ಬೆಂಗಳೂರು: ರೊಮಾರಿಯೊ ಶೆಫರ್ಡ್ (Romario Shepherd) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 213 ರನ್ ಕಲೆಹಾಕಿದ ಆರ್‌ಸಿಬಿ (RCB) ಎದುರಾಳಿ ಸಿಎಸ್‌ಕೆ ಗೆಲುವಿಗೆ 214 ರನ್‌ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿತು. ಮೊದಲ ವಿಕೆಟ್‌ಗೆ ವಿರಾಟ್ ಕೊಹ್ಲಿ (Virat Kohli) ಮತ್ತು ಜಾಕೊಬ್ ಬೆಥೆಲ್ (Jacob Bethell )ಜೋಡಿ 59 ಎಸೆತಗಳಲ್ಲಿ 97 ರನ್‌ಗಳ ಜೊತೆಯಾಟ ನೀಡಿತ್ತು. ಇವರಿಬ್ಬರ ವಿಕೆಟ್ ಬೀಳುತ್ತಿದ್ದಂತೆ ರನ್ ವೇಗವೂ ಕಡಿತಗೊಂಡಿತ್ತು. 14 ಓವರ್‌ಗಳಲ್ಲಿ 144 ರನ್ ಗಳಿಸಿದ್ದ ಆರ್‌ಸಿಬಿ 18 ಓವರ್ ಕಳೆದರೂ 160 ರನ್ ಗಡಿ ದಾಟುವಲ್ಲಿ ವಿಫಲವಾಗಿತ್ತು.
ಇದರಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವುದೂ ಕಷ್ಟವೆಂದೇ ಭಾವಿಸಲಾಗಿತ್ತು. ಆದ್ರೆ ಕೊನೆಯಲ್ಲಿ ಕ್ರೀಸ್‌ಗೆ ಬಂದ ರೊಮಾರಿಯೋ ಶೆಫರ್ಡ್ 19ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 33 ರನ್ ಚಚ್ಚಿದರು. ಜೊತೆಗೆ 20ನೇ ಓವರ್‌ನಲ್ಲಿ ಬರೋಬ್ಬರಿ 20 ರನ್ ಚಚ್ಚಿದ ಪರಿಣಾಮ ಆರ್‌ಸಿಬಿ ಸುಲಭವಾಗಿ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.
ಆರ್‌ಸಿಬಿ ಪರ ವಿರಾಟ್ ಕೊಗ್ಲಿ 62 ರನ್ (33 ಎಸೆತ, 5 ಸಿಕ್ಸರ್, 5 ಬೌಂಡರಿ), ಬೆಥೆಲ್ 55 ರನ್ (33 ಎಸೆತ, 2 ಸಿಕ್ಸರ್, 8 ಬೌಂಡರಿ), ರೊಮಾರಿಯೊ ಶೆಫರ್ಡ್ 53 ರನ್ (14 ಎಸೆತ, 6 ಸಿಕ್ಸರ್, 4 ಬೌಂಡರಿ) ಚಚ್ಚಿದರು. ಇನ್ನುಳಿದಂತೆ ದೇವದತ್ ಪಡಿಕಲ್ 17 ರನ್, ರಜತ್ ಪಾಟಿದಾರ್ 11 ರನ್, ಜಿತೇಶ್ ಶರ್ಮಾ 7 ರನ್, ಟಿಮ್ ಡೇವಿಡ್ 2 ರನ್ ಕೊಡುಗೆ ನೀಡಿದರು.
ಸಿಎಸ್‌ಕೆ ಪರ ಮತೀಶ ಪಥಿರಣ 3 ವಿಕೆಟ್ ಕಿತ್ತರೆ, ನೂರ್ ಅಹ್ಮದ್, ಸ್ಯಾಮ್ ಕರ್ರನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು,
ಬೆಂಗಳೂರು: ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಮತ್ತು ಸಿಎಸ್‌ಕೆ (RCB vs CSK) ನಡುವಿನ ಹಣಾಹಣಿ ಕೆಲವೇ ಕ್ಷಣಗಳಲ್ಲಿ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ರಾತ್ರಿ 7:30ಕ್ಕೆ ಪಂದ್ಯ ಶುರುವಾಗಲಿದೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಇನ್ನೂ ತವರು ಕ್ರೀಡಾಂಗಣದಲ್ಲಿ 9ನೇ ಬಾರಿಗೆ ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಹ್ ಮಾಡಲು ಮುಂದಾಗಿದೆ.
