿ ಮಿಕ್ಸ್ ಆಗ್ತಿದ್ದಂತೆ ಸ್ವಲ್ಪ ಕೋತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ. ನಂತರ ಅದಕ್ಕೆ ಒಂದು ಕಪ್ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ತಯಾರು ಮಾಡಿಕೊಳ್ಳಿ. ತದನಂತರ ಮುಚ್ಚಳ ಮುಚ್ಚಿ 15 ರಿಂದ 20 ನಿಮಿಷ ಎತ್ತಿಡಿ. ರವೆ ನೆನದಷ್ಟು ಚೆನ್ನಾಗಿರುತ್ತದೆ.

    * ಮಿಕ್ಸಿ ಜಾರಿಗೆ ಕತ್ತರಿಸಿದ ಎರಡು ಟೊಮಾಟೋ, ಹಸಿ ಶುಂಠಿ, ಬೆಳ್ಳುಳ್ಳಿ, ಕೋತಂಬರಿ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ.
    * ಸ್ಟೌವ್ ಮೇಲೆ ಪ್ಯಾನ್ ಇರಿಸಿ ಎರಡು ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗ್ತಿದ್ದಂತೆ ಕರಿಬೇವು, ಬೆಳ್ಳುಳ್ಳಿ, 1/2 ಟೀ ಸ್ಪೂನ್ ಜೀರಿಗೆ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಂಡ ನಂತರ ರುಬ್ಬಿಕೊಂಡಿರುವ ಟೊಮಾಟೋ ಮಿಶ್ರಣದ ಜೊತೆಗೆ ಚಿಟಿಕೆ ಅರಿಶಿನ, ಉಪ್ಪು ಮತ್ತು ಅಚ್ಚ ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. ಟೊಮಾಟೊ ಹಸಿ ವಾಸನೆ ಹೋಗುವರೆಗೂ ಮಿಶ್ರಣವನ್ನು ಬೇಯಸಿಕೊಳ್ಳಬೇಕು.

    * ಸ್ಟೌವ್ ಆನ್ ಮಾಡಿ ಪಡ್ಡು ಮಣೆಯನ್ನು ಇಟ್ಟಿಕೊಳ್ಳಿ. ಪಡ್ಡು ಮಣೆ ಬಿಸಿ ಆಗುತ್ತಿದ್ದಂತೆ ಎಣ್ಣೆ ಸವರಿ ಮೊದಲು ಕಲಿಸಿಕೊಂಡಿರುವ ರವೆ ಮಿಶ್ರಣವನ್ನು ಪಡ್ಡು ರೀತಿಯಲ್ಲಿ ಹಾಕಿಕೊಳ್ಳಿ. ಎರಡೂ ಕಡೆ ಪ್ಲಿಪ್ ಮಾಡಿಕೊಂಡ ನಂತರ ರವೆ ಪಡ್ಡುಗಳನ್ನು ಎತ್ತಿಕೊಳ್ಳಿ.
    * ರೆಡಿಯಾಗಿರುವ ಟೊಮಾಟೋ ಮಿಶ್ರಣಕ್ಕೆ ಸಿದ್ಧವಾಗಿರುವ ರವೆ ಪಡ್ಡುಗಳನ್ನು ಸೇರಿಸಿ ಎರಡರಿಂದ ಮೂರು ನಿಮಿಷ ಫ್ರೈ ಮಾಡಿಕೊಂಡ್ರೆ ನಾಲಿಗೆಗೆ ಹೊಸ ರುಚಿ ನೀಡುವ ಪಕ್ಕಾ ದೇಸಿ ತಿಂಡಿ ಸಿದ್ಧವಾಗುತ್ತದೆ.