Tag: recipe

  • ಟೇಸ್ಟಿ ಆಲೂ ಪಾಲಕ್ ಕಟ್ಲೆಟ್ ಟ್ರೈ ಮಾಡಿ ನೋಡಿ..!

    ಟೇಸ್ಟಿ ಆಲೂ ಪಾಲಕ್ ಕಟ್ಲೆಟ್ ಟ್ರೈ ಮಾಡಿ ನೋಡಿ..!

    ಳಿಯ ವಾತಾವರಣದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು ಅಂತಾ ಅನಿಸುವುದು ಸಹಜ. ಇವತ್ತಿನ ನಮ್ಮ ರೆಸಿಪಿಯಲ್ಲಿ ಟೇಸ್ಟಿಯಾದ ಆಲೂ ಪಾಲಕ್ ಕಟ್ಲೆಟ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಎಲ್ಲರಿಗೂ ತಿಳಿದಿರುವಂತೆ ಪಾಲಕ್ ಆರೋಗ್ಯಕರ ಆಹಾರ ಮಾತ್ರವಲ್ಲದೇ ಉತ್ತಮ ಪೌಷ್ಟಿಕಾಂಶದಿಂದ ಕೂಡಿದೆ. ಆಲೂ ಪಾಲಕ್ ಕಟ್ಲೆಟ್ ಅನ್ನು ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಕೂಡ ಇಷ್ಟಪಡುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಸುವರ್ಣಗಡ್ಡೆಯ ವಿಶೇಷತೆ ಏನು ಗೊತ್ತಾ? ಸಖತ್ ರುಚಿಯಾದ ಈ ರೆಸಿಪಿಯನ್ನು ನೀವೂ ಮಾಡಿ

    ಬೇಕಾಗುವ ಸಾಮಗ್ರಿಗಳು:
    ಆಲೂಗಡ್ಡೆ – 2
    ಪಾಲಕ್ ಸೊಪ್ಪು – 1 ಕಪ್
    ಈರುಳ್ಳಿ – 1
    ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    ಜೀರಿಗೆ – 1/4 ಚಮಚ
    ಗರಂ ಮಸಾಲಾ – 1 ಚಮಚ
    ಅರಿಶಿನ ಪುಡಿ – ಒಂದು ಚಿಟಿಕೆ
    ಅಕ್ಕಿ ಹಿಟ್ಟು – 1 ಚಮಚ
    ಮೆಣಸಿನ ಪುಡಿ – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲು, ಆಲೂಗಡ್ಡೆಯನ್ನು ತೆಗೆದುಕೊಂಡು ಪಾತ್ರೆಯಲ್ಲಿ ನೀರಿನೊಂದಿಗೆ ಕುದಿಸಿ. ನಂತರ ಅವುಗಳ ಸಿಪ್ಪೆಯನ್ನು ತೆಗೆಯಿರಿ. ನಂತರ ಅದನ್ನು ಪಕ್ಕಕ್ಕೆ ಇಡಿ.
    * ಬಳಿಕ ಈರುಳ್ಳಿ ಮತ್ತು ಪಾಲಕ್ ಸೊಪ್ಪನ್ನು ತೊಳೆದು ಸ್ವಚ್ಛಗೊಳಿಸಿ ಸಣ್ಣದಾಗಿ ಹೆಚ್ಚಿಕೊಳ್ಳಿ.
    * ಈಗ ಅಗಲವಾದ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ.
    * ಅದಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಪಾಲಕ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ, ಗರಂ ಮಸಾಲ, ಅರಿಶಿನ ಪುಡಿ, ಮೆಣಸಿನ ಪುಡಿ, ಅಕ್ಕಿ ಹಿಟ್ಟು, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕಟ್ಲೆಟ್ ಮಿಶ್ರಣವನ್ನು ಮಾಡಿಕೊಳ್ಳಿ.
    * ನಂತರ ಕಟ್ಲೆಟ್‌ಗಳನ್ನು ಹುರಿಯಲು ದೊಡ್ಡ ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಬೇಕಾದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ.
    * ಎಣ್ಣೆ ಚೆನ್ನಾಗಿ ಕಾಯುತ್ತಿದ್ದಂತೆ ತಯಾರಾದ ಕಟ್ಲೆಟ್ ಮಿಶ್ರಣವನ್ನು ಬೇಕಾದ ಆಕಾರದಲ್ಲಿ ಮಾಡಿಕೊಂಡು ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಕಾಯಿಸಿಕೊಳ್ಳಿ.
    * ಈಗ ಬಿಸಿಬಿಸಿ ಆಲೂ ಪಾಲಕ್ ಕಟ್ಲೆಟ್ ಸವಿಯಲು ಸಿದ್ಧ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ಗೆ ಹಾಕಿಕೊಂಡು ನಿಮ್ಮ ನೆಚ್ಚಿನ ಚಟ್ನಿ ಅಥವಾ ಸಾಸ್‌ನೊಂದಿಗೆ ಸವಿಯಿರಿ. ಇದನ್ನೂ ಓದಿ: ಗುಲಾಬ್ ಜಾಮೂನ್ ಗೊತ್ತು.. ಗುಲಾಬ್ ಬರ್ಫಿನೂ ಟ್ರೈ ಮಾಡಿ

  • ಸುವರ್ಣಗಡ್ಡೆಯ ವಿಶೇಷತೆ ಏನು ಗೊತ್ತಾ? ಸಖತ್ ರುಚಿಯಾದ ಈ ರೆಸಿಪಿಯನ್ನು ನೀವೂ ಮಾಡಿ

    ಸುವರ್ಣಗಡ್ಡೆಯ ವಿಶೇಷತೆ ಏನು ಗೊತ್ತಾ? ಸಖತ್ ರುಚಿಯಾದ ಈ ರೆಸಿಪಿಯನ್ನು ನೀವೂ ಮಾಡಿ

    ದೀಪಾವಳಿ ಭಾರತದಲ್ಲಿ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ವಿವಿಧ ಭಕ್ಷ್ಯಗಳ ಹಬ್ಬ ಎಂದರೂ ತಪ್ಪಿಲ್ಲ. ಏಕೆಂದರೆ ಈ ದಿನಗಳಲ್ಲಿ ಬಗೆಬಗೆಯ ತಿನಿಸುಗಳನ್ನು ಮಾಡಿ ಹಂಚಲಾಗುತ್ತದೆ. ಉತ್ತರ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ವಾರಣಾಸಿಯಲ್ಲಿ ಈ ವಿಶೇಷ ದಿನಗಳಲ್ಲಿ ಸುವರ್ಣಗಡ್ಡೆಯ ಖಾದ್ಯ ಏಕೆ ಮಾಡುತ್ತಾರೆ ತಿಳಿದಿದೆಯೇ? ಈ ಸುವರ್ಣಗಡ್ಡೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಣ್ಣಿನಲ್ಲಿ ಬೆಳೆಯುವ ಈ ಗಡ್ಡೆಯನ್ನು ತೆಗೆದ ಬಳಿವೂ ಅದರ ಬೇರುಗಳು ಭೂಮಿಯಲ್ಲಿ ಉಳಿದುಕೊಳ್ಳುತ್ತವೆ. ಇದು ಮುಂದಿನ ಋತುಗಳಲ್ಲಿ ಮತ್ತೆ ತ್ವರಿತವಾಗಿ ತಾವಾಗೇ ಬೆಳೆಯುತ್ತವೆ. ದೀಪಾವಳಿ ಸಂಪತ್ತನ್ನು ವೃದ್ಧಿಸುವುದನ್ನು ಸೂಚಿಸುತ್ತದೆ. ಆದ್ದರಿಂದ ಸುವರ್ಣಗಡ್ಡೆಯೂ ಅದೇ ತರಹ ಮಂಗಳಕರ ಎಂದು ನಂಬಲಾಗುತ್ತದೆ.

    ಸುವರ್ಣಗಡ್ಡೆ ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವುದರೊಂದಿಗೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನೂ ಒಳಗೊಂಡಿದೆ. ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಧಾರ್ಮಿಕ ಮಹತ್ವದೊಂದಿಗೆ ಅದರ ಆರೋಗ್ಯಕರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವಿಂದು ಸುವರ್ಣಗಡ್ಡೆಯ ರುಚಿಕರ ಅಡುಗೆಯೊಂದನ್ನು ಹೇಳಿಕೊಡುತ್ತೇವೆ. ಈರುಳ್ಳಿ, ಬೆಳ್ಳುಳ್ಳಿ ಬಳಸದ ಈ ಅದ್ಭುತ ಗ್ರೇವಿಯನ್ನು ನೀವೂ ಮಾಡಿ.

    ಬೇಕಾಗುವ ಪದಾರ್ಥಗಳು:
    ಸುವರ್ಣಗಡ್ಡೆ – ಅರ್ಧ ಕೆಜಿ
    ರುಬ್ಬಿಕೊಂಡ ಟೊಮೆಟೋ – 3
    ಮೊಸರು – 1 ಕಪ್
    ದಾಲ್ಚಿನ್ನಿ ಸೊಪ್ಪು – 1
    ಜೀರಿಗೆ – ಅರ್ಧ ಟೀಸ್ಪೂನ್
    ಅರಿಶಿನ ಪುಡಿ – ಅರ್ಧ ಟೀಸ್ಪೂನ್
    ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
    ಗರಂ ಮಸಾಲೆ ಪುಡಿ – ಅರ್ಧ ಟೀಸ್ಪೂನ್
    ಒಣ ಮಾವಿನ ಪುಡಿ – 2 ಟೀಸ್ಪೂನ್
    ಕೊತ್ತಂಬರಿ ಪುಡಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಹುರಿಯಲು ಬೇಕಾಗುವಷ್ಟು
    ಕೊತ್ತಂಬರಿ ಸೊಪ್ಪು – ಕಾಲು ಕಪ್ ಇದನ್ನೂ ಓದಿ: ಗುಲಾಬ್ ಜಾಮೂನ್ ಗೊತ್ತು.. ಗುಲಾಬ್ ಬರ್ಫಿನೂ ಟ್ರೈ ಮಾಡಿ

     

     

    ಮಾಡುವ ವಿಧಾನ:
    * ಮೊದಲಿಗೆ ಸುವರ್ಣಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ.
    * ನಂತರ ಅದನ್ನು ಘನಗಳಾಗಿ ಕತ್ತರಿಸಿ, ಅವುಗಳಿಗೆ ಒಣ ಮಾವಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ.
    * ಅದನ್ನು 2-3 ಗಂಟೆಗಳ ಕಾಲ ಸೂರ್ಯನ ಬೆಳಕಿನಲ್ಲಿ ಇರಿಸಿ. (ಸುವರ್ಣಗೆಡ್ಡೆ ತುಂಡುಗಳನ್ನು ಇರಿಸಿದ ತಟ್ಟೆಯನ್ನು ಸ್ವಲ್ಪ ಬಾಗಿಸಿ ಇರಿಸಿ. ಇದರಿಂದ ಅದು ಬಿಡುಗಡೆ ಮಾಡುವ ನೀರು ಜಾರಿ ಬೇರ್ಪಡುತ್ತದೆ.
    * ನಂತರ ಒಂದು ಪಾತ್ರೆಯಲ್ಲಿ ಸಾಕಷ್ಟು ನೀರು ಹಾಕಿ ಅದಕ್ಕೆ ಒಣಗಿದ ಸುವರ್ಣಗಡ್ಡೆ ತುಂಡುಗಳನ್ನು ಸೇರಿಸಿ 5-6 ನಿಮಿಷಗಳ ಕಾಲ ಕುದಿಯಲು ಬಿಡಿ. ಬಳಿಕ ನೀರನ್ನು ಸಂಪೂರ್ಣ ಹರಿಸಿಕೊಳ್ಳಿ.
    * ಒಂದು ಪ್ಯಾನ್ ತೆಗೆದುಕೊಂಡು ಸುವರ್ಣಗಡ್ಡೆಯನ್ನು ಅದಕ್ಕೆ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಫ್ರೈ ಮಾಡಿ. ನಂತರ ಅದನ್ನು ತೆಗೆದು ಪಕ್ಕಕ್ಕೆ ಇರಿಸಿ.
    * ಇನ್ನೊಂದು ಪ್ಯಾನ್‌ಗೆ ಜೀರಿಗೆ ಮತ್ತು ದಾಲ್ಚಿನ್ನಿ ಸೊಪ್ಪು ಹಾಕಿ ಬೆರೆಸಿ.
    * ಟೊಮೆಟೋ ಪ್ಯೂರಿಯನ್ನು ಸೇರಿಸಿ, ಎಣ್ಣೆ ಬೇರ್ಪಡುವವರೆಗೆ ಬೇಯಿಸಿ.
    * ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ ಮತ್ತು ಚಿಟಿಕೆ ಒಣ ಮಾವಿನ ಪುಡಿ ಸೇರಿಸಿ ಮಿಶ್ರಣ ಮಾಡಿ.
    * ಗ್ರೇವಿಗೆ ಮೊಸರು, ಗರಂ ಮಸಾಲೆ ಸೇರಿಸಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಹುರಿದ ಸುವರ್ಣಗಡ್ಡೆ ಸೇರಿಸಿ 10 ನಿಮಿಷ ಬೇಯಲು ಬಿಡಿ.
    * ಕೊನೆಯಲ್ಲಿ ಉರಿಯನ್ನು ಆಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರ ಸುವರ್ಣಗಡ್ಡೆಯ ಗ್ರೇವಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ದೀಪಾವಳಿ ಸ್ಪೆಷಲ್- ವಾಲ್ನಟ್ ಬರ್ಫಿ ಮಾಡಿ ಹಬ್ಬವನ್ನಾಚರಿಸಿ

    
    
  • ಗುಲಾಬ್ ಜಾಮೂನ್ ಗೊತ್ತು.. ಗುಲಾಬ್ ಬರ್ಫಿನೂ ಟ್ರೈ ಮಾಡಿ

    ಗುಲಾಬ್ ಜಾಮೂನ್ ಗೊತ್ತು.. ಗುಲಾಬ್ ಬರ್ಫಿನೂ ಟ್ರೈ ಮಾಡಿ

    ಭಾರತೀಯರು ಸಿಹಿ ತಿಂಡಿಗಳನ್ನು ಪ್ರೀತಿಸುತ್ತಾರೆ. ಯಾವುದೇ ಹಬ್ಬ ಹರಿದಿನಗಳಲ್ಲಿ ಸಿಹಿ ಹಂಚುವ ಮೂಲಕ ಪದಗಳಿಲ್ಲದೆ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ದೀಪಾವಳಿಯಂತಹ ಹಬ್ಬ ಬಂದಾಗ ಗುಲಾಬ್ ಜಾಮೂನ್, ರಸಮಲೈ, ಲಡ್ಡು, ಬರ್ಫಿ ಮಾಡೋದು ಸಾಮಾನ್ಯ. ಇದು ಹಲವು ವರ್ಷಗಳಿಂದಲೇ ಜನರು ಮಾಡಿಕೊಂಡು ಬಂದಿದ್ದಾರೆ. ನಾವಿಂದು ನಿಮಗಾಗಿ ಒಂದು ಸ್ಪೆಷಲ್ ಸಿಹಿಯನ್ನು ಹೇಳಿಕೊಡುತ್ತೇವೆ. ಗುಲಾಬ್ ಜಾಮೂನ್ ಅನ್ನು ನೀವು ಯಾವಾಗಲೂ ಮಾಡಿರುತ್ತೀರಿ. ಆದರೆ ಗುಲಾಬ್ ಬರ್ಫಿ ಕೇಳಿದ್ದೀರಾ? ಇಲ್ಲ ಎಂದರೆ ಇಂದೇ ಇದನ್ನು ಮಾಡಿ, ಎಲ್ಲರಿಗೂ ಹಂಚಿ.

    ಬೇಕಾಗುವ ಪದಾರ್ಥಗಳು:
    ತುಪ್ಪ – 2 ಟೀಸ್ಪೂನ್
    ಹಾಲು – 100 ಮಿ.ಲೀ
    ಏಲಕ್ಕಿ ಪುಡಿ – ಚಿಟಿಕೆ
    ಹಾಲಿನ ಪುಡಿ – 1 ಕಪ್
    ಗುಲಾಬಿ ದಳಗಳು – 2-3 ಟೀಸ್ಪೂನ್
    ಸಕ್ಕರೆ – 5 ಟೀಸ್ಪೂನ್
    ಹೆಚ್ಚಿದ ಪಿಸ್ತಾ – ಕೆಲವು ಇದನ್ನೂ ಓದಿ: ದೀಪಾವಳಿ ಸ್ಪೆಷಲ್- ವಾಲ್ನಟ್ ಬರ್ಫಿ ಮಾಡಿ ಹಬ್ಬವನ್ನಾಚರಿಸಿ

    ಮಾಡುವ ವಿಧಾನ:
    * ಮೊದಲಿಗೆ ಪ್ಯಾನ್ ಅನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಸೇರಿಸಿ.
    * ನಂತರ ಹಾಲು ಹಾಕಿ 2-3 ನಿಮಿಷಗಳ ಕಾಲ ಬೆರೆಸಿ.
    * ಈಗ ಹಾಲಿನ ಪುಡಿಯನ್ನು ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಸೇರಿಸಿ.
    * ಮಿಶ್ರಣವನ್ನು ಚೆನ್ನಾಗಿ ಬೆರೆಸಿ, ಯಾವುದೇ ಉಂಡೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
    * ನಂತರ ಸಕ್ಕರೆ ಸೇರಿಸಿ, ಕಡಿಮೆ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ತಳ ಹಿಡಿಯುವುದನ್ನು ತಡೆಯಲು ಆಗಾಗ ಬೆರೆಸಿಕೊಳ್ಳಿ.
    * ಮಿಶ್ರಣ ಸಾಕಷ್ಟು ದಪ್ಪವಾದ ಬಳಿಕ ಸ್ವಲ್ಪ ಗುಲಾಬಿ ದಳಗಳು ಮತ್ತು ಹೆಚ್ಚಿದ ಪಿಸ್ತಾಗಳನ್ನು ಸೇರಿಸಿ, ಉರಿಯನ್ನು ಆಫ್ ಮಾಡಿ.
    * ಒಂದು ಟ್ರೇ ತೆಗೆದುಕೊಂಡು ಸ್ವಲ್ಪ ತುಪ್ಪವನ್ನು ಗ್ರೀಸ್ ಮಾಡಿ. ಅದರ ಮೇಲೆ ಬಟರ್ ಪೇಪರ್ ಇರಿಸಿ.
    * ಅದರ ಮೇಲೆ ಕೆಲವು ಗುಲಾಬಿ ದಳಗಳು ಮತ್ತು ಕತ್ತರಿಸಿದ ಪಿಸ್ತಾಗಳನ್ನು ಹರಡಿ.
    * ತಯಾರಿಸಿಟ್ಟ ಮಿಶ್ರಣವನ್ನು ಅದರಲ್ಲಿ ಸುರಿದು, ಒಂದು ಚಾಕು ಬಳಸಿ ಅದನ್ನು ಎಚ್ಚರಿಕೆಯಿಂದ ಹರಡಿ.
    * ಅದರ ಮೇಲೆ ಮತ್ತೆ ಸ್ವಲ್ಪ ಗುಲಾಬಿ ದಳಗಳು ಮತ್ತು ಕತ್ತರಿಸಿದ ಪಿಸ್ತಾ ಸೇರಿಸಿ.
    * ಅದನ್ನು ಫ್ರಿಜ್‌ನಲ್ಲಿ 6-7 ಗಂಟೆಗಳ ಕಾಲ ಇರಿಸಿ.
    * ನಂತರ ಅದನ್ನು ತೆಗೆದು ತುಂಡುಗಳಾಗಿ ಕತ್ತರಿಸಿ.
    * ಇದೀಗ ಗುಲಾಬ್ ಬರ್ಫಿ ತಯಾರಾಗಿದ್ದು, ಮನೆಮಂದಿಗೆ ಹಂಚಿ ಹಬ್ಬವನ್ನಾಚರಿಸಿ. ಇದನ್ನೂ ಓದಿ: ಫಟಾಫಟ್ ಅಂತ ಮಾಡಿ ಬೀಟ್‌ರೂಟ್ ಹಲ್ವಾ!

  • ದೀಪಾವಳಿ ಸ್ಪೆಷಲ್- ವಾಲ್ನಟ್ ಬರ್ಫಿ ಮಾಡಿ ಹಬ್ಬವನ್ನಾಚರಿಸಿ

    ದೀಪಾವಳಿ ಸ್ಪೆಷಲ್- ವಾಲ್ನಟ್ ಬರ್ಫಿ ಮಾಡಿ ಹಬ್ಬವನ್ನಾಚರಿಸಿ

    ದೀಪಾವಳಿ ಹಬ್ಬ ಬಂತು ಎಂದರೆ ಚಳಿಗಾಲವೂ ಆರಂಭವಾಯ್ತು ಎಂದರ್ಥ. ಈ ಸಂದರ್ಭದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ತುಂಬಾ ಮುಖ್ಯ. ತಣ್ಣಗಿನ ಈ ದಿನಗಳಲ್ಲಿ ಹೆಚ್ಚಾಗಿ ಒಣ ಹಣ್ಣುಗಳನ್ನು ಸೇವಿಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ನಾವು ಈ ವಿಶೇಷ ದಿನಕ್ಕೆ ವಾಲ್ನಟ್ ಬರ್ಫಿ ಮಾಡೋದು ಹೇಗೆಂದು ಹೇಳಿಕೊಡುತ್ತಿದ್ದೇವೆ. ಈ ರೆಸಿಪಿಯನ್ನು ನೀವು ಟ್ರೈ ಮಾಡಿ, ಸವಿದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮಾತ್ರವಲ್ಲದೇ ಕುಟುಂಬ, ಸ್ನೇಹಿತರಿಗೂ ಹಂಚಿ ಸಂಬಂಧಗಳನ್ನು ಗಟ್ಟಿಗೊಳಿಸಿ.

    ಬೇಕಾಗುವ ಪದಾರ್ಥಗಳು:
    ಒರಟಾಗಿ ಪುಡಿ ಮಾಡಿದ ವಾಲ್ನಟ್ – 1 ಕಪ್
    ಸಕ್ಕರೆ – 4 ಟೀಸ್ಪೂನ್
    ಹಾಲಿನ ಪುಡಿ – 4 ಟೀಸ್ಪೂನ್
    ಹಾಲು – 4 ಟೀಸ್ಪೂನ್
    ಜಾಯಿಕಾಯಿ ಪುಡಿ – ಚಿಟಿಕೆ
    ತುಪ್ಪ – 4 ಟೀಸ್ಪೂನ್
    ಮಾವಾ – ಕಾಲು ಕಪ್ ಇದನ್ನೂ ಓದಿ: ಕೆಲವೇ ನಿಮಿಷ ಸಾಕು – ಸಿಂಪಲ್ ಆಗಿ ಪೈನಾಪಲ್ ರವಾ ಕೇಸರ್ ಮಾಡಿ

    ಬೇಕಾಗುವ ಪದಾರ್ಥಗಳು:
    * ಮೊದಲಿಗೆ ಮೈಕ್ರೊವೇವ್ ಸೇಫ್ ಬೌಲ್‌ನಲ್ಲಿ ಮಾವಾ ಮತ್ತು 2 ಟೀಸ್ಪೂನ್ ತುಪ್ಪವನ್ನು ಸೇರಿಸಿ ಮತ್ತು 1 ನಿಮಿಷ ಬಿಸಿ ಮಾಡಿ.
    * ಸಕ್ಕರೆ, ಹಾಲಿನ ಪುಡಿ, ಹಾಲು ಮತ್ತು ಜಾಯಿಕಾಯಿ ಪುಡಿ ಸೇರಿಸಿ ಪಕ್ಕಕ್ಕೆ ಇರಿಸಿ.
    * ಉಳಿದ ತುಪ್ಪವನ್ನು ವಾಲ್ನಟ್‌ಗೆ ಸೇರಿಸಿ 1 ನಿಮಿಷ ಬೆರೆಸಿ. ಅದನ್ನು 2 ನಿಮಿಷಗಳ ಕಾಲ ಹೆಚ್ಚಿನ ತಾಪದಲ್ಲಿ ಬಿಸಿ ಮಾಡಿ.
    * ಮಿಶ್ರಣಕ್ಕೆ ಹಾಲು ಮತ್ತು ಸಕ್ಕರೆ ಮಿಶ್ರಣ ಸೇರಿಸಿ ಮೈಕ್ರೊವೇವ್‌ನಲ್ಲಿ 1 ನಿಮಿಷ ಹೆಚ್ಚಿನ ತಾಪದಲ್ಲಿ ಬಿಸಿ ಮಾಡಿ.
    * ಈಗ ಗ್ರೀಸ್ ಮಾಡಿದ ಪಾತ್ರೆಯಲ್ಲಿ ಈ ಮಿಶ್ರಣವನ್ನು ಹರಡಿ, 1 ಗಂಟೆ ತಣ್ಣಗಾಗಲು ಪಕ್ಕಕ್ಕೆ ಇರಿಸಿ.
    * ನಂತರ ಅದನ್ನು ಚಾಕುವಿನ ಸಹಾಯದಿಂದ ಚೌಕಾಕಾರ ಇಲ್ಲವೇ ನಿಮ್ಮಿಷ್ಟದ ಆಕಾರಕ್ಕೆ ಕತ್ತರಿಸಿಕೊಳ್ಳಿ.
    * ಇದೀಗ ವಾಲ್ನಟ್ ಬರ್ಫಿ ತಯಾರಾಗಿದ್ದು, ಕುಟುಂಬ, ಸ್ನೇಹಿತರಿಗೆ ಹಂಚಿ. ಇದನ್ನೂ ಓದಿ: ನಾಲ್ಕೇ ಪದಾರ್ಥ ಬಳಸಿ ಮಾಡಿ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್

  • ಫಟಾಫಟ್ ಅಂತ ಮಾಡಿ ಬೀಟ್‌ರೂಟ್ ಹಲ್ವಾ!

    ಫಟಾಫಟ್ ಅಂತ ಮಾಡಿ ಬೀಟ್‌ರೂಟ್ ಹಲ್ವಾ!

    ತಿಥಿಗಳು ಮನೆಗೆ ಬಂದಾಗ ನಾವು ಹೆಚ್ಚಾಗಿ ಸಿಹಿ ತಿಂಡಿಗಳನ್ನು ಮಾಡುತ್ತೇವೆ. ದಿಢೀರ್ ಎಂದು ಅತಿಥಿಗಳು ಮನೆಗೆ ಬಂದ ಸಂದರ್ಭ ಏನು ಸ್ಪೆಷಲ್ ಮಾಡುವುದು ಎಂಬ ಆತಂಕ ಎಲ್ಲರಿಗೂ ಮೂಡುತ್ತದೆ. ಅದಕ್ಕಾಗಿ ಇವತ್ತಿನ ನಮ್ಮ ರೆಸಿಪಿಯಲ್ಲಿ ರುಚಿಯಾದ ಬೀಟ್‌ರೂಟ್ ಹಲ್ವಾ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತೇವೆ. ಖಂಡಿತವಾಗಿಯೂ ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಇದು ಇಷ್ಟವಾಗುವುದಲ್ಲದೇ ಮಾಡಲು ಸಹಾ ತುಂಬಾ ಸುಲಭ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಕೆಲವೇ ನಿಮಿಷ ಸಾಕು – ಸಿಂಪಲ್ ಆಗಿ ಪೈನಾಪಲ್ ರವಾ ಕೇಸರ್ ಮಾಡಿ

    ಬೇಕಾಗುವ ಸಾಮಗ್ರಿಗಳು:
    ಬೀಟ್‌ರೂಟ್ – 4
    ಹಾಲು – 2 ಕಪ್
    ಸಕ್ಕರೆ – 2 ಕಪ್
    ಏಲಕ್ಕಿ ಪುಡಿ – 1 ಚಮಚ
    ತುಪ್ಪ – 3 ಚಮಚ
    ಗೋಡಂಬಿ – ಸ್ವಲ್ಪ
    ಒಣ ದ್ರಾಕ್ಷಿ – ಸ್ವಲ್ಪ
    ಬಾದಾಮಿ – ಸ್ವಲ್ಪ
    ಕೋವಾ – 100 ಗ್ರಾಂ

    ಮಾಡುವ ವಿಧಾನ:
    * ಮೊದಲಿಗೆ ಬೀಟ್‌ರೂಟ್ ಅನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸುಲಿದು ತುರಿದುಕೊಳ್ಳಿ.
    * ಈಗ ಒಂದು ಬಾಣಾಲೆಯಲ್ಲಿ ತುಪ್ಪ ಹಾಕಿಕೊಂಡು ಬಿಸಿಯಾದ ಬಳಿಕ ಅದಕ್ಕೆ ಗೋಡಂಬಿ, ಬಾದಾಮಿ ಹಾಗೂ ಒಣದ್ರಾಕ್ಷಿಗಳನ್ನು ಹಾಕಿಕೊಂಡು ಸ್ವಲ್ಪಹೊತ್ತು ಹುರಿದುಕೊಳ್ಳಿ. ನಂತರ ಅದನ್ನು ಬಾಣಾಲೆಯಿಂದ ತೆಗೆದು ಒಂದು ತಟ್ಟೆಯಲ್ಲಿ ಹಾಕಿ ಪಕ್ಕಕ್ಕಿಡಿ.
    * ಬಳಿಕ ಅದೇ ಬಾಣಾಲೆಗೆ ತುರಿದ ಬೀಟ್‌ರೂಟ್ ಅನ್ನು ಹಾಕಿಕೊಂಡು ಸ್ವಲ್ಪ ಹೊತ್ತು ಚನ್ನಾಗಿ ಹುರಿದುಕೊಳ್ಳಿ.
    * ನಂತರ ಅದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿಕೊಂಡು ಮತ್ತೆ ಹುರಿದುಕೊಳ್ಳಿ. ಬಳಿಕ ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಹೆಚ್ಚಿನ ರುಚಿಗಾಗಿ ಮಂದ ಹಾಲನ್ನು ಹಾಕಿ ಬೇಯಿಸಿಕೊಳ್ಳಿ. ಬಳಿಕ ಇದನ್ನು ಒಂದು ಬೌಲ್‌ಗೆ ಹಾಕಿಕೊಂಡು ಗೋಡಂಬಿ, ಬಾದಾಮಿ ಹಾಗೂ ಒಣದ್ರಾಕ್ಷಿಗಳಿಂದ ಅಲಂಕರಿಸಿ ಸವಿಯಲು ಕೊಡಿ. ಇದನ್ನೂ ಓದಿ: ಹೋಟೆಲ್ ಶೈಲಿಯ ಪಾಲಕ್ ಪನೀರ್ ಹೀಗೆ ಮಾಡಿ

  • ಟೀ ಬ್ರೇಕ್‌ನಲ್ಲಿ ಸವಿಯಲು ಮಾಡಿ ಗೋಡಂಬಿ ಬಟರ್ ಕುಕೀಸ್

    ಟೀ ಬ್ರೇಕ್‌ನಲ್ಲಿ ಸವಿಯಲು ಮಾಡಿ ಗೋಡಂಬಿ ಬಟರ್ ಕುಕೀಸ್

    ಮುಂಜಾನೆ ಅಥವಾ ಸಂಜೆ ಟೀ ಬ್ರೇಕ್‌ನಲ್ಲಿ ಸವಿಯಲು ಕುರುಕಲು ತಿಂಡಿ ಇಲ್ಲವೆಂದರೆ ಏನೋ ಮಿಸ್ ಆದಂತೆ ಎನಿಸುತ್ತದೆ. ಪ್ರತಿ ಬಾರಿ ಅಂಗಡಿಗಳಿಂದ ಬಿಸ್ಕತ್ತು ಅಥವಾ ತಿಂಡಿಗಳನ್ನು ತರೋದಕ್ಕಿಂತ ನೀವೇ ನಿಮ್ಮ ಕೈಯಾರೆ ಮಾಡಿ ಚಹಾ ಜೊತೆ ಸವಿದರೆ ಅದರ ಅನುಭವ ವಿಭಿನ್ನ ಎನಿಸುತ್ತದೆ. ನೀವು ಕೂಡಾ ಗೋಡಂಬಿ ಬಟರ್ ಕುಕೀಸ್ ನಿಮ್ಮ ಕೈಯಾರೆ ಮಾಡಿ ಟೀ ಬ್ರೇಕ್‌ನಲ್ಲಿ ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಹುರಿದ ಗೋಡಂಬಿ – 2 ಕಪ್
    ಬೆಚ್ಚಗಿನ ನೀರು – 2 ಕಪ್
    ನೀರು – ಕಾಲು ಕಪ್
    ತೆಂಗಿನ ಎಣ್ಣೆ – ಕಾಲು ಕಪ್
    ಸಕ್ಕರೆ – ಅರ್ಧ ಕಪ್
    ಮೊಟ್ಟೆ – 2
    ಬೇಕಿಂಗ್ ಪೌಡರ್ – 1 ಟೀಸ್ಪೂನ್
    ಚಾಕೋಚಿಪ್ಸ್ – 1 ಕಪ್ ಇದನ್ನೂ ಓದಿ: ಪಾರ್ಟಿಗೆ ಮಾಡಿ ಚೀಸ್ ಚಿಕನ್ ಬಾಲ್ಸ್

    ಮಾಡುವ ವಿಧಾನ:
    * ಮೊದಲಿಗೆ ಹುರಿದ ಗೋಡಂಬಿಯನ್ನು ಬೆಚ್ಚಗಿನ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಸಿ ಇಡಿ.
    * ಓವನ್ ಅನ್ನು ಪೂರ್ವಭಾವಿಯಾಗಿ ಕಾಯಿಸಿ ಬೇಕಿಂಗ್ ಶೀಟ್‌ಗೆ ಬಟರ್ ಪೇಪರ್ ಅನ್ನು ಜೋಡಿಸಿ ಇಟ್ಟಿರಿ.
    * ಈಗ ನೆನೆಸಿದ ಗೋಡಂಬಿಯನ್ನು ಎಲೆಕ್ಟ್ರಿಕ್ ಬ್ಲೆಂಡರ್‌ನಲ್ಲಿ ಹಾಕಿ ನೀರು ಹಾಗೂ ತೆಂಗಿನ ಎಣ್ಣೆಯನ್ನು ಸೇರಿಸಿ ಪುಡಿ ಮಾಡಿಕೊಳ್ಳಿ.
    * ಈಗ ದೊಡ್ಡ ಬಟ್ಟಲಿನಲ್ಲಿ ಗೋಡಂಬಿ ಮಿಶ್ರಣ, ಸಕ್ಕರೆ, ಮೊಟ್ಟೆ, ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
    * ಈಗ ಬೇಕಿಂಗ್ ಶೀಟ್‌ನಲ್ಲಿ ಒಂದೊಂದೇ ಟೀಸ್ಪೂನ್ ಮಿಶ್ರಣವನ್ನು ದೂರ ದೂರದಲ್ಲಿ ಬಿಡಿ. ಸ್ವಲ್ಪ ಚಪ್ಪಟೆಯಾಗಲು ಅದರ ಮೇಲೆ ಮೆತ್ತಗೆ ಒತ್ತಿಕೊಳ್ಳಿ.
    * ಅವುಗಳ ಮೇಲೆ ಚಾಕ್ಲೇಟ್ ಚಿಪ್ ಅನ್ನು ಹರಡಿ.
    * ಈಗ ಬೇಕಿಂಗ್ ಶೀಟ್ ಅನ್ನು ಓವನ್ ಅಲ್ಲಿ ಇಟ್ಟು 25-30 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ.
    * ನಂತರ ಅದನ್ನು ಓವನ್‌ನಿಂದ ತೆಗೆದು ಸಂಪೂರ್ಣ ತಣ್ಣಗಾಗಲು ಬಿಡಿ.
    * ಇದೀಗ ಗೋಡಂಬಿ ಬಟರ್ ಕುಕೀಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: 10 ನಿಮಿಷದಲ್ಲಿ ಮಾಡಿ ರೋಲೆಕ್ಸ್..!

  • ಕೆಲವೇ ನಿಮಿಷ ಸಾಕು – ಸಿಂಪಲ್ ಆಗಿ ಪೈನಾಪಲ್ ರವಾ ಕೇಸರ್ ಮಾಡಿ

    ಕೆಲವೇ ನಿಮಿಷ ಸಾಕು – ಸಿಂಪಲ್ ಆಗಿ ಪೈನಾಪಲ್ ರವಾ ಕೇಸರ್ ಮಾಡಿ

    ಸಿಹಿ ಬೇಕು ಎನ್ನುವವರಲ್ಲಿ ವಯಸ್ಸಿನ ಮಿತಿಯಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಿಹಿ ತಿನಿಸನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಮಾತ್ರವಲ್ಲದೇ ಸಿಹಿ ಸವಿಯಬೇಕೆಂದು ಯಾವ ಸಮಯದಲ್ಲೂ ಎನಿಸಬಹುದು. ಅಂತಹವರಿಗಾಗಿ ಕ್ವಿಕ್ ಆಗಿ ತಯಾರಿಸಬಹುದಾದ ರೆಸಿಪಿಯನ್ನು ಹೇಳಿಕೊಡುತ್ತೇವೆ. ಸಿಹಿ ಸವಿಯಬೇಕೆನಿಸಿದಾಗ ಸಿಂಪಲ್ ಆಗಿ ಪೈನಾಪಲ್ ರವಾ ಕೇಸರ್ ನೀವು ಕೂಡಾ ಮಾಡಿ, ಮನೆ ಮಂದಿಗೂ ಹಂಚಿ.

    ಬೇಕಾಗುವ ಪದಾರ್ಥಗಳು:
    ರವೆ – ಅರ್ಧ ಕಪ್
    ಸಕ್ಕರೆ – ಅರ್ಧ ಕಪ್
    ನೀರು – 1 ಕಪ್
    ತುಪ್ಪ – 2 ಟೀಸ್ಪೂನ್
    ಏಲಕ್ಕಿ – ಕಾಲು ಟೀಸ್ಪೂನ್
    ಕೇಸರಿ – ಕೆಲವು ಎಳೆಗಳು
    ಸಣ್ಣಗೆ ಹೆಚ್ಚಿದ ಅನನಾಸ್ – ಕಾಲು ಕಪ್
    ಬೆಚ್ಚಗಿನ ಹಾಲು – 2 ಟೀಸ್ಪೂನ್
    ಹೆಚ್ಚಿದ ಗೋಡಂಬಿ, ಬಾದಾಮಿ – 1 ಟೀಸ್ಪೂನ್
    ಒಣ ದ್ರಾಕ್ಷಿ – 2 ಟೀಸ್ಪೂನ್
    ಆಹಾರ ಬಣ್ಣ – ಚಿಟಿಕೆ ಇದನ್ನೂ ಓದಿ: ನಾಲ್ಕೇ ಪದಾರ್ಥ ಬಳಸಿ ಮಾಡಿ ಸಿಹಿಯಾದ ಚಾಕ್ಲೇಟ್ ಮೈಸೂರ್ ಪಾಕ್

    ಮಾಡುವ ವಿಧಾನ:
    * ಮೊದಲಿಗೆ ಬೆಚ್ಚಗಿನ ಹಾಲಿನಲ್ಲಿ ಕೇಸರಿ ಎಳೆಗಳನ್ನು ನೆನೆಸಿ.
    * ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಅನನಾಸ್ ತುಂಡುಗಳನ್ನು ಕುದಿಸಿ.
    * ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದರಲ್ಲಿ ಗೋಡಂಬಿ, ಬಾದಾಮಿ ಹಾಗೂ ಒಣ ದ್ರಾಕ್ಷಿಗಳನ್ನು ಹುರಿದು, ಒಂದು ಬೌಲ್‌ಗೆ ವರ್ಗಾಯಿಸಿ.
    * ಪ್ಯಾನ್ ಅನ್ನು ಬಿಸಿಗೆ ಇಟ್ಟು, ಅದರಲ್ಲಿ ಕಡಿಮೆ ಉರಿಯಲ್ಲಿ ರವೆಯನ್ನು 5-6 ನಿಮಿಷಗಳ ಕಾಲ ಹುರಿಯಿರಿ.
    * ಏಲಕ್ಕಿ, ಕೇಸರಿ ಹಾಲು, ಅನನಾಸ್ ಅನ್ನು ಕುದಿಸಿದ ನೀರು ಹಾಗೂ ಆಹಾರ ಬಣ್ಣವನ್ನು ಸೇರಿಸಿ. ಉಂಡೆಗಳಾಗುವುದನ್ನು ತಪ್ಪಿಸಲು ಬಿಸಿ ನೀರನ್ನು ಸುರಿಯುವಾಗ ಬೆರೆಸಿಕೊಳ್ಳಿ. ಅದನ್ನು 1 ನಿಮಿಷ ಬೇಯಿಸಿ.
    * ನಂತರ ಸಕ್ಕರೆ ಸೇರಿಸಿ, ಚೆನ್ನಾಗಿ ಬೆರೆಸಿ ಮತ್ತು 2 ನಿಮಿಷ ಬೇಯಿಸಿ.
    * ತುಪ್ಪ ಸಮೇತ ಹುರಿದ ಒಣ ಬೀಜಗಳನ್ನು ಅದಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    * ಇದೀಗ ಸಿಂಪಲ್ ಪೈನಾಪಲ್ ರವಾ ಕೇಸರ್ ತಯಾರಾಗಿದ್ದು, ಬಿಸಿ ಅಥವಾ ತಣ್ಣಗಾದ ಬಳಿಕ ಸವಿಯಿರಿ. ಇದನ್ನೂ ಓದಿ: ಸಿಂಪಲ್ ಸ್ಟ್ರಾಬೆರಿ ಕಪ್‌ಕೇಕ್ ಹೀಗೆ ಮಾಡಿ

  • ಪಾರ್ಟಿಗೆ ಮಾಡಿ ಚೀಸ್ ಚಿಕನ್ ಬಾಲ್ಸ್

    ಪಾರ್ಟಿಗೆ ಮಾಡಿ ಚೀಸ್ ಚಿಕನ್ ಬಾಲ್ಸ್

    ಟೇಸ್ಟಿ ಚೀಸ್ ಚಿಕನ್ ಬಾಲ್ಸ್ ಪಾರ್ಟಿ ಟೈಮ್‌ಗೆ ಒಂದು ಬೆಸ್ಟ್ ಖಾದ್ಯವಾಗಿದೆ. ಮನೆಯಲ್ಲಿ ಏನಾದ್ರೂ ವಿಶೇಷ ಸಂದರ್ಭಗಳಲ್ಲಿ, ಸ್ನೇಹಿತರು ಇಲ್ಲವೇ ನೆಂಟರು ಬಂದಾಗ ಇದನ್ನು ಮಾಡಿ ಸವಿಯಬಹುದು. ಮಕ್ಕಳಿಗೂ ಇದು ತುಂಬಾ ಇಷ್ಟವಾಗುವ ರೆಸಿಪಿ. ನೀವು ಕೂಡಾ ಈ ರೆಸಿಪಿಯನ್ನು ಮಾಡಿ, ಪಾರ್ಟಿ ಟೈಂ ಅನ್ನು ಮಜವಾಗಿಸಿ.

    ಬೇಕಾಗುವ ಪದಾರ್ಥಗಳು:
    ಕೊಚ್ಚಿದ ಚಿಕನ್ – ಅರ್ಧ ಕೆಜಿ
    ಮೊಟ್ಟೆ – 1
    ಬೆಳ್ಳುಳ್ಳಿ – 3
    ಉಪ್ಪು – ರುಚಿಗೆ ತಕ್ಕಷ್ಟು
    ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
    ಹುರಿದ ಈರುಳ್ಳಿ – 2 ಟೀಸ್ಪೂನ್
    ಚೀಸ್ ಕ್ಯೂಬ್ಸ್- ಅಗತ್ಯಕ್ಕೆ ತಕ್ಕಷ್ಟು
    ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸುಪ್ಪು – 2 ಟೀಸ್ಪೂನ್
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1
    ಬ್ರೆಡ್ ಕ್ರಂಬ್ಸ್ – 1 ಕಪ್ ಇದನ್ನೂ ಓದಿ: 10 ನಿಮಿಷದಲ್ಲಿ ಮಾಡಿ ರೋಲೆಕ್ಸ್..!

    ಮಾಡುವ ವಿಧಾನ:
    * ಮೊದಲಿಗೆ ಚೀಸ್, ಬ್ರೆಡ್ ಹಾಗೂ ಮೊಟ್ಟೆಯನ್ನು ಹೊರತುಪಡಿಸಿ ಎಲ್ಲಾ ಪದಾರ್ಥಗಳನ್ನು ಒಂದು ಬೌಲ್‌ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ನಿಮ್ಮ ಅಂಗೈಯಲ್ಲಿ ಪ್ಯಾಟಿ ರೂಪಿಸುವಷ್ಟು ಮಿಶ್ರಣವನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಚಪ್ಪಟೆ ಮಾಡಿ.
    * ಅದರ ನಡುವೆ ಚೀಸ್ ಕ್ಯೂಬ್ ಅನ್ನು ಇಟ್ಟು, ಅದರ ಸುತ್ತ ಮಾಂಸದ ಮಿಶ್ರಣವನ್ನು ಮಡಚಿಕೊಂಡು ಚೆಂಡನ್ನಾಗಿ ಸುತ್ತಿಕೊಳ್ಳಿ. ಉಳಿದ ಮಿಶ್ರಣವನ್ನು ಕೂಡಾ ಹೀಗೇ ಮಾಡಿ ತಯಾರಿಸಿ ಇಡಿ.
    * ಒಂದು ಬೌಲ್‌ನಲ್ಲಿ ಮೊಟ್ಟೆಯನ್ನು ಒಡೆದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    * ಇನ್ನೊಂದು ಪ್ಲೇಟ್‌ನಲ್ಲಿ ಬ್ರೆಡ್ ಕ್ರಂಬ್ಸ್ ಅನ್ನು ಹರಡಿ ಇಟ್ಟಿರಿ.
    * ಈಗ ಪ್ಯಾಟೀಯನ್ನು ಒಂದೊಂದಾಗಿ ಮೊಟ್ಟೆಯ ಮಿಶ್ರಣದಲ್ಲಿ ಅದ್ದಿ, ಬಳಿಕ ಬ್ರೆಡ್ ಕ್ರಂಬ್ಸ್‌ನ ಪ್ಲೇಟ್‌ನಲ್ಲಿ ಹಾಕಿ ಸುತ್ತಲೂ ಕೋಟ್ ಆಗುವಂತೆ ಉರುಳಿಸಿ.
    * ಈಗ ಕಾದ ಎಣ್ಣೆಯಲ್ಲಿ ಈ ಪ್ಯಾಟೀಗಳನ್ನು ಹಾಕಿ, ಮಧ್ಯಮ ಉರಿಯಲ್ಲಿ ಡೀಪ್ ಫ್ರೈ ಮಾಡಿ.
    * ಪ್ಯಾಟೀಗಳ ಸುತ್ತಲೂ ಗೋಲ್ಡನ್ ಬ್ರೌನ್ ಬಣ್ಣ ಬಂದ ಮೇಲೆ ಅದನ್ನು ಎಣ್ಣೆಯಿಂದ ತೆಗೆದು, ಟಿಶ್ಯೂ ಪೇಪರ್ ಮೇಲೆ ಹರಡಿ.
    * ಇದೀಗ ಗರಿಗರಿಯಾ ಚೀಸ್ ಚಿಕನ್ ಬಾಲ್ಸ್ ಸವಿಯಲು ಸಿದ್ಧವಾಗಿದ್ದು, ಸಾಸ್ ಅಥವಾ ಮೆಯೋನೀಸ್‌ನೊಂದಿಗೆ ಬಡಿಸಿ. ಇದನ್ನೂ ಓದಿ: ಬಾಯಲ್ಲಿ ನೀರೂರಿಸೋ ಸಿಂಪಲ್ ಬಟರ್ ಗಾರ್ಲಿಕ್ ಸ್ಕ್ವಿಡ್

    
    
  • ಹೋಟೆಲ್ ಶೈಲಿಯ ಪಾಲಕ್ ಪನೀರ್ ಹೀಗೆ ಮಾಡಿ

    ಹೋಟೆಲ್ ಶೈಲಿಯ ಪಾಲಕ್ ಪನೀರ್ ಹೀಗೆ ಮಾಡಿ

    ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ರೋಟಿ, ಬಟರ್ ನಾನ್, ಕುಲ್ಚಾ ಮುಂತಾದ ಆಹಾರಗಳೊಂದಿಗೆ ಗ್ರೇವಿ ತಿಂದಿರುತ್ತೀರಿ. ಗ್ರೇವಿಗಳಲ್ಲಿ ಅನೇಕ ವಿಧಗಳಿವೆ. ಕಾಜೂ ಗ್ರೇವಿ, ಪನೀರ್ ಗ್ರೇವಿ, ಪಾಲಕ್ ಪನೀರ್ ಮುಂತಾದವುಗಳು ರೋಟಿಗಳಿಗೆ ಅದ್ಭುತ ಕಾಂಬಿನೇಷನ್ ಆಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಾಲಕ್ ಪನೀರ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ರಿಚ್ ಫ್ಲೇವರ್‌ನ ನವಾಬಿ ಪನೀರ್

    ಬೇಕಾಗುವ ಸಾಮಗ್ರಿಗಳು:
    ಪಾಲಕ್ ಸೊಪ್ಪು – 1 ಕಪ್
    ಪನೀರ್ ಕ್ಯೂಬ್ಸ್ – 100 ಗ್ರಾಂ
    ಪಲಾವ್ ಎಲೆ -2
    ಜೀರಿಗೆ – ಅರ್ಧ ಚಮಚ
    ಚೆಕ್ಕೆ – ಸ್ವಲ್ಪ
    ಏಲಕ್ಕಿ – 1
    ಬೆಣ್ಣೆ – 2 ಚಮಚ
    ಕಸೂರಿ ಮೇತಿ – 2 ಚಮಚ
    ಹಸಿರು ಮೆಣಸಿನ ಕಾಯಿ – 3
    ಬೆಳ್ಳುಳ್ಳಿ – 5 ಎಸಳು
    ಶುಂಠಿ – ಅರ್ಧ ಇಂಚು
    ಗರಂ ಮಸಾಲ – ಅರ್ಧ ಚಮಚ
    ಅಚ್ಚ ಖಾರದ ಪುಡಿ – ಅರ್ಧ ಚಮಚ
    ಅರಶಿಣ – ಕಾಲು ಚಮಚ
    ಫ್ರೆಶ್ ಕ್ರೀಮ್ – 2 ಚಮಚ
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಟೊಮೆಟೊ – 1
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಕಾಯಲು ಇಟ್ಟು ಕುದಿಯಲು ಆರಂಭವಾದ ಬಳಿಕ ಅದಕ್ಕೆ ಪಾಲಕ್ ಸೊಪ್ಪನ್ನು ಹಾಕಿ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಬಳಿಕ ಅದನ್ನು ಬಿಸಿನೀರಿನಿಂದ ತೆಗೆದು ತಣ್ಣಿರಿಗೆ ಹಾಕಿಕೊಳ್ಳಿ. ಬಳಿಕ ಪಾಲಕ್ ಸೊಪ್ಪನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು, ಅದಕ್ಕೆ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿಕೊಳ್ಳಿ. ಬಳಿಕ ಅರ್ಧ ಲೋಟ ನೀರನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
    * ಈಗ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ 2 ಚಮಚ ಬೆಣ್ಣೆ ಹಾಕಿಕೊಳ್ಳಿ. ಬೆಣ್ಣೆ ಕರಗಿದ ಬಳಿಕ ಅದಕ್ಕೆ ಒಂದು ಚಮಚ ಎಣ್ಣೆಯನ್ನು ಹಾಕಿಕೊಳ್ಳಿ. ಬಿಸಿಯಾದ ಬಳಿಕ ಅದಕ್ಕೆ ಪನೀರ್ ಅನ್ನು ಹಾಕಿಕೊಂಡು 2ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಿ.
    * ಬಳಿಕ ಪನೀರ್ ಅನ್ನು ಒಂದು ಪ್ಲೇಟ್‌ನ್ಲಲಿ ತೆಗೆದಿಡಿ. ಈಗ ಅದೇ ಪ್ಯಾನ್‌ಗೆ ಚೆಕ್ಕೆ, ಜೀರಿಗೆ, ಪಲಾವ್ ಎಲೆ, ಏಲಕ್ಕಿ ಹಾಕಿಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಳ್ಳಿ.
    * ಈರುಳ್ಳಿ ಗೋಲ್ಡನ್ ಬಣ್ಣ ಬಂದ ಬಳಿಕ ಅದಕ್ಕೆ ಹೆಚ್ಚಿದ ಟೊಮೊಟೊ ಹಾಕಿಕೊಂಡು ಚನ್ನಾಗಿ ಬೇಯಿಸಿಕೊಳ್ಳಿ. ಬಳಿಕ ಇದಕ್ಕೆ ಅರಶಿಣ, ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಇದಕ್ಕೆ ರುಬ್ಬಿದ ಪಾಲಕ್ ಮಿಶ್ರಣವನ್ನು ಹಾಕಿಕೊಳ್ಳಿ. ಮಿಶ್ರಣ ಚನ್ನಾಗಿ ಕುದಿದ ಬಳಿಕ ಅದಕ್ಕೆ ಪನೀರ್ ಅನ್ನು ಸೇರಿಸಿಕೊಳ್ಳಿ. ಬಳಿಕ ಅದಕ್ಕೆ ಫ್ರೆಶ್ ಕ್ರೀಮ್ ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ.
    * ನಂತರ ಇದಕ್ಕೆ ಗರಂ ಮಸಾಲೆಯನ್ನು ಹಾಕಿಕೊಳ್ಳಿ. ಈಗ ಇದಕ್ಕೆ ಕಸೂರಿ ಮೇತಿಯನ್ನು ಸೇರಿಸಿಕೊಂಡು 2 ನಿಮಿಷಗಳ ಕಾಲ ಮೀಡಿಯಮ್ ಫ್ಲೇಮ್‌ನಲ್ಲಿ ಕುದಿಸಿಕೊಳ್ಳಿ.
    * ಈಗ ಇದನ್ನು ಒಂದು ಸರ್ವಿಂಗ್ ಬೌಲ್‌ಗೆ ಹಾಕಿಕೊಂಡು ಬಿಸಿಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಕಾಶ್ಮೀರಿ ಪಿಂಕ್ ಚಹಾ ಟ್ರೈ ಮಾಡಿದ್ದೀರಾ?

  • ರಿಚ್ ಫ್ಲೇವರ್‌ನ ನವಾಬಿ ಪನೀರ್

    ರಿಚ್ ಫ್ಲೇವರ್‌ನ ನವಾಬಿ ಪನೀರ್

    ನೀರ್ ಶತಮಾನಗಳಿಂದಲೂ ಭಾರತದ ರಾಜಮನೆತನದವರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಹಾಲಿನಿಂದ ತಯಾರಿಸುವ ಪನೀರ್ ಅನ್ನು ಭಾರತೀಯ ಚೀಸ್ ಎಂತಲೂ ಕರೆಯುತ್ತಾರೆ. ನಾವಿಂದು ಹೇಳಿಕೊಡುತ್ತಿರುವ ನವಾಬಿ ಪನೀರ್ ಅನ್ನು ತಯಾರಿಸುವುದು ಸರಳ ಮಾತ್ರವಲ್ಲದೇ ರುಚಿಕರವೂ ಹೌದು. ಗೋಡಂಬಿಯ ಗ್ರೇವಿ ಶ್ರೀಮಂತ ಮನೆತನದ ಆಹಾರದ ಸ್ವಾದ ನೀಡುತ್ತದೆ. ಪರೋಟಾ, ಚಪಾತಿ ಅಥವಾ ಅನ್ನದೊಂದಿಗೆ ಸವಿಯಬಹುದಾದ ನವಾಬಿ ಪನೀರ್ ಮಾಡೋದು ಹೇಗೆಂದು ನೋಡೋಣ.

    ಬೇಕಾಗುವ ಪದಾರ್ಥಗಳು:
    ಹೆಚ್ಚಿದ ಈರುಳ್ಳಿ – ಮುಕ್ಕಾಲು ಕಪ್
    ಹೆಚ್ಚಿದ ಹಸಿರು ಮೆಣಸಿನಕಾಯಿ – 4
    ಬೆಳ್ಳುಳ್ಳಿ – 6
    ಶುಂಠಿ – ಅರ್ಧ ಇಂಚು
    ಸಿಪ್ಪೆ ತೆಗೆದ ಬಾದಾಮಿ – 8
    ಗಸೆಗಸೆ – 1 ಟೀಸ್ಪೂನ್
    ತುಪ್ಪ – 4 ಟೀಸ್ಪೂನ್
    ಪನೀರ್ – ಒಂದೂವರೆ ಕಪ್
    ದಾಲ್ಚಿನ್ನಿ ಎಲೆ – 1
    ದಾಲ್ಚಿನ್ನಿ ಚಕ್ಕೆ – 1 ಇಂಚು
    ಏಲಕ್ಕಿ – 2
    ಲವಂಗ – 3
    ಜೀರಿಗೆ – ಅರ್ಧ ಟೀಸ್ಪೂನ್
    ಮೊಸರು – ಕಾಲು ಕಪ್
    ಹಾಲು – 1 ಕಪ್
    ಕೇಸರಿ ಎಸಳು – ಕೆಲವು
    ಬೆಚ್ಚನೆಯ ಹಾಲು – 2 ಟೀಸ್ಪೂನ್
    ಫ್ರೆಶ್ ಕ್ರೀಮ್ – 2 ಟೀಸ್ಪೂನ್
    ಕರಿ ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಕಸೂರಿ ಮೇಥಿ – ಅರ್ಧ ಟೀಸ್ಪೂನ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಜೈಪುರದ ವಿಶಿಷ್ಟ ಉಪಹಾರ – ಮಿರ್ಚಿ ವಡಾ ಟ್ರೈ ಮಾಡಿ

    ಮಾಡುವ ವಿಧಾನ:
    * ಮೊದಲಿಗೆ ಬೆಚ್ಚಗಿನ ಹಾಲಿನಲ್ಲಿ ಕೇಸರಿ ಎಳೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇಡಿ.
    * ಆಳವಾದ ಪ್ಯಾನ್‌ನಲ್ಲಿ ಈರುಳ್ಳಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಬಾದಾಮಿ, ಗೋಡಂಬಿ, ಗಸಗಸೆ ಮತ್ತು 1 ಕಪ್ ನೀರನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮಧ್ಯಮ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ.
    * ಬಳಿಕ ಉರಿಯನ್ನು ಆಫ್ ಮಾಡಿ ತಣ್ಣಗಾಗಲು ಬಿಡಿ.
    * ಅವುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ನಯವಾದ ಪೇಸ್ಟ್ನಂತೆ ರುಬ್ಬಿಕೊಳ್ಳಿ. ನಂತರ ಅದನ್ನು ಪಕ್ಕಕ್ಕೆ ಇರಿಸಿ.
    * ಒಂದು ಅಗಲವಾದ ನಾನ್‌ಸ್ಟಿಕ್ ಪ್ಯಾನ್‌ನಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ, ಪನೀರ್ ಕ್ಯೂಬ್‌ಗಳನ್ನು ಸೇರಿಸಿ ಮತ್ತು ಅವುಗಳನ್ನು ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಬಳಿಕ ಪಕ್ಕಕ್ಕೆ ಇಡಿ.
    * ಆಳವಾದ ಬಾಣಲೆಯಲ್ಲಿ ಉಳಿದ ತುಪ್ಪವನ್ನು ಬಿಸಿ ಮಾಡಿ, ದಾಲ್ಚಿನ್ನಿ ಎಲೆ, ದಾಲ್ಚಿನ್ನಿ ಚಕ್ಕೆ, ಏಲಕ್ಕಿ, ಲವಂಗ, ಜೀರಿಗೆ ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
    * ತಯಾರಿಸಿಟ್ಟಿದ್ದ ಪೇಸ್ಟ್, ಮೊಸರು ಸೇರಿಸಿ ಮತ್ತು ಆಗಾಗ ಕೈಯಾಡಿಸುತ್ತಾ 3-4 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
    * ಹಾಲು, ಕೇಸರಿ ಹಾಲಿನ ಮಿಶ್ರಣ, ಫ್ರೆಶ್ ಕ್ರೀಮ್, ಕರಿ ಮೆಣಸಿನ ಪುಡಿ ಮತ್ತು ಕಸೂರಿ ಮೇಥಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 2 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
    * ಈಗ ಹುರಿದ ಪನೀರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಆಗಾಗ ಕೈಯಾಡಿಸುತ್ತಾ 5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
    * ಇದೀಗ ನವಾಬಿ ಪನೀರ್ ತಯಾರಾಗಿದ್ದು, ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