ಇತ್ತ ಬ್ಯಾಟಿಂಗ್ ಮಾಡಲು ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಕಳೆದ ಕೆಲ ಪಂದ್ಯಗಳಲ್ಲಿ ತಮ್ಮ ಘಾತುಕ ದಾಳಿಯಿಂದ ಗೆಲುವು ತಂದುಕೊಟ್ಟಿದ್ದ ಜೋಶ್ ಹೇಜಲ್ವುಡ್ (Josh Hazlewood) ಅವರನ್ನ ಕೈಬಿಟ್ಟಿದೆ. ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿಗೆ (Lungi Ngidi) ಮಣೆ ಹಾಕಿದೆ. ಜೊತೆಗೆ ಅಗ್ರ ಕ್ರಮಾಂದಕ ಬ್ಯಾಟರ್‌ಗಳಲ್ಲಿ ಫಿಲ್ ಸಾಲ್ಟ್ ಬದಲಿಗೆ ಜಾಕೋಬ್ ಬೆಥೆಲ್ (Jacob Bethell) ಅವರನ್ನೇ ಕಣಕ್ಕಿಳಿಸಲಿದೆ.
ಸಿಎಸ್‌ಕೆ ಪ್ಲೇಯಿಂಗ್-11
ಆಯುಷ್ ಮ್ಹಾತ್ರೆ, ಶೇಖ್ ರಶೀದ್, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ದೇವಾಲ್ ಬ್ರೇವಿಸ್, ದೀಪಕ್ ಹೂಡಾ, ಎಂ.ಎಸ್ ಧೋನಿ (ನಾಯಕ + ವಿಕೆಟ್ ಕೀಪರ್), ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮಥೀಶ ಪಥಿರಣ.
ಇಸ್ಲಾಮಾಬಾದ್: 8 ರಾಷ್ಟ್ರಗಳು ಭಾಗವಹಿಸಿರುವ ಐಸಿಸಿ ಪ್ರಾಯೋಜಿತ ಚಾಂಪಿಯನ್ಸ್ ಟ್ರೋಫಿ (Champions Trophy 2025) ಕ್ರೀಡಾಕೂಟ ಇಂದಿನಿಂದ ಶುರುವಾಗುತ್ತಿದೆ. ಮೊದಲ ಪಂದ್ಯ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ (Pak vs NZ) ವಿರುದ್ಧ ಕರಾಚಿ ಮೈದಾನದಲ್ಲಿ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ.
ಎ- ಗುಂಪಿನಲ್ಲಿ ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ ಇದ್ದರೆ, ಬಿ-ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳಿವೆ. ಭಾರತ ತನ್ನ ಮೊದಲ ಪಂದ್ಯವನ್ನು ದುಬೈನಲ್ಲಿ ಫೆ.20ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ ಮತ್ತು ಪಾಕಿಸ್ತಾನದ ವಿರುದ್ದದ ಹೈವೋಲ್ಟೇಜ್ ಪಂದ್ಯ ಫೆ.23ರ ಸೂಪರ್ ಸಂಡೇನಲ್ಲಿ ನಡೆಯಲಿದೆ.
ನೇರ ಪ್ರಸಾರ ಎಲ್ಲಿ?
ಸ್ಟಾರ್ ಸ್ಫೋಟ್ಸ್ ವಾಹಿನಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ. ಜಿಯೋಹಾಟ್‌ಸ್ಟಾರ್ (ಆಪ್) ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಮಾಡಲಿದೆ.
ಭಾರತದ ಮೂವರಿಗೆ ಕೊನೆಯ ಆಟ?
ಹೌದು. ಏಕದಿನ ಮಾದರಿಯ ಚಾಂಪಿಯನ್ಸ್ ಟ್ರೋಫಿ ಟೀಂ ಇಂಡಿಯಾ (Team India) ದಿಗ್ಗಜರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಕೊನೆಯ ಟೂರ್ನಿ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಕಳೆದ ವರ್ಷಾಂತ್ಯದಲ್ಲಿ ಆಸೀಸ್ ವಿರುದ್ಧ ಬಾರ್ಡರ್ ಗವಾಸ್ಕರ್ ಟೆಸ್ಟ್ ಟ್ರೋಫಿಯಲ್ಲಿ ಭಾರತ ಹೀನಾಯ ಸೋಲು ಕಂಡ ಬಳಿಕ ರೋಹಿತ್ ಟೆಸ್ಟ್, ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳೋದಕ್ಕೆ ಮುಂದಾಗಿದ್ದರು. ಆದ್ರೆ ಬಿಸಿಸಿಐ ಒತ್ತಾಯದ ಮೇರೆಗೆ ಮುಂದುವರಿದಿದ್ದಾರೆ ಎಂದು ವರದಿಯಾಗಿದೆ. 2013ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಭಾರತ ಟ್ರೋಫಿಗೆ ಮುತ್ತಿಟ್ಟಾಗಲೂ ಈ ಮೂವರು ಟೂರ್ನಿಯಲ್ಲಿದ್ದರು. ಈ ಬಾರಿ ಟ್ರೋಫಿ ಗೆದ್ದು ಗೆಲುವಿನ ವಿದಾಯ ಹೇಳುವರೇ ಎಂಬುದನ್ನು ಕಾದುನೋಡಬೇಕಿದೆ.
ಕೊಹ್ಲಿ, ರೋಹಿತ್ ಫಾರ್ಮ್‌ನದ್ದೇ ಚಿಂತೆ:
2024ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ರೋಹಿತ್, ಕೊಹ್ಲಿ, ಜಡ್ಡು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದ್ರೆ ಏಕದಿನ, ಟೆಸ್ಟ್ ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರಿದಿದ್ದಾರೆ. ಜಡೇಜಾ ಎಂದಿನಂತೆ ತಮ್ಮ ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಸಾಮರ್ಥ್ಯ ಪ್ರದರ್ಶನ ತೋರಿದ್ದಾರೆ. ಆದ್ರೆ ಕಳೆದ ವರ್ಷಾಂತ್ಯದಲ್ಲಿ ಆಸೀಸ್ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ಬಳಿಕ ಕಳಪೆ ಫಾರ್ಮ್ ಮುಂದುವರಿಸಿದ್ರು. ರಣಜಿ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು. ಮತ್ತೊಂದೆಡೆ ಆಸೀಸ್ ವಿರುದ್ಧದ ಟೆಸ್ಟ್‌ನಿಂದ ನಿರಂತರ ಕಳಪೆ ಫಾರ್ಮ್ ಮುಂದುವರಿಸಿದ್ದರು. ಆದ್ರೆ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ರು, ಅದೇ ರೀತಿ ಸರಣಿಯ 3ನೇ ಪಂದ್ಯದಲ್ಲಿ ಕೊಹ್ಲಿ ಕೂಡ ಅರ್ಧಶತಕ ಸಿಡಿಸಿ ಟೀಕೆಗಳಿಗೆ ಬ್ಯಾಟ್ ಮೂಲಕ ಉತ್ತರ ಕೊಟ್ಟರು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದೇ ಫಾರ್ಮ್ ಮುಂದುವರಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಗಂಭೀರ್ ನಾಯಕತ್ವಕ್ಕೂ ಸವಾಲು:
2024ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಮುಖ್ಯಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡನಂತರ ಭಾರತ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಸಂಪೂರ್ಣ ನೆಲ ಕಚ್ಚಿತ್ತು. ಶ್ರೀಲಂಕಾ ವಿರುದ್ಧ ಏಕದಿನ ಸರಣಿ, ನ್ಯೂಜಿಲೆಂಡ್, ಆಸೀಸ್ ವಿರುದ್ಧದ ಸರಣಿಗಳನ್ನು ಸೋತಿತ್ತು. ಬಿಸಿಸಿಐ ಆಟಗಾರರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದ ಬಳಿಕ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆಸಿದ್ದ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಇನ್ನೂ ಗಂಭೀರ್ ನೇತೃತ್ವದಲ್ಲಿ ಭಾರತ ಎದುರಿಸುತ್ತಿರುವ ಮೊದಲ ಐಸಿಸಿ ಟೂರ್ನಿ ಇದಾಗಿದೆ. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಟ್ರೋಫಿ ಗೆಲುವು ಅನಿವಾರ್ಯವೂ ಆಗಿದೆ.
ಕಟಕ್: ಕ್ಯಾಪ್ಟನ್ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್, ಆಲ್‌ರೌಂಡರ್ ಜಡೇಜಾ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರಿಸಿದೆ. ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಟೀಂ ಇಂಡಿಯಾ 4 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ಗೆದ್ದಿದೆ.
