Tag: RCB vs GT

  • ಬಟ್ಲರ್‌ ಬೊಂಬಾಟ್‌ ಫಿಫ್ಟಿ; ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನ – ಗುಜರಾತ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ಬಟ್ಲರ್‌ ಬೊಂಬಾಟ್‌ ಫಿಫ್ಟಿ; ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನ – ಗುಜರಾತ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ಬೆಂಗಳೂರು: ಜೋಸ್‌ ಬಟ್ಲರ್‌ (Jos Buttler) ಬೊಂಬಾಟ್‌ ಅರ್ಧಶತಕ, ಮೊಹಮ್ಮದ್‌ ಸಿರಾಜ್‌ (Mohammed Siraj) ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಗುಜರಾತ್‌ ಟೈಟಾನ್ಸ್‌ (Gujarat Titans) 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್‌ ಗೆಲುವಿನ ಕನಸು ಕಂಡಿದ್ದ ಆರ್‌ಸಿಬಿ ಆಸೆಗೆ ತಣ್ಣೀರು ಎರಚಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್‌ ಗಳಿಸಿತ್ತು. 170 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್‌ ಟೈಟಾನ್ಸ್‌ 17.5 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 170 ರನ್‌ ಗಳಿಸಿ ಗೆಲುವು ಸಾಧಿಸಿತು.

    ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿದ ಗುಜರಾತ್‌ ಟೈಟಾನ್ಸ್‌ 4.4 ಓವರ್‌ಗಳಲ್ಲಿ 32 ರನ್‌ ಗಳಿಸಿದ್ದಾಲೇ ತನ್ನ ಮೊದಲ ವಿಕೆಟ್‌ ಕಳೆದುಕೊಂಡಿತು. ಈ ವೇಳೆ 2ನೇ ವಿಕೆಟ್‌ಗೆ ಜೊತೆಗೂಡಿದ ಸಾಯಿ ಸುದರ್ಶನ್‌ (Sai Sudharsan) ಹಾಗೂ ಜೋಸ್‌ ಬಟ್ಲರ್‌ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. 2ನೇ ವಿಕೆಟಿಗೆ ಈ ಜೋಡಿ 47 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟ ನೀಡಿತು. ಇದಾದ ಬಳಿಕ ಮುರಿಯದ 3ನೇ ವಿಕೆಟಿಗೆ ಬಟ್ಲರ್‌ – ರುದರ್ಫೋರ್ಡ್ 36 ರನ್‌ (32 ಎಸೆತ) ಜೊತೆಯಾಟದಿಂದ ಟೈಟಾನ್ಸ್‌ ಪಡೆ ಸುಲಭ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

    ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌:
    ಕಳೆದ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಜೋಸ್‌ ಬಟ್ಲರ್‌ 3ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಬ್ಬರಿಸಿ ಬೊಬ್ಬರಿದರು. 31 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ ಸಹಿತ ಅರ್ಧಶತಕ ಸಿಡಿಸಿದ್ದ ಬಟ್ಲರ್‌ ಒಟ್ಟು 39 ಎಸೆತಗಳಲ್ಲಿ 73 ರನ್‌ (6 ಸಿಕ್ಸ್‌, 5 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಇದರೊಂದಿಗೆ ಆರಂಭಿಕ ಆಟಗಾರ ಸಾಯಿ ಸುದರ್ಶನ್‌ 49 ರನ್‌ (36 ಎಸೆತ, 7 ಬೌಂಡರಿ, 1 ಸಿಕ್ಸರ್‌), ಸ್ಫೋಟಕ ಪ್ರದರ್ಶನ ನೀಡಿದ ಶೆರ್ಫೇನ್ ರುದರ್ಫೋರ್ಡ್ 18 ಎಸೆತಗಳಲ್ಲಿ 30 ರನ್‌ (3 ಸಿಕ್ಸರ್, 1 ಬೌಂಡರಿ), ನಾಯಕ ಶುಭಮನ್‌ ಗಿಲ್‌ 14 ರನ್‌ ಕೊಡುಗೆ ನೀಡಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದಿದ್ದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್‌ಗಳನ್ನು ಬಾರಿಸುವ ಮೂಲಕ ಗುಜರಾತ್‌ಗೆ 170 ಸಾಧಾರಣ ರನ್‌ಗಳ ಗುರಿ ನೀಡಿತು. ಆರಂಭಿಕರಾಗಿ ಕಣಕ್ಕಿಳಿಸಿದ್ದ ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌ ಸ್ಫೋಟಕ ಪ್ರದರ್ಶನ ನೀಡಲು ಮುಂದಾಗಿದ್ದರು. ಆದ್ರೆ ಒಂದೆಡೆ ರನ್‌ ಕಲೆ ಹಾಕುತ್ತಿದ್ದಂತೆ ಮತ್ತೊಂದೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಪವರ್‌ ಪ್ಲೇನಲ್ಲೇ ವೇಗಿ ಮೊಹಮ್ಮದ್‌ ಸಿರಾಜ್‌ ಫಿಲ್‌ ಸಾಲ್ಟ್‌ ಹಾಗೂ ದೇವದತ್‌ ಪಡಿಕಲ್‌ ವಿಕೆಟ್‌ ಕಿತ್ತಿದ್ದು, ಆರ್‌ಸಿಬಿಗೆ ಬಹುದೊಡ್ಡ ಹೊಡೆತ ನೀಡಿತು.

