Tag: recipe

  • ದಾಹಕ್ಕೆ ಸವಿಯಿರಿ ಕೂಲ್ ಕೂಲ್ ಕಲ್ಲಂಗಡಿ ಮೊಜಿಟೊ

    ದಾಹಕ್ಕೆ ಸವಿಯಿರಿ ಕೂಲ್ ಕೂಲ್ ಕಲ್ಲಂಗಡಿ ಮೊಜಿಟೊ

    ಮುಂಗಾರು ಮುನ್ನದ ದಿನಗಳಾಗಿರೋ ಈಗ ತಾಪ ಹೆಚ್ಚು. ಅಲ್ಲಲ್ಲಿ ಮಳೆ ಬಂದು ಹೋದರೂ ಶೆಕೆ ಇದ್ದೇ ಇದೆ. ಈ ಸಂದರ್ಭದಲ್ಲಿಯೂ ದಾಹಕ್ಕೆ ಏನಾದರೂ ಕೂಲ್ ಕೂಲ್ ಬೇಕು ಎನಿಸುತ್ತದೆ. ಹಾಗಿದ್ದರೆ ಕಲ್ಲಂಗಡಿ ಮೊಜಿಟೊ ನೀವೊಮ್ಮೆ ಟ್ರೈ ಮಾಡಬಹುದು. ದಾಹ ತಣಿಸೋ ಕಲ್ಲಂಗಡಿ ಮೊಜಿಟೊ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಸೋಡಾ – ಅರ್ಧ ಲೀಟರ್
    ಸಣ್ಣಗೆ ಹೆಚ್ಚಿದ ಕಲ್ಲಂಗಡಿ ಹಣ್ಣು – 1 ಕಪ್
    ತೆಳ್ಳಗೆ ಕತ್ತರಿಸಿದ ನಿಂಬೆ ಹಣ್ಣು – 1
    ಪುದೀನಾ ಸೊಪ್ಪು – 5-6 ಚಿಗುರು
    ಉಪ್ಪು – ರುಚಿಗೆ ತಕ್ಕಷ್ಟು
    ಸಕ್ಕರೆ – 1 ಟೀಸ್ಪೂನ್
    ಪುಡಿ ಮಾಡಿದ ಐಸ್ – 1 ಕಪ್ ಇದನ್ನೂ ಓದಿ: ಹಠ ಮಾಡೋ ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಪಪ್ಪಾಯ ಐಸ್‌ಕ್ರೀಮ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಸಣ್ಣ ಬೌಲ್ ತೆಗೆದುಕೊಂಡು ಅದರಲ್ಲಿ ಪುದೀನ ಚಿಗುರು ಹಾಗೂ ನಿಂಬೆಯನ್ನು ಹಾಕಿ ಪುಡಿ ಮಾಡಿಕೊಳ್ಳಿ.
    * ಸಕ್ಕರೆಯನ್ನು ಕಾಲು ಕಪ್ ನೀರಿಗೆ ಬೆರೆಸಿ ಕರಗಿಸಿಕೊಳ್ಳಿ.
    * ಈಗ ಒಂದು ಗ್ಲಾಸ್‌ಗೆ ಕಲ್ಲಂಗಡಿ ತುಂಡುಗಳನ್ನು ಹಾಕಿ, ಅದಕ್ಕೆ ಪುಡಿ ಮಾಡಿದ ಪುದೀನಾ, ನಿಂಬೆ ಹಣ್ಣು ಹಾಗೂ ಕರಗಿಸಿದ ಸಕ್ಕರೆಯನ್ನು ಸೇರಿಸಿ.
    * ಬಳಿಕ ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ಮಿಶ್ರಣ ಮಾಡಿ.
    * ಈಗ ಗ್ಲಾಸ್‌ಗೆ ಸೋಡಾ ಸುರಿಯಿರಿ. ತಣ್ಣಗೆ ಸವಿಯಲು ಬಯಸುತ್ತೀರಾದರೆ ಪುಡಿ ಮಾಡಿದ ಐಸ್ ಅನ್ನು ಸೇರಿಸಿ.
    * ಕಲ್ಲಂಗಡಿ ಮೊಜಿಟೊ ತಯಾರಾಗಿದ್ದು, ಇದನ್ನು ತಕ್ಷಣವೇ ಸವಿದು ಚಿಲ್ ಆಗಿ. ಇದನ್ನೂ ಓದಿ: ಬಿಸಿಲಿನಿಂದ ಬಳಲಿದವರಿಗೆ ಪವರ್ ಕೊಡುತ್ತೆ ಈ ಮಿಲ್ಕ್‌ಶೇಕ್

  • ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ

    ಬಿರಿಯಾನಿಗೆ ಸೂಪರ್ ಸೈಡ್ ಡಿಶ್ – ಮಟನ್ ದಾಲ್ಚಾ ರೆಸಿಪಿ

    ರಾಯಿತಾ ಅಥವಾ ಕೂರ್ಮ ಇಲ್ಲದೇ ಹೋದರೆ ಬಿರಿಯಾನಿಯಲ್ಲಿ ಏನೋ ಮಿಸ್ಸಿಂಗ್ ಅಂತ ಯಾವಾಗಲೂ ಅನ್ನಿಸುತ್ತದೆ. ಬಿರಿಯಾನಿಯೊಂದಿಗೆ ಸವಿಯೋ ಮಟನ್ ದಾಲ್ಚಾ ನೀವು ಕೇಳಿದ್ದೀರಾ? ತಮಿಳುನಾಡು ಮುಖ್ಯವಾಗಿ ಕೊಯಮತ್ತೂರಿನಲ್ಲಿ ಈ ರೆಸಿಪಿ ತುಂಬಾ ಫೇಮಸ್. ಈ ಬಾರಿ ಬಿರಿಯಾನಿಯೊಂದಿಗೆ ರಾಯಿತಾ ಅಥವಾ ಚಿಕನ್ ಕೂರ್ಮ ಸವಿಯೋ ಬದಲು ದಾಲ್ಚಾವನ್ನು ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಬೇಯಿಸಲು:
    ಮೂಳೆ ಸಹಿತ ಮಟನ್ – 100 ಗ್ರಾಂ
    ಕಡಲೆ ಬೇಳೆ – ಕಾಲು ಕಪ್
    ತೊಗರಿ ಬೇಳೆ – ಕಾಲು ಕಪ್
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ನೀರು – 2 ಕಪ್
    ಪೇಸ್ಟ್ ತಯಾರಿಸಲು:
    ಬೆಳ್ಳುಳ್ಳಿ – 6
    ಶುಂಠಿ – 1 ಇಂಚು
    ಈರುಳ್ಳಿ – 1
    ನೀರು – ಕಾಲು ಕಪ್

