Tag: real estate

  • ನಿವೇಶನ ಕೊಡಿಸೋದಾಗಿ ವಂಚನೆ – ನಕಲಿ ಪತ್ರಕರ್ತ ಸೇರಿದಂತೆ ನಾಲ್ವರ ಬಂಧನ

    ನಿವೇಶನ ಕೊಡಿಸೋದಾಗಿ ವಂಚನೆ – ನಕಲಿ ಪತ್ರಕರ್ತ ಸೇರಿದಂತೆ ನಾಲ್ವರ ಬಂಧನ

    ಹುಬ್ಬಳ್ಳಿ: ನಿವೇಶನ ನೀಡುವುದಾಗಿ ನಂಬಿಸಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು, ನಿವೇಶನ ಕೊಡಿಸದೇ ವಂಚನೆ ಮಾಡುತ್ತಿದ್ದ ನಾಲ್ವರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶ್ವಸಿಯಾಗಿದ್ದಾರೆ.

    ನಿಸರ್ಗ ರಿಯಲ್ ವೆಲ್ತ್ ಸಲ್ಯೂಷನ್, ಸ್ವೀಲರ್ ಟೌನ್, ಗ್ರೀನ್ ವ್ಯಾಲಿ ಹೆಸರಿನಲ್ಲಿ ಲೇಔಟ್‍ಗಳನ್ನ ಮಾಡಿರುವುದಾಗಿ ಆಕರ್ಷಕ ಜಾಹೀರಾತುಗಳನ್ನ ನೀಡಿ ನಿವೇಶನ ಕೊಡಿಸುವುದಾಗಿ ವಂಚಿಸುತ್ತಿದ್ದ ಮಲ್ಲಿಕಾರ್ಜುನ ಸರ್ವಿ, ನಾಗರಾಜ ಶ್ಯಾವಿ, ದಾದಾಪೀರ ಬಳ್ಳಾರಿ, ಸಂತೋಷ ಶಲವಡಿ ಬಂಧಿತ ಆರೋಪಿಗಳು.

    ಆರೋಪಿಗಳು ಹುಬ್ಬಳ್ಳಿಯ ಗಿರಿನಗರದ ಮೋಹನ್ ಎಳ್ಳುಮಗ್ಗದ ಅವರಿಗೆ 30-40 ಸೈಜ್ ನಿವೇಶನ ಕೊಡಿಸುವುದಾಗಿ 5.32 ಲಕ್ಷ ರೂಪಾಯಿ ಹಣವನ್ನ ಪಡೆದುಕೊಂಡಿದ್ದರು. ಆದರೆ ನಿವೇಶನವನ್ನೂ ಕೊಡಿಸದೆ, ಹಣವನ್ನ ಮರಳಿ ನೀಡದೇ ಮೋಸ ಮಾಡಿದ್ದರು. ಹಣ ವಾಪಸ್ ಕೇಳಲು ಆರೋಪಿಗಳ ಕಚೇರಿಗೆ ತೆರಳಿದ ವೇಳೆ ಆರೋಪಿಗಳು ಮೋಹನ್‍ಗೆ ಜೀವಬೆದರಿಕೆ ಹಾಕಿ, ಅವ್ಯಾಚ ಶಬ್ದಗಳಿಂದ ನಿಂದಿಸಿದ ಬಗ್ಗೆ ಮೋಹನ್ ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ದಾದಾಪೀರ ಬಳ್ಳಾರಿ, ಸಂತೋಷ ಶಲವಡಿರನ್ನ ಬಂಧಿಸಿದ್ದರು. ಇದೀಗ ಪ್ರಮುಖ ಆರೋಪಿಯಾಗಿರುವ ನಾಗರಾಜ ಶ್ಯಾವಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಜಮೀನಿಗೆ ಸಂಬಧಿಸಿದ ಕೆಲ ದಾಖಲೆಗಳು ಹಾಗೂ ಪ್ರೇಸ್ ಎಂದು ಹೆಸರಿರುವ ಕಾರನ್ನ ಜಪ್ತಿ ಮಾಡಿಕೊಂಡಿದ್ದಾರೆ. ಹೀಗಾಗಿ ಬಂಧಿತ ಆರೋಪಿ ನಕಲಿ ಪತ್ರಕರ್ತನೋ ಅಸಲಿ ಪತ್ರಕರ್ತನೋ ಅನ್ನೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಇನೋರ್ವ ಆರೋಪಿ ಮಲ್ಲಿಕಾರ್ಜುನ ಸರ್ವಿ ಪರಾರಿಯಾಗಿದ್ದು, ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ದಿಲೀಪ್ ಅವರು ನಿಸರ್ಗ ವೆಲ್ತ್ ಸಲ್ಯೂಷನ್ ಮತ್ತು ಓಂಕಾರ ಡೆವಲಪರ್ಸ್ ಆಂಡ್ ಬಿಲ್ಡರ್ಸ್ ಹೆಸರಿನ ರಿಯಲ್ ಎಸ್ಟೇಟ್ ಕಂಪನಿಯ ಜೊತೆ ವ್ಯವಹರಿಸುವಾಗ ಜಾಗರೂಕತೆಯಿಂದ ಇರುವಂತೆ ತಿಳಿಸಿದ್ದಾರೆ. ವಂಚನೆಯ ಕುರಿತು ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಹುಬ್ಬಳ್ಳಿ ಧಾರವಾಡ ಅವಳಿ ನಗರ ದಿನೇ ದಿನೇ ಬೆಳೆಯುತ್ತಿದ್ದಂತೆ ಈ ರೀತಿಯ ಹಲವು ನಕಲಿ ರಿಯಲ್ ಎಸ್ಟೇಟ್ ಕಂಪನಿಗಳು ನಿವೇಶನ ಕೊಡಿಸುವುದಾಗಿ ಗ್ರಾಹಕರನ್ನ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.

  • ಪಬ್ಲಿಕ್ ಟಿವಿ ‘ನಮ್ಮ ಮನೆ’ಗೆ ಬನ್ನಿ ನಿಮ್ಮ ಕನಸನ್ನು ನನಸಾಗಿಸಿ

    ಪಬ್ಲಿಕ್ ಟಿವಿ ‘ನಮ್ಮ ಮನೆ’ಗೆ ಬನ್ನಿ ನಿಮ್ಮ ಕನಸನ್ನು ನನಸಾಗಿಸಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಮಾಡಬೇಕೆಂಬ ಕನಸನ್ನು ಕಾಣುತ್ತಿದ್ದೀರಾ? ಅಪಾರ್ಟ್ ಮೆಂಟ್ ಖರೀದಿಸಲು ಯಾವೆಲ್ಲ ಸಂಸ್ಥೆಗಳು ಸಾಲ ನೀಡುತ್ತವೆ? ಸಾಲ ಪಡೆಯಲು ಏನು ಪ್ರಕ್ರಿಯೆಗಳು ಇರುತ್ತದೆ? ಮನೆಯ ಇಂಟೀರಿಯರ್ ವಿನ್ಯಾಸಕ್ಕೆ ಏನಪ್ಪಾ ಮಾಡೋದು? ಲೇಟೆಸ್ಟ್ ಸ್ಯಾನಿಟರಿ ಫಿಟ್ಟಿಂಗ್ ಯಾವುದು? ಮನೆ ಕಟ್ಟಿಸೋದಾ? ರೆಡಿಮೇಡ್ ವಿಲ್ಲಾ ಖರೀದಿ ಮಾಡೋದಾ? ಈ ಎಲ್ಲ ಪ್ರಶ್ನೆಗಳಿಗೆ ನಿಮಗೆ ಒಂದೇ ಕಡೆಯಲ್ಲಿ ಉತ್ತರ ಸಿಗಬೇಕಾದರೆ ನೀವು ಪಬ್ಲಿಕ್ ಟಿವಿ ಆಯೋಜಿಸಿರುವ ‘ನಮ್ಮ ಮನೆ’ ಎಕ್ಸ್ ಪೋಗೆ ಭೇಟಿ ನೀಡಬೇಕು.

    ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ಎಂಕೆಬಿ ಡೆವಲಪರ್ಸ್ ‘ನಮ್ಮ ಮನೆ’ ಎರಡನೇ ಆವೃತ್ತಿಯ ಎಕ್ಸ್ ಪೋ ಕಾರ್ಯಕ್ರಮ ಇದೇ ಸೆ.21 ಮತ್ತು 22 ರಂದು ಮಲ್ಲೇಶ್ವರದಲ್ಲಿ ಆಯೋಜನೆಗೊಂಡಿದೆ. ಉಚಿತ ಪ್ರವೇಶವಿರುವ ಈ ಕಾರ್ಯಕ್ರಮದಲ್ಲಿ ಗೃಹ ನಿರ್ಮಾಣ ಕಂಪನಿಗಳು ಜೊತೆ ಸಾಲ ನೀಡುವ ಹಣಕಾಸು ಸಂಸ್ಥೆ ಪಾಲ್ಗೊಳ್ಳುತ್ತವೆ. ಒಟ್ಟು 40ಕ್ಕೂ ಹೆಚ್ಚು ಡೆವಲಪರ್ಸ್ ಮತ್ತು ಪ್ರೋಮೊಟರ್ಸ್ ಭಾಗವಹಿಸಲಿದ್ದು, ಈ ಎಕ್ಸ್ ಪೋದಲ್ಲಿ ಭಾಗವಹಿಸಿದರೆ ನೀವು ಸುಲಭವಾಗಿ ನಿಮ್ಮ ಸಂದೇಹಗಳನ್ನು ತಜ್ಞರ ಜೊತೆ ಕೇಳಿ ಪರಿಹರಿಸಿಕೊಳ್ಳಬಹುದು.

    ಸ್ಥಳ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕ್ರೀಡಾಂಗಣ, ಮಲ್ಲೇಶ್ವರ, ಬೆಂಗಳೂರು
    ಸಮಯ: ಬೆಳಗ್ಗೆ 10 ರಿಂದ ಸಂಜೆ 6ರವರೆಗೆ

    ಯಾರೆಲ್ಲ ಭಾಗವಹಿಸುತ್ತಾರೆ?
    ಎಂಕೆಬಿ ಡೆವಲಪರ್ಸ್ ಆಂಡ್ ಪ್ರೊಮೊಟರ್ಸ್, ಶ್ರೀ ಧಾತ್ರಿ ಡೆವಲಪರ್ಸ್ ಆಂಡ್ ಪ್ರಮೋಟರ್ಸ್, ಡಿಎಸ್ ಮ್ಯಾಕ್ಸ್, ಕಲ್ಪವೃಕ್ಷ, ಟ್ರಿಂಕೋ ಇನ್‍ಫ್ರಾ ಪ್ರೈವೆಟ್ ಲಿಮಿಟೆಡ್, ಸ್ಯಾನ್ ಸಿಟಿ, ಪ್ರಾಮಿನೆಂಟ್ ಪ್ರಾಪರ್ಟಿಸ್, ಕೆನರಾ ಬ್ಯಾಂಕ್ ಭಾಗವಹಿಸಲಿದೆ.

    ಎಕ್ಸ್ ಪೋ ವಿಶೇಷತೆಗಳು:
    – 40ಕ್ಕೂ ಹೆಚ್ಚು ಡೆವಲಪರ್ಸ್, ಬಿಲ್ಡ್‍ರ್ಸ್ ಒಂದೇ ಕಡೆ ಲಭ್ಯ
    – ಕರ್ನಾಟಕ, ಬೆಂಗಳೂರು ಭಾಗಗಳ ವಿವಿಧ ಸ್ಥಳಗಳಲ್ಲಿ ಇರುವ ಸೈಟ್ ರೇಟ್, ಫ್ಲ್ಯಾಟ್, ಮನೆ ಹಾಗೂ ವಿಲ್ಲಾಗಳ ಮಾಹಿತಿ
    – ಬಿಡಿಎ, ಬಿಎಂಆರ್‍ಡಿಎ, ಬಿಐಎಪಿಪಿಎ ಯಿಂದ ಅನುಮೋದಿಸಲಾಗಿರುವ ಫ್ಲ್ಯಾಟ್ ಮತ್ತು ಅರ್ಪಾಟ್‍ಮೆಂಟ್ ಮಾಹಿತಿ
    – ಎಕ್ಸ್ ಪೋದಲ್ಲಿ ಭಾಗವಹಿಸುವ ಗ್ರಾಹಕರಿಗೆ ಉಚಿತವಾಗಿ ಸೈಟ್ ವೀಕ್ಷಣೆಗೆ ಅವಕಾಶ
    – ಸ್ಥಳದಲ್ಲೇ ಸಾಲ ಸೌಲಭ್ಯ
    – ಹೊಸ ಯೋಜನೆಗಳಿಗೆ ಹಬ್ಬದ ವಿಶೇಷ ಕೊಡುಗೆಗಳು
    – ಎಕ್ಸ್ ಪೋದಲ್ಲಿ ನೋದಾಯಿಸಲ್ಪಟ್ಟ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಲಕ್ಕಿ ಡಿಪ್ ಮೂಲಕ ಗಿಫ್ಟ್
    – ಅರ್ಲಿ ಬರ್ಡ್ ಅಫರ್
    – ಕೈಗೆಟುಕುವ ಸೈಟ್ ರೇಟ್, ಫ್ಲ್ಯಾಟ್, ಮನೆ ಹಾಗೂ ವಿಲ್ಲಾ ಪ್ರದರ್ಶನ

  • ಅರೆಬೆತ್ತಲೆ ಮಹಿಳೆಯರ ಮೇಲೆ ಅಪಾರ್ಟ್ ಮೆಂಟ್ ಚಿತ್ರ ಬಿಡಿಸಿ ಪ್ರಚಾರ!

    ಅರೆಬೆತ್ತಲೆ ಮಹಿಳೆಯರ ಮೇಲೆ ಅಪಾರ್ಟ್ ಮೆಂಟ್ ಚಿತ್ರ ಬಿಡಿಸಿ ಪ್ರಚಾರ!

    ಬೀಜಿಂಗ್: ಅರೆಬೆತ್ತಲೆ ಮಹಿಳೆಯರ ಮೇಲೆ ಅಪಾರ್ಟ್ ಮೆಂಟ್ ಚಿತ್ರ ಬಿಡಿಸಿ ಚೀನಾದ ಪ್ರಾಪರ್ಟಿ ಡೆವಲಪರ್ ಗಳು ವಿಲಕ್ಷಣವಾಗಿ ಕಾಂಪ್ಲೆಕ್ಸ್ ಗಳ ಪ್ರಚಾರ ಮಾಡುತ್ತಿದ್ದಾರೆ.

    ದಕ್ಷಿಣ ಚೀನಾದ ಗುವಾಂಗ್ಕ್ಸಿ ಝುವಾಂಗ್ ಸ್ವಾಯತ್ತ ಪ್ರದೇಶದ ಪ್ರಾಪರ್ಟಿ ಡೆವಲಪರ್ ನವೆಂಬರ್ 30ರಂದು ಘಟನೆ ನಡೆದಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

    ವಿಡಿಯೋದಲ್ಲಿ ಏನಿದೆ?:
    ಪ್ರಾಪರ್ಟಿ ಡೆವಲಪರ್ ಗಳು ಖರೀದಿದಾರರನ್ನು ಸೆಳೆಯಲು ನಾಲ್ವರು ಮಹಿಳೆಯರನ್ನು ಅರೆಬೆತ್ತಲಾಗಿ ಮಾಡಿ. ಅವರ ಬೆನ್ನಿನ ಮೇಲೆ ಅಪಾರ್ಟ್ ಮೆಂಟ್ ಒಳ ನಕ್ಷೆ ಹಾಗೂ ಹೊಸ ವಿನ್ಯಾಸವನ್ನು ಬಿಡಿಸಿ, ಸಾಲಾಗಿ ಕೂರಿಸಲಾಗಿತ್ತು. ಬಳಿಕ ಒಬ್ಬೊರನ್ನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಗ್ರಾಹಕರು ಇದನ್ನು ನೋಡಿ ಅಪಾರ್ಟ್ ಮೆಂಟ್ ಖರೀದಿಗೆ ಮುಂದಾಗುತ್ತಾರೆ ಎನ್ನುವ ಉದ್ದೇಶದಿಂದ ಹೀಗೆ ಮಾಡಲಾಗಿದೆ.

