Tag: rcb

  • ಮಂಧಾನ ಮ್ಯಾಜಿಕ್ ಬ್ಯಾಟಿಂಗ್‌ – ಆರ್‌ಸಿಬಿಗೆ 8 ವಿಕೆಟ್‌ಗಳ ಅದ್ಧೂರಿ ಜಯ

    ಮಂಧಾನ ಮ್ಯಾಜಿಕ್ ಬ್ಯಾಟಿಂಗ್‌ – ಆರ್‌ಸಿಬಿಗೆ 8 ವಿಕೆಟ್‌ಗಳ ಅದ್ಧೂರಿ ಜಯ

    ವಡೋದರಾ: ನಾಯಕಿ ಸ್ಮೃತಿ ಮಂಧಾನ (Smriti Mandhana) ಸ್ಫೋಟಕ ಅರ್ಧಶತಕದ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 8 ವಿಕೆಟ್‌ಗಳ ಅದ್ಧೂರಿ ಜಯ ಸಾಧಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ಸ್‌ ತಂಡ ಸತತ ಎರಡು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.

    ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಮೊದಲು ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.3 ಓವರ್‌ಗಳಿಗೆ 141 ರನ್ ಗಳಿಸಿ ಆಲೌಟ್ ಆಯಿತು. ಈ ಮೂಲಕ ಆರ್‌ಸಿಬಿಗೆ 142 ರನ್‌ಗಳ ಗುರಿ ನೀಡಿತು.

     

    ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ 2 ವಿಕೆಟ್ ನಷ್ಟಕ್ಕೆ ರನ್ ಗಳಿಸಿ ಗೆಲುವಿನ ಪತಾಕೆ ಹಾರಿಸಿತು. ತಂಡದಿಂದ ಮೊದಲು ಕ್ರೀಸ್‌ಗಿಳಿದ ತಂಡದ ನಾಯಕಿ ಸ್ಮೃತಿ ಮಂಧಾನ ಹಾಗೂ ಡೇನಿಯಲ್ ವೈಟ್ ಜೊತೆಯಾಟವಾಡಿ 65 ಎಸೆತಗಳಲ್ಲಿ 107 ರನ್ ಕಲೆಹಾಕಿ ಗೆಲುವಿನ ದಡದತ್ತ ತಂಡವನ್ನು ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಡೇನಿಯಲ್ ವೈಟ್ 7 ಫೋರ್ ಸಿಡಿಸಿ 33 ಬಾಲ್‌ಗಳಿಗೆ 42 ರನ್ ಗಳಿಸಿ ಔಟಾದರು. ಸ್ಮೃತಿ ಮಂಧಾನ 3 ಸಿಕ್ಸ್ ಹಾಗೂ 10 ಫೋರ್ ಸಿಡಿಸಿ 47 ಎಸೆತಗಳಿಗೆ 81 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರಿಚಾ ಘೋಷ್ ಕೊನೆಗೆ ಅಬ್ಬರದ ಸಿಕ್ಸ್ ಸಿಡಿಸಿ ಮಿಂಚಿದರು. ರಿಚಾ 5 ಎಸೆತಗಳಿಗೆ 11 ರನ್ ಗಳಿಸಿದರೆ, ಪೆರ‍್ರಿ 13 ಬಾಲ್‌ಗಳಿಗೆ 7 ರನ್ ಕಲೆಹಾಕಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

    ಈ ಮೊದಲು ಬ್ಯಾಟ್ ಬೀಸಿದ ಡೆಲ್ಲಿ ತಂಡದ ಶೆಫಾಲಿ ವರ್ಮ 2ನೇ ಎಸೆತಕ್ಕೆ ಯಾವುದೇ ರನ್ ಗಳಿಸದೇ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್‌ಗೆ ಎಂಟ್ರಿಕೊಟ್ಟ ಡೆಲ್ಲಿ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಹಾಗೂ ಜೆಮಿಮಾ ರೊಡ್ರಿಗಸ್ ಜೊತೆಯಾಟವಾಡಿ 39 ಎಸೆತಗಳಿಗೆ 59 ರನ್ ಗಳಿಸಿಕೊಟ್ಟು ತಂಡವನ್ನು ಮುನ್ನಡೆಸಿದರು. ಜೆಮಿಮಾ ರೊಡ್ರಿಗಸ್ 2 ಸಿಕ್ಸ್ ಹಾಗೂ 4 ಫೋರ್‌ಗಳನ್ನು ಸಿಡಿಸಿ 22 ಬಾಲ್‌ಗಳಿಗೆ 34 ರನ್ ಕಲೆಹಾಕಿ ಪೆವಿಲಿಯನ್‌ಗೆ ಮರಳಿದರು. ಇವರಿಬ್ಬರ ಜೊತೆಯಾಟ 7ನೇ ಓವರ್‌ಗೆ ಮುರಿದುಬಿತ್ತು. ಮೆಗ್ ಲ್ಯಾನಿಂಗ್ 3 ಫೋರ್ ಹೊಡೆದು 19 ಎಸೆತಗಳಿಗೆ 17 ರನ್‌ಗಳಿಸಿ ಔಟಾದರು.

  • WPL ನಿಂದ ಆರ್‌ಸಿಬಿ ಟಗರು ಪುಟ್ಟಿ ಶ್ರೇಯಾಂಕ ಹೊರಕ್ಕೆ?

    WPL ನಿಂದ ಆರ್‌ಸಿಬಿ ಟಗರು ಪುಟ್ಟಿ ಶ್ರೇಯಾಂಕ ಹೊರಕ್ಕೆ?

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB Womens) ತಂಡವು  2025ರ ಮಹಿಳಾ ಪ್ರೀಮಿಯರ್ ಲೀಗ್‌ನ (WPL 2025) ಮೊದಲ ಪಂದ್ಯದಲ್ಲೇ ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆರಂಭಿಕ ಪಂದ್ಯದಲ್ಲೇ ದಾಖಲೆಯ ಚೇಸಿಂಗ್‌ನೊಂದಿಗೆ ಪ್ರಶಸ್ತಿ ಉಳಿಸಿಕೊಳ್ಳುವತ್ತ ಮೊದಲ ಹೆಜ್ಜೆ ಇಟ್ಟಿದೆ.

    ಈ ನಡುವೆಯೇ ಆರ್‌ಸಿಬಿಗೆ ಕೊಂಚ ಆಘಾತವೂ ಎದುರಾಗಿದೆ. ಕಳೆದ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಟ್ರೋಫಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಯುವ ಆಟಗಾರ್ತಿ, ಕನ್ನಡತಿ ಶ್ರೇಯಾಂಕ ಪಾಟೀಲ್ (Shreyanka Patil) ಈ ಬಾರಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ ಎಂದು ಹೇಳಲಾಗ್ತಿದೆ. ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್‌ ವಿಲೀನ | ಇನ್ಮುಂದೆ ಐಪಿಎಲ್‌ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದವರ ಕಥೆ ಏನು?

    ಯೆಸ್‌.. ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕಾಗಿ ವೆಸ್ಟ್‌ ಇಂಡೀಸ್‌ ಹಾಗೂ ಐರ್ಲೆಂಡ್‌ ವಿರುದ್ಧದ ಟೂರ್ನಿಗೂ ಅಲಭ್ಯರಾಗಿದ್ದರು. ಮಹಿಳಾ ಪ್ರೀಮಿಯರ್‌ ಲೀಗ್‌ ಶುರುವಾಗುವ ಹೊತ್ತಿಗೆ ಶ್ರೇಯಾಂಕ ಫಿಟ್‌ ಆಗಲಿದ್ದಾರೆ ಎಂದು ಹೇಳಲಾಗ್ತಿತ್ತು. ಆದ್ರೆ ಗುಜರಾತ್‌ ಜೈಂಟ್ಸ್‌ ವಿರುದ್ಧ ನಡೆದ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗುವ ಮೂಲಕ ಅವರು ಸಂಪೂರ್ಣ ಫಿಟ್ ಆಗಿಲ್ಲ ಎಂಬುದು ಗೊತ್ತಾಗಿದೆ. ಇದನ್ನೂ ಓದಿ: Champions Trophy | ವಿಜೇತ ತಂಡಕ್ಕೆ ಸಿಗಲಿದೆ 19.45 ಕೋಟಿ – ಗೆದ್ದ ಪ್ರತಿ ಪಂದ್ಯಕ್ಕೂ ಸಿಗುತ್ತೆ ಹಣ

    ಹೀಗಾಗಿ ಶ್ರೇಯಾಂಕಾ ಪಾಟೀಲ್‌ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ ಎನ್ನಲಾಗುತ್ತಿದೆ. ಶ್ರೇಯಾಂಕ ಬದಲಿಗೆ ಸ್ನೇಹ್‌ ರಾಣಾ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: WPL 2025 | ಗುಜರಾತ್‌ ವಿರುದ್ಧ ರಿಚಾ ಘರ್ಜನೆ – ಆರ್‌ಸಿಬಿ ಗೆಲುವಿನ ಶುಭಾರಂಭ

  • WPL 2025 | ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ – ಪಂದ್ಯ ಎಲ್ಲಿ, ಯಾವಾಗ ಪ್ರಸಾರ?

    WPL 2025 | ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ – ಪಂದ್ಯ ಎಲ್ಲಿ, ಯಾವಾಗ ಪ್ರಸಾರ?

    – ಚಾಂಪಿಯನ್‌ ಆರ್‌ಸಿಬಿಗೆ ಕಠಿಣ ಸವಾಲು, ಫೈನಲ್‌ ಸೋಲಿನ ಹಣೆಪಟ್ಟಿ ಕಳಚಲು ಡೆಲ್ಲಿ ಸಜ್ಜು

    ವಡೋದರಾ: 2024ರ ಆವೃತ್ತಿಯ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳು ಮಹಿಳಾ ಪ್ರೀಮಿಯರ್‌ ಲೀಗ್‌ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ.

    ರಾತ್ರಿ 7:30ಕ್ಕೆ ಗುಜರಾತ್‌ನ ವಡೋದರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಲಿದೆ. ಇದರೊಂದಿಗೆ ಭಾರತದ ಉದಯೋನ್ಮುಖ ಕ್ರಿಕೆಟ್‌ ಪ್ರತಿಭೆಗಳ ಪೋಷಣೆಗೆ ವೇದಿಗೆ ಸಜ್ಜುಗೊಂಡಿದೆ.

    ಜಾಗತಿಕ ಸೂಪರ್‌ ಸ್ಟಾರ್‌ಗಳು ಸ್ಪರ್ಧೆಗೆ ಅಪಾರ ಮೌಲ್ಯವನ್ನು ತಂದಿದ್ದರೂ ಲೀಗ್‌ನ ನಿಜವಾದ ಯಶಸ್ಸು ದೇಶೀಯ ಆಟಗಾರ್ತಿಯರ ಏಳಿಗೆಯಲ್ಲಡಗಿದೆ. ಮೊದಲ ಎರಡು ಋತುಗಳಲ್ಲಿ ಕನ್ನಡತಿ ಶ್ರೇಯಂಕಾ ಪಾಟೀಲ್‌ ಮತ್ತು ಸೈಕಾ ಇಶಾಕ್‌ ಅವರಂತಹ ಹಲವಾರು ದೇಶೀಯ ಪ್ರತಿಭೆಗಳು ಹೊರಹೊಮ್ಮಿದ್ದು, ರಾಷ್ಟ್ರೀಯ ತಂಡದಿಂದಲೂ ಕರೆ ಸ್ವೀಕರಿಸಿದ್ದಾರೆ.

    ಪ್ರಮುಖ ಆಟಗಾರ್ತಿಯರ ಅನುಪಸ್ಥಿತಿ
    ಪ್ರತಿ ಡಬ್ಲ್ಯೂಪಿಎಲ್‌ ಋತುವಿನಲ್ಲಿ, ಉದಯೋನ್ಮುಖ ಭಾರತೀಯ ಆಟಗಾರ್ತಿಯರ ಪಟ್ಟಿ ಬೆಳೆಯುತ್ತಲೇ ಇದೆ. ಅಲಿಸ್ಸಾ ಹೀಲಿ, ಸೋಫಿ ಮೊಲಿನೆಕ್ಸ್‌ ಮತ್ತು ಕೇಟ್‌ ಕ್ರಾಸ್‌ ಅವರಂತಹ ವಿದೇಶಿ ತಾರೆಯರು ಗಾಯಗಳಿಂದಾಗಿ ಈ ಆವೃತ್ತಿಯಿಂದ ಹೊರಗುಳಿದಿರುವುದರಿಂದ, ಮುಂಬರುವ ಋತುವು ಅನುಭವಿ ದೇಶೀಯ ಆಟಗಾರ್ತಿಯರಿಗೆ ಮತ್ತು ಹೊಸ ಪ್ರತಿಭೆಗಳಿಗೆ ಮಿಂಚಲು ಸುವರ್ಣಾವಕಾಶ ಕಲ್ಪಿಸುತ್ತದೆ.

    ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ ಮತ್ತು ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನೊಂದಿಗೆ ರಾಷ್ಟ್ರೀಯ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಉತ್ತಮ ಪ್ರದರ್ಶನ ನೀಡಲು ಅವರು ಉತ್ಸುಕರಾಗಿದ್ದಾರೆ. ಇನ್ನೂ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ವೇಗದ ಬೌಲಿಂಗ್‌ ಆಲ್‌ರೌಂಡರ್‌ ಕಾಶ್ವೀ ಗೌತಮ್‌ ಸಹ ಅತ್ಯುತ್ತಮ ಆಟಗಾರ್ತಿಯರ ವಿರುದ್ಧ ತಮ್ಮನ್ನು ಸಾಬೀತುಪಡಿಸುವ ಅವಕಾಶ ಹೊಂದಿದ್ದಾರೆ. ಟೂರ್ನಿಯಲ್ಲಿ ಮೊದಲ ಬಾರಿಗೆ ವಡೋದರಾ ಮತ್ತು ಲಕ್ನೋ ತಾಣಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.

    ಚಾಂಪಿಯನ್‌ ಆರ್‌ಸಿಬಿಗೆ ಕಠಿಣ ಸವಾಲು:
    ಕಳೆದ ಬಾರಿಯ ಚಾಂಪಿಯನ್‌ ಆರ್‌ಸಿಬಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಕಠಿಣ ಸವಾಲನ್ನು ಎದುರಿಸುತ್ತಿದೆ. ಕಳೆದ ಋತುವಿನ ಪ್ರಮುಖ ಆಟಗಾರ್ತಿಯರಾದ ಆಲ್‌ರೌಂಡರ್‌ ಸೋಫಿ ಡಿವೈನ್‌, ಆರೋಗ್ಯಕ್ಕೆ ಆದ್ಯತೆ ನೀಡಲು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ. ಗಾಯಗೊಂಡಿರುವ ಸೋಫಿ ಮೊಲಿನೆಕ್ಸ್‌ ಮತ್ತು ಕೇಟ್‌ ಕ್ರಾಸ್‌ ಈ ಆವೃತ್ತಿಯಿಂದ ಹೊರಗುಳಿದಿದ್ದಾರೆ. ಸ್ಟಾರ್‌ ಆಲ್‌ರೌಂಡರ್‌ ಎಲಿಸ್‌ ಪೆರ್ರಿ, ಶ್ರೇಯಂಕಾ ಪಾಟೀಲ್‌ ಮತ್ತು ಆಶಾ ಶೋಭನಾ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿ ಆರ್‌ಸಿಬಿ ತಂಡದ ಆತಂಕಕ್ಕೆ ಕಾರಣವಾಗಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

    ಕಳೆದ ವರ್ಷ 11 ರ ಬಳಗದಲ್ಲಿದ್ದ ನಮ್ಮ ಹೆಚ್ಚಿನ ಆಟಗಾರ್ತಿಯರು ಗಾಯಗಳಿಂದಾಗಿ ಈ ಋತುವಿನಲ್ಲಿ ಅಲಭ್ಯರಾಗಿದ್ದಾರೆ. ಅದರಲ್ಲೂ ಸೋಫಿ ಅಲಭ್ಯತೆ ಖಂಡಿತವಾಗಿಯೂ ತಂಡವನ್ನು ಕಾಡಲಿದೆ ಎಂದು ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ.

    ಈ ಮಧ್ಯೆ, ಎರಡು ಬಾರಿ ರನ್ನರ್‌ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ಟೂರ್ನಿಯಲ್ಲಿ ಅತ್ಯಂತ ಸ್ಥಿರ ತಂಡವಾಗಿದ್ದು, ಫೈನಲ್‌ನಲ್ಲಿ ಸೋತ ದಾಖಲೆಯನ್ನು ಮುರಿಯಲು ಉತ್ಸುಕವಾಗಿದೆ. ಟೂರ್ನಿಯು ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದೆ.

    ಯಾವುದರಲ್ಲಿ ನೇರ ಪ್ರಸಾರ?
    ಎಲ್ಲಾ ಪಂದ್ಯಗಳು ರಾತ್ರಿ 7:30ಕ್ಕೆ ಸರಿಯಾಗಿ ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ನೇರ ಪ್ರಸಾರ ಇರಲಿದೆ. ಇನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

  • RCB ಫ್ಯಾನ್ಸ್‌ ನೂತನ ಕ್ಯಾಪ್ಟನ್‌ಗೆ ಬೆಂಬಲ ನೀಡಬೇಕು – ಅಭಿಮಾನಿಗಳಿಗೆ ಕಿಂಗ್‌ ಕೊಹ್ಲಿ ಮನವಿ

    RCB ಫ್ಯಾನ್ಸ್‌ ನೂತನ ಕ್ಯಾಪ್ಟನ್‌ಗೆ ಬೆಂಬಲ ನೀಡಬೇಕು – ಅಭಿಮಾನಿಗಳಿಗೆ ಕಿಂಗ್‌ ಕೊಹ್ಲಿ ಮನವಿ

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ನೂತನ ನಾಯಕನಾಗಿ ಸ್ಫೋಟಕ ಬ್ಯಾಟ್ಸ್‌ಮನ್‌ ರಜತ್‌ ಪಾಟಿದಾರ್‌ (Rajat Patidar) ಅವರನ್ನ ಫ್ರಾಂಚೈಸಿ ಅಯ್ಕೆ ಮಾಡಿದೆ. ಪಾಟೀದಾರ್‌ ಆಯ್ಕೆಯನ್ನು ಫ್ರಾಂಚೈಸಿಯ ಜೀವಾಳ ವಿರಾಟ್‌ ಕೊಹ್ಲಿ ಶ್ಲಾಘಿಸಿದ್ದಾರೆ.

    ಕೊಹ್ಲಿ ಫಸ್ಟ್​ ರಿಯಾಕ್ಷನ್​ ಏನು?
    ರಜತ್​ ಪಾಟಿದಾರ್ ನಾಯಕನಾಗಿ ಆಯ್ಕೆಗೊಳ್ಳುತ್ತಿದ್ದಂತೆ ಮಾಜಿ ನಾಯಕ ವಿರಾಟ್​ ಕೊಹ್ಲಿ ಶುಭಾಶಯ ಕೋರಿದ್ದಾರೆ. ಆರ್​ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ರಜತ್​ ನಾಯಕ ಸ್ಥಾನಕ್ಕೆ ಅರ್ಹರಾಗಿದ್ದಾರೆ. ನಾನು ಮತ್ತು ಆರ್​ಸಿಬಿ ತಂಡ ಸದಾ ರಜತ್​ ಅವರಿಗೆ ಬೆಂಬಲ ನೀಡುತ್ತೇವೆ. ಆರ್​ಸಿಬಿ ನಿಮಗೆ ನಾಯಕನ ದೊಡ್ಡ ಜವಾಬ್ದಾರಿ ನೀಡಿದೆ. RCB ಅಭಿಮಾನಿಗಳು ಕೂಡ ನೂತನ ನಾಯಕನಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಕೊಹ್ಲಿಯ ಈ ಮಾತು ಆರ್​ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

    ಸಮಾನ್ಯವಾಗಿ ವಿರಾಟ್​ ಕೊಹ್ಲಿ ಯುವ ಆಟಗಾರರನ್ನು ಪ್ರೋತ್ಸಾಹಿಸುವಲ್ಲಿ ಸದಾ ಮುಂದಿರುತ್ತಾರೆ. ಇದೀಗ ಪಾಟಿದಾರ್​ಗೂ ಬೆಂಬಲ ನೀಡಿ ಮತ್ತು ತಮ್ಮ ಅಭಿಮಾನಿಗಳಿಗೂ ಬೆಂಬಲ ನೀಡುವಂತೆ ಕೋರಿದ್ದು ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?

    ರಜತ್​ ಐಪಿಎಲ್​ ದಾಖಲೆ:
    ಈ ವರೆಗೂ ಆರ್​ಸಿಬಿ ತಂಡದ ಪರ ರಜತ್​ ಪಾಟಿದಾರ್​ ಒಟ್ಟು 27 ಪಂದ್ಯಗಳನ್ನಾಡಿದ್ದಾರೆ. 24 ಇನ್ನಿಂಗ್ಸ್​ಗಳಲ್ಲಿ 34.74ರ ಸರಾಸರಿಯಲ್ಲಿ ಒಟ್ಟು 779 ರನ್​ ಕಲೆ ಹಾಕಿದ್ದಾರೆ. ಅದರಲ್ಲಿ 1 ಶತಕ, 7 ಅರ್ಧಶತಕ ಸೇರಿವೆ. 112ರನ್​ ಐಪಿಎಲ್​ನಲ್ಲಿ ಇವರ ವೈಯಕ್ತಿಕ ಗರಿಷ್ಠ ಸ್ಕೋರ್‌ ಆಗಿದೆ. ಇದನ್ನೂ ಓದಿ: ಆರ್‌ಸಿಬಿ ನಾಯಕನಾಗಿ ರಜತ್‌ ಪಾಟಿದಾರ್‌ ಆಯ್ಕೆ

    ಐಪಿಎಲ್​ 2025ರ RCB ತಂಡ:
    ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್​, ಟಿಮ್ ಡೇವಿಡ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ರಜತ್ ಪಾಟಿದಾರ್ (ನಾಯಕ), ಕೃನಾಲ್ ಪಾಂಡ್ಯ, ಮನೋಜ್ ಭಾಂಡಗೆ, ಮೋಹಿತ್ ರಥಿ, ರೊಮಾರಿಯೊ ಶೆಫರ್ಡ್​, ಜೇಕಬ್​ ಬೆಥೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ವಪ್ನಿಲ್ ಸಿಂಗ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಲುಂಗಿ ಎಂಗಿಡಿ, ರಸಿಕ್ ದಾರ್ ಸಲಾಂ, ಸುಯಶ್ ಶರ್ಮಾ, ಯಶ್ ದಯಾಳ್, ನುವಾನ್ ತುಷಾರ, ಅಭಿನಂದನ್ ಸಿಂಗ್.

  • UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?

    UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?

    ಬೆಂಗಳೂರು: ಸಾಧನೆಯ ಜೊತೆ ಅದೃಷ್ಟ ಇದ್ದರೆ ವ್ಯಕ್ತಿಯ ಹುದ್ದೆ ಹೇಗೆ ಬೇಕಾದರೂ ಬದಲಾಗಬಹುದು ಎನ್ನುವುದಕ್ಕೆ  ರಜತ್‌ ಪಾಟಿದಾರ್‌ ಈಗ ಸಾಕ್ಷಿಯಾಗಿದ್ದಾರೆ.  ಟೂರ್ನಿಯ ಅರ್ಧದಲ್ಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವನ್ನು ಸೇರಿದ್ದ ರಜತ್‌ ಪಾಟಿದಾರ್‌ (Rajat Patidar) ಈಗ ಆ ತಂಡವನ್ನೇ ಮುನ್ನಡೆಸುವ ಮೂಲಕ ಐಪಿಎಲ್‌ನಲ್ಲಿ (IPL) ಸಾಧನೆ ಮಾಡಿದ್ದಾರೆ.

    2021 ರಲ್ಲಿ ಆರ್‌ಸಿಬಿ ತಂಡವನ್ನು ಸೇರಿದ್ದ ರಜತ್‌ ಕೇವಲ 4 ಪಂದ್ಯದಲ್ಲಿ 71 ರನ್‌ ಹೊಡೆದಿದ್ದರು. ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಆರ್‌ಸಿಬಿ ಅವರನ್ನು ಕೈಬಿಟ್ಟಿತ್ತು. 2022ರ ಹರಾಜಿನಲ್ಲಿ ಯಾವುದೇ ತಂಡ ರಜತ್‌ ಅವರನ್ನು ಖರೀದಿಸದ ಕಾರಣ ಅಲ್‌ಸೋಲ್ಡ್‌ ಆಗಿದ್ದರು.

    2022ರ ಆವೃತ್ತಿಯಲ್ಲಿ ಕರ್ನಾಟಕದ ಲುವ್ನಿತ್ ಸಿಸೋಡಿಯಾ (Luvnith Sisodia) ಗಂಭೀರವಾಗಿ ಗಾಯಗೊಳ್ಳುತ್ತಾರೆ. ಇವರ ಜಾಗಕ್ಕೆ ಯಾರನ್ನು ಖರೀದಿಸಬೇಕು ಎಂದು ಯೋಚನೆಯಲ್ಲಿದ್ದಾಗ ಆರ್‌ಸಿಬಿಗೆ ಹೊಳೆದದ್ದೇ ರಜತ್‌ ಪಾಟಿದಾರ್‌ ಹೆಸರು. ಹೀಗಾಗಿ ಟೂರ್ನಿಯ ಅರ್ಧದಲ್ಲಿ ರಜತ್‌ ಮತ್ತೆ ಆರ್‌ಸಿಬಿ ತಂಡವನ್ನು ಸೇರುತ್ತಾರೆ. ಇದನ್ನೂ ಓದಿ: ಕಾರು ಅಪಘಾತದಲ್ಲಿ ರಿಷಭ್‌ ಪಂತ್‌ ಉಳಿಸಿದ್ದ ವ್ಯಕ್ತಿ ಪ್ರೇಯಸಿ ಜೊತೆ ಆತ್ಮಹತ್ಯೆಗೆ ಯತ್ನ – ಪ್ರಿಯತಮೆ ಸಾವು

    20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಆರ್‌ಸಿಬಿಗೆ ಮರಳಿ ಬಂದ ನಂತರ ರಜತ್‌ ಸ್ಫೋಟಕ ಆಟವನ್ನು ಪ್ರದರ್ಶಿಸುತ್ತಾರೆ. ಅದರಲ್ಲೂ ಎಲಿಮಿನೇಟರ್‌ ಪಂದ್ಯದಲ್ಲಿ ರಜತ್‌ ಲಕ್ನೋ ವಿರುದ್ಧ ಕೇವಲ 54 ಎಸೆತಗಳಲ್ಲಿ 112 ರನ್‌ ( 12 ಬೌಂಡರಿ,7 ಸಿಕ್ಸ್‌) ಹೊಡೆದು ದಾಖಲೆ ನಿರ್ಮಿಸಿದ್ದರು. ಈ ಪಂದ್ಯವನ್ನು ಆರ್‌ಸಿಬಿ ರೋಚಕ 14 ರನ್‌ಗಳಿಂದ ಗೆದ್ದುಕೊಳ್ಳುತ್ತದೆ. ಈ ಮೂಲಕ ಭಾರತ ತಂಡ ಸೇರದೇ ಶತಕ ಹೊಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರಜತ್‌ ಪಾತ್ರವಾಗುತ್ತಾರೆ.

     

    2024 ರಲ್ಲಿ ಆರ್‌ಸಿಬಿ ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಯಶ್‌ ದಯಾಳ್‌ ಅವರನ್ನು ಉಳಿಸಿಕೊಂಡಿತ್ತು. ನಾಯಕನಾಗಿದ್ದ ಡುಪ್ಲೆಸಿಸ್‌ ಅವರನ್ನು ಕೈ ಬಿಟ್ಟು ರಜತ್‌ ಪಾಟಿದರ್‌ ಅವರನ್ನು 11 ಕೋಟಿ ರೂ. ನೀಡಿ ಉಳಿಸಿಕೊಂಡಾಗ ಈ ಬಾರಿ ಆರ್‌ಸಿಬಿ ನಾಯಕನಾಗುತ್ತಾರಾ ಎಂಬ ಪ್ರಶ್ನೆ ಆಗಲೇ ಎದ್ದಿತ್ತು. ಆದರೆ ವಿರಾಟ್‌ ಕೊಹ್ಲಿ ಅವರನ್ನು ಉಳಿಸಿಕೊಂಡಿರುವಾಗ ಯಾರು ನಾಯಕನಾಗಬಹುದು ಎಂಬ ಕುತೂಹಲ ಮೂಡಿತ್ತು. ಆದರೆ ಈಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಆರ್‌ಸಿಬಿ ತಂಡ ರಜತ್‌ ಅವರಿಗೆ ನಾಯಕತ್ವದ ಪಟ್ಟ ನೀಡಿದೆ.

    ಮೂರು ಅವೃತ್ತಿಯಲ್ಲಿ ರಜತ್‌ 27 ಐಪಿಎಲ್‌ ಪಂದ್ಯಗಳಿಂದ 799 ರನ್‌ ಹೊಡೆದಿದ್ದಾರೆ. 1 ಶತಕ, 7 ಅರ್ಧಶತಕ ಸಿಡಿಸಿದ್ದಾರೆ. 34.74 ಬ್ಯಾಟಿಂಗ್‌ ಸರಾಸರಿ, 158.85 ಸ್ಟ್ರೈಕ್‌ ರೇಟ್‌ ಹೊಂದಿರುವ ರಜತ್‌ ಐಪಿಎಲ್‌ನಲ್ಲಿ ಬೌಂಡರಿಗಿಂತಲೂ ಸಿಕ್ಸ್‌ ಹೆಚ್ಚು ಸಿಡಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು 51 ಬೌಂಡರಿ, 54 ಸಿಕ್ಸ್‌ ಸಿಡಿಸಿ ಸ್ಫೋಟಕ ಬ್ಯಾಟ್ಸ್‌ಮನ್‌ ಎಂದೇ ಗುರುತಿಸಿಕೊಂಡಿದ್ದಾರೆ.

    ಯಾವ ವರ್ಷ ಎಷ್ಟು ರನ್‌?
    2021 – 4 ಪಂದ್ಯ, 71 ರನ್‌
    2022 – 8 ಪಂದ್ಯ, 333 ರನ್‌
    2024 – 15 ಪಂದ್ಯ, 395 ರನ್‌

  • ಆರ್‌ಸಿಬಿ ನಾಯಕನಾಗಿ ರಜತ್‌ ಪಾಟಿದಾರ್‌ ಆಯ್ಕೆ

    ಆರ್‌ಸಿಬಿ ನಾಯಕನಾಗಿ ರಜತ್‌ ಪಾಟಿದಾರ್‌ ಆಯ್ಕೆ

    ಬೆಂಗಳೂರು:  ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ನೂತನ ನಾಯಕನಾಗಿ ಸ್ಫೋಟಕ ಬ್ಯಾಟ್ಸ್‌ಮನ್‌ ರಜತ್‌ ಪಾಟಿದಾರ್‌ (Rajat Patidar)  ಅವರನ್ನು ಆಯ್ಕೆ ಮಾಡಲಾಗಿದೆ.

    2021 ರಿಂದ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್​ನ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿರುವ ಪಾಟಿದರ್‌ 2025ರ ಐಪಿಎಲ್‌ ಆವೃತ್ತಿಗೆ ಆರ್‌ಸಿಬಿಯನ್ನು ಮುನ್ನಡೆಸಲಿದ್ದಾರೆ.

     


    ರಜತ್ ಪಾಟಿದಾರ್ ಅವರಿಗೆ ನಾಯಕತ್ವದ ಅನುಭವ ಇದೆ. ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.

     

    2022 ರಿಂದ 2024 ರವರೆಗೆ  ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಆರ್​ಸಿಬಿ ನಾಯಕರಾಗಿದ್ದರು. ಆದರೆ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡುಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ 40 ವರ್ಷದ ಡುಪ್ಲೆಸಿಸ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌  2 ಕೋಟಿ ರೂ. ನೀಡಿ ಖರೀದಿಸಿತ್ತು.

  • ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಆರ್‌ಸಿಬಿ ಟಾಪ್‌ ಪ್ಲೇಯರ್‌ಗಳು ಫ್ಲಾಪ್‌ – ಫ್ರಾಂಚೈಸಿಗೆ ತಲೆನೋವು

    ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಆರ್‌ಸಿಬಿ ಟಾಪ್‌ ಪ್ಲೇಯರ್‌ಗಳು ಫ್ಲಾಪ್‌ – ಫ್ರಾಂಚೈಸಿಗೆ ತಲೆನೋವು

    ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮುಗಿದಿದ್ದು 4-1 ಅಂತರದಿಂದ ಟೀಮ್ ಇಂಡಿಯಾ (Team India) ಗೆದ್ದು ಬೀಗಿದೆ. ಈ ಬೆನ್ನಲ್ಲೇ ಇಂಗ್ಲೆಂಡ್‌ (England) ತಂಡದಲ್ಲಿದ್ದ ಆರ್‌ಸಿಬಿ ಪ್ಲೇಯರ್‌ಗಳ ಕಳಪೆ ಪ್ರದರ್ಶನ ಫ್ರಾಂಚೈಸಿಗೆ ತಲೆನೋವು ತಂದಿಟ್ಟಿದೆ.

    ಈ ಬಾರಿ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ಸ್ಟಾರ್ ಪ್ಲೇಯರ್‌ಗಳಾದ ಜಾಕೊಬ್ ಬೆಥೆಲ್, ಲಿಯಾಮ್‌ ಲಿವಿಂಗ್‌ಸ್ಟೋನ್‌, ಫಿಲ್ ಸಾಲ್ಟ್ ಅವರನ್ನ ಆರ್‌ಸಿಬಿ ಭಾರೀ ಮೊತ್ತಕ್ಕೆ ಖರೀದಿ ಮಾಡಿದೆ. ಈ ಮೂವರ ಬ್ಯಾಟಿಂಗ್ ವೈಫಲ್ಯ ಆರ್‌ಸಿಬಿ ಫ್ರಾಂಚೈಸಿ ಹಾಗೂ ಭಾರೀ ನಿರೀಕ್ಷೆ ಹೊತ್ತಿದ್ದ ಅಭಿಮಾನಿಗಳಿಗೆ ತಲೆನೋವು ತಂದಿದೆ.

    ಫಿಲ್ ಸಾಲ್ಟ್ ಇಂಗ್ಲೆಂಡ್ ಆರಂಭಿಕ ಸ್ಫೋಟಕ ಬ್ಯಾಟರ್ ಎನಿಸಿಕೊಂಡಿರುವ ಸಾಲ್ಟ್ 5 ಪಂದ್ಯಗಳಿಂದ 0, 4, 5, 23, 55 ಕೇವಲ 87 ರನ್ ಕಲೆಹಾಕಿದ್ದಾರೆ. ಇದರಲ್ಲಿ 55 ಗರಿಷ್ಠ ರನ್ ಆಗಿದೆ. ಆಲ್‌ರೌಂಡರ್‌ ಲೀವಿಂಗ್ ಸ್ಟೋನ್ ಕೂಡ ಯಾವುದೇ ಮೋಡಿ ಮಾಡಿಲ್ಲ. 3ನೇ ಪಂದ್ಯದಲ್ಲಿ ಅಬ್ಬರಿಸಿದ್ದು ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲೂ ಫ್ಲಾಪ್‌ ಪ್ರದರ್ಶನವನ್ನೇ ಮುಂದುವರಿಸಿದ್ರು. ಆಡಿದ 5 ಪಂದ್ಯದಲ್ಲಿ 0, 13, 43, 9, 9 ಕೇವಲ 74 ರನ್‌ ಹೊಡೆದು 1 ವಿಕೆಟ್ ಪಡೆದರು.

    ಜಾಕೊಬ್ ಬೆಥೆಲ್ ತಾನು ಆಡಿದ 3 ಪಂದ್ಯಗಳಲ್ಲಿ 7, 6, 10 ಕೇವಲ 23 ರನ್ ಹೊಡೆದಿದ್ದಾರೆ. ಇತ್ತ ರಣಜಿ ಟ್ರೋಫಿಯಲ್ಲೂ ವಿರಾಟ್‌ ಫಾರ್ಮ್‌ ಕಳೆದುಕೊಂಡಿದ್ದು ʻಈ ಸಲ ಕಪ್‌ ನಮ್ದೇʼ ಅನ್ನೋ ಮಾತು, ಘೋಷಣೆಯಾಗಿಯೇ ಉಳಿಯುತ್ತಾ ಅಥವಾ ʻಇದು ಹೊಸ ಅಧ್ಯಾಯʼ ಅಂತ ಟ್ರೋಫಿ ಎತ್ತಿ ಹಿಡಿಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

  • ಆರ್‌ಸಿಬಿ ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ

    ಆರ್‌ಸಿಬಿ ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ

    ಬೆಂಗಳೂರು: ಐಪಿಎಲ್‌ನಲ್ಲಿ (IPL) ಬೆಂಗಳೂರನ್ನು (Bengaluru) ಪ್ರತಿನಿಧಿಸುತ್ತಿರುವ ಆರ್‌ಸಿಬಿಗೂ (RCB) ಕನ್ನಡ-ಹಿಂದಿ ಭಾಷಾ ಬಿಸಿ ತಟ್ಟಿದೆ.

    ಸೀಸನ್ 18 ಹರಾಜಿನ ವೇಳೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹಿಂದಿ ಸೋಷಿಯಲ್ ಮೀಡಿಯಾ ಓಪನ್ ಮಾಡಿದೆ. ವಿರಾಟ್ ಕೊಹ್ಲಿ ಹಿಂದಿಯಲ್ಲಿ ಆರ್‌ಸಿಬಿ ಬಗ್ಗೆ ಮಾತಾಡಿರುವ ವಿಡಿಯೋವನ್ನು ಹಂಚಿಕೊಂಡಿದೆ. ಆರ್‌ಸಿಬಿ ಹಿಂದಿ (Hindi) ಪ್ರೀತಿಗೆ ಕನ್ನಡ ಫ್ಯಾನ್ಸ್ ಸಿಡಿದೆದ್ದಿದ್ದಾರೆ.

    ಇದು ಬೆಂಗಳೂರಿನ ಕನ್ನಡ (Kannada) ಸಂಸ್ಕೃತಿಗೆ ಮಾಡಿರುವ ಅವಮಾನ. ಈ ಕ್ಷಣವೇ ಹಿಂದಿ ಪೇಜ್ ಅನ್ನು ರದ್ದು ಮಾಡಿ ಡಿಲೀಟ್ ಮಾಡಿ ಎಂದು ಆಗ್ರಹಿಸಿದ್ದಾರೆ. ಆದರೆ ಆರ್‌ಸಿಬಿ ಕನ್ನಡ ಅಭಿಮಾನಿಗಳ ಆಕ್ಷೇಪಕ್ಕೆ ಇತರೇ ಭಾಷಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.


    ವಿವಾದದ ಬೆನ್ನಲ್ಲೇ ಬಳಿಕ ಎಚ್ಚೆತ್ತ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸ್ಪಷ್ಟನೆ ಕೊಟ್ಟಿದೆ. ಮತ್ತಷ್ಟು ಜನರನ್ನು ತಲುಪುವ ಗುರಿ ಹೊಂದಿದ್ದು, ಕನ್ನಡ, ಹಿಂದಿ ಪೇಜ್ ಓಪನ್ ಮಾಡಿದ್ದೇವೆ. ಜೊತೆಗೆ ಮತ್ತಷ್ಟು ಭಾಷೆಗಳಲ್ಲೂ ಸೋಷಿಯಲ್ ಮೀಡಿಯಾ ಪೇಜ್ ಆರಂಭಿಸುತ್ತೇವೆ ಎಂದು ಸ್ಪಷ್ಟನೆ ಕೊಟ್ಟಿದೆ.  ಇದನ್ನೂ ಓದಿ: ನನ್ನ ಪ್ರೀತಿಯ RCBಗೆ…: ತಂಡದಿಂದ ಕೈಬಿಟ್ಟ ಆರ್‌ಸಿಬಿಗೆ ಸಿರಾಜ್‌ ಭಾವುಕ ವಿದಾಯ

    ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸಮರ್ಥನೆಗೂ ಅಭಿಮಾನಿಗಳು ಕಿಡಿಕಾರಿದ್ದಾರೆ. ಬೇರೆ ತಂಡಗಳು ಕನ್ನಡದಲ್ಲಿ ಪೇಜ್ ಓಪನ್ ಮಾಡುತ್ತಾರಾ? ಸಂವಹನಕ್ಕೆ ಬೇಕಾದರೆ ಕನ್ನಡ-ಇಂಗ್ಲಿಷ್ ಸಾಲದೇ ಅಂತ ಪ್ರಶ್ನಿಸಿದ್ದಾರೆ.

    ಇನ್ನು ಕೆಲವರು ಆರ್‌ಸಿಬಿ ಏನು ರಣಜಿ ಟೀಮ್ ಅಲ್ಲ, ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಹಿಂದಿ ಸೇರಿದಂತೆ ಬೇರೆ ಭಾಷೆಗಳಲ್ಲಿ ಪೋಸ್ಟ್ ಮಾಡಿದರೆ ತಪ್ಪಲ್ಲ. ಕೆಎಂಎಫ್‌ನವರು (KMF) ನಂದಿನಿ ಹಾಲಿನ (Nandini Milk) ಬಗ್ಗೆ ದೆಹಲಿಯಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದರೆ ಇದಕ್ಕೆ ಆಕ್ಷೇಪಿಸ್ತೀರಾ ಎಂದು ವಾದಿಸುತ್ತಿದ್ದಾರೆ.

  • ನನ್ನ ಪ್ರೀತಿಯ RCBಗೆ…: ತಂಡದಿಂದ ಕೈಬಿಟ್ಟ ಆರ್‌ಸಿಬಿಗೆ ಸಿರಾಜ್‌ ಭಾವುಕ ವಿದಾಯ

    ನನ್ನ ಪ್ರೀತಿಯ RCBಗೆ…: ತಂಡದಿಂದ ಕೈಬಿಟ್ಟ ಆರ್‌ಸಿಬಿಗೆ ಸಿರಾಜ್‌ ಭಾವುಕ ವಿದಾಯ

    – ನಿಮ್ಮಂಥ ಅಭಿಮಾನಿಗಳು ಜಗತ್ತಿನಲ್ಲೇ ಇಲ್ಲ: RCB ಫ್ಯಾನ್ಸ್‌ ಕೊಂಡಾಡಿದ ವೇಗಿ

    ಮುಂಬೈ: ವೇಗಿ ಬೌಲರ್ ಮೊಹಮ್ಮದ್ ಸಿರಾಜ್ (Mohammed Siraj), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.

    ಕ್ರಿಕೆಟಿಗನಾಗಿ ವಿಕಸನಗೊಳ್ಳಲು ವೇದಿಕೆಯನ್ನು ನೀಡಿದ ಫ್ರಾಂಚೈಸಿಗೆ ಮತ್ತು ಅಭಿಮಾನಿಗಳಿಗೆ ಸಿರಾಜ್‌ ಧನ್ಯವಾದ ತಿಳಿಸಿದ್ದಾರೆ. ಜೆಡ್ಡಾದಲ್ಲಿ ನಡೆದ ಐಪಿಎಲ್ 2025 ರ (IPL 2025) ಮೆಗಾ ಹರಾಜಿನಲ್ಲಿ ಆರ್‌ಸಿಬಿ, ಸಿರಾಜ್‌ನನ್ನು ಖರೀದಿಸಲಿಲ್ಲ. ಆರ್‌ಸಿಬಿ ಜೊತೆಗಿನ ಸಿರಾಜ್ ಅವರ ಏಳು ವರ್ಷಗಳ ಪ್ರಯಾಣ ಕೊನೆಗೊಂಡಿದೆ. ಇದನ್ನೂ ಓದಿ: 1,000 ಕೋಟಿಗೆ RCB ಫ್ರಾಂಚೈಸಿ ಖರೀದಿಸಲು ಪ್ಲ್ಯಾನ್‌; ಮಂಡ್ಯದಲ್ಲಿ ಸದ್ದು ಮಾಡ್ತಿದೆ ಫ್ಯಾನ್ಸ್‌ ಪೋಸ್ಟರ್‌

    ಸಿರಾಜ್‌ ಭಾವುಕ ಪೋಸ್ಟ್‌ನಲ್ಲೇನಿದೆ?

    ನನ್ನ ಪ್ರೀತಿಯ ಆರ್‌ಸಿಬಿಗೆ..
    ಆರ್‌ಸಿಬಿ ಜೊತೆಗಿನ 7 ವರ್ಷಗಳು ನನ್ನ ಹೃದಯಕ್ಕೆ ಹತ್ತಿರವಾಗಿವೆ. ನಾನು ಆರ್‌ಸಿಬಿ ಶರ್ಟ್‌ನಲ್ಲಿ ನನ್ನ ಸಮಯವನ್ನು ಹಿಂತಿರುಗಿ ನೋಡಿದಾಗ ನನ್ನ ಹೃದಯವು ಕೃತಜ್ಞತೆ, ಪ್ರೀತಿ ಮತ್ತು ಭಾವನೆಯಿಂದ ತುಂಬಿದೆ.

    ನಾನು ಮೊದಲು RCB ಜರ್ಸಿಯನ್ನು ಧರಿಸಿದ ದಿನ, ನಾವು ರೂಪಿಸುವ ಬಾಂಧವ್ಯವನ್ನು ನಾನು ಎಂದಿಗೂ ಊಹಿಸಿರಲಿಲ್ಲ. RCB ಬಣ್ಣಗಳಲ್ಲಿ ನಾನು ಬೌಲ್ ಮಾಡಿದ ಮೊದಲ ಎಸೆತದಿಂದ, ಪ್ರತಿ ವಿಕೆಟ್ ಪಡೆದ ಪ್ರತಿ ಪಂದ್ಯ, ನಿಮ್ಮೊಂದಿಗೆ ಹಂಚಿಕೊಂಡ ಪ್ರತಿ ಕ್ಷಣ, ಪ್ರಯಾಣವು ಚಿಕ್ಕದಾಗಿರಲಿಲ್ಲ. ಅಸಾಧಾರಣವಾದ ಏರಿಳಿತಗಳಿವೆ, ಆದರೆ ಎಲ್ಲದರಲ್ಲೂ ಒಂದು ವಿಷಯ ಸ್ಥಿರವಾಗಿದೆ: ನಿಮ್ಮ ಅಚಲವಾದ ಬೆಂಬಲವು ಕೇವಲ ಫ್ರ್ಯಾಂಚೈಸಿ ಆಗಿರದೇ ಕುಟುಂಬದಂತೆ ಇತ್ತು. ಇದನ್ನೂ ಓದಿ: ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – 13ನೇ ವರ್ಷದಲ್ಲೇ ಕೋಟ್ಯಧಿಪತಿ

    RCB ಅಭಿಮಾನಿಗಳು, ಈ ತಂಡದ ಆತ್ಮ. ನೀವು ತರುವ ಶಕ್ತಿ, ನೀವು ನೀಡುವ ಪ್ರೀತಿ, ನೀವು ತೋರಿಸುವ ನಂಬಿಕೆಗೆ ಸಾಟಿಯಿಲ್ಲ. ನಾನು ಆ ಕ್ಷೇತ್ರಕ್ಕೆ ಕಾಲಿಟ್ಟಾಗಲೆಲ್ಲಾ, ನಿಮ್ಮ ಕನಸುಗಳು ಮತ್ತು ಭರವಸೆಗಳ ಭಾರವನ್ನು ನಾನು ಅನುಭವಿಸಿದೆ. ನೀವು ಅಲ್ಲಿಯೇ ಇದ್ದೀರಿ ಎಂದು ನನಗೆ ತಿಳಿದಿತ್ತು. ನನ್ನ ಬೆನ್ನುಲುಬಾಗಿ ನಿಂತು ಮುಂದೆ ಸಾಗುವಂತೆ ಮಾಡಿದ್ದೀರಿ.

    ನಾವು ಆಟದಲ್ಲಿ ಬಿದ್ದಾಗ ನಿಮ್ಮ ಕಣ್ಣೀರನ್ನು ನಾನು ನೋಡಿದ್ದೇನೆ. ನಾವು ಗೆದ್ದಾಗ ನಿಮ್ಮ ಸಂಭ್ರಮಾಚರಣೆಗೆ ನಾನು ಸಾಕ್ಷಿಯಾಗಿದ್ದೇನೆ. ನಿಮ್ಮಂತಹ ಅಭಿಮಾನಿ ಬಳಗ ಜಗತ್ತಿನಲ್ಲೇ ಇಲ್ಲ. ನಿಮ್ಮ ಪ್ರೀತಿ, ನಿಮ್ಮ ಸಮರ್ಪಣೆ, ನಿಮ್ಮ ನಿಷ್ಠೆ-ಇದು ನನ್ನ ಜೀವನದುದ್ದಕ್ಕೂ ನಾನು ಪಾಲಿಸುತ್ತೇನೆ ಎಂದು ಭಾವುಕವಾಗಿ ಸಿರಾಜ್‌ ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: 10.75 ಕೋಟಿ ಬಿಡ್‌ – ಅಭಿಮಾನಿಗಳ ಮನವಿಗೆ ಭುವಿ ಖರೀದಿ ಎಂದ ಆರ್‌ಸಿಬಿ

    ಗುಜರಾತ್ ಟೈಟಾನ್ಸ್ 12.25 ಕೋಟಿ ರೂ.ಗೆ ವೇಗದ ಬೌಲರ್ ಅನ್ನು ಖರೀದಿಸಿದೆ. ಹರಾಜಿನ ವೇಳೆ RCB ರೈಟ್ ಟು ಮ್ಯಾಚ್ ಕಾರ್ಡ್ ಅನ್ನು ಸಹ ಬಳಸಲಿಲ್ಲ. ಇದರಿಂದಾಗಿ ವೇಗಿ ಟೈಟಾನ್ಸ್ ಸೇರಲು ಅವಕಾಶ ಮಾಡಿಕೊಟ್ಟಿತು.

    ಸಿರಾಜ್ ಆರ್‌ಸಿಬಿ ಪರ 87 ಪಂದ್ಯಗಳನ್ನು ಆಡಿದ್ದು, ಐಪಿಎಲ್‌ನಲ್ಲಿ 83 ವಿಕೆಟ್ ಕಿತ್ತಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದ್ದರು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಿದಾಗ RCB ಯಲ್ಲಿ ಗಮನ ಸೆಳೆದಿದ್ದರು.

  • 1,000 ಕೋಟಿಗೆ RCB ಫ್ರಾಂಚೈಸಿ ಖರೀದಿಸಲು ಪ್ಲ್ಯಾನ್‌; ಮಂಡ್ಯದಲ್ಲಿ ಸದ್ದು ಮಾಡ್ತಿದೆ ಫ್ಯಾನ್ಸ್‌ ಪೋಸ್ಟರ್‌

    1,000 ಕೋಟಿಗೆ RCB ಫ್ರಾಂಚೈಸಿ ಖರೀದಿಸಲು ಪ್ಲ್ಯಾನ್‌; ಮಂಡ್ಯದಲ್ಲಿ ಸದ್ದು ಮಾಡ್ತಿದೆ ಫ್ಯಾನ್ಸ್‌ ಪೋಸ್ಟರ್‌

    ಮಂಡ್ಯ: 2025ರ ಐಪಿಎಲ್‌ ಮೆಗಾ ಹರಾಜಿನಲ್ಲಿ (IPL Mega Auction) ಆರ್‌ಸಿಬಿ ತಂಡದ ಆಯ್ಕೆಯ ಕುರಿತು ಅಭಿಮಾನಿಗಳು ಭಾರಿ ಅಸಮಾಧಾನ ಹೊರಹಾಕಿದ್ದಾರೆ. 17 ಆವೃತ್ತಿ ಕಳೆದರೂ ಒಂದು ಬಾರಿಯೂ ಟ್ರೋಫಿ ಗೆಲ್ಲದ ಆರ್‌ಸಿಬಿ (RCB) ಈ ಬಾರಿ ತಂಡದ ಆಯ್ಕೆಯಲ್ಲಿ ಭಾರಿ ಯಡವಟ್ಟು ಮಾಡಿಕೊಂಡಿದೆ ಎಂದು ಫ್ರಾಚೈಸಿ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಆರ್‌ಸಿಬಿ ತಂಡವನ್ನು ಅಭಿಮಾನಿಗಳೇ (RCB Fans) ಖರೀದಿ ಮಾಡಲಿದ್ದಾರೆ ಅನ್ನೋ‌ ಕೂಗು ತಲೆ ಎತ್ತಿದೆ.

    ಹೌದು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ALL INDIA RCB TEAM FAN’S ASSOCIATION ಸಂಘದಿಂದ ಆರ್‌ಸಿಬಿ ತಂಡವನ್ನು ಖರೀದಿ ಮಾಡುವ ಗುರಿ ಹೊಂದಲಾಗಿದೆ ಎಂದು ಅಭಿಮಾನಿಗಳು ಪೋಸ್ಟರ್‌ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಜಾಲತಾಣದಲ್ಲಿ ಸಖತ್‌ ಸದ್ದು ಮಾಡ್ತಿದೆ. ʻಟೀಮೂ ನಮ್ಮದೇ, ಕಪ್ಪೂ ನಮ್ಮದೇʼ ಅನ್ನೋ ಧ್ಯೇಯ ವಾಕ್ಯದೊಂದಿಗೆ ಆರ್‌ಸಿಬಿ ಮಾಲೀಕತ್ವ ಪಡೆಯುತ್ತಾರಂತೆ. ಇದು ಅಸಾಧ್ಯವಾದ್ರೂ ಪೋಸ್ಟರ್‌ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇದನ್ನೂ ಓದಿ:  ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – 13ನೇ ವರ್ಷದಲ್ಲೇ ಕೋಟ್ಯಧಿಪತಿ

    ಅಸೋಸಿಯೇಷನ್‌ನ ಧ್ಯೇಯೋದ್ದೇಶ ಏನು?
    * ಹಾಲಿ ಆರ್‌ಸಿಬಿ ಮಾಲೀಕರಿಂದ ತಂಡವನ್ನು ಅಭಿಮಾನಿಗಳ ಸಂಘಕ್ಕೆ ಖರೀದಿ ಮಾಡಿಕೊಳ್ಳುವ ಮಹತ್ವದ ಗುರಿ!
    * 10 ಲಕ್ಷ ಅಭಿಮಾನಿಗಳಿಂದ ತಲಾ 10,000 ರೂ. ಹಣವನ್ನು ಶೇರಿನ ರೂಪದಲ್ಲಿ ಸಂಗ್ರಹಿಸುವ ಮೂಲಕ 1,000 ಕೋಟಿ ರೂ. ಹಣ ಸಂಗ್ರಹ ಗುರಿ
    * ಸಂಗ್ರಹವಾದ ಹಣದಿಂದ ಆರ್‌ಸಿಬಿ ಮಾಲೀಕತ್ವವನ್ನು ಅಭಿಮಾನಿಗಳ ಸಂಘವೇ ಖರೀದಿಸಿ ತಂಡದಲ್ಲಿ ಯಾವ ಆಟಗಾರರನ್ನು ಆಡಿಸಬೇಕು ಅನ್ನೋದನ್ನ ಅಭಿಮಾನಿಗಳೇ ವೋಟ್‌ ಮೂಲಕ ಆಯ್ಕೆ ಮಾಡಲು ಪ್ಲ್ಯಾನ್‌. ನಿಯಮದಂತೆ ಬಿಡ್ಡಿಂಗ್‌ನಲ್ಲಿ ಆಟಗಾರರ ಆಯ್ಕೆ.
    * ಅಭಿಮಾನಿಗಳ ಸಂಘಷ 1 ಲಕ್ಷ ಸದಸ್ಯರಲ್ಲಿ 10 ಮಂದಿಯನ್ನು 2 ವರ್ಷಕ್ಕೊಮ್ಮೆ ಚುನಾವಣೆ ಮೂಲಕ ಆಯ್ಕೆ ಮಾಡಿ, ಬಿಡ್ಡಿಂಗ್‌ ಮಾಡುವ ಅಧಿಕಾರ ನೀಡುವುದು.
    * ಸಂಘದ ಪ್ರತಿ ಸದಸ್ಯರಿಗೂ ಒಂದು ಬಾರಿ ಆರ್‌ಸಿಬಿ ಆಡುವ ಯಾವುದಾರೂ ಒಂದು ಪಂದ್ಯ ವೀಕ್ಷಿಸಲು ಅವಕಾಶ ನೀಡಲಾಗುವುದು.

    18ನೇ ಸೀಸನ್‌ನ ಐಪಿಎಲ್ ಆಟಗಾರರ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಿತು. 1,000ಕ್ಕೂ ಹೆಚ್ಚು ಆಟಗಾರರಲ್ಲಿ 577 ಆಟಗಾರರನ್ನ ಶಾರ್ಟ್‌ಲಿಸ್ಟ್‌ ಮಾಡಲಾಗಿತ್ತು. ಇದರಲ್ಲಿ 367 ಭಾರತೀಯ ಮತ್ತು 210 ವಿದೇಶಿ ಆಟಗಾರರಿದ್ದರು. ಆದ್ರೆ ಐಪಿಎಲ್ 2025ಕ್ಕೆ ಒಟ್ಟು 204 ಆಟಗಾರರನ್ನ ಮಾತ್ರ ಖರೀದಿಸಲು ಅವಕಾಶವಿತ್ತು. ಇದರಲ್ಲಿ 70 ವಿದೇಶಿ ಆಟಗಾರರು ಸೇರಿದ್ದಾರೆ. ಆದ್ರೆ 2 ದಿನ ನಡೆದ ಹರಾಜಿನಲ್ಲಿ 62 ವಿದೇಶಿ ಆಟಗಾರರು ಸೇರಿ ಒಟ್ಟು 182 ಆಟಗಾರರು ಮಾತ್ರ ಹರಾಜಾದರು. ಇದನ್ನೂ ಓದಿ: 10.75 ಕೋಟಿ ಬಿಡ್‌ – ಅಭಿಮಾನಿಗಳ ಮನವಿಗೆ ಭುವಿ ಖರೀದಿ ಎಂದ ಆರ್‌ಸಿಬಿ

    ಇಲ್ಲಿ ಆರ್‌ಸಿಬಿ ಬೇರೆ ತಂಡಗಳು ಬಿಟ್ಟ ಆಟಗಾರರನ್ನ ಹೆಚ್ಚು ಹಣ ಕೊಟ್ಟು ತಗೊಂಡಿದೆ. ಅಚ್ಚರಿ ಅಂದ್ರೆ ಹೊಸಬರನ್ನೂ ಕೋಟಿ ಕೊಟ್ಟು ಬಿಡ್ ಮಾಡಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಫೇಮಸ್ ತಂಡ. 17 ಸೀಸನ್ ಆಡಿದ್ರೂ ಒಂದು ಸಲನೂ ಕಪ್ ಗೆದ್ದಿಲ್ಲ. ಮೂರು ಸಲ ರನ್ನರ್ ಅಪ್ ಆಗಿದ್ದೆ ಇದುವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. 18ನೇ ಐಪಿಎಲ್‌ಗೆ ರೆಡಿಯಾಗ್ತಿರೋ ಆರ್‌ಸಿಬಿ, ಹರಾಜಿಗೆ ಮುಂಚೆ ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಮತ್ತು ಯಶ್ ದಯಾಳ್‌ರನ್ನ ಮಾತ್ರ ಉಳಿಸಿಕೊಂಡಿತ್ತು. ಇದನ್ನೂ ಓದಿ: ಸಿಎಸ್‌ಕೆಗೆ ಆರ್‌.ಅಶ್ವಿನ್‌ ವಾಪಸ್‌; 9.75 ಕೋಟಿಗೆ ಹರಾಜು – ರಚಿನ್‌ ರವೀಂದ್ರ 4 ಕೋಟಿಗೆ ಸೇಲ್‌

    ವಿಲ್ ಜಾಕ್ಸ್, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್‌ರನ್ನ ಬಿಟ್ಟು ಅಚ್ಚರಿ ಮೂಡಿಸಿತ್ತು. ಇವರಲ್ಲಿ ಕನಿಷ್ಠ ಇಬ್ಬರನ್ನಾದ್ರೂ ಆರ್‌ಟಿಎಂ ಮೂಲಕ ಉಳಿಸಿಕೊಳ್ಳಲಿದೆ ಅಂತ ಫ್ಯಾನ್ಸ್ ಅಂದುಕೊಂಡಿದ್ರು. ಅಲ್ಲದೇ ಕೆ.ಎಲ್‌ ರಾಹುಲ್‌ ಅವರನ್ನ ಬಿಡ್ಡಿಂಗ್‌ ಮಾಡುವ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆದ್ರೆ ರಾಹುಲ್‌ ಅವರನ್ನು ಖರೀದಿಸದ ಫ್ರಾಂಚೈಸಿ ಜಿತೇಶ್‌ ಶರ್ಮಾರನ್ನ 11 ಕೋಟಿ ರೂ.ಗೆ ಖರೀದಿ ಮಾಡಿತು. ಆದ್ರೆ ಕಳೆದ ಬಾರಿ ಸ್ಫೋಟಕ ಪ್ರದರ್ಶನ ನೀಡಿದ ವಿಲ್‌ ಜಾಕ್ಸ್‌ ಖರೀದಿಗೆ ಆರ್‌ಟಿಎಂ ಬಳಸುವ ಅವಕಾಶವಿದ್ದರೂ ಆರ್‌ಸಿಬಿ ಆ ಆಯ್ಕೆಯನ್ನು ಬಳಸದೇ ಮುಂಬೈಗೆ ಬಿಟ್ಟುಕೊಟ್ಟಿತು. ಇದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: IPL Mega Auction | 14 ಕೋಟಿಗೆ ಡೆಲ್ಲಿ ಪಾಲಾದ ರಾಹುಲ್‌ – ಆರ್‌ಸಿಬಿ ಫ್ಯಾನ್ಸ್‌ಗೆ ಭಾರಿ ನಿರಾಸೆ