    ಇತರ ಪದಾರ್ಥಗಳು:
    ಎಣ್ಣೆ – 2 ಟೀಸ್ಪೂನ್
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ಕರಿಬೇವಿನ ಎಲೆ – 2 ಚಿಗುರುಗಳು
    ಹೆಚ್ಚಿದ ಟೊಮೆಟೊ – 1
    ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
    ಗರಂ ಮಸಾಲಾ ಪುಡಿ – 1 ಟೀಸ್ಪೂನ್
    ಹುಣಸೆಹಣ್ಣಿನ ಪೇಸ್ಟ್ – 2 ಟೀಸ್ಪೂನ್
    ಉಪ್ಪು – 1 ಟೀಸ್ಪೂನ್
    ಹೆಚ್ಚಿದ ಸಣ್ಣ ಬದನೆ – 5
    ಹೆಚ್ಚಿದ ಹಸಿ ಮಾವಿನಕಾಯಿ – ಅರ್ಧ
    ಹೆಚ್ಚಿದ ಬಾಳೆ ಕಾಯಿ – ಅರ್ಧ
    ತೆಂಗಿನ ಹಾಲು – ಅರ್ಧ ಕಪ್ ಇದನ್ನೂ ಓದಿ: ಫಿಶ್ ಫ್ರೈಗೆ ಟ್ವಿಸ್ಟ್ – ಪೆಪ್ಪರ್ ಫ್ರೈ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಪ್ರೆಶರ್ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಮಟನ್ ತುಂಡುಗಳನ್ನು ಹಾಕಿ, ತೊಗರಿ ಬೇಳೆ, ಕಡಲೆ ಬೇಳೆ, 2 ಕಪ್ ನೀರು ಹಾಕಿ 5 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
    * ಬಳಿಕ ಉರಿಯನ್ನು ಆಫ್ ಮಾಡಿ, ಒತ್ತಡ ತಾನಾಗೇ ಬಿಡುಗಡೆಯಾಗುವವರೆಗೆ ಕಾಯಿರಿ.
    * ಈ ನಡುವೆ ಮಿಕ್ಸರ್ ಜಾರ್‌ನಲ್ಲಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಹಾಗೂ ಕಾಲು ಕಪ್ ನೀರು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
    * ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಈರುಳ್ಳಿ, ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ, ಈರುಳ್ಳಿ ಮೃದುವಾಗುವವರೆಗೆ 3-4 ನಿಮಿಷಗಳ ಕಾಲ ಫ್ರೈ ಮಾಡಿ.
    * ಬಳಿಕ ಟೊಮೆಟೊ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದೆರಡು ನಿಮಿಷ ಫ್ರೈ ಮಾಡಿ.
    * ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಹುಣಸೆಹಣ್ಣಿನ ಪೇಸ್ಟ್ ಮತ್ತು ಉಪ್ಪನ್ನು ಸೇರಿಸಿ ಒಂದು ನಿಮಿಷ ಫ್ರೈ ಮಾಡಿ.
    * ಬದನೆ, ಮಾವು, ಬಾಳೆ ಕಾಯಿ ಹಾಗೂ ಸ್ವಲ್ಪ ನೀರು ಸೇರಿಸಿ ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಕುದಿಸಿಕೊಳ್ಳಿ.
    * ಬೇಯಿಸಿದ ಮಟನ್ ಮಿಶ್ರಣಕ್ಕೆ ಹುರಿದ ಮಿಶ್ರಣ ಸೇರಿಸಿ ತೆಂಗಿನ ಹಾಲು ಹಾಕಿ ಒಂದೆರಡು ನಿಮಿಷಗಳ ಕಾಲ ಕುದಿಯಲು ಬಿಡಿ.
    * ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಟನ್ ದಾಲ್ಚಾ ತಯಾರಾಗುತ್ತದೆ. ಇದನ್ನು ಬಿರಿಯಾನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ವಯಸ್ಸಿನ ಭೇದವಿಲ್ಲ – ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಎಗ್ ಟಿಕ್ಕಾ ಕಬಾಬ್

  • ಕೊಲೆಸ್ಟ್ರಾಲ್, ಮಧುಮೇಹ ಉಳ್ಳವರಿಗೆ ಬೆಸ್ಟ್ ಅಡುಗೆ – ಗೋಧಿ ಬಳಸಿ ಮಾಡಿ ತರಕಾರಿ ಕಿಚಡಿ

    ಕೊಲೆಸ್ಟ್ರಾಲ್, ಮಧುಮೇಹ ಉಳ್ಳವರಿಗೆ ಬೆಸ್ಟ್ ಅಡುಗೆ – ಗೋಧಿ ಬಳಸಿ ಮಾಡಿ ತರಕಾರಿ ಕಿಚಡಿ

    ಕಿಚಡಿ ಯಾವಾಗಲೂ ಹೋಮ್ಲಿ ಅನುಭವ ನೀಡೋ ಅಡುಗೆ. ಬೆಳಗ್ಗಿನ ತಿಂಡಿಯಾಗಿ ಕಿಚಡಿ ಸವಿದರೆ ದಿನ ಪೂರ್ತಿ ಉತ್ಸಾಹದಿಂದಿರಲು ಇದು ಸಹಾಯ ಮಾಡುತ್ತದೆ. ನಾವಿಂದು ತಿಳಿಸಿಕೊಡುತ್ತಿರುವ ಗೋಧಿ ಹಾಗೂ ತರಕಾರಿ ಕಿಚಡಿಯೂ ಹಾಗೇ. ಇದನ್ನು ತಕ್ಷಣ ಹಾಗೂ ಸುಲಭವಾಗಿ ಮಾಡಬಹುದು. ಆದರೂ ರುಚಿ ಹಾಗೂ ಪೌಷ್ಟಿಕಾಂಶಕ್ಕೆ ಯಾವುದೇ ಕೊರತೆಯಿಲ್ಲ. ಕಿಚಡಿ ಮಾಡಲು ಅಕ್ಕಿ ಬದಲು ಇಲ್ಲಿ ಗೋಧಿ ಬಳಸುತ್ತಿರುವುದರಿಂದ ಮಧುಮೇಹ ಹಾಗೂ ಕೊಲೆಸ್ಟ್ರಾಲ್ ಇರುವವರಿಗೆ ಇದು ಸೂಕ್ತವಾಗಿದೆ. ಗೋಧಿ ಬಳಸಿ ತರಕಾರಿಯ ಕಿಚಡಿ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಗೋಧಿ – ಅರ್ಧ ಕಪ್ (6 ಗಂಟೆ ನೆನೆಸಿಡಿ)
    ಹೆಸರು ಬೇಳೆ – ಅರ್ಧ ಕಪ್ (20 ನಿಮಿಷ ನೆನೆಸಿಡಿ)
    ಎಣ್ಣೆ – 1 ಟೀಸ್ಪೂನ್
    ಕಾಳು ಮೆಣಸು – 2-3
    ಲವಂಗ – 2
    ದಾಲ್ಚಿನ್ನಿ ಚಕ್ಕೆ – 1 ಇಂಚು
    ಜೀರಿಗೆ – 1 ಟೀಸ್ಪೂನ್
    ಹಿಂಗ್ – ಚಿಟಿಕೆ
    ತೆಳ್ಳಗೆ ಕತ್ತರಿಸಿದ ಈರುಳ್ಳಿ – ಕಾಲು ಕಪ್
    ಸಣ್ಣಗೆ ಹೆಚ್ಚಿದ ಮಿಶ್ರ ತರಕಾರಿಗಳು – 1 ಕಪ್
    ಉಪ್ಪು – ರುಚಿಗೆ ತಕ್ಕಷ್ಟು
    ಅರಿಶಿನ – ಅರ್ಧ ಟೀಸ್ಪೂನ್
    ಮೆಣಸಿನ ಪುಡಿ – ಒಂದೂವರೆ ಟೀಸ್ಪೂನ್
    ಕೊತ್ತಂಬರಿ, ಜೀರಿಗೆ ಪುಡಿ – ಒಂದೂವರೆ ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್ ಇದನ್ನೂ ಓದಿ: ನೀವೊಮ್ಮೆ ಟ್ರೈ ಮಾಡ್ಲೇ ಬೇಕು ಪೋಡಿ ಇಡ್ಲಿ

