ಯಾದಗಿರಿ: ಬೆಂಗಳೂರಿನಲ್ಲಿ (Bengaluru) ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ (Stampede Tragedy) 11 ಜನ ಸಾವನ್ನಪ್ಪಿದ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಬೇಸರ ವ್ಯಕ್ತಪಡಿಸಿದ್ದಾರೆ.
ಯಾದಗಿರಿಯಲ್ಲಿ (Yadgir) ನಡೆದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಆರೋಗ್ಯ ಆವಿಷ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ, ನಮ್ಮ ನಿಲುವುಗಳಿಗೆ, ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ. ಇಂತಹ ಘಟನೆ ನಡೆಯಬಾರದು, ದುರಂತಗಳು ಎಲ್ಲೂ ಸಂಭವಿಸಬಾರದು. ಯಾವುದೇ ಸರ್ಕಾರದಲ್ಲಿ ಆಗಬಾರದು ಎಂದಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಂದ್ರೆ Real Culprits of Bangalore – ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ
ದುರಂತಗಳು ನಡೆದು ಬಡವರು ಸಾಯಬಾರದು. ಆದರೆ ಒಂದೊಂದು ಸಾರಿ ನಾವು ತಪ್ಪು ಮಾಡದೇ ಹೋದ್ರು, ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ (Chinnaswamy Stampede) ಬಂಧನಕ್ಕೆ ಒಳಗಾಗಿದ್ದ ಆರ್‌ಸಿಬಿ ಫ್ರಾಂಚೈಸಿಯ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಹಾಗೂ ಡಿಎನ್‌ಎ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಸುನೀಲ್ ಮ್ಯಾಥ್ಯೂಗೆ ಹೈಕೋರ್ಟ್ (Karnataka High Court) ಜಾಮೀನು ಮಂಜೂರು ಮಾಡಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾ. ಕೃಷ್ಣಕುಮಾರ್ ಅವರಿದ್ದ ಪೀಠ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್, ಶಮಂತ್ ಎಲ್ಲರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಅಲ್ಲದೇ ದೇಶ ಬಿಟ್ಟು ಹೋಗದಂತೆ ಷರತ್ತು ವಿಧಿಸಿದೆ. ಅರ್ಜಿದಾರರ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು.
ಹೈಕೋರ್ಟ್‌ನಲ್ಲಿ (High Court) ಪತಿ ನಿಖಿಲ್ ಸೋಸಲೆ ಅಕ್ರಮ ಬಂಧನ ಪ್ರಶ್ನಿಸಿ ಪತ್ನಿ ಮಾಳವಿಕಾ ನಾಯ್ಕ್ ರಿಟ್ ಅರ್ಜಿ ಸಲ್ಲಿಸಿದ್ದರು. ಆದ್ರೆ ಎಜಿ ಶಶಿಕಿರಣ್ ಶೆಟ್ಟಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಚಾರಣೆ ವೇಳೆ ವಾದ ಮಂಡಿಸಿದ ಎಜಿ ಶಶಿಕಿರಣ್ ಶೆಟ್ಟಿ ಕಾಲ್ತುಳಿತ ದುರಂತಕ್ಕೆ ಆರ್‌ಸಿಬಿಯೇ ನೇರಹೊಣೆ. ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ವಿಕ್ಟರಿ ಪರೇಡ್, ಉಚಿತ ಪಾಸ್ ಅಂತೆಲ್ಲಾ ಹೇಳಿತ್ತು. ಇದರಿಂದ 3-4 ಲಕ್ಷ ಜನ ಸೇರಿದ್ದರು ಅಂತ ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್ ಇಂದಿಗೆ ಆದೇಶ ಕಾಯ್ದಿರಿಸಿತ್ತು.
– ಕಾಂಗ್ರೆಸ್ ದಿನಕ್ಕೊಂದಲ್ಲ, ಒಂದೇ ದಿನಕ್ಕೆ 3 ಹಗರಣ ಮಾಡ್ತಿದೆ
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಸಾವಿಗೆ ಸಂಬಂಧಿಸಿದಂತೆ ಎಐಸಿಸಿ ಸಿಎಂ, ಡಿಸಿಎಂ ಅವರ ತಲೆದಂಡ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ಜಾತಿಗಣತಿ ಅಡ್ಡ ಇಟ್ಟು ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ (BJP) ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ (Congress) ಸರ್ಕಾರವು ಆರ್‌ಸಿಬಿ ಗೆಲುವಿನ ಪ್ರಯೋಜನ ಪಡೆಯಲು ಪಂದ್ಯ ಗೆಲ್ಲುವ ಮೊದಲೇ ಸಂಭ್ರಮಾಚರಣೆಗೆ ಪ್ಲ್ಯಾನ್ ಮಾಡಿತ್ತು. ಬಳಿಕ ಸಂಭ್ರಮ ಆಚರಿಸಲು ಹೋಗಿ 11 ಜನರ ಸಾವಿಗೆ ಕಾರಣವಾಯಿತು. ಇದೀಗ ಈ ಘಟನೆ ಇಡೀ ದೇಶದಲ್ಲಿ ಸುದ್ದಿಯಾಗಿದೆ. ನೂರಾರು ಜನರು ಗಾಯಗೊಂಡ ಈ ದುರ್ಘಟನೆಯ ಬಗ್ಗೆ ಬಿಜೆಪಿ, ದುರಂತವನ್ನು ಎಳೆ ಎಳೆಯಾಗಿ ಬಿಡಿಸಿ ಖಂಡಿಸಿದೆ. ಈ ಹಿನ್ನೆಲೆ ಎಐಸಿಸಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ದೆಹಲಿಗೆ ಕರೆಸಿಕೊಂಡಿದ್ದರು. ಇವರು ಮಾಡಿದ ಅಪರಾಧಕ್ಕೆ ಇವರಿಬ್ಬರ ತಲೆದಂಡವಾಗುತ್ತದೆ ಎಂದುಕೊಂಡಿದ್ದೆವು. ಅವರು ಜಾತಿಗಣತಿಯನ್ನು ಮುಂದಿಟ್ಟು ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಿಜೆಪಿ ಯಾವುದೇ ಕಾರಣಕ್ಕೂ ಇವರ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ, ಇವರಿಬ್ಬರೂ ಘಟನೆಯ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು KSCA, RCB : ಸಿದ್ದರಾಮಯ್ಯ
ಕಾಂಗ್ರೆಸ್ ಶಾಸಕರ ಮನೆ ಮೇಲೆ ಇಂದು ಇಡಿ ದಾಳಿಯಾಗಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಣವನ್ನು ಕದ್ದು ತಿಂದಿದ್ದರು. ಶಾಸನ ಸಭೆಯಲ್ಲಿ ಮುಖ್ಯಮಂತ್ರಿಗಳು ಕೇವಲ 87 ಕೋಟಿ ರೂ. ಎಂದು ಒಪ್ಪಿಕೊಂಡಿದ್ದರು. ಭ್ರಷ್ಟಾಚಾರವನ್ನು ಒಪ್ಪಿಕೊಂಡ ನಂತರವೂ ಅಧಿಕಾರದಲ್ಲಿ ಮುಂದುವರೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ವ್ಯಂಗ್ಯವಾಡಿದ್ದಾರೆ.