    ಲಿವಿಂಗ್‌ಸ್ಟೋನ್‌ ಅಮೋಘ ಅರ್ಧಶತಕ:
    ಬಳಿಕ ಕಣಕ್ಕಿಳಿದು ತಾಳ್ಮೆಯ ಆಟ ಆಡಿದ ಲಿಯಾಮ್ ಲಿವಿಂಗ್‌ಸ್ಟೋನ್ ಆಕರ್ಷಕ ಅರ್ಧಶತಕ ಸಿಡಿಸಿದರು. 40 ಎಸೆತಗಳಲ್ಲಿ 54 ರನ್‌ (5 ಸಿಕ್ಸರ್‌, 1 ಬೌಂಡರಿ) ಚಚ್ಚಿದ್ದರು. ಇವರಿಗೆ ಉತ್ತಮ ಸಾಥ್‌ ನೀಡಿದ ಜಿತೇಶ್‌ ಶರ್ಮಾ 33 ರನ್‌ (21 ಎಸೆತ, 1 ಸಿಕ್ಸರ್‌, 5 ಬೌಂಡರಿ) ಗಳಿಸಿ ಔಟಾಗಿ ಪೆವಿಲಿಯನ್‌ನತ್ತ ತೆರಳಿದರು. ಇನ್ನು ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಟಿಂ ಡೇವಿಡ್‌ 16 ರನ್‌ ಚಚ್ಚಿ 170 ರನ್‌ಗಳ ಗುರಿ ನೀಡುವಲ್ಲಿ ಯಶಸ್ವಿಯಾದರು.

    ಮತ್ತೊಂದೆಡೆ ಗುಜರಾತ್‌ ಪರ ಬೌಲಿಂಗ್‌ನಲ್ಲಿ ಮೊಹಮ್ಮದ್‌ ಸಿರಾಜ್‌ 3 ವಿಕೆಟ್‌ ಪಡೆದರೆ, ಸಾಯಿ ಕಿಶೋರ್‌ 2 ವಿಕೆಟ್‌, ಪ್ರಸಿದ್‌ ಕೃಷ್ಣ, ಅರ್ಷದ್‌ ಖಾನ್‌ ಮತ್ತು ಇಶಾಂತ್‌ ಶರ್ಮಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

  • ತವರಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡುತ್ತಾ ಆರ್‌ಸಿಬಿ?

    ತವರಲ್ಲಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡುತ್ತಾ ಆರ್‌ಸಿಬಿ?

    – ಬೆಂಗಳೂರಲ್ಲಿ ಗುಜರಾತ್‌ ವಿರುದ್ಧ ಇಂದು ಆರ್‌ಸಿಬಿ ಸೆಣಸಾಟ

    ಬೆಂಗಳೂರು: ಐಪಿಎಲ್‌ 2025ರ ಟೂರ್ನಿಯಲ್ಲಿ ತವರಿನಾಚೆ ಆಡಿತ ಎರಡೂ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಆರ್‌ಸಿಬಿ ಇಂದು ತವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲಿದೆ.

    ಬುಧವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸಜ್ಜಾಗಿದೆ. ಹ್ಯಾಟ್ರಿಕ್‌ ಗೆಲುವಿನ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿ ಆರ್‌ಸಿಬಿ ಇದೆ.

    ಟೂರ್ನಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿತ್ತು. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿರುವ ರಜತ್‌ ಪಾಟೀದಾರ್‌ ಪಡೆ ಕೆಕೆಆರ್‌ ವಿರುದ್ಧ ಗೆದ್ದು ಬೀಗಿತ್ತು. ತವರಲ್ಲೇ ಕೆಕೆಆರ್‌ಗೆ ಪಾದಾರ್ಪಣೆ ಪಂದ್ಯದಲ್ಲಿ ಮುಖಭಂಗವಾಯಿತು.

    ಇನ್ನು ಚೆಪಾಕ್‌ನಲ್ಲಿ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್‌ ಪಾಟೀದಾರ್‌ ಜವಾಬ್ದಾರಿಯುತ ಆಡವಾಡಿದ್ದರು. ಬೌಲಿಂಗ್‌ನಲ್ಲಿ ಜೋಶ್‌ ಹ್ಯಾಜಲ್‌ವುಡ್‌ ಮಿಂಚಿದ್ದರು. ಇದರಿಂದ ಚೆನ್ನೈ ವಿರುದ್ಧ ಆರ್‌ಸಿಬಿ 17 ವರ್ಷಗಳ ಬಳಿಕ ಐತಿಹಾಸಿಕ ಗೆಲುವು ದಾಖಲಿಸಿತು. ಫಿಲ್‌ ಸಾಲ್ಟ್‌, ಕೊಹ್ಲಿ, ಡೇವಿಡ್‌, ಪಡಿಕ್ಕಲ್ ಬ್ಯಾಟಿಂಗ್‌ ಫಾರ್ಮ್‌ನಲ್ಲಿದ್ದಾರೆ. ಕೃನಾಲ್‌, ಭುವನೇಶ್ವರ್‌, ಹ್ಯಾಜಲ್‌ವುಡ್‌ ಬೌಲಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ.

    ಗುಜರಾತ್‌ ತಂಡಕ್ಕೆ ಪ್ರಮುಖ ಆಟಗಾರರೇ ಬಲ. ಶುಭಮನ್‌ ಗಿಲ್‌, ಜೋಸ್‌ ಬಟ್ಲರ್‌, ರಶೀದ್‌ ಖಾನ್‌ ತಂಡದಲ್ಲಿ ನಿರ್ಣಾಯಕ ಪಾತ್ರ. ಆರ್‌ಸಿಬಿಯಿಂದ ಗುಜರಾತ್‌ಗೆ ಬಂದಿರುವ ಮೊಹಮ್ಮದ್‌ ಸಿರಾಜ್‌ ಕೂಡ ತಂಡದ ಬೌಲಿಂಗ್‌ ಅಸ್ತ್ರವಾಗಿದ್ದಾರೆ.

    ಐಪಿಲ್‌ ಟೂರ್ನಿಯಲ್ಲಿ ಇದುವರೆಗೆ ಆರ್‌ಸಿಬಿ ಮತ್ತು ಗುಜರಾತ್‌ ಒಟ್ಟು 5 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅವುಗಳ ಪೈಕಿ ಆರ್‌ಸಿಬಿ 3ರಲ್ಲಿ ಹಾಗೂ ಗುಜರಾತ್‌ 2 ಪಂದ್ಯಗಳಲ್ಲಿ ಜಯ ಗಳಿಸಿವೆ.

    ಆರ್‌ಸಿಬಿ ಆಟಗಾರರು: ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌, ದೇವದತ್‌ ಪಡಿಕ್ಕಲ್‌, ರಜತ್‌ ಪಾಟೀದಾರ್‌ (ನಾಯಕ), ಲಿಯಾಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಕುಮಾರ್‌, ಟಿಮ್‌ ಡೇವಿಡ್‌, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜೋಶ್‌ ಹ್ಯಾಜಲ್‌ವುಡ್‌, ಯಶ್‌ ದಯಾಳ್‌, ಸುಯಶ್‌/ರಸಿತ್‌.

