Tag: rcb

  • ಸ್ಟಾರ್ಕ್‌ಗೆ ಒಂದೇ ಓವರ್‌ನಲ್ಲಿ 30 ರನ್‌ ಚಚ್ಚಿದ ಸಾಲ್ಟ್‌ – ಹುಚ್ಚೆದ್ದು ಕುಣಿದ RCB ಫ್ಯಾನ್ಸ್‌

    ಸ್ಟಾರ್ಕ್‌ಗೆ ಒಂದೇ ಓವರ್‌ನಲ್ಲಿ 30 ರನ್‌ ಚಚ್ಚಿದ ಸಾಲ್ಟ್‌ – ಹುಚ್ಚೆದ್ದು ಕುಣಿದ RCB ಫ್ಯಾನ್ಸ್‌

    ಬೆಂಗಳೂರು:‌ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಆರಂಭಿಕ ಆಟ ಇಂದು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

    ಹೌದು. ಡೆಲ್ಲಿ ವಿರುದ್ಧ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ (Phil Salt) 3ನೇ ಓವರ್‌ನಲ್ಲಿ ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ಗೆ (Mitchell Starc) 30 ರನ್‌ ಚಚ್ಚಿದರು. ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿದ ಸಾಲ್ಟ್‌, ಬಳಿಕ 4, 4, ನೋಬಾಲ್‌+4, 6, 1LB, 4LB ಬಾರಿಸುವ ಮೂಲಕ ಒಂದೇ ಓವರ್‌ನಲ್ಲಿ 30 ರನ್‌ ಬಾರಿಸಿದ್ರು, ಫಿಲ್‌ ಸಾಲ್ಟ್‌ ಅವರ ಈ ಆಟ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

    ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಆರ್‌ಸಿಬಿ ತಂಡಕ್ಕೆ ಸಾಕಷ್ಟು ಟ್ರೆಂಡ್‌ ಇದೆ. ಇಲ್ಲಿಯವರೆಗೂ ಒಂದೇ ಒಂದು ಬಾರಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ಆರ್‌ಸಿಬಿ, ಇತರೆ ಎಲ್ಲಾ ತಂಡಗಳಿಗಿಂತಲೂ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನ ಹೊಂದಿದೆ.

    ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಕೋಟ್ಯಂತರ ಫಾಲೋವರ್ಸ್ ಇದ್ದಾರೆ. ಪಂದ್ಯ ಗೆದ್ದರೂ, ಸೋತರೂ ಆರ್‌ಸಿಬಿ ತಂಡವನ್ನ ಬೆಂಬಲಿಸುವ ಪ್ರಾಮಾಣಿಕ ಅಭಿಮಾನಿಗಳು (RCB Fans) ಇವರಾಗಿದ್ದಾರೆ. ಆರ್‌ಸಿಬಿ… ಆರ್‌ಸಿಬಿ ಎಂದು ಕೂಗುತ್ತಾ ಆಟಗಾರರನ್ನು ಹುರಿದುಂಬಿಸುತ್ತಾರೆ. ಅದೇ ರೀತಿ ಫ್ಯಾನ್ಸ್‌ ಫಿಲ್‌ ಸಾಲ್ಟ್‌ ಅವರನ್ನು ಹುರಿದುಂಬಿಸುತ್ತಿದ್ದರು. ಆದ್ರೆ 4ನೇ ಓವರ್‌ನ 5ನೇ ಎಸೆತದಲ್ಲಿ ಅನಗತ್ಯ ರನ್‌ ಕದಿಯಲು ಯತ್ನಿಸಿ ಸಾಲ್ಟ್‌ ರನೌಟ್‌ಗೆ ತುತ್ತಾದರು.

  • IPL 2025 – ಜಿಯೋದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಚಿತ ಇಂಟರ್ನೆಟ್

    IPL 2025 – ಜಿಯೋದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಚಿತ ಇಂಟರ್ನೆಟ್

    ಬೆಂಗಳೂರು: ಐಪಿಎಲ್ (IPL 2025) ಪಂದ್ಯಗಳು ನಡೆಯುತ್ತಿರುವ ಮೈದಾನಗಳಲ್ಲಿ ಜಿಯೋದಿಂದ (Jio) ಉಚಿತ ಮೊಬೈಲ್ ಇಂಟರ್ನೆಟ್ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ (M.Chinnaswamy Stadium) ಮೈದಾನದಲ್ಲೂ ಉಚಿತ ಸೇವೆ ಲಭ್ಯವಿದ್ದು, ಅದಕ್ಕಾಗಿಯೇ ಜಿಯೋ 2000 ಬೂಸ್ಟರ್‌ ಸೆಲ್‌ಗಳನ್ನು ಅಳವಡಿಸಿದೆ. ಪ್ರೇಕ್ಷಕರು ವೈಫೈ ಆನ್ ಮಾಡಿ, ಮೊಬೈಲ್ ಸಂಖ್ಯೆ ನಮೂದಿಸಿ, ಬರುವ ಒಟಿಪಿಯನ್ನು ಹಾಕಿದರೆ, ಉಚಿತ ಇಂಟರ್ನೆಟ್‌ ಪಡೆಯಬಹುದಾಗಿದೆ.

    ಇಂದು (ಏ.10) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ- ಡೆಲ್ಲಿ ಕ್ಯಾಪಿಟಲ್ಸ್ ನಡುವೆ 24ನೇ ಪಂದ್ಯ ನಡೆಯಲಿದೆ. ​ಸದ್ಯ ಈ ಐಪಿಎಲ್​ನಲ್ಲಿ 3 ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್​ ಮೂರರಲ್ಲೂ ವಿಜಯ ಸಾಧಿಸಿ ಟಾಪ್​ನಲ್ಲಿದೆ. ಆರ್​ಸಿಬಿ 4 ಪಂದ್ಯಗಳನ್ನ ಆಡಿ ಒಂದರಲ್ಲಿ ಮಾತ್ರ ಸೋಲು ಕಂಡಿದೆ. ಇದನ್ನೂ ಓದಿ: 159ಕ್ಕೆ ರಾಜಸ್ಥಾನ್‌ ಆಲೌಟ್‌; ಗುಜರಾತ್‌ಗೆ 58 ರನ್‌ಗಳ ಭರ್ಜರಿ ಜಯ

    ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಜೊತೆ ಮ್ಯಾಚ್ ಆಡಿದಾಗೆಲ್ಲಾ ಹೆಚ್ಚು ಬಾರಿ ಬೆಂಗಳೂರು ತಂಡವೇ ಜಯಗಳಿಸಿದೆ. ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಇದುವರೆಗೆ 31 ಐಪಿಎಲ್​ ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಆರ್​ಸಿಬಿ 19 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ಡೆಲ್ಲಿ ತಂಡ ಕೇವಲ 11 ರಲ್ಲಿ ಜಯಗಳಿಸಿದೆ. ಇದರಲ್ಲಿ 12 ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದಿವೆ. ಈ 12 ರಲ್ಲಿ 7 ಪಂದ್ಯಗಳಲ್ಲಿ ಆರ್​ಸಿಬಿ ಜಯ ಸಾಧಿಸಿದೆ. ಇದನ್ನೂ ಓದಿ: ಐಪಿಎಲ್ 2025: ಪಂಜಾಬ್ ಆಲ್‌ರೌಂಡರ್ ಮ್ಯಾಕ್ಸ್‌ವೆಲ್‌ಗೆ ಪಂದ್ಯದ 25% ದಂಡ

  • ಆರ್‌ಸಿಬಿ ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ!

    ಆರ್‌ಸಿಬಿ ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ!

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ. ಗೆದ್ದ ಮೂರು ಗೆಲುವು ಸಾಮಾನ್ಯ ಗೆಲುವಲ್ಲ.

    ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ನಲ್ಲಿ 2019ರ ಬಳಿಕ ಗೆದ್ದಿರಲಿಲ್ಲ. ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ 2008ರ ಮೊದಲ ಐಪಿಎಲ್‌ ಆವೃತ್ತಿಯ ಬಳಿಕ ಆರ್‌ಸಿಬಿಗೆ ಇಲ್ಲಿ ಗೆಲುವು ದಕ್ಕಿರಲಿಲ್ಲ. ಮುಂಬೈನಲ್ಲಿ ಆರ್‌ಸಿಬಿ ಕೊನೆಯ ಬಾರಿ ಗೆದ್ದಿದ್ದು 2015 ರಲ್ಲಿ. ಆದರೆ ಈ ಬಾರಿ ಮೂರು ಪ್ರತಿಷ್ಠಿತ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ. ಇದನ್ನೂ ಓದಿ: ಪಾಂಡ್ಯ ಪರಾಕ್ರಮ ವ್ಯರ್ಥ, ಮುಂಬೈ ಭದ್ರಕೋಟೆ ಛಿದ್ರ – ಆರ್‌ಸಿಬಿಗೆ 12 ರನ್‌ಗಳ ರೋಚಕ ಜಯ

    ಮೊದಲ ಪಂದ್ಯದಲ್ಲಿ ಕೋಲ್ಕತ್ತಾ (KKR) ವಿರುದ್ಧ 7 ವಿಕೆಟ್‌ಗಳಿಂದ ಗೆದ್ದ ಆರ್‌ಸಿಬಿ ಎರಡನೇ ಪಂದ್ಯದಲ್ಲಿ ಚೆನ್ನೈ (CSK) ವಿರುದ್ಧ 50 ರನ್‌ಗಳಿಂದ ಗೆದ್ದು ಬೀಗಿತ್ತು. ಮೂರನೇ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ (GT) ವಿರುದ್ಧ ಆರ್‌ಸಿಬಿ ಸೋತಿತ್ತು. ಈಗ ಮುಂಬೈ (MI) ವಿರುದ್ಧ ನಡೆದ ನಾಲ್ಕನೇ ಪಂದ್ಯದಲ್ಲಿ ರೋಚಕ 12 ರನ್‌ ಗಳಿಂದ ಗೆದ್ದು ಬೀಗಿದೆ. ಇದನ್ನೂ ಓದಿ: New Zealand v/s Pakistan – ಕ್ರಿಕೆಟ್ ಪಂದ್ಯದ ವೇಳೆಯೇ ಗ್ರೌಂಡ್‌ನಲ್ಲಿ ಪವರ್‌ಕಟ್; ಮುಂದೇನಾಯ್ತು?

    ಚೆನ್ನೈ ಮತ್ತು ಮುಂಬೈ ವಿರುದ್ಧದ ಪಂದ್ಯದಲ್ಲಿ ಉತ್ತಮ ಆಟವಾಡಿದ ನಾಯಕ ರಜತ್‌ ಪಾಟಿದರ್‌ (Rajat Patidar) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವುದು ವಿಶೇಷ. ಚೆನ್ನೈ ವಿರುದ್ಧ ರಜತ್‌ ಪಟೀದಾರ್‌ 51 ರನ್‌(32 ಎಸೆತ, 4 ಬೌಂಡರಿ, 3 ಸಿಕ್ಸ್‌) ಹೊಡೆದರೆ ಮುಂಬೈ ವಿರುದ್ಧ 64 ರನ್‌ (32 ಎಸೆತ, 5 ಬೌಂಡರಿ, 4 ಸಿಕ್ಸ್‌) ಚಚ್ಚಿದ್ದರು.

     

     

    ಸೋಮವಾರ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 221 ರನ್‌ ಬಾರಿಸಿತ್ತು. 222 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಮುಂದೆ ಆರ್‌ಸಿಬಿ ಏ.10 ರಂದು ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಾದಾಡಲಿದೆ.

    ಅಂಕಪಟ್ಟಿಯಲ್ಲಿ ಆರ್‌ಸಿಬಿ 6 ಅಂಕ ಸಂಪಾದಿಸಿದರೂ ನೆಟ್‌ ರನ್‌ ರೇಟ್‌ನಲ್ಲಿ ಹಿಂದಿರುವ ಕಾರಣ ಮೂರನೇ ಸ್ಥಾನದಲ್ಲಿದೆ. ಆಡಿರುವ ಮೂರು ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಸ್ಥಾನದಲ್ಲಿದ್ದರೆ 4 ಪಂದ್ಯವಾಡಿ ಮೂರರಲ್ಲಿ ಜಯಗಳಿಸಿರುವ ಗುಜರಾತ್‌ ಎರಡನೇ ಸ್ಥಾನದಲ್ಲಿದೆ.

  • ಪಾಂಡ್ಯ ಪರಾಕ್ರಮ ವ್ಯರ್ಥ, ಮುಂಬೈ ಭದ್ರಕೋಟೆ ಛಿದ್ರ – ಆರ್‌ಸಿಬಿಗೆ 12 ರನ್‌ಗಳ ರೋಚಕ ಜಯ

    ಪಾಂಡ್ಯ ಪರಾಕ್ರಮ ವ್ಯರ್ಥ, ಮುಂಬೈ ಭದ್ರಕೋಟೆ ಛಿದ್ರ – ಆರ್‌ಸಿಬಿಗೆ 12 ರನ್‌ಗಳ ರೋಚಕ ಜಯ

    ಮುಂಬೈ: ಮುಂಬೈ ಭದ್ರಕೋಟೆ ವಾಂಖೆಡೆ ಕ್ರೀಡ ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಜಿದ್ದಾ ಜಿದ್ದಿ ಕಣದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ 10 ವರ್ಷಗಳ ಬಳಿಕ ಗೆಲುವು ಸಾಧಿಸಿದ್ದು, ಮುಂಬೈನ ಭದ್ರ ಕೋಟೆಯನ್ನ ಛಿದ್ರಗೊಳಿಸಿದೆ.

    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿಂದು ನಡೆದ ಪಂದ್ಯವು ಕೊನೆಯವರೆಗೂ ರೋಚಕವಾಗಿತ್ತು. ಕ್ಷಣಕ್ಷಣಕ್ಕೂ ಅಭಿಮಾನಿಗಳ ಎದೆಬಡಿತ ಹೆಚ್ಚಿಸುತ್ತಲೇ ಇತ್ತು. ಅತ್ತ ಉತ್ಸಾಹ ಕಳೆದುಕೊಳ್ಳದ ಉಭಯ ತಂಡಗಳ ಅಭಿಮಾನಿಗಳು ತಮ್ಮಿಷ್ಟದ ಆಟಗಾರರನ್ನ ಊರಿದುಂಬಿಸಿ ಘೋಷಣೆ ಕೂಗುತ್ತಲೇ ಇದ್ದರು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 5 ವಿಕೆಟ್‌ ನಷ್ಟಕ್ಕೆ 221 ರನ್‌ ಬಾರಿಸಿತ್ತು. 222 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    ಕೊನೇ ಓವರ್‌ ಥ್ರಿಲ್ಲರ್‌
    ಕೊನೇ ಓವರ್‌ನಲ್ಲಿ ಮುಂಬೈ ಗೆಲುವಿಗೆ 19 ರನ್‌ಗಳ ಅಗತ್ಯವಿತ್ತು. ಕೃನಾಲ್‌ ಪಾಂಡ್ಯ ಬೌಲಿಂಗ್‌ನಲ್ಲಿದ್ದರೆ, ಮಿಚೆಲ್‌ ಸ್ಯಾಂಟ್ನರ್‌ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತದಲ್ಲೇ ಸ್ಯಾಂಟ್ನರ್‌ ಸಿಕ್ಸರ್‌ ಸಿಡಿಸಲು ಪ್ರಯತ್ನಿಸಿ ಬೌಂಡರಿ ಲೈನ್‌ ಬಳಿ ಕ್ಯಾಚ್‌ ಕೊಟ್ಟರು. ಮರು ಎಸೆತದಲ್ಲಿ ದೀಪಕ್‌ ಚಹಾರ್‌ ಸಹ ಟಿಮ್‌ ಡೇವಿಡ್‌-ಫಿಲ್‌ ಸಾಲ್ಟ್‌ ಅವರ ಸ್ಟನ್ನಿಂಗ್‌ ಕ್ಯಾಚ್‌ಗೆ ವಿಕೆಟ್‌ ಒಪ್ಪಿಸಬೇಕಾಯಿತು. ಅಲ್ಲಿಗೆ ಮುಂಬೈ ಗೆಲುವಿನ ಆಸೆ ಕಮರಿತು. 3ನೇ ಎಸೆತದಲ್ಲಿ 1 ರನ್‌ ಸೇರ್ಪಡೆಯಾಯಿತು. 4ನೇ ಎಸೆತದಲ್ಲಿ ನಮನ್‌ ಧೀರ್‌ ಬೌಂಡರಿ ಬಾರಿಸಿದರು. ಇನ್ನೂ 5ನೇ ಎಸೆತದಲ್ಲಿ ನಮನ್‌ ಕ್ಯಾಚ್‌ ನೀಡಿದ್ರೆ, ಕೊನೆಯ ಎಸೆತದಲ್ಲಿ ಯಾವುದೇ ರನ್‌ ಬರದ ಕಾರಣ ಆರ್‌ಸಿಬಿ 12 ರನ್‌ ಗೆಲುವು ಸಾಧಿಸಿರು.

    ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    ಹಾರ್ದಿಕ್‌ ಪಾಂಡ್ಯ ಹಾಗೂ ತಿಲಕ್‌ ವರ್ಮಾ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟಿತ್ತು. ಆದ್ರೆ ಸ್ಫೋಟಕ ಆಟವಾಡುತ್ತಿದ್ದ ತಿಲಕ್‌ ವರ್ಮಾ 18ನೇ ಓವರ್‌ನ 4ನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಪ್ರಯತ್ನಿಸಿ ಕ್ಯಾಚ್‌ ನೀಡಿ ಔಟಾದರು. ಬಳಿಕ 19ನೇ ಓವರ್‌ನ ಮೊದಲ ಎಸೆತದಲ್ಲೇ ಹಾರ್ದಿಕ್‌ ಪಾಂಡ್ಯ ಸಹ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು. ಇದು ರನ್‌ ಮೇಲೆ ಪರಿಣಾಮ ಬೀರಿತು.

    222 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ ಹಾಗೂ ವಿಲ್‌ ಜಾಕ್ಸ್‌ ಅವರ ನಿಧಾನಗತಿಯ ಬ್ಯಾಟಿಂಗ್‌ನಿಂದ ಸಂಕಷ್ಟ ಎದುರಾಗಿತ್ತು. 12 ಓವರ್‌ ಮುಕ್ತಾಯಗೊಂಡರೂ 100 ರನ್‌ಗಳ ಗಡಿಯೂ ದಾಟಿರಲಿಲ್ಲ. ಇದರಿಂದ ಮುಂಬೈ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ತಿಲಕ್‌ ವರ್ಮಾ ಅವರ ಸ್ಫೋಟಕ ಆಟ ಮತ್ತೆ ಮುಂಬೈ ಇಂಡಿಯನ್ಸ್‌ಗೆ ಜೀವ ತುಂಬಿತ್ತು. ಇವರಿಬ್ಬರ ವಿಕೆಟ್‌ ಬೀಳುತ್ತಿದ್ದಂತೆ ಗೆಲುವಿನ ಆಸೆ ನುಚ್ಚುನೂರಾಯ್ತು.

    ಮುಂಬೈ ಪರ ಹಾರ್ದಿಕ್‌ ಪಾಂಡ್ಯ 42 ರನ್‌ (15 ಎಸೆತ, 4 ಸಿಕ್ಸರ್‌, 3 ಬೌಂಡರಿ), ತಿಲಕ್‌ ವರ್ಮಾ 56 ರನ್‌ (29 ಎಸೆತ, 4 ಸಿಕ್ಸರ್‌, 45 ಬೌಂಡರಿ) ಗಳಿಸಿದ್ರೆ, ಸೂರ್ಯಕುಮಾರ್‌ ಯಾದವ್‌ 28 ರನ್‌, ವಿಲ್‌ ಜಾಕ್ಸ್‌ 22 ರನ್‌, ರೋಹಿತ್‌ ಶರ್ಮಾ, ರಿಕಲ್ಟನ್‌ ತಲಾ 17 ರನ್‌ ಗಳಿಸಿದ್ರೆ, ಮಿಚೆಲ್‌ ಸ್ಯಾಂಟ್ನರ್‌ 8 ರನ್‌, ಬೋಲ್ಟ್‌ 1 ರನ್‌ ಗಳಿಸಿದರು. ಆರ್‌ಸಿಬಿ ಪರ ಕೃನಾಲ್‌ ಪಾಂಡ್ಯ 4 ವಿಕೆಟ್‌ ಕಿತ್ತರೆ, ಯಶ್‌ ದಯಾಳ್‌, ಜೋಶ್‌ ಹೇಜಲ್ವುಡ್‌ ತಲಾ 2 ವಿಕೆಟ್‌, ಭುವನೇಶ್ವರ್‌ ಕುಮಾರ್‌ 1 ವಿಕೆಟ್‌ ಕಿತ್ತರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು‌ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಮುಂಬೈ ಬೌಲರ್‌ಗಳ ವಿರುದ್ಧ ಪರಾಕ್ರಮ ಮೆರೆಯಿತು. ಅತ್ತ ವಿಕೆಟ್‌ ಬೀಳುತ್ತಿದ್ದರೂ ಇತ್ತ ವಿರಾಟ್‌ ಕೊಹ್ಲಿ, ರಜತ್‌ ಪಾಟೀದಾರ್‌, ಜಿತೇಶ್‌ ಶರ್ಮಾ ಅವರ ಬ್ಯಾಟಿಂಗ್‌ ಆರ್ಭಟ ಮುಂದುವರಿಯುತ್ತಲೇ ಸಾಗಿತು.

    ಅಬ್ಬರಿಸಿ ಬೊಬ್ಬರಿದ ಆರ್‌ಸಿಬಿ
    ಆರ್‌ಸಿಬಿ ಪರ ಆರಂಭಿಕ ಆಟಗಾರ ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ ಗಳಿಸಿದರು. 42 ಎಸೆತಗಳಲ್ಲಿ 67 ರನ್‌ (8 ಬೌಂಡರಿ, 2 ಸಿಕ್ಸರ್‌) ಗಳಿಸಿದ್ರೆ, 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ರಜತ್‌ ಪಾಟೀದಾರ್‌ 32 ಎಸೆತಗಳಲ್ಲಿ ಸ್ಪೋಟಕ 64 ರನ್‌ (5 ಬೌಂಡರಿ, 4 ಸಿಕ್ಸರ್‌) ಚಚ್ಚಿದರು. ಇನ್ನೂ 11 ಕೋಟಿ ಮೊತ್ತಕ್ಕೆ ಆರ್‌ಸಿಬಿ ಪಾಲಾದ ಜಿತೇಶ್‌ ಶರ್ಮಾ 19 ಎಸೆತಗಳಲ್ಲಿ ಸ್ಫೋಟಕ 40 ರನ್‌ (4 ಸಿಕ್ಸರ್‌, 2 ಬೌಂಡರಿ) ಸಿಡಿಸುವ ಮೂಲಕ ತಂಡದ ಮೊತ್ತ 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ದೇವದತ್‌ ಪಡಿಕಲ್‌ 37 ರನ್‌, ಫಿಲ್‌ ಸಾಲ್ಟ್‌ 4 ರನ್‌, ಟಿಮ್‌ ಡೇವಿಡ್‌ 1 ರನ್‌ ಗಳಿಸಿ ಮಿಂಚಿದರು.

  • ಮುಂಬೈಗೆ ಮರಳಿದ ಬುಮ್ರಾ – ಆರ್‌ಸಿಬಿಗೆ ಶುರುವಾಯ್ತು ಟೆನ್ಶನ್‌

    ಮುಂಬೈಗೆ ಮರಳಿದ ಬುಮ್ರಾ – ಆರ್‌ಸಿಬಿಗೆ ಶುರುವಾಯ್ತು ಟೆನ್ಶನ್‌

    ಮುಂಬೈ: ಗಾಯದ ಸಮಸ್ಯೆಯಿಂದ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರೀತ್‌ ಬುಮ್ರಾ (Jasprit Bumrah) ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳಿದ್ದಾರೆ. ಬುಮ್ರಾ ಆಗಮನದ ಸಂತಸ ಸುದ್ದಿಯನ್ನು ಮುಂಬೈ ಇಂಡಿಯನ್ಸ್‌ (Mumbai Indians) ತಂಡ ಖಚಿತಪಡಿಸಿದ್ದು, ತನ್ನ ಎಕ್ಸ್‌ ಖಾತೆಯಲ್ಲಿ ʻThe King of the jungle is back in his kingdomʼ ಎಂದು ಮಾಹಿತಿ ಹಂಚಿಕೊಂಡಿದೆ.

    ಕಳೆದ ವರ್ಷ ಸಿಡ್ನಿಯಲ್ಲಿ ಆಸ್ಪ್ರೇಲಿಯಾ ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ 5ನೇ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ಬುಮ್ರಾ, ಆಸೀಸ್‌ನ ದ್ವಿತೀಯ ಇನಿಂಗ್ಸ್‌ ವೇಳೆ ಬೌಲಿಂಗ್‌ ಮಾಡಿರಲಿಲ್ಲ. ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಒಟ್ಟು 32 ವಿಕೆಟ್‌ ಪಡೆದ ನಂತರ ಬುಮ್ರಾ, ಸ್ಪರ್ಧೆಯಿಂದ ಹೊರಗಿದ್ದರು. ಹೀಗಾಗಿ ಚಾಂಪಿಯನ್ಸ್‌ ಟ್ರೋಫಿಯಲ್ಲೂ ಭಾಗವಹಿಸಿರಲಿಲ್ಲ. ಇದೀಗ ಬುಮ್ರಾ ಮುಂಬೈ ತಂಡಕ್ಕೆ ವಾಪಸ್‌ ಆಗಿದ್ದಾರೆ. ನಾಳೆ ಆರ್‌ಸಿಬಿ ವಿರುದ್ಧ ನಡೆಯುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.

    ಜಸ್ಪ್ರೀತ್‌ ಬುಮ್ರಾ ಪುನರಾಗಮನದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆನೆ ಬಲ ಬಂದಂತಾಗಿದ್ದು, ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಬುಮ್ರಾ ಬಿಸಿಸಿಐ (BCCI) ತರಬೇತಿ ಕೇಂದ್ರದಲ್ಲಿ ಚೇತರಿಸಿಕೊಳ್ಳುತ್ತಿದರು. ಹೀಗಾಗಿ ಹಾಲಿ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಆಡಿರಲಿಲ್ಲ. ಅವರ ಮರಳುವಿಕೆಗಾಗಿ ಹಾರ್ದಿಕ್‌ ಪಾಂಡ್ಯ ಪಡೆ ಕಾತರದಿಂದ ಕಾಯುತ್ತಿತ್ತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಟಾಸ್ ಸಂದರ್ಭದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡುತ್ತಾ, ‘ಜಸ್ಪ್ರೀತ್‌ ಬುಮ್ರಾ ಬೇಗನೆ ಹಿಂತಿರುಗಬೇಕುʼ ಎಂದು ಹೇಳಿದ್ದರು. ಅವರ ಆ ಮಾತು ಈಗ ನಿಜವಾಗಿದೆ.

    ಬುಮ್ರಾ ಮರಳಿ ಬಂದಿರುವುದು ಮುಂಬೈ ಇಂಡಿಯನ್ಸ್‌ಗೆ ಸಹಾಯವಾಗಲಿದೆ. ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಇದೀಗ ಬುಮ್ರಾ ಆಗಮನ ತಂಡದ ಬೌಲಿಂಗ್‌ ವಿಭಾಗವನ್ನು ಇನ್ನಷ್ಟು ಬಲಪಡಿಸಲಿದೆ. ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಬುಮ್ರಾ, ಕಠಿಣ ಸಂದರ್ಭಗಳಲ್ಲಿ ತನ್ನು ಬೌಲಿಂಗ್‌ ಮೂಲಕವೇ ತಂಡಕ್ಕೆ ಜಯ ತಂದಕೊಡುವ ಸಾಮರ್ಥ್ಯ ಹೊಂದಿದ್ದಾರೆ.

    ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ:
    ಮುಂಬೈ ಇಂಡಿಯನ್ಸ್ ತಂಡ ಸೋಮವಾರ (ಏ.7) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತವರು ವಾಂಖೆಡೆ ಮೈದಾನದಲ್ಲಿ ಎದುರಿಸಲಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಪ್ಲೇಯಿಂಗ್‌-11 ಘೋಷಣೆಯಾದ ಬಳಿಕ ಖಚಿತಗೊಳ್ಳಲಿದೆ. ಒಂದು ವೇಳೆ ಬುಮ್ರಾ ಕಣಕ್ಕಿಳಿದ್ರೆ ಆರ್‌ಸಿಬಿಗೆ ಟಫ್‌ ಫೈಟ್‌ ಎದುರಾಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

    ಐಪಿಎಲ್ ಇತಿಹಾಸದಲ್ಲಿ ಲಸಿತ್ ಮಾಲಿಂಗ ನಂತರ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್‌ ಜಸ್ಪ್ರೀತ್ ಬುಮ್ರಾ.‌ 2013ರಲ್ಲಿ MI ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಬುಮ್ರಾ, 133 ಪಂದ್ಯಗಳಲ್ಲಿ 165 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

  • ಬಟ್ಲರ್‌ ಬೊಂಬಾಟ್‌ ಫಿಫ್ಟಿ; ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನ – ಗುಜರಾತ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ಬಟ್ಲರ್‌ ಬೊಂಬಾಟ್‌ ಫಿಫ್ಟಿ; ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನ – ಗುಜರಾತ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ಬೆಂಗಳೂರು: ಜೋಸ್‌ ಬಟ್ಲರ್‌ (Jos Buttler) ಬೊಂಬಾಟ್‌ ಅರ್ಧಶತಕ, ಮೊಹಮ್ಮದ್‌ ಸಿರಾಜ್‌ (Mohammed Siraj) ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಗುಜರಾತ್‌ ಟೈಟಾನ್ಸ್‌ (Gujarat Titans) 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್‌ ಗೆಲುವಿನ ಕನಸು ಕಂಡಿದ್ದ ಆರ್‌ಸಿಬಿ ಆಸೆಗೆ ತಣ್ಣೀರು ಎರಚಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್‌ ಗಳಿಸಿತ್ತು. 170 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್‌ ಟೈಟಾನ್ಸ್‌ 17.5 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 170 ರನ್‌ ಗಳಿಸಿ ಗೆಲುವು ಸಾಧಿಸಿತು.

    ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿದ ಗುಜರಾತ್‌ ಟೈಟಾನ್ಸ್‌ 4.4 ಓವರ್‌ಗಳಲ್ಲಿ 32 ರನ್‌ ಗಳಿಸಿದ್ದಾಲೇ ತನ್ನ ಮೊದಲ ವಿಕೆಟ್‌ ಕಳೆದುಕೊಂಡಿತು. ಈ ವೇಳೆ 2ನೇ ವಿಕೆಟ್‌ಗೆ ಜೊತೆಗೂಡಿದ ಸಾಯಿ ಸುದರ್ಶನ್‌ (Sai Sudharsan) ಹಾಗೂ ಜೋಸ್‌ ಬಟ್ಲರ್‌ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. 2ನೇ ವಿಕೆಟಿಗೆ ಈ ಜೋಡಿ 47 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟ ನೀಡಿತು. ಇದಾದ ಬಳಿಕ ಮುರಿಯದ 3ನೇ ವಿಕೆಟಿಗೆ ಬಟ್ಲರ್‌ – ರುದರ್ಫೋರ್ಡ್ 36 ರನ್‌ (32 ಎಸೆತ) ಜೊತೆಯಾಟದಿಂದ ಟೈಟಾನ್ಸ್‌ ಪಡೆ ಸುಲಭ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

    ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌:
    ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಜೋಸ್‌ ಬಟ್ಲರ್‌ 3ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರಿಸಿ ಬೊಬ್ಬರಿದರು. 31 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಹಿತ ಅರ್ಧಶತಕ ಸಿಡಿಸಿದ್ದ ಬಟ್ಲರ್‌ ಒಟ್ಟು 39 ಎಸೆತಗಳಲ್ಲಿ 73 ರನ್‌ (6 ಸಿಕ್ಸ್‌, 5 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಇದರೊಂದಿಗೆ ಆರಂಭಿಕ ಆಟಗಾರ ಸಾಯಿ ಸುದರ್ಶನ್‌ 49 ರನ್‌ (36 ಎಸೆತ, 7 ಬೌಂಡರಿ, 1 ಸಿಕ್ಸರ್‌), ಸ್ಫೋಟಕ ಪ್ರದರ್ಶನ ನೀಡಿದ ಶೆರ್ಫೇನ್ ರುದರ್ಫೋರ್ಡ್ 18 ಎಸೆತಗಳಲ್ಲಿ 30 ರನ್‌ (3 ಸಿಕ್ಸರ್, 1 ಬೌಂಡರಿ), ನಾಯಕ ಶುಭಮನ್‌ ಗಿಲ್‌ 14 ರನ್‌ ಕೊಡುಗೆ ನೀಡಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್‌ಗಳನ್ನು ಬಾರಿಸುವ ಮೂಲಕ ಗುಜರಾತ್‌ಗೆ 170 ಸಾಧಾರಣ ರನ್‌ಗಳ ಗುರಿ ನೀಡಿತು. ಆರಂಭಿಕರಾಗಿ ಕಣಕ್ಕಿಳಿಸಿದ್ದ ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌ ಸ್ಫೋಟಕ ಪ್ರದರ್ಶನ ನೀಡಲು ಮುಂದಾಗಿದ್ದರು. ಆದ್ರೆ ಒಂದೆಡೆ ರನ್‌ ಕಲೆ ಹಾಕುತ್ತಿದ್ದಂತೆ ಮತ್ತೊಂದೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಪವರ್‌ ಪ್ಲೇನಲ್ಲೇ ವೇಗಿ ಮೊಹಮ್ಮದ್‌ ಸಿರಾಜ್‌ ಫಿಲ್‌ ಸಾಲ್ಟ್‌ ಹಾಗೂ ದೇವದತ್‌ ಪಡಿಕಲ್‌ ವಿಕೆಟ್‌ ಕಿತ್ತಿದ್ದು, ಆರ್‌ಸಿಬಿಗೆ ಬಹುದೊಡ್ಡ ಹೊಡೆತ ನೀಡಿತು.

    ಲಿವಿಂಗ್‌ಸ್ಟೋನ್‌ ಅಮೋಘ ಅರ್ಧಶತಕ:
    ಬಳಿಕ ಕಣಕ್ಕಿಳಿದು ತಾಳ್ಮೆಯ ಆಟ ಆಡಿದ ಲಿಯಾಮ್ ಲಿವಿಂಗ್‌ಸ್ಟೋನ್ ಆಕರ್ಷಕ ಅರ್ಧಶತಕ ಸಿಡಿಸಿದರು. 40 ಎಸೆತಗಳಲ್ಲಿ 54 ರನ್‌ (5 ಸಿಕ್ಸರ್‌, 1 ಬೌಂಡರಿ) ಚಚ್ಚಿದ್ದರು. ಇವರಿಗೆ ಉತ್ತಮ ಸಾಥ್‌ ನೀಡಿದ ಜಿತೇಶ್‌ ಶರ್ಮಾ 33 ರನ್‌ (21 ಎಸೆತ, 1 ಸಿಕ್ಸರ್‌, 5 ಬೌಂಡರಿ) ಗಳಿಸಿ ಔಟಾಗಿ ಪೆವಿಲಿಯನ್‌ನತ್ತ ತೆರಳಿದರು. ಇನ್ನು ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಟಿಂ ಡೇವಿಡ್‌ 16 ರನ್‌ ಚಚ್ಚಿ 170 ರನ್‌ಗಳ ಗುರಿ ನೀಡುವಲ್ಲಿ ಯಶಸ್ವಿಯಾದರು.

    ಮತ್ತೊಂದೆಡೆ ಗುಜರಾತ್‌ ಪರ ಬೌಲಿಂಗ್‌ನಲ್ಲಿ ಮೊಹಮ್ಮದ್‌ ಸಿರಾಜ್‌ 3 ವಿಕೆಟ್‌ ಪಡೆದರೆ, ಸಾಯಿ ಕಿಶೋರ್‌ 2 ವಿಕೆಟ್‌, ಪ್ರಸಿದ್‌ ಕೃಷ್ಣ, ಅರ್ಷದ್‌ ಖಾನ್‌ ಮತ್ತು ಇಶಾಂತ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • 105 ಮೀಟರ್‌ ಭರ್ಜರಿ ಸಿಕ್ಸರ್‌ – ಈ ಐಪಿಎಲ್‌ನಲ್ಲಿ ಫಿಲ್‌ ಸಾಲ್ಟ್‌ ವಿಶೇಷ ಸಾಧನೆ

    105 ಮೀಟರ್‌ ಭರ್ಜರಿ ಸಿಕ್ಸರ್‌ – ಈ ಐಪಿಎಲ್‌ನಲ್ಲಿ ಫಿಲ್‌ ಸಾಲ್ಟ್‌ ವಿಶೇಷ ಸಾಧನೆ

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಫೋಟಕ ಬ್ಯಾಟರ್‌ ಫಿಲ್‌ ಸಾಲ್ಟ್‌ (Phil Salt) 105 ಮೀಟರ್‌ ಸಿಕ್ಸರ್‌ ಸಿಡಿಸುವ ಮೂಲಕ ಈ ಆವೃತ್ತಿಯ ಐಪಿಎಲ್‌ನಲ್ಲಿ (IPL 2025) ವಿಶೇಷ ಸಾಧನೆ ಮಾಡಿದ್ದಾರೆ.

    ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 169 ರನ್‌ ಗಳಿಸಿ, ಎದುರಾಳಿಗೆ 170 ರನ್‌ಗಳ ಗುರಿ ನೀಡಿದೆ. ಒಂದೆಡೆ ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ಮತ್ತೊಂದೆಡೆ ರನ್‌ ಕಲೆಹಾಕುತ್ತಾ ಸಾಗಿದ್ದ ಆರ್‌ಸಿಬಿ ಪರ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ ಸ್ಫೋಟಕ ಪ್ರದರ್ಶನಕ್ಕಿಳಿದಿದ್ದರು. ಇದನ್ನೂ ಓದಿ: ಮೈದಾನದಲ್ಲೇ ಧೀಮಾಕು ತೋರಿಸಿದ ದಿಗ್ವೇಶ್ ರಥಿಗೆ ಬಿತ್ತು ಭಾರೀ ದಂಡ

    ಪವರ್‌ ಪ್ಲೇನ 5ನೇ ಓವರ್‌ನಲ್ಲಿ ಮೊಹಮ್ಮದ್‌ ಸಿರಾಜ್‌ (Mohammed Siraj) ಬೌಲಿಂಗ್‌ಗೆ ಬಂದಾಗ ಸ್ಫೋಟಕವಾಗಿ ಅಬ್ಬರಿಸುತ್ತಿದ್ದ ಸಾಲ್ಟ್‌ 3ನೇ ಎಸೆತದಲ್ಲೇ ಭರ್ಜರಿ 105 ಮೀಟರ್‌ ಸಿಕ್ಸರ್‌ ಬಾರಿಸಿದ್ರು. ಈ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಅತಿದೊಡ್ಡ ಸಿಕ್ಸರ್‌ ಸಿಡಿಸಿದ 2ನೇ ಆಟಗಾರ ಎಂಬ ವಿಶೇಷ ಸಾಧನೆಗೂ ಪಾತ್ರರಾದರು. ಇದಕ್ಕೆ ಪ್ರಯುತ್ತರವಾಗಿ ಮರು ಎಸೆತದಲ್ಲೇ ವಿಕೆಟ್‌ಕಿತ್ತು ಸಾಲ್ಟ್‌ಗೆ ಸಿರಾಜ್‌ ಪೆವಿಲಿಯನ್‌ ಹಾದಿ ತೋರಿಸಿದ್ರು. ಇದನ್ನೂ ಓದಿ: ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

    ಈ ಆವೃತ್ತಿಯಲ್ಲಿ ಅತಿದೊಡ್ಡ ಸಿಕ್ಸರ್‌ ಸಿಡಿಸಿದ ಟಾಪ್‌-5 ಬ್ಯಾಟರ್ಸ್‌

    * ಟ್ರಾವಿಸ್‌ ಹೆಡ್‌ – ಎಸ್‌ಆರ್‌ಹೆಚ್‌ – 105 ಮೀಟರ್‌
    * ಫಿಲ್‌ ಸಾಲ್ಟ್‌ – ಆರ್‌ಸಿಬಿ – 105 ಮೀಟರ್‌
    * ಅನಿಕೇತ್‌ ವರ್ಮಾ – ಎಸ್‌ಆರ್‌ಹೆಚ್‌ – 102 ಮೀಟರ್‌
    * ಟ್ರಿಸ್ಟನ್‌ ಸ್ಟಬ್ಸ್‌ – ಡೆಲ್ಲಿ – 98 ಮೀಟರ್‌
    * ನಿಕೋಲಸ್‌ ಪೂರನ್‌ – ಲಕ್ನೋ – 97 ಮೀಟರ್‌

  • ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

    ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

    – ಬೆಂಗಳೂರು ಮನೆ, ವಾಪಸ್‌ ಬಂದಿದ್ದಕ್ಕೆ ಖುಷಿ ಇದೆ ಎಂದ ಕನ್ನಡಿಗ

    ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಗುಜರಾತ್‌ ಟೈಟಾನ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ನಟ, ರೇಡಿಯೋ ಜಾಕಿ ಡ್ಯಾನಿಷ್‌ ಸೇಟ್‌ ಅವರು ಆರ್‌ಸಿಬಿ ತಂಡದ ಆಟಗಾರ ದೇವದತ್‌ ಪಡಿಕ್ಕಲ್‌ ಸಂದರ್ಶನ ಮಾಡಿದ್ದಾರೆ. ಕನ್ನಡಿಗನಾದ ಪಡಿಕ್ಕಲ್‌ ಕನ್ನಡವನ್ನು ಸೊಗಸಾಗಿ ಮಾತನಾಡಿದ್ದಾರೆ.

    ಆರ್‌ಸಿಬಿ ಇನ್‌ಸೈಡ್‌ ಶೋನಲ್ಲಿ ಪಡಿಕ್ಕಲ್‌ ಅವರನ್ನು ‘ಡಿಡಿಪಿ’ ಎಂದು ಸೇಟ್‌ ಪರಿಚಯಿಸುತ್ತಾರೆ. ಕನ್ನಡದಲ್ಲೇ ಪ್ರಶ್ನೆಗಳನ್ನು ಕೇಳುತ್ತಾರೆ. ‘ಹೇಗಿತ್ತಪ್ಪ ನಾರ್ಥ್‌ ಇಂಡಿಯಾ ಟೂರ್‌’ ಎಂದು ಕೇಳ್ತಾರೆ. ಅದಕ್ಕೆ ಪಡಿಕ್ಕಲ್‌, ‘ತುಂಬಾ ಚೆನ್ನಾಗಿತ್ತು. ಬೆಂಗಳೂರು ನನ್ನ ಮನೆ. ವಾಪಸ್‌ ಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ’ ಎಂದು ಕನ್ನಡದಲ್ಲೇ ಹೇಳ್ತಾರೆ.

    ಮೊದಲು ನೀನು ಯೂತ್‌ಫುಲ್‌ ರೀತಿ ಮಾತಾಡ್ತಿದ್ದೆ. ಈಗ ಹರ್ಷ ಬೋಗ್ಲೆ ಥರ ಮಾತಾಡ್ತಿದ್ದೀಯಾ ಅಂತ ಕೇಳಿದಾಗ, ‘ಮತ್ತೆ ಹೆಂಗೆ ಮಾತಾಡ್ಬೇಕು’ ಅಂತ ಕನ್ನಡದಲ್ಲೇ ಪಡಿಕ್ಕಲ್‌ ಮರುಪ್ರಶ್ನೆ ಹಾಕ್ತಾರೆ. ಸ್ವಲ್ಪ ಜಾಲಿ ಆಗಿರು ಎಂದಾಗ, ‘ನಿಮ್‌ ಹತ್ರ ಜಾಲಿಯಾಗಿರೋಕೆ ಸ್ವಲ್ಪ ಕಷ್ಟ ಇದೆ’ ಅಂತ ಪಡಿಕ್ಕಲ್‌ ಉತ್ತರಿಸುತ್ತಾರೆ.

    ಇನ್‌ಸ್ಟಾದಲ್ಲಿ ಕೊರಿಯನ್ಸ್‌ ರೀತಿ ಸ್ಟೈಲ್‌ ಮಾಡ್ತಿದ್ದೀಯಾ ಎಂದು ಕೇಳಿದಾಗ, ‘ಅದೇ ತಾನೆ ಟ್ರೆಂಡ್‌ ಈಗ’ ಎಂದು ಪಡಿಕ್ಕಲ್‌ ಉತ್ತರಿಸುತ್ತಾರೆ.

    ಯುಗಾದಿ, ದೀಪಾವಳಿಗೆ ನಾರ್ಮಲ್‌ ಆಗಿ ವಿಶ್‌ ಮಾಡ್ತೀಯಾ. ಅಂತಾರಾಷ್ಟ್ರೀಯ ವಿಶೇಷ ದಿನಗಳಿಗೆ ವಿಶ್‌ ಮಾಡು ಎಂದಾಗ, ‘ವಿಶ್ವ ಕಪ್‌ ಕೇಕ್‌ ದಿನ.. ವಿಶ್ವ ಶೌಚಾಲಯದ ದಿನ.. ವಿಶ್ವ ಮೊಟ್ಟೆ ದಿನ’ಕ್ಕೆ ಕನ್ನಡದಲ್ಲೇ ವಿಶ್‌ ಮಾಡಿ ಪಡಿಕ್ಕಲ್‌ ಗಮನ ಸೆಳೆದಿದ್ದಾರೆ.

    ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡನ್ನು ಮಾರ್ಪಡಿಸಿ, ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂದು ಸೇಟ್‌ ಹಾಡುತ್ತಾರೆ. ಅದಕ್ಕೆ ಹೂಂ ಅಂತೀಯಾ.. ಎಂದು ಪಡಿಕ್ಕಲ್‌ ದನಿಗೂಡಿಸುತ್ತಾರೆ. ಸಂದರ್ಶನವು ಫನ್‌ ಆಗಿ ಸಾಗುತ್ತದೆ.

  • ನಾಳೆ ಬೆಂಗಳೂರಿನಲ್ಲಿ ಸೀಸನ್‌ನ ಮೊದಲ ಐಪಿಎಲ್ ಪಂದ್ಯ – ಚಿನ್ನಸ್ವಾಮಿ ಸುತ್ತಮುತ್ತ ಬಂದೋಬಸ್ತ್

    ನಾಳೆ ಬೆಂಗಳೂರಿನಲ್ಲಿ ಸೀಸನ್‌ನ ಮೊದಲ ಐಪಿಎಲ್ ಪಂದ್ಯ – ಚಿನ್ನಸ್ವಾಮಿ ಸುತ್ತಮುತ್ತ ಬಂದೋಬಸ್ತ್

    ಬೆಂಗಳೂರು: ನಾಳೆ (ಏ.2) ಬೆಂಗಳೂರಿನಲ್ಲಿ ಐಪಿಎಲ್ (IPL) ಸೀಸನ್ 18ರ ಮೊದಲ ಮ್ಯಾಚ್ ನಡೆಯಲಿದ್ದು, ಆರ್‌ಸಿಬಿ-ಜಿಟಿ (RCB vs GT) ಮುಖಾಮುಖಿಯಾಗಲಿದೆ. ಐಪಿಎಲ್ ಪಂದ್ಯ ಹಿನ್ನೆಲೆ ಸಂಚಾರಿ ಪೊಲೀಸರು ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಸುತ್ತಮುತ್ತ ಟ್ರಾಫಿಕ್ ತಡೆಗಟ್ಟಲು ಹಲವು ಕ್ರಮ ಕೈಗೊಂಡಿದ್ದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಟ್ರಾಫಿಕ್ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

    ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಸ್ಟೇಡಿಯಂ ಸುತ್ತಮುತ್ತ ನೋ ಪಾರ್ಕಿಂಗ್ ಇರಲಿದ್ದು, ಮ್ಯಾಚ್ ನೋಡಲು ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳ ಕೊರತೆ ಇರುವುದರಿಂದ ಬಿಎಂಟಿಸಿ, ಮೆಟ್ರೋ ಬಳಸಲು ಮನವಿ ಮಾಡಿದ್ದಾರೆ. ಓಲಾ, ಊಬರ್, ಆಟೋ ಇತ್ಯಾದಿ ಕ್ಯಾಬ್‌ಗಳು ಪಿಕ್ ಆಪ್ ಮತ್ತು ಡ್ರಾಪ್ ಮಾಡಲು ಸ್ಥಳ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರು| ವಾಕಿಂಗ್ ವೇಳೆ ಮಾಲಕಿ ಕೈಯಿಂದ ಸಾಕು ನಾಯಿ ಕಿತ್ತೊಯ್ದ ಕಳ್ಳರು

    ಎಲ್ಲೆಲ್ಲಿ ಪಾರ್ಕಿಂಗ್ ನಿಷೇಧ?
    *ಕ್ವೀನ್ಸ್ ರಸ್ತೆಯಲ್ಲಿ, ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ.
    *ಎಂ.ಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ.
    *ಲಿಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆವರೆಗೆ.
    *ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ.
    *ಸೆಂಟ್ರಲ್ ಸ್ಟ್ರೀಟ್ ರಸ್ತೆಯ ಎರಡೂ ಕಡೆ.
    *ಕಬ್ಬನ್ ರಸ್ತೆಯಲ್ಲಿ, ಸಿ.ಟಿ.ಓ. ವೃತ್ತದಿಂದ ಡಿಕೆನ್ಸ್ನ್ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆ.
    *ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ, ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ.
    *ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆಯಿಂದ ಸೆಂಟ್ ಮಾರ್ಕ್ಸ್ ರಸ್ತೆವರೆಗೆ ಹಾಗೂ ಆಶಿರ್ವಾದಂ ವೃತ್ತದವರೆಗೆ.
    *ಕಸ್ತೂರ್ಬಾ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ.
    *ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್ ವೃತ್ತದವರೆಗೆ.
    *ಕಬ್ಬನ್‌ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ.
    *ಲ್ಯಾವೆಲ್ಲಿ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ಜಂಕ್ಷನ್‌ವರೆಗೆ.
    *ವಿಠಲ್ ಮಲ್ಯ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಸೆಂಟ್ ಮಾರ್ಕ್ಸ್ ರಸ್ತೆಯ ಬಿಷಪ್‌ಕಾಟನ್ ಬಾಲಕೀಯರ ಶಾಲೆಯವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ.

    ಪಾರ್ಕಿಂಗ್‌ಗೂ ಸ್ಥಳ ನಿಗದಿ:
    ಪಂದ್ಯ ವೀಕ್ಷಣೆ ಮಾಡಲು ಬರೋರಿಗೆ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್ ಜೊತೆಗೆ ಯು.ಬಿ.ಸಿಟಿ ನಿಲುಗಡೆ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಕೆಎಸ್‌ಸಿಎ ಸದಸ್ಯರ ವಾಹನಗಳನ್ನು ಸೆಂಟ್ ಜೋಸೆಫ್ ಬಾಲಕರ ಶಾಲೆ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಬೆಲೆ ಏರಿಕೆ ಬಗ್ಗೆ ಮುಂಚೆ ಹೇಳಿದ್ರೆ ಕಾಂಗ್ರೆಸ್ 50 ಸೀಟು ಗೆಲ್ಲುತ್ತಿರಲಿಲ್ಲ: ಸಿ.ಟಿ.ರವಿ ಕಿಡಿ

  • ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

    ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

    ಚೆನ್ನೈ: ಶುಕ್ರವಾರ ಚೆಪಾಕ್‌ನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಸಿಎಸ್‌ಕೆಯನ್ನು (CSK) ಆರ್‌ಸಿಬಿ (RCB) ಮಣಿಸಿತು. ಈ ವೇಳೆ ವಿರಾಟ್‌ ಕೊಹ್ಲಿಯನ್ನು (Virat Kohli) ಟ್ರೋಲ್‌ ಮಾಡಿದ ಸಿಎಸ್‌ಕೆ ಅಭಿಮಾನಿಗಳಿಗೆ ನಟಿ ವರ್ಷಾ ಬೊಳ್ಳಮ್ಮ ಬಿಸಿಮುಟ್ಟಿಸಿದ್ದಾರೆ.

    ಬೆಂಗಳೂರಿನ ಯುವ ನಟಿ ವರ್ಷಾ ಬೊಳ್ಳಮ್ಮ (Varsha Bollamma) ಅವರು ಆರ್‌ಸಿಬಿಯ ಅಪ್ಪಟ ಅಭಿಮಾನಿ. ಶನಿವಾರ ಬೆಳಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ ಅವರು, ಸಿಎಸ್‌ಕೆ ದಂತಕಥೆ ಎಂಎಸ್ ಧೋನಿಯನ್ನು ಹೊಗಳುತ್ತಾ ವಿರಾಟ್ ವಿರುದ್ಧದ ಕೆಟ್ಟ ಟ್ರೋಲ್‌ಗಳನ್ನು ಖಂಡಿಸಿದ್ದಾರೆ. ‘ನಾವು ಒಬ್ಬ ಆಟಗಾರನನ್ನು ಹೊಗಳಲು ಇನ್ನೊಬ್ಬ ಆಟಗಾರನನ್ನು ಅವಮಾನಿಸಬಾರದು’ ಎಂದು ಸಿಎಸ್‌ಕೆ ಅಭಿಮಾನಿಗಳಿಗೆ ನಟಿ ಖಡಕ್‌ ಆಗಿ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಭರ್ಜರಿ ಜಯಗಳಿಸಿದ ಆರ್‌ಸಿಬಿ ಹಾಡಿಹೊಗಳಿದ ಡಿವಿಲಿಯರ್ಸ್‌

    ಕ್ರೀಡೆಗಳು ಮನರಂಜನೆಯದ್ದಾಗಿವೆ. ಬಹಳಷ್ಟು ತಮಾಷೆಯ ಹಾಸ್ಯ ಮತ್ತು ಪೈಪೋಟಿ ಕೂಡ ಇರುತ್ತದೆ. ಆದರೆ, ನಮ್ಮ ದೇಶವನ್ನು ಪ್ರತಿನಿಧಿಸುವ ಆಟಗಾರರನ್ನು ನಾವು ಅವಮಾನಿಸಬಾರದು. ಅವರು ಮೆನ್‌ ಇನ್‌ ಬ್ಲೂ (ಟೀಂ ಇಂಡಿಯಾ ಜೆರ್ಸಿ ಬಣ್ಣ) ಎಂಬುದನ್ನು ಮರೆಯಬೇಡಿ. ಅವರು ಕೆಂಪು, ಹಳದಿ, ಕಿತ್ತಳೆ ಅಥವಾ ನೇರಳೆ ಜೆರ್ಸಿಯವರು ಎಂದು ನೋಡಬೇಡಿ ಎಂದು ನಟಿ ಫ್ಯಾನ್ಸ್‌ಗೆ ತಿಳಿಸಿದ್ದಾರೆ.

    ನಿನ್ನೆ ಚೆನ್ನೈ ನೆಲದಲ್ಲೇ ಸಿಎಸ್‌ಕೆ ವಿರುದ್ಧ ಆರ್‌ಸಿಬಿ 50 ರನ್‌ಗಳ ಭರ್ಜರಿ ಜಯ ಸಾಧಿಸಿತು. ಬರೋಬ್ಬರಿ 17 ವರ್ಷಗಳ ಬಳಿಕ ಚೆನ್ನೈಗೆ ತವರು ನೆಲದಲ್ಲೇ ಆರ್‌ಸಿಬಿ ಸೋಲುಣಿಸಿದೆ. ಇದನ್ನೂ ಓದಿ: ಸಿಎಸ್‌ಕೆ ಸೋಲಿಸಿ ಬೆಂಗಳೂರಿಗೆ ಆರ್‌ಸಿಬಿ ಟೀಂ ಗ್ರ್ಯಾಂಡ್‌ ಎಂಟ್ರಿ – ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಜಯಘೋಷ