Tag: Ray

  • ಆರಂಭದಲ್ಲಿ ಬೌಲಿಂಗ್ ನಂತ್ರ ಬ್ಯಾಟಿಂಗ್ – ಭಾರತಕ್ಕೆ 8 ವಿಕೆಟ್‍ಗಳ ಭರ್ಜರಿ ಜಯ

    ಆರಂಭದಲ್ಲಿ ಬೌಲಿಂಗ್ ನಂತ್ರ ಬ್ಯಾಟಿಂಗ್ – ಭಾರತಕ್ಕೆ 8 ವಿಕೆಟ್‍ಗಳ ಭರ್ಜರಿ ಜಯ

    ನೇಪಿಯರ್: ಬೌಲಿಂಗ್, ಬ್ಯಾಟಿಂಗ್ ನಲ್ಲಿ ದಿಟ್ಟ ಪ್ರದರ್ಶನ ತೋರಿದ ಭಾರತ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯವನ್ನು 8 ವಿಕೆಟ್‍ಗಳಿಂದ ಗೆದ್ದುಕೊಂಡು 5 ಪಂದ್ಯಗಳ ಸರಣಿಯಲ್ಲಿ 1-0 ಅಂತರಿಂದ ಮುನ್ನಡೆ ಸಾಧಿಸಿದೆ.

    ಗೆಲ್ಲಲು ಡಕ್ವರ್ತ್ ಲೂಯಿಸ್ ನಿಯಮ ಅಡಿಯಲ್ಲಿ 49 ಓವರಗಳಿಗೆ 156 ರನ್ ಗಳ ಗುರಿಯನ್ನು ಪಡೆದ ಟೀಂ ಇಂಡಿಯಾ 34.5 ಓವರ್ ಗಳಲ್ಲಿ ರನ್ ಹೊಡೆದು ಜಯಗಳಿಸಿತು. ಟೀಂ ಇಂಡಿಯಾ ಪರ ಅರ್ಧ ಶತಕ ಸಾಧನೆ ಮಾಡಿದ ಧವನ್ ಔಟಾಗದೇ 75ರನ್(103 ಎಸೆತ, 6 ಬೌಂಡರಿ) ಕೊಹ್ಲಿ 45 ರನ್(59 ಎಸೆತ, 3 ಬೌಂಡರಿ) ಹೊಡೆದರು. ಇದನ್ನು ಓದಿ:  ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಸೂರ್ಯ ರಶ್ಮಿ ಅಡ್ಡಿ – 40 ನಿಮಿಷ ಆಟಕ್ಕೆ ಬ್ರೇಕ್!

    ಟೀಂ ಇಂಡಿಯಾ 41 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದಾಗ 11 ರನ್ ಗಳಿಸಿದ್ದ ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಆರಂಭಿಕ ಧವನ್ ಅವರನ್ನು ಕೂಡಿಕೊಂಡ ನಾಯಕ ಕೊಹ್ಲಿ ತಂಡವನ್ನು ಗೆಲುವಿನ ಸನಿಹ ತಂದರು.

    ಪಂದ್ಯದ 11 ಓವರ್ ವೇಳೆ ಸೂರ್ಯನ ರಶ್ಮಿ ಆಟಕ್ಕೆ ಅಡ್ಡಿ ಪಡಿಸಿದ ಕಾರಣ ಪಂದ್ಯವನ್ನು 1 ಓವರ್ ಕಡಿತಗೊಳಿಸಲಾಯಿತು. ಡಕ್ವರ್ತ್ ಲೂಯಿಸ್ ನಿಯಮ ಅಳವಡಿಕೆಯಾದ ಪರಿಣಾಮ 158 ರನ್ ಗಳ ಗುರಿಯ ಬದಲಾಗಿ ಟೀಂ ಇಂಡಿಯಾಗೆ 49 ಓವರ್ ಗಳಲ್ಲಿ 156 ರನ್‍ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು.

    ಸುಲಭ ಗುರಿಯನ್ನು ಬೆನ್ನತ್ತಿದ್ದ ಆಟಗಾರರು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದರು. 45 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಫರ್ಗುಸನ್ ಗೆ ವಿಕೆಟ್ ಒಪ್ಪಿಸುವ ಮೂಲಕ ಅರ್ಧ ಶತಕ ವಂಚಿತರಾದರು. ಬಳಿಕ ಬಂದ ರಾಯುಡು ಬೀರುಸಿನ ಬ್ಯಾಟಿಂಗ್ ಗೆ ಮುಂದಾದರು. ಅಂತಿಮವಾಗಿ ರಾಯುಡು 13 ರನ್ ನೊಂದಿಗೆ ಗೆಲುವಿನ ಶಾಟ್ ಹೊಡೆದು ಸಂಭ್ರಮಿಸಿದರು.  ಇದನ್ನು ಓದಿ: 10 ರನ್ ಗಳಿಸಿ ಲಾರಾ ದಾಖಲೆ ಸರಿಗಟ್ಟಿದ ಶಿಖರ್ ಧವನ್

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್‍ಗೆ ಆರಂಭದಲ್ಲೇ ಶಮಿ ಶಾಕ್ ನೀಡಿದರು. ತಂಡದ ಮೊತ್ತ 18 ಆಗುವಷ್ಟರಲ್ಲೇ ಇಬ್ಬರು ಆರಂಭಿಕ ಆಟಗಾರರನ್ನು ಶಮಿ ಎಸೆತಕ್ಕೆ ಬೌಲ್ಡ್ ಆಗಿದ್ದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ನಾಯಕ ಕೇನ್ ವಿಲಿಯಮ್ಸನ್ ಅರ್ಧ ಶತಕ ಸಿಡಿಸಿ ತಂಡ ಮೊತ್ತ 100 ರನ್ ಗಡಿ ದಾಟಲು ಕಾರಣರಾದರು. ಶತಕದತ್ತ ಮುನ್ನುಗ್ಗುತ್ತಿದ್ದ ವಿಲಿಯಮ್ಸನ್‍ಗೆ ಕುಲ್ದೀಪ್ ಯಾದವ್ ಬ್ರೇಕ್ ಹಾಕಿದ್ರು. ಅಂತಿಮವಾಗಿ ವಿಲಿಯಮ್ಸನ್ 81 ಎಸೆತಗಳಲ್ಲಿ 64 ರನ್(81 ಎಸೆತ, 7 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಕಿವೀಸ್ ಬ್ಯಾಟ್ಸ್ ಮನ್ ಗಳನ್ನು ಬಂದಷ್ಟೇ ವೇಗದಲ್ಲಿ ವಾಪಸ್ ಕಳುಹಿಸಲು ಟೀಂ ಇಂಡಿಯಾ ಬೌಲರ್ ಗಳು ಯಶಸ್ವಿಯಾದರು. ಅಂತಿಮವಾಗಿ ನ್ಯೂಜಿಲೆಂಡ್ 38 ಓವರ್ ಗಳಲ್ಲಿ 157 ರನ್ ಗಳಿಗೆ ಆಲೌಟ್ ಆಯ್ತು. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದು ಮಿಂಚಿದರೆ, ಮೊಹಮ್ಮದ್ ಶಮಿ 3, ಚಹಲ್ 2, ಜಾಧವ್ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಸೂರ್ಯ ರಶ್ಮಿ ಅಡ್ಡಿ – 40 ನಿಮಿಷ ಆಟಕ್ಕೆ ಬ್ರೇಕ್!

    ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೆ ಸೂರ್ಯ ರಶ್ಮಿ ಅಡ್ಡಿ – 40 ನಿಮಿಷ ಆಟಕ್ಕೆ ಬ್ರೇಕ್!

    ನೇಪಿಯರ್: ಇಲ್ಲಿನ ಮ್ಯಾಕ್ಲೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಸೂರ್ಯನ ಕಿರಣಗಳು ನೇರವಾಗಿ ಬ್ಯಾಟ್ಸ್ ಮನ್ ಮುಖಕ್ಕೆ ಬೀಳುತ್ತಿದ್ದ ಕಾರಣ 40 ನಿಮಿಷಗಳ ಕಾಲ ಪಂದ್ಯಕ್ಕೆ ವಿರಾಮ ನೀಡಿದ ಅಪರೂಪದ ಘಟನೆ ನಡೆದಿದೆ.

    ಗೆಲ್ಲಲು 158 ರನ್ ಗಳ ಟಾರ್ಗೆಟ್ ಗುರಿ ಪಡೆದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 10 ಓವರ್ ಪೂರ್ಣಗೊಂಡು ತಂಡದ ಡ್ರಿಂಕ್ಸ್ ಬ್ರೇಕ್ ಪಡೆದ ವೇಳೆ ಘಟನೆ ನಡೆದಿದೆ. ಸೂರ್ಯನ ಬೆಳಕು ನೇರವಾಗಿ ಸ್ಟ್ರೈಕ್ ನಲ್ಲಿದ್ದ ಬ್ಯಾಟ್ಸ್ ಮನ್ ಕಣ್ಣಿಗೆ ಬೀಳುತ್ತಿದ್ದ ಪರಿಣಾಮ ಅಂಪೈರ್ ಆಟ ನಿಲ್ಲಿಸಲು ಸೂಚಿಸಿದ್ದರು.

