Tag: rcb

  • ಆರ್‌ಸಿಬಿಗೆ ದೊಡ್ಡ ಶಾಕ್‌ – ಸಾಲ್ಟ್‌ ಆಡೋದು ಅನುಮಾನ

    ಆರ್‌ಸಿಬಿಗೆ ದೊಡ್ಡ ಶಾಕ್‌ – ಸಾಲ್ಟ್‌ ಆಡೋದು ಅನುಮಾನ

    ಅಹಮದಾಬಾದ್‌: ಆರ್‌ಸಿಬಿ (RCB) ಓಪನರ್‌ ಫಿಲ್‌ ಸಾಲ್ಟ್‌ (Phil Salt) ಫೈನಲ್‌ ಪಂದ್ಯ ಆಡುವುದು ಅನುಮಾನ ಎನ್ನಲಾಗುತ್ತಿದೆ.

    ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ (Punjab Kings) ಫೈನಲ್‌ ಪಂದ್ಯ ನಡೆಯಲಿದೆ. ಫೈನಲ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿಯ ಅಭ್ಯಾಸ ವೇಳೆ ಸಾಲ್ಟ್‌ ಕಾಣಿಸಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: RCB ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಂಧನೂರಿನ ಮನೋಜ್ ಬಾಂಡಗೆ – ಕುಟುಂಬಸ್ಥರಿಂದ ಗೆಲುವಿನ ಶುಭಹಾರೈಕೆ

    ಇಂಗ್ಲೆಂಡಿನ ಫಿಲ್‌ ಸಾಲ್ಟ್‌ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಹೀಗಾಗಿ ಅವರು ತವರಿಗೆ ತೆರಳಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಆರ್‌ಸಿಬಿ ಅಧಿಕೃತವಾಗಿ ಸಾಲ್ಟ್‌ ಅಲಭ್ಯರಾಗುವ ಬಗ್ಗೆ ತಿಳಿಸಿಲ್ಲ.

    ಆರ್‌ಸಿಬಿ ಪರ 12 ಪಂದ್ಯ ಆಡಿರುವ ಸಾಲ್ಟ್‌ ಒಟ್ಟು 387 ರನ್‌ ಹೊಡೆದು ಟಾಪ್‌ 20 ಬ್ಯಾಟರ್‌ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 18ನೇ ಐಪಿಎಲ್‌, 18ನೇ ಸಂಖ್ಯೆಗೆ ನಂಟು – 2013 ರಿಂದ ಆರ್‌ಸಿಬಿ ಪರ 18 ಟ್ರೆಂಡಿಂಗ್‌!

    ಪಂಜಾಬ್‌ ವಿರುದ್ಧದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಸಾಲ್ಟ್‌ ಔಟಾಗದೇ 56 ರನ್‌(27 ಎಸೆತ, 6 ಬೌಂಡರಿ, 3 ಸಿಕ್ಸ್‌ ) ಹೊಡೆದು ಜಯವನ್ನು ತಂದುಕೊಟ್ಟಿದ್ದರು.

  • RCB ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಂಧನೂರಿನ ಮನೋಜ್ ಬಾಂಡಗೆ – ಕುಟುಂಬಸ್ಥರಿಂದ ಗೆಲುವಿನ ಶುಭಹಾರೈಕೆ

    RCB ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಂಧನೂರಿನ ಮನೋಜ್ ಬಾಂಡಗೆ – ಕುಟುಂಬಸ್ಥರಿಂದ ಗೆಲುವಿನ ಶುಭಹಾರೈಕೆ

    ರಾಯಚೂರು: 9 ವರ್ಷಗಳ ಬಳಿಕ ಐಪಿಎಲ್ ಫೈನಲ್‌ಗೆ (IPL Final) ಎಂಟ್ರಿಕೊಟ್ಟಿರುವ ಆರ್‌ಸಿಬಿ (RCB)  ತಂಡ, ಈ ಬಾರಿ ಕಪ್ ಗೆದ್ದೇ ಗೆಲ್ಲುತ್ತದೆ ಎಂದು ಫ್ಯಾನ್ಸ್ ವಿಶ್ವಾಸದಲ್ಲಿದ್ದಾರೆ.

    ಆರ್‌ಸಿಬಿ ತಂಡದಲ್ಲಿ ಇಂಪ್ಯಾಕ್ಟ್ ಪ್ಲೇಯರ್ (Impact Player) ಆಗಿರುವ ಮನೋಜ್ ಬಾಂಡಗೆ (Manoj Bhandage) ಮೂಲತಃ ರಾಯಚೂರಿನ (Raichuru) ಸಿಂಧನೂರಿವರು. ಹೀಗಾಗಿ ಸಿಂಧನೂರಿನ (Sindhanur) ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದ್ದು, ಗ್ರಾಮಸ್ಥರಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಮಾಡಿದೆ.ಇದನ್ನೂ ಓದಿ: 18ನೇ ಐಪಿಎಲ್‌, 18ನೇ ಸಂಖ್ಯೆಗೆ ನಂಟು – 2013 ರಿಂದ ಆರ್‌ಸಿಬಿ ಪರ 18 ಟ್ರೆಂಡಿಂಗ್‌!

    ಕಳೆದ ಮೂರು ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿರುವ ಮನೋಜ್ ಬಾಂಡಗೆ ಈ ಸೀಸನ್‌ನಲ್ಲಿ ಒಂದು ಪಂದ್ಯ ಆಡಿದ್ದಾರೆ. ಪಂಜಾಬ್ ವಿರುದ್ಧದ 34ನೇ ಪಂದ್ಯದಲ್ಲಿ ಆಡುವ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಮನೋಜ್‌ಗೂ ಆಡುವ ಅವಕಾಶ ಸಿಗಲಿ ಎಂದಿದ್ದಾರೆ.

    ಮನೆಯವರೆಲ್ಲರೂ ಸೇರಿ ಆರ್‌ಸಿಬಿ ತಂಡಕ್ಕೆ ವಿಶ್ ಮಾಡಿದ್ದು, ಈ ಸಲ ಕಪ್ ನಮ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ವಿಜಯಪುರ| ದರ ಕುಸಿತ – ರಾಷ್ಟ್ರೀಯ ಹೆದ್ದಾರಿಗೆ ಈರುಳ್ಳಿ ಸುರಿದು ಹೊರಳಾಡಿದ ರೈತ

  • 18ನೇ ಐಪಿಎಲ್‌, 18ನೇ ಸಂಖ್ಯೆಗೆ ನಂಟು – 2013 ರಿಂದ ಆರ್‌ಸಿಬಿ ಪರ 18 ಟ್ರೆಂಡಿಂಗ್‌!

    18ನೇ ಐಪಿಎಲ್‌, 18ನೇ ಸಂಖ್ಯೆಗೆ ನಂಟು – 2013 ರಿಂದ ಆರ್‌ಸಿಬಿ ಪರ 18 ಟ್ರೆಂಡಿಂಗ್‌!

    18ನೇ ಆವೃತ್ತಿಯ ಐಪಿಎಲ್‌ನಲ್ಲಿ 18ರ ನಂಟು ಮತ್ತೆ ಮುನ್ನೆಲೆಗೆ ಬಂದಿದೆ. ಅದರಲ್ಲೂ ಆರ್‌ಸಿಬಿಗೆ ಮತ್ತು ಸಂಖ್ಯೆ 18ರ ನಂಟು ಈಗ ಆರಂಭವಾಗಿದಲ್ಲ. ಐಪಿಎಲ್‌ ಆರಂಭವಾಗುವಾಗಲೇ ಆರ್‌ಸಿಬಿ ಜೊತೆ 18ರ ನಂಟು ಆರಂಭವಾಗಿತ್ತು.

    ಆರ್‌ಸಿಬಿಯ ಆಸ್ತಿ ಯಾರೂ ಎಂದರೆ ಅದು ವಿರಾಟ್‌ ಕೊಹ್ಲಿ. ವಿರಾಟ್‌ ಕೊಹ್ಲಿ ಜೆರ್ಸಿ ನಂಬರ್‌ 18. ಈ ಕಾರಣಕ್ಕೆ ಆರ್‌ಸಿಬಿ ಅಭಿಮಾನಿಗಳು ಧರಿಸುವ ಜೆರ್ಸಿ ಹಿಂದೆ ವಿರಾಟ್‌ ಕೊಹ್ಲಿ ಹೆಸರು ಮತ್ತು ಸಂಖ್ಯೆ 18 ಮುದ್ರಣವಾಗಿರುತ್ತದೆ.

    ಐಪಿಎಲ್‌ ಫೈನಲ್‌ ಪಂದ್ಯ ಇಂದು (ಜೂನ್‌ 3) ನಡೆಯಲಿದೆ.  ಜೂನ್‌ ವರ್ಷದ 6ನೇ ತಿಂಗಳಾಗಿದೆ. ದಿನಾಂಕ+ತಿಂಗಳು+ವರ್ಷವನ್ನು ಕೂಡಿಸಿದಾಗ(3+6+2+0+2+5) 18 ಬರುತ್ತದೆ. ಇದನ್ನೂ ಓದಿ: ಸತತ 2ನೇ ವರ್ಷ ರಜತ್‌ Vs ಶ್ರೇಯಸ್‌ ತಂಡಗಳ ಮಧ್ಯೆ ಟಿ20 ಫೈನಲ್!‌

    18ರ ಜೊತೆಗೆ ಏಕೆ ವಿಶೇಷ ನಂಟು?
    ಐಪಿಎಲ್‌ ಇತಿಹಾಸದಲ್ಲಿ ಆರ್‌ಸಿಬಿಗೆ ಮೊದಲ ಬಾರಿ 18ರ ನಂಟು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗಲು ಶುರುವಾಗಿದ್ದು 2013 ರಿಂದ. ಮೇ 18 ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಕೊನೆಗೆ ಪಂದ್ಯವನ್ನು 8 ಓವರ್‌ಗೆ ಇಳಿಸಲಾಗಿತ್ತು. ಅಂದು ಆರ್‌ಸಿಬಿ ತಂಡ ಸಿಎಸ್‌ಕೆ ಎದುರು 24 ರನ್‌ಗಳ ಜಯ ದಾಖಲಿಸಿತ್ತು. ವಿರಾಟ್‌ ಕೊಹ್ಲಿ (Virat Kohli) ಆ ಪಂದ್ಯದಲ್ಲಿ 29 ಎಸೆತಗಳಲ್ಲಿ ಅಜೇಯ 56 ರನ್‌ ಸಿಡಿಸಿ ಅಬ್ಬರಿಸಿದ್ದರು. ಬಳಿಕ 2014ರಲ್ಲೂ ಸಿಎಸ್‌ಕೆ ಎದುರು ಮೇ 18ರಂದೇ ನಡೆದ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದಲ್ಲೂ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ್ದರು. ಈ ಮೂಲಕ 18 ಸಂಖ್ಯೆ ಆರ್‌ಸಿಬಿ ಅದೃಷ್ಟದ ಸಂಖ್ಯೆ ಎಂಬ ಟ್ರೆಂಡ್‌ ಆರಂಭವಾಯಿತು. ಇದನ್ನೂ ಓದಿ: ಕಳೆದ 15 ತಿಂಗಳಲ್ಲಿ ಅಯ್ಯರ್‌ ಮುಟ್ಟಿದ್ದೆಲ್ಲವೂ ಚಿನ್ನ – ಈಗ 6ನೇ ಟ್ರೋಫಿ ಗೆಲುವಿನ ಗುರಿ!

     

    ಸಂಖ್ಯೆ 9ಕ್ಕೆ ಅದೃಷ್ಟ:
    ಸಂಖ್ಯಾ ಶಾಸ್ತ್ರದಲ್ಲಿ ಸಂಖ್ಯೆ 9ಕ್ಕೆ ಅದೃಷ್ಟ ಜಾಸ್ತಿ ಎಂಬ ನಂಬಿಕೆಯಿದೆ. 09 ಅಥವಾ ಎರಡು ಸಂಖ್ಯೆಯನ್ನು ಕೂಡಿದಾಗ 9 ಬಂದರೆ ಒಳ್ಳೆದಾಗುತ್ತದೆ ಎಂಬ ಭಾವನೆಯಿದೆ. ಕ್ರಿಕೆಟಿನಲ್ಲೇ ಪರಿಗಣಿಸಿದರೆ ವಿರಾಟ್‌ ಕೊಹ್ಲಿ ಜೆರ್ಸಿ ಸಂಖ್ಯೆ 18(1+8) ಇದ್ದರೆ ರೋಹಿತ್‌ ಶರ್ಮಾ ಜೆರ್ಸಿ ಸಂಖ್ಯೆ 45(4+5) ಇದ್ದರೆ ಆಸ್ಟ್ರೇಲಿಯಾದ ಕೀಪರ್‌ ಗಿಲ್‌ಕ್ರಿಸ್ಟ್‌ ನಂಬರ್‌ 18 ಇತ್ತು.  ಟೀಂ ಇಂಡಿಯಾ ಮಹಿಳಾ ಕ್ರಿಕೆಟಿನ ಸ್ಟಾರ್‌ ಆಟಗಾರ್ತಿ ಸ್ಮೃತಿ ಮಂಧಾನ ಜೆರ್ಸಿ ಸಂಖ್ಯೆ 18 ಅಗಿದೆ.

  • ಕಳೆದ 15 ತಿಂಗಳಲ್ಲಿ ಅಯ್ಯರ್‌ ಮುಟ್ಟಿದ್ದೆಲ್ಲವೂ ಚಿನ್ನ – ಈಗ 6ನೇ ಟ್ರೋಫಿ ಗೆಲುವಿನ ಗುರಿ!

    ಕಳೆದ 15 ತಿಂಗಳಲ್ಲಿ ಅಯ್ಯರ್‌ ಮುಟ್ಟಿದ್ದೆಲ್ಲವೂ ಚಿನ್ನ – ಈಗ 6ನೇ ಟ್ರೋಫಿ ಗೆಲುವಿನ ಗುರಿ!

    ಮುಂಬೈ ವಿರುದ್ಧ ನಡೆದ ಎರಡನೇ ಕ್ವಾಲಿಫೈಯರ್‌ನಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಪಂಜಾಬ್‌ ಕಿಂಗ್ಸ್‌ (Punjab Kings) ತಂಡವನ್ನು ಫೈನಲ್‌ಗೆ ಕೊಂಡೊಯ್ದ ನಾಯಕ ಶ್ರೇಯಸ್‌ ಅಯ್ಯರ್ (Shreyas Iyer) ‌ ಕಳೆದ ಒಂದೂವರೆ ವರ್ಷದಿಂದ ಮುಟ್ಟಿದೆಲ್ಲವೂ ಚಿನ್ನವಾಗುತ್ತಿದೆ.

    ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಟೀಂ ಇಂಡಿಯಾದಿಂದ (Team India) ಹೊರಬಿದ್ದು, ಬಿಸಿಸಿಐ (BCCI) ಗುತ್ತಿಗೆ ಪಟ್ಟಿಯಲ್ಲೂ ಶ್ರೇಯಸ್‌ ಅಯ್ಯರ್ ಸ್ಥಾನ ಗಿಟ್ಟಿಸಲು ವಿಫಲರಾಗಿದ್ದರು. ಆದರೆ ಕಳೆದ ಒಂದೂವರೆ ವರ್ಷದಲ್ಲಿ ಶ್ರೇಯಸ್‌ ಅಯ್ಯರ್‌ ಅತ್ಯುತ್ತಮ ಲಯದಲ್ಲಿದ್ದಾರೆ.  ಇದನ್ನೂ ಓದಿ: ಸತತ 2ನೇ ವರ್ಷ ರಜತ್‌ vs ಶ್ರೇಯಸ್‌ ತಂಡಗಳ ಮಧ್ಯೆ ಟಿ20 ಫೈನಲ್!‌

    ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ (Mumbai Team) ತಂಡವನ್ನು ಶ್ರೇಯಸ್‌ ಅಯ್ಯರ್‌ ಪ್ರತಿನಿಧಿಸುತ್ತಿದ್ದಾರೆ. ಕಳೆದ ವರ್ಷ ಮುಂಬೈ ತಂಡ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಶ್ರೇಯಸ್‌ ಅಯ್ಯರ್‌ ಮುಂಬೈ ಪರ ಉತ್ತಮವಾಗಿ ಆಡಿದ್ದರು. ರಣಜಿಯ ಬೆನ್ನಲ್ಲೇ ಶ್ರೇಯಸ್‌ ನಾಯಕತ್ವದಲ್ಲಿ ಮುಂಬೈ ತಂಡ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಇದನ್ನೂ ಓದಿ: IPL Final: ಆರ್‌ಸಿಬಿ ಚಾಂಪಿಯನ್‌ ಆದ್ರೆ ಸಿಗಲಿದೆ 20 ಕೋಟಿ!

    ಇರಾನಿ ಕಪ್ ಗೆದ್ದ ಮುಂಬೈ ತಂಡದ ಸದಸ್ಯರಾಗಿದ್ದ ಶ್ರೇಯಸ್‌ ಅಯ್ಯರ್‌ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ಶ್ರೇಯಸ್ ತಂಡದ ಪ್ರಮುಖ ಭಾಗವಾಗಿದ್ದರು. ಇಷ್ಟೇ ಅಲ್ಲದೇ ಕಳೆದ ವರ್ಷ ಶ್ರೇಯಸ್‌ ನಾಯಕತ್ವದಲ್ಲೇ ಕೋಲ್ಕತ್ತಾ ನೈಟ್‌ ರೈಡರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಕಳೆದ 15 ತಿಂಗಳಿನಲ್ಲಿ 5 ಟ್ರೋಫಿ ಗೆದ್ದಿರುವ ಶ್ರೇಯಸ್‌ ಅಯ್ಯರ್‌ ಈಗ 6ನೇ ಟ್ರೋಫಿ ಗೆಲ್ಲುವ ಕಾತರದಲ್ಲಿದ್ದಾರೆ. ಇದರೊಂದಿಗೆ ಈ ಬಾರಿ ಒಟ್ಟು 16 ಪಂದ್ಯಗಳಿಂದ 603 ರನ್‌ ಹೊಡೆದಿರುವ ಶ್ರೇಯಸ್‌ ಅಯ್ಯರ್ ಸರಣಿ ಶ್ರೇಷ್ಠ ಪ್ರಶಸ್ತಿಯ ಮೇಲೂ ಕಣ್ಣಿಟ್ಟಿದ್ದಾರೆ.‌

  • ಐಪಿಎಲ್ ಫೈನಲ್ ಹಣಾಹಣಿ – ಬೆಂಗ್ಳೂರಲ್ಲಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ್ರೆ FIR

    ಐಪಿಎಲ್ ಫೈನಲ್ ಹಣಾಹಣಿ – ಬೆಂಗ್ಳೂರಲ್ಲಿ ಅವಧಿಗೂ ಮೀರಿ ಪಬ್ ಓಪನ್ ಮಾಡಿದ್ರೆ FIR

    – ನಗರ ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ

    ಬೆಂಗಳೂರು: ಆರ್‌ಸಿಬಿ (RCB) ಹಾಗೂ ಪಂಜಾಬ್ (Punjab Kings) ನಡುವೆ ಇಂದು ಐಪಿಎಲ್ ಫೈನಲ್ ಹಣಾಹಣಿ ನಡೆಯಲಿದೆ. ಈ ಹಿನ್ನೆಲೆ ಅವಧಿಗೂ ಮೀರಿ ಬೆಂಗಳೂರು ನಗರದ ಪಬ್‌ಗಳನ್ನು ಓಪನ್ ಮಾಡದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರು ನಗರದ ಪಬ್‌ಗಳ ಸ್ವರ್ಗವಾಗಿರುವ ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವಡೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ಮಳೆ ಇರುವ ಕಾರಣ ಪಂದ್ಯ ತಡವಾಗಿ ಆರಂಭವಾಗಿ ತಡ ರಾತ್ರಿ ಮುಕ್ತಾಯವಾಗಿತ್ತು. ಅದೇ ರೀತಿ ಇಂದು ಕೂಡ ನಡೆಯುವ ಆರ್‌ಸಿಬಿ – ಪಂಜಾಬ್ ಫೈನಲ್ ಪಂದ್ಯ ಮಳೆ ಬಂದು ತಡವಾದರೆ ಪಬ್‌ಗಳನ್ನ ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಕ್ಲೋಸ್ ಮಾಡಬೇಕು. ಮ್ಯಾಚ್ ಮುಗಿದಿಲ್ಲ ಎಂದು ತಡರಾತ್ರಿಯ ತನಕ ಪಬ್ ಓಪನ್ ಮಾಡಿಕೊಂಡಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: IPL Final: ಆರ್‌ಸಿಬಿ ಚಾಂಪಿಯನ್‌ ಆದ್ರೆ ಸಿಗಲಿದೆ 20 ಕೋಟಿ!

    ಒಂದು ವೇಳೆ ಪೊಲೀಸರ ಖಡಕ್ ಸೂಚನೆ ಮೀರಿ ಅವಧಿ ಮುಗಿದರೂ ಪಬ್ ಓಪನ್ ಮಾಡಿಕೊಂಡರೆ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಪಬ್ ಮಾಲೀಕರಿಗೆ ಎಚ್ಚರಿಸಲಾಗಿದೆ. ಇದನ್ನೂ ಓದಿ: ಬಂದಿದ್ದು ಸಾಮಾನ್ಯ ಆಟಗಾರನಾಗಿ – ಕಟ್ಟಿದ್ದು RCB ಮಹಾ ಸಾಮ್ರಾಜ್ಯ!

  • ಸತತ 2ನೇ ವರ್ಷ ರಜತ್‌ Vs ಶ್ರೇಯಸ್‌ ತಂಡಗಳ ಮಧ್ಯೆ ಟಿ20 ಫೈನಲ್!‌

    ಸತತ 2ನೇ ವರ್ಷ ರಜತ್‌ Vs ಶ್ರೇಯಸ್‌ ತಂಡಗಳ ಮಧ್ಯೆ ಟಿ20 ಫೈನಲ್!‌

    ತತ ಎರಡನೇ ವರ್ಷ ಟಿ20 ಫೈನಲ್‌ನಲ್ಲಿ (T20 Final) ರಜತ್‌ ಪಾಟಿದಾರ್‌ (Rajat Patidar) ಮತ್ತು ಶ್ರೇಯಸ್‌ ಅಯ್ಯರ್‌ (Shreyas Iyer) ನಾಯಕತ್ವದ ತಂಡಗಳು ಮುಖಾಮುಖಿಯಾಗುತ್ತಿವೆ.

    ಹೌದು. ಕಳೆದ ಡಿಸೆಂಬರ್‌ನಲ್ಲಿ ವರ್ಷ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯ ಬೆಂಗಳೂರಿನಲ್ಲಿ ಮಧ್ಯಪ್ರದೇಶ (Madhya Pradesh) ಮತ್ತು ಮುಂಬೈ (Mumbai) ತಂಡಗಳ ಮಧ್ಯೆ ನಡೆದಿತ್ತು.

    ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ್ದ ಮಧ್ಯಪ್ರದೇಶ 8 ವಿಕೆಟ್‌ ನಷ್ಟಕ್ಕೆ 174 ರನ್‌ ಹೊಡೆದಿತ್ತು. ನಾಯಕ ಪಾಟಿದಾರ್‌ ಅಜೇಯ 81 ರನ್‌(40 ಎಸೆತ, 6 ಬೌಂಡರಿ, 6 ಸಿಕ್ಸ್‌) ಹೊಡೆದಿದ್ದರು. ಇದನ್ನೂ ಓದಿ: ಬಂದಿದ್ದು ಸಾಮಾನ್ಯ ಆಟಗಾರನಾಗಿ – ಕಟ್ಟಿದ್ದು RCB ಮಹಾ ಸಾಮ್ರಾಜ್ಯ!

    ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ 17.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 180 ರನ್‌ ಹೊಡೆಯುವ ಮೂಲಕ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಶ್ರೇಯಸ್‌ ಅಯ್ಯರ್‌ 16 ರನ್‌ ಗಳಿಸಿ ಔಟಾಗಿದ್ದರು.


    ಈಗ ಐಪಿಎಲ್‌ನಲ್ಲಿ ಆರ್‌ಸಿಬಿಯನ್ನು ರಜತ್‌, ಪಂಜಾಬ್‌ ತಂಡವನ್ನು ಶ್ರೇಯಸ್‌ ಮುನ್ನಡೆಸುತ್ತಿದ್ದಾರೆ. ಕಳೆದ 18 ಆವೃತ್ತಿಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ಟ್ರೋಫಿ ಗೆದ್ದುಕೊಂಡಿಲ್ಲ. ಆರ್‌ಸಿಬಿ ಈ ಮೊದಲು 3 ಬಾರಿ ಫೈನಲ್‌ ಪ್ರವೇಶಿಸಿದ್ದರೆ ಪಂಜಾಬ್ ಒಂದು ಬಾರಿ ಫೈನಲ್ ಆಡಿ ಸೋಲನುಭವಿಸಿತ್ತು. 2014 ರಲ್ಲಿ ಕೋಲ್ಕತ್ತಾ ವಿರುದ್ಧ ಪಂಜಾಬ್‌ ಕಿಂಗ್ಸ್‌ ಸೋತಿತ್ತು. ಇದೇ ಮೊದಲ ಬಾರಿಗೆ ಎರಡು ತಂಡಗಳು ಫೈನಲಿನಲ್ಲಿ ಮುಖಾಮುಖಿಯಾಗುತ್ತಿವೆ. ಹೀಗಾಗಿ ಯಾರೇ ಕಪ್‌ ಗೆದ್ದರೂ ಐಪಿಎಲ್‌ನಲ್ಲಿ (IPL 2025) ಹೊಸ ಚಾಂಪಿಯನ್ ತಂಡದ ಉದಯವಾಗಲಿದೆ. ಇದನ್ನೂ ಓದಿ: IPL Final: ಆರ್‌ಸಿಬಿ ಚಾಂಪಿಯನ್‌ ಆದ್ರೆ ಸಿಗಲಿದೆ 20 ಕೋಟಿ!

    ಲೀಗ್‌ ಹಂತದಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡಿದ್ದವು. ಆದರೆ ಕ್ವಾಲಿಫೈಯರ್‌ನಲ್ಲಿ ಪಂಜಾಬ್‌ ತಂಡವನ್ನು ಸೋಲಿಸಿ ಆರ್‌ಸಿಬಿ ಫೈನಲ್‌ ಪ್ರವೇಶಿಸಿತ್ತು. ಹೀಗಾಗಿ ಎರಡು ತಂಡಗಳ ಮಧ್ಯೆ ಸಮಬಲದ ಹೋರಾಟ ನಡೆಯಲಿದೆ.

  • ಬಂದಿದ್ದು ಸಾಮಾನ್ಯ ಆಟಗಾರನಾಗಿ – ಕಟ್ಟಿದ್ದು RCB ಮಹಾ ಸಾಮ್ರಾಜ್ಯ!

    ಬಂದಿದ್ದು ಸಾಮಾನ್ಯ ಆಟಗಾರನಾಗಿ – ಕಟ್ಟಿದ್ದು RCB ಮಹಾ ಸಾಮ್ರಾಜ್ಯ!

    – 18 ವರ್ಷ ಒಂದೇ ಟೀಮ್, ಅದೇ ಗತ್ತು, ತಾಕತ್ತು

    ತ ತಂಡಕ್ಕೆ ಎಂಟ್ರಿ ಕೊಟ್ಟಾಗ ಜಸ್ಟ್ 19 ವರ್ಷದ ಸಾಮಾನ್ಯ ಹುಡುಗ ಅಷ್ಟೇ. ಆಕಸ್ಮಿಕವಾಗಿ ಐಪಿಎಲ್‌ನಲ್ಲಿ ಬೆಂಗಳೂರು ತಂಡಕ್ಕೆ ಸೇರಿದ ಅವನು, ನಂತರದ ದಿನಗಳಲ್ಲಿ ಚರಿತ್ರೆಯನ್ನ ಬರೆದ. ಸಾಮಾನ್ಯನಾಗಿ ಬಂದಾತ ಕಿಂಗ್ ಆಗಿ ಮೆರೆದ. ರನ್ ಮೆಷಿನ್ ಕಿಂಗ್ ಕೊಹ್ಲಿ (Virat Kohli) ರಾಜನಾಗಿ ಮೆರೆದರೂ ಅದೊಂದು ಕೊರಗು 18 ವರ್ಷಗಳಿಂದ ಆರ್‌ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಕಾಡುತ್ತಲೇ ಇತ್ತು. ಈಗ ಆ ಕೊರಗನ್ನು ನೀಗಿಸುವ ಅವಕಾಶ ಮತ್ತೆ ಕೂಡಿ ಬಂದಿದೆ.

    ಅದು 2008, ಐಪಿಎಲ್‌ನ ಮೊದಲ ಸೀಸನ್. ಭಾರತದ ಅಂಡರ್ 19 ತಂಡದ ಕ್ಯಾಪ್ಟನ್ ಆಗಿದ್ದ ಹುಡುಗ ವಿರಾಟ್ ಕೊಹ್ಲಿ ಬೆಂಗಳೂರು ತಂಡಕ್ಕೆ ಸೇರಿದ್ದೇ ಅಚಾನಕ್. 2008ರಲ್ಲಿ ಅಂಡರ್ 19 ಕೋಟಾದಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರಾಟ್ ಕೊಹ್ಲಿಯನ್ನ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆರಂಭದಲ್ಲಿ ವಿರಾಟ್ ಡೆಲ್ಲಿ ತಂಡದ ಪಾಲಾಗಬೇಕಿತ್ತು. ಆದರೆ ದೆಹಲಿ ತಂಡ ಮತ್ತೊಬ್ಬ ಯುವ ಆಟಗಾರ ಪ್ರದೀಪ್ ಸಾಂಗ್ವಾನ್ ಕಡೆ ವಾಲಿದ ಕಾರಣ, ಕೊಹ್ಲಿ ಬೆಂಗಳೂರಿಗರ ಪಾಲಾದರು.

    ರೆಡ್ ಅಂಡ್ ಗೋಲ್ಡ್ ಜರ್ಸಿ ತೊಟ್ಟು ಅಖಾಡಕ್ಕಿಳಿ ವಿರಾಟ್ ಕೊಹ್ಲಿ ಐಪಿಎಲ್ ಆರಂಭದ ಮೂರು ಸೀಸನ್‌ನಲ್ಲೂ ಅಷ್ಟು ದೊಡ್ಡದಾಗಿ ಮಿಂಚದಿದ್ದರೂ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕೊಹ್ಲಿ ಮೇಲೆ ನಂಬಿಕೆ ಇಟ್ಟು, ರಿಟೈನ್ ಮಾಡಿಕೊಂಡಿತು. ಈ ಒಂದು ನಿರ್ಧಾರ ಆರ್‌ಸಿಬಿಯಲ್ಲಿ ಒಬ್ಬ ದೊಡ್ಡ ಸ್ಟಾರ್ ಉಗಮಕ್ಕೆ ಕಾರಣವಾಯಿತು. ಅಲ್ಲಿಂದ ಶುರವಾದ ಕೊಹ್ಲಿ ಅಬ್ಬರ ಇಂದು ಕೂಡ ಮುಂದುವರೆಯುತ್ತಲೇ ಇದೆ. ಆನೆ ನಡೆದಿದ್ದೆ ದಾರಿ ಎಂಬಂತೆ ಮುನ್ನುಗ್ಗಿದ್ರು. ಅದು ಯಾವುದೇ ಪಿಚ್ ಇರಲಿ, ಅದು ಎಂತಹ ಘಟಾನುಘಟಿ ಬೌಲರ್ ಇದ್ದರೂ ಚಿಂದಿ ಉಡಾಯಿಸಿದರು.

    2013ರಲ್ಲಿ ಡೆನಿಯಲ್ ವೆಟ್ಟೋರಿ ಬಳಿಕ ತಂಡದ ಜವಬ್ದಾರಿ ಹೊತ್ತ ಕೊಹ್ಲಿ, ಬರೊಬ್ಬರಿ 143 ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದರು. 2016ರಲ್ಲಿ ತಂಡವನ್ನು ಯಶಸ್ಬಿಯಾಗಿ ಫೈನಲ್‌ಗೆ ತೆಗೆದುಕೊಂಡ ಹೋದ ಹೆಮ್ಮೆ ಕೂಡ ಕೊಹ್ಲಿಯದ್ದೇ. ಒಂದೇ ಸೀಸನ್‌ನಲ್ಲಿ ಬರೊಬ್ಬರಿ 970 ರನ್ ಗಳಿಸಿದ್ದ ಕೊಹ್ಲಿಯ ದಾಖಲೆಯನ್ನು ಇಂದಿಗೂ ಯಾರೂ ಮುರಿದಿಲ್ಲ.

    ಇಲ್ಲಿ ತನಕ ಕೊಹ್ಲಿ ಕಳೆದ 18 ವರ್ಷದಲ್ಲಿ ಆರ್‌ಸಿಬಿ ಒಂದೇ ತಂಡದ ಪರ ಆಡಿ ಬರೊಬ್ಬರಿ 8 ಸಾವಿರ ರನ್ ಪೂರೈಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ಆಟಗಾರ ಗಳಿಸಿದ ಅತಿ ಹೆಚ್ಚು ರನ್ ಮತ್ತು ಒಬ್ಬ ಆಟಗಾರ ಒಂದೇ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ದಾಖಲೆ ಕೂಡ ಹೌದು. ಅಲ್ಲದೇ 68 ಅರ್ಧ ಶತಕ, 8 ಶತಕ ಗಳಿಸುವ ಮೂಲಕ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಹೆಮ್ಮೆ ಕೂಡ ಕೊಹ್ಲಿಯ ಗರಿಮೆ. ತಂಡದ ಜೊತೆಗೆ ಕೊಹ್ಲಿ ಯಶಸ್ಸಿಗೆ ಮತ್ತೊಂದು ಕಾರಣ ಆರ್‌ಸಿಬಿ ಅಭಿಮಾನಿಗಳು. ಕಪ್ ಬರ ನೀಗದಿದ್ದರೂ ತಂಡವನ್ನು ಬಿಟ್ಟು ಕೊಡದ ಅಭಿಮಾನಿಗಳಿಗೆ ಕೊಹ್ಲಿ ಎಂದಿಗೂ ಹಾಟ್ ಫೇವರೇಟ್. ಇದೇ ಕಾರಣಕ್ಕೆ ಸದ್ಯ ಆರ್‌ಸಿಬಿ ಗತ್ತು ಇಂಟರ್‌ನ್ಯಾಷನಲ್ ಲೆವಲ್‌ನಲ್ಲಿ ಸದ್ದು ಮಾಡಿದೆ.

    ಕೊಹ್ಲಿ ಸಾಧನೆ:
    ಪಂದ್ಯ – 266
    ರನ್ – 8,618
    ಅರ್ಧಶತಕ/ಶತಕ -63/8
    ಸ್ಟ್ರೈಕ್ ರೇಟ್ – 132.92

    ಈ ಸೀಸನ್ 18ಕ್ಕೂ ಕೊಹ್ಲಿಯ ಜರ್ಸಿ ನಂಬರ್‌ಗೂ ಕಾಕತಾಳೀಯ ಎಂಬಂತೆ ಸಾಮ್ಯತೆ ಇದೆ. ಅಷ್ಟೇ ಅಲ್ಲದೇ ಪಂಜಾಬ್ ವಿರುದ್ಧ ಆರ್‌ಸಿಬಿ ಇಲ್ಲಿ ತನಕ 18 ಪಂದ್ಯಗಳನ್ನು ಗೆದ್ದಿದ್ದರೆ, 18 ಪಂದ್ಯಗಳಲ್ಲಿ ಸೋತಿದೆ. ಇನ್ನೊಂದು ಸ್ಪೆಷಲ್ ಅಂದರೆ ಇವತ್ತಿನ ಎಲ್ಲಾ ದಿನಾಂಕವನ್ನು ಕೂಡಿದ್ರೆ ಒಟ್ಟು ನಂಬರ್ ಕೂಡ 18. ಒಟ್ಟಾರೆ 18ರ ನಂಟು ಕಪ್ ಗಂಟನ್ನು ಬಿಡಿಸಲು ಸಹಾಯವಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

  • IPL Final: ಆರ್‌ಸಿಬಿ ಚಾಂಪಿಯನ್‌ ಆದ್ರೆ ಸಿಗಲಿದೆ 20 ಕೋಟಿ!

    IPL Final: ಆರ್‌ಸಿಬಿ ಚಾಂಪಿಯನ್‌ ಆದ್ರೆ ಸಿಗಲಿದೆ 20 ಕೋಟಿ!

    ಅಹಮದಾಬಾದ್‌: ಐಪಿಎಲ್‌ ಫೈನಲ್‌ನಲ್ಲಿ (IPL Fainl) ಆರ್‌ಸಿಬಿ ಚಾಂಪಿಯನ್‌ ಪಟ್ಟ ಅಲಂಕರಿಸಿದರೆ 20 ಕೋಟಿ ರೂ. ನಗದು ಬಹುಮಾನವನ್ನು ಪಡೆಯಲಿದೆ.

    ಐಪಿಎಲ್‌ ಆಡಳಿತ ಸಮಿತಿ ಈ ವರ್ಷ ಎಷ್ಟು ನಗದು ಬಹುಮಾನವನ್ನು (Cah Prize) ನೀಡಲಾಗುತ್ತದೆ ಎಂಬುದನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ 2022 ರಲ್ಲಿ ಘೋಷಣೆಯಾದ ನಗದು ಬಹುಮಾನವನ್ನೇ 2023, 2024 ರಲ್ಲಿ ನೀಡಲಾಗಿತ್ತು. ಇದನ್ನೂ ಓದಿ: IPL Final – ಮೀಸಲು ದಿನವೂ ಮಳೆಯಿಂದ ಪಂದ್ಯ ರದ್ದಾದ್ರೆ ಚಾಂಪಿಯನ್‌ ಯಾರು?

    ಯಾವ ತಂಡಕ್ಕೆ ಎಷ್ಟು ಕೋಟಿ?
    ಚಾಂಪಿಯನ್ ತಂಡ 20 ಕೋಟಿ ರೂ., ರನ್ನರ್ ಅಪ್ 13 ಕೋಟಿ ರೂ., ಕ್ವಾಲಿಫೈಯರ್‌ನಲ್ಲಿ 3ನೇ ಸ್ಥಾನ ಪಡೆದ ಮುಂಬೈಗೆ 7 ಕೋಟಿ ರೂ. ಎಲಿಮಿನೇಟರ್‌ನಲ್ಲಿ ಔಟ್‌ಗಿ ನಾಲ್ಕನೇ ಸ್ಥಾನ ಪಡೆದ ಗುಜರಾತ್‌ ಟೈಟಾನ್ಸ್‌ಗೆ 6.5 ಕೋಟಿ ರೂ. ಸಿಗಲಿದೆ. ತಂಡಗಳಿಗೆ ಮಾತ್ರ ಅಲ್ಲದೇ ವೈಯಕ್ತಿಕ ಪ್ರಶಸ್ತಿಗಳಿಗೂ ನಗದು ಬಹುಮಾನಗಳಿವೆ.

    ವೈಯಕ್ತಿಕ ಬಹುಮಾನ ಎಷ್ಟು?
    ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ರನ್‌ ಹೊಡೆದ ಬ್ಯಾಟ್ಸ್‌ಮನ್‌, ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌, ಸೂಪರ್ ಸ್ಟ್ರೈಕರ್‌, ಪವರ್ ಪ್ಲೇಯರ್‌, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ, ಗೇಮ್ ಚೇಂಜರ್ ಪ್ರಶಸ್ತಿಗೆ 10 ಲಕ್ಷ ರೂ. ಸಿಗುತ್ತದೆ. ಇದನ್ನೂ ಓದಿ: IPL Final | ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಮದಗಜಗಳ ಗುದ್ದಾಟ – ಆರ್‌ಸಿಬಿಯೇ ಗೆಲ್ಲುವ ಫೆವರೆಟ್‌

    2008 ರಲ್ಲಿ ಐಪಿಎಲ್‌ ಆರಂಭವಾದಾಗ ಗೆದ್ದ ತಂಡಕ್ಕೆ 4.8 ಕೋಟಿ ರೂ. ಸಿಗುತ್ತಿತ್ತು. ರನ್ನರ್ ಅಪ್ ತಂಡಕ್ಕೆ ಅದರ ಅರ್ಧದಷ್ಟು ಹಣ ಸಿಗುತ್ತಿತ್ತು. ಈಗ ಬಹುಮಾನದ ಮೊತ್ತವು ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ.

  • IPL Final – ಮೀಸಲು ದಿನವೂ ಮಳೆಯಿಂದ ಪಂದ್ಯ ರದ್ದಾದ್ರೆ ಚಾಂಪಿಯನ್‌ ಯಾರು?

    IPL Final – ಮೀಸಲು ದಿನವೂ ಮಳೆಯಿಂದ ಪಂದ್ಯ ರದ್ದಾದ್ರೆ ಚಾಂಪಿಯನ್‌ ಯಾರು?

    ಅಹಮದಾಬಾದ್‌: ಐಪಿಎಲ್‌ ಫೈನಲ್‌ (IPL Final) ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿಯಿದೆ. ಬೆಂಗಳೂರು ಅಭಿಮಾನಿಗಳು ಆರ್‌ಸಿಬಿ (RCB) ಗೆಲ್ಲಬೇಕೆಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಈ ಪಂದ್ಯಕ್ಕೆ ಮಳೆ (Rain) ಬರಬಹುದೇ ಎಂಬ ಆತಂಕ ಈಗ ಅಭಿಮಾನಿಗಳನ್ನು ಕಾಡುತ್ತಿದೆ.

    ಪಂಜಾಬ್-ಮುಂಬೈ ನಡುವಿನ ಎಲಿಮಿನೇಟರ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಕೊನೆಗೂ ಮಳೆ ನಿಂತ ಮೇಲೆ ಸುಮಾರು 2:30 ಗಂಟೆಯ ನಂತರ ಪಂದ್ಯ ಆಡಿಸಲಾಗಿತ್ತು. ಮಳೆ ನಿಂತ ಬಳಿಕ ಪೂರ್ಣ 20 ಓವರ್‌ಗಳನ್ನು ಆಡಿಸಲಾಗಿತ್ತು. ಇದನ್ನೂ ಓದಿ: IPL Final | ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಮದಗಜಗಳ ಗುದ್ದಾಟ – ಆರ್‌ಸಿಬಿಯೇ ಗೆಲ್ಲುವ ಫೆವರೆಟ್‌

    ಹವಾಮಾನ ವರದಿ ಪ್ರಕಾರ ಅಹಮದಾಬಾದ್‌ನಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ. ಮಳೆ ಬಂದರೂ ದೊಡ್ಡ ಮಟ್ಟದ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಪ್ರತಿ ದೊಡ್ಡ ಕ್ರಿಕೆಟ್‌ ಟೂರ್ನಿಗೆ ಇರುವಂತೆ ಫೈನಲ್ ಪಂದ್ಯಕ್ಕೆ ಮೀಸಲು ದಿನ ಇರಿಸಲಾಗಿದೆ.

    ಒಂದು ವೇಳೆ ಮಂಗಳವಾರ ಪಂದ್ಯ ಸಾಧ್ಯವಾಗದೇ ಹೋದರೆ ಮೀಸಲು ದಿನವಾದ ಬುಧವಾರ ಪಂದ್ಯ ನಡೆಯಲಿದೆ. ಒಂದು ವೇಳೆ ಎರಡೂ ದಿನ ಪಂದ್ಯ ನಡೆಯದೇ ಇದ್ದರೆ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ (Punjab Kings) ತಂಡ ಚಾಂಪಿಯನ್ ಆಗಲಿದೆ. ಇದನ್ನೂ ಓದಿ: ಪಂಜಾಬ್‌ ವಿರುದ್ಧ ಫೈನಲ್‌ ಮ್ಯಾಚ್‌ – ಆರ್‌ಸಿಬಿ ಫ್ಯಾನ್ಸ್‌ಗೆ 1 ರೂ.ಗೆ ಆಫರ್‌ ಕೊಟ್ಟ ಸ್ನೂಕರ್‌ ಕ್ಲಬ್

    ಲೀಗ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್‌ ತಲಾ 19 ಅಂಕ ಸಂಪಾದಿಸಿದ್ದರೂ ನೆಟ್‌ ರನ್‌ ರೇಟ್‌ನಲ್ಲಿ ಪಂಜಾಬ್‌ ಮುಂದಿದೆ. ಆರ್‌ಸಿಬಿ 0.301 ನೆಟ್‌ ರನ್‌ ರೇಟ್‌ ಹೊಂದಿದ್ದರೆ ಪಂಜಾಬ್‌ 0.372 ಹೊಂದಿದೆ. 0.071 ಅಂಕ ಹೆಚ್ಚಿರುವ ಕಾರಣ ಪಂಜಾಬ್‌ ಚಾಂಪಿಯನ್‌ ಆಗಿ ಹೊರಹೊಮ್ಮಲಿದೆ.

  • IPL Final | ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಮದಗಜಗಳ ಗುದ್ದಾಟ – ಆರ್‌ಸಿಬಿಯೇ ಗೆಲ್ಲುವ ಫೆವರೆಟ್‌

    IPL Final | ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಮದಗಜಗಳ ಗುದ್ದಾಟ – ಆರ್‌ಸಿಬಿಯೇ ಗೆಲ್ಲುವ ಫೆವರೆಟ್‌

    ಅಹಮದಾಬಾದ್‌: 18ನೇ ಆವೃತ್ತಿಯ ಐಪಿಎಲ್‌ ಆವೃತ್ತಿಯ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇಂದು ಪಂಜಾಬ್‌ ಕಿಂಗ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಫೈನಲ್‌ಪಂದ್ಯಕ್ಕೆ ಇಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಎರಡು ದಶಕಗಳಿಂದ ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಕಾದಿರುವ ಬೆಂಗಳೂರು ಮತ್ತು ಪಂಜಾಬ್‌ಗೆ ವಿರಾಟ್‌ ಕೊಹ್ಲಿ (Virat Kohli) ಮತ್ತು ಶ್ರೇಯಸ್‌ ಅಯ್ಯರ್‌ (Shreyas Iyer) ಇಬ್ಬರೂ ಪ್ರಶಸ್ತಿ ಗೆದ್ದುಕೊಡುವ ಉತ್ಸಾಹದಲ್ಲಿ ಎದುರಾಗುತ್ತಿದ್ದಾರೆ. 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಕಾತರದಲ್ಲಿವೆ ಎರಡೂ ತಂಡಗಳೂ ಇವೆ.

    ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದ್ದು, ಜಿಯೋ ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ. 2ನೇ ಅವಧಿಯಲ್ಲಿ ಇಬ್ಬನಿಯ ಪ್ರಭಾವದಿಂದಾಗಿ ಚೇಸಿಂಗ್ ಸುಲಭವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಟಾಸ್‌ ಗೆಲುವು ನಿರ್ಣಾಯಕವಾಗಲಿದೆ. ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಉಭಯ ತಂಡಗಳ ನಡುವೆ ಈವರೆಗೆ 36 ಪಂದ್ಯಗಳು ನಡೆದಿದ್ದು, ಇತ್ತಂಡಗಳೂ ತಲಾ 18 ಪಂದ್ಯಗಳಲ್ಲಿ ಗೆಲುವು ಕಂಡಿವೆ.

    ಪ್ರತಿ ವರ್ಷವೂ ʻಈ ಸಲ ಕಪ್‌ ನಮ್ದೇ’ ಎನ್ನುವ ಘೋಷವಾಕ್ಯ ಈ ಬಾರಿಯಾದ್ರೂ ನಿಜವಾಗಲಿ ಅನ್ನೋದು ಅಭಿಮಾನಿಗಳ ಹೆಬ್ಬಯಕೆಯಾಗಿದೆ. ಅದಕ್ಕಾಗಿ ದೇಶಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲೆಂದು ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ಎರಡೂ ತಂಡಗಳು ಇದುವರೆಗೂ ಟ್ರೋಫಿ ಗೆಲ್ಲದೇ ಇರುವುದರಿಂದ 18ನೇ ಆವೃತ್ತಿಯ ಐಪಿಎಲ್‌ ಫೈನಲ್‌ ಮೇಲೆ ಕ್ರೀಡಾಭಿಮಾನಿಗಳ ಚಿತ್ತ ನೆಟ್ಟಿದೆ.

    ಆರ್‌ಸಿಬಿ ಗೆಲ್ಲುವ ಫೇವರೆಟ್
    ಕ್ವಾಲಿಫೈಯರ್‌-1ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (Punjab King) ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಆರ್‌ಸಿಬಿ (RCB) ನೇರವಾಗಿ ಫೈನಲ್‌ ಪ್ರವೇಶಿಸಿದೆ. ಹಿಂದಿನ ಆವೃತ್ತಿಗಳಲ್ಲಿನ ನೀರಸ ಪ್ರದರ್ಶನ ಮೀರಿರುವ ಆರ್‌ಸಿಬಿ, ಈ ವರ್ಷ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅರಂಭಿಕ ಕ್ರಮಾಂಕದಲ್ಲಿ ಕೊಹ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ್ದಲ್ಲದೇ, ಈ ಬಾರಿ ಒಟ್ಟು 614 ರನ್‌ ಗಳಿಸಿದ್ದಾರೆ.

    ಬ್ಯಾಟಿಂಗ್‌ನಲ್ಲಿ ಕಿಂಗ್‌ ಕೊಹ್ಲಿ, ಫಿಲ್‌ ಸಾಲ್ಟ್‌, ರಜತ್‌ ಪಾಟಿದಾರ್‌, ಮಯಾಂಕ್‌ ಅಗರ್ವಾಲ್‌, ಜಿತೇಶ್‌ ಶರ್ಮಾ ಬಲ ತುಂಬಿದ್ರೆ ಬೌಲಿಂಗ್‌ನಲ್ಲಿ ಮಾರಕ ವೇಗಿ ಜೋಷ್‌ ಹೇಜಲ್‌ವುಡ್‌, ಯಶ್‌ ದಯಾಳ್‌, ಸುಯಶ್‌, ಕೃನಾಲ್‌ ಪಾಂಡ್ಯ, ರೊಮಾರಿಯೊ ಶೆಫರ್ಡ್‌ ಹೀಗೆ ತಂಡದ ಪ್ರತಿಯೊಬ್ಬ ಸದಸ್ಯನೂ ಫೈನಲ್‌ ತನಕದ ತಂಡದ ಪಯಣದಲ್ಲಿ ತಮ್ಮ ಹೊಣೆಗಾರಿಕೆ ನಿಭಾಯಿಸುವ ಮೂಲಕ ಹೆಗಲು ನೀಡಿದ್ದಾರೆ.

    ಅಯ್ಯರ್‌ ಕಡೆಗಣಿಸುವಂತಿಲ್ಲ
    ಇನ್ನೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನ ಫೈನಲ್‌ವರೆಗೆ ಕೊಂಡೊಯ್ದಿದ್ದ, ಕೆಕೆಆರ್‌ಗೆ ಪ್ರಶಸ್ತಿ ತಂದುಕೊಟ್ಟಿದ್ದ ಶ್ರೇಯಸ್‌ ಅವರನ್ನೂ ಕಡೆಗಣಿಸುವಂತಿಲ್ಲ. 18 ವರ್ಷದ ಐಪಿಎಲ್‌ ಇತಿಹಾಸದಲ್ಲಿ ಮೂರು ತಂಡಗಳನ್ನು ಫೈನಲ್‌ಗೆ ಮುನ್ನಡೆಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷವೂ ಪಂಜಾಬ್‌ ತಂಡವನ್ನು ಫೈನಲ್‌ ತಲುಪಿಸುವ ಮೂಲಕ ತಮ್ಮ ನಾಯಕತ್ವ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಪ್ರಶಸ್ತಿ ಗೆಲುವಿನ ಶ್ರೇಯವನ್ನು ಅಯ್ಯರ್‌ ನೀಡಿರಲಿಲ್ಲ ಎನ್ನುವ ಟೀಕೆಗಳು ಕೇಳಿಬಂದಿದ್ದವು. ಪ್ರಭ್‌ಸಿಮ್ರನ್‌ ಸಿಂಗ್‌, ಜೋಷ್‌ ಇಂಗ್ಲಿಸ್‌, ಪ್ರಿಯಾಂಶ್‌ ಆರ್ಯ, ಶಶಾಂಕ್‌ ಸಿಂಗ್‌, ಅಯ್ಯರ್‌ ಪಡೆಗೆ ಆಸರೆ ಒದಗಿಸಿದ್ದಾರೆ. ಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಟಾರ್‌ ಸ್ಪಿನ್ನರ್‌ ಯಜ್ವೇಂದ್ರ ಚಾಹಲ್‌ ಕ್ವಾಲಿಫೈಯರ್‌-2 ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ತಂಡ, ಚಾಹಲ್‌ ಫೈನಲ್‌ನಲ್ಲಿ ಕಮ್‌ ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದೆ.

    ಮಳೆ ಸಾಧ್ಯತೆ ಇದೆಯೇ?
    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಕ್ವಾಲಿಫೈಯರ್‌ ಪಂದ್ಯ, ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭಗೊಂಡಿತ್ತು. ಫೈನಲ್‌ಗೂ ಸಾಕ್ಷಿಯಾಗಲಿರುವ ಅಹಮದಾಬಾದ್‌ನಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂಗಳವಾರ ಮಳೆಯ ಸಾಧ್ಯತೆ ಶೇ.62ರಷ್ಟಿದೆ. ಆದರೆ, ಬೆಳಗ್ಗೆ ಅಥವಾ ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಮಳೆಯ ಸಾಧ್ಯತೆ ಶೇ.5ರಷ್ಟು ಎಂದು ಹವಾಮಾನ ವರದಿ ತಿಳಿಸಿದೆ.