ಕಟಕ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 49.5 ಓವರ್‌ಗಳಿಗೆ ಜೋಸ್ ಬಟ್ಲರ್ ಪಡೆ 304 ರನ್‌ಗಳಿಗೆ ಆಲೌಟ್ ಆಯಿತು. ಬೆನ್ ಡಕೆಟ್ 69, ಜೋ ರೂಟ್ 65, ಲಿಯಾಮ್ ಲಿವಿಂಗ್‌ಸ್ಟೋನ್ 41, ಜೋಸ್ ಬಟ್ಲರ್ 34, ಹ್ಯಾರಿ ಬ್ರೂಕ್ 31 ಹೊಡೆದು ಗಮನ ಸೆಳೆದರು. ಭಾರತಕ್ಕೆ ಇಂಗ್ಲೆಂಡ್ 305 ರನ್‌ಗಳ ಗುರಿ ನೀಡಿತು.
ಟೀಂ ಇಂಡಿಯಾ ಪರ ಜಡೇಜಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಜಡೇಜಾ 3, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಕಬಳಿಸಿದ್ದಾರೆ.
ಭಾರತ ಪರ ನಾಯಕ ರೋಹಿತ್ ಶರ್ಮಾ ಶತಕ ಸಿಡಿಸಿ ಅಬ್ಬರಿಸಿದರು. 90 ಬಾಲ್‌ಗೆ 119 ರನ್ (12 ಫೋರ್, 7 ಸಿಕ್ಸರ್) ಸಿಡಿಸಿ ಮಿಂಚಿದರು. ಶುಭಮನ್ ಗಿಲ್ 60, ಶ್ರೇಯಸ್ ಅಯ್ಯರ್ 44, ಅಕ್ಷರ್ ಪಟೇಲ್ 41 ರನ್ ಗಳಿಸಿ ತಂಡದ ಗೆಲುವಿಗೆ ಸಾಥ್ ನೀಡಿದರು.
ಅಂತಿಮವಾಗಿ ಟೀಂ ಇಂಡಿಯಾ 44.3 ಓವರ್‌ಗಳಿಗೆ 308 ರನ್ ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿತು.
ಮುಂಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶುಕ್ರವಾರ ವರ್ಷದ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಕಳೆದ 8 ಟೆಸ್ಟ್‌ಗಳ ಪೈಕಿ 6 ರಲ್ಲಿ ಸೋತಿದ್ದರೂ, ಮೂವರು ಭಾರತೀಯ ಆಟಗಾರರು ತಾರಾ ಬಳಗದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ನಾಯಕರಾಗಿ ಆಯ್ಕೆಯಾದ ತಂಡದಲ್ಲಿ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಸ್ಥಾನ ಸಿಕ್ಕಿದೆ.
Congratulations to the incredibly talented players named in the ICC Men’s Test Team of the Year 2024 ???? pic.twitter.com/0ROskFZUIr
11 ಆಟಗಾರರ ತಂಡದಲ್ಲಿ ಇಂಗ್ಲೆಂಡ್‌ನ ನಾಲ್ವರು, ಭಾರತದ ಮೂವರು, ನ್ಯೂಜಿಲೆಂಡ್‌ನ ಇಬ್ಬರು ಮತ್ತು ಶ್ರೀಲಂಕಾದ ಒಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.
ಟೆಸ್ಟ್ ತಂಡ ಹೀಗಿದೆ
ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (ನಾಯಕ), ಭಾರತದ ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ, ಇಂಗ್ಲೆಂಡ್‌ನ ಬೆನ್ ಡಕೆಟ್, ಜೊ ರೂಟ್, ಹ್ಯಾರಿ ಬ್ರೂಕ್, ಜೆಮ್ಮಿ ಸ್ಮಿತ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಮ್ಯಾಟ್ ಹೆನ್ರಿ, ಶ್ರೀಲಂಕಾದ ಕಮಿಂದು ಮೆಂಡೀಸ್ ತಂಡದಲ್ಲಿದ್ದಾರೆ.
– 4ನೇ ದಿನದಾಟ ಅಂತ್ಯಕ್ಕೆ ಭಾರತ 252/9, ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ 445 ರನ್
– ಫಾಲೋ ಆನ್‌ನಿಂದ ಬಚಾವ್ ಆಗುತ್ತಿದ್ದಂತೆಯೇ ಗಂಭೀರ್, ವಿರಾಟ್ ಸಂಭ್ರಮ
ಬ್ರಿಸ್ಬೇನ್: ದಿನದ ಕೊನೆಯಲ್ಲಿ ಆಕಾಶ್ ದೀಪ್ (Akash Deep), ಜಸ್ಪ್ರೀತ್ ಬುಮ್ರಾ 39 ರನ್‌ಗಳ ಜೊತೆಯಾಟದಿಂದ ಭಾರತ, ಆಸ್ಟ್ರೇಲಿಯಾ ವಿರುದ್ಧ ಫಾಲೋ ಆನ್‌ನಿಂದ ಬಚಾವ್ ಆಗಿದೆ. ಇದರಿಂದ 3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯಿದೆ.
ವೂಲೂಂಗಬ್ಬಾದ ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ಆಡುತ್ತಿದೆ. ಮಳೆ ಕಾಟದ ಹೊರತಾಗಿಯೂ 4ನೇ ದಿನದ ಅಂತ್ಯಕ್ಕೆ ಭಾರತ 74.5 ಓವರ್‌ಗಳಲ್ಲಿ 9 ವಿಕೆಟ್‌ಗೆ 252 ರನ್ ಗಳಿಸಿದೆ. ವೇಗಿಗಳಾದ ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ (Jasprit Bumrah) ಅಜೇಯರಾಗುಳಿದಿದ್ದು, ಕೊನೆಯ ದಿನ ಕ್ರೀಸ್ ಆರಂಭಿಸಲಿದ್ದಾರೆ.
ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ 3ನೇ ದಿನ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು 51 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.
ಆರಂಭಿಕ ಕೆ.ಎಲ್ ರಾಹುಲ್ 84 ರನ್, ರವೀಂದ್ರ ಜಡೇಜಾ 77 ರನ್‌ಗಳ ಕೊಡುಗೆ ನೀಡಿದರೂ, ಫಾಲೋ ಆನ್‌ಗೆ ತುತ್ತಾಗುವ ಭೀತಿಯಲ್ಲಿತ್ತು. ಆದ್ರೆ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಆಕಾಶ್ ದೀಪ್ ಪ್ಯಾಟ್ ಕಮ್ಮಿನ್ಸ್ ಅವರ ಪಾಲಿನ 21ನೇ ಓವರ್‌ನ 4ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಟೀಂ ಇಂಡಿಯಾವನ್ನು ಫಾಲೋ ಆನ್‌ನಿಂದ ಕಾಪಾಡಿದರು. ಜಸ್ಪ್ರೀತ್ ಬುಮ್ರಾ ಸಹ ಬ್ಯಾಟಿಂಗ್‌ನಲ್ಲಿ ನೆರವಾದರು.
ಟೀಂ ಇಂಡಿಯಾ ಪರ ಕೆ.ಎಲ್ ರಾಹುಲ್ 84 ರನ್ (139 ಎಸೆತ, 8 ಬೌಂಡರಿ), ರವೀಂದ್ರ ಜಡೇಜಾ 77 ರನ್ (123 ರನ್, 7 ಬೌಂಡರಿ, 1 ಸಿಕ್ಸರ್), ರೋಹಿತ್ ಶರ್ಮಾ 10 ರನ್, ನಿತೀಶ್ ಕುಮಾರ್ ರೆಡ್ಡಿ 16 ರನ್ ಗಳಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರು. ಜಸ್ಪ್ರೀತ್ ಬುಮ್ರಾ 10 ರನ್, ಆಕಾಶ್ ದೀಪ್ 27 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಏನಿದು ಫಾಲೊ-ಆನ್ ನಿಯಮ?
ಎಂಸಿಸಿ ಕಾನೂನು 14.1.1 ರ ಪ್ರಕಾರ, 5 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ತಲಾ ಎರಡು ಇನ್ನಿಂಗ್ಸ್ ಟೆಸ್ಟ್ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡುವ ತಂಡವು ಕನಿಷ್ಠ 200 ರನ್‌ಗಳಿಂದ ಮುನ್ನಡೆ ಸಾಧಿಸಿದರೆ, ಎದುರಾಳಿ ತಂಡಕ್ಕೆ ಅದರ ಇನ್ನಿಂಗ್ಸ್ ಅನ್ನು ಅನುಸರಿಸಲು (ಫಾಲೊ-ಆನ್) ಹೇಳುವ ನಿಯಮ ಆಗಿದೆ. ಅಂದ್ರೆ ಮೊದಲ ಇನ್ನಿಂಗ್ಸ್‌ನಲ್ಲಿ ಚೇಸಿಂಗ್ ಮಾಡುವ ತಂಡವು 200 ರನ್‌ಗಳ ಹಿನ್ನಡೆ ಅನುಭವಿಸಿದರೆ, 2ನೇ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಬೇಕಾಗುತ್ತದೆ.
ಭಾರತಕ್ಕೆ ಫಾಲೋ ಆನ್‌ನಿಂದ ಪಾರಾಗಲು 246 ರನ್‌ಗಳ ಅಗತ್ಯವಿತ್ತು. ಆದ್ರೆ 252 ರನ್ ಗಳಿಸಿರೋದ್ರಿಂದ ಪಂದ್ಯವನ್ನು ಡ್ರಾ ಮಾಡುವ ಪ್ರಯತ್ನ ನಡೆಸಬಹುದಾಗಿದೆ.
ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ, ಗಂಭೀರ್ ಸಂಭ್ರಮ:
213 ರನ್‌ಗಳಿಗೆ ಭಾರತ ತನ್ನ 9ನೇ ವಿಕೆಟ್ ಕಳೆದುಕೊಂಡಿತು. ಇದರಿಂದ ಭಾರತ ಫಾಲೋ ಆನ್‌ಗೆ ತುತ್ತಾಗಿ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದ್ರೆ ಕೊನೆಯ ವಿಕೆಟ್‌ಗೆ ಜೊತೆಗೂಡಿದ ಬುಮ್ರಾ, ಆಕಾಶ್‌ದೀಪ್ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದರು. ಪ್ಯಾಟ್ ಕಮ್ಮಿನ್ಸ್ ಅವರ 21ನೇ ಓವರ್‌ನ 4ನೇ ಎಸೆತವನ್ನು ಆಕಾಶ್ ದೀಪ್ ಬೌಂಡರಿಗೆ ಅಟ್ಟುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಹಿರಿಯ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ವಿರಾಟ್ ಕೊಹ್ಲಿ, ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ, ಪರಸ್ಪರ ಕೈಕುಲುಕಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ಕುರಿತ ಫೋಟೋಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಮುಂಬೈ: ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ 24 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅಪಖ್ಯಾತಿಯನ್ನು ಹೆಗಲಿಗೇರಿಸಿಕೊಂಡಿದೆ. ಕೊನೆಯದ್ದಾಗಿ ಭಾರತ 2000 ಇಸವಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಭಾರತದ ವಿರುದ್ಧ 26 ರನ್‌ಗಳ ಅಮೋಘ ಜಯ ಸಾಧಿಸಿ, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಈ ಮೂಲಕ ಭಾರತದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ವೈಟ್‌ವಾಶ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
147 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಅಲ್ಪಮೊತ್ತಕ್ಕೆ ಔಟಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಔಟಾಗಿದ್ದು ತಂಡಕ್ಕೆ ಭಾರಿ ಆಘಾತ ನೀಡಿತು.
ಪಂತ್ ಬಳಿಕ ಟೀಂ ಇಂಡಿಯಾ ಪಥನ:
ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ರಿಷಭ್ ಪಂತ್ ಆಸರೆಯಾದರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಪಂತ್ 57 ಎಸೆತಗಳಲ್ಲಿ 64 ರನ್ (9 ಬೌಂಡರಿ, 1 ಸಿಕ್ಸರ್) ಗಳಿಸಿದ್ದರು. ಈ ವೇಳೆ ಸುಲಭವಾಗಿ ಕೀಪರ್ ಕ್ಯಾಚ್‌ಗೆ ತುತ್ತಾದರು. ಪಂತ್ ಔಟಾದ ಬೆನ್ನಲ್ಲೇ ಅಶ್ವಿನ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಟೀಂ ಇಂಡಿಯಾ 121 ರನ್‌ಗಳಿಗೆ ಸರ್ವಪತನ ಕಂಡಿತು.
ಆಜಾಜ್ ಪಟೇಲ್ ಸ್ಪಿನ್ ದಾಳಿಗೆ ತತ್ತರ:
ಭಾರತೀಯ ಬ್ಯಾಟರ್‌ಗಳ ಎದುರು ಬಿಗಿ ಹಿಡಿತ ಸಾಧಿಸಿದ ಎಡಗೈ ