Tag: Rebel

  • ಬಿಜೆಪಿಗೆ ಕಬ್ಬಿಣದ ಕಡಲೆಯಾದ ಅಥಣಿ ಕ್ಷೇತ್ರ

    ಬಿಜೆಪಿಗೆ ಕಬ್ಬಿಣದ ಕಡಲೆಯಾದ ಅಥಣಿ ಕ್ಷೇತ್ರ

    ಚಿಕ್ಕೋಡಿ: ಅಭ್ಯರ್ಥಿಗಳ ಆಯ್ಕೆಗೂ ಮುನ್ನವೇ ಬಿಜೆಪಿಯಲ್ಲಿ (BJP) ಬಂಡಾಯದ ಬಿಸಿ ತಟ್ಟಿದೆ. ಟಿಕೆಟ್ ಆಯ್ಕೆಗೂ ಮುನ್ನವೇ ಅಥಣಿ ಮತಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ವಲಸಿಗ ಶಾಸಕ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ರಾಜಕೀಯ ನಿವೃತ್ತಿ ಎನ್ನುತ್ತಿರುವ ಗೋಕಾಕ್ ಸಾಹುಕಾರ ಮತ್ತೊಂದೆಡೆ ಟಿಕೆಟ್ ನನಗೆ ನಾಮಪತ್ರ ಸಲ್ಲಿಕೆ ಬನ್ನಿ ಎಂದು ಸವದಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬಿಜೆಪಿಗೆ ಇದೀಗ ಅಥಣಿ (Athani) ಕ್ಷೇತ್ರ ತಲೆನೋವು ಎನಿಸಿಕೊಂಡಿದೆ.

    ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ ವಲಸಿಗ ಶಾಸಕರು ಹಾಗೂ ಮೂಲ ಬಿಜೆಪಿಗರ ನಡುವಿನ ತಿಕ್ಕಾಟ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಘೋಷಣೆಗೂ ಮುನ್ನವೇ ಭುಗಿಲೆದ್ದಿದೆ. ಬೆಳಗಾವಿ (Belegavi) ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ವಲಸಿಗ ಶಾಸಕ ಮಹೇಶ್ ಕುಮಟಳ್ಳಿ (Mahesh Kumathalli) ಅವರಿಗೆ ಟಿಕೆಟ್ ನೀಡಬೇಡಿ ನನಗೆ ನೀಡಬೇಕು ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Laxman Savadi) ಹಠಕ್ಕೆ ಬಿದ್ದಿದ್ದಾರೆ. ಅಥಣಿ ಪಟ್ಟಣದಲ್ಲಿ ಪಂಚಮಸಾಲಿ ಸಮಾವೇಶ ನಡೆಸಿ ಈ ಬಾರಿ ಟಿಕೆಟ್ ನನಗೆ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಜೊತೆಗೆ ಸ್ವ ಪಕ್ಷದ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಸೋಲಿನ ವಾತಾವರಣ ನಿರ್ಮಾಣವಾಗಿದೆ. ಈ ಸೋಲನ್ನು ನನ್ನ ಹಣೆಪಟ್ಟಿಗೆ ಕಟ್ಟುವುದಕ್ಕೆ ನನ್ನ ಜಿಲ್ಲೆಯಲ್ಲಿ ಕೆಲವರು ಇದ್ದಾರೆ. ಪಕ್ಷಕ್ಕೆ ಅಭ್ಯರ್ಥಿಗಳ ಸೋಲು ಬೇಡ. ನನಗೆ ಟಿಕೆಟ್ ಕೊಡಿ, ನಾನು ಗೆಲ್ಲುತ್ತೇನೆ ಎಂದು ಕೋರ್ ಕಮಿಟಿಯಲ್ಲಿ ತಿಳಿಸಿದ್ದೇನೆ ಎಂದು ಕುಮಟಳ್ಳಿ ವಿರುದ್ಧ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಸುದೀಪ್ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ಪತ್ರ

    ಅಥಣಿ ಕ್ಷೇತ್ರದಲ್ಲಿ ಪ್ರಬಲ ಸಮಾಜವಾಗಿರುವ ಪಂಚಮಸಾಲಿ ಸಮಾಜದ ಓಲೈಕೆಗೆ ಸವದಿ ಮುಂದಾಗಿದ್ದಾರೆ. ಪಂಚಮಸಾಲಿ ಸಮಾಜ ನನ್ನ ವಿರುದ್ಧ ಇದೆ ಎಂದು ಬಿಂಬಿಸಲಾಗುತ್ತಿದೆ. ಯಾವತ್ತೂ ಪಂಚಮಸಾಲಿ ಮೀಸಲಾತಿಗಾಗಿ ಧ್ವನಿ ಎತ್ತಿದವನು ನಾನೇ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಹೇಳಿದವನು ನಾನು. ಅಥಣಿ ಶಿವಯೋಗಿಗಳ ಮೇಲೆ ಆಣೆ ಮಾಡಿ ಹೇಳುತ್ತೇನೆ ಎಂದು ಪಂಚಮಸಾಲಿ ಮತದಾರರನ್ನು ಸೆಳೆಯಲು ಸವದಿ ಮುಂದಾಗಿದ್ದಾರೆ.

    ಪಂಚಮಸಾಲಿ ಸಮಾಜದ ಮಹೇಶ್ ಕುಮಟಳ್ಳಿ ಅವರ ವೋಟ್ ಬ್ಯಾಂಕ್ ಮೇಲೆ ಸವದಿ ಕಣ್ಣಿಟ್ಟು ಪಂಚಮಸಾಲಿ ಮುಖಂಡರನ್ನು ಸೆಳೆಯಲು ಮುಂದಾಗಿದ್ದಾರೆ. ಒಂದು ಕಡೆ ಮಹೇಶ್ ಕುಮಟಳ್ಳಿ ಅವರಿಗೆ ಅಥಣಿ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಸವಾಲನ್ನು ಗೋಕಾಕ್ ಸಾಹುಕಾರ ಕುಮಟಳ್ಳಿ ಪರ ಬ್ಯಾಟ್ ಬೀಸಿದರೆ ಮತ್ತೊಂದೆಡೆ ಬಿಜೆಪಿ ಟಿಕೆಟ್ ನನಗೆ ನಾಮಪತ್ರ ಸಲ್ಲಿಕೆಗೆ ಬರುವಂತೆ ಕಾರ್ಯಕರ್ತರಿಗೆ ಸವದಿ ಕರೆ ಕೊಡುತ್ತಿದ್ದಾರೆ. ಅಥಣಿ ಕ್ಷೇತ್ರದ ಈ ತಿಕ್ಕಾಟ ರಾಜ್ಯ ರಾಜಕಾರಣದಲ್ಲಿ ಮುಂದೆ ಬಹುದೊಡ್ಡ ಬೆಳವಣಿಗೆಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ. ಇದನ್ನೂ ಓದಿ: ಕಾಂಗ್ರೆಸ್ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಕಾದು ಕುಳಿತಿದೆ: ಬೊಮ್ಮಾಯಿ ವ್ಯಂಗ್ಯ

