Tag: RCBvsRR

  • 59 ರನ್‌ಗಳಿಗೆ ರಾಜಸ್ಥಾನ್‌ ಆಲೌಟ್‌ – RCBಗೆ 112 ರನ್‌ಗಳ ಭರ್ಜರಿ ಜಯ – ಪ್ಲೆ ಆಫ್‌ ಕನಸು ಜೀವಂತ

    59 ರನ್‌ಗಳಿಗೆ ರಾಜಸ್ಥಾನ್‌ ಆಲೌಟ್‌ – RCBಗೆ 112 ರನ್‌ಗಳ ಭರ್ಜರಿ ಜಯ – ಪ್ಲೆ ಆಫ್‌ ಕನಸು ಜೀವಂತ

    ಜೈಪುರ: ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell), ಫಾಫ್‌ ಡು ಪ್ಲೆಸಿಸ್‌ (Faf du Plessis) ಭರ್ಜರಿ ಅರ್ಧಶತಕ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB), ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 112 ರನ್‌ಗಳ ಜಯ ಸಾಧಿಸಿದೆ. ಈ ಮೂಲಕ ಪ್ಲೆ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ.

    ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತ್ತು. ಗೆಲುವಿಗೆ 172 ರನ್‌ ಗುರಿ ಪಡೆದ ರಾಜಸ್ಥಾನ್‌ (Rajasthan Royals) 10.3 ಓವರ್‌ನಲ್ಲೇ 59 ರನ್‌ ಗಳಿಗೆ ಸರ್ವಪತನ ಕಂಡು ತವರಿನಲ್ಲೇ ಹೀನಾಯ ಸೋಲನುಭವಿಸಿತು.

    ರಾಜಸ್ಥಾನ್‌ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 2 ಸ್ಥಾನ ಮೇಲಕ್ಕೆ ಜಿಗಿದಿರುವ ಆರ್‌ಸಿಬಿ ಪ್ಲೆ ಆಫ್‌ ಕನಸು ಜೀವಂತವಾಗಿಸಿಕೊಂಡಿದೆ. 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿತ್ತು. ಇದೀಗ 12ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದು, +0.166 ರನ್‌ರೇಟ್‌ನೊಂದಿಗೆ 12 ಅಂಕ ಗಳಿಸಿ 5ನೇ ಸ್ಥಾನಕ್ಕೆ ಜಿಗಿದಿದೆ. 5ನೇ ಸ್ಥಾನದಲ್ಲಿದ್ದ ರಾಜಸ್ಥಾನ್‌ ರಾಯಲ್ಸ್‌ +0.140 ರನ್‌ರೇಟ್‌ನೊಂದಿಗೆ 12 ಅಂಕ ಪಡೆದು 6ನೇ ಸ್ಥಾನಕ್ಕೆ ಕುಸಿದಿದೆ. ಒಂದು ವೇಳೆ ಲಕ್ನೋ ಸೋತು ಇನ್ನೆರಡು ಪಂದ್ಯಗಳಲ್ಲಿ ಆರ್‌ಸಿಬಿ ಸತತ ಗೆಲುವು ಸಾಧಿಸಿದರೆ ಪ್ಲೆ ಆಫ್‌ ಪ್ರವೇಶಿಸುವ ಸಾಧ್ಯತೆಗಳಿವೆ.

    ಚೇಸಿಂಗ್‌ ಆರಂಭಿಸಿದ ರಾಜಸ್ಥಾನ್‌ ರಾಯಲ್ಸ್‌ ಮೊದಲ ಓವರ್‌ನಿಂದಲೇ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತತ್ತರಿಸಿತು. ಪವರ್‌ ಪ್ಲೇನಲ್ಲೇ 5 ವಿಕೆಟ್‌ ಕಳೆದುಕೊಂಡು ಕೇವಲ 28 ರನ್‌ ಕಲೆಹಾಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಶಿಮ್ರಾನ್‌ ಹೆಟ್ಮೇಯರ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿದ್ದಾದರೂ ಆರ್‌ಸಿಬಿ ಬೌಲರ್‌ಗಳ ಎದುರು ತಲೆಬಾಗಬೇಕಾಯಿತು. ರಾಜಸ್ಥಾನ್‌ ಪರ ಹೆಟ್ಮೇಯರ್‌ 35 ರನ್‌ (19 ಎಸೆತ, 4 ಸಿಕ್ಸರ್‌, 1 ಬೌಂಡರಿ), ಜೋ ರೂಟ್‌ 10 ರನ್‌, ಸಂಜು ಸ್ಯಾಮ್ಸನ್‌ 4 ರನ್‌, ಧ್ರುವ್‌ ಜುರೆಲ್‌ 1 ರನ್‌, ಆಡಂ ಜಂಪಾ 2 ರನ್‌ ಗಳಿಸಿದರೆ, ಉಳಿದವರೆಲ್ಲರೂ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ ಸೇರಿದರು.