ಇ.ಡಿ ದಾಳಿಗೊಳಗಾದ ಜನನಾಯಕರು ಯರ‍್ಯಾರು? ಎಷ್ಟೆಷ್ಟು ಬಳಸಿದ್ದಾರೆ? ಎಂಬ ವಿವರ ಸಿಕ್ಕಿದೆ, ಈ ಪ್ರಕರಣದಲ್ಲಿ ಅಧಿಕಾರಿ ಚಂದ್ರಶೇಖರ್ ಮರಣ ಹೊಂದಿದ್ದು, ಇವರ ಸಾವಿನ ಬಗ್ಗೆ ಸರ್ಕಾರ ಒಂದು ದಿನವೂ ಪ್ರಸ್ತಾಪ ಮಾಡಿಲ್ಲ. ಯಾರೆಲ್ಲ ಈ ಅಪರಾಧದಲ್ಲಿ ಪಾಲ್ಗೊಂಡಿದ್ದಾರೋ ಅವರೆಲ್ಲರ ಸದಸ್ಯತ್ವವು ರದ್ದಾಗುತ್ತದೆ. ಸೋಮವಾರ ಇ.ಡಿ ಬಿಡುಗಡೆ ಮಾಡಿದ ಪತ್ರದಲ್ಲಿ ಮುಡಾದಲ್ಲಿ 400 ಕೋಟಿ ರೂ.ಗಳ ಆಸ್ತಿಯನ್ನು ವಶಪಡಿಸಿಕೊಂಡಿರುವ ಬಗ್ಗೆ ಉಲ್ಲೇಖಿಸಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ. ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನ ಮಾಡಬಾರದು. ಬಿಜೆಪಿ, ಈ ಕಾಲ್ತುಳಿತದ ಪ್ರಕರಣವನ್ನು ಬಿಡುವ ಪ್ರಶ್ನೆಯೇ ಇಲ್ಲ, ಸರ್ಕಾರವು ತಮ್ಮ ಭ್ರಷ್ಟಾಚಾರ ಮತ್ತು ಕಾಲ್ತುಳಿತದ ಪ್ರಕರಣವನ್ನು ಒಪ್ಪಿಕೊಂಡು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವು ದಿನಕ್ಕೊಂದು ಹಗರಣವಲ್ಲ, ಒಂದೇ ದಿನಕ್ಕೆ ಮೂರು ಹಗರಣಗಳನ್ನು ಮಾಡುತ್ತಿದೆ. ಸರ್ಕಾರದಲ್ಲಿರುವವರು ಮುಖಭಂಗ, ಅವಮಾನವನ್ನೆಲ್ಲ ಗಾಳಿಗೆ ತೂರಿ, ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಸರ್ಕಾರ ಎಲ್ಲಾ ತರದ ತಪ್ಪುಗಳನ್ನು ಮಾಡಿ, ನಾಚಿಕೆ, ಮಾನ-ಮರ್ಯಾದೆ ಬಿಟ್ಟು ಏನೂ ಆಗಿಲ್ಲವೆಂದು ವರ್ತಿಸುತ್ತಿದೆ. ಇವರು ತಪ್ಪು ಮಾಡಿದ್ದಕ್ಕಾಗಿಯೇ ಇ.ಡಿ ಮತ್ತು ಸಿಬಿಐ ತನಿಖೆ ಮಾಡಲು ಬರೋದು? ಇವರು ತಪ್ಪು ಮಾಡಿಲ್ಲವೆಂದರೆ ತನಿಖಾ ಸಂಸ್ಥೆಗಳು ಏಕೆ ಬರುತ್ತವೆ? ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಗಲಾಟೆಗೆ ಕೇಸ್ ಇಲ್ಲದೇ ರೌಡಿಶೀಟರ್ ಓಪನ್, ಕೊಲೆಗಳಿಗೆ ಅದೆಷ್ಟು ರೌಡಿಶೀಟರ್ ತೆರೆದಿದ್ದೀರಿ? – ರೇವಣ್ಣ ಕಿಡಿ
– ಕುಂಭಮೇಳದಲ್ಲಿ ಕಾಲ್ತುಳಿತವಾದಾಗ ರಾಜೀನಾಮೆ ಕೊಟ್ರಾ? – ರಾಜ್ಯಪಾಲರನ್ನು ನಾನು ಆಹ್ವಾನಿಸಿದ್ದೆ
ಬೆಂಗಳೂರು: ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (KSCA) ಮತ್ತು ಆರ್‌ಸಿಬಿ (RCB) ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಸರ್ಕಾರ ಆಯೋಜನೆ ಮಾಡಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಕೆಎಸ್‌ಸಿಎ, ಆರ್‌ಸಿಬಿ ವಿಧಾನಸೌಧ ಬಳಿ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿದ್ದಕ್ಕೆ ನಾನು ಒಪ್ಪಿಕೊಂಡಿದ್ದೆ. ಗೋವಿಂದರಾಜು (K Govindaraj) ಕರೆ ಮಾಡಿ ರಾಜ್ಯಪಾಲರಿಗೆ ಕೊಟ್ಟರು. ನಾನು ಹೋಗುತ್ತಿದ್ದೇನೆ. ನೀವು ಬನ್ನಿ ಎಂದು ಹೇಳಿದೆ. ಅಧಿಕೃತ ಆಹ್ವಾನ ಯಾರು ಕೊಟ್ಟಿದ್ದಾರೆ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಚಿಕ್ಕಮಗಳೂರು | ಆಪರೇಷನ್ ಸಿಂಧೂರದಲ್ಲಿ ಗಾಯಗೊಂಡಿದ್ದ ವೀರ ಯೋಧನಿಗೆ ಸನ್ಮಾನ
ಕಾಲ್ತುಳಿತ ಪ್ರಕರಣದಲ್ಲಿ (Chinnaswamy Stadium Stampede Case) ರಾಜೀನಾಮೆ ಕೇಳಿದ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಕುಂಭಮೇಳ, ಗೋಧ್ರಾ ಹತ್ಯಾಕಾಂಡ, ಕೋವಿಡ್ ಸಮಯದಲ್ಲಿ ಆಮ್ಲಜನಕ ಸಿಗದೇ ಎಷ್ಟು ಜನ ಸತ್ತಿದ್ದಾರೆ? ಆಗ ಬಿಜೆಪಿಗರು ರಾಜೀನಾಮೆ ನೀಡಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಈಶ್ವರಪ್ಪಗೆ ಶಾಲು ಹೊದಿಸಿ ಸನ್ಮಾನಿಸಿದ ಬಿಎಸ್‍ವೈ – ಹೆಗಲ ಮೇಲೆ ಕೈ ಹಾಕಿ ಮಾತಾಡಿದ ಕುಚಿಕುಗಳು!
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸಿಎಂ, ಜೂನ್ 4 ರಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ ಹಾಗೂ ಆರ್‌ಸಿಬಿ ವತಿಯಿಂದ ಆರ್‌ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ನನಗೆ ಅಂದು ಬೆಳಿಗ್ಗೆ 11:29 ನಿಮಿಷಕ್ಕೆ ಕೆಎಸ್‌ಸಿಎ ವತಿಯಿಂದ ಶಂಕರ್ ಮತ್ತು ಜಯರಾಮ್ ಅವರು ಆಹ್ವಾನ ನೀಡಿ, ಕಾರ್ಯಕ್ರಮಕ್ಕೆ ಮನವಿ ಮಾಡಿಕೊಂಡರು. ಇದಕ್ಕೆ ನಾನು ಒಪ್ಪಿಗೆ ನೀಡಿದೆ. ಬಳಿಕ ಅವರು ರಾಜ್ಯಪಾಲರನ್ನು ಆಹ್ವಾನ ಮಾಡಿರುವುದಾಗಿ ತಿಳಿಸಿದರು. ಆದರೆ ಪತ್ರಿಕೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ರಾಜ್ಯಪಾಲರು ಅವರಾಗಿಯೇ ಬಂದಿದ್ದರು ಎಂದು ಪ್ರಚಾರವಾಗಿದೆ, ಇದು ತಪ್ಪು ಮಾಹಿತಿ.
ನನ್ನ ರಾಜಕೀಯ ಕಾರ್ಯದರ್ಶಿ ಆಗಿದ್ದ ಗೋವಿಂದರಾಜು ಅವರು ರಾಜ್ಯಪಾಲರಿಗೆ ಕರೆ ಮಾಡಿ ಫೋನ್ ನನಗೆ ಕೊಟ್ಟರು. ಆಗ ನಾನು ಕೂಡ ಕಾರ್ಯಕ್ರಮಕ್ಕೆ ತೆರಳುತ್ತಿದ್ದು, ನೀವು ಬನ್ನಿ ಎಂದು ಆಹ್ವಾನಿಸಿದೆ ಎಂದು ಬರೆದುಕೊಂಡಿದ್ದಾರೆ.
-ಸಿಎಂ ಬ್ಯಾಟ್ಸ್‌ಮನ್, ಡಿಸಿಎಂ ಬೌಲರ್, ಪರಂ ವಿಕೆಟ್ ಕೀಪರ್ ಎಂದು ವಾಗ್ದಾಳಿ
ಬೆಂಗಳೂರು: ಕಾಂಗ್ರೆಸ್ಸಿನವರೇ (Congress) ಸಿಕ್ಸ್, ಫೋರ್ ಹೊಡೆದು ಆರ್‌ಸಿಬಿಯನ್ನು ಗೆಲ್ಲಿಸಿದಂತೆ ವಿಜಯೋತ್ಸವದ ವೇಳೆ ಅವರಿಗೆ ಆತುರ ಇತ್ತು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ಕಿಡಿಕಾರಿದ್ದಾರೆ.
ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರೇ ಸಿಕ್ಸ್, ಫೋರ್ ಹೊಡೆದು ಗೆಲ್ಲಿಸಿದಂತೆ ಅವರ ಆತುರ ಇತ್ತು. ಡಿಕೆಶಿ ಬೌಲರ್, ಸಿದ್ದರಾಮಯ್ಯನವರೇ ಬ್ಯಾಟ್ಸ್ಮನ್, ಪರಮೇಶ್ವರ್ ವಿಕೆಟ್ ಕೀಪರ್ ಎಂಬಂತೆ ನಿಮ್ಮ ವರ್ತನೆ ಇತ್ತು. ಆರ್‌ಸಿಬಿ ತಂಡದ ಗೆಲುವಿಗೆ ನೀವೇ ಪಾತ್ರಧಾರಿಗಳೆಂಬಂತೆ ನಿಮ್ಮ ವ್ಯವಹಾರ ಇತ್ತು. ನಿಮ್ಮ ಆತುರ, ಕ್ರೆಡಿಟ್ ವಾರ್‌ನಿಂದ 11 ಅಮಾಯಕರು ಬಲಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಹುಲಿ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ
ಆಗ ಆತುರ ಮಾಡಿ, ಈಗ ಕೋರ್ಟಿಗೆ 2 ತಿಂಗಳು ಬೇಕೆಂದು ಕೇಳುತ್ತಿರುವುದೇಕೆ? ಮಾಹಿತಿಯನ್ನು ರಿ-ರೈಟ್ ಮಾಡಬೇಕೇ? ಯಾವ ಕಾರಣಕ್ಕೆ 2 ತಿಂಗಳು ಕೇಳುತ್ತೀರಿ? 2 ದಿನದಲ್ಲಿ ಕೊಡಿ ಎಂದು ನ್ಯಾಯಾಲಯ ಸರಿಯಾಗಿ ಹೇಳಿದೆ. ಎಲ್ಲವೂ ಸಿದ್ಧವಿರುವಾಗ 2 ದಿನವೂ ಬೇಕಿರಲಿಲ್ಲ. ಈಗ ಕೋರ್ಟಿಗೆ ಉತ್ತರ ನೀಡಲು 2 ತಿಂಗಳು ಕೇಳಿದ್ದು, ಜನಮಾನಸದಿಂದ ಮರೆಯಾಗಲಿ ಎಂಬ ಕಾರಣಕ್ಕೆ ಹೀಗೆ ಕೇಳಿದ್ದಾರಾ? ಇಷ್ಟೇ ತಾಳ್ಮೆಯನ್ನು ಬಳಸಿ 2 ದಿನ ತೆಗೆದುಕೊಂಡಿದ್ದರೆ, ಕಾರ್ಯಕ್ರಮವೂ ಚೆನ್ನಾಗಿ ಆಗುತ್ತಿತ್ತು. ರಾಜ್ಯದ ಮರ್ಯಾದೆಯೂ ಉಳಿಯುತ್ತಿತ್ತು. 11 ಜನರ ಜೀವವೂ ಉಳಿಯುತ್ತಿತ್ತು ಎಂದರು.
ಆರ್‌ಸಿಬಿ ಫ್ರ್ಯಾಂಚೈಸಿ ಗೆದ್ದ ಕೆಲವೇ ಗಂಟೆಗಳಲ್ಲಿ ಮೈಮೇಲೆ ಬಿದ್ದು ನಾನು ಮುಂದೆ, ನಾನು ಮುಂದೆ ಎಂದು ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದಾರೆ. ಕಾರ್ಯಕ್ರಮ ಆಯೋಜಿಸಲು ಒಂದು ದಿನವೂ ಸಮಯ ತೆಗೆದುಕೊಂಡಿಲ್ಲ. ಜೂ.3ರಂದು ಕ್ರಿಕೆಟ್ ಮ್ಯಾಚ್ ಇತ್ತು. ಜೂ.4ರಂದು ವಿಜಯೋತ್ಸವ ಮಾಡಿದ್ದಾರೆ. ಆಗ ನೀವು 2 ಗಂಟೆ ಶಾಂತವಾಗಿ ಯೋಚಿಸಿದ್ದರೆ 11 ಅಮಾಯಕ ಯುವ ಪ್ರತಿಭೆಗಳ ಪ್ರಾಣ ಉಳಿಯುತ್ತಿತ್ತಲ್ಲವೇ ಎಂದು ಕೇಳಿದರು.
ಈಗ ಅಘೋಷಿತ ತುರ್ತು ಪರಿಸ್ಥಿತಿ:
ಇಂದಿರಾ ಗಾಂಧಿಯವರ ಕಾಲದಲ್ಲಿ ಕಾಂಗ್ರೆಸ್ ಆಡಳಿತ ಹೇರಿದ್ದ ತುರ್ತು ಪರಿಸ್ಥಿತಿಗೆ 50 ವರ್ಷವಾಗಿದೆ. ಆಗ ಪ್ರತಿಭಟಿಸುವ ಹಕ್ಕು ಇರಲಿಲ್ಲ. ಜೂನ್ 25ಕ್ಕೆ ತುರ್ತು ಪರಿಸ್ಥಿತಿಗೆ 50 ವರ್ಷವಾಗಲಿದೆ. ತುರ್ತು ಪರಿಸ್ಥಿತಿ ಗುಂಗಿನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಇದ್ದಂತಿದೆ. ಆಗ ಘೋಷಿತ ತುರ್ತು ಪರಿಸ್ಥಿತಿ ಇತ್ತು. ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಚಳವಳಿ ಮಾಡುತ್ತಾರೆಂಬ ಬೆದರಿಕೆಗೆ ಕಾಂಗ್ರೆಸ್ ಭಯ ಬಿದ್ದಿದೆ. ಕಾಂಗ್ರೆಸ್ ವೈಫಲ್ಯಕ್ಕೆ ಜನರು ನುಗ್ಗಿ ಬಡಿಯುವ ದಿನ ದೂರವಿಲ್ಲ, ಜನರೇ ಬೀದಿಗೆ ಇಳಿದರೆ ಏನಾದೀತು ಎಂದು ಎಚ್ಚರಿಸಿದರು.
ಮುಡಾ ಹಗರಣದ ಬಗ್ಗೆ ಇಡಿಗೆ ಸ್ಪಷ್ಟ ಪುರಾವೆ ಸಿಕ್ಕಿರುವ ಕುರಿತು ಮಾತನಾಡಿದ ಅವರು, ಮುಡಾದಲ್ಲಿ ಭ್ರಷ್ಟಾಚಾರ ನಡೆದಿರುವುದಕ್ಕೆ ಸ್ಪಷ್ಟ ಪುರಾವೆ ಜಾರಿ ನಿರ್ದೇಶನಾಲಯದ (ಇಡಿ) ಕೈಗೆ ಸಿಕ್ಕಿದೆ. ಈಗ ಮುಖ್ಯಮಂತ್ರಿಗಳು ಏನು ಹೇಳುತ್ತಾರೆ? ಮುಡಾದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎನ್ನುತ್ತಾರಾ? ಅಥವಾ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡು ತಮ್ಮ ಜವಾಬ್ದಾರಿ ಹೊತ್ತುಕೊಳ್ಳುವರೇ? ಇ.ಡಿ 99 ಆಸ್ತಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರೆ, ಅಲ್ಲಿಗೆ ಭ್ರಷ್ಟಾಚಾರ ನಡೆದಿರುವುದು ಅಂಗೈ ಹುಣ್ಣಿನಷ್ಟು ಸ್ಪಷ್ಟವಾಗಿದೆ ಎಂದು ಅರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿ ಉಳಿದೆಲ್ಲರಿಗೂ ನೈತಿಕತೆಯ ಪಾಠ ಹೇಳುವ ಮುಖ್ಯಮಂತ್ರಿಗಳು ಈಗ ನೈತಿಕತೆಯ ಪಾಠವನ್ನು ತಮಗೂ ಅನ್ವಯ ಮಾಡಿಕೊಳ್ಳಬೇಕಿದೆ. ತಪ್ಪಿತಸ್ಥರ ಮೇಲೆ ಕ್ರಮ ಆಗಲಿ ಎಂದು ಆಗ್ರಹಿಸಿದರು.ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಸರ್ಕಾರದ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಿಸಿದ್ದೇನೆ – ಸಿದ್ದರಾಮಯ್ಯ
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಡಿಯಾಜಿಯೊ ಮಾರಾಟ ಮಾಡುತ್ತಿಲ್ಲ ಎಂದು ಮಾಲೀಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ಸ್ (United Spirits) ಅಧಿಕೃತವಾಗಿ ತಿಳಿಸಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದ (Chinnaswamy Stampede Case) ಬಳಿಕ ಆರ್‌ಸಿಬಿ ಷೇರನ್ನು ಡಿಯಾಜಿಯೊ ಮಾರಾಟ ಮಾಡಲಿದೆ ಎಂಬ ವದಂತಿ ಸುದ್ದಿಗಳು ಪ್ರಕಟವಾದ ಬೆನ್ನಲ್ಲೇ ಇಂದು ಬಾಂಬೆ ಸ್ಟಾಕ್ ಎಕ್ಸ್‌ಚೆಂಜ್ (BSE) ಈಮೇಲ್ ಮೂಲಕ ಸ್ಪಷ್ಟನೆ ಕೇಳಿತ್ತು.
ಈ ಪ್ರಶ್ನೆಗೆ ಉತ್ತರ ನೀಡಿದ ಯುನೈಟೆಡ್ ಸ್ಪಿರಿಟ್ಸ್, ಆರ್‌ಸಿಬಿಯ ಸಂಭಾವ್ಯ ಪಾಲು ಮಾರಾಟಕ್ಕೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳ ಊಹಾತ್ಮಕ ಸ್ವರೂಪದ್ದಾಗಿವೆ. ಅಂತಹ ಯಾವುದೇ ಚರ್ಚೆಗಳನ್ನು ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್ ಶಾಕ್ – ಆರ್‌ಸಿಬಿ ಸೇಲ್ ಆಗುತ್ತಾ?
ಡಿಯಾಜಿಯೊ ತೆಕ್ಕೆಗೆ ಆರ್‌ಸಿಬಿ ಹೋಗಿದ್ದು ಹೇಗೆ?
ಐಪಿಎಲ್ ಆರಂಭಗೊಳ್ಳುವ ವೇಳೆ ವಿಜಯ್ ಮಲ್ಯ ಅವರು ಆರ್‌ಸಿಬಿ ತಂಡವನ್ನು ಖರೀದಿಸಿದ್ದರು. 2012ರಲ್ಲಿ ಕಿಂಗ್‌ಫಿಶರ್ ಏರ್‌ಲೈನ್ಸ್ ಕಾರ್ಯಾಚರಣೆ ನಿಲ್ಲಿಸಿತು. ಉದ್ಯಮದಲ್ಲಿ ನಷ್ಟವಾದ ಕಾರಣ ಮಲ್ಯ ಅವರ ಯುನೈಟೆಡ್ ಸ್ಪಿರಿಟ್ಸ್ ಕಂಪನಿಯನ್ನು ಡಿಯಾಜಿಯೊ ಸ್ವಾಧೀನಪಡಿಸಿಕೊಂಡಿತು. ಆರ್‌ಸಿಬಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಷೇರುಗಳು ಇದ್ದ ಕಾರಣ ಅದರ ಮಾಲೀಕತ್ವ ಈಗ ಡಿಯಾಜಿಯೊಗೆ (Diageo) ಹೋಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ದುರಂತ – ಬೆಂಗಳೂರಿನಿಂದ ಪಂದ್ಯಗಳು ಸ್ಥಳಾಂತರ
– ವಿಧಾನಸೌಧ ಕಾರ್ಯಕ್ರಮ ಆಯೋಜಿಸಿದ್ದೇ ಸರ್ಕಾರ; ರಾಜಭವನ
– 2 ದಿನದಲ್ಲಿ ವರದಿ ಕೊಡಲು ಹೈಕೋರ್ಟ್ ಕಟ್ಟಾಜ್ಞೆ
ನವದೆಹಲಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಭೀಕರ ಕಾಲ್ತುಳಿತ ಪ್ರಕರಣ (Stampede Case), ಸರ್ಕಾರ ನಿರ್ವಹಿಸಿದ ಬಗೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಭೇಟಿಯಾಗಿರುವ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ವರದಿ ಕೊಟ್ಟಿದ್ದಾರೆ.
ಕ್ರೆಡಿಟ್ ಕ್ಲೈಮ್ ಲೆಕ್ಕಾಚಾರದಲ್ಲಿ ಅವಸರದ ತೀರ್ಮಾನವೇ ಘಟನೆಗೆ ಕಾರಣ ಆಗಿದೆ. ನಮ್ಮ ಜವಾಬ್ದಾರಿಯೂ ಇದೆ ಎಂದು ಸಿಎಂ-ಡಿಸಿಎಂ ತಪ್ಪೊಪ್ಪಿಕೊಂಡಿದ್ದಾರೆ ಅನ್ನೋದು ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಹೈಕಮಾಂಡ್‌ಗೆ ಸಿದ್ದರಾಮಯ್ಯ ರಿಪೋರ್ಟ್ ಏನು?
ಆರ್‌ಸಿಬಿಗೆ ಅತಿ ಹೆಚ್ಚು ಫ್ಯಾನ್ (RCB Fans) ಫಾಲೋವರ್ಸ್ ಇದ್ದಾರೆ. 18 ವರ್ಷದ ನಂತರ ಕಪ್ ಗೆದ್ದಿದ್ದರಿಂದ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ್ದ ಸಂಭ್ರಮವಿತ್ತು. ಫ್ರಾಂಚೈಸಿಯೊಂದರ ಗೆಲುವಷ್ಟೇ ಅಂತ ಪರಿಗಣಿಸಿ ಸುಮ್ಮನಾಗುವ ಪರಿಸ್ಥಿತಿ ಇರಲಿಲ್ಲ. ಸರ್ಕಾರ ಸುಮ್ಮನಿದ್ದರೆ ಸರ್ಕಾರಕ್ಕೆ ಅದೇ ನೆಗೆಟಿವ್ ಆಗುವ ಸಾಧ್ಯತೆ ಇತ್ತು. ಯುವ ಸಮುದಾಯದ ಪಾಲಿಗೆ ಸರ್ಕಾರವೂ ನಮ್ಮ ಜೊತೆಗೆ ಕೈಜೋಡಿಸಿತು ಎಂಬ ಖುಷಿ ಇರುತ್ತಿತ್ತು. ಹಾಗಾಗಿ, ಆರ್‌ಸಿಬಿ ಆಟಗಾರರ ಸನ್ಮಾನಕ್ಕೆ ಸರ್ಕಾರ ಮುಂದಾಯಿತು. ಇದು ಸಹಜವಾಗಿಯೇ ಸರ್ಕಾರದ ಇಮೇಜ್ ಹೆಚ್ಚಳಕ್ಕೂ ಸಹಕಾರಿ ಆಗ್ತಿತ್ತು. ಕಾಲ್ತುಳಿತಕ್ಕೆ ಪೊಲೀಸರ ವೈಫಲ್ಯವೇ ಕಾರಣ, ಸರಿಯಾದ ಸಿದ್ಧತೆ ಮಾಡದ ಕಾರಣ ಅಧಿಕಾರಿಗಳ ಅಮಾನತು ಆಗಿದೆ. ಘಟನೆ ಗೊತ್ತಾಗುತ್ತಿದ್ದಂತೆ ನಾನೇ ಆಸ್ಪತ್ರೆಗೆ ಹೋಗಿ ಪರಿಸ್ಥಿತಿ ನಿಭಾಯಿಸಲು ಸೂಚಿಸಿದ್ದೇನೆ. ಮಾಹಿತಿ ಇಲ್ಲದ ಕಾರಣ ಡಿಸಿಎಂ ಕ್ರೀಡಾಂಗಣಕ್ಕೆ ಹೋಗಿದ್ದಾರೆ ಎಂದು ಸಿಎಂ ರಾಹುಲ್ ಗಾಂಧಿ ಅವರಿಗೆ ರಿಪೋರ್ಟ್ ನೀಡಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ಡಿಕೆಶಿ ವರದಿ ಏನು…?
ಕಾಲ್ತುಳಿತಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ವಿಧಾನಸೌಧ ಮುಂದೆ ಅಹಿತಕರ ಘಟನೆ ನಡೆದಿಲ್ಲ. ನಿರೀಕ್ಷೆಗೂ ಮೀರಿದ ಜನ ಸೇರಿದ್ದಕ್ಕೆ ಸಮಸ್ಯೆ ಆಯ್ತು. ಪೂರ್ವ ಸಿದ್ಧತೆ ಮಾಡದೇ ಇರೋದು ಘಟನೆಗೆ ಕಾರಣ.. ಗೌರವ ಉದ್ದೇಶದಿಂದ ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ್ದು, ಸ್ಟೇಡಿಯಂ ಸಂಭ್ರಮಾಚರಣೆ ವೇಳೆ ಸಾವಾಗಿರುವ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ನಾನು ಸಮಾರಂಭದಲ್ಲಿ ಭಾಗಿಯಾಗಿದ್ದೆ. ದುರಂತ ಗೊತ್ತಾದ ಕೂಡಲೇ ಬೇಗ ಮುಗಿಸಲು ತಿಳಿಸಿದೆ. ಸ್ಟೇಡಿಯಂ ಒಳಗೆ ಸಾವಿರಾರು ಅಭಿಮಾನಿಗಳಿದ್ದರು. ಕಾರ್ಯಕ್ರಮ ಮಾಡದಿದ್ರೆ ಆಕ್ರೋಶ ಜಾಸ್ತಿ ಆಗ್ತಿತ್ತು. ಕೂಡಲೇ ಆಸ್ಪತ್ರೆಗೆ ಹೋಗಿ ಗಾಯಾಳುಗಳನ್ನು ವಿಚಾರಿಸಿದ್ದೇವೆ ಎಂದು ತಿಳಿಸಿರುವುದಾಗಿ ತಿಳಿದುಬಂದಿದೆ.
ಕೊನೆಗೂ ಮೌನ ಮುರಿದ ರಾಜಭವನ
ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಆರ್‌ಸಿಬಿ ಆಟಗಾರರ ಸನ್ಮಾನ ಕಾರ್ಯಕ್ರಮಕ್ಕೆ ರಾಜ್ಯಪಾಲರಿಗೆ ಆಹ್ವಾನಿಸಿದ್ಯಾರು..? ನಮಗೆ ಗೊತ್ತಿಲ್ಲ ಅವರನ್ನೇ ಕೇಳಿ ಅಂತ ಸಿಎಂ, ಡಿಸಿಎಂ ಹೇಳಿದ್ದರು. ಇದೀಗ, ರಾಜಭವನ ಖುದ್ದು ವಿವಾದಕ್ಕೆ ತೆರೆ ಎಳೆದಿದೆ. ಸರ್ಕಾರದ ಆಹ್ವಾನದ ಮೇರೆಗೆ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಿದ್ದರು. ಆರ್‌ಸಿಬಿ ಆಟಗಾರರಿಗೆ ರಾಜಭವನದಲ್ಲೇ ಸನ್ಮಾನಿಸಲು ರಾಜ್ಯಪಾಲರು ಬಯಸಿದ್ದರು. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ರಾಜ್ಯಪಾಲರು ಮಾಹಿತಿ ಕೊಟ್ಟಿದ್ದರು. ಆದ್ರೆ, ಸಿಎಂ ಸಿದ್ದರಾಮಯ್ಯ ಖುದ್ದು ರಾಜ್ಯಪಾಲರಿಗೆ ಕರೆ ಮಾಡಿ.. ವಿಧಾನಸೌಧದ ಬಳಿಯೇ ನಾವು ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದೇವೆ. ನೀವು ಕೂಡ ಇದರಲ್ಲಿ ಭಾಗವಹಿಸಿ ಎಂದು ಆಹ್ವಾನವಿತ್ತಿದ್ದರಂತೆ. ಸಿಎಂ ಕರೆಯೋಲೆ ಮೇಲೆಯೇ ಗವರ್ನರ್ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿ ಆಗಿದ್ರು ಅಂತ ರಾಜಭವನ ಸ್ಪಷ್ಟಪಡಿಸಿದೆ.
ಈ ಮೂಲಕ, ವಿಧಾನಸೌಧ ಕಾರ್ಯಕ್ರಮವನ್ನು ಆಯೋಜಿಸಿದ್ದೇ ಸರ್ಕಾರ ಅಂತ ದೃಢಪಟ್ಟಿದೆ. ಈ ಮಧ್ಯೆ, ಕಾಂಗ್ರೆಸ್ ಶಾಸಕ ಗಣಿಗ ರವಿ ಮಾತಾಡಿ, ಕೆಎಸ್‌ಸಿಎ, ಆರ್‌ಸಿಬಿ ಅವರು ಸಿಎಂ ಬಳಿ ಬಂದು 18 ವರ್ಷ ಬಳಿಕ ಗೆದ್ದಿದ್ದೇವೆ. ವಿಧಾನಸೌಧ ಮುಂದೆ ಸನ್ಮಾನ ಮಾಡಿ ಎಂದು ಕೇಳಿಕೊಂಡರು. ಅದಕ್ಕೆ ಸಿಎಂ ಅವರು ಒಪ್ಪಿಕೊಂಡಿದ್ದಾರೆ. ಭದ್ರತೆಯನ್ನು ಕಾಪಾಡಿಕೊಳ್ಳಬೇಕಾಗಿದ್ದು ಪೊಲೀಸ್ ಇಲಾಖೆಯದ್ದು. ಬಲವಂತವಾಗಿ ಯಾರಿಗೂ ಸನ್ಮಾನ ಮಾಡಿಲ್ಲ ಅಂದಿದ್ದಾರೆ.
2 ದಿನದಲ್ಲಿ ವರದಿ ಕೊಡಲು ಹೈಕೋರ್ಟ್ ಕಟ್ಟಾಜ್ಞೆ
ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ಇವತ್ತು ಕೂಡ ವಿಚಾರಣೆ ನಡೆದಿದೆ. ಈಗಾಗಲೇ ತನಿಖೆ ನಡೆಯುತ್ತಿದ್ದು, ವರದಿ ಸಲ್ಲಿಕೆಗೆ ಎಜಿ ಶಶಿಕಿರಣ್ ಶೆಟ್ಟಿ 1 ತಿಂಗಳ ಕಾಲಾವಕಾಶ ಕೋರಿದ್ರು. ಇದಕ್ಕೆ ಅವಕಾಶ ಕೊಡದ ಹೈಕೋರ್ಟ್, ಜೂನ್ 12ಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ಸೂಚನೆ ಕೊಟ್ಟಿದೆ. ಅಲ್ಲದೇ ವಿಕ್ಟರಿ ಪರೇಡ್ ಬಗ್ಗೆ ಯಾರು.. ಯಾವಾಗ.. ನಿರ್ಧಾರ ತೆಗೆದುಕೊಂಡಿದ್ದರು..? ಸಾರ್ವಜನಿಕರು/ಜನಸಂದಣಿ ನಿಯಂತ್ರಣಕ್ಕೆ ಏನು ಕ್ರಮ ಆಗಿತ್ತು..? ಗಾಯಾಗಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಎಷ್ಟು ಸಮಯ ಬೇಕಾಯಿತು..? 50 ಸಾವಿರಕ್ಕಿಂತ ಮೇಲ್ಪಟ್ಟು ಸೇರುವ ಜನಸಂದಣಿಗೆ ಎಸ್‌ಓಪಿ ಮಾಡಲಾಗಿತ್ತಾ..? ಅಂತಲೂ ಪ್ರಶ್ನೆ ಮಾಡಿದ್ದು, ನಾಡಿದ್ದು ವರದಿ ಸಲ್ಲಿಸುವಂತೆ ಸೂಚಿಸಿದೆ.
ಬೆಂಗಳೂರು: ಜನವಿರೋಧಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ಬೃಹತ್ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅವರು ಪ್ರಕಟಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನವಿರೋಧಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವ ವರೆಗೂ ಹೋರಾಟ ಮುಂದುವರೆಸಲು ನಿರ್ಧರಿಸಿದ್ದೇವೆ. ಜೂನ್ 13ರಂದು ಬೆಂಗಳೂರು (Bengaluru) ಮಹಾನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಇದೆ. ಬಿಜೆಪಿ ಕಾರ್ಯಕರ್ತರು, ಘಟನೆಯಲ್ಲಿ ನೊಂದ ಕುಟುಂಬಗಳ ಸದಸ್ಯರು, ನೊಂದವರು ಬರಲಿದ್ದಾರೆ. ಸುಮಾರು 15- 20 ಸಾವಿರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಲಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್ ಶಾಕ್ – ಆರ್‌ಸಿಬಿ ಸೇಲ್..?
ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ದುರ್ಘಟನೆಯಲ್ಲಿ ಆರೋಪಿ ನಂ.1 ಆರ್‌ಸಿಬಿ ಅಲ್ಲ, ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‍ಎ ಅವರು ಕೂಡ ಆರೋಪಿಗಳೇ ಆಗಿದ್ದಾರೆ. ಮುಖ್ಯಮಂತ್ರಿಗಳೇ ಆರೋಪಿ ನಂ.1, ಉಪ ಮುಖ್ಯಮಂತ್ರಿಗಳು (Chief Minister) 2ನೇ ಆರೋಪಿ, ಕೈಕಟ್ಟಿ ಕುಳಿತಿದ್ದ ಗೃಹ ಸಚಿವ ಪರಮೇಶ್ವರ್ ಅವರು ಆರೋಪಿ ನಂ.3, ನಂತರದ ಹೊಣೆಗಾರರು ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‍ಎ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದು ಸಂಪುಟಕ್ಕೆ ನಡೆಯುತ್ತಾ ಮೇಜರ್ ಸರ್ಜರಿ? – 10 ಸಚಿವರಿಗೆ ಕೊಕ್ ಸಾಧ್ಯತೆ
ಸರ್ಕಾರಕ್ಕೆ ಕ್ಲೀನ್ ಚಿಟ್ ಪಡೆಯಲೆಂದೇ…
ಕರ್ತವ್ಯನಿರತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಈ ಪ್ರಕರಣದ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿತ್ತು. ಸಿಐಡಿ ತನಿಖೆಗೆ ಕೊಟ್ಟರು. ಮತ್ತೊಂದು ಕಡೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಆದೇಶಿಸಿದ್ದಾರೆ. ಅವರಿಗೆ ಬೇಕಾದವರನ್ನು ನೇಮಿಸಿ ರಾಜ್ಯ ಸರ್ಕಾರಕ್ಕೆ ಕ್ಲೀನ್ ಚಿಟ್ ಕೊಟ್ಟು ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಹೊಣೆಯಿಂದ ತಪ್ಪಿಸಿಕೊಳ್ಳಲೆಂದೇ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ಮಾನಮರ್ಯಾದೆ ಇದ್ದರೆ ಹೈಕೋರ್ಟ್‍ನ ಸಿಟ್ಟಿಂಗ್ ನ್ಯಾಯಮೂರ್ತಿಗಳಿಂದ ಈ ಪ್ರಕರಣದ ತನಿಖೆ ನಡೆಸಲಿ ಎಂದು ವಿಜಯೇಂದ್ರ ಅವರು ಆಗ್ರಹಿಸಿದರು.
ಸಿಎಂ, ಡಿಸಿಎಂ ನಡುವೆ ಪೈಪೋಟಿ..
ಸಿಎಂ, ಡಿಸಿಎಂ ನಡುವೆ ಪೈಪೋಟಿ ಇತ್ತು. ತಮ್ಮ ಜನಪ್ರಿಯತೆಗಾಗಿ ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಕಾರ್ಯಕ್ರಮ ಆಯೋಜಿಸಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಏರ್ಪಡಿಸಿದ್ದರು ಎಂದು ಪ್ರಶ್ನೆಗೆ ಉತ್ತರಿಸಿದರು. ಇವರ ಗೊಂದಲದಿಂದ ಬಲಿ ಆದುದು ಯಾರು? ಯಾರ ಮರ್ಯಾದೆ ಹೋಗಿದೆ? ಎಂದು ವಿಜಯೇಂದ್ರ ಅವರು ಕೇಳಿದರು. ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸಿಎಂ, ಡಿಸಿಎಂ ನಡುವೆ ಸಂಬಂಧವೇ ಇಲ್ಲದ ಸರ್ಕಾರ ಎಂದು ಮುಖ್ಯಮಂತ್ರಿಗಳು ಹೇಳಿಕೆ ಕೊಡಲಿ ಎಂದು ಅವರು ಒತ್ತಾಯಿಸಿದರು.
ರಾಜ್ಯದ ಗೌರವವನ್ನೂ ಹಾಳು ಮಾಡಿದ್ದಾರೆ
ವಿಧಾನಸೌಧದ ಮುಂದೆ ರಾಜಕಾರಣಿಗಳ ಉಪಟಳ ತಡೆಯಲು ಸಾಧ್ಯವಾಗದೆ ಆರ್‌ಸಿಬಿ ಅಭಿಮಾನಿಗಳು ವಿಧಾನಸೌಧದ ಮೆಟ್ಟಿಲ ಬಳಿ ಚಪ್ಪಲಿ, ಕಲ್ಲು ತೂರಿದ್ದಾರೆ. ಇವರಿಗೆ ಸೆಲ್ಫಿ ಚಟ, ಜನಪ್ರಿಯತೆಯ ಚಟ ಇತ್ತು. ರಾಜ್ಯದ ಗೌರವವನ್ನೂ ಹಾಳು ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಅಡ್ಡವಾಗಿ ಕಾಲುಗಳು, ಮೂಲೆಯಲ್ಲಿ ತಲೆ – ಸೂಟ್‌ಕೇಸ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ
ಮಾನ್ಯ ರಾಜ್ಯಪಾಲರನ್ನು ತಪ್ಪು ದಾರಿಗೆ ಎಳೆದು ಅವರನ್ನೂ ಕೂರಿಸಿಕೊಂಡಿದ್ದರು. ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಲು ನಾವು ಹೇಳಿದ್ದೇವಾ? ನಾವು ಮೆರವಣಿಗೆಗೆ ಅವಕಾಶ ಕೋರಿದ್ದೆವು. ಮೆರವಣಿಗೆ ಮಾಡಿದ್ದರೆ ಬಹುಶಃ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು. ನಾವು ಅಭಿಮಾನಿಗಳ ಪರವಾಗಿ ಕರೆ ಕೊಟ್ಟಿದ್ದೇವೆ. ಆದರೆ, ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ ಎಂದು ಕೇಳಿದರು. ಕಾನೂನು- ಸುವ್ಯವಸ್ಥೆ ಸರ್ಕಾರದ ಹೊಣೆಯಲ್ಲವೇ? ಅದು ವಿಪಕ್ಷದ ಜವಾಬ್ದಾರಿಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧ ದಂಪತಿಯಿಂದ 4.79 ಕೋಟಿ ಸುಲಿಗೆ – ಇಬ್ಬರು ಅರೆಸ್ಟ್
ರಾಜ್ಯ ಸರ್ಕಾರ ದಪ್ಪ ಚರ್ಮದ್ದು..
ದೇಶದ- ನಾಡಿನ ಜನರ ಭಾವನೆಯನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಿಳಿಸುವ ಉದ್ದೇಶದಿಂದ ಇವತ್ತು ಸಿಎಂಗೆ ಬಹಿರಂಗ ಪತ್ರ ಬರೆದಿರುವುದಾಗಿ ಅವರು ಹೇಳಿದರು. ಪ್ರಾಣ ಕಳಕೊಂಡ, ನೊಂದ ಕುಟುಂಬಗಳ ಸದಸ್ಯರ ಭಾವನೆಯು ರಾಜ್ಯದ ಸಿಎಂ, ಡಿಸಿಎಂ, ರಾಜ್ಯ ಸರ್ಕಾರಕ್ಕೆ ಅರ್ಥ ಆಗಬೇಕೆಂಬ ನಿಟ್ಟಿನಲ್ಲಿ ಪತ್ರ ಬರೆದುದಾಗಿ ಸ್ಪಷ್ಟಪಡಿಸಿದರು. ಪತ್ರ ನೋಡಿ ಮುಖ್ಯಮಂತ್ರಿಗಳು ಸ್ಪಂದಿಸುವ ವಿಶ್ವಾಸ ನನಗಿಲ್ಲ; ರಾಜ್ಯ ಸರಕಾರ ದಪ್ಪ ಚರ್ಮದ್ದು ಎಂದು ವಿಜಯೇಂದ್ರ ಅವರು ವ್ಯಂಗ್ಯವಾಡಿದರು.
ಬೆಂಗಳೂರು: ಕಾಲ್ತುಳಿತದಲ್ಲಿ (Stampede) ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ತಲಾ 5 ಕೋಟಿ ಪರಿಹಾರ ಕೊಡುವಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಆಗ್ರಹಿಸಿದ್ದಾರೆ.
ಬೆಂಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್, ಆರ್‌ಸಿಬಿ (RCB) ಫ್ರಾಂಚೈಸಿ ಹಾಗೂ ಕರ್ನಾಟಕ ಸರ್ಕಾರ (Karnataka Government) ಸೇರಿ ಒಬ್ಬೊಬ್ಬ ಸಂತ್ರಸ್ತರ ಕುಟುಂಬಗಳಿಗೆ ತಲಾ ಐದು ಕೋಟಿ ರೂ ಪರಿಹಾರ ಜಾರಿಗೊಳಿಸಬೇಕು. ಜೊತೆಗೆ ಗಾಯಗೊಂಡವರ ಜೀವನದ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Chinnaswamy Stampede Case – ಆರ್‌ಸಿಬಿ ಫ್ರಾಂಚೈಸಿ, ಕೆಎಸ್‌ಸಿಎ ವಿರುದ್ಧ FIR
ನಮ್ಮ ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗ ಅಂತ ಇದೆ, ಅದು ಈಗ ʻಮಾನವ ವಿರೋಧಿಗಳ ಆಯೋಗʼ ಆಗಿದೆ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರಲ್ಲದೇ, ದಯಾನಂದ್ ಅವರನ್ನ ಅಮಾನತ್ತಿನಲ್ಲಿಟ್ಟಿರುವುದು ನಾಡಿನ ಜನತೆಗೆ ಹಾಗೂ ಇಡೀ ಪೊಲೀಸ್ ಇಲಾಖೆಗೆ ಮಾಡಿದ ಅಪಮಾನ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್ ಶಾಕ್ – ಆರ್‌ಸಿಬಿ ಸೇಲ್..?
ಏನಾಗಿತ್ತು?
ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿತು. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿತು. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿತು. ಪಂಜಾಬ್ ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ದೀಪಾವಳಿಯಂಥಹ ಸಂಭ್ರಮ ಇತ್ತು. ಆವತ್ತು ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.
ಮರುದಿನ ಅಂದ್ರೆ ಜೂ.4ರಂದು ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಯ್ತು… ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡೋಕೂ ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ (ಮಲ್ಯ ರಸ್ತ್ರೆ), ಮಣಿಪಾಲ್‌ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಆ ಬಳಿಕ ರಾಜ್ಯ ಸರ್ಕಾರ ಸಂತ್ರಸ್ತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಆರ್‌ಸಿಬಿ ಫ್ರಾಂಚೈಸಿ ತಲಾ 10 ಲಕ್ಷ ರೂ. ಕೆಎಸ್‌ಸಿಎ ತಲಾ 5 ಲಕ್ಷ ಪರಿಹಾರ ಘೋಷಿಸಿತ್ತು. ನಂತರ ಕರ್ನಾಟಕ ಸರ್ಕಾರ ಪರಿಹಾರದ ಮೊತ್ತವನ್ನು 25 ಲಕ್ಷ ರೂ.ಗಳಿಗೆ ಹೆಚ್ಚಿಸಿತು.