    ಮಾಡುವ ವಿಧಾನ:
    * ಮೊದಲಿಗೆ ನೆನೆಸಿಟ್ಟಿದ್ದ ಗೋಧಿಯನ್ನು ಬ್ಲೆಂಡರ್‌ಗೆ ಹಾಕಿ ಅರ್ಧ ಕಪ್ ನೀರು ಸೇರಿಸಿ ಒರಟಾಗಿ ರುಬ್ಬಿಕೊಳ್ಳಿ. ಬಳಿಕ ಅದನ್ನು ಪಕ್ಕಕ್ಕಿಡಿ.
    * ಪ್ರೆಶರ್ ಕುಕ್ಕರ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಕಾಳುಮೆಣಸು, ಲವಂಗ, ದಾಲ್ಚಿನ್ನಿ ಚಕ್ಕೆ ಹಾಗೂ ಜೀರಿಗೆ ಹಾಕಿ ಹುರಿದುಕೊಳ್ಳಿ.
    * ಜೀರಿಗೆ ಸಿಡಿದ ಬಳಿಕ ಹಿಂಗ್ ಹಾಕಿ ಮಧ್ಯಮ ಉರಿಯಲ್ಲಿ ಅರ್ಧ ನಿಮಿಷ ಹುರಿದುಕೊಳ್ಳಿ.
    * ಬಳಿಕ ಈರುಳ್ಳಿ ಸೇರಿಸಿ 1-2 ನಿಮಿಷ ಬೇಯಿಸಿಕೊಳ್ಳಿ.
    * ಈಗ ಹೆಚ್ಚಿದ ಮಿಶ್ರ ತರಕಾರಿಗಳನ್ನು ಹಾಕಿ ಮತ್ತೆ 2-3 ನಿಮಿಷ ಫ್ರೈ ಮಾಡಿ.
    * ಈಗ ಒರಟಾಗಿ ರುಬ್ಬಿಕೊಂಡಿದ್ದ ಗೋಧಿ ಹಾಗೂ ನೆನೆಸಿಟ್ಟಿದ್ದ ಹೆಸರು ಬೇಳೆ ಸೇರಿಸಿ 1 ನಿಮಿಷ ಮಿಶ್ರಣ ಮಾಡಿ.
    * ಉಪ್ಪು, ಅರಿಶಿನ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಹಾಗೂ ಜೀರಿಗೆ ಪುಡಿ ಸೇರಿಸಿ, ಅದಕ್ಕೆ 3 ಕಪ್ ನೀರು ಹಾಕಿ ಮಿಶ್ರಣ ಮಾಡಿ.
    * ಕುಕ್ಕರ್ ಮುಚ್ಚಳ ಹಾಕಿ 3 ಸೀಟಿ ಬರುವವರೆಗೆ ಕಿಚಡಿಯನ್ನು ಬೇಯಿಸಿಕೊಳ್ಳಿ.
    * ಜಾಗರೂಕವಾಗಿ ಕುಕ್ಕರ್‌ನ ಮುಚ್ಚಳ ತೆಗೆದು, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಗೋಧಿ ಹಾಗೂ ತರಕಾರಿ ಕಿಚಡಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಫಿಶ್ ಫ್ರೈನಂತೆ ರುಚಿಕರ ಬಾಳೆಕಾಯಿ ರವಾ ಫ್ರೈ ಮಾಡಿ

  • ಹಠ ಮಾಡೋ ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಪಪ್ಪಾಯ ಐಸ್‌ಕ್ರೀಮ್

    ಹಠ ಮಾಡೋ ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಪಪ್ಪಾಯ ಐಸ್‌ಕ್ರೀಮ್

    ಮಕ್ಕಳು ಹಠ ಮಾಡುತ್ತಿದ್ದಾಗ ಅಥವಾ ತುಂಟಾಟ ಮಾಡುತ್ತಿದ್ದಾಗ ಐಸ್‌ಕ್ರೀಮ್ ಕೊಡಿಸುತ್ತೇನೆ ಎಂದರೆ ಸಾಕು ಸುಮ್ಮನಾಗಿಬಿಡುತ್ತಾರೆ. ಐಸ್‌ಕ್ರೀಮ್ ಚಿಕ್ಕವರನ್ನು ಮಾತ್ರವಲ್ಲದೇ ದೊಡ್ಡವರನ್ನೂ ಆಕರ್ಷಿಸುತ್ತದೆ. ಐಸ್‌ಕ್ರೀಮ್ ತಿನ್ನಬೇಕೆಂದರೆ ಅಂಗಡಿಗಳಿಗೆ ಹೋಗಿ ತರಬೇಕಾಗಿಲ್ಲ. ಇದನ್ನು ಮನೆಯಲ್ಲಿಯೇ ತಯಾರಿಸಬಹುದು. ಇವತ್ತು ಹೋಮ್‌ಮೇಡ್ ಪಪ್ಪಾಯ ಐಸ್‌ಕ್ರೀಮ್ ರೆಸಿಪಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಹಾಗಿದ್ದರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಟ್ರೈ ಮಾಡಿ ನೋಡಿ ಸ್ಪೈಸೀ ಸಿಹಿಗೆಣಸಿನ ವೆಡ್ಜಸ್

    ಬೇಕಾಗುವ ಸಾಮಗ್ರಿಗಳು:
    ಹೆಚ್ಚಿದ ಪಪ್ಪಾಯ ಹಣ್ಣು – 1 ಕಪ್
    ಕೊಬ್ಬಿನಾಂಶವಿರುವ ಹಾಲು – 1 ಲೀಟರ್
    ಕಂಡೆನ್ಸ್ಡ್ ಮಿಲ್ಕ್ – 20 ಎಂಎಲ್
    ಕಸ್ಟರ್ಡ್ ಪೌಡರ್ – 2 ಚಮಚ
    ಸಕ್ಕರೆ – 140 ಗ್ರಾಂ

    ಮಾಡುವ ವಿಧಾನ:

    • ಮೊದಲಿಗೆ ಪಪ್ಪಾಯ ಹಣ್ಣನ್ನು ಮಿಕ್ಸಿ ಜಾರಿಗೆ ಹಾಕಿ ಚನ್ನಾಗಿ ರುಬ್ಬಿಕೊಳ್ಳಿ.
    • ಬಳಿಕ ಒಂದು ಬೌಲಿಗೆ ಕಸ್ಟರ್ಡ್ ಪೌಡರ್ ಹಾಕಿ ಅದಕ್ಕೆ ಕಾಲು ಕಪ್ ಹಾಲನ್ನು ಹಾಕಿ ಮಿಕ್ಸ್ ಮಾಡಿ ಬದಿಗಿಡಿ.
    • ನಂತರ ಉಳಿದ ಹಾಲನ್ನು ಚನ್ನಾಗಿ ಕುದಿಸಿ. ಹಾಲಿನ ಪ್ರಮಾಣ ಅದರ ಅರ್ಧದಷ್ಟು ಕುಂದಬೇಕು. ಅಲ್ಲಿಯವರೆಗೆ ಕುದಿಸಿಕೊಳ್ಳಿ. ಈಗ ಅದಕ್ಕೆ ಮಿಕ್ಸ್ ಮಾಡಿಟ್ಟಿದ್ದ ಕಸ್ಟರ್ಡ್ ಪೌಡರ್ ಮಿಶ್ರಣವನ್ನು ಹಾಕಿಕೊಳ್ಳಿ. ನಂತರ ಅದಕ್ಕೆ ಸಕ್ಕರೆ ಸೇರಿಸಿಕೊಂಡು ಚನ್ನಾಗಿ ತಿರುವಿಕೊಳ್ಳಿ.
    • ಬಳಿಕ ಇದಕ್ಕೆ ರುಬ್ಬಿದ ಪಪ್ಪಾಯ ಮಿಶ್ರಣವನ್ನು ಸೇರಿಸಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಕಂಡೆನ್ಸ್ಡ್ ಮಿಲ್ಕ್ ಸೇರಿಸಿಕೊಂಡು ಒಂದು ಬಾರಿ ತಿರುವಿಕೊಳ್ಳಿ. ಬಳಿಕ ಗ್ಯಾಸ್ ಆಫ್ ಮಾಡಿ ಮಿಶ್ರಣವನ್ನು ತಣ್ಣಗಾಗಲು ಬಿಡಿ.
    • ನಂತರ ಈ ಮಿಶ್ರಣವನ್ನು ಗಾಳಿಯಾಡದ ಬಾಕ್ಸ್ಗೆ ಹಾಕಿ ಫ್ರೀಜರ್‌ನಲ್ಲಿ ಗಟ್ಟಿಯಾಗಲು ಇಡಿ. ಸುಮಾರು 6ರಿಂದ 7 ಗಂಟೆಯವರೆಗೆ ಫ್ರೀಜ್ ಮಾಡಿದ ಬಳಿಕ ಸರ್ವಿಂಗ್ ಬೌಲ್‌ಗೆ ಹಾಕಿ ಮಕ್ಕಳಿಗೆ ಸವಿಯಲು ಕೊಡಿ. ಇದನ್ನೂ ಓದಿ: ಚೈನೀಸ್ ಬಾದಾಮಿ ಕುಕೀಸ್ ಮಾಡೋಕೆ ತುಂಬಾ ಸಿಂಪಲ್

  • ಫಿಶ್ ಫ್ರೈಗೆ ಟ್ವಿಸ್ಟ್ – ಪೆಪ್ಪರ್ ಫ್ರೈ ಟ್ರೈ ಮಾಡಿ

    ಫಿಶ್ ಫ್ರೈಗೆ ಟ್ವಿಸ್ಟ್ – ಪೆಪ್ಪರ್ ಫ್ರೈ ಟ್ರೈ ಮಾಡಿ

    ಮೀನಿನ ಫ್ರೈ (Fish Fry) ಅನ್ನು ನೀವು ಹೆಚ್ಚಾಗಿ ಕೆಂಪು ಮಸಾಲೆ ಇಲ್ಲವೇ ರವಾ ಫ್ರೈ ಶೈಲಿಯಲ್ಲಿ ಮಾಡಿರುತ್ತೀರಿ. ಮೀನಿನ ಫ್ರೈ ಅನ್ನು ಯಾವಾಗಲೂ ಒಂದೇ ರೀತಿ ಮಾಡಿ ಬೋರ್ ಆಗಿದ್ದರೆ, ಫಿಶ್ ಫ್ರೈಗೆ ಡಿಫರೆಂಟ್ ಟ್ವಿಸ್ಟ್ ನೀಡಿ ಹೊಸ ರುಚಿಯನ್ನು ಆಸ್ವಾದಿಸಬೇಕೆಂದಿದ್ದರೆ ಪೆಪ್ಪರ್ ಫಿಶ್ ಫ್ರೈ ನೀವು ಟ್ರೈ ಮಾಡಲು ಒಂದು ಬೆಸ್ಟ್ ಆಪ್ಶನ್. ಪೆಪ್ಪರ್ ಫಿಶ್ ಫ್ರೈ (Pepper Fish Fry) ಮಾಡೋಕೆ ತುಂಬಾ ಸಿಂಪಲ್ ಹಾಗೂ ಕೆಲವೇ ಪದಾರ್ಥಗಳು ಸಾಕು. ನೀವೂ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ.

    ಬೇಕಾಗುವ ಪದಾರ್ಥಗಳು:
    ಮಧ್ಯಮ ಗಾತ್ರದ ಮೀನು ಅಥವಾ ಮೀನಿನ ತುಂಡುಗಳು – 5
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಕೊತ್ತಂಬರಿ ಸೊಪ್ಪು – 3 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನಿಂಬೆ ರಸ – 3 ಟೀಸ್ಪೂನ್
    ಎಣ್ಣೆ – ಹುರಿಯಲು ಬೇಕಾಗುವಷ್ಟು
    ಸೋಂಪು – 1 ಟೀಸ್ಪೂನ್
    ಕರಿಮೆಣಸು – ಒಂದೂವರೆ ಟೀಸ್ಪೂನ್ ಇದನ್ನೂ ಓದಿ: ವಯಸ್ಸಿನ ಭೇದವಿಲ್ಲ – ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಎಗ್ ಟಿಕ್ಕಾ ಕಬಾಬ್

    ಮಾಡುವ ವಿಧಾನ:
    * ಮೊದಲಿಗೆ ಒಂದು ಪ್ಯಾನ್‌ನಲ್ಲಿ ಸೋಂಪು ಹಾಗೂ ಕರಿಮೆಣಸನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.
    * ಅದು ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ.
    * ಬಳಿಕ ಅದಕ್ಕೆ ಕೊತ್ತಂಬರಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಹಾಗೂ ಉಪ್ಪು ಸೇರಿಸಿ ನಯವಾಗುವತನಕ ರುಬ್ಬಿ.
    * ಈ ಮಿಶ್ರಣವನ್ನು ಮೀನಿನ ತುಂಡುಗಳಿಗೆ ಚೆನ್ನಾಗಿ ಕೋಟ್ ಆಗುವಂತೆ ಲೇಪಿಸಿಕೊಳ್ಳಿ. ಮ್ಯಾರಿನೇಟ್ ಆಗಲು 30 ನಿಮಿಷ ಹಾಗೇ ಬಿಡಿ.
    * ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಮೀನುಗಳನ್ನು ಇರಿಸಿ, ಎರಡೂ ಬದಿ ಗರಿಗರಿಯಾಗುವವರೆಗೆ 4-5 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
    * ಇದೀಗ ಪೆಪ್ಪರ್ ಫಿಶ್ ಫ್ರೈ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಫಿಶ್ ಪಕೋಡಾ

  • ಟ್ರೈ ಮಾಡಿ ನೋಡಿ ಸ್ಪೈಸೀ ಸಿಹಿಗೆಣಸಿನ ವೆಡ್ಜಸ್

    ಟ್ರೈ ಮಾಡಿ ನೋಡಿ ಸ್ಪೈಸೀ ಸಿಹಿಗೆಣಸಿನ ವೆಡ್ಜಸ್

    ಸಿಹಿಗೆಣಸನ್ನು ಸಾಮಾನ್ಯವಾಗಿ ಎಲ್ಲರೂ ಸೇವಿಸುತ್ತಾರೆ. ಸಿಹಿಗೆಣಸಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದನ್ನು ನಮ್ಮ ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ನಮ್ಮ ಕಣ್ಣುಗಳ ದೃಷ್ಟಿ ವೃದ್ಧಿಸುವುದಲ್ಲದೇ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇವತ್ತು ಮಕ್ಕಳಿಗೆ ಇಷ್ಟವಾಗುವಂತಹ ಸಿಹಿಗೆಣಸಿನ ವೆಡ್ಜಸ್ ಯಾವ ರೀತಿ ಮಾಡಬಹುದು ಎಂಬುದನ್ನು ನಿಮಗೆ ತಿಳಿಸಿಕೊಡುತ್ತೇವೆ. ಹಾಗಿದ್ದರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಮಕ್ಕಳಿಗೆ ನೀಡಿ ಟೇಸ್ಟಿ, ಹೆಲ್ದಿ ಬೀಟ್ರೂಟ್ ಕಟ್ಲೆಟ್

    ಬೇಕಾಗುವ ಸಾಮಗ್ರಿಗಳು:
    ಸಿಹಿ ಗೆಣಸು- 3
    ಆಲಿವ್ ಆಯಿಲ್- 3 ಚಮಚ
    ಬೆಳ್ಳುಳ್ಳಿ ಪೌಡರ್- ಮುಕ್ಕಾಲು ಚಮಚ
    ಒರೆಗಾನೋ- ಒಂದೂವರೆ ಚಮಚ
    ಪೆಪ್ಪರ್ ಪೌಡರ್- ಕಾಲು ಚಮಚ
    ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    • ಮೊದಲಿಗೆ ಓವನ್ ಅನ್ನು 430 ಡಿಗ್ರಿಯಲ್ಲಿ ಮೊದಲೇ ಬಿಸಿಗೆ ಇಡಿ. ಬಳಿಕ ಸಿಹಿಗೆಣಸನ್ನು ಚೆನ್ನಾಗಿ ತೊಳೆದು ಅರ್ಧರ್ಧ ಕತ್ತರಿಸಿಕೊಂಡು ಫ್ರೆಂಚ್‌ಫ್ರೈಸ್ ರೀತಿಯಲ್ಲಿ ಉದ್ದುದ್ದ ಹೆಚ್ಚಿಕೊಳ್ಳಿ. ತುಂಬಾ ತೆಳ್ಳಗೆ ಹೆಚ್ಚಿಕೊಳ್ಳದೆ ಸ್ವಲ್ಪ ದಪ್ಪವಾಗಿಯೇ ಹೆಚ್ಚಿಕೊಳ್ಳಿ. ನಂತರ ಅದನ್ನು ಸ್ವಲ್ಪ ಆರಿಸಿ. ತೊಳೆದ ನೀರಿನ ಅಂಶ ಸಂಪೂರ್ಣವಾಗಿ ಹೋದರೆ ವೆಡ್ಜಸ್ ಗರಿಗರಿಯಾಗಿರುತ್ತದೆ.
    • ಬಳಿಕ ಸಿಹಿ ಗೆಣಸಿನ ತುಂಡುಗಳನ್ನು ಆಲಿವ್ ಆಯಿಲ್‌ನಲ್ಲಿ ಅದ್ದಿಕೊಳ್ಳಿ. ನಂತರ ಇದಕ್ಕೆ ಬೆಳ್ಳುಳ್ಳಿ ಪೌಡರ್, ಓರೆಗಾನೋ, ಪೆಪ್ಪರ್ ಪೌಡರ್ ಮತ್ತು ಉಪ್ಪನ್ನು ಸೇರಿಸಿಕೊಳ್ಳಿ. ಅಲ್ಲದೇ ನೀವು ಇಷ್ಟಪಡುವ ಯಾವುದೇ ಮಸಾಲೆಯನ್ನಾದರೂ ಸೇರಿಸಿಕೊಳ್ಳಿ. ಉದಾಹರಣೆಗೆ ಚಾಟ್ ಮಸಾಲ, ಗರಂ ಮಸಾಲ, ಮ್ಯಾಗಿ ಮಸಾಲ ಈ ರೀತಿ ನಿಮ್ಮ ಇಷ್ಟದ ಮಸಾಲೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
    • ನಂತರ ಒಂದು ಟ್ರೇಗೆ ಬೇಕಿಂಗ್ ಪೇಪರ್ ಹಾಕಿಕೊಂಡು ಅದರ ಮೇಲೆ ಮಸಾಲೆಗಳಿಂದ ತುಂಬಿದ ಸಿಹಿ ಗೆಣಸಿನ ತುಂಡುಗಳನ್ನು ಇರಿಸಿ. ಒಂದಕ್ಕೊಂದು ಅಂಟದಂತೆ ಸ್ವಲ್ಪ ದೂರ ದೂರ ಇರಿಸಿದರೆ ಒಳ್ಳೆಯದು. ಬಳಿಕ ಇದನ್ನು ಓವನ್‌ನಲ್ಲಿ 15ರಿಂದ 20 ನಿಮಿಷಗಳವರೆಗೆ ಬೇಯಿಸಿಕೊಳ್ಳಿ. ನಂತರ ಅದನ್ನು ತಿರುವಿ ಹಾಕಿಕೊಂಡು ಗೊಲ್ಡನ್ ಕಲರ್ ಬರುವವರೆಗೆ 10 ನಿಮಿಷ ಬೇಯಿಸಿಕೊಳ್ಳಿ. ನಂತರ ಅದನ್ನು ಓವನ್‌ನಿಂದ ಹೊರತೆಗೆದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಟೊಮೆಟೊ ಕೆಚಪ್ ಜೊತೆಗೆ ಸವಿಯಲು ಕೊಡಿ. ಇದನ್ನೂ ಓದಿ: ಬಿಸಿಲಿನಿಂದ ಬಳಲಿದವರಿಗೆ ಪವರ್ ಕೊಡುತ್ತೆ ಈ ಮಿಲ್ಕ್‌ಶೇಕ್

  • ಚೈನೀಸ್ ಬಾದಾಮಿ ಕುಕೀಸ್ ಮಾಡೋಕೆ ತುಂಬಾ ಸಿಂಪಲ್

    ಚೈನೀಸ್ ಬಾದಾಮಿ ಕುಕೀಸ್ ಮಾಡೋಕೆ ತುಂಬಾ ಸಿಂಪಲ್

    ಚೈನೀಸ್ ಅಡುಗೆಗಳು ಎಂದ ತಕ್ಷಣ ನೆನಪಿಗೆ ಬರೋದು ರೋಡ್ ಸೈಡ್‌ನ ಫಾಸ್ಟ್‌ಫುಡ್‌ಗಳು. ಆದರೆ ಇನ್ನೂ ಅನೇಕ ಚೈನೀಸ್ ಫೇಮಸ್ ಅಡುಗೆಗಳು ಫಾಸ್ಟ್‌ಫುಡ್‌ಗೆ ತುಂಬಾ ಭಿನ್ನವಾಗಿವೆ. ಇಂದು ನಾವು ಅಂತಹುದೇ ಒಂದು ರೆಸಿಪಿ ಹೇಳಿಕೊಡಲಿದ್ದೇವೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ ಬಾದಾಮಿ ಕುಕೀಸ್ ಅನ್ನು ನೀವು ಸವಿದಿರುತ್ತೀರಿ. ಬಾಯಲ್ಲಿ ಇಟ್ಟ ತಕ್ಷಣ ಕರಗೋ ಈ ಕುಕೀಸ್ ಎಲ್ಲರಿಗೂ ಇಷ್ಟ. ಮಾಡೋಕೆ ತುಂಬಾ ಸುಲಭವಾಗಿರೋ ಚೈನೀಸ್ ಬಾದಾಮಿ ಕುಕೀಸ್ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಬೆಣ್ಣೆ – 130 ಗ್ರಾಂ
    ಸಕ್ಕರೆ ಪುಡಿ – 70 ಗ್ರಾಂ
    ಉಪ್ಪು – ಕಾಲು ಟೀಸ್ಪೂನ್
    ಕಾರ್ನ್ ಫ್ಲೋರ್ – 80 ಗ್ರಾಂ
    ಮೈದಾ ಹಿಟ್ಟು – 120 ಗ್ರಾಂ
    ಲಘುವಾಗಿ ಹುರಿದ ಬಾದಾಮಿ ಫ್ಲೇಕ್ಸ್ – 60 ಗ್ರಾಂ
    ಬಾದಾಮಿ ಸಾರ – ಕಾಲು ಟೀಸ್ಪೂನ್ (ಐಚ್ಛಿಕ) ಇದನ್ನೂ ಓದಿ: ಮಕ್ಕಳಿಗೆ ನೀಡಿ ಟೇಸ್ಟಿ, ಹೆಲ್ದಿ ಬೀಟ್ರೂಟ್ ಕಟ್ಲೆಟ್

    ಮಾಡುವ ವಿಧಾನ:
    * ಮೊದಲಿಗೆ ಓವನ್ ಅನ್ನು 160 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ, ಬೇಕಿಂಗ್ ಶೀಟ್‌ಗೆ ಬಟರ್ ಪೇಪರ್ ಅನ್ನು ಜೋಡಿಸಿ ಇಡಿ.
    * ಒಂದು ಬೌಲ್‌ನಲ್ಲಿ ಬೆಣ್ಣೆ, ಸಕ್ಕರೆ ಪುಡಿ, ಉಪ್ಪು ಹಾಗೂ ಬಾದಾಮಿ ಸಾರ ಹಾಕಿ ನಯವಾಗುವತನಕ ಬೀಟ್ ಮಾಡಿಕೊಳ್ಳಿ.
    * ಬಳಿಕ ಜರಡಿ ಹಿಡಿದು ಕಾರ್ನ್ ಫ್ಲೋರ್ ಹಾಗೂ ಮೈದಾ ಹಿಟ್ಟನ್ನು ಸೇರಿಸಿ, ಮೃದುವಾದ ಹಿಟ್ಟಾಗುವವರೆಗೆ ಬೆರೆಸಿಕೊಳ್ಳಿ.
    * ಈ ಹಿಟ್ಟನ್ನು ಒಂದು ಪ್ಲಾಸ್ಟಿಕ್ ಕಾಗದದ ಮೇಲೆ ಹಾಕಿ 1 ಸೆ.ಮೀ ದಪ್ಪಗೆ ಆಗುವಷ್ಟು ಲಟ್ಟಣಿಗೆಯಿಂದ ಸುತ್ತಿಕೊಳ್ಳಿ. ಬಳಿಕ ಕುಕೀ ಕಟರ್ ಸಹಾಯದಿಂದ ಕುಕೀಸ್ ಆಕಾರಗಳಲ್ಲಿ ಕತ್ತರಿಸಿಕೊಳ್ಳಿ.
    * ಈಗ ಕತ್ತರಿಸಿದ ಕುಕೀಸ್‌ಗಳನ್ನು ಬೇಕಿಂಗ್ ಶೀಟ್ ಮೇಲೆ ಜೋಡಿಸಿಕೊಳ್ಳಿ. ಅದರ ಮೇಲೆ ಬಾದಾಮಿ ಫ್ಲೇಕ್ಸ್‌ಗಳನ್ನು ಹರಡಿ.
    * ನಂತರ 160 ಡಿಗ್ರಿ ಸೆಲ್ಸಿಯಸ್ ಶಾಖದಲ್ಲಿ ಸುಮಾರು 20 ನಿಮಿಷಗಳ ಕಾಲ ಓವನ್‌ನಲ್ಲಿ ಬೇಯಿಸಿಕೊಳ್ಳಿ.
    * ಕುಕೀಸ್ ಬೆಂದ ಬಳಿಕ ಓವನ್‌ನಿಂದ ತೆಗೆದು ತಣ್ಣಗಾಗಲು ಬಿಡಿ.
    * ಇದೀಗ ಚೈನೀಸ್ ಬಾದಾಮಿ ಕುಕೀಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಉಳಿದ ಕುಕೀಸ್‌ಗಳನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಟ್ಟರೆ ಬೇಕೆನಿಸಿದಾಗ ಸವಿಯಬಹುದು. ಇದನ್ನೂ ಓದಿ: ಪಿಜ್ಜಾ ಸ್ಯಾಂಡ್‌ವಿಚ್ ಅಂದ್ರೆ ಇಷ್ಟ, ಆದ್ರೆ ಮಾಡಲು ಗೊತ್ತಿಲ್ಲ ಅನ್ನೋರಿಗೆ ಇಲ್ಲಿದೆ ರೆಸಿಪಿ

  • ಥಾಯ್ ಸ್ಟೈಲ್‌ನ ಕೊಕೊನಟ್ ರೈಸ್ ಎಂದಾದ್ರೂ ಸವಿದಿದ್ದೀರಾ?

    ಥಾಯ್ ಸ್ಟೈಲ್‌ನ ಕೊಕೊನಟ್ ರೈಸ್ ಎಂದಾದ್ರೂ ಸವಿದಿದ್ದೀರಾ?

    ನ್ನ ಕೇವಲ ಭಾರತದಲ್ಲಷ್ಟೇ ಅಲ್ಲದೇ ಏಷ್ಯಾದ ಇತರ ದೇಶಗಳಲ್ಲೂ ಮುಖ್ಯ ಆಹಾರವಾಗಿದೆ. ಆದರೆ ಅದನ್ನು ಮಾಡೋ ವಿಧಾನ ಹಾಗೂ ರುಚಿಯಲ್ಲಿ ವೈವಿಧ್ಯತೆಯಿದೆ. ನಾವಿಂದು ಥೈಲ್ಯಾಂಡ್‌ನ ಪ್ರಸಿದ್ಧ ಕೊಕೊನಟ್ ರೈಸ್ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಕೇವಲ ನಾಲ್ಕೇ ಪದಾರ್ಥಗಳನ್ನು ಬಳಸಿ ಇದನ್ನು ಅತ್ಯಂತ ಸುಲಭವಾಗಿ ಮಾಡಬಹುದು. ನೀವೂ ಇದನ್ನು ಟ್ರೈ ಮಾಡಿ ಥಾಯ್ ಸ್ಟೈಲ್‌ನ ಅಡುಗೆಯ ರುಚಿಯನ್ನೂ ಒಮ್ಮೆ ಆಸ್ವಾದಿಸಿ.

    ಬೇಕಾಗುವ ಪದಾರ್ಥಗಳು:
    ಅಕ್ಕಿ – ಒಂದೂವರೆ ಕಪ್
    ತೆಂಗಿನ ಹಾಲು – 400 ಎಂಎಲ್
    ನೀರು – 1 ಕಪ್
    ಉಪ್ಪು – ಚಿಟಿಕೆ ಇದನ್ನೂ ಓದಿ: ಬಿಸಿಲಿನಿಂದ ಬಳಲಿದವರಿಗೆ ಪವರ್ ಕೊಡುತ್ತೆ ಈ ಮಿಲ್ಕ್‌ಶೇಕ್

    ಮಾಡುವ ವಿಧಾನ:
    * ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ.
    * ಅದಕ್ಕೆ ನೀರು, ತೆಂಗಿನ ಹಾಲು ಹಾಗೂ ಚಿಟಿಕೆ ಉಪ್ಪನ್ನು ಸೇರಿಸಿ.
    * ಈಗ ಪಾತ್ರೆಯ ಮುಚ್ಚಳ ಮುಚ್ಚಿ, ಅಕ್ಕಿ ಕುದಿಯುವವರೆಗೆ ಮಧ್ಯಮ ಉರಿಯಲ್ಲಿ ಕಾಯಿಸಿ.
    * ಅಕ್ಕಿ ಕುದಿಯಲು ಪ್ರಾರಂಭಿಸಿದಾಗ ಉರಿಯನ್ನು ಕಡಿಮೆ ಮಾಡಿ ಸುಮಾರು 30 ನಿಮಿಷಗಳ ಕಾಲ ಬೇಯಲು ಬಿಡಿ.
    * ನಂತರ ಉರಿಯನ್ನು ಆಫ್ ಮಾಡಿ, ಅಕ್ಕಿಯನ್ನು ಸುಮಾರು 15 ನಿಮಿಷಗಳ ಕಾಲ ಮುಚ್ಚಿ ಹಾಗೆಯೇ ಬಿಡಿ.
    * ಇದೀಗ ಕೊಕೊನಟ್ ರೈಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ವಯಸ್ಸಿನ ಭೇದವಿಲ್ಲ – ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಎಗ್ ಟಿಕ್ಕಾ ಕಬಾಬ್

  • ವಯಸ್ಸಿನ ಭೇದವಿಲ್ಲ – ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಎಗ್ ಟಿಕ್ಕಾ ಕಬಾಬ್

    ವಯಸ್ಸಿನ ಭೇದವಿಲ್ಲ – ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ ಎಗ್ ಟಿಕ್ಕಾ ಕಬಾಬ್

    ಸಾಮಾನ್ಯವಾಗಿ ಟಿಕ್ಕಾ ಎಂಬ ಪದ ಚಿಕನ್, ಮೀನು ಅಥವಾ ಪನೀರ್ ಅನ್ನು ನೆನಪಿಸುತ್ತದೆ. ಆದರೆ ಇಂದು ನಾವು ಹೊಸ ರೀತಿಯ ಟಿಕ್ಕಾ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಹಿರಿಯರು, ಮಕ್ಕಳು ಎಂಬ ವಯಸ್ಸಿನ ಭೇದವಿಲ್ಲದೇ ಪ್ರತಿಯೊಬ್ಬರೂ ಮೊಟ್ಟೆಯನ್ನು ಇಷ್ಟಪಡುತ್ತಾರೆ. ಅವರಿಗಾಗಿ ಈ ಅದ್ಭುತವಾದ ರೆಸಿಪಿ ಎಗ್ ಟಿಕ್ಕಾ ಕಬಾಬ್.

    ಬೇಕಾಗುವ ಪದಾರ್ಥಗಳು:
    ಬೇಯಿಸಿದ ಮೊಟ್ಟೆ – 4
    ಕತ್ತರಿಸಿದ ಈರುಳ್ಳಿ – ಅರ್ಧ
    ಕ್ಯಾಪ್ಸಿಕಮ್ – ಅರ್ಧ ಕಪ್
    ಬೆಣ್ಣೆ – 2 ಟೀಸ್ಪೂನ್
    ಚಾಟ್ ಮಸಾಲಾ – 2 ಟೀಸ್ಪೂನ್
    ಮ್ಯಾರಿನೇಷನ್‌ಗೆ:
    ಮೊಸರು – ಅರ್ಧ ಕಪ್
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಒಂದೂವರೆ ಟೀಸ್ಪೂನ್
    ಜೀರಿಗೆ ಪುಡಿ – 1 ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಮೆಣಸಿನ ಪುಡಿ – ಮುಕ್ಕಾಲು ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಕರಿ ಮೆಣಸಿನಪುಡಿ – 1 ಟೀಸ್ಪೂನ್
    ನಿಂಬೆ ರಸ – 1 ಟೀಸ್ಪೂನ್
    ತಂದೂರಿ ಮಸಾಲಾ – ಮುಕ್ಕಾಲು ಟೀಸ್ಪೂನ್
    ಅರಿಶಿನ ಪುಡಿ – ಚಿಟಿಕೆ
    ಬೆಂಗಾಲ್ ಗ್ರಾಂ ಹಿಟ್ಟು – 2 ಟೀಸ್ಪೂನ್
    ಎಣ್ಣೆ – 1 ಟೀಸ್ಪೂನ್ ಇದನ್ನೂ ಓದಿ: ಟೇಸ್ಟಿ ಟೇಸ್ಟಿ ಸಿಂಗಾಪುರ್ ನೂಡಲ್ಸ್ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಬೇಯಿಸಿದ ಮೊಟ್ಟೆಗಳನ್ನು 2 ಭಾಗಗಳಾಗಿ ಕತ್ತರಿಸಿ.
    * ಒಂದು ಬೌಲ್‌ನಲ್ಲಿ ಈರುಳ್ಳಿ, ಕ್ಯಾಪ್ಸಿಕಮ್, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಉಪ್ಪು, ಕರಿ ಮೆಣಸಿನಪುಡಿ, ನಿಂಬೆ ರಸ, ತಂದೂರಿ ಮಸಾಲಾ, ಅರಿಶಿನ ಪುಡಿ ಹಾಗೂ ಬೆಂಗಾಲ್ ಗ್ರಾಂ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ.
    * ಅದಕ್ಕೆ ಕತ್ತರಿಸಿಟ್ಟಿದ್ದ ಮೊಟ್ಟೆಗಳನ್ನು ಸೇರಿಸಿ, ಮಿಶ್ರಣ ಮಾಡಿ, ಸುಮಾರು 1 ಗಂಟೆಗಳ ಕಾಲ ಮ್ಯಾರಿನೇಟ್ ಆಗಲು ಫ್ರಿಜ್‌ನಲ್ಲಿ ಇಡಿ.
    * ಬಳಿಕ ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಮ್ಯಾರಿನೇಟ್ ಮಾಡಿದ ಮೊಟ್ಟೆಯ ತುಂಡುಗಳನ್ನು ಅದರಲ್ಲಿ ಇರಿಸಿ.
    * ಪ್ರತಿ 1-2 ನಿಮಿಷಗಳಿಗೊಮ್ಮೆ ಮೊಟ್ಟೆಗಳ ಮೇಲೆ ಬೆಣ್ಣೆಯಿಂದ ಗ್ರೀಸ್ ಮಾಡಿ ಮ್ಯಾರಿನೇಟ್ ಒಣ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
    * ಇದೀಗ ಎಗ್ ಟಿಕ್ಕಾ ಕಬಾಬ್ ತಯಾರಾಗಿದ್ದು, ಇದನ್ನು ಚಾಟ್ ಮಸಾಲಾ, ತಾಜಾ ನಿಂಬೆ ರಸ ಹಾಗೂ ನಿಮ್ಮಿಷ್ಟದ ಸಾಸ್‌ನೊಂದಿಗೆ ಬಡಿಸಿ, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಟ್ರೈ ಮಾಡಿ ಟೇಸ್ಟಿ ಫಿಶ್ ಪಕೋಡಾ

  • ಮಕ್ಕಳಿಗೆ ನೀಡಿ ಟೇಸ್ಟಿ, ಹೆಲ್ದಿ ಬೀಟ್ರೂಟ್ ಕಟ್ಲೆಟ್

    ಮಕ್ಕಳಿಗೆ ನೀಡಿ ಟೇಸ್ಟಿ, ಹೆಲ್ದಿ ಬೀಟ್ರೂಟ್ ಕಟ್ಲೆಟ್

    ಬೀಟ್ರೂಟ್ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ಮಕ್ಕಳಿಗೆ ಮುಖ್ಯವಾಗಿ ಬೀಟ್ರೂಟ್ ಹೆಚ್ಚು ಹೆಚ್ಚು ತಿನ್ನಿಸಲು ಪೋಷಕರು ಸಾಹಸ ಪಡುತ್ತಲೇ ಇರುತ್ತಾರೆ. ಅದೇ ಬೀಟ್ರೂಟ್ ಅನ್ನು ನೀವು ಪಲ್ಯ ಅಥವಾ ಸಲಾಡ್ ರೂಪದಲ್ಲಿ ಮಕ್ಕಳಿಗೆ ನೀಡುವುದಕ್ಕಿಂತ ಈ ರೀತಿಯಾಗಿ ಟೇಸ್ಟಿ ವಿಧಾನದಲ್ಲಿ ಕೊಟ್ಟರೆ ಅವರೂ ಖುಷಿ ಪಟ್ಟು ಸವಿಯುತ್ತಾರೆ. ನಾವಿಂದು ಹೇಳಿಕೊಡುತ್ತಿರುವ ಬೀಟ್ರೂಟ್ ಕಟ್ಲೆಟ್ ರೆಸಿಪಿಯನ್ನು ಸುಲಭವಾಗಿ ಮಾಡಬಹುದು. ಬೀಟ್ರೂಟ್‌ನಿಂದ ಕಟ್ಲೆಟ್ ಹೇಗೆ ಮಾಡೋದೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಬೀಟ್ರೂಟ್ – 250 ಗ್ರಾಂ (ಮಧ್ಯಮ ಗಾತ್ರದ್ದು 2)
    ಆಲೂಗಡ್ಡೆ – 250 ಗ್ರಾಂ
    ಅರಿಶಿನ – ಕಾಲು ಟೀಸ್ಪೂನ್
    ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಜೀರಿಗೆ ಪುಡಿ – 1 ಟೀಸ್ಪೂನ್
    ಗರಂ ಮಸಾಲೆ ಪುಡಿ – ಕಾಲು ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಚಾಟ್ ಮಸಾಲಾ – 1 ಟೀಸ್ಪೂನ್
    ಆಮ್‌ಚೂರ್ ಪುಡಿ – 1 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1
    ಉಪ್ಪು – ರುಚಿಗೆ ತಕ್ಕಷ್ಟು
    ಶುಂಠಿ ಪೇಸ್ಟ್ – 1 ಟೀಸ್ಪೂನ್
    ಕಾರ್ನ್ ಫ್ಲೋರ್ – 2 ಟೀಸ್ಪೂನ್
    ರವೆ – ಅರ್ಧ ಕಪ್
    ಎಣ್ಣೆ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ಪಿಜ್ಜಾ ಸ್ಯಾಂಡ್‌ವಿಚ್ ಅಂದ್ರೆ ಇಷ್ಟ, ಆದ್ರೆ ಮಾಡಲು ಗೊತ್ತಿಲ್ಲ ಅನ್ನೋರಿಗೆ ಇಲ್ಲಿದೆ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಕುಕ್ಕರ್‌ಗೆ ಸಾಕಷ್ಟು ನೀರು ಹಾಕಿ ಬೀಟ್ರೂಟ್ ಹಾಗೂ ಆಲೂಗಡ್ಡೆಯನ್ನು ಸ್ವಲ್ಪ ಉಪ್ಪಿನೊಂದಿಗೆ 7-8 ಸೀಟಿ ಬರುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
    * ಕುಕ್ಕರ್ ಸ್ವಲ್ಪ ತಣ್ಣಗಾದ ಬಳಿಕ ಮುಚ್ಚಳ ತೆಗೆದು ನೀರನ್ನು ಹರಿಸಿ, ಬೀಟ್ರೂಟ್ ಹಾಗೂ ಆಲೂಗಡ್ಡೆಯ ಸಿಪ್ಪೆ ಸುಲಿದು, ಒಂದು ಬಟ್ಟಲಿನಲ್ಲಿ ಹಿಸುಕಿ ಇಡಿ.
    * ಹಿಸುಕಿದ ತರಕಾರಿಗಳಿಗೆ ಅರಿಶಿನ, ಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಕೊತ್ತಂಬರಿ ಪುಡಿ, ಚಾಟ್ ಮಸಾಲಾ, ಆಮ್‌ಚೂರ್ ಪುಡಿ, ಹಸಿರು ಮೆಣಸಿನಕಾಯಿ, ಉಪ್ಪು ಹಾಗೂ ಕಾರ್ನ್ ಫ್ಲೋರ್ ಹಾಕಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳಿ.
    * ಈಗ ನಿಮ್ಮ ಕೈಗಳಿಂದ ಸ್ವಲ್ಪ ಸ್ವಲ್ಪವೇ ಮಿಶ್ರಣವನ್ನು ತೆಗೆದುಕೊಂಡು ದುಂಡಗಿನ ಪ್ಯಾಟೀ ಅಥವಾ ಕಟ್ಲೆಟ್ ರೂಪಕ್ಕೆ ತನ್ನಿ.
    * ಒಂದು ತಟ್ಟೆಯಲ್ಲಿ ಹುರಿದ ರವೆಯನ್ನು ತೆಗೆದುಕೊಳ್ಳಿ. ಪ್ರತಿ ಪ್ಯಾಟೀಗಳನ್ನು ಅದರ ಮೇಲೆ ಇರಿಸಿ, ಎಲ್ಲ ಬದಿಗಳೂ ಸಮವಾಗಿ ಲೇಪಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
    * ಈಗ ಪ್ಯಾನ್ ತೆಗೆದುಕೊಂಡು, ಅದರಲ್ಲಿ 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಕಟ್ಲೆಟ್‌ಗಳನ್ನು ಗರಿಗರಿ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಿ.
    * ಬಳಿಕ ಕಟ್ಲೆಟ್‌ಗಳನ್ನು ಪ್ಯಾನ್‌ನಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
    * ಇದೀಗ ಬೀಟ್ರೂಟ್ ಕಟ್ಲೆಟ್ ತಯಾರಾಗಿದ್ದು, ನಿಮ್ಮಿಷ್ಟದ ಸಾಸ್ ಅಥವಾ ಚಟ್ನಿಯೊಂದಿಗೆ ಸವಿಯಲು ಮಕ್ಕಳಿಗೆ ನೀಡಿ. ಇದನ್ನೂ ಓದಿ: ಕ್ರಿಸ್ಪಿ ಟೋಫು ಬೈಟ್ಸ್ – ಟೀ ಟೈಮ್‌ಗೆ ಪರ್ಫೆಕ್ಟ್