  • ಸಂಪುಟಕ್ಕೆ ಪಕ್ಷೇತರರು ಸೇರ್ಪಡೆ- ಕುತೂಹಲ ಮೂಡಿಸಿದ ರೆಬೆಲ್ ಶಾಸಕರ ನಡೆ

    ಸಂಪುಟಕ್ಕೆ ಪಕ್ಷೇತರರು ಸೇರ್ಪಡೆ- ಕುತೂಹಲ ಮೂಡಿಸಿದ ರೆಬೆಲ್ ಶಾಸಕರ ನಡೆ

    ಬೆಂಗಳೂರು: ವರ್ಷವಿಡಿ ಬಂಡಾಯದ ಬಾವುಟ ಹಾರಿಸಿಕೊಂಡು ಓಡಾಡಿದವರು ಎಲ್ಲಿ ಇದ್ದಾರೆ. ಸಚಿವ ಸ್ಥಾನ ಕೊಟ್ಟರೆ ಸರಿ ಇಲ್ಲಾ ಅಂದರೆ ನೋಡಿ ಎಂದು ದೋಸ್ತಿಗಳನ್ನು ಹೆದರಿಸಿಕೊಂಡು ಓಡಾಡಿದವರ ಮುಂದಿನ ನಡೆ ಏನು ಎಂದು ಇದೀಗ ಸದ್ಯದ ಕುತೂಹಲವಾಗಿದೆ.

    ಹೌದು. ಪಕ್ಷೇತರರನ್ನ ಸಂಪುಟಕ್ಕೆ ಸೇರ್ಪಡೆ ಮಡಿಕೊಂಡ ಬೆನ್ನಲ್ಲೇ ಶಾಸಕರು ಬಂಡಾಯದ ಬಾವುಟ ಹಾರಿಸುತ್ತಾರಾ ಇಲ್ಲಾ ಸೈಲೆಂಟಾಗ್ತಾರಾ ಅನ್ನೋದೆ ಎಲ್ಲರ ಕುತೂಹಲವಾಗಿದೆ. ಹಾಗಾದರೆ ಯಾವ್ಯಾವ ಶಾಸಕರ ನಡೆ ಏನು ಎಂಬುದರ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.


    ರಮೇಶ್ ಜಾರಕಿಹೊಳಿ:
    ಬಂಡಾಯದ ಬಾವುಟ ಇನ್ನೂ ಕೆಳಗಿಳಿಸಿಲ್ಲ, ಕೋಪ ಕಡಿಮೆಯಾಗಿಲ್ಲ. ಹೀಗಾಗಿ ಬಂಡಾಯ ಹೆಚ್ಚಿಸಿ ಸರ್ಕಾರ ಕೆಡವಲು ಶಾಸಕರ ಸಂಖ್ಯಾ ಬಲವೂ ಇಲ್ಲ. ಆದ್ದರಿಂದ ಸಿಟ್ಟಿದ್ದರೂ ಮೌನವಾಗಬೇಕಾದ ಅನಿವಾರ್ಯತೆ ರಮೇಶ್ ಜಾರಕಿ ಹೊಳಿಯವರಿಗೆ ಎದುರಾಗಿದೆ.

    ರಾಮಲಿಂಗಾರೆಡ್ಡಿ:
    ಸಚಿವ ಸ್ಥಾನ ಬೇಕು ಅಂತಿದ್ದರೂ ಸರ್ಕಾರ ಕೆಡವೋ ಕೋಪ ಇಲ್ಲ. ತಮ್ಮ ಹಿರಿತನಕ್ಕೆ ಬೆಲೆ ಕೊಡಬೇಕು ಅನ್ನೋದಷ್ಟೇ ಇವರ ಹಠವಾಗಿದೆ. ಬೆಂಗಳೂರು ಮೇಲಿನ ಹಿಡಿತ ಬಳಸಿ ಏನಾದರೂ ಮಾಡಬಹುದು ಅನ್ನೋದು ದೋಸ್ತಿಗಳ ಆತಂಕವಾಗಿದೆ.

    ರೋಷನ್ ಬೇಗ್ :
    ಸಚಿವ ಸ್ಥಾನ ತಪ್ಪಿಸಿದ ನಾಯಕರ ಮೇಲಿನ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ. ಐಎಂಎ ಹಗರಣದ ಇಕ್ಕಳದಲ್ಲಿ ಸಿಲುಕಿ ರೋಷಾವೇಶ ಕುಗ್ಗಿದೆ. ಹಾಗಾಗಿ ಈಗಿನ ಪರಿಸ್ಥಿತಿಯಲ್ಲಿ ತಟಸ್ಥವಾಗಿರುವ ರೋಷನ್ ಬೇಗ್ ಪ್ಲಾನ್ ಮಾಡಿದ್ದಾರೆ.