ಮುಂಬೈ: ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ (Chinnaswamy Stampede Case) ಕೋಲಾಹಲ ಎಬ್ಬಿಸಿರುವ ಹೊತ್ತಿನಲ್ಲೇ ಆರ್‌ಸಿಬಿ ಫ್ರಾಂಚೈಸಿಯಲ್ಲಿ ಬಹುದೊಡ್ಡ ಬೆಳವಣಿಗೆ ನಡೆದಿದೆ. ಇಂಡಿಯನ್ ಪ್ರೀಮಿಯರ್‌ಲೀಗ್‌ನಲ್ಲಿ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯನ್ನ ಮಾರಾಟ ಮಾಡಲು ಮಾಲೀಕತ್ವದ ಸಂಸ್ಥೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಹೌದು. ಆರ್‌ಸಿಬಿ ಫ್ರಾಂಚೈಸಿಯಲ್ಲಿ ಹೂಡಿಕೆಮಾಡಿರುವ ತನ್ನ ಪಾಲನ್ನು ಮಾರಾಟ ಮಾಡಲು ಪೋಷಕ ಕಂಪನಿಯಾದ ಡಿಯಾಜಿಯೊ (Diageo) ಮುಂದಾಗಿದೆ. ಹೀಗಾಗಿ ಆರ್‌ಸಿಬಿ ಶೀಘ್ರದಲ್ಲೇ ಹೊಸ ಮಾಲೀಕರನ್ನು ಪಡೆಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆದ್ದ ಒಂದು ವಾರದಲ್ಲೇ ಈ ಬೆಳವಣಿಗೆ ನಡೆದಿದೆ. ಡಿಯಾಜಿಯೊ ಪ್ರೈವೆಟ್ ಲಿಮಿಟೆಡ್ ಕಂಪನಿ ಆರ್‌ಸಿಬಿಯಲ್ಲಿ ಹೂಡಿಕೆ ಮಾಡಿರುವ ತನ್ನ ಪಾಲನ್ನು ಮಾರಾಟ ಮಾಡಲು ಮಾತುಕತೆ ನಡೆಸುತ್ತಿರುವುದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಈ ಬೆನ್ನಲ್ಲೇ ಯುನೈಟೆಡ್ ಸ್ಪಿರಿಟ್ಸ್‌ನ (United Spirits) ಷೇರುಗಳಲ್ಲೂ ಭಾರೀ ಏರಿಕೆ ಕಂಡಿದೆ. ಬ್ರೂವರೀಸ್ ಮತ್ತು ಡಿಸ್ಟಿಲರೀಸ್ ಸಂಸ್ಥೆಯ ಷೇರುಗಳು ದಿನದಲ್ಲಿ ಶೇ.3.28 ರಷ್ಟು ಏರಿಕೆಯಾಗಿ ಪ್ರತಿ ಷೇರು 1,645 ರೂ.ಗಳಿಗೆ ತಲುಪಿದೆ. ಇದು ಕಳೆದ 5 ತಿಂಗಳಲ್ಲೇ ಗರಿಷ್ಠ ಮಟ್ಟವಾಗಿದೆ.
ವರದಿಗಳ ಪ್ರಕಾರ, ಡಿಯಾಜಿಯೊ ಕಂಪನಿಯು ಪ್ರಮುಖ ಸಲಹೆಗಾರರೊಂದಿಗೆ ಈಗಾಗಲೇ ಆರಂಭಿಕ ಸುತ್ತಿನ ಮಾತುಕತೆ ನಡೆಸಿದ್ದು, ಎರಡು ರೀತಿಯ ಬೆಳವಣಿಗೆಗಳು ಕಂಡುಬಂದಿವೆ. ಡಿಯಾಜಿಯೊ ಆರ್‌ಸಿಬಿ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡಿರುವ ತನ್ನ ಪಾಲನ್ನು ಅಥವಾ ಇಡೀ ಫ್ರಾಂಚೈಸಿ ಶೇರನ್ನೇ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ. ಆದ್ರೆ ಕಂಪನಿಯು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಫ್ರಾಂಚೈಸಿಯನ್ನ ಒಟ್ಟು 200 ಕೋಟಿ ಡಾಲರ್‌ಗೆ ಮೌಲ್ಯೀಕರಿಸಬಹುದು ಎಂದು ಹೇಳಲಾಗಿದೆ. ಈ ನಿರ್ಧಾರ ಇನ್ನೂ ಅಧಿಕೃತವಾಗಿಲ್ಲ.
ಡಿಯಾಜಿಯೊ ನಿರ್ಧಾರಕ್ಕೆ ಕಾರಣವೇನು?
ಡಿಯಾಜಿಯೊ ಜಾಗತೀಕವಾಗಿ ಬದಲಾವಣೆ ತರಲು ತನ್ನ ಮಾಲೀಕತ್ವ ಬದಲಾವಣೆಗೆ ಎದುರುನೋಡುತ್ತಿದೆ. ಏಕೆಂದರೆ ಅಮೆರಿಕ ಡಿಯಾಜಿಯೊದ ಅತಿದೊಡ್ಡ ಮಾರುಕಟ್ಟೆ. ಆದ್ರೆ ಇತ್ತೀಚೆಗೆ ಸುಂಕದ ಹೊಡೆತ ಹಾಗೂ ಆಲ್ಕೋಹಾಲ್ ಉತ್ಪನ್ನಗಳಿಗೆ ಗ್ರಾಹಕರ ಬೇಡಿಕೆ ಕುಸಿದ ಬೆನ್ನಲ್ಲೇ ಮದ್ಯ ಮಾರಾಟಕ್ಕೆ ಹೊಡೆತ ಬಿದ್ದಿದೆ. ಆದ್ದರಿಂದ ಆರ್‌ಸಿಬಿಯಲ್ಲಿನ ತನ್ನ ಪಾಲನ್ನು ಮಾರಾಟ ಮಾಡಿದ್ರೆ ಆರ್ಥಿಕ ಚೇತರಿಕೆ ಜೊತೆಗೆ ತನ್ನ ಪ್ರಮುಖ ವ್ಯವಹಾರಗಳ ಮೇಲೆ ಗಮನಹರಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ತನ್ನ ಪಾಲನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.
ಸರ್ಕಾರದ ಒತ್ತಡ ಕಾರಣವೇ?
ಮತ್ತೊಂದು ಕಡೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಯೋಜಿಸಿರುವ ವೃತ್ತಿಪರ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಬಾಡಿಗೆ ಜಾಹೀರಾತು ಸೇರಿದಂತೆ ಎಲ್ಲಾ ರೀತಿಯ ತಂಬಾಕು ಮತ್ತು ಆಲ್ಕೋಹಾಲ್ ಪ್ರಚಾರಗಳನ್ನು ನಿಷೇಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತೊಮ್ಮೆ ಐಪಿಎಲ್ ಮಂಡಳಿಗೆ ನಿರ್ದೇಶನ ನೀಡಿದೆ. ಇದೂ ಸಹ ಒಂದು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಪದಾರ್ಪಣೆ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಜಯ್ ಮಲ್ಯ ಅವರ ಮಾಲೀಕತ್ವದಲ್ಲಿತ್ತು. ಮಲ್ಯ ಅವರ ಉದ್ಯಮ ಸಾಮ್ರಾಜ್ಯ ದಿವಾಳಿಯಾದ ನಂತರ ಡಿಯಾಜಿಯೊ ಕಂಪನಿಯ ಯುನೈಟೆಡ್ ಸ್ಪಿರಿಟ್ಸ್ ಸ್ವಾಧೀನಪಡಿಸಿಕೊಂಡಿತು.