    ಗುಜರಾತ್‌ ಆಟಗಾರರು: ಸಾಯಿ ಸುದರ್ಶನ್‌, ಅನುಜ್‌, ಶುಭಮನ್‌ ಗಿಲ್‌ (ನಾಯಕ), ಜೋಸ್‌ ಬಟ್ಲರ್‌, ರುಥರ್‌ಪೋರ್ಡ್‌, ಶಾರುಖ್‌, ತೆವಾಟಿಯಾ, ರಶೀದ್‌ ಖಾನ್‌, ರಬಾಡ, ಸಾಯಿ ಕಿಶೋರ್‌, ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ, ಇಶಾಂತ್‌ ಶರ್ಮಾ.

  • ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

    ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಐಪಿಎಲ್‌ನ (IPL 2024) 52ನೇ ಪಂದ್ಯ ನಡೆದಿದ್ದು, ಆರ್‌ಸಿಬಿ (RCB) ಮತ್ತು ಗುಜರಾತ್ ಟೈಟನ್ಸ್ (GT) ಮಧ್ಯೆ ನಡೆದ  ಪಂದ್ಯದಲ್ಲಿ  ಆರ್‌ಸಿಬಿ 4 ವಿಕೆಟ್‌ಗಳ ಜಯ ಗಳಿಸಿದೆ.

    ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಗುಜರಾತ್ ತಂಡ 19.3 ಓವರ್‌ಗಳಿಗೆ 147 ರನ್ ಗಳಿಸುವ ಮೂಲಕ ಆಲೌಟ್ ಆಗಿ ಆರ್‌ಸಿಬಿ ತಂಡಕ್ಕೆ 148 ರನ್‌ಗಳ ಗುರಿ ನೀಡಿತು. 148 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡದಿಂದ ಆರಂಭಿಕ ಆಟಗಾರರಾಗಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಬ್ಯಾಟ್ ಬೀಸಿದರು. ಪಂದ್ಯದ ಆರಂಭದಿಂದಲೇ ಸಿಕ್ಸ್, ಫೋರ್ ಸಿಡಿಸಿದ ಡೂ ಪ್ಲೆಸಿಸ್ ಹಾಗೂ ಕೊಹ್ಲಿ ಜೊತೆಯಾಟವನ್ನು ಕಂಡು ಅಭಿಮಾನಿಗಳು ಹುಚ್ಚೆದ್ದು ಕುಣಿದರು. 18 ಎಸೆತಗಳಿಗೆ ಅರ್ಧ ಶತಕ ಸಿಡಿಸಿದ ಡು ಪ್ಲೆಸಿಸ್ 23 ಎಸೆತಗಳಿಗೆ 64 ರನ್ ಸಿಡಿಸಿ ಮೊದಲ ವಿಕೆಟ್ ಬಿಟ್ಟುಕೊಟ್ಟರು.

    ಕೊಹ್ಲಿ ಹಾಗೂ ಡು ಪ್ಲೆಸಿಸ್ ಮೊದಲ ವಿಕೆಟ್‌ಗೆ 35 ಬಾಲ್‌ಗಳಿಗೆ 92 ರನ್‌ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಬಳಿಕ ಕ್ರೀಸ್‌ಗೆ ಎಂಟ್ರಿ ಕೊಟ್ಟ ವಿಲ್ ಜಾಕ್ಸ್ 3 ಬಾಲ್‌ಗಳಿಗೆ 1 ರನ್ ಗಳಿಸಿ ಔಟಾಗುವ ಮೂಲಕ ಪೆವಿಲಿಯನ್‌ಗೆ ಮರಳಿದರು. ಬಳಿಕ ಬ್ಯಾಟಿಂಗ್‌ಗೆ ಬಂದ ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 3 ಎಸೆತಗಳಿಗೆ 4 ರನ್ ಗಳಿಸಿ ಔಟಾದರು. ರಜತ್ ಪಾಟಿದಾರ್ ಬಳಿಕ ಕ್ರೀಸ್‌ಗೆ ಬಂದ ಕ್ಯಾಮರೂನ್ ಗ್ರೀನ್ 2 ಬಾಲ್‌ಗೆ 1 ರನ್ ಹೊಡೆದು ತಮ್ಮ ಆಟ ಕೊನೆಗೊಳಿಸಿದರು. 27 ಎಸೆತಗಳಿಗೆ 42 ರನ್ ಸಿಡಿಸಿ ವಿರಾಟ್ ಕೊಹ್ಲಿ ಪೆವಿಲಿಯನ್‌ಗೆ ಮರಳಿದರು. ಕೊಹ್ಲಿ ಬಳಿಕ ದಿನೇಶ್ ಕಾರ್ತಿಕ್ ಔಟಾಗದೇ 12 ಬಾಲ್‌ಗೆ 21 ರನ್ ಗಳಿಸಿ ಸ್ವಪ್ನಿಲ್ ಔಟಾಗದೇ 9 ಬಾಲ್‌ಗೆ 15 ರನ್‌ ಗಳಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.

    ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ತಂಡದಿಂದ ಆರಂಭಿಕ ಆಟಗಾರರಾಗಿ ಶುಭಮನ್ ಗಿಲ್ ಮತ್ತು ವೃದ್ದಿಮಾನ್ ಸಾಹಾ ಕ್ರೀಸ್‌ಗಿಳಿದಿದ್ದರು. ವೃದ್ದಿಮಾನ್ ಸಾಹಾ 7 ಎಸೆತಗಳಿಗೆ ಕೇವಲ 1 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ ಕೂಡ 2 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿ ಮತ್ತೊಂದು ವಿಕೆಟ್ ಬಿಟ್ಟುಕೊಟ್ಟರು. ಸ್ಟಾರ್ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ 14 ಎಸೆತಗಳಿಗೆ 6 ರನ್‌ಗಳಿಸಿ ಔಟಾಗುವ ಮೂಲಕ ಗುಜರಾತ್ ಮತ್ತೊಂದು ವಿಕೆಟ್ ಕಳೆದುಕೊಂಡಿತು.

    ಬಳಿಕ ಬಂದ ಡೇವಿಡ್ ಮಿಲ್ಲರ್ 20 ಬಾಲ್‌ಗಳಿಗೆ 30 ರನ್ ಗಳಿಸಿ ತಮ್ಮ ಆಟ ಮುಗಿಸಿದರು. ಶಾರುಖ್ ಖಾನ್ 24 ಎಸೆತಗಳಿಗೆ 37 ರನ್ ಗಳಿಸಿ ರನೌಟ್ ಆದರು. ಡೇವಿಡ್ ಮಿಲ್ಲರ್ ಹಾಗೂ ಶಾರುಖ್ ಖಾನ್ ಜೊತೆಯಾಟವಾಡಿ 67 ರನ್ ಕಲೆ ಹಾಕಿದರು. ರಶೀದ್ ಖಾನ್ 14 ಬಾಲ್‌ಗಳಿಗೆ 18 ರನ್ ಗಳಿಸಿ  ಪೆವಿಲಿಯನ್‌ಗೆ ಮರಳಿದರು. ರಾಹುಲ್ ತೆವಾಟಿಯ 21 ಬಾಲ್‌ಗಳಿಗೆ 35 ರನ್‌ಗಳಿಸಿ 7ನೇ ವಿಕೆಟ್ ಬಿಟ್ಟುಕೊಟ್ಟರು. ವಿಜಯ್ ಶಂಕರ್ ಕೊನೆಯ ಓವರ್‌ನಲ್ಲಿ 10 ರನ್ ಗಳಿಸಿ ಔಟಾಗಿ ಆಟ ಮುಗಿಸಿದರು.

  • ಚಿನ್ನಸ್ವಾಮಿ ಅಂಗಳದಲ್ಲಿಂದು ಆರ್‌ಸಿಬಿಗೆ ಟೈಟಾನ್ಸ್‌ ಸವಾಲು – ಹೈವೋಲ್ಟೇಜ್‌ ಕದನಕ್ಕೆ ಮಳೆ ಅಡ್ಡಿ ಆತಂಕ!

    ಚಿನ್ನಸ್ವಾಮಿ ಅಂಗಳದಲ್ಲಿಂದು ಆರ್‌ಸಿಬಿಗೆ ಟೈಟಾನ್ಸ್‌ ಸವಾಲು – ಹೈವೋಲ್ಟೇಜ್‌ ಕದನಕ್ಕೆ ಮಳೆ ಅಡ್ಡಿ ಆತಂಕ!

    ಬೆಂಗಳೂರು: ಐಪಿಎಲ್‌ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿರುವ ಆರ್‌ಸಿಬಿ (IPL 2024) ಮುಂದಿನ ತನ್ನೆಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಇಂದು (ಏ.4) ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ (Gujarat Taitans) ಎದುರು ಸೆಣಸಲು ಸಜ್ಜಾಗಿದ್ದು, ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ.

    2024ರ ಐಪಿಎಲ್‌ ಟೂರ್ನಿಯಲ್ಲಿ ಅಸ್ಥಿರ ಪ್ರದರ್ಶನ ನೀಡಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಕಳೆದ 2 ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಅದರಲ್ಲೂ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ ಎದುರು 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಇದೀಗ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಅಂಥದ್ದೇ ಪ್ರದರ್ಶನ ನೀಡಿ ನಾಕ್‌ಔಟ್‌ ಹಂತಕ್ಕೆ ಮತ್ತಷ್ಟು ಹತ್ತಿರವಾಗಲು ಆರ್‌ಸಿಬಿ ಎದುರು ನೋಡುತ್ತಿದೆ. ಇದನ್ನೂ ಓದಿ: ಟಿ20 ವಿಶ್ವಕಪ್‌ ತಂಡದಿಂದ ರಾಹುಲ್‌ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

    ಅತ್ತ ಹೊಸ ನಾಯಕ ಶುಭಮನ್ ಗಿಲ್‌ ಸಾರಥ್ಯದಲ್ಲಿ ಆರಂಭಿಕ ಪಂದ್ಯಗಳನ್ನು ಗೆದ್ದು ಉತ್ತಮ ಪ್ರದರ್ಶನ ನೀಡಿದ್ದ ಗುಜರಾತ್‌ ಟೈಟಾನ್ಸ್‌ ತಂಡ ಬಳಿಕ ಸತತ ವೈಫಲ್ಯಗಳೊಂದಿಗೆ ನಿರಾಸೆ ಅನುಭವಿಸಿದೆ. ಕಳೆದ 5 ಪಂದ್ಯಗಳಲ್ಲಿ ಟೈಟಾನ್ಸ್‌ 3 ಸೋಲು ಕಂಡಿದೆ. ಈವರೆಗೆ ಆಡಿರುವ 10 ಪಂದ್ಯಗಳಲ್ಲಿ 4 ಜಯ ಮತ್ತು 6 ಸೋಲಿನೊಂದಿಗೆ 8 ಅಂಕಗಳನ್ನು ಕಲೆಹಾಕಿದ್ದು 8ನೇ ಸ್ಥಾನ ಅಲಂಕರಿಸಿದೆ. ಹೀಗಾಗಿ ಉಳಿದ 4 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದು ಸುಲಭವಾಗಿ ಪ್ಲೇ-ಆಫ್ಸ್‌ ತಲುಪಲು ಗಿಲ್‌ ಪಡೆ ಎದುರು ನೋಡುತ್ತಿದೆ. ಇತ್ತಂಡಗಳು ಒಟ್ಟು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ತಲಾ ಎರಡರಲ್ಲಿ ಗೆಲುವು ಸಾಧಿಸಿದೆ.

    ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್-11
    ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್‌ ಗ್ರೀನ್‌, ದಿನೇಶ್ ಕಾರ್ತಿಕ್, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಯಶ್ ದಯಾಳ್. ಇದನ್ನೂ ಓದಿ: ಮುಂಬೈ ವಿರುದ್ಧ 24 ರನ್‌ಗಳ ಜಯ – ಎರಡನೇ ಸ್ಥಾನಕ್ಕೆ ಜಿಗಿದ ಕೋಲ್ಕತ್ತಾ

    ಮಳೆ ಅಡ್ಡಿಯಾಗುತ್ತಾ?
    ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶುಕ್ರವಾರವೂ ಬೆಂಗಳೂರಿನ ಕೆಲವೆಡೆ ಮಳೆಯಾಗಿದ್ದು, ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.