Tag: rebel MLAs

  • ಶಿಂಧೆ ಸಿಎಂ ಎಂದು ಘೋಷಣೆಯಾಗುತ್ತಿದ್ದಂತೆ ಟೇಬಲ್ ಹತ್ತಿ ಡ್ಯಾನ್ಸ್ ಮಾಡಿದ ಬಂಡಾಯ ಶಾಸಕರು

    ಶಿಂಧೆ ಸಿಎಂ ಎಂದು ಘೋಷಣೆಯಾಗುತ್ತಿದ್ದಂತೆ ಟೇಬಲ್ ಹತ್ತಿ ಡ್ಯಾನ್ಸ್ ಮಾಡಿದ ಬಂಡಾಯ ಶಾಸಕರು

    ಮುಂಬೈ: ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಸಿಎಂ ಎಂದು ಘೋಷಣೆಯಾಗುತ್ತಿದ್ದಂತೆ ಶಿವಸೇನೆಯ ಎಲ್ಲಾ ಬಂಡಾಯ ಶಾಸಕರು ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ.

    ಮರಾಠಿ ಹಾಡೊಂದನ್ನು ಹಾಕಿ ಬಂಡಾಯ ಶಾಸಕರು ಸಂಭ್ರಮವನ್ನಾಚರಿಸುತ್ತಿದ್ದ ವೇಳೆ ಅವರಲ್ಲಿ ಒಬ್ಬರು ಟೇಬಲ್ ಹತ್ತಿ ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ತಮ್ಮ ಉತ್ಸಾಹವನ್ನು ತೋರ್ಪಡಿಸಿದ್ದು, ಇದರ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬಿಜೆಪಿ `ಮಹಾ’ ಮಾಸ್ಟರ್ ಪ್ಲಾನ್ – ಅಂದು ಅಟೋ ಡ್ರೈವರ್‌ ಇಂದು ಚೀಫ್‌ ಮಿನಿಸ್ಟರ್‌

    ಎಲ್ಲರೂ ದೇವೇಂದ್ರ ಫಡ್ನವೀಸ್ ಸಿಎಂ ಆಗುತ್ತಾರೆ ಎಂದು ಭಾವಿಸಿದ್ದರು. ಆದರೆ ಒಂದು ಕಾಲದಲ್ಲಿ ಡ್ರೈವರ್ ಆಗಿದ್ದ ಏಕನಾಥ್ ಶಿಂಧೆ ಅವರನ್ನೇ ಸಿಎಂ ಮಾಡುವುದಾಗಿ ಘೋಷಿಸುವ ಮೂಲಕ ಮಹಾರಾಷ್ಟ್ರದ ರಾಜಕೀಯಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ: ಸರ್ಕಾರದ ಭಾಗವಾಗಿರಲ್ಲ ಎಂದಿದ್ದ ಫಡ್ನವೀಸ್‌ಗೆ ಡಿಸಿಎಂ ಪಟ್ಟ

    ಇಂದು ಸಂಜೆ ಶಿವಸೇನೆ ಸ್ಥಾಪಕ ಬಾಳಾ ಠಾಕ್ರೆ ಹೆಸರಲ್ಲಿ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೆ ದೇವೇಂದ್ರ ಫಡ್ನವೀಸ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    Live Tv

  • ಅಸ್ಸಾಂ ಪ್ರವಾಹಕ್ಕೆ ಮರುಗಿದ ಮಹಾರಾಷ್ಟ್ರ ರೆಬೆಲ್‌ ಶಾಸಕರು – ಪರಿಹಾರ ನಿಧಿಗೆ 51 ಲಕ್ಷ ರೂ. ಸಹಾಯ

    ಅಸ್ಸಾಂ ಪ್ರವಾಹಕ್ಕೆ ಮರುಗಿದ ಮಹಾರಾಷ್ಟ್ರ ರೆಬೆಲ್‌ ಶಾಸಕರು – ಪರಿಹಾರ ನಿಧಿಗೆ 51 ಲಕ್ಷ ರೂ. ಸಹಾಯ

    ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾ ಶಾಸಕರು, ಅಸ್ಸಾಂನ ಪ್ರವಾಹ ಪರಿಹಾರ ನಿಧಿಗೆ 51 ಲಕ್ಷ ರೂ. ನೀಡಿದ್ದಾರೆ.

    ಸಚಿವ ಏಕನಾಥ್‌ ಶಿಂಧೆ ನೇತೃತ್ವದಲ್ಲಿ ಶಿವಸೇನಾ ಶಾಸಕರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು ಗುಜರಾತ್‌ನ ಸೂರತ್‌ನ ಹೋಟೆಲ್‌ನಲ್ಲಿದ್ದರು. ನಂತರ ಅಸ್ಸಾಂನ ಗುವಾಹಟಿಯ ಹೋಟೆಲ್‌ಗೆ ಶಿಫ್ಟ್‌ ಆಗಿ ಕಳೆದ ಒಂದು ವಾರದಿಂದ ಅಲ್ಲಿ ಇದ್ದರು. ಇದನ್ನೂ ಓದಿ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು – ಸಂಜೆ 5 ಗಂಟೆಗೆ ಸುಪ್ರೀಂನಲ್ಲಿ ಮಹತ್ವದ ಅರ್ಜಿ ವಿಚಾರಣೆ

    ಅಸ್ಸಾಂನ ಕೆಲವು ಭಾಗಗಳು ಭೀಕರ ಪ್ರವಾಹದಿಂದ ತತ್ತರಿಸಿರುವ ಸಂದರ್ಭದಲ್ಲೂ ಶಿವಸೇನಾ ಭಿನ್ನಮತೀಯರು ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು. ಈ ನಡುವೆ ಶಿಂಧೆ ಅವರು ಅಸ್ಸಾಂ ಮುಖ್ಯಮಂತ್ರಿ ಪರಿಹಾರ ನಿಧಿಗೆ 51 ಲಕ್ಷ ರೂ. ನೀಡಿದ್ದಾರೆ.

    ಸರ್ಕಾರದ ನಿರಂತರ ರಕ್ಷಣಾ ಕಾರ್ಯಕ್ಕೆ ಶಿಂಧೆ ಅವರು ಪರಿಹಾರ ನಿಧಿಗೆ ಧನ ಸಹಾಯ ಮಾಡಿದ್ದಾರೆ. ಇಲ್ಲಿನ ಜನರ ಕಷ್ಟವನ್ನು ನಾವು ನಿರ್ಲಕ್ಷಿಸುವಂತಿಲ್ಲ ಎಂದು ಬಂಡಾಯ ಶಾಸಕರ ತಂಡ ವಕ್ತಾರ ದೀಪಕ್‌ ಕೇಸಾರ್ಕರ್‌ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರೆಬೆಲ್ ಶಾಸಕರು ನಾಳೆ ಮುಂಬೈಗೆ ಎಂಟ್ರಿ

    ಅಸ್ಸಾಂನಲ್ಲಿ ಭೀಕರ ಪ್ರವಾಹ ಬಂದು ಸಂಕಷ್ಟ ಎದುರಾದ ಸಂದರ್ಭದಲ್ಲೇ ಶಿವಸೇನಾ ಬಂಡಾಯ ಶಾಸಕರು ಇಲ್ಲಿನ ಗುವಾಹಟಿಯ ಐಷರಾಮಿ ಹೋಟೆಲ್‌ಗೆ ಬಂದು ಬೀಡುಬಿಟ್ಟಿದ್ದರು. ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಇವರ ವರ್ತನೆಗೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇಲ್ಲಿಂದ ಹೊರಡಿ ಎಂದು ಹೋಟೆಲ್‌ ಬಳಿ ಪ್ರತಿಭಟನೆ ಕೂಡ ನಡೆಸಲಾಗಿತ್ತು.

    ನಾಳೆಯೇ ಬಹುಮತ ಸಾಬೀತುಪಡಿಸುವಂತೆ ಉದ್ಧವ್‌ ಠಾಕ್ರೆ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲರು ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಾಸಕರು ಗುವಾಹಟಿಯಿಂದ ಮುಂಬೈಗೆ ಬರಲು ಸಿದ್ಧತೆ ನಡೆಸಿದ್ದಾರೆ.

    Live Tv

  • ಎಷ್ಟು ದಿನ ಗುವಾಹಟಿಯಲ್ಲೇ ಅಡಗಿರುತ್ತೀರಿ?: ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಟಾಂಗ್

    ಎಷ್ಟು ದಿನ ಗುವಾಹಟಿಯಲ್ಲೇ ಅಡಗಿರುತ್ತೀರಿ?: ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಟಾಂಗ್

    ಮುಂಬೈ: ಮಹಾರಾಷ್ಟ್ರದ ರಾಜಕೀಯ ಸ್ಥಿತಿ ನಾಟಕೀಯವಾಗಿ ತಿರುವು ಮುರುವುಗಳನ್ನು ಪಡೆದುಕೊಳ್ಳುತ್ತಿರುವುದರ ನಡುವೆಯೇ ಶಿವಸೇನೆಯ ನಾಯಕ ಸಂಜಯ್ ರಾವತ್ ಅವರು ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುವಾಹಟಿಯಲ್ಲಿ ಎಷ್ಟು ದಿನ ಅಡಗಿಕೊಳ್ಳುತ್ತೀರಿ ಎಂದು ಟಾಂಗ್ ನೀಡಿದ್ದಾರೆ.

    ಬಂಡಾಯ ಶಾಸಕರ ಕುರಿತು ಟ್ವೀಟ್ ಮಾಡಿರುವ ಸಂಜಯ್ ರಾವತ್, ಎಷ್ಟು ದಿನ ನೀವು ಗುವಾಹಟಿಯಲ್ಲೇ ಅಡಗುತ್ತೀರಿ? ನೀವು ಚೌಪಾಟಿಗೆ ಮರಳಲೇ ಬೇಕು ಎಂದು ಟಾಂಗ್ ನೀಡಿದ್ದಾರೆ.

    ಏಕನಾಥ್ ಶಿಂಧೆ ಅವರು ಭಾನುವಾರ ಮಧ್ಯಾಹ್ನ ಶಾಸಕರ ಸಭೆ ಕರೆದಿದ್ದಾರೆ. ಅವರ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

    ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದಿರುವ ಶಿವಸೇನೆಯ 16 ಶಾಸಕರಿಗೆ ವಿಧಾನಸಭಾ ಕಾರ್ಯಲಯ ನೋಟಿಸ್ ನೀಡಿದೆ. ಸೋಮವಾರ ಸಂಜೆ ಒಳಗೆ ಲಿಖಿತ ಪ್ರತಿಕ್ರಿಯೆ ನೀಡಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದ್ದು, ಈ ಹಿನ್ನೆಲೆ ಏಕನಾಥ್ ಶಿಂಧೆ ಶಾಸಕರೊಂದಿಗೆ ಚರ್ಚಿಸಲಿದ್ದರೆ. ಇದನ್ನೂ ಓದಿ: ನಿಮಗೆ ತಾಕತ್ ಇದ್ರೆ ಚುನಾವಣೆಗೆ ಬನ್ನಿ: ರೆಬೆಲ್ ಶಾಸಕರಿಗೆ ಸವಾಲೆಸೆದ ಆದಿತ್ಯ ಠಾಕ್ರೆ

    ಮಹಾರಾಷ್ಟ್ರದ ಶಾಸಕಾಂಗ ಕಾರ್ಯದರ್ಶಿ ಬಂಡಾಯ ಶಾಸಕರಿಗೆ ಜೂನ್ 27ರ ಸಂಜೆಯ ಒಳಗಾಗಿ ಲಿಖಿತ ಉತ್ತರವನ್ನು ಕೋರಿ ಸಮನ್ಸ್ ಜಾರಿ ಮಾಡಿದೆ. ಮಹಾರಾಷ್ಟ್ರದ ವಿಧಾನ ಭವನದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಸಮನ್ಸ್ ಜಾರಿಗೊಳಿಸಿದ್ದಾರೆ. ಕೆಂದ್ರ ಸರ್ಕಾರ 15 ಬಂಡಾಯ ಶಾಸಕರಿಗೆ ವೈ ಪ್ಲಸ್ ವರ್ಗದ ಶಸ್ತ್ರಾಸ್ತ್ರ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಭದ್ರತೆ ಒದಗಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರೆಬೆಲ್ ಶಾಸಕರಿಗೆ ಕೇಂದ್ರದಿಂದ Y+ ಭದ್ರತೆ

    ಈ ನಡುವೆ ಶಿವಸೇನಾ ಹೆಸರಿಗಾಗಿ ಮೂಲ ಶಿವಸೇನೆ ನಾಯಕರು ಹಾಗೂ ಬಂಡಾಯ ಶಾಸಕರ ನಡುವೆ ಫೈಟ್ ಜೋರಾಗಿದ್ದು, ಶಿವಸೇನೆ ಮತ್ತು ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಕೆ ಮಾಡದಂತೆ ಸಿಎಂ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದ ಶಿವಸೇನೆ ನಾಯಕರು ಬಂಡಾಯ ಶಾಸಕರಿಗೆ ಪಕ್ಷದ ಹೆಸರು ಮತ್ತು ಅದರ ನಾಯಕರ ಹೆಸರು ಬಳಸಿಕೊಳ್ಳುವ ಅವಕಾಶ ಇಲ್ಲ, ಮತ್ತು ಪಕ್ಷದ್ರೋಹ ಮಾಡಿದ ಏಕನಾಥ್ ಶಿಂಧೆ ವಿರುದ್ಧ ಕ್ರಮಕ್ಕೆ ತಿರ್ಮಾನ ಮಾಡಲಾಗಿತ್ತು. ಬಂಡಾಯ ಶಾಸಕರು ಶಿವಸೇನೆ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಳಕೆ ಮಾಡದಿರಲು ಸೂಚಿಸುವಂತೆ ಮೂಲ ಶಿವಸೇನೆ ನಾಯಕರು ಚುನಾವಣೆ ಆಯೋಗದ ಮೊರೆ ಕೂಡಾ ಹೋಗಿದ್ದಾರೆ.

    Live Tv

  • 5 ಸ್ಟಾರ್‌ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಫುಲ್‌ ಬಿಂದಾಸ್ – ದಿನದ ಖರ್ಚು ಎಷ್ಟು ಗೊತ್ತಾ?‌

    5 ಸ್ಟಾರ್‌ ಹೋಟೆಲ್‌ನಲ್ಲಿ ಬಂಡಾಯ ಶಾಸಕರು ಫುಲ್‌ ಬಿಂದಾಸ್ – ದಿನದ ಖರ್ಚು ಎಷ್ಟು ಗೊತ್ತಾ?‌

    ದಿಸ್ಪುರ: ಇತ್ತ ಮಹಾರಾಷ್ಟ್ರ ಸರ್ಕಾರಕ್ಕೆ ಬಿಕ್ಕಟ್ಟು ಎದುರಾಗಿ ʼಮಹಾವಿಕಾಸ್‌ ಅಘಡಿʼ ಮೈತ್ರಿಕೂಟದ ನಾಯಕರು ತಲೆಕೆಡಿಸಿಕೊಂಡಿದ್ದರೆ, ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿ ಅತ್ತ ಬಂಡಾಯ ಶಾಸಕರು 5 ಸ್ಟಾರ್‌ ಹೋಟೆಲ್‌ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ.

    ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾ ಶಾಸಕರಿಗೆ ಅಸ್ಸಾಂನ 5 ಸ್ಟಾರ್‌ ಹೋಟೆಲ್‌ನಲ್ಲಿ ರಾಜಾತಿಥ್ಯವೇ ನಡೆಯುತ್ತಿದೆ. ದುಬಾರಿ ಹೋಟೆಲ್‌ನಲ್ಲಿ ಶಾಸಕರನ್ನು ಇರಿಸಿ ವಿಶೇಷ ಆತಿಥ್ಯ ನೀಡಲಾಗುತ್ತಿದೆ. ಈ ಹೋಟೆಲ್‌ನಲ್ಲಿ ಎಲ್ಲವೂ ದುಬಾರಿ. ರೂಂ ವೆಚ್ಚ ಹಾಗೂ ಇತರೆ ಸೌಲಭ್ಯಗಳ ಬೆಲೆ ಕೇಳಿದರೆ ಅಚ್ಚರಿ ಪಡುವಂತಿದೆ. ಇದನ್ನೂ ಓದಿ: ಅಸ್ಸಾಂನಲ್ಲಿರುವ ಶಿವಸೇನೆ ರೆಬಲ್ ಶಾಸಕರನ್ನು ಆತಿಥ್ಯಕ್ಕೆ ಕರೆದ ಮಮತಾ ಬ್ಯಾನರ್ಜಿ

    ಬಂಡಾಯ ಶಾಸಕರು ತಂಗಿರುವ ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. 7 ದಿನಗಳ ಮಟ್ಟಿಗೆ 70 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಶಾಸಕರು ಸೋಮವಾರ ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ನಲ್ಲಿರುವ ಹೊಟೇಲ್‌ನಲ್ಲಿದ್ದರು. ಅವರು ಬುಧವಾರ ಮತ್ತೊಂದು ಬಿಜೆಪಿ ಆಡಳಿತದ ರಾಜ್ಯವಾದ ಅಸ್ಸಾಂನ ಗುವಾಹಟಿಗೆ ಹಾರಿದರು. ಈಗ ಅಲ್ಲಿನ ಅತಿ ದುಬಾರಿ ಪಂಚತಾರಾ ಹೋಟೆಲ್‌ನಲ್ಲಿ ಹಾಯಾಗಿದ್ದಾರೆ.

    ತಂಗಲು ವೆಚ್ಚ ಎಷ್ಟು?
    ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿನ ಕೊಠಡಿಗಳಿಗೆ ಏಳು ದಿನಗಳ ಸುಂಕ 56 ಲಕ್ಷ ರೂ. ಎಂದು ಹೋಟೆಲ್ ಮತ್ತು ಸ್ಥಳೀಯ ರಾಜಕಾರಣಿಗಳ ಮೂಲಗಳು ತಿಳಿಸಿವೆ. ಆಹಾರ ಮತ್ತು ಇತರ ಸೇವೆಗಳ ದೈನಂದಿನ ಅಂದಾಜು ವೆಚ್ಚ ದಿನಕ್ಕೆ 8 ಲಕ್ಷ ರೂ. ಇದೆ.

    ಹೋಟೆಲ್‌ನಲ್ಲಿ ಒಟ್ಟು 196 ಕೊಠಡಿಗಳಿವೆ. ಶಾಸಕರು ಮತ್ತು ಅವರ ತಂಡಗಳಿಗಾಗಿ ಕಾಯ್ದಿರಿಸಿದ 70 ಕೊಠಡಿಗಳನ್ನು ಹೊರತುಪಡಿಸಿ, ಈಗಾಗಲೇ ಕಾರ್ಪೊರೇಟ್ ಡೀಲ್‌ಗಳಲ್ಲಿ ಕಾಯ್ದಿರಿಸಿದವರನ್ನು ಬಿಟ್ಟು ಹೊಸ ಬುಕಿಂಗ್‌ಗಳನ್ನು ಆಡಳಿತ ಮಂಡಳಿ ಸ್ವೀಕರಿಸುತ್ತಿಲ್ಲ. ಅಲ್ಲದೆ ಔತಣಕೂಟವನ್ನು ಸಹ ಮುಚ್ಚಲಾಗಿದೆ. ಆದ್ದರಿಂದ ಹೋಟೆಲ್‌ನಲ್ಲಿ ಉಳಿದುಕೊಂಡಿರುವವರನ್ನು ಹೊರತುಪಡಿಸಿ ರೆಸ್ಟೋರೆಂಟ್ ಕೂಡ ಮುಚ್ಚಲ್ಪಟ್ಟಿದೆ. ಇದನ್ನೂ ಓದಿ: 24 ಗಂಟೆಯೊಗಳಗೆ ವಾಪಸ್‌ ಬಂದ್ರೆ, ಶಿವಸೇನೆ ಮೈತ್ರಿ ಬಿಡಲು ಸಿದ್ಧ: ಸಂಜಯ್‌ ರಾವತ್

    ಕಾಂಗ್ರೆಸ್‌ ಹಾಗೂ ಎನ್‌ಸಿಪಿಯೊಂದಿಗೆ ಮೈತ್ರಿಕೂಟವನ್ನು ಶಿವಸೇನಾ ತ್ಯಜಿಸಬೇಕು ಎಂದು ಒತ್ತಾಯಿಸಿ ಏಕನಾಥ್‌ ಶಿಂಧೆ ನೇತೃತ್ವದಲ್ಲಿ 40 ಶಾಸಕರು ಪಂಚತಾರಾ ಹೋಟೆಲ್‌ನಲ್ಲಿ ಬೀಡುಬಿಟ್ಟಿದ್ದಾರೆ. ಅವರಿಗೆ ಬಿಜೆಪಿ ನಾಯಕರು ಎಲ್ಲಾ ರೀತಿಯ ಸೌಕರ್ಯ ಕಲ್ಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಶಿವಸೇನಾ ಶಾಸಕರು ನೇರವಾಗಿ ಕೇಳಿದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಈಗಾಗಲೇ ಸಿಎಂ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ಇದರ ಬೆನ್ನಲ್ಲೇ, ಬಂಡಾಯ ಶಾಸಕರು 24 ಗಂಟೆಯೊಳಗೆ ವಾಪಸಾದರೆ ಮೈತ್ರಿಕೂಟವನ್ನು ಬಿಡಲಾಗುವುದು ಎಂದು ಸಂಜಯ್‌ ರಾವತ್‌ ಭರವಸೆ ನೀಡಿದ್ದಾರೆ. ರಾವತ್‌ ಹೇಳಿಕೆಯನ್ನು ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ತೀವ್ರವಾಗಿ ಖಂಡಿಸಿವೆ.

    Live Tv

  • ಅನರ್ಹ ಶಾಸಕರಿಗೆ ಮಂಗಳವಾರ ಶುಭವಾಗುತ್ತಾ?

    ಅನರ್ಹ ಶಾಸಕರಿಗೆ ಮಂಗಳವಾರ ಶುಭವಾಗುತ್ತಾ?

    ನವದೆಹಲಿ: ದೋಸ್ತಿ ಪಕ್ಷ ಉರುಳಲು ಕಾರಣರಾಗಿದ್ದ ಅನರ್ಹ ಶಾಸಕರು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಲಿದ್ದು, ನ್ಯಾಯಾಲಯ ಯಾವ ನಿರ್ಧಾರಕ್ಕೆ ಬರಲಿದೆ ಎಂಬ ಕುತೂಹಲ ಮೂಡಿದೆ.

    ಈಗಾಗಲೇ ಅನರ್ಹ ಶಾಸಕರು ತಮ್ಮ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಲು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿತ್ತು. ಇದರಂತೆ ನಿಯಮಗಳ ಅನ್ವಯ ಮಂಗಳವಾರ ಅನರ್ಹ ಶಾಸಕರು ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆಗೆ ಬರಲಿದೆ. ಈ ವೇಳೆ ಕೋರ್ಟ್ ನೇರ ವಿಚಾರಣೆ ಆರಂಭ ಮಾಡುತ್ತಾ? ಅಥವಾ ಕೆಪಿಸಿಸಿ, ಸ್ಪೀಕರ್ ಅವರಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಅರ್ಜಿ ವಿಚಾರಣೆಯ ಕುರಿತು ನ್ಯಾಯಾಲಯದ ವೆಬ್ ಸೈಟ್‍ನಲ್ಲಿ ಮಾಹಿತಿ ನೀಡಲಾಗಿದ್ದು, ಸ್ಪೀಕರ್ ಅವರ ಆದೇಶ ಪ್ರಶ್ನಿಸಿ 17 ಶಾಸಕರು ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆಯನ್ನು ನ್ಯಾ.ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ನಡೆಸುತ್ತದೆ. ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿರುವ ಅನರ್ಹ ಶಾಸಕರಿಗೆ ಕೋರ್ಟಿಗೆ ಹಾಜರಾಗುವಂತೆ ರಿಜಿಸ್ಟ್ರಾರ್ ಮೂಲಕ ನ್ಯಾಯಾಲಯ ಸೂಚಿಸಿದೆ.

    ಈಗಾಗಲೇ ಕೆಪಿಸಿಸಿ ಪ್ರಕರಣದ ಕುರಿತು ಕೆವಿಯಟ್ ಸಲ್ಲಿಕೆ ಮಾಡಿರುವುದರಿಂದ ನ್ಯಾಯಾಲಯ ನೇರ ವಿಚಾರಣೆ ಆರಂಭ ಮಾಡುತ್ತಾ? ಅಥವಾ ಅವರಿಗೆ ನೋಟಿಸ್ ನೀಡಿ ಸೂಚನೆ ನೀಡುತ್ತಾ ಎಂಬ ಕುತೂಹಲ ಇದೆ. ನೇರ ವಿಚಾರಣೆ ಆರಂಭ ಮಾಡುವುದು ಅಥವಾ ಕೆಪಿಸಿಸಿಗೆ ನೋಟಿಸ್ ನೀಡಿ ವಿಚಾರಣೆ ಮುಂದೂಡುವುದು ನ್ಯಾಯಮೂರ್ತಿಗಳ ವಿವೇಚನೆ ಮೇರೆಗೆ ನಿರ್ಧಾರವಾಗಲಿದೆ.

  • ಸಿದ್ದರಾಮಯ್ಯ, ಹೆಚ್‍ಡಿಡಿ ಮಾತು ಕೇಳಿ ಸ್ಪೀಕರ್ ಅನ್ಯಾಯ ಮಾಡಿದ್ರು: ಬಿ.ಸಿ ಪಾಟೀಲ್

    ಸಿದ್ದರಾಮಯ್ಯ, ಹೆಚ್‍ಡಿಡಿ ಮಾತು ಕೇಳಿ ಸ್ಪೀಕರ್ ಅನ್ಯಾಯ ಮಾಡಿದ್ರು: ಬಿ.ಸಿ ಪಾಟೀಲ್

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಮಾತು ಕೇಳಿಕೊಂಡು ಸ್ಪೀಕರ್ ರಮೇಶ್ ಕುಮಾರ್ ಅನ್ಯಾಯ ಮಾಡಿದರು ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ವಿಚಾರದಲ್ಲಿ ಅನರ್ಹ ಶಾಸಕರ ಕೈವಾಡವಿಲ್ಲ. ಹಾಗೆ ಅಂದುಕೊಂಡಿದ್ದರೆ ಅದು ಮೂರ್ಖತನ ಅಷ್ಟೇ ಎಂದು ಕಿಡಿಕಾರಿದರು.

    ಕಾನೂನಿನ ಮುಂದೆ ಎಲ್ಲರೂ ಒಂದೇ. ಡಿ.ಕೆ ಶಿವಕುಮಾರ್ ಅವರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗುತ್ತದೆ ಇಲ್ಲ ಅವರು ತಪ್ಪೇ ಮಾಡಿಲ್ಲ ಎಂದರೆ ಶಿಕ್ಷೆ ಆಗಲ್ಲ ಅಷ್ಟೇ ಎಂದು ಹೇಳಿದರು. ಇದೇ ವೇಳೆ ಅನರ್ಹರಾಗಿರೋ ನಾವು ಸುಪ್ರೀಂ ಕೊರ್ಟಿನಲ್ಲಿ ಗೆದ್ದು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಮಾನ ಮರ್ಯಾದೆ ಇದ್ರೆ ಕಾಂಗ್ರೆಸ್ ಕಚೇರಿಗೆ ಕಾಲಿಡ್ಬಾರ್ದು: ಮುನಿಯಪ್ಪ ಆಕ್ರೋಶ

    ಮಾನ ಮರ್ಯಾದೆ ಇದ್ರೆ ಕಾಂಗ್ರೆಸ್ ಕಚೇರಿಗೆ ಕಾಲಿಡ್ಬಾರ್ದು: ಮುನಿಯಪ್ಪ ಆಕ್ರೋಶ

    ಕೋಲಾರ: ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಾನ ಮರ್ಯಾದೆ ಇದ್ದರೆ ಅವರು ಕಾಂಗ್ರೆಸ್ ಕಚೇರಿಗೆ ಕಾಲಿಡಬಾರದು ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಅವರಿಗೆಲ್ಲಾ ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಕಾಲಿಡಬಾರದು. ಇದನ್ನು ನಾನು ಗಂಭಿರವಾಗಿಯೇ ಪರಿಗಣಿಸಿ ಹೇಳುತ್ತಿದ್ದೇನೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ಸಿನಲ್ಲಿ ಇದ್ದುಕೊಂಡೆ ಬಿಜೆಪಿಗೆ ಬೆಂಬಲಿಸಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದೇನೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಾಸಕರಾದ ನಾರಾಯಣಸ್ವಾಮಿ, ವಿ. ಮುನಿಯಪ್ಪ, ಎಚ್.ನಾಗೇಶ್, ನಜೀರ್ ಅಹ್ಮದ್ ವಿರುದ್ಧ ಹೈ ಕಮಾಂಡ್‍ಗೆ ದೂರು ನೀಡಲಾಗಿದೆ. ಅದರಂತೆ ಇಂದಿನ ಸತ್ಯ ಶೋಧನ ಸಮಿತಿಗೂ ದೂರು ನೀಡಿದ್ದೇನೆ ಎಂದು ತಿಳಿಸಿದರು.

    ಕಾಂಗ್ರೆಸ್ಸಿಗೆ ದ್ರೋಹ ಮಾಡಿದ ಜನ ಪಕ್ಷಕ್ಕೆ ಬೇಡ. ಮೈತ್ರಿ ಸರ್ಕಾರ ರಚಿಸಲು ಜನತಾ ದಳ ಕೂಡ ನಮ್ಮ ಜೊತೆ ನಿಂತರು, ಆದರೆ ಎರಡು ಪಕ್ಷದ ಕಾರ್ಯಕರ್ತರು ಒಂದಾಗಲಿಲ್ಲ. ಇದರ ಪರಿಣಾಮವಾಗಿ ಎಂದಿಗೂ ಸಂಸತ್ತಿನಲ್ಲಿ ಇಲ್ಲದ ಪರಿಸ್ಥಿತಿಯನ್ನು ಇಂದು ನೋಡಬೇಕಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಶಾಸಕರು, ನಾಯಕರು ಮಾಡಿರುವ ತಪ್ಪು ಕೆಲಸಕ್ಕೆ ಕ್ರಮ ಕೈಗೊಳ್ಳಲೇಬೇಕು. ಅದು ಪಕ್ಷದ ಜವಾಬ್ದಾರಿ, ಶಿಸ್ತಿನ ಸಿಪಾಯಿಗಳಂತೆ ನಮಗೆ ಬೆಂಬಲಿಸಿದ ಜನರಿಗೆ ನಾವು ಗೌರವ ನೀಡಬೇಕು. ಮತ್ತೆ ಕಾಂಗ್ರೆಸ್ಸನ್ನು ನಾವು ಕಟ್ಟಬೇಕಿದೆ ಎಂದು ಹೇಳಿದರು.

  • ಹಾಲು ಕುಡಿದ ಮಕ್ಕಳೇ ಬದ್ಕಲ್ಲ, ಇನ್ನು ವಿಷ ಕುಡಿದೋರು ಬದುಕ್ತಾರಾ- ಸಿದ್ದರಾಮಯ್ಯ ವ್ಯಂಗ್ಯ

    ಹಾಲು ಕುಡಿದ ಮಕ್ಕಳೇ ಬದ್ಕಲ್ಲ, ಇನ್ನು ವಿಷ ಕುಡಿದೋರು ಬದುಕ್ತಾರಾ- ಸಿದ್ದರಾಮಯ್ಯ ವ್ಯಂಗ್ಯ

    ಹುಬ್ಬಳ್ಳಿ: ಹಾಲು ಕುಡಿದ ಮಕ್ಕಳು ಬದುಕಲ್ಲ. ಇನ್ನು ವಿಷ ಕುಡಿದವರು ಬದುಕುತ್ತಾರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ಇಂದು ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್‍ವೈ ಸರ್ಕಾರ ಬಹಳ ದಿನ ಇರುತ್ತೆ ಎಂದು ಯಾರಿಗೂ ನಂಬಿಕೆ ಇಲ್ಲ. ರೆಬಲ್ಸ್ ಗಳನ್ನಿಟ್ಟುಕೊಂಡು ಸರ್ಕಾರ ಮುನ್ನೆಡೆಸೋಕ್ಕಾಗುತ್ತಾ. ಹಾಲು ಕುಡಿದ ಮಕ್ಕಳೆ ಬದುಕಲ್ಲ. ಇನ್ನು ವಿಷ ಕುಡಿದವರು ಬದಕ್ತಾರಾ ಎಂದು ಹೇಳಿದರು.

    ಬಿಜೆಪಿ ಸರ್ಕಾರದ ಸಚಿವರು ನೆರೆಪಿಡಿತ ಜಿಲ್ಲೆಗಳಲ್ಲಿ ಇರಬೇಕಿತ್ತು. ಆದರೆ ದೆಹಲಿ ಟು ಬೆಂಗಳೂರು ಮಧ್ಯೆ ಟೂರ್ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ನೆರೆ ಹಾನಿಯಾದರೂ ಕೇಂದ್ರದಿಂದ ಸೂಕ್ತ ಪರಿಹಾರ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವಾಮ ಮಾರ್ಗದಿಂದ ಸರ್ಕಾರ ರಚನೆ ಮಾಡಿದ್ದಾರೆ. ಈಗಲಾದರೂ ಬಿಜೆಪಿ ನಾಯಕರು ಜನರ ಕಡೆ ನೋಡಬೇಕು ಎಂದು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

    ದೇವೇಗೌಡರ ಕುಟುಂಬದವರು ಮಾಡಿದ ಆರೋಪದ ಬಗ್ಗೆ ನಾನು ಸುಧೀರ್ಘವಾಗಿ ಉತ್ತರ ಕೊಟ್ಟಿದ್ದೇನೆ. ಬೈರತಿ ಬಸವರಾಜು ಮತ್ತು ಸೋಮಶೇಖರ್‍ ರನ್ನು ನಾನು ಮುಂಬೈಗೆ ಕಳುಸಿದ್ದೇನೆ ಎಂದು ಅವರು ಹೇಳುತ್ತಾರೆ. ಹಾಗಾದರೆ ವಿಶ್ವನಾಥ್, ನಾರಾಯಣಗೌಡ ಮತ್ತು ಗೋಪಾಲಯ್ಯರನ್ನು ಯಾರು ಕಳುಹಿಸಿದ್ದು, ಅವರು ಜೆಡಿಎಸ್‍ನವರು ಅಲ್ಲವೆ. ಹೆಚ್‍ಡಿಕೆ ಮತ್ತು ಹೆಚ್‍ಡಿಡಿ ನನ್ನ ಮೇಲೆ ಗೂಬೆ ಕೂರಿಸೋಕೆ ನೋಡುತ್ತಿದ್ದಾರೆ ಎಂದು ಆರೋಪಿಸಿದರು.

    ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಕೇಳಿದಾಗ, ಆ ಬಗ್ಗೆ ನನಗೇನು ಗೊತ್ತಿಲ್ಲ. ಇವತ್ತು ಗುಲಾಮ್ ನಬಿ ಅಜಾದ್ ಬರುತ್ತಾರೆ ಎಂದು ಕೇಳಿದ್ದೇನೆ. ಆದರೆ ನಾನು ನೆರೆ ಪೀಡಿತ ಪ್ರದೇಶಗಳ ಪ್ರವಾಸದಲ್ಲಿದ್ದೇನೆ ಎಂದು ಹೇಳಿದರು.

  • ಅನರ್ಹ ಆದ ಮೇಲೆ ಆಗೋ ಕಷ್ಟ ಏನು ಎಂದು ನನಗೆ ಗೊತ್ತಿದೆ: ತಂಗಡಗಿ ವ್ಯಂಗ್ಯ

    ಅನರ್ಹ ಆದ ಮೇಲೆ ಆಗೋ ಕಷ್ಟ ಏನು ಎಂದು ನನಗೆ ಗೊತ್ತಿದೆ: ತಂಗಡಗಿ ವ್ಯಂಗ್ಯ

    – ಅನರ್ಹ ಶಾಸಕರ ಕಿವಿಗೆ ಬಿಜೆಪಿ ಸರಿಯಾಗಿಯೇ ಹೂ ಮುಡಿಸಿದೆ

    ಬೆಂಗಳೂರು: ರಾಜೀನಾಮೆ ನೀಡಿದ ನಂತರ ಅನರ್ಹ ಆದ ಮೇಲೆ ಆಗೋ ಕಷ್ಟ ಏನು ಎಂದು ನನಗೆ ಗೊತ್ತಿದೆ. ಈ ಹಿಂದೆ ಆ ಕಷ್ಟವನ್ನು ನಾನು ಅನುಭವಿಸಿದ್ದೇನೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಈ ಹಿಂದೇ ನನಗೆ ಬಂದ ಕಷ್ಟ, ಈಗ ನಮ್ಮ ಮಿತ್ರರು ಅನುಭವಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‍ನಲ್ಲಿ ಅವರು ಅಷ್ಟು ಸುಲಭವಾಗಿ ಕೇಸ್ ಗೆದ್ದು ಬಂದು ಮಂತ್ರಿ ಆಗೋಕೆ ಸಾಧ್ಯ ಇಲ್ಲ ಎಂದು ಹೇಳಿದರು.

    ಬಿಜೆಪಿಯವರು ಮಾತನ್ನು ನಂಬಬೇಡಿ ಎಂದು ನಾನು ಈ ಹಿಂದೆ ಹೇಳಿದ್ದೆ. ಇವಾಗ ಅನರ್ಹ ಶಾಸಕರ ಕಿವಿಗೆ ಬಿಜೆಪಿ ಸರಿಯಾಗಿಯೇ ಹೂ ಮುಡಿಸಿದೆ. ಅವರಿಗೆ ಏನೇನೋ ಭರವಸೆ ಕೊಟ್ಟು ಕೊನೆಗೆ ಬೀದಿಗೆ ತಂದು ನಿಲ್ಲಿಸಿದ್ದಾರೆ. ದಯಮಾಡಿ ಯಾರು ಬಿಜೆಪಿಯವರ ಆಶ್ವಾಸನೆ ನಂಬಬೇಡಿ. ಯಾಕೆಂದರೆ ಅವರು ಸಿಎಂ ಸ್ಥಾನ ಬಿಟ್ಟು ಉಳಿದೆಲ್ಲಾ ಸ್ಥಾನ ಕೊಡ್ತೀನಿ ಅಂತಾರೆ. ಹಣಕಾಸು, ಗೃಹ, ಲೋಕೋಪಯೋಗಿ ಸೇರಿದಂತೆ ಎಲ್ಲವೂ ಕೊಡ್ತೇವಿ ಅಂತಾರೆ ಆದರೆ ಕೊಡಲ್ಲ ಎಂದು ವ್ಯಂಗ್ಯವಾಡಿದರು.

