Tag: recipe

  • ಫಟಾಫಟ್ ಅಂತ ಮಾಡಿ ಎಗ್ ಪೆಪ್ಪರ್ ಫ್ರೈ

    ಫಟಾಫಟ್ ಅಂತ ಮಾಡಿ ಎಗ್ ಪೆಪ್ಪರ್ ಫ್ರೈ

    ಜೆ ಬಂದ್ರೆ ಸಾಕು ಮನೆಯಲ್ಲಿ ಎಲ್ಲರೂ ಇರುತ್ತಾರೆ. ಒಂದೇ ಕಡೆ ಎಲ್ರೂ ಇದ್ದರೆ ಸಾಕು ಏನಾದ್ರೂ ಸ್ಪೈಸಿಯಾಗಿ ತಿನ್ನೋಕೆ ಕೇಳುತ್ತಾರೆ. ಪ್ರತಿದಿನ ಅದೇ ತಿಂಡಿ ಅಂತ ಬೇಸರ ಮಾಡಿಕೊಂಡು ತಿನ್ನುವುದಿಲ್ಲ. ಹೀಗಾಗಿ ಬೇಗ ತಯಾರಾಗುವ ಎಗ್ ಪೆಪ್ಪರ್ ಫ್ರೈ ಮಾಡಿ ಬಾಯಿ ಚಪ್ಪರಿಸಿ. ಫಟಾಫಟ್ ಅಂತ ಮಾಡುವ ಸಿಂಪಲ್ ವಿಧಾನ..

    ಬೇಕಾಗುವ ಸಾಮಾಗ್ರಿಗಳು
    ಮೊಟ್ಟೆ – 4
    ಎಣ್ಣೆ – 2-3 ಚಮಚ
    ಮೆಣಸು – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಕೊತ್ತಂಬರಿ ಸೊಪ್ಪು -ಸ್ವಲ್ಪ
    ಅರಿಶಿಣ – ಚಿಟಿಕೆ

    ಮಾಡುವ ವಿಧಾನ
    * ಮೊದಲಿಗೆ ನಾಲ್ಕು ಮೊಟ್ಟೆಗಳನ್ನು ಒಂದು ಕುಕ್ಕರ್ ಗೆ ಹಾಕಿ, ಸ್ವಲ್ಪ ಉಪ್ಪು, ನೀರು ಹಾಕಿ ಒಂದು ವಿಶಲ್ ಕೂಗಿಸಿ ಬೇಯಿಸಿಕೊಳ್ಳಿ.
    * ಈಗ ಮೊಟ್ಟೆ ಬಿಡಿಸಿ ಒಂದು ಮೊಟ್ಟೆಯನ್ನು ಎರಡು ಭಾಗ ಮಾಡಿ ಕಟ್ ಮಾಡಿಕೊಳ್ಳಿ.
    * ಬಳಿಕ ಒಂದು ಪ್ಯಾನ್ ಗೆ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದ ಮೇಲೆ ಕಟ್ ಮಾಡಿದ್ದ ಮೊಟ್ಟೆಯನ್ನು ಇಟ್ಟು 1 ನಿಮಿಷ ಬೇಯಿಸಿಕೊಳ್ಳಿ.
    * ನಂತರ ಮೊಟ್ಟೆಯನ್ನು ಉಲ್ಟಾ ಮಾಡಿ ಸ್ವಲ್ಪ ಬ್ರೌನ್ ಬಣ್ಣ ಬರುವರೆಗೆ ಬೇಯಿಸಿಕೊಳ್ಳಿ.
    * ಈಗ ಕಡಿಮೆ ಉರಿ ಇಟ್ಟು ಅದರ ಮೇಲೆ ಚಿಟಿಕೆ ಅರಿಶಿಣ ಉದುರುಸಿ.
    * ಈಗ ಮೆಣಸು ಮತ್ತು ಉಪ್ಪನ್ನು ಪುಡಿ ಮಾಡಿಕೊಂಡು ಮೊಟ್ಟೆಯ ಮೇಲೆ ಉದುರಿಸಿ.
    * ಮತ್ತೆ ಮೊಟ್ಟೆಯನ್ನು ಉಲ್ಟಾ ಮಾಡಿ ಮೆಣಸು ಮತ್ತು ಉಪ್ಪಿನ ಪುಡಿ ಉದುರಿಸಿ.
    * ನಂತರ ಸಣ್ಣಗೆ ಕಟ್ ಮಾಡಿದ್ದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸ್ಪೈಸಿ ಸ್ಪೈಸಿಯಾಗಿ ಎಗ್ ಪೆಪ್ಪರ್ ಫ್ರೈ ತಿನ್ನಲು ಸಿದ್ಧ.

  • ಸಿಂಪಲ್‌ ಆಗಿ ಮಾಡಿ ಆಲೂ ಕಟ್ಲೆಟ್

    ಸಿಂಪಲ್‌ ಆಗಿ ಮಾಡಿ ಆಲೂ ಕಟ್ಲೆಟ್

    ಕೆಲವರಿಗೆ ಸಂಜೆ ಚಹಾದೊಂದಿಗೆ ಸ್ಪೆಷಲ್ ಆಗಿ ಏನಾದರು ಮಾಡಿ ತಿನ್ನಬೇಕು ಅಂತ ಮನಸ್ಸು ಆಸೆ ಆಗುತ್ತೆ. ಆದ್ರೆ ಸಿಂಪಲ್ ಹಾಗೂ ಸ್ಪೆಷಲ್ ಆಗಿರೋ ಯಾವ ಸ್ನಾಕ್ಸ್ ಮಾಡಿದರೆ ಮನೆಮಂದಿಗೆ ಇಷ್ಟವಾಗುತ್ತೆ ಎಂದು ಯೋಚಿಸ್ತಾ ಇದ್ದೀರಾ? ಹಾಗಿದ್ರೆ ಸಿಂಪಲ್ ಆಗಿ ಕಡಿಮೆ ಸಮಯದಲ್ಲಿ ರುಚಿಕರವಾದ ಆಲೂ ಕಟ್ಲೆಟ್ ಯಾವ ರೀತಿ ತಯಾರಿಸುವುದು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ. ನೀವು ನಿಮ್ಮ ಮನೆಮಂದಿಗೆ, ಮಕ್ಕಳಿಗೆ ಇದನ್ನೊಮ್ಮೆ ಮಾಡಿಕೊಡಿ. ಖಂಡಿತವಾಗಿಯೂ ಇಷ್ಟಪಟ್ಟು ತಿನ್ನುತ್ತಾರೆ.

    ಬೇಕಾಗುವ ಸಾಮಾಗ್ರಿಗಳು:
    ಆಲೂಗಡ್ಡೆ- 2-3
    ಈರುಳ್ಳಿ- 1
    ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್- 1 ಚಮಚ
    ಗರಂ ಮಸಾಲೆ- ಅರ್ಧ ಚಮಚ
    ಜೋಳದ ಹಿಟ್ಟು- 4 ಚಮಚ
    ಸಣ್ಣ ರವೆ- 3 ಚಮಚ
    ಕೊತ್ತಂಬರಿ ಸೊಪ್ಪು- 8-10 ಎಸಳು
    ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು- ಒಗ್ಗರಣೆಗೆ
    ಹಸಿಮೆಣಸಿನಕಾಯಿ ಪೇಸ್ಟ್- 1 ಚಮಚ
    ರುಚಿಗೆ ತಕ್ಕಷ್ಟು ಉಪ್ಪು
    ಅಡುಗೆ ಎಣ್ಣೆ

    ಮಾಡುವ ವಿಧಾನ:
    * ಮೊದಲು ಆಲೂಗಡ್ಡೆಯನ್ನು ಬೇಯಿಸಿ ಬಳಿಕ ಸಿಪ್ಪೆ ತೆಗೆದು ಮೆತ್ತಗೆ ಮಾಡಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಸ್ವಲ್ಪ ಅಡುಗೆ ಎಣ್ಣೆ ಹಾಕಿ ಅದರಲ್ಲಿ ಸಾಸಿವೆ ಹಾಕಿ. ಅದು ಸಿಡಿದ ನಂತರ ಸ್ವಲ್ಪ ಉದ್ದಿನಬೇಳೆ, ಕಡ್ಲೆಬೇಳೆ ಹಾಕಿ ಕಂದು ಬಣ್ಣಕ್ಕೆ ತಿರುಗಿದ ತಕ್ಷಣ 1 ಚಮಚ ಹಸಿಮೆಣಸಿನಕಾಯಿ ಪೇಸ್ಟ್, 1 ಚಮಚ ಶುಂಠಿಬೆಳ್ಳುಳ್ಳಿ ಪೇಸ್ಟ್, ಅರ್ಧ ಚಮಚ ಗರಂಮಸಾಲಾ, 8-10 ಎಸಳು ಕೊತ್ತಂಬರಿ ಸೊಪ್ಪು, 1 ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಕಲಸಿ.
    * ನಂತರ ಬೇಯಿಸಿ ಮೆತ್ತಗೆ ಮಾಡಿಟ್ಟ ಆಲೂಗಡ್ಡೆ ಹಾಕಿ ಒಗ್ಗರಣೆ ಮಿಶ್ರಣಕ್ಕೆ ಬೆರೆಸಿ ಚೆನ್ನಾಗಿ ಕಲಸಿ. ಬಳಿಕ ತಯಾರಾದ ಮಿಶ್ರಣದಲ್ಲಿ ಕಟ್ಲೆಟ್ ಆಕಾರಗಳನ್ನು ಮಾಡಿಕೊಳ್ಳಿ.
    * ಬಳಿಕ 4 ಚಮಚ ಜೋಳದ ಹಿಟ್ಟು ಹಾಗೂ 3 ಚಮಚ ಸಣ್ಣ ರವೆಯನ್ನು ಬೌಲ್‍ನಲ್ಲಿ ಸ್ಪಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿ ಗಟ್ಟಿಯಾದ ಪೇಸ್ಟ್ ತರಹ ಮಾಡಿಕೊಳ್ಳಿ.
    * ಆ ಹಿಟ್ಟಿನ ಪ್ಲೇಟ್‍ನಲ್ಲಿ ಮೊದಲು ತಯಾರಿಸಿ ಇಟ್ಟಿದ್ದ ಆಲೂಗಡ್ಡೆ ಮಿಶ್ರಣದ ಕಟ್ಲೆಟ್‍ಗಳನ್ನು ಅದ್ದಿ ಕಾದ ಎಣ್ಣೆಯಲ್ಲಿ ಗರಿಗಿಯಾಗಿ ಕರಿಯಿರಿ.
    * ಬಳಿಕ ತಯಾರಿಸಿದ ಕಟ್ಲೆಟ್‍ಗಳನ್ನು ಪ್ಲೇಟ್‍ನಲ್ಲಿ ಇಟ್ಟು ಟೊಮೆಟೋ ಸಾಸ್‍ನೊಂದಿಗೆ ಸವಿದು ಎಂಜಾಯ್ ಮಾಡಿ.
    *ಈ ಕಟ್ಲೆಟ್ ಅನ್ನು ನೀವು ಸಂಜೆ ವೇಳೆ ಚಹಾ ಅಥವಾ ಕಾಫಿ ಜೊತೆಗೆ ಸವಿದರೆ ಇನ್ನಷ್ಟು ರುಚಿಕರವಾಗಿರುತ್ತದೆ.

     

  • ಸಂಭ್ರಮದ ವೇಳೆ ಬಾಯಿ ಸಿಹಿ ಮಾಡೋಕೆ ಮಾಡಿ ಹೆಸರು ಬೇಳೆ ಹಲ್ವಾ!

