Tag: RCBvsLSG

  • RCB ಸೋತಿದ್ದಕ್ಕೆ ಕಣ್ಣೀರಿಟ್ಟ ಯುವತಿ – ವೀಡಿಯೋ ವೈರಲ್

    RCB ಸೋತಿದ್ದಕ್ಕೆ ಕಣ್ಣೀರಿಟ್ಟ ಯುವತಿ – ವೀಡಿಯೋ ವೈರಲ್

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಸೋಮವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಆರ್‌ಸಿಬಿ (RCB) ಸೋಲನುಭವಿಸಿದೆ. ಈ ವೇಳೆ ಅಲ್ಲಿದ್ದ ಆರ್‌ಸಿಬಿ ಅಭಿಮಾನಿಯೊಬ್ಬಳು ಅಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಐಪಿಎಲ್ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ರಾತ್ರೋರಾತ್ರಿ ಫೇಮಸ್ ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಈ ರೀತಿಯ ಘಟನೆ ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ನಡೆದಿದೆ. ಅಭಿಮಾನಿಯೊಬ್ಬಳು (Fan Girl) ಆರ್‌ಸಿಬಿ ಸೋತ ನಂತರ ಕಿವಿ ಮತ್ತು ಮುಖವನ್ನು ಮುಚ್ಚಿಕೊಂಡು ಕಣ್ಣೀರು ಹಾಕಿದ್ದಾಳೆ. ಈ ವೀಡಿಯೋ ಕ್ಯಾಮಾರಾದಲ್ಲಿ ಸೆರೆಯಾಗಿದ್ದು, ಇದೀಗ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ, ಗ್ಲೇನ್ ಮ್ಯಾಕ್ಸ್‌ವೆಲ್, ಫಾಫ್ ಡುಪ್ಲೆಸಿಸ್ ಅವರ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ, ನಿಕೋಲಸ್ ಪೂರನ್, ಮಾರ್ಕಸ್ ಸ್ಟೋಯ್ನಿಸ್ ಬ್ಯಾಟಿಂಗ್ ಅಬ್ಬರಕ್ಕೆ ಆರ್‌ಸಿಬಿ ತಂಡ ಮಕಾಡೆ ಮಲಗಿತು. ಈ ಮೂಲಕ ತವರಿನಲ್ಲೇ ಸೋತು ತೀವ್ರ ಮುಖಭಂಗ ಅನುಭವಿಸಿದ್ದು, ಐಪಿಎಲ್‍ನಲ್ಲಿ ಸತತ 2 ಪಂದ್ಯಗಳನ್ನು ಸೋತಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. 213 ರನ್‍ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿ ರೋಚಕ ಜಯ ಸಾಧಿಸಿತು.

    ರಣರೋಚಕ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ಸಿಕ್ಸರ್, ಬೌಂಡರಿ ಸಿಡಿಸುತ್ತಾ ಅಭಿಮಾನಿಗಳಿಗೆ ರಸದೌತಣ ನೀಡಿದರು. ಪ್ರತಿ ಹೊಡೆತವನ್ನೂ ಎಂಜಾಯ್ ಮಾಡಿದ ಅಭಿಮಾನಿಗಳು ಕೊಹ್ಲಿ, ಕೊಹ್ಲಿ, ಆರ್‌ಸಿಬಿ, ಆರ್‌ಸಿಬಿ ಎಂದು ಆಟಗಾರರನ್ನ ಹುರಿದುಂಬಿಸಿದರು. ಪ್ರತಿ ಬೌಂಡರಿ, ಸಿಕ್ಸರ್‌ಗಳನ್ನು ಎಂಜಾಯ್ ಮಾಡುತ್ತಾ ಹುಚ್ಚೆದ್ದು ಕುಣಿದರು. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ 115 ಮೀಟರ್‌ ಸಿಕ್ಸ್‌ – ಡುಪ್ಲೆಸಿಸ್‌ ಈಗ ಸಿಕ್ಸರ್‌ ವೀರ ಅಂದ್ರು ಫ್ಯಾನ್ಸ್‌

    ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಆರ್‌ಸಿಬಿಗೆ ದಂಡ ವಿಧಿಸಲಾಗಿದೆ. ಈ ಮೂಲಕ ನಾಯಕ ಫಾಫ್ ಡು ಪ್ಲೆಸಿಸ್‍ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳಿಂದಲೇ 50 ರನ್‌ – ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಧಶತಕ ಅರ್ಪಿಸಿದ ಪೂರನ್‌

  • ಚಿನ್ನಸ್ವಾಮಿಯಲ್ಲಿ 115 ಮೀಟರ್‌ ಸಿಕ್ಸ್‌ – ಡುಪ್ಲೆಸಿಸ್‌ ಈಗ ಸಿಕ್ಸರ್‌ ವೀರ ಅಂದ್ರು ಫ್ಯಾನ್ಸ್‌

    ಚಿನ್ನಸ್ವಾಮಿಯಲ್ಲಿ 115 ಮೀಟರ್‌ ಸಿಕ್ಸ್‌ – ಡುಪ್ಲೆಸಿಸ್‌ ಈಗ ಸಿಕ್ಸರ್‌ ವೀರ ಅಂದ್ರು ಫ್ಯಾನ್ಸ್‌

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ (RCB) ವಿರುದ್ಧ ಸೋಮವಾರ ನಡೆದ ರಣರೋಚಕ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 1 ವಿಕೆಟ್‌ ರೋಚಕ ಜಯ ಸಾಧಿಸಿತು.

    ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡದ ಪರ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (Faf Du Plessis) ಲಕ್ನೋ ಸೂಪರ್‌ಜೈಂಟ್ಸ್ ತಂಡ ಬೌಲರ್‌ಗಳನ್ನು ಅಟ್ಟಾಡಿಸಿ ಬಾರಿಸಿದ್ದರು. ಅದರಲ್ಲೂ ಫಾಫ್ ಡುಪ್ಲೆಸಿಸ್ ಬಾರಿಸಿದ ಚೆಂಡು ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿತ್ತು.

    ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರು. ಒಂದೆಡೆ ವಿರಾಟ್ ಕೊಹ್ಲಿ (Virat Kohli) ಅಬ್ಬರದ ಪ್ರದರ್ಶನ ನೀಡುತ್ತಿದ್ದರೇ ಅವರಿಗೆ ಕ್ರೀಸ್‌ ಬಿಟ್ಟುಕೊಡುತ್ತಾ ಬ್ಯಾಟಿಂಗ್ ನಡೆಸಿದ್ದರು. 11 ಓವರ್‌ ನಂತರ ಕೊಹ್ಲಿ ವಿಕೆಟ್‌ ಬೀಳುತ್ತಿದ್ದಂತೆ ಡುಪ್ಲೆಸಿಸ್‌ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಅಬ್ಬರದ ಪ್ರದರ್ಶನ ನೀಡಿದ ಫಾಫ್ ರನ್ ಹೊಳೆ ಹರಿಸಿದರು.

    ಈ ಪಂದ್ಯದಲ್ಲಿ 15ನೇ ಓವರ್‌ನಲ್ಲಿ ರವಿ ಬಿಷ್ಣೋಯಿ ಸ್ಪಿನ್‌ ಬೌಲಿಂಗ್‌ಗೆ ಈ ಬಾರಿ ಐಪಿಎಲ್‌ನ ಅತಿದೊಡ್ಡ ಸಿಕ್ಸರ್‌ ಬಾರಿಸಿದರು. 15ನೇ ಓವರ್‌ನ 4ನೇ ಎಸೆತವನ್ನು ಭರ್ಜರಿಯಾಗಿ ಚಚ್ಚಿದ ಡುಪ್ಲೆಸಿಸ್‌ 115 ಮೀಟರ್‌ ಸಿಕ್ಸರ್‌ ಬಾರಿಸಿದರು. ಈ ಮೂಲಕ ಈ ವರ್ಷದ ಐಪಿಎಲ್‌ನಲ್ಲಿ ಸಿಡಿಸಿದ ಅತಿದೊಡ್ಡ ಸಿಕ್ಸರ್‌ ಎನಿಸಿಕೊಂಡಿತು. ಇದನ್ನೂ ಓದಿ: ಭರ್ಜರಿ 5 ಸಿಕ್ಸ್‌ – ಮಹಿ ದಾಖಲೆ ಉಡೀಸ್‌ ಮಾಡಿದ ರಿಂಕು ಕಿಂಗ್‌!

    ಇವರೆಲ್ಲಾ ಟಾಪ್‌-10 ಸಿಕ್ಸರ್‌ ವೀರರು: ಚೆನ್ನೈಸೂಪರ್‌ ಕಿಂಗ್ಸ್‌ ತಂಡದಲ್ಲಿದ್ದ ಅಲ್ಬಿ ಮಾರ್ಕೆಲ್‌ ಉದ್ಘಾಟನಾ ಆವೃತ್ತಿಯಲ್ಲಿ 125 ಮೀಟರ್‌ ಸಿಕ್ಸರ್‌ ಬಾರಿಸಿದ್ದರು. ಅದು ಈವರೆಗೆ ಯಾರೂ ಮುರಿಯದ ದಾಖಲೆಯಾಗಿದೆ. ಆ ನಂತರದಲ್ಲಿ 2013ರಲ್ಲಿ ಕಿಂಗ್ಸ್‌ XI ಪಂಜಾಬ್‌ ತಂಡದಲ್ಲಿದ್ದ ಪ್ರವೀಣ್‌ ಕುಮಾರ್‌ 124 ಮೀಟರ್‌, ಆಡಂ ಗಿಲ್‌ಕ್ರಿಸ್ಟ್‌ 122 ಮೀಟರ್‌, ಯುವರಾಜ್‌ ಸಿಂಗ್‌ 119 ಮೀಟರ್‌, ಆರ್‌ಸಿಬಿ ತಂಡದಲ್ಲಿದ್ದ ರಾಬಿನ್‌ ಉತ್ತಪ್ಪ 120 ಮೀಟರ್‌, ಕ್ರಿಸ್‌ ಗೇಲ್‌ 119 ಮೀಟರ್‌, ರಾಸ್‌ಟೇಲರ್‌ 119 ಮೀಟರ್‌, ಹೈದರಾಬಾದ್‌ ತಂಡದ ಬೆನ್‌ ಕಟ್ಟಿಂಗ್‌ ಮತ್ತು ಕೆಕೆಆರ್‌ನಲ್ಲಿದ್ದ ಗೌತಮ್‌ ಗಂಭೀರ್‌ 117 ಮೀಟರ್‌ ಹಾಗೂ ಸಿಎಸ್‌ಕೆ ನಾಯಕ ಎಂ.ಎಸ್‌ ಧೋನಿ 115 ಮೀಟರ್‌ ಸಿಕ್ಸರ್‌ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಈ ಸಾಲಿಗೆ ಫಾಫ್‌ ಡುಪ್ಲೆಸಿಸ್‌ ಸೇರಿದ್ದಾರೆ. ಇದನ್ನೂ ಓದಿ: IPL 2023: ಲಕ್ನೋಗೆ ಸೂಪರ್‌ ಜಯ – KGF ವೀರಾವೇಷದ ಆಟ ವ್ಯರ್ಥ, RCBಗೆ ವಿರೋಚಿತ ಸೋಲು

  • IPL 2023: ಲಕ್ನೋಗೆ ಸೂಪರ್‌ ಜಯ – KGF ವೀರಾವೇಷದ ಆಟ ವ್ಯರ್ಥ, RCBಗೆ ವಿರೋಚಿತ ಸೋಲು

    IPL 2023: ಲಕ್ನೋಗೆ ಸೂಪರ್‌ ಜಯ – KGF ವೀರಾವೇಷದ ಆಟ ವ್ಯರ್ಥ, RCBಗೆ ವಿರೋಚಿತ ಸೋಲು

    ಬೆಂಗಳೂರು: ನಿಕೊಲಸ್‌ ಪೂರನ್‌, ಮಾರ್ಕಸ್‌ ಸ್ಟೋಯ್ನಿಸ್‌ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 1 ವಿಕೆಟ್‌ ರೋಚಕ ಜಯ ಸಾಧಿಸಿತು.

    ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ KGF (ಕೊಹ್ಲಿ, ಗ್ಲೇನ್‌ ಮ್ಯಾಕ್ಸ್‌ವೆಲ್‌, ಫಾಫ್‌ ಡುಪ್ಲೆಸಿಸ್‌) ಭರ್ಜರಿ ಬ್ಯಾಟಿಂಗ್‌ ಹೊರತಾಗಿಯೂ, ನಿಕೋಲಸ್‌ ಪೂರನ್‌, ಮಾರ್ಕಸ್‌ ಸ್ಟೋಯ್ನಿಸ್‌ ಬ್ಯಾಟಿಂಗ್‌ ಅಬ್ಬರಕ್ಕೆ ಆರ್‌ಸಿಬಿ ತಂಡ ಮಕಾಡೆ ಮಲಗಿತು. ಈ ಮೂಲಕ ತವರಿನಲ್ಲೇ ಸೋತು ತೀವ್ರ ಮುಖಭಂಗ ಅನುಭವಿಸಿದ್ದು, ಐಪಿಎಲ್‌ನಲ್ಲಿ ಸತತ 2 ಪಂದ್ಯಗಳನ್ನು ಸೋತಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 212 ರನ್‌ ಕಲೆಹಾಕಿತು. 213 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 213 ರನ್‌ ಗಳಿಸಿ ರೋಚಕ ಜಯ ಸಾಧಿಸಿತು.

    ಚೇಸಿಂಗ್‌ ಆರಂಭಿಸಿದ ಲಕ್ನೋ ತಂಡ ಉತ್ತಮ ಶುಭಾರಂಭ ಪಡೆಯುವಲ್ಲಿ ವಿಫಲವಾಯಿತು. ಕೇಲ್‌ ಮೇಯರ್ಸ್‌, ಕೆ.ಎಲ್‌ ರಾಹುಲ್‌, ದೀಪಕ್‌ ಹೂಡಾ ಹಾಗೂ ಕೃನಾಲ್‌ ಪಾಂಡ್ಯ ಆರ್‌ಸಿಬಿ ಬೌಲರ್‌ಗಳ ದಾಳಿಗೆ ತುತ್ತಾಗಿ ಪೆವಿಲಿಯನ್‌ ಸೇರಿದರು. ನಾಯಕ ಕೆ.ಎಲ್‌. ರಾಹುಲ್‌ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಮುಂದುವರಿಸಿದರು. ಪರಿಣಾಮ ಲಕ್ನೋ ತಂಡ 6 ಓವರ್‌ಗಳಲ್ಲಿ 37 ರನ್‌ ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡು, ಸೋಲಿನ ಭೀತಿ ಎದುರಿಸಿತ್ತು.

    ನಂತರ 5ನೇ ವಿಕೆಟ್‌ಗೆ ಕಣಕ್ಕಿಳಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಮಾರ್ಕಸ್‌ ಸ್ಟೋಯ್ನಿಸ್‌ ಉತ್ತಮ ಚೇತರಿಕೆ ನೀಡಿದರು. ಕೇವಲ 30 ಎಸೆತಗಳಲ್ಲಿ ಭರ್ಜರಿ 65 ರನ್‌ (6 ಬೌಂಡರಿ, 5 ಸಿಕ್ಸರ್‌) ಸಿಡಿಸಿದರು. ಇದರಿಂದ ತಂಡ 10 ಓವರ್‌ಗಳ ಅಂತ್ಯಕ್ಕೆ 91 ರನ್‌ ಗಳಿಸಿತ್ತು. ನಂತರ ನಿಕೊಲಸ್‌ ಪೂರನ್‌ ಬ್ಯಾಟಿಂಗ್‌ ದಾಳಿಗೆ ಆರ್‌ಸಿಬಿ ತಂಡ ಸಂಪೂರ್ಣ ಮಂಕಾಯಿತು. ಆರ್‌ಸಿಬಿ ಬೌಲರ್‌ಗಳನ್ನು ಬಿಡದೇ ಬೆಂಡೆತ್ತಿದ್ದ ನಿಲಕೋಲಸ್‌ ಪೂರನ್‌ ಕೇವಲ 15 ಎಸೆತಗಳಲ್ಲಿ 50 ರನ್‌ ಚಚ್ಚಿ ಹೊಸ ದಾಖಲೆಯನ್ನೂ ಬರೆದರು. ನಿಕೋಲಸ್‌ ಪೂರನ್‌ 18 ಎಸೆತಗಳಲ್ಲಿ 62 ರನ್‌ (4 ಬೌಂಡರಿ, 7 ಸಿಕ್ಸರ್‌) ಗಳಿಸಿ ಆಡುತ್ತಿದ್ದಾಗಲೇ ಕ್ಯಾಚ್‌ ನೀಡಿ ಔಟಾದರು.

    ಇದರೊಂದಿಗೆ ಆಯುಷ್ ಬದೋನಿ 24 ಎಸೆತಗಳಲ್ಲಿ 30 ರನ್‌ ಗಳಿಸಿ ತಂಡಕ್ಕೆ ನೆರವಾದರು. ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಆರ್‌ಸಿಬಿ ತಂಡಕ್ಕೆ ಮತ್ತೆ ಜೀವ ಬಂದಂತಾಗಿತ್ತು. ಆದರೆ ಕೊನೆಯಲ್ಲಿ ಜಯದೇವ್‌ ಉನಾದ್ಕಟ್‌ 9 ರನ್‌ಗಳಿಸಿ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದರು, ಕೊನೆಯ 2 ಎಸೆತಗಳಲ್ಲಿ 1 ರನ್‌ ಬೇಕಿದ್ದಾಗಲೇ ಉನಾದ್ಕಟ್‌ ಕ್ಯಾಚ್‌ ನೀಡಿದ್ದರು. ಕೊನೆಯ ಓಂದು ಎಸೆತಕ್ಕೆ ಒಂದು ರನ್‌ ಬೇಕಿದ್ದಾಗ ಅವೇಶ್‌ ಖಾನ್‌ ಕೊನೆಯ ಎಸೆತ ಎದುರಿಸುವಲ್ಲಿ ವಿಫಲರಾದರು. ಆದರೆ ಬೈಸ್‌ ರನ್‌ ಕದಿಯುವ ಮೂಲಕ ಲಕ್ನೋ ತಂಡ ಜಯ ಸಾಧಿಸಿತು.

    ಆರ್‌ಸಿಬಿ ಪರ ಮ್ಯಾಜಿಕ್‌ ಬೌಲೀಂಗ್‌ ಮಾಡಿದ ಮೊಹಮ್ಮದ್‌ ಸಿರಾಜ್‌, ವೇಯ್ನ್ ಪಾರ್ನೆಲ್ ತಲಾ 3 ವಿಕೆಟ್‌ ಕಿತ್ತರೆ, ಕರಣ್‌ ಶರ್ಮಾ 1 ವಿಕೆಟ್‌, ಹರ್ಷಲ್‌ ಪಟೇಲ್‌ 2 ವಿಕೆಟ್‌ ಕಿತ್ತರು.

    ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡಕ್ಕೆ ರನ್‌ ಮಿಷಿನ್‌ ಕೊಹ್ಲಿ ಹಾಗೂ ಫಾಫ್‌ ಡುಪ್ಲೆಸಿಸ್‌ ಉತ್ತಮ ಆರಂಭ ಒದಗಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಈ ಜೋಡಿ 11.3 ಓವರ್‌ಗಳಲ್ಲಿ 96 ರನ್‌ ಗಳಿಸಿತ್ತು. ಈ ವೇಳೆ ವಿರಾಟ್‌ 61 ರನ್‌ (44 ಎಸೆತ, 4 ಬೌಂಡರಿ, 4 ಸಿಕ್ಸರ್‌) ಗಳಿಸಿ ಔಟಾದರು.

    ನಂತರ ಜೊತೆಯಾದ ಮ್ಯಾಕ್ಸ್‌ವೆಲ್‌ ಹಾಗೂ ನಾಯಕ ಫಾಫ್‌ ಡುಪ್ಲೆಸಿಸ್‌ ಜೋಡಿ ಲಕ್ನೋ ಬೌಲರ್‌ಗಳನ್ನ ಬೆಂಡೆತ್ತಿದರು 50 ಎಸೆತಗಳಲ್ಲಿ ಈ ಜೋಡಿ ಬರೋಬ್ಬರಿ 115 ರನ್‌ ಸಿಡಿಸಿತ್ತು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮಾಡಿದ ಫಾಫ್ ಡುಪ್ಲೆಸಿಸ್ ನಂತರ ಅಬ್ಬರಿಸಿದರು. ರವಿ ಬಿಷ್ಣೋಯಿ ಓವರ್ ನಲ್ಲಿ 115 ಮೀಟರ್ ಸಿಕ್ಸರ್ ಸಿಡಿಸಿ ಮಿಂಚಿದರು. 203 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮ್ಯಾಕ್ಟ್‌ವೆಲ್‌ 29 ಎಸೆತಗಳಲ್ಲಿ ಸ್ಫೋಟಕ 59 ರನ್‌ (6 ಸಿಕ್ಸರ್‌, 3 ಬೌಂಡರಿ) ಚಚ್ಚಿ ಕೊನೆಯಲ್ಲಿ ಒಂದು ಎಸೆತ ಬಾಕಿಯಿರುವಂತೆ ಔಟಾದರು. 171 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಫಾಫ್‌ ಡುಪ್ಲೆಸಿಸ್‌ 46 ಎಸೆತಗಳಲ್ಲಿ 79 ರನ್‌ (5 ಸಿಕ್ಸರ್‌, 5 ಬೌಂಡರಿ) ಸಿಡಿಸಿ ಅಜೇಯರಾಗುಳಿದರು.

    ಆರಂಭಿಕರಾಗಿ ಕಣಕ್ಕಿಳಿದ ಆರ್‌ಸಿಬಿ ತಂಡದ ನಾಯಕ ಫಾಫ್‌ ಡು ಪ್ಲೆಸಿಸ್‌ ಮತ್ತು ವಿರಾಟ್‌ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿದರು. ಸಿಕ್ಸರ್‌, ಬೌಂಡರಿ ಸಿಡಿಸುತ್ತಾ ಅಭಿಮಾನಿಗಳಿಗೆ ರಸದೌತಣ ನೀಡಿದರು. ಪ್ರತಿ ಹೊಡೆತವನ್ನೂ ಎಂಜಾಯ್‌ ಮಾಡಿದ ಅಭಿಮಾನಿಗಳು ʻಕೊಹ್ಲಿ, ಕೊಹ್ಲಿʼ, ʻಆರ್‌ಸಿಬಿ, ಆರ್‌ಸಿಬಿʼ ಎಂದು ಆಟಗಾರರನ್ನ ಹುರಿದುಂಬಿಸಿದರು. ಪ್ರತಿ ಬೌಂಡರಿ, ಸಿಕ್ಸರ್‌ಗಳನ್ನು ಎಂಜಾಯ್‌ ಮಾಡುತ್ತಾ ಹುಚ್ಚೆದ್ದು ಕುಣಿದರು.

    ಲಕ್ನೋ ಸೂಪರ್‌ ಜೈಂಟ್ಸ್‌ ಪರ ಮಾರ್ಕ್‌ವುಡ್‌, ಅಮಿತ್‌ ಮಿಶ್ರಾ ತಲಾ ಒಂದೊಂದು ವಿಕೆಟ್‌ ಪಡೆದರು.

  • IPL 2022: ಡುಪ್ಲೆಸಿ ಕೆಚ್ಚೆದೆ ಆಟಕ್ಕೆ ಮಣಿದ ಲಕ್ನೋ ಸೂಪರ್‌ ಜೈಂಟ್ಸ್‌

    IPL 2022: ಡುಪ್ಲೆಸಿ ಕೆಚ್ಚೆದೆ ಆಟಕ್ಕೆ ಮಣಿದ ಲಕ್ನೋ ಸೂಪರ್‌ ಜೈಂಟ್ಸ್‌

    ಮುಂಬೈ: ಇಲ್ಲಿನ ಡಿವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಇಂದಿನ (ಮಂಗಳವಾರ) ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 18 ರನ್‌ಗಳಿಂದ ಜಯ ಸಾಧಿಸಿದೆ.

    ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಡುಪ್ಲೆಸಿ ಬಳಗಕ್ಕೆ ಆರಂಭದಲ್ಲಿ ಆಘಾತ ಎದುರಾಗಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ಗಳು ಹೀನಾಯ ಪ್ರದರ್ಶನ ತೋರಿ ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್‌ ಒಪ್ಪಿಸಿ ಹೊರನಡೆದರು. ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟ್‌ ಆಗುವ ಮೂಲಕ ನಿರಾಸೆ ಮೂಡಿಸಿದರು.

    ಇತ್ತ ವಿಕೆಟ್‌ಗಳು ಉರುಳಿದರೂ ಕೆಚ್ಚೆದೆಯ ಆಟವಾಡಿದ ನಾಯಕ ಡುಪ್ಲೆಸಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಆಸರೆಯಾದರು. ಇತ್ತ ವಿಕೆಟ್‌ಗಳು ಉರುಳುತ್ತಾ ಸಾಗಿದರೂ ಕೆಚ್ಚೆದೆಯ ಆಟವಾಡಿದ ನಾಯಕ ಫಫ್‌ ಡುಪ್ಲೆಸಿ 96 ( 64 ಬಾಲ್‌, 11 ಫೋರ್‌, 2 ಸಿಕ್ಸ್‌) ರನ್‌ ಗಳಿಸಿ ಕೇವಲ 4 ರನ್‌ ಅಂತರದಿಂದ ಶತಕ ವಂಚಿತರಾದರು. ಪಂದ್ಯವನ್ನು ಗೆಲುವಿನತ್ತ ಸಾಗಿಸಲು ಡುಪ್ಲೆಸಿಗೆ ಶಹಬಾಜ್‌ ಅಹ್ಮದ್‌ ಜೊತೆಯಾಗಿ ನಿಂತರು. ಶಹಬಾಜ್‌ ಅಹ್ಮದ್‌ (26), ಗ್ಲೆನ್‌ ಮ್ಯಾಕ್ಸ್‌ವೆಲ್‌ (23), ದಿನೇಶ್‌ ಕಾರ್ತಿಕ್‌ (13), ಸುಯಾಶ್‌ ಪ್ರಭುದೇಸಾಯಿ (10), ಅನುಜ್‌ ರಾವತ್‌ (4) ರನ್‌ ಗಳಿಸಿದರು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್‌ಗೆ 182 ರನ್‌ಗಳ ಗೆಲುವಿನ ಗುರಿ ನೀಡಿತು.

    ಆರ್‌ಸಿಬಿ ಗುರಿ ಬೆನ್ನಟ್ಟಿದ ಲಕ್ನೋ ತಂಡ ಆರಂಭದಲ್ಲೇ ಎಡವಿತು. ತಂಡದ ಮೊತ್ತ 17 ಇರುವಾಗಲೇ ಜೋಶ್ ಹ್ಯಾಜಲ್ ವುಡ್ ಬೌಲಿಂಗ್‌ನಲ್ಲಿ ಕ್ವಿಂಟನ್ ಡಿಕಾಕ್ ಕೇವಲ 3 ರನ್‌ ಗಳಿಸಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚ್‌ ಒಪ್ಪಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಹ್ಯಾಜಲ್‌ ವುಡ್‌ ಬೌಲಿಂಗಲ್ಲೇ ಮನಿಶ್‌ ಪಾಂಡೆ ಕೇವಲ 6 ರನ್‌ ಗಳಿಸಿ ಪಟೇಲ್‌ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ನತ್ತ ಸಾಗಿದರು.

    ಆರಂಭದಲ್ಲಿ ಭರವಸೆಯಿಂದ ಆಟವಾಡಿದ ನಾಯಕ ಕೆ.ಎಲ್.ರಾಹುಲ್‌ 30 ರನ್‌ ಗಳಿಸಿ ಹರ್ಷಲ್‌ ಪಟೇಲ್‌ ಬೌಲಿಂಗ್‌ನಲ್ಲಿ ದಿನೇಶ್‌ ಕಾರ್ತಿಕ್‌ ಕೈಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಇದರ ಮಧ್ಯೆಯೂ ಧೃತಿಗೆಡದೇ ಉತ್ತಮ ಆಟವಾಡಿದ ಕೃಣಾಲ್‌ ಪಾಂಡ್ಯ ಅರ್ಧ ಶತಕ ವಂಚಿತರಾಗಿ ಔಟ್‌ ಆದರು. 28 ಎಸೆತಕ್ಕೆ 42 ರನ್‌ ಸಿಡಿಸಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬೌಲಿಂಗ್‌ನಲ್ಲಿ ಶಹಬಾಜ್‌ ಅಹ್ಮದ್‌ ಅವರಿಗೆ ಕ್ಯಾಚ್‌ ಒಪ್ಪಿಸಿ ನಡೆದರು. ಮಾರ್ಕಸ್‌ ಸ್ಟೋಯಿನಿಸ್‌ 24 ರನ್‌ ಸಿಡಿಸಿ ಔಟ್‌ ಆದರು. ದೀಪಕ್‌ ಹೂಡಾ (13) ಗಳಿಸಿದರು. ಆ ಮೂಲಕ ಲಕ್ನೋ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 163 ರನ್‌ ಗಳಿಸಲಷ್ಟೇ ಶಕ್ತವಾಯಿತು.

    ಆರ್‌ಸಿಬಿ ವೇಗಿ ಜೋಶ್‌ ಹ್ಯಾಜಲ್‌ವುಡ್‌ ತಮ್ಮ ಮಿಂಚಿನ ಬೌಲಿಂಗ್‌ ಮೂಲಕ ಲಕ್ನೋ ತಂಡವನ್ನು ಕಟ್ಟಿಹಾಕಿದರು. ಪಂದ್ಯದಲ್ಲಿ ಕೇವಲ 25 ನೀಡಿ ಮೂಲಕ 4 ವಿಕೆಟ್‌ಗಳನ್ನು ಗಳಿಸುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಡುಪ್ಲೆಸಿಯಷ್ಟೇ ಪ್ರಮುಖ ಪಾತ್ರ ವಹಿಸಿದರು. ಹರ್ಷಲ್‌ ಪಟೇಲ್‌ 2 ವಿಕೆಟ್‌ ಕಬಳಿಸಿದರೆ, ಮ್ಯಾಕ್ಸ್‌ವೆಲ್‌ 1 ವಿಕೆಟ್‌ ಪಡೆದರು.