    ಮಹಿಳೆಯ ಮೈ ಮೇಲೆ ಕೇವಲ ಒಂದು ತುಂಡು ಬಟ್ಟೆ, ಎದೆಯ ಭಾಗದಲ್ಲಿ ಚಿಟ್ಟೆ ಮತ್ತು ಹೂವುಗಳ ಚಿತ್ತಾರ ಬಿಡಿಸಿಕೊಂಡಿದ್ದಾರೆ. ಇದು ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ.

    ಇದೊಂದು ಅಶ್ಲೀಲ ಮತ್ತು ಅವಮಾನಕರ ಘಟನೆ ಎಂದು ಸ್ಥಳೀಯರು ಟೀಕಿಸಿದ್ದಾರೆ. ಈ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ರಿಯಲ್ ಎಸ್ಟೇಟ್ ಕಚೇರಿಯನ್ನು ಬಂದ್ ಮಾಡಲಾಗಿದೆ ಎಂದು ಚೀನಾದ ಮಾಧ್ಯಮವೊಂದರ ವರದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದ ಶ್ರೀಮಂತ ಬಿಲ್ಡರ್‌ಗಳಲ್ಲಿ ಬೆಂಗ್ಳೂರಿನ ಮೂವರು ಉದ್ಯಮಿಗಳು! ಯಾರ ಆಸ್ತಿ ಎಷ್ಟಿದೆ?

    ದೇಶದ ಶ್ರೀಮಂತ ಬಿಲ್ಡರ್‌ಗಳಲ್ಲಿ ಬೆಂಗ್ಳೂರಿನ ಮೂವರು ಉದ್ಯಮಿಗಳು! ಯಾರ ಆಸ್ತಿ ಎಷ್ಟಿದೆ?

    ಬೆಂಗಳೂರು: ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕೆಜೆ ಜಾರ್ಜ್ ನಂಟಿರುವ ಪ್ರತಿಷ್ಠಿತ ಎಂಬೆಸಿ ಗ್ರೂಪ್ ಮಾಲೀಕ ಜಿತೇಂದ್ರ ವೀರ್ವಾನಿ 2ನೇ ಸ್ಥಾನ ಪಡೆದಿದ್ದಾರೆ.

    ಹುರೂನ್ ರಿಪೋರ್ಟ್ ಹಾಗೂ ಗ್ರೋಹೆ ಇಂಡಿಯಾ ಸಂಸ್ಥೆಗಳು ದೇಶದ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಹೆಚ್ಚು ರಿಯಲ್ ಎಸ್ಟೇಟ್ ಉದ್ಯಮಿಗಳು ವಾಸಿಸುವ ಪಟ್ಟಿಯಲ್ಲೂ ಬೆಂಗಳೂರು 2ನೇ ಸ್ಥಾನ ಪಡೆದಿದೆ.

    ಎಂಬೆಸಿ ಗ್ರೂಪ್ ಮಾಲೀಕ ಜಿತೇಂದ್ರ ವೀರ್ವಾನಿ ಅವರು 23,160 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಮಹಾರಾಷ್ಟ್ರದ ಲೋಧಾ ಗ್ರೂಪ್ ಮಾಲೀಕರಾದ ಮಲಬಾರ್ ಹಿಲ್ಸ್ ಕ್ಷೇತ್ರದ ಬಿಜೆಪಿ ಶಾಸಕ ಮಂಗಲ್ ಪ್ರಭಾತ್ ಲೋಧಾ 27,150 ಕೋಟಿ ರೂ. ಆಸ್ತಿಯನ್ನ ಹೊಂದಿದ್ದಾರೆ. ಕಳೆದ ವರ್ಷದ 18,610 ಕೋಟಿ ರೂ. ಆಸ್ತಿಯನ್ನು ಹೊಂದಿದ್ದರು.

    ಉಳಿದಂತೆ ಪಟ್ಟಿಯಲ್ಲಿ ಆರ್ ಎಂಜಿ ರಿಯಲ್ ಎಸ್ಟೇಟ್ ಸಂಸ್ಥೆಯ ಮನೋಜ್ ಮೆಂಡಾ ಹಾಗೂ ರಾಜ್ ಮೆಂಡಾ ಕ್ರಮವಾಗಿ 5,900 ನೇ ಸ್ಥಾನ ಪಡೆದಿದ್ದಾರೆ. ಮನೋಜ್ ಮೆಂಡಾ ಹಾಗೂ ರಾಜ್ ಮೆಂಡಾ ಇಬ್ಬರು 5.900 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ.

    ಟಾಪ್ 10 ಪಟ್ಟಿಯಲ್ಲಿ ಯಾರಿದ್ದಾರೆ?
    ಡಿಎಲ್‍ಎಫ್ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕರಾದ ಜಿತೇಂದ್ರ ವಿರ್ವಾನಿ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದು, 23,160 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. 4 ಮತ್ತು ಐದನೇ ಸ್ಥಾನದಲ್ಲಿ ಕೇ ರಹೇಜಾ ಸಂಸ್ಥೆಯ ಚಂದ್ರು ರಹೇಜಾ ಹಾಗೂ ಒಬೇರಾಯ್ ರಿಯಾಲಿಟಿ ಸಂಸ್ಥೆಯ ವಿಕಾಸ್ ಓಬೇರಾಯ್ ಸ್ಥಾನ ಪಡೆದಿದ್ದು, ಕ್ರಮವಾಗಿ 14,420 ಕೋಟಿ ರೂ. ಹಾಗೂ 10,980 ಕೋಟಿ ರೂ ಆಸ್ತಿಯನ್ನ ಹೊಂದಿದ್ದಾರೆ.

    ಹಿರಾನಂದನಿ ಸಂಸ್ಥೆಯ ಮಾಲೀಕರಾದ ನಿರಂಜನ್ ಹಿರಾನಂದನಿ, ಸುರೇಂದ್ರ ಹಿರಾನಂದಿನಿ ತಲಾ 7,880 ಕೋಟಿ ಆಸ್ತಿಯೊಂದಿಗೆ 6 ಮತ್ತು 7 ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ 8ನೇ ಸ್ಥಾನದಲ್ಲಿ ಪಿರಾಮಾಲ್ ಸಂಸ್ಥೆಯ ಮಾಲೀಕರಾದ ಅಜಯ್ ಪಿರಾಮಾಲ್ ಮತ್ತು ಕುಟುಂಬ 6,380 ಕೋಟಿ ರೂ. ಆಸ್ತಿಯನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಯೂಟ್ಯೂಬ್ ನೋಡಿ ನಕಲಿ ಬಾಂಡ್ ತಯಾರಿಸುತ್ತಿದ್ದ ಜಾಲ ಬೇಧಿಸಿದ ಪೊಲೀಸರು

    ಯೂಟ್ಯೂಬ್ ನೋಡಿ ನಕಲಿ ಬಾಂಡ್ ತಯಾರಿಸುತ್ತಿದ್ದ ಜಾಲ ಬೇಧಿಸಿದ ಪೊಲೀಸರು

    ದಾವಣಗೆರೆ: ದಶಕಗಳ ಕಾಲದ ಹಳೇ ಬಾಂಡ್ ಪೇಪರ್ ತಯಾರಿಸಿ ಜನರಿಗೆ ಮೋಸ ಮಾಡುತ್ತಿದ್ದ 11 ವಂಚಕರ ಜಾಲವನ್ನು ದಾವಣಗೆರೆ ಡಿಸಿಬಿ ವಿಶೇಷ ಪೊಲೀಸ್ ತಂಡ ಬೇಧಿಸಿದೆ.

    ರಾಘವೇಂದ್ರ, ಶಿವಕುಮಾರ್, ರೇವಣಸಿದ್ಧಯ್ಯ, ರಿಯಲ್ ಎಸ್ಟೇಟ್ ಉದ್ಯಮಿಗಳು. ಸತ್ಯಗೋವಿಂದರಾಜ, ಪ್ರಭು, ದ್ರಾವಿಡ, ಉಮೇಶ್, ಮಾರುತಿ, ನಂದು, ಆನಂದ್ ಸೇರಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಮೂಲದವರು ಎಂದು ತಿಳಿದು ಬಂದಿದೆ.

    ಆರೋಪಿಗಳು ಯೂಟ್ಯೂಬ್‍ನಲ್ಲಿ ದಶಕಗಳ ಕಾಲದ ಹಿಂದೆ ಈಸ್ಟ್ ಇಂಡಿಯಾ ಕಂಪೆನಿಯ ಮುದ್ರಿಸುತ್ತಿದ್ದ ಬಾಂಡ್ ನೋಡಿಕೊಂಡು, ನಕಲಿ ಬಾಂಡ್‍ಗಳನ್ನು ತಯಾರಿಸುತ್ತಿದ್ದರು. ಅಲ್ಲದೇ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಬಾಂಡ್ ಪೇಪರ್ ಗಳಿಗೆ ಈಗಲೂ ಮಾನ್ಯತೆ ಇದೆ ಎಂದು ನಂಬಿಸಿ ಸಾರ್ವಜನಿಕರನ್ನ ಗಾಳಕ್ಕೆ ಬೀಳಿಸುತ್ತಿದ್ದರು.

    ಯಾವುದೋ ಒಂದು ಜಾಗ ಅಥವಾ ಜಮೀನಿನ ಹೆಸರಿನಲ್ಲಿ ನಕಲಿ ಬಾಂಡ್ ತಯಾರಿಸಿ, ನಂತರ ಇದು ಈಸ್ಟ್ ಇಂಡಿಯಾ ಕಂಪೆನಿಯ ಜಾಗವಾಗಿದೆ. ನಿಮಗೆ ಕಡಿಮೆ ದರದಲ್ಲಿ ಮಾರುತ್ತೇವೆ ಎಂದು ಜನರನ್ನು ನಂಬಿಸುತ್ತಿದ್ದರು. ಬಾಂಡ್ ಪೇಪರ್ ಮೇಲೆ ಮೊದಲೇ ರಂಜಕ ಹಾಕಿ, ನೀವು ಬಾಂಡ್ ಪೇಪರ್ ಗಳನ್ನು ಬಿಸಿಲಿಗೆ ತಗೆದುಕೊಂಡು ಹೋದರೆ ಸುಟ್ಟು ಹೋಗುತ್ತದೆ ಎಂದು ಹೆದರಿಸುತ್ತಿದ್ದರು.

    ಈಸ್ಟ್ ಇಂಡಿಯಾ ಕಂಪೆನಿಯ ನಕಲಿ ಆಟೋ ಫೈರ್ ಬಾಂಡ್ ಮಾರಾಟ ವೇಳೆ 11 ಮಂದಿ ವಂಚಕರನ್ನು ಡಿಸಿಬಿ ಪೊಲೀಸರ ಬಲೆಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

  • ನನ್ನ ಸಂಬಂಧಿಗೆ ಆಡಳಿತಾಧಿಕಾರಿ ಹುದ್ದೆ ಬಿಟ್ಕೊಡು – ಡಾಕ್ಟರ್‍ಗೆ ಎಂಎಲ್‍ಎ ರಾಜೇಶ್ ಬೆಂಬಲಿಗನ ಆವಾಜ್

    ನನ್ನ ಸಂಬಂಧಿಗೆ ಆಡಳಿತಾಧಿಕಾರಿ ಹುದ್ದೆ ಬಿಟ್ಕೊಡು – ಡಾಕ್ಟರ್‍ಗೆ ಎಂಎಲ್‍ಎ ರಾಜೇಶ್ ಬೆಂಬಲಿಗನ ಆವಾಜ್

    ದಾವಣಗೆರೆ: ಸರ್ಕಾರಿ ಅಸ್ಪತ್ರೆಯ ಆಡಳಿತಧಿಕಾರಿಗೆ ಶಾಸಕರ ಬೆಂಬಲಿಗ ಅವಾಜ್ ಹಾಕಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ನಡೆದಿದೆ.

    ಜಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರೋ ಮಟನ್ ಓಬಣ್ಣ ಅವಾಜ್ ಹಾಕಿದ ವ್ಯಕ್ತಿಯಾಗಿದ್ದು, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ಅರ್ಹತೆ ಇಲ್ಲದೆ ಇದ್ದರೂ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಪೋಸ್ಟ್ ತನ್ನ ತಮ್ಮ ಡೆಂಟಿಸ್ಟ್ ಆಗಿರುವ ಪ್ರಸನ್ನನಿಗೆ ಬಿಟ್ಟುಕೊಡುವಂತೆ ಡಾ. ಮುರಳಿಗೆ ಪದೇ ಪದೇ ಟಾರ್ಚರ್ ಕೊಡುತ್ತಿದ್ದ.

    ಅಲ್ಲದೇ ಫೋನ್‍ಕಾಲ್ ಮಾಡಿ ಸಹ ಅವಾಜ್ ಹಾಕಿದ್ದಾನೆ. ಇದರ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇನ್ನು ಮಟನ್ ಓಬಣ್ಣ ಜಗಳೂರಿನ ಕಾಂಗ್ರೆಸ್ ಶಾಸಕ ರಾಜೇಶ್ ಅವರ ಸಂಬಂಧಿಯಾಗಿದ್ದು ತನ್ನ ದರ್ಪವನ್ನು ಅಧಿಕಾರಿಗಳ ಮೇಲೆ ತೋರಿಸುತ್ತಿದ್ದಾನೆ.

    ಮೊದಲು ಕುರಿ, ಮಟನ್ ವ್ಯಾಪಾರ ಮಾಡುತ್ತಿದ್ದ ಒಬಣ್ಣ ನಂತರ ರಿಯಲ್ ಎಸ್ಟೇಟ್ ದಂಧೆಗೆ ಇಳಿದು ಅಷ್ಟೋ ಇಷ್ಟೋ ದುಡ್ಡು ಮಾಡಿಕೊಂಡು ಶಾಸಕ ರಾಜೇಶ್‍ಗೆ ಹತ್ತಿರವಾಗಿದ್ದಾನೆ. ಅಷ್ಟೇ ಅಲ್ಲದೆ ಅಸ್ಪತ್ರೆ ಅಡಳಿತ ಅಧಿಕಾರಿ ಮುರಳಿಗೆ ನಾನು ಎಂಎಲ್‍ಎ ಕೈಯಿಂದ ನಾಳೆ ಲೆಟರ್ ತರುತ್ತೀನಿ. ಸೀಟು ಬಿಟ್ಟುಕೊಡು, ಎಂಎಲ್‍ಎ ನನ್ನ ಅಳಿಯ. ಅವನು ನಾನು ಹೇಳಿದ ಹಾಗೇ ಕೇಳುತ್ತಾನೆ. ಮೊದಲು ನಾನು ಯಾರು, ನನ್ನ ಹೆಸರು, ನನ್ನ ಬ್ಯಾಗ್ರೌಂಡ್ ತಿಳ್ಕೋ ಎಂದು ಪಕ್ಕಾ ಸಿನಿಮಾ ಸ್ಟೈಲ್ ನಲ್ಲಿ ಅವಾಜ್ ಹಾಕಿದ್ದಾನೆ.

  • 60 ದಿನಗಳಲ್ಲಿ ಮೋಡ ಬಿತ್ತನೆ, ರಿಯಲ್ ಎಸ್ಟೇಟ್ ಕಾಯ್ದೆಗೆ ಅಸ್ತು – ಕ್ಯಾಬಿನೆಟ್‍ನಲ್ಲಿ ಹಲವು ಮಹತ್ವದ ನಿರ್ಣಯ

    60 ದಿನಗಳಲ್ಲಿ ಮೋಡ ಬಿತ್ತನೆ, ರಿಯಲ್ ಎಸ್ಟೇಟ್ ಕಾಯ್ದೆಗೆ ಅಸ್ತು – ಕ್ಯಾಬಿನೆಟ್‍ನಲ್ಲಿ ಹಲವು ಮಹತ್ವದ ನಿರ್ಣಯ

    – 5 ಕಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

    ಬೆಂಗಳೂರು: ರಿಯಲ್ ಎಸ್ಟೇಟ್ ದಂಧೆಗೆ ಬ್ರೇಕ್ ಹಾಕುವ ಕರ್ನಾಟಕ ರಿಯಲ್ ಎಸ್ಟೇಟ್ ರೂಲ್ಸ್ ಕಾಯ್ದೆಯನ್ನ ಜಾರಿಗೆ ತರಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಮೋಡ ಬಿತ್ತನೆ ಕಾರ್ಯಕ್ಕೂ ಅಸ್ತು ಎಂದಿದೆ.

    ಕಾವೇರಿ, ಮಲಪ್ರಭಾ, ತುಂಗಭದ್ರಾ ಜಲಾನಯನ ವ್ಯಾಪ್ತಿಯಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ 60 ದಿನಗಳೊಳಗೆ ಮೋಡ ಬಿತ್ತನೆಗೆ ಹೊಯ್ಸಳ ಕಂಪನಿಗೆ ಗುತ್ತಿಗೆ ನೀಡಲು ಸಂಪುಟ ಸಭೆ ಒಪ್ಪಿಗೆ ಕೊಟ್ಟಿದೆ. ಕೆಲ ಸಚಿವರು ವಿರೋಧದ ನಡುವೆಯೂ RERA(Real Estate Regulation Act) ಕಾಯ್ದೆ ಜಾರಿಗೆ ಸಂಪುಟದಲ್ಲಿ ನಿರ್ಧರಿಸಲಾಗಿದೆ.

    ಇದಲ್ಲದೆ ಕ್ಯಾಬಿನೆಟ್‍ನಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ:
    * ರೇರಾ ಕಾಯ್ದೆ – 2016 ಜಾರಿಗೆ ಕ್ಯಾಬಿನೆಟ್ ಅಸ್ತು.
    * ಕಾವೇರಿ, ಮಲಪ್ರಭಾ, ತುಂಗಭದ್ರಾ ಜಲಾನಯನ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ.
    * ಕ್ಷೀರ ಭಾಗ್ಯ ಯೋಜನೆ ವಿಸ್ತರಣೆ- ವಾರದಲ್ಲಿ 5 ದಿನ ಮಕ್ಕಳಿಗೆ ಹಾಲು.
    * ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸುವಾಸಿತ ಹಾಲು ವಿತರಣೆ.
    * ಬಿಎಸ್‍ಎನ್‍ಎಲ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ವೈ-ಫೈ ಸೇವೆ.
    * ಬಳ್ಳಾರಿಯ ವಿಮ್ಸ್, ಹುಬ್ಬಳಿಯ ಕಿಮ್ಸ್‍ನಲ್ಲಿ 160 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
    * ದಾವಣಗೆರೆ, ಕನಕಪುರ, ತುಮಕೂರು, ವಿಜಯಪುರ, ಕೋಲಾರಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
    * ಬಿಸಿಯೂಟ ತಯಾರಿಕರು, ಅಡುಗೆ ಸಹಾಯಕರಿಗೆ 200 ಗೌರವ ಧನ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ.
    * ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ 3 ಲಕ್ಷ ರೂ ವರಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ.

    60 ದಿನದಲ್ಲಿ ಮೋಡ ಬಿತ್ತನೆ ಮಾಡ್ತೀವಿ ಅಂತಿದ್ದಾರೆ. ಆದರೆ ಮಳೆ ಅವಶ್ಯಕತೆ ಇರೋದು ಈಗ. ಈಗ ಬಿಟ್ಟು 2 ತಿಂಗಳಾದ್ಮೇಲೆ ಮೋಡ ಬಿತ್ತನೆ ಮಾಡಿದ್ರೆ ಏನ್ ಪ್ರಯೋಜನ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಗಮನಿಸಿ, ರಿಯಲ್ ಎಸ್ಟೇಟ್ ಉದ್ಯಮಿಗಳು ನಿಮ್ಮನ್ನು ಯಾಮಾರಿಸೋ ಮೊದಲು ಈ ಸುದ್ದಿ ಓದಿ

    ಗಮನಿಸಿ, ರಿಯಲ್ ಎಸ್ಟೇಟ್ ಉದ್ಯಮಿಗಳು ನಿಮ್ಮನ್ನು ಯಾಮಾರಿಸೋ ಮೊದಲು ಈ ಸುದ್ದಿ ಓದಿ

    ನವದೆಹಲಿ: ಕಪ್ಪುಹಣ ತಡೆಗಟ್ಟಲು 500, 1 ಸಾವಿರ ಮುಖಬೆಲೆಯ ನೋಟನ್ನು ನಿಷೇಧಿಸಿದ ಮೋದಿ ಸರ್ಕಾರ ಈಗ ರಿಯಲ್ ಎಸ್ಟೇಟ್ ನಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಗಟ್ಟಲು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ಆರ್‍ಇಆರ್‍ಎ) ಜಾರಿಗೆ ತಂದಿದೆ.

    ಹೌದು. 9 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಆರ್‍ಇಆರ್‍ಎ ಕಾಯ್ದೆ 2016 ಇಂದಿನಿಂದ ಜಾರಿಗೆ ಬರಲಿದೆ. ಗ್ರಾಹಕ ಕೇಂದ್ರಿತ ಈ ಕಾಯ್ದೆ ಜಾರಿಯಿಂದ, ಖರೀದಿದಾರನೇ ದೊರೆಯಾಗುವ ಹೊಸ ಶಕೆ ಆರಂಭವಾಗಲಿದೆ. ಇದನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಕೂಡ ಸ್ವಾಗತಿಸಿದ್ದಾರೆ. ಇದರಿಂದ ಬಡವರು ಮಧ್ಯಮವರ್ಗದವರಿಗೆ ಮೋಸ ಮಾಡಿದ್ರೆ ಡೆವಲಪರ್ಸ್‍ಗಳಿಗೆ ಬ್ರೋಕರ್‍ಗಳಿಗೆ ಹಾಗೂ ಖರೀದಿದಾರರಿಗೂ ಜೈಲು ಶಿಕ್ಷೆ ಗ್ಯಾರಂಟಿಯಾಗುತ್ತದೆ.

    ರಿಯಲ್ ಎಸ್ಟೇಟ್(ನಿಯಂತ್ರಣ ಅಮತ್ತು ಅಭಿವೃದ್ಧಿ) ಮಸೂದೆ-2016 ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿಯೇ ಸಂಸತ್ತಿನಲ್ಲಿ ಅಂಗೀಕಾರವಾಗಿತ್ತು. ಕಾಯ್ದೆಯ ಎಲ್ಲ 92 ಸೆಕ್ಷನ್‍ಗಳು ಮೇ 1 ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿವೆ.

    ಒಟ್ಟಿನಲ್ಲಿ ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿ ತ್ವರಿತ ಮತ್ತು ವ್ಯಾಪಕ ಬದಲಾವಣೆ ತರುವ ಮಹತ್ವದ ಕಾಯ್ದೆಯನ್ನ ಮೋದಿ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಿದೆ. ಮನೆ ಖರೀದಿಸುವವರು, ಸೈಟು ಖರೀದಿ ಮಾಡೋರನ್ನ ರಕ್ಷಿಸಲು ಮತ್ತು ಪ್ರಾಮಾಣಿಕ ಖಾಸಗಿ ಉದ್ಯಮಿಗಳನ್ನು ಉತ್ತೇಜಿಸಲು ಅಗತ್ಯವಾದ ನಿಯಮಗಳೂ ಈ ಕಾಯ್ದೆಯಲ್ಲಿ ಇವೆ.

    ಏನಿದು ರಿಯಲ್ ಎಸ್ಟೇಟ್ ಕಾಯ್ದೆ?
    * ಗೃಹ ನಿರ್ಮಾಣದ ಯೋಜನೆಗಳು ಕಡ್ಡಾಯವಾಗಿ ನೋಂದಣಿಯಾಗಬೇಕು.
    * ಗ್ರಾಹಕರಿಂದ ಸಂಗ್ರಹಿಸಿದ ಹಣದ ಶೇ.70ರಷ್ಟನ್ನು ಪ್ರತ್ಯೇಕ ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಡಬೇಕು.
    * ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸಬೇಕು. ಯೋಜನೆ ವಿಳಂಬವಾದರೆ ದಂಡ-ಜೈಲು ಶಿಕ್ಷೆ.

    * ಯೋಜನೆಗಳ ವಿವರ ಮತ್ತು ಪ್ರಗತಿಯನ್ನು ನಿಯಂತ್ರಣ ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸಬೇಕು.
    * ಯೋಜನೆ ವಿಳಂಬವಾದರೆ ಖರೀದಿದಾರ ಪಡೆದ ಬ್ಯಾಂಕ್ ಸಾಲದ ತಿಂಗಳ ಬಡ್ಡಿಯನ್ನು ಕಟ್ಟಡ ನಿರ್ಮಾಣಗಾರ ಭರಿಸಬೇಕು.
    * ಮೇಲ್ಮನವಿ ನ್ಯಾಯಮಂಡಳಿ ಮತ್ತು ನಿಯಂತ್ರಣ ಪ್ರಾಧಿಕಾರಗಳ ಆದೇಶ ಉಲ್ಲಂಘಿಸಿದರೆ ಜೈಲು ಶಿಕ್ಷೆ ಜೊತೆ ದಂಡ.
    * ಡೆವಲಪರ್ಸ್ ಗಳಿಗೆ 3 ವರ್ಷ ಮತ್ತು ಏಜೆಂಟ್ ಹಾಗೂ ಖರೀದಿದಾರರಿಗೆ 1 ವರ್ಷ ಜೈಲು ಶಿಕ್ಷೆ.
    * ಪ್ರಾಧಿಕಾರ ರಚಿಸದೇ ಹೋದರೆ ಆಯಾ ರಾಜ್ಯ ಸರ್ಕಾರದ ವಿರುದ್ಧ ಜನರೇ ದೂರು ನೀಡಬಹುದು.

    https://www.youtube.com/watch?v=p4LyXI3xRA0