    ಕ್ರಿಕೆಟ್ ಆಟದಲ್ಲಿ ಸಾಮಾನ್ಯವಾಗಿ ಮಂದ ಬೆಳಕು ಹಾಗೂ ಮಳೆಯ ಕಾರಣ ಆಟಕ್ಕೆ ತಡೆ ನೀಡಲಾಗುತ್ತದೆ. ಆದರೆ ಈ ಪಂದ್ಯದಲ್ಲಿ ಸೂರ್ಯನ ರಶ್ಮಿಗಳ ಕಾರಣದಿಂದ ತಡೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ದಕ್ಷಿಣ ಅಫ್ರಿಕಾ ಅಂಪೈರ್ ಶಾನ್ ಜಾರ್ಜ್, 14 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ಎದುರಿಸಿದ್ದು, ಆಟಗಾರರ ರಕ್ಷಣೆಯ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಯಿತು. ಈ ಬಗ್ಗೆ ಆಟಗಾರರಿಗೆ ಹೆಚ್ಚಿನ ಅರಿವು ಇಲ್ಲದ ಕಾರಣ ಯಾವುದೇ ಆಟಗಾರು ಮನವಿ ಸಲ್ಲಿಸಲಿಲ್ಲ. ಆದ್ದರಿಂದ ನಾವೇ ಈ ನಿರ್ಧಾರ ಕೈಗೊಂಡಿದ್ದೇವು. ಆದರೆ ಪಂದ್ಯಕ್ಕೆ 30 ನಿಮಿಷಗಳ ಅಧಿಕ ಸಮಯ ಇರುವ ಕಾರಣ 50 ಓವರ್ ಗಳ ಪೂರ್ಣ ಆಟ ನಡೆಯುತ್ತದೆ ಎಂದು ತಿಳಿಸಿದ್ದರು. ಆದರೆ ಅಂತಿಮವಾಗಿ 1 ಓವರ್ ಅನ್ನು ಕಡಿತಗೊಳಿಸಲಾಯಿತು.

    ಯಾಕೆ ಹೀಗಾಯ್ತು?
    ಎಲ್ಲ ಸ್ಟೇಡಿಯಂಗಳ ಪಿಚ್ ಗಳು ಉತ್ತರ ದಕ್ಷಿಣವಾಗಿ ನಿರ್ಮಾಣವಾಗುತ್ತದೆ. ಆದರೆ ಇಲ್ಲಿನ ಪಿಚ್ ಪೂರ್ವ, ಪಶ್ಚಿಮ ದಿಕ್ಕಿನಲ್ಲಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ಈ ಕ್ರೀಡಾಂಗಣವನ್ನು ಕ್ರಿಕೆಟ್ ಅಲ್ಲದೇ ಇನ್ನಿತರ ಆಟಕ್ಕೂ ಬಳಸಲಾಗುತ್ತದೆ.

    ಕಳೆದ 2 ವರ್ಷಗಳ ಹಿಂದೆ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಅಲ್ಲದೇ ಜನವರಿ 19 ರಂದು ನಡೆದ ನ್ಯೂಜಿಲೆಂಡ್‍ನ ಸೆಂಟ್ರಲ್ ಡಿಸ್ಟ್ರಿಕ್ಟ್ಸ್ ಹಾಗೂ ಕ್ಯಾಂಟರ್ಬರಿ ತಂಡಗಳ ಪಂದ್ಯದ ವೇಳೆಯೂ ಇದೇ ಕಾರಣಕ್ಕೆ ಆಟವನ್ನು ಸ್ಥಗಿತಗೊಳಿಸಲಾಗಿತ್ತು.

    ಟೀಂ ಇಂಡಿಯಾ ವಿರುದ್ಧದ ಪಂದ್ಯದ ವೇಳೆ ಆಕಾಶದಲ್ಲಿ ಮೋಡಗಳನ್ನ ನಿರೀಕ್ಷೆ ಮಾಡಲಾಗಿತ್ತು. ಆದರೆ ಸೂರ್ಯನ ಪ್ರಭಾವ ಹೆಚ್ಚಾಗಿದ್ದ ಪರಿಣಾಮ ಆಟಕ್ಕೆ ತಡೆ ನೀಡಲಾಯಿತು. ಈ ಸಮಸ್ಯೆಗೆ ನಮ್ಮಿಂದ ಏನು ಮಾಡಲು ಸಾಧ್ಯವಿರಲಿಲ್ಲ. ಈ ರೀತಿಯ ಸಮಸ್ಯೆಯಿಂದಾಗಿ ಪಂದ್ಯಗಳು ಸ್ಥಗಿತಗೊಳ್ಳುವುದು ಇದೇ ಮೊದಲೆನಲ್ಲ ಎಂದು ಕ್ರೀಡಾಂಗಣದ ಅಧಿಕಾರಿಯೊಬ್ಬರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv