Tag: RCBvsGG

  • WPL 2023: ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು – ಗುಜರಾತ್ ಜೈಂಟ್ಸ್‌ಗೆ 11 ರನ್ ರೋಚಕ ಜಯ

    WPL 2023: ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು – ಗುಜರಾತ್ ಜೈಂಟ್ಸ್‌ಗೆ 11 ರನ್ ರೋಚಕ ಜಯ

    ಮುಂಬೈ: ಹರ್ಲೀನ್ ಡಿಯೋಲ್ (Harleen Deol) ಸ್ಫೋಟಕ ಬ್ಯಾಟಿಂಗ್ ಹಾಗೂ ಆಶ್ಲೀ ಗಾರ್ಡ್ನರ್ (Ashleigh Gardner) ಬೌಲಿಂಗ್ ದಾಳಿ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡವು ಆರ್‌ಸಿಬಿ (RCB) ವಿರುದ್ಧ 11 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ WPL ಚೊಚ್ಚಲ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

    ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ (Gujarat Giants) ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಸಿಡಿಸಿತ್ತು. 202 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ, ವಿರೋಚಿತ ಸೋಲನುಭವಿಸಿತು. ಈ ಮೂಲಕ ಹ್ಯಾಟ್ರಿಕ್ ಸೋಲಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

    ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡಕ್ಕೆ ಆರಂಭದಲ್ಲೇ ನಿರಾಸೆ ಉಂಟಾಯಿತು. 3ನೇ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ನಾಯಕಿ ಸ್ಮೃತಿ ಮಂದಾನ (Smriti Mandhana) 14 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಬಳಿಕ ಮತ್ತೊರ್ವ ಆರಂಭಿಕರಾಗಿದ್ದ ಸೋಫಿ ಡಿವೈನ್ (Sophie Devine) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 45 ಎಸೆತಗಳಲ್ಲಿ 2 ಸಿಕ್ಸರ್, 8 ಬೌಂಡರಿಯೊಂದಿಗೆ 66 ರನ್ ಚಚ್ಚಿದರು. ಈ ವೇಳೆ ಎಲ್ಲಿಸ್ ಪರ‍್ರಿ ಸಹ 32 ರನ್ (25 ಎಸೆತ, 5 ಬೌಂಡರಿ) ಗಳಿಸಿ ತಂಡಕ್ಕೆ ನೆರವಾಗಿದ್ದರು. ತಂಡದಲ್ಲಿ ಗೆಲುವಿನ ಕನಸು ಚಿಗುರುತ್ತಿದ್ದಂತೆ ಗುಜರಾತ್ ಬೌಲರ್‌ಗಳು ಇವರಿಬ್ಬರ ಆಟಕ್ಕೆ ಬ್ರೇಕ್ ಹಾಕಿ ಪೆವಿಲಿಯನ್ ದಾರಿ ತೋರಿಸಿದರು.

    ರಿಚಾ ಘೋಷ್ 10 ರನ್, ಕನಿಕಾ ಅಹುಜಾ 10 ರನ್ ಗಳಿಸಿದರು. ಕೊನೆಯವರೆಗೂ ಹೋರಾಡಿದ ಹೀದರ್ ನೈಟ್ 11 ಎಸೆತಗಳಲ್ಲಿ ಸ್ಫೋಟಕ 30 ರನ್ (5 ಬೌಂಡರಿ, 1 ಸಿಕ್ಸರ್) ಚಚ್ಚಿದರೆ, ಶ್ರೇಯಾಂಕಾ ಪಾಟೀಲ್ 11 ರನ್ ಗಳಿಸಿ ಅಜೇಯರಾಗುಳಿದರು. ಇದನ್ನೂ ಓದಿ: ಕೊಹ್ಲಿ ಪರಂಪರೆ ಮುಂದುವರಿಸಿದ ಮಂದಾನ – ಹೀನಾಯ ಸೋಲಿನ ಬೆನ್ನಲ್ಲೇ ಅಭಿಮಾನಿಗಳಿಂದ ಕಿಡಿ

    ಗುಜರಾತ್ ಜೈಂಟ್ಸ್ ಪರ ಗಾರ್ಡ್ನರ್ 3 ವಿಕೆಟ್, ಅನ್ನಾಬೆಲ್ 2 ವಿಕೆಟ್ ಹಾಗೂ ಮಾನ್ಸಿ ಜೋಶಿ 1 ವಿಕೆಟ್ ಕಬಳಿಸಿದರು. ಇದನ್ನೂ ಓದಿ: ಜೊನಾಸೆನ್‌ ಆಲ್‌ರೌಂಡರ್‌ ಆಟ, ತಾಲಿಯಾ ಏಕಾಂಗಿ ಹೋರಾಟ – ಡೆಲ್ಲಿ ಕ್ಯಾಪಿಟಲ್ಸ್‌ಗೆ 42 ರನ್‌ಗಳ ಭರ್ಜರಿ ಜಯ

    ಟಾಸ್‌ಗೆದ್ದು ಮೊದಲು ಕ್ರೀಸ್‌ಗಿಳಿದ ಗುಜರಾತ್ ಜೈಂಟ್ಸ್ ತಂಡ ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿತು. 22 ರನ್‌ಗಳಿಗೆ ಮೊದಲ ವಿಕೆಟ್ ಪತನಗೊಂಡ ನಂತರ ಸ್ಫೋಟಕ ಇನ್ನಿಂಗ್ಸ್ ಶುರುವಾಯಿತು. ಆರಂಭಿಕರಾಗಿದ್ದ ಸೋಫಿಯಾ ಡಂಕ್ಲಿ ಹಾಗೂ 2ನೇ ಕ್ರಮಾಂಕದಲ್ಲಿ ಜೊತೆಯಾದ ಹರ್ಲೀನ್ ಡಿಯೋಲ್ ಸಿಕ್ಸರ್, ಬೌಂಡರಿ ಸಿಡಿಸುತ್ತಾ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. 2ನೇ ವಿಕೆಟ್ ಜೊತೆಯಾಟಕ್ಕೆ ಈ ಜೋಡಿ 8 ಓವರ್‌ಗಳಲ್ಲಿ ಬರೋಬ್ಬರಿ 82 ರನ್ ಚಚ್ಚಿತ್ತು.

    ಸೋಫಿಯಾ 28 ಎಸೆತಗಳಲ್ಲಿ ಸ್ಫೋಟಕ 65 ರನ್ (11 ಬೌಂಡರಿ, 3 ಸಿಕ್ಸರ್) ಚಚ್ಚಿದರೆ, ಹರ್ಲೀಲ್ 45 ಎಸೆತಗಳಲ್ಲಿ 67 ರನ್ (1 ಸಿಕ್ಸರ್, 7 ಬೌಂಡರಿ) ಬಾರಿಸಿದರು. ನಂತರದಲ್ಲಿ ಆಶ್ಲೇ ಗಾರ್ಡ್ನರ್ 19 ರನ್, ದಯಾಳನ್ ಹೇಮಲತಾ 16 ರನ್ ಹಾಗೂ ಅನ್ನಾಬೆಲ್ ಸದರ್ಲ್ಯಾಂಡ್ 14 ರನ್ ಗಳಿಸಿ ತಂಡಕ್ಕೆ ನೆರವಾದರು.

    ಆರ್‌ಸಿಬಿ ಪರ ಶ್ರೇಯಾಂಕ ಪಾಟೀಲ್, ಹೀದರ್ ನೈಟ್ ತಲಾ 2 ವಿಕೆಟ್ ಪಡೆದರೆ, ರೇಣುಕಾ ಸಿಂಗ್ ಹಾಗೂ ಮೇಗನ್ ಶುಟ್ ತಲಾ ಒಂದೊಂದು ವಿಕೆಟ್ ಪಡೆದರು.