    ಡಾ.ಸುಧಾಕರ್:
    ಸಚಿವ ಸ್ಥಾನ ಬೇಕೆ ಬೇಕು ಎನ್ನುವ ಪ್ರಬಲ ಆಕಾಂಕ್ಷಿಯಾಗಿದ್ದರು. 6 ತಿಂಗಳ ನಂತರ ಸಂಪುಟ ಪುನಾರಚನೆ ಆದಾಗ ನೋಡಿಕೊಂಡರಾಯ್ತು. ಸುಮ್ಮನೆ ಮಾತನಾಡಿ ಬಂಡಾಯಗಾರ ಅನ್ನಿಸಿಕೊಳ್ಳಬಾರದು ಎಂದು ಡಾ. ಸುಧಾಕರ್ ಅವರು ಸುಮ್ಮನಾಗಬಹುದು.

    ಬಿ.ಸಿ.ಪಾಟೀಲ್:
    ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾದರೂ ಬಂಡಾಯಕ್ಕೆ ಜೊತೆಗಾರರಿಲ್ಲ. ಸಂಖ್ಯಾಬಲ ಇಲ್ಲದ ಮೇಲೆ ಬಂಡಾಯ ನಡೆಸಿದರೆ ಪ್ರಯೋಜನ ಇಲ್ಲ. ನಾಯಕರ ಕೆಂಗಣ್ಣಿಗೆ ಗುರಿಯಾಗೋದಕ್ಕಿಂತ ಕಾದು ನೋಡುವ ತಂತ್ರ ಬಿ.ಸಿ ಪಾಟೀಲ್ ಅವರದ್ದಾಗಿದೆ.

    ನಾಗೇಂದ್ರ:
    ರಮೇಶ್ ಜಾರಕಿಹೊಳಿ ನಡೆ ಮೇಲೆ ಅವಲಂಬಿತರಾಗಿರುವ ನಾಗೇಂದ್ರ ಅವರು ಬಿಜೆಪಿ ನಾಯಕರನ್ನು ನಂಬಲಾರದ ಸ್ಥಿತಿಯಲ್ಲಿ ಗೊಂದಲದಲ್ಲಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಏನ್ ಮಾಡೋದಪ್ಪಾ ಅನ್ನೋ ಜಿಜ್ಞಾಸೆಯಲ್ಲಿದ್ದಾರೆ.

    ಶಿವರಾಂ ಹೆಬ್ಬಾರ್:
    ಸಚಿವನಾಗಬೇಕು ಅನ್ನೋ ಆಸೆ ಇದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿ ಶಿವರಾಮ ಹೆಬ್ಬಾರ್ ಇದ್ದಾರೆ. ಸಂಪುಟ ವಿಸ್ತರಣೆ ಆಗ್ತಿರೋದರಿಂದಾಗಿ ಏನೇ ಕಸರತ್ತು ಮಾಡಿದರು ಫಲಿಸಲ್ಲ ಅನ್ನೋ ಭಾವನೆ ಇವರಲ್ಲಿದೆ.

  • ‘ಜಾತಿ ರಾಜಕಾರಣ ಬಿಟ್ಟು ಬೇರೇನು ಮಾಡಿಲ್ಲ’- ಕೆಎಚ್ ಮುನಿಯಪ್ಪಗೆ ಟಿಕೆಟ್ ನೀಡದಂತೆ ಬಿಗಿಪಟ್ಟು

    ‘ಜಾತಿ ರಾಜಕಾರಣ ಬಿಟ್ಟು ಬೇರೇನು ಮಾಡಿಲ್ಲ’- ಕೆಎಚ್ ಮುನಿಯಪ್ಪಗೆ ಟಿಕೆಟ್ ನೀಡದಂತೆ ಬಿಗಿಪಟ್ಟು

    ನವದೆಹಲಿ: ಸಂಸದ ಕೆಎಚ್ ಮುನಿಯಪ್ಪ ಅವರ ವಿರುದ್ಧ ಭ್ರಷ್ಟಾಚಾರ ಆರೋಪಿಗಳಿವೇ ವಿನಃ, ಕ್ಷೇತ್ರದಲ್ಲಿ ಅವರಿಂದ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಆದ್ದರಿಂದ ಅವರಿಗೆ ಯಾವುದೇ ಕಾರಣಕ್ಕೂ ಈ ಬಾರಿ ಪಕ್ಷ ಟಿಕೆಟ್ ಕೊಡಬಾರದು ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

    ಕಳೆದ ಕೆಲ ದಿನಗಳಿಂದ ದೆಹಲಿಯಲ್ಲೇ ಬಿಡು ಬಿಟ್ಟಿದ್ದು, ಹೈಕಮಾಂಡ್‍ಗೆ ಒತ್ತಡ ಹಾಕುವ ಮೂಲಕ ಹಾಲಿ ಕೆಎಚ್ ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ. ಈಗಾಗಲೇ ಪಕ್ಷದ ಹಿರಿಯ ನಾಯಕ ಗುಲಾಂನಬೀ ಅಜಾದ್, ಅಹ್ಮದ್ ಪಟೇಲ್ ಹಾಗು ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್‍ರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

    ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದ ಶಾಸಕರ ತಂಡ ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಹಾಕಿದ್ದು, ಜಾತಿಗಳನ್ನು ಒಡೆದು ಸಂಸದ ಕೆ.ಹೆಚ್ ಮುನಿಯಪ್ಪ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

    ಮುಳಬಾಗಿಲು ಶಾಸಕ ನಾಗೇಶ್ ಹಾಗೂ ಮಾಜಿ ಶಾಸಕ ಕೊತ್ತನೂರು ಮಂಜುನಾಥ್, ಮುನಿಯಪ್ಪ ಅವರಿಗೆ ಟಿಕೆಟ್ ಕೊಟ್ಟರೆ ಅವರ ವಿರುದ್ಧ ಕೆಲಸ ಮಾಡುವ ಎಚ್ಚರಿಕೆ ಕೊಟ್ಟರು. ಅಲ್ಲದೇ ಬಲಗೈ ನಾಯಕರ ಪೈಕಿ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ಕ್ಷೇತ್ರದಲ್ಲಿ ಸ್ವರ್ಧೆಗೆ ಆಸಕ್ತಿ ತೋರಿದ್ದು ಅವರನ್ನು ಕಣಕ್ಕಿಳಿಸುವಂತೆ ಒತ್ತಡ ಹಾಕಿದ್ದಾರೆ. ಅಲ್ಲದೇ ಕೆಎಚ್ ಮುನಿಯಪ್ಪ ವಿರುದ್ಧ ನಾವು ಅನಿವಾರ್ಯವಾಗಿ ಅವರ ವಿರುದ್ಧವೇ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಎಚ್ ಮುನಿಯಪ್ಪ ಅವರು, ನನ್ನ ಮೇಲೆ ಮಾಡಿರುವ ಆರೋಪಗಳು ರಾಜಕೀಯ ಹಿನ್ನೆಲೆಯಲ್ಲಿ ಮಾತ್ರ. ಆದರೆ ಈ ಬಗ್ಗೆ ನಾನು ಅವರಿಗೆ ಉತ್ತರ ಕೊಡಬೇಕಾಗಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಿದ ವೇಳೆ ಅಧಿಕಾರಿಗಳಿಗೆ ನೀಡುತ್ತೇನೆ ಎಂದು ತಮ್ಮ ಆರೋಪ ಮಾಡಿದವರಿಗೆ ತಿರುಗೇಟು ನೀಡಿದರು.

    ಹೈಕಮಾಂಡ್ ಬಳಿ ನಾನು ಚರ್ಚೆ ನಡೆಸಿದ್ದು, ಹಾಲಿ 10 ಸಂಸದರಿಗೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ಹೈಕಮಾಂಡ್ ಯಾವುದೇ ನಿರ್ಣಯ ಕೈಗೊಂಡರು ಕೂಡ ನಾನು ಬದ್ಧರಾಗಿರುತ್ತೇನೆ. ಒಬ್ಬ ರೈತನ ಮಗನಾಗಿ ನಾನು ಇಲ್ಲಿಯವರೆಗೂ ಬಂದಿದ್ದೇನೆ. ಆದ್ದರಿಂದಲೇ ನನ್ನ ಮೇಲೆ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ ಅಷ್ಟೇ. ಚುನಾವಣಾ ಸಮಯದಲ್ಲಿ ಇದು ಸಾಮಾನ್ಯ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ. ರಾಹುಲ್ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು, ಅವರು ಎಲ್ಲಿಯೇ ನಿಂತರು ಅವರನ್ನು ಗೆಲ್ಲಿಸಿ ಕಳುಹಿಸಿರುವ ಸಾಮಥ್ರ್ಯವಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುನಿಯಪ್ಪ ವಿರುದ್ಧ ಬಂಡಾಯ – ದೆಹಲಿಗೆ ದೂರು ಕೊಟ್ಟ ಕೋಲಾರ ಕೈ ಶಾಸಕರು

    ಮುನಿಯಪ್ಪ ವಿರುದ್ಧ ಬಂಡಾಯ – ದೆಹಲಿಗೆ ದೂರು ಕೊಟ್ಟ ಕೋಲಾರ ಕೈ ಶಾಸಕರು

    ಕೋಲಾರ: ಏಳು ಬಾರಿ ಕೋಲಾರ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಸಂಸದ ಕೆಎಚ್ ಮುನಿಯಪ್ಪ ಅವರಿಗೆ ಈ ಬಾರಿ ಸ್ವಪಕ್ಷಿಯ ಶಾಸಕರೇ ಟಿಕೆಟ್ ನೀಡದಂತೆ ಬಂಡಾಯ ಹೂಡಿದ್ದಾರೆ. ಜಿಲ್ಲೆಯ ನಾಲ್ಕು ಜನ ಕಾಂಗ್ರೆಸ್ ಶಾಸಕರು, ಸ್ವಾತಂತ್ರ್ಯ ಅಭ್ಯರ್ಥಿ ಸೇರಿದಂತೆ ಹಲವು ಮುಖಂಡರು ಹಾಲಿ ಸಂಸದ ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ದೆಹಲಿ ಹೈಕಮಾಂಡ್‍ಗೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಲೋಕಸಭಾ ಚುನಾವಣೆ ಘೋಷಣೆ ಆಗುತ್ತಿದಂತೆ ಜಿಲ್ಲೆಯ ರಾಜಕಾರಣ ರಂಗೇರಿದ್ದು, ಮುನಿಯಪ್ಪ ಅವರ ವಿರೋಧಿ ಬಣದ ಜಿಲ್ಲೆಯ ನಾಯಕರು ಪಕ್ಷಾತೀತವಾಗಿ ಒಂದಾಗಿದ್ದಾರೆ. ಅಲ್ಲದೇ ಅವರಿಗೆ ಟಿಕೆಟ್ ತಪ್ಪಿಸಲು ಸ್ವಪಕ್ಷಿಯವರೇ ಅಖಾಡಕ್ಕೆ ಇಳಿದಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ.

    ವಿಶೇಷತೆ ಎಂದರೆ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ, ಶಿಢ್ಲಘಟ್ಟ ಶಾಸಕ ವಿ.ಮುನಿಯಪ್ಪ, ಮುಳಬಾಗಲು ಪಕ್ಷೇತರ ಶಾಸಕ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮುನಿಯಪ್ಪಗೆ ಬಿಸಿ ತುಪ್ಪವಾಗ ಪರಿಣಮಿಸಿದ್ದಾರೆ. ಈಗಾಗಲೇ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಬಾರಿ ಕೆ.ಎಚ್ ಮುನಿಯಪ್ಪಗೆ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ವಿರೋಧ ಇರುವುದರಿಂದ ಇವರ ಬದಲಿಗೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕೋಲಾರದಿಂದ ಟಿಕೆಟ್ ನೀಡಿ ಎಂದು ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಸಮ್ಮಿಶ್ರ ಸರ್ಕಾರ ಮೈತ್ರಿ ಧರ್ಮದಂತೆ ಕೋಲಾರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪಾಲಾಗಿದ್ದು, ಹಾಲಿ ಸಂಸದರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ. ಎಂದಿನಂತೆ ಹೈಕಮಾಂಡ್‍ನಿಂದ ತಮ್ಮ ಹೆಸರು ಶಿಫಾರಸ್ಸು ಮಾಡಿಕೊಂಡು ಬಂದು ತಮ್ಮ ವಿರೋಧಿಗಳಿಗೆ ಟಾಂಗ್ ಕೊಡಲು ಸಂಸದರು ದೆಹಲಿ ಸೇರಿದಂತೆ ಬೆಂಗಳೂರಿನಲ್ಲಿ ಠಿಕ್ಕಾಣಿ ಹೂಡಿದ್ದಾರೆ.

    ಇತ್ತ ಸಂಸದರ ವಿರುದ್ಧ ಕ್ಷೇತ್ರದಲ್ಲಿ ಸೇರಿದಂತೆ ಬೆಂಗಳೂರಿನ ಅಶೋಕ ಹೋಟೆಲ್‍ನಲ್ಲಿ ಕೆ.ಹೆಚ್ ಹಠಾವೋ ಕೋಲಾರ ಬಚಾವೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿಂದುಳಿದ ವರ್ಗಗಳ ಮುಖಂಡರು ಇತ್ತೀಚಿಗೆ ಪರೋಕ್ಷವಾಗಿ ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ಮುನಿಯಪ್ಪರ ರಾಜಕೀಯ ವಿರೋಧಿಗಳನ್ನು ಒಟ್ಟುಗೂಡಿಸಿ ಬಹಿರಂಗವಾಗಿ ವಿರೋಧಿ ಬಣ ತಯಾರಿ ನಡೆಸಿತ್ತು. ಆದರೆ ಎಲ್ಲೂ ವಿರೋಧಿ ನಾಯಕರ ವಿರುದ್ಧ ಮಾತನಾಡದ ಮುನಿಯಪ್ಪ ತಮ್ಮದೇ ಶೈಲಿಯಲ್ಲಿ ಲೋಕಸಭೆ ಚುನಾವಣೆ ತಯಾರಿ ನಡೆಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಚುನಾವಣೆ ಬಂದಾಗ ಇವೆಲ್ಲಾ ಸಹಜ, ಅವರು ಯಾರು ಕೂಡ ನಮ್ಮ ವಿರೋಧಿಗಳಲ್ಲ ಎಂದು ಮೃದು ಮಾತನಾಡಿದ್ದಾರೆ. ಕಳೆದ ಏಳು ಚುನಾವಣೆಗಳಲ್ಲಿ ವಿರೋಧಿಗಳನ್ನು ಕಟ್ಟಿ ಹಾಕಿ, ಭಿನ್ನಾಭಿಪ್ರಾಯ, ಬಂಡಾಯ, ಹೋರಾಟಗಳ ಶಮನ ಮಾಡುವ ತಂತ್ರಗಳಲ್ಲಿಂದಲೇ ಜಯಗಳಿಸಿರುವ ಮುನಿಯಪ್ಪ ಅವರಿಗೆ ಇದು ಸಾಮಾನ್ಯ ಎಂಬಂತೆ ಆಗಿದೆ. ಆದರೆ ಬಾರಿ ಸ್ವಪಕ್ಷಿಯರೇ ಆಗಿರುವ ಬಂಡಾಯ ಶಾಸಕರನ್ನು ಹೇಗೆ ನಿಭಾಯಿಸುತ್ತಾರೆ ಎಂಬುವುದು ಮಾತ್ರ ಕುತೂಹಲವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾಂಗ್ರೆಸ್ ಬಂಡಾಯ ಶಮನವಾಗಿಲ್ಲ – ಅಲರ್ಟ್ ಆಗಿದ್ದೇವೆ: ಸತೀಶ್ ಜಾರಕಿಹೊಳಿ

    ಕಾಂಗ್ರೆಸ್ ಬಂಡಾಯ ಶಮನವಾಗಿಲ್ಲ – ಅಲರ್ಟ್ ಆಗಿದ್ದೇವೆ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷವಾದ ಕಾಂಗ್ರೆಸ್ ನಲ್ಲಿ ಇನ್ನು ಬಂಡಾಯ ಶಮನ ಆಗಿಲ್ಲ, ಅದನ್ನು ಶಮನಗೊಳಿಸುವ ಪ್ರಯತ್ನ ನಡೆಸಲಾಗಿದೆ ಎಂದು ಅರಣ್ಯ ಸಚಿವ ಜಾರಕಿಹೊಳಿ ಹೇಳಿದ್ದಾರೆ.

    ಬೆಳಗಾವಿಯ ನಿಪ್ಪಾಣಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ. ಅದು ಇನ್ನು ಶಮನ ಆಗಿಲ್ಲ. ಎಷ್ಟು ಶಾಸಕರು ಬಂಡಾಯದ ಬಾವುಟ ಹಿಡಿದಿದ್ದಾರೆ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಪಕ್ಷದಲ್ಲಿ ಗೊಂದಲವಿದೆ ಅಷ್ಟೇ, ನಾವು ಅಲರ್ಟ್ ಇದ್ದೇವೆ. ರೆಸಾರ್ಟ್ ರಾಜಕಾರಣಕ್ಕೆ ಬಿಜೆಪಿಯಿಂದ ನಿರಂತರ ಪ್ರಯತ್ನ ನಡೆದಿದೆ ಎಂದರು.

    ಇದೇ ವೇಳೆ ಕೇಂದ್ರ ಬಿಜೆಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ 4 ವರ್ಷಗಳಲ್ಲಿ ಸರ್ಕಾರ ಘೋಷಣೆ ಮಾಡಿದ ಯಾವುದೇ ಯೋಜನೆ ಸಮರ್ಪಕವಾಗಿ ಜಾರಿ ಆಗಿಲ್ಲ. ಅಲ್ಲದೇ ಬಜೆಟ್‍ನಲ್ಲಿ ಯಾವುದೇ ವಿಶೇಷ ಯೋಜನೆ, ಘೋಷಣೆ ಇಲ್ಲ. ಇದರಿಂದ ಜನರಿಗೆ ನಿರಾಸೆ ಆಗಿದೆ. ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಅಂಶಗಳಿಲ್ಲದೇ ಕೇವಲ ಚುನಾವಣಾ ಬಜೆಟ್ ಆಗಿದೆ ಅಷ್ಟೇ ಎಂದರು.

    ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಜಾರಕಿಹೊಳಿ ನಮ್ಮ ಸಿಎಂ ಎಂದು ಅಭಿಮಾನಿಗಳು ಪೋಸ್ಟ್ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಕೂಡ ಇಂತಹ ಅಭಿಯಾನ ನಡೆದಿತ್ತು. ಇದು ಪ್ರೀತಿ, ವಿಶ್ವಾಸಕ್ಕೆ ಅಭಿಮಾನಿಗಳ ಬೇಡಿಕೆ ಅಷ್ಟೇ. ಇದರಿಂದ ಸರ್ಕಾರಕ್ಕೆ ತೊಂದರೆ ಆಗಲ್ಲ. ಸರ್ಕಾರದ ಸುಗಮವಾಗಿ ನಡೆಯುತ್ತದೆ ಎಂದು ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv