Tag: recipe

  • ಸುಲಭವಾಗಿ ಮಾಡಿ ರುಚಿಕರ ಗಾರ್ಲಿಕ್ ಮಶ್ರೂಮ್

    ಸುಲಭವಾಗಿ ಮಾಡಿ ರುಚಿಕರ ಗಾರ್ಲಿಕ್ ಮಶ್ರೂಮ್

    ನಾನ್‌ವೆಜ್ ತಿನ್ನದವರಿಗೆ ಪನೀರ್, ಮಶ್ರೂಮ್ ರೆಸಿಪಿಗಳು ಸಾಮಾನ್ಯವಾಗಿ ಇಷ್ಟವಾಗುತ್ತದೆ. ದಿನಾ ಒಂದೇ ರೀತಿಯ ರೆಸಿಪಿ ತಿಂದು ಬೋರ್ ಆಗಿದ್ರೆ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ತುಂಬಾ ಸುಲಭವಾಗಿ ಗಾರ್ಲಿಕ್ ಮಶ್ರೂಮ್ ರೆಸಿಪಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದು ಊಟಕ್ಕೆ ಪರ್ಫೆಕ್ಟ್ ಸೈಡ್ ಡಿಶ್. ಅಲ್ಲದೇ ಸಂಜೆ ಸ್ನ್ಯಾಕ್ಸ್ ರೀತಿಯಲ್ಲೂ ಇದನ್ನು ತಿನ್ನಬಹುದು. ಹಾಗಿದ್ರೆ ನೀವೂ ಕೂಡ ನಿಮ್ಮ ಮನೆಯಲ್ಲಿ ಈ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ.‌

    ಬೇಕಾಗುವ ಸಾಮಗ್ರಿಗಳು:
    ಮಶ್ರೂಮ್ – 1 ಕಪ್
    ಬೆಣ್ಣೆ – 1 ಚಮಚ
    ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – ಸ್ವಲ್ಪ
    ಕಾಳುಮೆಣಸಿನ ಪುಡಿ – 1 ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಕೊತ್ತಂಬರಿಸೊಪ್ಪು – ಸ್ವಲ್ಪ
    ಮಿಕ್ಸ್ಡ್ ಹರ್ಬ್ಸ್ ಪೌಡರ್ – 1 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಮಶ್ರೂಮ್ ಅನ್ನು ಚೆನ್ನಾಗಿ ತೊಳೆದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ.
    * ನಂತರ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಅದು ಕರಗುತ್ತಿದ್ದಂತೆ ಬೆಳ್ಳುಳ್ಳಿ ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿ.
    * ಈಗ ಅದಕ್ಕೆ ಮಶ್ರೂಮ್ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ಹೊತ್ತಿನ ನಂತರ ಮಶ್ರೂಮ್ ನೀರು ಬಿಡುತ್ತದೆ. ನೀರು ಆವಿಯಾಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ.
    * ಬಳಿಕ ಇದಕ್ಕೆ ಕಾಳುಮೆಣಸಿನ ಪುಡಿ, ಮಿಕ್ಸ್ಡ್ ಹರ್ಬ್ಸ್ ಪೌಡರ್ ಸೇರಿಸಿ ಮಿಕ್ಸ್ ಮಾಡಿ.
    * ನಂತರ ಉಪ್ಪು, ಕೊತ್ತಂಬರಿಸೊಪ್ಪು ಸೇರಿಸಿದರೆ ರುಚಿಕರವಾದ ಗಾರ್ಲಿಕ್ ಮಶ್ರೂಮ್ ಸವಿಯಲು ಸಿದ್ಧ.

  • ಈರುಳ್ಳಿ ಉಪ್ಪಿನಕಾಯಿ – ಮನೆಯಲ್ಲೇ ಮಾಡಿ ಬಾಯಿ ಚಪ್ಪರಿಸಿ

    ಈರುಳ್ಳಿ ಉಪ್ಪಿನಕಾಯಿ – ಮನೆಯಲ್ಲೇ ಮಾಡಿ ಬಾಯಿ ಚಪ್ಪರಿಸಿ

    ಊಟದ ಜೊತೆ ಉಪ್ಪಿನಕಾಯಿ ಇದ್ರೇನೆ ಚೆಂದ. ಉಪ್ಪಿನ ಕಾಯಿಯಲ್ಲಿ ನಿಂಬೆ, ಮಾವಿನಮಿಡಿ ಉಪ್ಪಿನಕಾಯಿ, ಮಿಶ್ರ ಉಪ್ಪಿನಕಾಯಿ ಹೀಗೆ ಅನೇಕ ಬಗೆಯ ಉಪ್ಪಿನಕಾಯಿಗಳನ್ನ ತಯಾರಿಸಬಹುದು. ಆದ್ರೆ ಡಿಫರೆಂಟ್‌ ಆಗಿ ನಾವಿಂದು ಈರುಳ್ಳಿ ಉಪ್ಪಿನಕಾಯಿ ಬಗ್ಗೆ ಕೇಳಿದ್ದೀರಾ? ಮನೆಯಲ್ಲೇ ಮಾಡಿ ಬಾಯಿ ಚಪ್ಪರಿಸಬಹುದು…

    ಬೇಕಾಗುವ ಸಾಮಗ್ರಿಗಳು:
    * ಕೆಜಿ ಈರುಳ್ಳಿ- ಅರ್ಧ ಕೆಜಿ
    * ಬೆಳ್ಳುಳ್ಳಿ – 100 ಗ್ರಾಂ
    * ಹಸಿಮೆಣಸಿನ ಕಾಯಿ 4-5
    * ಮೆಣಸಿನ ಪುಡಿ -2 ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್
    * ಹುಣಸೆಹಣ್ಣಿನ ರಸ -2 ಚಮಚ
    * ಬೆಲ್ಲ -ಸ್ವಲ್ಪ
    * ಬೇವಿನ ಎಲೆ – ಸ್ವಲ್ಪ
    * ರುಚಿಗೆ ತಕ್ಕ ಉಪ್ಪು

    ಮಾಡುವ ವಿಧಾನ:
    * ಈರುಳ್ಳಿ, ಹಸಿಮೆಣಸಿ ಕಾಯಿಯನ್ನು ಕತ್ತರಿಸಬೇಕು.ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಇಡಿ
    * ಅಡುಗೆ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಮೇಲಿನ ಮಿಶ್ರಣವನ್ನು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
    * ಈಗ ಕಡಿಮೆ ಉರಿ ಮಾಡಿ ಅದಕ್ಕೆ ಮೆಣಸಿನ ಪುಡಿ, ಉಪ್ಪು, ಹುಣಸೆ ಹಣ್ಣಿನ ರಸ, ಬೆಲ್ಲ ಹಾಕಿ ಸ್ವಲ್ಪ ಹೊತ್ತು ಸೌಟ್ ನಿಂದ ತಿರುಗಿಸುತ್ತಾ ಇರಬೇಕು.
    * ಉಳಿದ ಅಡುಗೆ ಎಣ್ಣೆಯನ್ನು ಬಿಸಿ ಮಾಡಿ ಈ ಮಿಶ್ರಣದ ಮೇಲೆ ಸುರಿಯಿರಿ. ಈಗ ರುಚಿಯಾದ ಈರುಳ್ಳಿ ಉಪ್ಪಿನ ಕಾಯಿ ಸವಿಯಲು ಸಿದ್ಧವಾಗುತ್ತದೆ.

  • ದೀಪಾವಳಿಗೆ ಮೊಸರು ಕೋಡುಬಳೆ ಮಾಡಿ, ಆನಂದಿಸಿ

    ದೀಪಾವಳಿಗೆ ಮೊಸರು ಕೋಡುಬಳೆ ಮಾಡಿ, ಆನಂದಿಸಿ

    ದೀಪಾವಳಿ ಹಬ್ಬ ಶುರುವಾಗಿದೆ. ಎಲ್ಲರ ಮನೆಯಲ್ಲೂ ದೀಪ ಬೆಳಗುತ್ತಾ, ದೀಪದ ಜೊತೆಗೆ ಸಂತೋಷವು ಬೆಳಗುತ್ತಿದೆ. ಈ ಸಂತೋಷದಲ್ಲಿ ಎಲ್ಲರ ಬಾಯಿಯು ಸಿಹಿಯೊಂದಿಗೆ ಸಂಭ್ರಮಿಸುತ್ತಿದೆ. ಅದರಂತೆ ಚೂರು ಸಿಹಿಯೊಂದಿಗೆ ಚೂರು ಖಾರವು ಬೇಕು. ಅದಕ್ಕೆ ದೀಪಾವಳಿಯಂದು ಅತಿಥಿಗಳಿಗೆ ಮೊಸರು ಕೋಡುಬಳೆ ಮಾಡಿಕೊಡಿ. ತುಂಬಾ ಇಷ್ಟವಾಗುತ್ತೆ.

    ಬೇಕಾಗುವ ಪದಾರ್ಥಗಳು;
    ಅಕ್ಕಿ ಹಿಟ್ಟು
    ಗಟ್ಟಿ ಮೊಸರು
    ಹಸಿ ತೆಂಗಿನಕಾಯಿ ತುರಿ
    ಜೀರಿಗೆ
    ಹಸಿ ಮೆಣಸಿನಕಾಯಿ
    ಕರಿಬೇವು
    ಇಂಗು
    ಉಪ್ಪು
    ಎಣ್ಣೆ

    ಮಾಡುವ ವಿಧಾನ;
    ಮೊದಲು, ಒಂದು ಪಾತ್ರೆಯಲ್ಲಿ ಗಟ್ಟಿ ಮೊಸರು, ಹಸಿ ತೆಂಗಿನಕಾಯಿ ತುರಿ, ಜೀರಿಗೆ, ಹಸಿ ಮೆಣಸಿನಕಾಯಿ ಪೇಸ್ಟ್ , ಕರಿಬೇವಿನ ಎಲೆಗಳು, ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ. ಅದು ಸ್ವಲ್ಪ ಬಿಸಿಯಾದ ನಂತರ, ಅಕ್ಕಿ ಹಿಟ್ಟನ್ನು ನಿಧಾನವಾಗಿ ಸೇರಿಸುತ್ತಾ ಗಂಟುಗಳಾಗದಂತೆ ಕಲಸಿ. ಹಿಟ್ಟಿನ ಮಿಶ್ರಣವು ಗಟ್ಟಿಯಾಗುವವರೆಗೂ ಬೇಯಿಸಿ. ನಂತರ ಒಲೆ ಆರಿಸಿ, ಪಾತ್ರೆಗೆ ಮುಚ್ಚಳ ಹಾಕಿ ಹತ್ತು ನಿಮಿಷ ಹಾಗೆಯೇ ಬಿಡಿ.

    ಹಿಟ್ಟು ಸ್ವಲ್ಪ ತಣ್ಣಗಾದ ನಂತರ, ಕೈಯಿಂದ ಚೆನ್ನಾಗಿ ನಾದಿ ಮೃದುವಾದ ಹಿಟ್ಟಿನ ಉಂಡೆ ಮಾಡಿ. ಹಿಟ್ಟು ಗಟ್ಟಿಯಾಗಿದ್ದರೆ, ಸ್ವಲ್ಪ ಬಿಸಿನೀರು ಸೇರಿಸಿ ನಾದಿಕೊಳ್ಳಬಹುದು. ಈ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ನಿಮ್ಮ ಅಂಗೈಯಲ್ಲಿ ಇಟ್ಟು ಉದ್ದವಾಗಿ ದಾರದಂತೆ ಮಾಡಿಕೊಳ್ಳಿ ನಂತರ ಕೊನೆಯಲ್ಲಿ ಎರಡೂ ತುದಿಗಳನ್ನು ಸೇರಿಸಿ ಕೋಡುಬಳೆಯ ಆಕಾರಕ್ಕೆ ತಂದುಕೊಳ್ಳಿ.

    ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಕೋಡುಬಳೆಗಳನ್ನು ಎರಡೂ ಬದಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ಕರಿದ ಕೋಡುಬಳೆಗಳನ್ನು ಎಣ್ಣೆಯಿಂದ ಹೊರತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ. ಈಗ ರುಚಿಕರವಾದ, ಗರಿಗರಿಯಾದ ಮೊಸರು ಕೋಡುಬಳೆ ಬೆಳಿ.

     

  • ರೆಸ್ಟೋರೆಂಟ್ ಸ್ಟೈಲ್ ಬಟರ್ ನಾನ್ ಮನೆಯಲ್ಲೇ ಮಾಡಿ

    ರೆಸ್ಟೋರೆಂಟ್ ಸ್ಟೈಲ್ ಬಟರ್ ನಾನ್ ಮನೆಯಲ್ಲೇ ಮಾಡಿ

    ಹೋಟೆಲ್‌ಗೆ ಹೋದಾಗ ಬಹಳಷ್ಟು ಜನ ರೋಟಿ-ಕರಿ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಅನೇಕರು ಬಟರ್ ನಾನ್ ರೋಟಿ ತಿನ್ನುವುದೇ ಹೆಚ್ಚು. ಬಟರ್ ನಾನ್ ರೋಟಿ ಜೊತೆ ಚಿಕನ್ ಕರಿ, ಪನೀರ್ ಅಥವಾ ಮಶ್ರೂಮ್ ಗ್ರೇವಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಮನೆಯಲ್ಲೇ ಬಟರ್ ನಾನ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ತಡ ಯಾಕೆ? ನೀವೂ ಒಂದ್ಸಲ ನಿಮ್ಮ ಮನೆಯಲ್ಲಿ ಇದನ್ನು ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    ಮೈದಾ- ಒಂದೂವರೆ ಕಪ್
    ಮೊಸರು- ಕಾಲು ಕಪ್
    ಅಡುಗೆ ಸೋಡಾ- ಅರ್ಧ ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಸಕ್ಕರೆ- ಅರ್ಧ ಚಮಚ
    ನೀರು- ಅಗತ್ಯಕ್ಕೆ ತಕ್ಕಂತೆ
    ಬೆಣ್ಣೆ – ಕಾಲು ಕಪ್
    ಎಳ್ಳು- 3 ಚಮಚ
    ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಗೆ ಮೈದಾ ಹಿಟ್ಟು, ಮೊಸರು, ಬೇಕಿಂಗ್ ಸೋಡಾ, ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಅಗತ್ಯವಿದ್ದಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಇದನ್ನು ಚೆನ್ನಾಗಿ 5 ನಿಮಿಷಗಳ ಕಾಲ ಕಲಸಬೇಕು. ನಂತರ ಇದನ್ನು ಒಂದು ಒದ್ದೆ ಬಟ್ಟೆಯಿಂದ ಮುಚ್ಚಿಟ್ಟು ಎರಡು ಗಂಟೆಗಳ ಕಾಲ ಹಾಗೆಯೇ ಬಿಡಬೇಕು.
    * ಎರಡು ಗಂಟೆಯ ನಂತರ ಮತ್ತೆ ಚೆನ್ನಾಗಿ ಕೈಯಿಂದಲೇ ಕಲಸಬೇಕು. ನಂತರ ಒಂದು ಸ್ವಲ್ಪ ದೊಡ್ಡ ಉಂಡೆಯನ್ನು ತೆಗೆದುಕೊಂಡು ಸ್ವಲ್ಪ ಮೈದಾ ಪುಡಿ ಹಾಕಿ ಚಪಾತಿ ಲಟ್ಟಣಿಗೆಯಲ್ಲಿ ಲಟ್ಟಿಸಬೇಕು. ಮೊಟ್ಟೆ ಆಕಾರ ಅಥವಾ ತ್ರಿಭುಜಾಕಾರದಲ್ಲಿ ಲಟ್ಟಿಸಬಹುದು. ಲಟ್ಟಿಸಿದ ನಂತರ ಅದರ ಮೇಲೆ ಸ್ವಲ್ಪ ಕಪ್ಪು ಎಳ್ಳು ಹಾಗೂ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ನಿಧಾನವಾಗಿ ಲಟ್ಟಿಸಿ.
    * ಹಿಟ್ಟಿನ ಹಿಂಬದಿಗೆ ನೀರು ಅದ್ದಿ. ನಂತರ ತವಾ ಬಿಸಿಯಾಗಲು ಇಡಿ. ತವಾ ಚೆನ್ನಾಗಿ ಬಿಸಿಯಾದಾಗ ತವಾಗೆ ಹಾಕಿ. ನೀರು ಇರುವ ಬದಿಯನ್ನು ಕೆಳಭಾಗಕ್ಕೆ ಹಾಕಬೇಕು. ಉರಿಯನ್ನು ಮಧ್ಯಮ ಪ್ರಮಾಣದಲ್ಲಿಟ್ಟು ಎರಡೂ ಬದಿ ಬೇಯಿಸಿಕೊಳ್ಳಬೇಕು.
    * ಈಗ ಈ ನಾನ್ ರೋಟಿ ಮೇಲೆ ಬೆಣ್ಣೆಯನ್ನು ಹಚ್ಚಿ. ಈಗ ರುಚಿಕರವಾದ ಬಟರ್ ನಾನ್ ರೋಟಿ ಸವಿಯಲು ಸಿದ್ಧ.

  • ಮನೆಯಲ್ಲೇ ಮಾಡಿ ಕೇರಳದ ಫೇಮಸ್ ಸ್ವೀಟ್‌ ಉಣ್ಣಿಯಪ್ಪಂ!

    ಮನೆಯಲ್ಲೇ ಮಾಡಿ ಕೇರಳದ ಫೇಮಸ್ ಸ್ವೀಟ್‌ ಉಣ್ಣಿಯಪ್ಪಂ!

    ಣ್ಣಿಯಪ್ಪಂ ಕೇರಳದ ಸ್ಪೆಷಲ್‌ ಸ್ವೀಟ್‌ ಆಗಿದೆ. ಈ ಸಿಹಿ ತಿಂಡಿಯನ್ನು ಹಬ್ಬ ಇನ್ನಿತರ ವಿಶೇಷ ದಿನಗಳಲ್ಲಿ ತಯಾರಿಸಲಾಗುತ್ತದೆ. ಈ ಸ್ವೀಟ್‌ ತಯಾರಿಸೋದು ಹೇಗೆ ಎಂಬ ರೆಸಿಪಿ ಇಲ್ಲಿದೆ.

    ಬೇಕಾಗುವ ಪದಾರ್ಥಗಳು
    * 2 ಕಪ್ ಅಕ್ಕಿ ಹಿಟ್ಟು
    * 1 ಕಪ್ ಗೋಧಿ ಹಿಟ್ಟು
    * 250–300 ಗ್ರಾಂ ಬೆಲ್ಲ
    * 2-3 ಮಾಗಿದ ಬಾಳೆಹಣ್ಣು
    + 1/2 ಕಪ್ ತೆಂಗಿನಕಾಯಿ ಚೂರುಗಳು
    * 1.5 ಟೀ ಚಮಚ ಕಪ್ಪು ಎಳ್ಳು
    * 1/2–1 ಟೀ ಚಮಚ ಅಡುಗೆ ಸೋಡಾ
    * 1 ಟೀ ಚಮಚ ತುಪ್ಪ ಹಾಗೂ ಎಣ್ಣೆ

    ಮಾಡುವ ವಿಧಾನ
    ಒಂದು ಪಾತ್ರೆಯಲ್ಲಿ 1 ಕಪ್ ನೀರು ಹಾಗೂ ಬೆಲ್ಲದೊಂದಿಗೆ ಸೇರಿಸಿ, ಅದು ಸಂಪೂರ್ಣವಾಗಿ ಕರಗುವವರೆಗೆ ಬಿಸಿ ಮಾಡಬೇಕು. ನಂತರ ಅದನ್ನು ಫಿಲ್ಟರ್ ಮಾಡಿ ಇರಿಸಿ. ​ತುಪ್ಪವನ್ನು ಬಿಸಿ ಮಾಡಿ, ಕಪ್ಪು ಎಳ್ಳು ಮತ್ತು ತೆಂಗಿನಕಾಯಿ ಚೂರುಗಳನ್ನು ಗೋಲ್ಡನ್ ಬ್ರೌನ್ ಆಗುವ ವರೆಗೆ ಹುರಿಯಬೇಕು ​

    ಬಳಿಕ ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಅದಕ್ಕೆ ಸೋಸಿದ ಬೆಲ್ಲದ ಪಾಕ ಸೇರಿಸಿ ಮಿಕ್ಸ್‌ ಮಾಡಬೇಕು. ನಂತರ ಒಂದು ದೊಡ್ಡ ಬಟ್ಟಲಿನಲ್ಲಿ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಬಾಳೆಹಣ್ಣು ಮತ್ತು ಬೆಲ್ಲದ ಪಾಕ ಸೇರಿಸಿ ಒಟ್ಟಿಗೆ ಮಿಶ್ರಣ ಮಾಡಿ, ಇಡ್ಲಿ ಹಿಟ್ಟಿನ ಹದ ಬರುವಂತೆ ನೀರು ಸೇರಿಸುತ್ತ ತಯಾರಿ ಮಾಡಬೇಕು.

    ನಂತರ, ಹುರಿದ ತೆಂಗಿನಕಾಯಿ ತುಂಡುಗಳು, ಎಳ್ಳು ಮತ್ತು ಅಡಿಗೆ ಸೋಡಾ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿ, 30–45 ನಿಮಿಷಗಳ ಕಾಲ ಬಿಡಬೇಕು.

    ನಂತರ ಒಲೆಯ ಮೇಲೆ ಪಡ್ಡು ತಯಾರಿಸುವ ಕಾವಲಿ ಇಟ್ಟು ಸ್ವಲ್ಪ ಸ್ವಲ್ಪ ತುಪ್ಪ ಸೇರಿಸುತ್ತಾ ತಯಾರಾದ ಹಿಟ್ಟನ್ನು ಬೇಯಿಸಬೇಕು. ಒಂದು ಬದಿ ಬೆಂದ ನಂತರ ಇನ್ನೊಂದು ಬದಿ ಮಗುಚಿ ಬೇಯಿಸಬೇಕು. ಈಗ ಕೇರಳದ ಸ್ಪೆಷಲ್‌ ಉಣ್ಣಿಯಪ್ಪಂ ರೆಡಿ!

  • ಮನೆಯಲ್ಲೇ ಮಾಡಿ ಮುಂಬೈ ಸ್ಪೆಷಲ್ ಮಸಾಲ ಸ್ಯಾಂಡ್‌ವಿಚ್

    ಮನೆಯಲ್ಲೇ ಮಾಡಿ ಮುಂಬೈ ಸ್ಪೆಷಲ್ ಮಸಾಲ ಸ್ಯಾಂಡ್‌ವಿಚ್

    ಬೀದಿ ಬದಿಯ ತಿನಿಸುಗಳು ಸಾಮಾನ್ಯವಾಗಿ ಎಲ್ಲರನ್ನೂ ಆಕರ್ಷಿಸುತ್ತವೆ. ಆದರೆ ಇದರಿಂದ ಆರೋಗ್ಯ ಕೆಡುವ ಸಾಧ್ಯತೆಗಳಿವೆ. ಹೀಗಾಗಿ ಅದನ್ನು ಮನೆಯಲ್ಲಿಯೇ ಮಾಡಿ ಎಲ್ಲರೊಂದಿಗೆ ಕೂತು ತಿನ್ನುವ ಮಜವೇ ಬೇರೆ. ಇವತ್ತು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹ ಮುಂಬೈ ಸ್ಪೆಷಲ್‌ ಮಸಾಲ ಸ್ಯಾಂಡ್‌ವಿಚ್ ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ. ನಿಮ್ಮ ಮನೆಯಲ್ಲೂ ಈ ರೆಸಿಪಿ ಟ್ರೈ ಮಾಡಿ ಆನಂದಿಸಿ.

    ಬೇಕಾಗುವ ಸಾಮಗ್ರಿಗಳು:
    ಕೊತ್ತಂಬರಿ ಸೊಪ್ಪು – 1 ಕಪ್
    ಚಾಟ್ ಮಸಾಲ – ಅರ್ಧ ಚಮಚ
    ಹಸಿ ಮೆಣಸಿನಕಾಯಿ – 4
    ಆಲೂಗಡ್ಡೆ- 4
    ಎಣ್ಣೆ – ಸ್ವಲ್ಪ
    ಸಾಸಿವೆ – ಅರ್ಧ ಚಮಚ
    ಜೀರಿಗೆ – ಅರ್ಧ ಚಮಚ
    ಇಂಗು – ಒಂದು ಚಿಟಿಕೆ
    ಅರಶಿಣ – ಕಾಲು ಚಮಚ
    ಕರಿಬೇವಿನ ಎಲೆ – 8ರಿಂದ 10
    ಈರುಳ್ಳಿ- 1
    ಟೊಮೆಟೊ – 1
    ಬ್ರೆಡ್ – ಅಗತ್ಯಕ್ಕೆ ಬೇಕಾದಷ್ಟು
    ಬೆಣ್ಣೆ- ಸ್ವಲ್ಪ

    ಮಾಡುವ ವಿಧಾನ:

    • ಮೊದಲಿಗೆ ಒಂದು ಮಿಕ್ಸಿ ಜಾರಿಗೆ 1 ಕಪ್ ಕೊತ್ತಂಬರಿ ಸೊಪ್ಪು, ಅರ್ಧ ಚಮಚ ಚಾಟ್ ಮಸಾಲ ಹಾಗೂ 2 ಹಸಿ ಮೆಣಸಿನಕಾಯಿ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿಕೊಳ್ಳಲು ಕಷ್ಟವಾದರೆ 2 ಚಮಚ ನೀರನ್ನು ಸೇರಿಸಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ. ಬಳಿಕ ರುಬ್ಬಿದ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿ ಪಕ್ಕಕ್ಕಿಡಿ.
    • ನಂತರ 3ರಿಂದ 4 ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಅಥವಾ ಸ್ಟೀಮರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಆಲೂಗಡ್ಡೆ ಬಿಸಿ ಇರುವಾಗಲೇ ಅದರ ಸಿಪ್ಪೆಯನ್ನು ತೆಗೆದು ಗಂಟಿರದಂತೆ ಚೆನ್ನಾಗಿ ಕಲಸಿ ಒಂದು ಬೌಲ್‌ನಲ್ಲಿ ಇಟ್ಟುಕೊಳ್ಳಿ.
    • ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಅರ್ಧ ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಅದಕ್ಕೆ ಅರ್ಧ ಚಮಚ ಸಾಸಿವೆ ಹಾಕಿಕೊಳ್ಳಿ. ಸಾಸಿವೆ ಸಿಡಿಯಲು ಪ್ರಾರಂಭವಾದ ಮೇಲೆ ಅದಕ್ಕೆ ಅರ್ಧ ಚಮಚ ಜೀರಿಗೆ ಮತ್ತು ಒಂದು ಚಿಟಿಕೆ ಇಂಗು ಹಾಕಿಕೊಳ್ಳಿ. ಜೀರಿಗೆ ಬಣ್ಣ ಸ್ವಲ್ಪ ಬದಲಾದ ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ 2 ಹಸಿ ಮೆಣಸಿನಕಾಯಿಯನ್ನು ಸೇರಿಸಿಕೊಳ್ಳಿ.
    • ಬಳಿಕ ಇದಕ್ಕೆ ಕಾಲು ಚಮಚ ಅರಶಿಣ ಹಾಗೂ 8ರಿಂದ 10 ಕರಿಬೇವಿನ ಎಲೆ ಹಾಕಿಕೊಂಡು ಚೆನ್ನಾಗಿ ತಿರುವಿ. ನಂತರ ಇದಕ್ಕೆ ಕಲಸಿದ ಆಲೂಗಡ್ಡೆಯನ್ನು ಸೇರಿಸಿಕೊಳ್ಳಿ. ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಬೇಕು. ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ 2 ನಿಮಿಷಗಳವರೆಗೆ ಕಡಿಮೆ ಉರಿಯಲ್ಲಿ ಇಟ್ಟುಕೊಂಡು ಮಿಕ್ಸ್ ಮಾಡಿಕೊಳ್ಳಿ.
    • ಇದಕ್ಕೆ ಕಾಲು ಕಪ್ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡು ಒಂದು ಬಾರಿ ತಿರುವಿ ಮಿಶ್ರಣ ಆರುವವರೆಗೂ ಪಕ್ಕಕ್ಕಿಡಿ. ನಂತರ ಒಂದು ಈರುಳ್ಳಿ ಹಾಗೂ ಒಂದು ಟೊಮೆಟೊ ವೃತ್ತಾಕಾರದಲ್ಲಿ ತೆಳ್ಳಗೆ ಹೆಚ್ಚಿಕೊಳ್ಳಿ.
    • ಬಳಿಕ 2 ಬ್ರೆಡ್ ತೆಗೆದುಕೊಂಡು ಎರಡೂ ಬ್ರೆಡ್‌ಗೂ ಸ್ವಲ್ಪ ಸ್ವಲ್ಪ ಬೆಣ್ಣೆ ಹಚ್ಚಿಕೊಳ್ಳಿ. ನಂತರ ರುಬ್ಬಿದ ಕೊತ್ತಂಬರಿ ಚಟ್ನಿಯನ್ನು ಇದರ ಮೇಲೆ ಸವರಿಕೊಳ್ಳಿ. ಅದರ ಮೇಲೆ ಆಲೂಗಡ್ಡೆ ಮಿಶ್ರಣವನ್ನು ಸ್ವಲ್ಪ ಹಾಕಿಕೊಳ್ಳಿ. ನಂತರ ಅದರ ಮೇಲೆ ತೆಳ್ಳಗೆ ಹೆಚ್ಚಿದ ಟೊಮೆಟೊ ಹಾಗೂ ಈರುಳ್ಳಿ ಸ್ಲೈಸ್‌ ಇಡಿ. ಬಳಿಕ ಇದರ ಮೇಲೆ ಸ್ವಲ್ಪ ಪೆಪ್ಪರ್ ಪೌಡರ್ ಅಥವಾ ಚಾಟ್ ಮಸಾಲ ಹಾಕಿಕೊಂಡು ಇನ್ನೊಂದು ಬ್ರೆಡ್‌ನಿಂದ ಅದನ್ನು ಮುಚ್ಚಿಕೊಳ್ಳಿ. ಚೀಸ್ ಇಷ್ಟಪಡುವವರು ಇದಕ್ಕೆ ಚೀಸ್ ಕೂಡಾ ಹಾಕಿಕೊಳ್ಳಬಹುದು. ಇದೇ ರೀತಿ ಉಳಿದ ಬ್ರೆಡ್‌ಗಳನ್ನು ಮಾಡಿಟ್ಟುಕೊಳ್ಳಿ.
    • ಈಗ ಇದನ್ನು ಒಂದು ಪ್ಯಾನ್‌ನಲ್ಲಿ ಇಟ್ಟು ಗೋಲ್ಡನ್ ಕಲರ್ ಬರುವವರೆಗೂ ರೋಸ್ಟ್ ಮಾಡಿಕೊಳ್ಳಿ. ಈಗ ಮಸಾಲ ಸ್ಯಾಂಡ್‌ವಿಚ್ ತಿನ್ನಲು ರೆಡಿ. ಇದನ್ನು ಒಂದು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಟೊಮೆಟೊ ಕೆಚಪ್ ಹಾಗೂ ಉಳಿದ ಕೊತ್ತಂಬರಿ ಚಟ್ನಿಯೊಂದಿಗೆ ಸವಿಯಿರಿ.
  • ‌ಸವಿಯಲು ಸಕತ್‌ ಟೇಸ್ಟಿ ಆಗಿರುತ್ತೆ ಮೂಲಂಗಿ ಸೂಪ್‌ – ನೀವೂ ಟ್ರೈ ಮಾಡಿ

    ‌ಸವಿಯಲು ಸಕತ್‌ ಟೇಸ್ಟಿ ಆಗಿರುತ್ತೆ ಮೂಲಂಗಿ ಸೂಪ್‌ – ನೀವೂ ಟ್ರೈ ಮಾಡಿ

    ಸೂಪ್‌ ಪ್ರಿಯರು ಟೇಸ್ಟ್‌ಗೆ ಹಾಗೂ ಆರೋಗ್ಯಕ್ಕೆ ಮೂಲಂಗಿ ಸೂಪ್ ಬಹಳ ಉತ್ತಮ. ಇದು ದೇಹಕ್ಕೆ ಬೇಕಾದ ʻಸಿ; ವಿಟಮಿನ್‌ ಒದಗಿಸುತ್ತದೆ. ಅಲ್ಲದೇ ಲಿವರ್‌ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಲಂಗಿ ಸೂಪ್‌ ತಯಾರಿಸುವ ವಿಧಾನ ನೋಡೋಣ.

    ಬೇಕಾಗುವ ಪದಾರ್ಥಗಳು:
    * ಮೂಲಂಗಿ: 200 ಗ್ರಾಂ
    * ಸಾಸಿವೆ: 1 ಟೀಸ್ಪೂನ್
    * ಜೀರಿಗೆ: 1 ಟೀಸ್ಪೂನ್
    * ಇಂಗು
    * ಕೆಂಪು ಮೆಣಸಿನಕಾಯಿ: 2
    * ಬೇವಿನ ಎಲೆಗಳು
    * ಅಡುಗೆ ಎಣ್ಣೆ
    * ಅರಿಶಿನ ಪುಡಿ: 1 ಟೀಸ್ಪೂನ್
    * ರಸಂ ಪುಡಿ: 1 ಟೀಸ್ಪೂನ್
    * ಉಪ್ಪು: ರುಚಿಗೆ ತಕ್ಕಷ್ಟು
    * ನೀರು

    ತಯಾರಿಸುವ ವಿಧಾನ
    ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಇಂಗು, ಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಹುರಿಯಬೇಕು. ನಂತರ ಸಾಸಿವೆ ಒಡೆದ ತಕ್ಷಣ, ಕತ್ತರಿಸಿದ ಮೂಲಂಗಿ ಸೇರಿಸಿ, 5-7 ನಿಮಿಷಗಳ ಕಾಲ ಮೂಲಂಗಿ ಮೃದುವಾಗುವವರೆಗೆ ಹುರಿಯಬೇಕು.

    ಅರಿಶಿನ ಪುಡಿ, ರಸಂ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಒಂದು ಲೀಟರ್ ನೀರು ಸೇರಿಸಿ, ಮುಚ್ಚಿ, 10-15 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಬೇಕು. ಮೂಲಂಗಿ ಸಂಪೂರ್ಣವಾಗಿ ಬೆಂದ ನಂತರ, ಸೂಪ್ ಸವಿಯಲು ಸಿದ್ಧ.

  • ಫಟಾಫಟ್‌ ಅಂತ ಮಾಡಿ ಕ್ಯಾಬೇಜ್‌ ಮೊಮೊಸ್‌

    ಫಟಾಫಟ್‌ ಅಂತ ಮಾಡಿ ಕ್ಯಾಬೇಜ್‌ ಮೊಮೊಸ್‌

    ಮೊಮೊಸ್‌ ಅಂದ್ರೆ ನಿಮ್ಗೆ ಇಷ್ಟನಾ? ಒಂದೇ ರೀತಿ ಮೊಮೊಸ್‌ ತಿಂದು ಬೇಜಾರಿದ್ರೆ, ಸ್ಪೆಷಲ್‌ ಆಗಿ ಕ್ಯಾಬೇಜ್‌ ಮೊಮೊಸ್‌ (Cabbage Momos) ಮಾಡೋದು ಹೇಗೆ ಅಂತಾ ನಾವಿಂದು ತಿಳಿಸಿಕೊಡ್ತೀವಿ. ಇದು ಆರೋಗ್ಯಕ್ಕೂ ಒಳ್ಳೆಯದ್ದು, ಜೊತೆ ಕ್ವಿಕ್‌ ಆಂಡ್‌ ಈಸಿಯಾಗಿ ಫಟಾಫಟ್‌ ಅಂತ ತಯಾರಿಸಿ ಮನೆಯವರೊಂದಿಗೆ ಸವಿಯಬಹುದು.

    ಬೇಕಾಗುವ ಸಾಮಗ್ರಿಗಳು:
    ತುರಿದ ಕ್ಯಾರೆಟ್ – 1 ಕಪ್
    ತುರಿದ ಎಲೆಕೋಸು – 1 ಕಪ್
    ಹಸಿಮೆಣಸಿನಕಾಯಿ (ಸಣ್ಣಗೆ ಹೆಚ್ಚಿದ) – 1
    ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    ಸೋಯಾ ಸಾಸ್ – 1 ಚಮಚ
    ಕರಿಮೆಣಸಿನ ಪುಡಿ
    ಉಪ್ಪು – ರುಚಿಗೆ ತಕ್ಕಷ್ಟು

    ಡಿಪ್‌ಗೆ ಬೇಕಾಗುವ ಸಾಮಗ್ರಿಗಳು:
    ಟೊಮ್ಯಾಟೊ – 2
    ಒಣ ಕೆಂಪು ಮೆಣಸಿನಕಾಯಿ – 2 ಬೆಳ್ಳುಳ್ಳಿ
    ಎಸಳು – 3-4
    ಉಪ್ಪು – ರುಚಿಗೆ ತಕ್ಕಷ್ಟು

    ತಯಾರಿಸುವ ವಿಧಾನ:
    ಎಲೆಕೋಸಿನಿಂದ ಒಂದೊಂದೇ ಎಲೆಗಳನ್ನು ಬೇರ್ಪಡಿಸಿಟುಕೊಳ್ಳಬೇಕು. ಕುದಿಯುವ ನೀರಿನಲ್ಲಿ 1-2 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಬೇಕು. ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಬೇಕು. ನಂತರ ತುರಿದ ಕ್ಯಾರೆಟ್, ಎಲೆಕೋಸನ್ನು ಸೇರಿಸಿ 2-3 ನಿಮಿಷ ಹುರಿಯಬೇಕು. ಬಳಿಕ ಇದಕ್ಕೆ ಸೋಯಾ ಸಾಸ್, ಕರಿಮೆಣಸು ಮತ್ತು ಉಪ್ಪು ಸೇರಿಸಿ ಮಿಶ್ರ ಮಾಡಿ.

    ಈಗ ಎಲೆಕೋಸಿನ ಎಲೆಗಳ ಮಧ್ಯದಲ್ಲಿ 1-2 ಚಮಚ ಈ ಸ್ಟಪ್ ಅನ್ನು ಇರಿಸಿ. ಅದನ್ನು ಮಡಚಿ ಮೊಮೊ ಆಕಾರ ನೀಡಿ. ಸಿದ್ಧಪಡಿಸಿದ ಮೊಮೊಗಳನ್ನು ಸ್ವೀಮರ್‌ನಲ್ಲಿ ಇರಿಸಿ ಮತ್ತು 10 ರಿಂದ 12 ನಿಮಿಷ ಆವಿಯಲ್ಲಿ ಬೇಯಿಸಬೇಕು.

    ಡಿಪ್‌ ತಯಾರಿಸುವ ವಿಧಾನ:
    ಟೊಮ್ಯಾಟೊ, ಕೆಂಪು ಒಣ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಹುರಿದು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಬೇಕು. ಇದಕ್ಕೆ ಸ್ವಲ್ಪ ಎಣ್ಣೆ ಮತ್ತು ಉಪ್ಪು ಸೇರಿಸಿ ಮಿಕ್ಸ್‌ ಮಾಡಬೇಕು. ಈಗ ಕ್ಯಾಬೇಜ್‌ ಮೊಮೊಸ್‌ ಅನ್ನು ಡಿಪ್‌ನೊಂದಿಗೆ ಸವಿಯಲು ಸಿದ್ಧ.

  • ಯಾವುದೇ ಹಬ್ಬಕ್ಕೆ ಮನೆಯಲ್ಲೇ ಮಾಡಿ ಸಿಹಿಯಾದ, ರುಚಿಯಾದ ಎರಿಯಪ್ಪ

    ಯಾವುದೇ ಹಬ್ಬಕ್ಕೆ ಮನೆಯಲ್ಲೇ ಮಾಡಿ ಸಿಹಿಯಾದ, ರುಚಿಯಾದ ಎರಿಯಪ್ಪ

    ದಸರಾ ಹಬ್ಬದ ಸಂಭ್ರಮ ಎಲ್ಲಡೆ ಮನೆಮಾಡಿದೆ. ಹಬ್ಬ ಎಂದರೆ ನೆನಪಾಗೋದು, ಸಂಭ್ರಮ, ಉಡುಗೆ-ತೊಡುಗೆ ಜೊತೆಗೆ ಸಿಹಿತಿಂಡಿಗಳು. ಅಮ್ಮ ಮಾಡೋ ವಿವಿಧ ತರಹದ ಸ್ವೀಟ್‍ಗಳು ಎಲ್ಲರ ಫೇವರೆಟ್. ಇದು ದಸರಾಗೆ ಮಾತ್ರವಲ್ಲ ಯಾವುದೇ ಹಬ್ಬದಲ್ಲೂ ಮನೆಯಲ್ಲೇ ರುಚಿರುಚಿಯಾಗಿ ಮಾಡಿ ಸವಿಯಬಹುದು. ನಾವಿಂದು ಎರಿಯಪ್ಪ ಮಾಡುವ ವಿಧಾನವನ್ನು ಹೇಳಿಕೊಡ್ತಿವಿ ನೋಡಿ, ಎಲ್ಲರಿಗೂ ಇಷ್ಟವಾಗೋದ್ರಲ್ಲಿ ಡೌಟೇ ಇಲ್ಲ. ಈ ವರ್ಷದ ಹಬ್ಬವನ್ನ ನೀವು ಈ ಸಿಹಿ ತಿಂಡಿ ಜೊತೆಗೆ ವಿಶೇಷವಾಗಿ ಆಚರಿಸಬಹುದಾಗಿದೆ.


    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ – 1 ಕಪ್
    * ಕಾಯಿತುರಿ- ಅರ್ಧ ಕಪ್
    * ಬೆಲ್ಲದ- 1 ಕಪ್,
    * ಉಪ್ಪು- ಸ್ವಲ್ಪ
    * ಗಸಗಸೆ- 1 ಟೀ ಚಮಚ
    * ಏಲಕ್ಕಿ ಪುಡಿ-1 ಟೀ ಚಮಚ,
    * ಅಡುಗೆ ಎಣ್ಣೆ- 2ಕಪ್

    ಮಾಡುವ ವಿಧಾನ:
    * ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆ ಹಾಕಿ. ನಂತರ ಅಕ್ಕಿಯ ಜೊತೆಗೆ ತೆಂಗಿನತುರಿ, ಬೆಲ್ಲದ ಪುಡಿ, ಉಪ್ಪು ಮತ್ತು ಅರ್ಧ ಕಪ್ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

    * ರುಬ್ಬಿದ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಇರಲಿ. ಹಿಟ್ಟಿಗೆ ಗಸಗಸೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.

    * ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಕಾದ ಎಣ್ಣೆಗೆ ಚಿಕ್ಕ ಸೌಟಿನಲ್ಲಿ 1 ಸೌಟು ಹಿಟ್ಟನ್ನು ಹಾಕಿ.
    * ಈ ಮಿಶ್ರಣ ಹಿಟ್ಟು ಕಜ್ಜಾಯದ ರೀತಿಯಲ್ಲಿ ಎಣ್ಣೆಯಿಂದ ಮೇಲಕ್ಕೆ ತೇಲಿಕೊಂಡು ಬರುತ್ತದೆ. ಎರಡೂ ಬದಿಯನ್ನೂ ಕೆಂಬಣ್ಣ ಬರುವಂತೆ ಬೇಯಿಸಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

    * ಈಗ ರುಚಿಕರವಾದ ಎರಿಯಪ್ಪ ಸವಿಯಲು ಸಿದ್ಧವಾಗುತ್ತದೆ. ನೀವು ಇದನ್ನು ತುಪ್ಪದ ಜೊತೆಗೆ ತಿಂದರೆ ಇನ್ನಷ್ಟು ರುಚಿಯಾಗಿರುತ್ತದೆ.

  • ಪಂಜಾಬಿ ಸ್ಟೈಲ್ ಚನಾ ಮಸಾಲ – ಚಪಾತಿ, ರೋಟಿಗೆ ಪರ್ಫೆಕ್ಟ್ ಕಾಂಬಿನೇಷನ್

    ಪಂಜಾಬಿ ಸ್ಟೈಲ್ ಚನಾ ಮಸಾಲ – ಚಪಾತಿ, ರೋಟಿಗೆ ಪರ್ಫೆಕ್ಟ್ ಕಾಂಬಿನೇಷನ್

    ಸ್ಯಾಹಾರಿಗಳಿಗೆ ಮೆಚ್ಚಿನ ಖಾದ್ಯಗಳಲ್ಲಿ ಚನಾ ಮಸಾಲ ಕೂಡ ಒಂದಾಗಿದೆ. ಚನಾ ಮಸಾಲವನ್ನು ಚಪಾತಿ, ರೋಟಿ, ಪರೋಟ ಹಾಗೂ ದೋಸೆ ಜೊತೆಗೆ ಸವಿಯಬಹುದು. ಬಾಯಲ್ಲಿ ನೀರೂರಿಸುವಂತಹ ಸಖತ್ ಟೇಸ್ಟಿಯಾದ ಚನಾ ಮಸಾಲ ರೆಸಿಪಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಹಾಗಿದ್ರೆ ನೀವೂ ಕೂಡ ನಿಮ್ಮ ಮನೆಯಲ್ಲಿ ಇದನ್ನು ಮಾಡಿ ನೋಡಿ.

    ಬೇಕಾಗುವ ಸಾಮಗ್ರಿಗಳು:
    ನೆನೆಸಿಟ್ಟ ಕಾಬುಲ್ ಕಡ್ಲೆ – ಎರಡೂವರೆ ಕಪ್
    ಹೆಚ್ಚಿದ ಟೊಮೆಟೊ – ಮೂರು ಕಪ್
    ಹಸಿ ಮೆಣಸಿನಕಾಯಿ – ನಾಲ್ಕು
    ಈರುಳ್ಳಿ – ಎರಡು
    ಬೆಳ್ಳುಳ್ಳಿ ಪೇಸ್ಟ್ – ಎರಡು ಚಮಚ
    ಶುಂಠಿ ಪೇಸ್ಟ್ – ಅರ್ಧ ಚಮಚ
    ಕೊತ್ತಂಬರಿ ಸೊಪ್ಪು – ಎರಡು ಚಮಚ
    ಅರಿಶಿನ – ಒಂದು ಚಮಚ
    ಜೀರಿಗೆ ಪುಡಿ – ಎರಡು ಚಮಚ
    ಗರಂ ಮಸಾಲ – ಒಂದು ಚಮಚ
    ಖಾರದ ಪುಡಿ – ಒಂದು ಚಮಚ
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಅಗತ್ಯಕ್ಕೆ ತಕ್ಕಂತೆ

    ಮಾಡುವ ವಿಧಾನ:
    *ಮೊದಲಿಗೆ ಒಲೆಯ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ.
    *ಇವು ಚೆನ್ನಾಗಿ ಬೆಂದ ಬಳಿಕ ಹೆಚ್ಚಿದ ಟೊಮೆಟೊ, ಕೊತ್ತಂಬರಿ ಸೊಪ್ಪು, ಅರಿಶಿನ, ಜೀರಿಗೆ ಪುಡಿ ಹಾಗೂ ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಬೇಯಿಸಿ.
    *ಬಳಿಕ ನೆನೆಸಿದ ಕಾಬೂಲ್ ಚನಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಎರಡೂವರೆ ಕಪ್ ನೀರು ಸೇರಿಸಿ. ಈಗ ಇದಕ್ಕೆ ಉಪ್ಪು ಸೇರಿಸಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮುಚ್ಚಿಟ್ಟು ಕಾಲು ಗಂಟೆ ಬೇಯಲು ಬಿಡಿ.
    *ಕಾಲು ಗಂಟೆಯ ಬಳಿಕ ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಮತ್ತೆ ಮುಚ್ಚಿ ಮೂರು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
    *ಬಳಿಕ ಮುಚ್ಚಳ ತೆಗದು ಸರಿಯಾಗಿ ಮಿಕ್ಸ್ ಮಾಡಿ. ಕಾಬುಲ್ ಚನಾ ಚೆನ್ನಾಗಿ ಬೆಂದಿದ್ದರೆ ಚನಾ ಮಸಾಲ ಸವಿಯಲು ಸಿದ್ಧ.