    ಸಂಭ್ರಮದ ವೇಳೆ ಬಾಯಿ ಸಿಹಿ ಮಾಡೋಕೆ ಮಾಡಿ ಹೆಸರು ಬೇಳೆ ಹಲ್ವಾ!

    ಸಿಹಿ ತಿನಿಸು ಹಾಗೂ ಸವಿ, ಸವಿ ಹಲ್ವಾ ಇಷ್ಟ ಪಡೋರಿಗೆ ಇವತ್ತು ಹೆಸರು ಬೇಳೆ ಹಲ್ವಾ ಮಾಡೋದನ್ನ ಹೇಳ್ಕೊಡ್ತೀನಿ. ಇದು ಮಕ್ಕಳಿಗೆ, ವಯಸ್ಕರಿಗೆ ಎಲ್ಲರಿಗೂ ಇಷ್ಟ ಆಗೋ ಸಕತ್‌ ಟೇಸ್ಟೀ ಸ್ವೀಟ್‌! ಸಂಭ್ರಮದ ಸಮಯದಲ್ಲಿ ಬಾಯಿ ಸಿಹಿ ಮಾಡೋಕೆ ಇದು ಬೆಸ್ಟ್‌.

    ಬೇಕಾಗುವ ಪದಾರ್ಥಗಳು:
    ಹೆಸರು ಬೇಳೆ – 3 ಬಟ್ಟಲು
    ತುಪ್ಪ – 3 ಬಟ್ಟಲು
    ಸಕ್ಕರೆ – 2 ಬಟ್ಟಲು
    ಹಾಲು – 5 ಬಟ್ಟಲು
    ಏಲಕ್ಕಿ ಪುಡಿ – ¾ ಟೀ ಚಮಚ
    2 ಟೇಬಲ್ ಚಮಚ ಬಿಸಿ ನೀರಿನಲ್ಲಿ ನೆನೆಸಿದ ಕೇಸರಿ – 10 ಎಳೆ
    ಗೋಡಂಬಿ – 4 ಟೇಬಲ್ ಚಮಚ
    ಬಾದಾಮಿ ಮತ್ತು ದ್ರಾಕ್ಷಿ – ತಲಾ 2 ಟೇಬಲ್ ಚಮಚ

    ಹೆಸರು ಬೇಳೆ ಹಲ್ವಾ ಮಾಡೋದು ಹೇಗೆ?
    1 ಹೆಸರು ಬೇಳೆಯನ್ನು ರಾತ್ರಿಯೇ ನೆನೆಸಿ. ನೀರು ಬಸಿದು, ಸಿಪ್ಪೆ ತೆಗೆದು ಸ್ವಲ್ಪ ನೀರಿನಲ್ಲಿ ರುಬ್ಬಿಕೊಳ್ಳಿ.
    2. ಬಾಣಲೆಯಲ್ಲಿ 2 ಬಟ್ಟಲು ತುಪ್ಪವನ್ನು ಕಾಯಿಸಿ. ರುಬ್ಬಿದ ಪೇಸ್ಟ್‌ನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು. ಸತತವಾಗಿ ಕಲಸುತ್ತಿರಬೇಕು.
    3. ಪೇಸ್ಟ್‌ ಗುಲಾಬಿ ಬಣ್ಣಕ್ಕೆ ಬಂದಾಗ ಮತ್ತು ತುಪ್ಪ ಪ್ರತ್ಯೇಕಗೊಂಡಾಗ ಸಕ್ಕರೆ ಮತ್ತು ಹಾಲನ್ನು ಹಾಕಿ ಕಲಸಿ. ಸತತವಾಗಿ ಕಲಸುತ್ತ ಸಣ್ಣ ಉರಿಯಲ್ಲಿ ಸುಮಾರು 10 ನಿಮಿಷ ಬೇಯಿಸಬೇಕು.
    4. ಈ ಮಿಶ್ರಣ ಇಂಗುವಾಗ, ಉಳಿದ ತುಪ್ಪವನ್ನು ಹಾಕಿ. 5-7 ನಿಮಿಷ ಹುರಿಯಿರಿ. ಕೇಸರಿ ಮತ್ತು ಚೂರು ಮಾಡಿರುವ ಒಣ ಹಣ್ಣುಗಳಲ್ಲಿ ಅರ್ಧ ಭಾಗವನ್ನು ಈ ಮಿಶ್ರಣಕ್ಕೆ ಹಾಕಿ ಕಲಸಿ.
    5. ಅನಂತರ ಒಲೆಯಿಂದ ಇಳಿಸಿ. ಒಣ ಹಣ್ಣು ಮತ್ತು ಏಲಕ್ಕಿಯಿಂದ ಅಲಂಕರಿಸಿ. ಈಗ ನಿಮ್ಮ ಮುಂದೆ ಹೆಸರು ಬೇಳೆ ಹಲ್ವಾ ಸವಿಯಲು ರೆಡಿ.

  • ಬೆಳಗ್ಗಿನ ತಿಂಡಿಗೆ ಮಾಡಿ ಗರಿಗರಿಯಾದ ಕುಂಬಳಕಾಯಿ ದೋಸೆ

    ಬೆಳಗ್ಗಿನ ತಿಂಡಿಗೆ ಮಾಡಿ ಗರಿಗರಿಯಾದ ಕುಂಬಳಕಾಯಿ ದೋಸೆ

    ಪ್ರತಿದಿನ ಖಾಲಿ ದೋಸೆ, ಸೆಟ್ ದೋಸೆ, ಮಸಾಲೆ ದೋಸೆ ತಿಂದು ಬೋರಾಗಿದ್ಯಾ? ಹಾಗಿದ್ರೆ ಇವತ್ತಿನ ನಮ್ಮ ರೆಸಿಪಿಯಲ್ಲಿ ಆರೋಗ್ಯಕರ ಕುಂಬಳಕಾಯಿ ದೋಸೆ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಕುಂಬಳಕಾಯಿ ಸೇವನೆಯಿಂದ ಅನೇಕ ಆರೋಗ್ಯ ಲಾಭಗಳಿವೆ. ಈ ದೋಸೆ ಮಾಡಲು ಬಲು ಸುಲಭ. ಹಾಗಿದ್ರೆ ತಡ ಯಾಕೆ? ನೀವೂ ಕೂಡ ನಿಮ್ಮ ಮನೆಯಲ್ಲಿ ಈ ದೋಸೆಯನ್ನೊಮ್ಮೆ ಟ್ರೈ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    ಹೆಚ್ಚಿದ ಕುಂಬಳಕಾಯಿ – 500 ಗ್ರಾಂ
    ಅಕ್ಕಿ – ಒಂದು ಕಪ್
    ತೆಂಗಿನ ತುರಿ – ಒಂದು ಕಪ್
    ಶುಂಠಿ – ಸಣ್ಣ ತುಂಡು
    ಕರಿಬೇವು – 4 ಎಲೆ
    ಒಣಮೆಣಸಿನಕಾಯಿ -2ರಿಂದ 3
    ಉಪ್ಪು – ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಮೂರು ಗಂಟೆಗಳ ಕಾಲ ನೆನೆಸಿಡಿ.
    * ಈಗ ನೆನೆಸಿಟ್ಟ ಅಕ್ಕಿಯನ್ನು ಮಿಕ್ಸರ್ ಜಾರಿಗೆ ಹಾಕಿಕೊಂಡು ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ.
    * ಬಳಿಕ ಅದೇ ಜಾರಿಗೆ ಹೆಚ್ಚಿದ ಕುಂಬಳಕಾಯಿ, ತೆಂಗಿನ ತುರಿ, ಶುಂಠಿ, ಕರಿಬೇವು, ಒಣಮೆಣಸಿನಕಾಯಿ ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.
    * ನಂತರ ಅಕ್ಕಿಹಿಟ್ಟಿಗೆ ಈ ಮಿಶ್ರಣವನ್ನು ಹಾಕಿಕೊಂಡು, ಅಗತ್ಯಕ್ಕೆ ತಕ್ಕಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ದೋಸೆ ತವಾ ಕಾಯಲು ಇಟ್ಟು ಬಿಸಿಯಾದ ಬಳಿಕ ದೋಸೆ ಹಾಕಿ ಮುಚ್ಚಿಟ್ಟು ಬೇಯಿಸಿಕೊಳ್ಳಿ.
    * ಬಳಿಕ ಮುಚ್ಚಳ ತೆಗೆದು ದೋಸೆ ಮೇಲೆ ಸ್ವಲ್ಪ ತುಪ್ಪ ಸವರಿಕೊಳ್ಳಿ.
    * ಈಗ ಗರಿಗರಿಯಾದ ಕುಂಬಳಕಾಯಿ ದೋಸೆ ಸವಿಯಲು ಸಿದ್ಧ.

  • ಸುಲಭವಾಗಿ ಮಾಡಿ ರುಚಿರುಚಿಯಾದ ಬ್ರೆಡ್ ಪಿಜ್ಜಾ

    ಸುಲಭವಾಗಿ ಮಾಡಿ ರುಚಿರುಚಿಯಾದ ಬ್ರೆಡ್ ಪಿಜ್ಜಾ

    ಸಾಮಾನ್ಯವಾಗಿ ಬ್ರೆಡ್ ಅಂದ್ರೆ ರೋಗಿಗಳು ತಿನ್ನುವಂತದ್ದು ಎಂಬ ಭಾವನೆ ಕೆಲವರಲ್ಲಿದೆ. ಆದ್ರೆ ಬ್ರೆಡ್‍ನಿಂದ ಅನೇಕ ವಿಧವಾದ ಸ್ನ್ಯಾಕ್ಸ್ ತಯಾರಿಸಬಹುದು. ಈ ಪೈಕಿ ಬ್ರೆಡ್‌ ಪಿಜ್ಜಾ ಕೂಡ ಒಂದು. ಇದನ್ನು ತುಂಬಾ ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಬ್ರೆಡ್‍ನಿಂದ ಪಿಜ್ಜಾ ಮಾಡೋ ಸಿಂಪಲ್ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಟ್ರೈ ಮಾಡಿ. ಈ ರೆಸಿಪಿ ಖಂಡಿತವಾಗಿಯೂ ನಿಮ್ಮ ಮಕ್ಕಳಿಗೆ ಇಷ್ಟವಾಗುತ್ತದೆ.

    ಬೇಕಾಗುವ ಸಾಮಾಗ್ರಿಗಳು:
    * ಬ್ರೆಡ್- 3 ಸ್ಲೈಸ್
    *ಹೆಚ್ಚಿದ ಈರುಳ್ಳಿ- 2 ಚಮಚ
    * ಹೆಚ್ಚಿದ ಕ್ಯಾಪ್ಸಿಕಮ್- 2 ಚಮಚ
    * ಚೀಸ್- 3 ಚಮಚ
    * ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್- 2 ಚಮಚ
    * ಕಾಳುಮೆಣಸಿನಪುಡಿ ಅಥವಾ ಇಟಾಲಿಯನ್ ಮಸಾಲೆ- 1 ಚಿಟಿಕೆ
    * ಚಿಲ್ಲಿ ಫ್ಲೇಕ್ಸ್- ಸ್ವಲ್ಪ
    * ಕ್ಯಾರೆಟ್(ಬೇಕೆಂದಲ್ಲಿ)- 1
    * ಕ್ಯಾಬೇಜ್ (ಬೇಕೆಂದಲ್ಲಿ)- 3 ಚಮಚ

    ಮಾಡೋ ವಿಧಾನ:
    * ಮೊದಲು ಬ್ರೆಡ್‍ನ ಒಂದು ಸೈಡಿಗೆ 1 ಚಮಚದಷ್ಟು ಟೊಮೆಟೋ ಸಾಸ್ ಸವರಿಡಬೇಕು.
    * ಅದರ ಮೇಲೆ ಸಣ್ಣಗೆ ಕಟ್ ಮಾಡಿದ ಈರುಳ್ಳಿಯನ್ನು ಹರಡಿ.
    * ಈ ಈರುಳ್ಳಿಯ ಮೇಲೆ ಸಣ್ಣಗೆ ತುಂಡರಿಸಿದ ಕ್ಯಾಪ್ಸಿಕಮ್ ಪೀಸ್‍ಗಳನ್ನು ಹಾಕಿ. ಹಾಗೆಯೇ ಪೆಪ್ಪರ್ ಪೌಡರ್ ಮತ್ತು ಚಿಲ್ಲಿ ಫ್ಲೇಕ್ಸ್ ಹರಡಿ.
    * ಬಳಿಕ ಚೀಸ್ ಕೂಡ ಅದರ ಮೇಲೆ ಹರಡಿ.
    * ಇದರ ಮೇಲೆ ನಿಮಗೆ ಬೇಕೆಂದಲ್ಲಿ ಸಣ್ಣಗೆ ಕಟ್ ಮಾಡಿದ ಟೊಮೆಟೋ, ಕ್ಯಾರೆಟ್, ಕ್ಯಾಬೇಜ್ ಗಳನ್ನು ಬಳಸಬಹುದು.
    * ನಂತರ ಒಲೆಯ ಮೇಲೆ ತವಾ ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ತುಪ್ಪ ಸವರಿ ಚೀಸ್ ಕರಗುವವರೆಗೆ ಅಂದ್ರೆ 5-7 ನಿಮಿಷಗಳ ಕಾಲ ಒಲೆಯಲ್ಲಿ ಬಿಸಿ ಮಾಡಿ. ಒಲೆಯಿಂದ ತೆಗೆದ ಬ್ರೆಡ್ ಪಿಜ್ಜಾವನ್ನು ಬಿಸಿಬಿಸಿ ಇರುವಾಗಲೇ ಸವಿಯಿರಿ.

  • ಮಳೆಯಲಿ.. ಟೀ ಜೊತೆ ಕಡಲೆ ಸ್ಯಾಂಡ್‌ವಿಚ್‌!

    ಮಳೆಯಲಿ.. ಟೀ ಜೊತೆ ಕಡಲೆ ಸ್ಯಾಂಡ್‌ವಿಚ್‌!

    ಳೆಗಾಲ ಆರಂಭವಾಗಿದೆ, ಹೀಗಾಗಿ ವಾತಾವರಣ ತಂಬಾ ತಂಪಾಗಿದೆ. ಮನೆಯೊಳಗೆ ಬೆಚ್ಚಗೆ ಕುಳಿತು ಕಾಫಿ ಜೊತೆಗೆ ತಿನ್ನೋ ಸ್ನ್ಯಾಕ್ಸ್‌ ಮಾಡೋ ವಿಧಾನ ಇವತ್ತು ಹೇಳ್ಕೊಡ್ತಿನಿ. ಅದೇನಂದ್ರೆ ಕಡಲೆ ಸ್ಯಾಂಡ್‌ವಿಚ್‌! ಇದನ್ನು ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

    ಬೇಕಾಗುವ ಪದಾರ್ಥಗಳು
    ಬೇಯಿಸಿದ ಕಡಲೆ – 1 ಕಪ್‌
    ಕತ್ತರಿಸಿದ ಈರುಳ್ಳಿ – ½ ಕಪ್‌
    ಕತ್ತರಿಸಿದ ಕ್ಯಾಪ್ಸಿಕಂ – ½ ಕಪ್
    ಬ್ರೆಡ್ – 4
    ಚನಾ ಮಸಾಲ – ½ ಟೀಸ್ಪೂನ್
    ಕೊತ್ತಂಬರಿ ಪುಡಿ – ½ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಬೆಣ್ಣೆ – 1 ಟೀ ಸ್ಪೂನ್

    ಮಾಡುವ ವಿಧಾನ
    ಮೊದಲು ಬಾಣಲೆಯಲ್ಲಿ ಬೆಣ್ಣೆ ಹಾಕಿ ಬಿಸಿ ಮಾಡಿ, ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಮ್ ಮತ್ತು ಬೇಯಿಸಿದ ಕಡಲೆ ಸೇರಿಸಿ‌, ಈರುಳ್ಳಿ ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಬೇಕು. ಇದಾದ ಬಳಿಕ ಚನಾ ಮಸಾಲ, ಧನಿಯಾ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಬೇಕು.

    ಬಳಿಕ ಒಂದು ಬ್ರೆಡ್‌ಗೆ ಗ್ರೀನ್ ಚಟ್ನಿ ಹಚ್ಚಬೇಕು. ಬಳಿಕ ಎರಡು ಬ್ರೆಡ್‌ ನಡುವೆ ಮೊದಲೇ ತಯಾರಿಸಿಟ್ಟಿದ್ದ ಮಸಾಲೆಯನ್ನು ಸೇರಿಸಿ, ಎರಡೂ ಬದಿಗಳಲ್ಲಿ ಬೆಣ್ಣೆ ಹಚ್ಚಿ ಮತ್ತು 3-4 ನಿಮಿಷಗಳ ಕಾಲ ಟೋಸ್ಟರ್‌ನಲ್ಲಿ ಇಡಬೇಕು. ಈಗ ರುಚಿಯಾದ ಸ್ಯಾಂಡ್‌ವಿಚ್‌ ರೆಡಿ! ಇದನ್ನೂ ಮಳೆಬರುವಾಗ ಸವಿಯುತ್ತಿದ್ದರೆ ಅದರ ಮಜಾವೇ ಬೇರೆ!

  • ಮನೆಯಲ್ಲೇ ‘ಬೋಟಿ ಗೊಜ್ಜು’ ಮಾಡಿ ಬಾಯಿ ಚಪ್ಪರಿಸಿ

    ಮನೆಯಲ್ಲೇ ‘ಬೋಟಿ ಗೊಜ್ಜು’ ಮಾಡಿ ಬಾಯಿ ಚಪ್ಪರಿಸಿ

    ನಾನ್ ವೆಜ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಜನರು ನೆಚ್ಚಿನ ಆಹಾರ ಸವಿಯಲು ಪ್ರತಿಷ್ಠಿಯ ಹೋಟೆಲ್‍ಗಳನ್ನೇ ಹುಡುಕಿಕೊಂಡು ಹೋಗ್ತಾರೆ. ಆದ್ರೆ ಇನ್ಮುಂದೆ ಹಾಗೇ ಮಾಡಬೇಕಾದ್ದೇ ಇಲ್ಲ. ವಿವಿಧ ಬಗೆಯ ಮಾಂಸಾಹಾರ ಖಾದ್ಯಗಳನ್ನು ಸುಲಭವಾಗಿ ತಯಾರಿಸಿ ಮನೆಯಲ್ಲಿಯೇ ಸವಿಯಬಹುದಾಗಿದೆ. ಅದರಲ್ಲಿಯೂ ಬೋಟಿ ಗೊಜ್ಜು ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ. ಹೆಸರು ಹೇಳ್ತಿದ್ದಂತೆ ಬಾಯಲ್ಲಿ ನೀರೂರಿಸುತ್ತದೆ. ಇಂತಹ ಮಿಲ್ಟ್ರಿ ಹೋಟೆಲ್‍ಗಳ ಮೆನುವಿನಲ್ಲಿ ಕಾಣ ಸಿಗುವ ಬೋಟಿ ಗೊಜ್ಜನ್ನು ಈಗ ಮನೆಯಲ್ಲಿಯೇ ಮಾಡಿ ಸವಿಯಬಹುದಾಗಿದೆ. ಅದನ್ನು ಮಾಡೋ ವಿಧಾನ ಹೇಗೆ ಎಂಬ ಚುಟುಕು ಮಾಹಿತಿ ಇಲ್ಲಿದೆ.

    ಬೇಕಾಗಿರುವ ವಿಧಾನ:
    * ಬೋಟಿ – 500 ಗ್ರಾಂ
    * ತುರಿದ ತೆಂಗಿನಕಾಯಿ – 1 ಚಮಚ
    * ಕೊತ್ತಂಬರಿ ಪುಡಿ – 1 ಚಮಚ
    * ಅರಿಶಿನ ಪುಡಿ – ಅರ್ಧ ಚಮಚ
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    * ಗರಂ ಮಸಾಲಾ ಪುಡಿ – 2 ಚಮಚ
    * ಎಣ್ಣೆ – 1 ಚಮಚ
    * ಕೆಂಪು ಮೆಣಸಿನ ಪುಡಿ – 1 ಚಮಚ
    * ಕಟ್ ಮಾಡಿದ ಕೊತ್ತಂಬರಿ ಸೊಪ್ಪು – 1 ಕಪ್
    * ಕಟ್ ಮಾಡಿದ ಈರುಳ್ಳಿ – 1 ಕಪ್
    * ಲವಂಗ – 2
    * ಏಲಕ್ಕಿ – 1
    * ಚಿಕ್ಕ ಗಾತ್ರದ ದಾಲ್ಚಿನ್ನಿ – 1
    * ಅಗತ್ಯವಿರುವಷ್ಟು ನೀರು
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಬಿಸಿ ನೀರಿನಲ್ಲಿ ಬೋಟಿ ಸ್ವಚ್ಛಗೊಳಿಸಿ, ಕಟ್ ಮಾಡಿ. ಪಕ್ಕಕ್ಕೆ ಇಡಿ.
    * ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ನಂತರ ಅದಕ್ಕೆ ಲವಂಗ, ದಾಲ್ಚಿನ್ನಿ, ಏಲಕ್ಕಿ ಬೀಜಗಳನ್ನು ಸೇರಿಸಿ ಫ್ರೈ ಮಾಡಿ. ನಂತರ ಕಟ್ ಮಾಡಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಬೋಟಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ನೀರು ಹಾಕಿ ಬೇಯಿಸಿ.
    * ಬೋಟಿ ಗೊಜ್ಜುಗೆ ಕೊತ್ತಂಬರಿ ಪುಡಿ, ತೆಂಗಿನಕಾಯಿ ತುರಿ, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    * ನಂತರ ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ ಕುದಿಸಿ.
    * ಇದನ್ನು ಬಿಸಿ ಬಿಸಿ ಅನ್ನ, ಚಪಾತಿ, ರೋಟಿಯೊಂದಿಗೆ ಬಡಿಸಿ.

  • ನಾಲಿಗೆ ರುಚಿ ಹೆಚ್ಚಿಸುವ ಸ್ವೀಟ್ ಕಾರ್ನ್ ಫ್ರೈಡ್ ರೈಸ್

    ನಾಲಿಗೆ ರುಚಿ ಹೆಚ್ಚಿಸುವ ಸ್ವೀಟ್ ಕಾರ್ನ್ ಫ್ರೈಡ್ ರೈಸ್

    ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರವಾಗಿದೆ. ನೀವು ಫ್ರೈಡ್ ರೈಸ್ ಇಷ್ಟಪಡುವುದಾದರೆ ಹಲವಾರು ರುಚಿಯಲ್ಲಿ ಸವಿಯಬಹುದು. ವೆಜ್ ಫ್ರೈಡ್ ರೈಸ್, ಎಗ್, ನಾನ್‍ವೆಜ್ ಫ್ರೈಡ್ ರೈಸ್ ಹೀಗೆ ನಾನಾ ರುಚಿಯಲ್ಲಿ ಮಾಡಿ ಸವಿಯಬಹುದು. ಇಲ್ಲಿ ನಾವು ಸ್ವೀಟ್ ಕಾರ್ನ್ ಫ್ರೈಡ್ ರೈಸ್ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.  ನೀವು ಮನೆಯಲ್ಲಿ ಟ್ರೈ ಮಾಡಿ, ಖಂಡಿತವಾಗಿಯೂ ನಿಮ್ಮ ಮನೆ ಮಂದಿಗೆ ಇಷ್ಟವಾಗುತ್ತದೆ.

     

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ-1 ಕಪ್
    * ಸ್ವೀಟ್ ಕಾರ್ನ್ 1 ಕಪ್
    * ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಸೋಯಾ ಸಾಸ್ 1 ಚಮಚ
    * ವಿನೆಗರ್ 1 ಚಮಚ
    * ಚಿಲ್ಲಿ ಸಾಸ್ 1 ಚಮಚ
    * ಸ್ಪ್ರಿಂಗ್‍ಆನಿಯನ್ 2 ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್
    * ರುಚಿಗೆ ತಕ್ಕ ಉಪ್ಪು
    * ಹಸಿ ಮೆಣಸಿನಕಾಯಿ- 2
    *ಈರುಳ್ಳಿ-1

     

    ಮಾಡುವ ವಿಧಾನ:
    * ಅಕ್ಕಿಯನ್ನು ನೀರಿನಲ್ಲಿ 10 ನಿಮಿಷ ನೆನೆಹಾಕಿ. ನಂತರ ಬೇಯಿಸಿ.
    * ಸ್ವೀಟ್ ಕಾರ್ನ್ ಬೇಯಿಸಿ ಇಡಿ.
    * ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
    * ಈಗ ಸ್ವೀಟ್ ಕಾರ್ನ್, ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್ ಹಾಕಿ ಚೆನ್ನಾಗಿ ಬೇಯಿಸಬೇಕು.
    * ಈಗ ರುಚಿಗೆ ತಕ್ಕ ಉಪ್ಪು, ಬೇಯಿಸಿದ ಅನ್ನ ಹಾಕಿ ಮಿಶ್ರ ಮಾಡಿದರೆ ಸ್ವೀಟ್ ಕಾರ್ನ್ ಫ್ರೈಡ್ ರೈಸ್ ಸಿದ್ಧವಾಗುತ್ತದೆ.

     

  • ನಾನ್‌ ವೆಜ್‌ ಮಾಡ್ಬೇಕಾ? ಸುಲಭವಾಗಿ ಮಾಡಿ ಚಿಕನ್‌ ಪಾಸ್ತಾ….

    ನಾನ್‌ ವೆಜ್‌ ಮಾಡ್ಬೇಕಾ? ಸುಲಭವಾಗಿ ಮಾಡಿ ಚಿಕನ್‌ ಪಾಸ್ತಾ….

    ಸಾಮಾನ್ಯವಾಗಿ ಎಲ್ಲರೂ ಪಾಸ್ತಾ, ವೈಟ್‌ ಪಾಸ್ತಾ ತಿಂದಿರುತ್ತಾರೆ. ಮಕ್ಕಳಿಗಂತೂ ಪಾಸ್ತಾ ಹೇಳಿ ಮಾಡಿಸಿದ ಸ್ನ್ಯಾಕ್ಸ್‌ ಅಂತಲೇ ಹೇಳಬಹುದು. ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಅದಕ್ಕೆ ಈ ಬಾರಿ ವಿಭಿನ್ನವಾಗಿ ಚಿಕನ್‌ ಪಾಸ್ತಾ ಮಾಡಿಕೊಡಿ.

    ಬೇಕಾಗುವ ಸಾಮಗ್ರಿಗಳು:
    ಎಣ್ಣೆ
    ಬೆಳ್ಳುಳ್ಳಿ
    ಈರುಳ್ಳಿ
    ಚಿಕನ್‌
    ಧನಿಯಾ ಪುಡಿ
    ಜೀರಿಗೆ ಪುಡಿ
    ಗರಮ್‌ ಮಸಾಲಾ
    ಕೆಂಪು ಮೆಣಸಿನಕಾಯಿ ಪುಡಿ
    ಹಸಿರು ಹಾಗೂ ಕೆಂಪು ದಪ್ಪ ಮೆಣಸಿನಕಾಯಿ
    ಉಪ್ಪು
    ಟೊಮ್ಯಾಟೋ ಕೆಚಪ್‌

    ಮಾಡುವ ವಿಧಾನ:
    ಮೊದಲು ಒಂದು ಬಾಣಲಿಗೆ ಎಣ್ಣೆ ಹಾಕಿ, ಚಿಕ್ಕದಾಗಿ ಕಚ್ಚಿದ ಬೆಳ್ಳುಳ್ಳಿ ಹಾಕಿ. ನಂತರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಅದಕ್ಕೆ ಕತ್ತರಿಸಿಟ್ಟ ಚಿಕನ್‌ ಹಾಕಿ. ನಂತರ ಚೆನ್ನಾಗಿ ಹುರಿದು ಅದಕ್ಕೆ ಧನಿಯಾ ಪುಡಿ, ಜೀರಿಗೆ ಪುಡಿ, ಗರಮ್‌ ಮಸಾಲಾ, ಕೆಂಪು ಮೆಣಸಿನಕಾಯಿ ಪುಡಿ, ಬಳಿಕ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ೫ ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ.

    ನಂತರ ಚಿಕ್ಕದಾಗಿ ಹೆಚ್ಚಿಕೊಂಡ ಹಸಿರು ಹಾಗೂ ಕೆಂಪು ದಪ್ಪ ಮೆಣಸಿನಕಾಯಿಯನ್ನು ಹಾಕಿ. ಚೆನ್ನಾಗಿ ಕಲಸಿ. ನಂತರ ಬೇಯಿಸಿಟ್ಟ ಪಾಸ್ತಾವನ್ನು ಹಾಕಿ. ಕೊನೆಗೆ ಚೆನ್ನಾಗಿ ಕಲಸಿ ಅದಕ್ಕೆ ಟೊಮ್ಯಾಟೋ ಕೆಚಪ್‌ ಹಾಕಿದರೆ ಬಿಸಿಬಿಸಿಯಾದ ಚಿಕನ್‌ ಪಾಸ್ತಾ ತಯಾರಾಗುತ್ತದೆ.

  • ರುಚಿಕರ ಹಾಗೂ ಆರೋಗ್ಯಕರ ಬೀಟ್‌ರೂಟ್ ಸೂಪ್

    ರುಚಿಕರ ಹಾಗೂ ಆರೋಗ್ಯಕರ ಬೀಟ್‌ರೂಟ್ ಸೂಪ್

    ಬೀಟ್‌ರೂಟ್‌ಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಸಲಾಡ್ ರೂಪದಲ್ಲಿ, ಜ್ಯೂಸ್, ಗೊಜ್ಜು, ಸಾಂಬಾರು, ಪಲ್ಯ ಹೀಗೆ ನಾನಾ ರೂಪದಲ್ಲಿ ನಾವು ಬೀಟ್‌ರೂಟ್ ಸೇವನೆ ಮಾಡುತ್ತೇವೆ. ಬೀಟ್‌ರೂಟ್‌ಗಳಲ್ಲಿ ವಿಟಮಿನ್‌ಗಳು ಹಾಗೂ ಖನಿಜಾಂಶಗಳು ಹೇರಳವಾಗಿದ್ದು, ಅತ್ಯುತ್ತಮ ಆಹಾರ ಮೂಲ ಎನಿಸಿಕೊಂಡಿದೆ. ಪ್ರತಿನಿತ್ಯ ಬೀಟ್‌ರೂಟ್ ಸೇವನೆಯಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ರುಚಿಕರ ಹಾಗೂ ಆರೋಗ್ಯಕರ ಬೀಟ್‌ರೂಟ್ ಸೂಪ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಕೂಡ ಈ ರೆಸಿಪಿಯನ್ನು ಒಂದು ಬಾರಿ ಟ್ರೈ ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    ಬೀಟ್‌ರೂಟ್ – 1
    ಬೆಣ್ಣೆ – 1 ಚಮಚ
    ಬಿರಿಯಾನಿ ಎಲೆ – 1
    ಮೆಣಸು – ಒಂದು ಚಮಚ
    ಶುಂಠಿ- ಒಂದು ಸಣ್ಣ ತುಂಡು
    ಬೆಳ್ಳುಳ್ಳಿ – 3 ಎಸಳು
    ಈರುಳ್ಳಿ- 1
    ಕ್ಯಾರೆಟ್- 1
    ಕಾಳು ಮೆಣಸಿನ ಪುಡಿ- ಸ್ವಲ್ಪ
    ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಈರುಳ್ಳಿ ಮತ್ತು ಕ್ಯಾರೆಟ್ ಅನ್ನು ತೊಳೆದು ಸಣ್ಣಗೆ ಕತ್ತರಿಸಿ.
    * ನಂತರ ಬೀಟ್‌ರೂಟ್ ಸಿಪ್ಪೆ ತೆಗೆದು ತೆಳುವಾದ ತುಂಡುಗಳಾಗಿ ಹೆಚ್ಚಿಕೊಳ್ಳಿ.
    * ಈಗ ಒಲೆಯ ಮೇಲೆ ಪ್ಯಾನ್ ಇಟ್ಟು ಬೆಣ್ಣೆಯನ್ನು ಹಾಕಿ. ಬೆಣ್ಣೆ ಕರಗಿದ ನಂತರ ಬಿರಿಯಾನಿ ಎಲೆ, ಕಾಳು ಮೆಣಸು, ಶುಂಠಿ, ಬೆಳ್ಳುಳ್ಳಿ ಚೆನ್ನಾಗಿ ಹಾಕಿ ಫ್ರೈ ಮಾಡಿ.
    * ಬೆಳ್ಳುಳ್ಳಿ ಸ್ವಲ್ಪ ಹುರಿದ ನಂತರ ಈರುಳ್ಳಿ ಮತ್ತು ಕ್ಯಾರೆಟ್ ತುಂಡುಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ.
    * ಬಳಿಕ ಹೆಚ್ಚಿದ ಬೀಟ್‌ರೂಟ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿಕೊಳ್ಳಿ.
    * ಈಗ ಒಂದು ಕಪ್ ನೀರು ಹಾಕಿ ಮತ್ತೆ ಮುಚ್ಚಿ, ಸ್ವಲ್ಪ ಸಮಯ ಕುದಿಸಿ. ಈಗ ಸ್ಟವ್ ಆಫ್ ಮಾಡಿ ಮತ್ತು ಈ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ.
    * ನಂತರ ಬಿರಿಯಾನಿ ಎಲೆ ತೆಗೆದು ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ, ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ನೀರು ಸೇರಿಸಿ.
    * ಈಗ ಈ ಮಿಶ್ರಣವನ್ನು ಪ್ಯಾನ್‌ನಲ್ಲಿ ಒಂದರಿಂದ ಮೂರು ನಿಮಿಷಗಳ ಕಾಲ ಕುದಿಸಿ.
    * ನಂತರ ಸ್ವಲ್ಪ ಉಪ್ಪು, ಚಿಟಿಕೆ ಕಾಳುಮೆಣಸಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ರುಚಿಕರ ಹಾಗೂ ಆರೋಗ್ಯಕರವಾದ ಬೀಟ್‌ರೂಟ್ ಸೂಪ್ ಸವಿಯಲು ಸಿದ್ಧ.