    ಆರ್‌ಸಿಬಿ ಪರ ವೇಯ್ನ್ ಪಾರ್ನೆಲ್ 3 ವಿಕೆಟ್‌ ಪಡೆದು ಮಿಂಚಿದರೆ, ಮೈಕೆಲ್‌ ಬ್ರೇಸ್‌ವೆಲ್‌, ಕರನ್‌ ಶರ್ಮಾ ತಲಾ 2 ವಿಕೆಟ್‌ ಹಾಗೂ ಗ್ಲೇನ್‌ ಮ್ಯಾಕ್ಸ್‌ವೆಲ್‌, ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

    ಟಾಸ್‌‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಪರ ಫಾಫ್‌ ಡು ಪ್ಲೆಸಿಸ್‌ 55 ರನ್‌ (44 ಎಸೆತ, 3 ಬೌಂಡರಿ, 2 ಸಿಕ್ಸರ್‌), ಗ್ಲೇನ್‌ ಮ್ಯಾಕ್ಸ್‌ವೆಲ್‌ 33 ಎಸೆತಗಳಲ್ಲಿ 54 ರನ್‌ (3 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ವಿರಾಟ್‌ ಕೊಹ್ಲಿ, 18 ರನ್‌‌ ಗಳಿದರೆ, ಮೈಕೆಲ್‌ ಬ್ರೇಸ್‌ವೆಲ್‌ 9 ರನ್‌ ಹಾಗೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ಅನುಜ್‌ ರಾವತ್‌ 11 ಎಸೆತಗಳಲ್ಲಿ 29 ರನ್‌ (3 ಬೌಂಡರಿ, 2 ಸಿಕ್ಸರ್‌) ಚಚ್ಚಿ ಅಜೇಯರಾಗಿ ಉಳಿದರು.

    ರಾಜಸ್ಥಾನ್‌ ಪರ ಆಡಂ ಜಂಪಾ ಹಾಗೂ ಕೆ.ಎಂ ಆಸಿಫ್‌ ತಲಾ 2 ವಿಕೆಟ್‌ ಕಿತ್ತರೆ, ಸಂದೀಪ್‌ ಶರ್ಮಾ 1 ವಿಕೆಟ್‌ ಪಡೆದು ಮಿಂಚಿದರು.

  • ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಮ್ಯಾಕ್ಸಿ, ಡುಪ್ಲೆಸಿಸ್‌ ಭರ್ಜರಿ ಫಿಫ್ಟಿ; ಬೆಂಗ್ಳೂರಿನಲ್ಲಿ RCB ʻಹಸಿರು ಕ್ರಾಂತಿʼ- ರಾಯಲ್ಸ್‌ ವಿರುದ್ಧ 7 ರನ್‌ ರೋಚಕ ಜಯ

    ಬೆಂಗಳೂರು: ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಹಾಗೂ ಫಾಫ್‌ ಡು ಪ್ಲೆಸಿಸ್‌‌ (Faf du Plessis) ಭರ್ಜರಿ ಬ್ಯಾಟಿಂಗ್‌ ಹಾಗೂ ಹರ್ಷಲ್‌ ಪಟೇಲ್‌ ಮಾರಕ ಬೌಲಿಂಗ್‌ ದಾಳಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದೆ.

    ಕೊನೆಯ ಓವರ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ 20 ರನ್‌ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಅಶ್ವಿನ್‌ 2ನೇ ಎಸೆತದಲ್ಲಿ 2 ರನ್‌ ತೆಗೆದುಕೊಂಡರು. 3ನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಸಿಡಿಸಿದಾಗ ಇನ್ನೇನು ಪಂದ್ಯ ಗೆದ್ದೇ ಬಿಟ್ಟಿತ್ತು ಎನ್ನುವಷ್ಟು ಆರ್‌ಸಿಬಿ ಫ್ಯಾನ್ಸ್‌ ಆತಂಕಗೊಂಡಿದ್ದರು. ಆದ್ರೆ ಅಶ್ವಿನ್‌ 4ನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿ ರಾಜಸ್ಥಾನ್‌ ತಂಡಕ್ಕೆ ನಿರಾಸೆ ಮೂಡಿಸಿದರು. 5ನೇ ಎಸೆತದಲ್ಲಿ ಧ್ರುವ್‌ ಜುರೆಲ್‌ 1 ರನ್‌ ಕದ್ದರೆ, 6ನೇ ಎಸೆತದಲ್ಲಿ ಅಬ್ದುಲ್‌ ಬಶಿತ್‌ 1 ರನ್‌ ಗಳಿಸಿದರು.

    ತವರಿನಲ್ಲಿ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ (Royal Challengers Bangalore) 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತ್ತು. 190 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ಗೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕ ಜೋಸ್‌ ಬಟ್ಲರ್‌ ಎರಡೇ ಎಸೆತಗಳಲ್ಲಿ ವಿಕೆಟ್‌ ಒಪ್ಪಿಸಿದರು. ಬಳಿಕ 2ನೇ ವಿಕೆಟ್‌ಗೆ ಜೊತೆಯಾದ ಯಶಸ್ವಿ ಜೈಸ್ವಾಲ್‌ (Yashasvi Jaiswal) ಹಾಗೂ ದೇವದತ್‌ ಪಡಿಕಲ್‌ (Devdutt Padikkal) ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 66 ಎಸೆತಗಳಲ್ಲಿ ಈ ಜೋಡಿ 98 ರನ್‌ ಕಲೆಹಾಕಿತ್ತು. ಇದರಿಂದ ತಂಡದಲ್ಲಿ ಮತ್ತೆ ಗೆಲುವಿನ ನಗೆ ಚಿಮ್ಮಿತ್ತು. ಪಡಿಕಲ್‌ 54 ರನ್‌ (34 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಗಳಿಸಿ ಔಟಾಗುತ್ತಿದ್ದಂತೆ, ಯಶಸ್ವಿ ಜೈಸ್ವಾಲ್‌ 47 ರನ್‌ (37 ಎಸೆತ, 5 ಬೌಂಡರಿ, 2 ಸಿಕ್ಸರ್‌) ಬಾರಿಸಿ ವಿಕೆಟ್‌ ಒಪ್ಪಿಸಿದರು.

    ನಂತರ 15‌ ಎಸೆತಗಳಲ್ಲಿ 22 ರನ್‌ ಗಳಿಸಿದ್ದ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಆಕ್ರಮಣಕಾರಿ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ ಕ್ಯಾಚ್‌ ನೀಡಿ ಔಟಾದರು. ಈ ಬೆನ್ನಲ್ಲೇ ಶಿಮ್ರಾನ್‌ ಹೆಟ್ಮೇಯರ್‌ ವಿಕೆಟ್‌ ಕೈಚೆಲ್ಲಿದರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ರವಿಚಂದ್ರನ್‌ ಅಶ್ವಿನ್‌ 6 ಎಸೆತಗಳಲ್ಲಿ 12 ರನ್‌ ಗಳಿಸಿ ಔಟಾದರೆ, ಧ್ರುವ್‌ ಜುರೆಲ್‌ 16 ಎಸೆತಗಳಲ್ಲಿ 34 ರನ್‌ (2 ಸಿಕ್ಸರ್‌, 2 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

    ಆರ್‌ಸಿಬಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಹರ್ಷಲ್‌ ಪಟೇಲ್‌ ಪ್ರಮುಖ ಮೂರು ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಸಿರಾಜ್‌, ಡೇವಿಡ್‌ ವಿಲ್ಲಿ ತಲಾ ಒಂದೊಂದು ವಿಕೆಟ್‌ ಪಡೆದರು.

    ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಮೊದಲ ಎಸೆತದಲ್ಲೇ ಟ್ರೆಂಟ್‌ ಬೋಲ್ಟ್‌ ಬೌಲಿಂಗ್‌ ದಾಳಿಗೆ ಔಟಾದರು, ಈ ಬೆನ್ನಲ್ಲೇ ಶಹಬಾಜ್‌ ಅಹ್ಮದ್‌ ಕೂಡ 2 ರನ್‌ ಗಳಿಸಿ ಔಟಾದರು. ಇದರಿಂದ ಆರಂಭದಲ್ಲೇ ಆರ್‌ಸಿಬಿಗೆ ಸಂಕಷ್ಟ ಎದುರಾಗಿತ್ತು.

    ಬಳಿಕ ಒಂದಾದ ಫಾಫ್‌ ಡು ಪ್ಲೆಸಿಸ್‌ ಹಾಗೂ ಸಿಕ್ಸರ್‌ ವೀರ ಗ್ಲೇನ್‌ ಮ್ಯಾಕ್ಸ್‌ವೆಲ್‌ ರಾಜಸ್ಥಾನ್‌ ಬೌಲರ್‌ಗಳನ್ನ ಚೆಂಡಾಡಿದರು. 3ನೇ ವಿಕೆಟ್‌ಗೆ ಈ ಜೋಡಿ 66 ಎಸೆತಗಳಲ್ಲಿ ಬರೋಬ್ಬರಿ 127 ರನ್‌ ಸಿಡಿಸಿತ್ತು. ಈ ವೇಳೆ ಡುಪ್ಲೆಸಿಸ್‌ 39 ಎಸೆತಗಳಲ್ಲಿ 62 ರನ್‌ (8 ಬೌಂಡರಿ, 2 ಸಿಕ್ಸರ್)‌ ಸಿಡಿಸಿದರೆ, ಮ್ಯಾಕ್ಸ್‌ವೆಲ್‌ 77 ರನ್‌ (44 ಎಸೆತ, 4 ಸಿಕ್ಸರ್‌, 6 ಬೌಂಡರಿ) ಚಚ್ಚಿದರು.

    ಈ ಜೋಡಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ರನ್‌ ವೇಗ ಕಡಿಮೆಯಾಗುವ ಜೊತೆಗೆ ಒಂದೊಂದೇ ವಿಕೆಟ್‌ ಪತನಗೊಂಡಿತು. ಮಹಿಪಾಲ್‌ ಲೊಮ್ರೋರ್‌ 8 ರನ್‌, ದಿನೇಶ್‌ ಕಾರ್ತಿಕ್‌ 16 ರನ್‌, ವಾನಿಂದು ಹಸರಂಗ 6 ರನ್‌ ಗಳಿಸಿದರೆ, ಸುಯಶ್‌ ಪ್ರಭುದೇಸಾಯ್‌ ಹಾಗೂ ವಿಜಯ್‌ಕುಮಾರ್‌ ವೈಶಾಕ್‌ ಶೂನ್ಯ ಸುತ್ತಿದರು. ಮೊಹಮ್ಮದ್‌ ಸಿರಾಜ್‌ 1 ರನ್‌ ಹಾಗೂ ಡೇವಿಡ್ ವಿಲ್ಲಿ 4 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ರಾಜಸ್ಥಾನ್‌ ರಾಯಲ್ಸ್‌ ಪರ ಟ್ರೆಂಟ್‌ ಬೋಲ್ಟ್‌ ಹಾಗೂ ಸಂದೀಪ್‌ ಶರ್ಮಾ ತಲಾ 2 ವಿಕೆಟ್‌ ಕಿತ್ತರೆ, ರವಿಚಂದ್ರನ್‌ ಅಶ್ವಿನ್‌, ಯಜುವೇಂದ್ರ ಚಹಾಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.