    ಬಿಜೆಪಿಯವರು ಕೊಟ್ಟ ಭರವಸೆಯನ್ನು ಈಡೇರಿಸುವುದಿಲ್ಲ. ಯಾರು ತಮಗೆ ಸಪೋರ್ಟ್ ಮಾಡಿದ್ದಾರೋ ಅವರನ್ನೇ ಅವರು ಮೊದಲು ತುಳಿಯುತ್ತಾರೆ. ಅನರ್ಹ ಶಾಸಕರು ಅಂದುಕೊಂಡಂತೆ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಸಾಧ್ಯ ಆಗುವುದಿಲ್ಲ. ಮೊದಲಿನಂತೆ ಬಿಜೆಪಿಯ ಹೈಕಮಾಂಡ್ ಈಗ ಇಲ್ಲ ಎಂದು ಹೇಳಿದರು.

  • ಬಾಂಬೆ ಬ್ಲೂ ಬಾಯ್ಸ್ ಸಂತೋಷವಾಗಿರಲಿ: ಡಿಕೆಶಿ ಲೇವಡಿ

    ಬಾಂಬೆ ಬ್ಲೂ ಬಾಯ್ಸ್ ಸಂತೋಷವಾಗಿರಲಿ: ಡಿಕೆಶಿ ಲೇವಡಿ

    ನವದೆಹಲಿ: ಬಾಂಬೆ ಬ್ಲೂ ಬಾಯ್ಸ್ ಸಂತೋಷವಾಗಿರಲಿ ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಅವರು ಅನರ್ಹ ಶಾಸಕರನ್ನು ಲೇವಡಿ ಮಾಡಿದ್ದಾರೆ.

    ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರು ನನ್ನ ಹೃದಯಕ್ಕೆ ಹತ್ತಿರವಾದ ನಾಯಕ ಅವರ ಜನ್ಮ ದಿನವನ್ನು ಆಚರಣೆ ಮಾಡಲು ದೆಹಲಿಗೆ ಬಂದಿದ್ದೇನೆ. ನಾಳೆ ಮಧ್ಯಪ್ರದೇಶಕ್ಕೆ ಹೋಗಿ ನಂತರ ಬೆಂಗಳೂರಿಗೆ ವಾಪಸ್ ಆಗುತ್ತೇನೆ ಎಂದು ತಿಳಿಸಿದರು.

    ಇದೇ ವೇಳೆ ಬಿಜೆಪಿ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರೆಳಿರುವ ಅನರ್ಹ ಶಾಸಕರ ಬಗ್ಗೆ ಮಾತನಾಡಿದ ಅವರು, 40 ವರ್ಷ ಕಟ್ಟಿ ಬೆಳಸಿದ ಕಾಂಗ್ರೆಸ್ ಪಾರ್ಟಿಯನ್ನು ಬೀಳಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಯಾವಗಲೂ ಬಸವಣ್ಣನ ಬಗ್ಗೆ ಮಾತನಾಡುವ ಬಿಎಸ್‍ವೈಗೆ ಅನರ್ಹ ಶಾಸಕರು ದೊಡ್ಡ ತ್ಯಾಗಿಗಳ ರೀತಿಯಲ್ಲಿ ಕಾಣುತ್ತಿದ್ದಾರೆ. ಬಾಂಬೆ ಬ್ಲೂ ಬಾಯ್ಸ್ ಸಂತೋಷವಾಗಿರಲಿ ಎಂದು ಹೇಳಿದರು.

    ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ವಿಚಾರವಾಗಿ ಮಾತನಾಡಿದ ಅವರು, ಉಮೇಶ್ ಕತ್ತಿ ಸಿದ್ದರಾಮಯ್ಯ ಅವರನ್ನು ಸೌರ್ಹದತೆಗೆ ಭೇಟಿ ಮಾಡಿರಬಹುದು. ಕೆಲವರು ಬಹಿರಂಗವಾಗಿ, ಕೆಲವರು ಗೌಪ್ಯವಾಗಿ ಭೇಟಿ ಮಾಡುತ್ತಾರೆ. ಈ ಭೇಟಿಯಲ್ಲಿ ಏನು ಇಲ್ಲ. ಉಮೇಶ್ ಕತ್ತಿ ಹಿರಿಯ ನಾಯಕ ಅವರ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದರು.

    ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ನಿಮ್ಮನ್ನು ನೇಮಿಸುತ್ತಾರೆ ಎಂಬ ಪ್ರಶ್ನೆ ಉತ್ತರಿಸಿದ ಅವರು ರಾಜ್ಯಾಧ್ಯಕ್ಷರ ಸ್ಥಾನದ ಬಗ್ಗೆ ನಾನು ಯಾರನ್ನು ಭೇಟಿ ಮಾಡಿಲ್ಲ. ಆದರ ಬಗ್ಗೆ ಎಲ್ಲಿಯೂ ಮಾತನ್ನೂ ಆಡಿಲ್ಲ. ಇಲ್ಲಿಂದ ಹೋದಮೇಲೆ ಸುದ್ದಿಗೋಷ್ಠಿ ಮಾಡುತ್ತೇನೆ ಎಂದು ಹೇಳಿದರು.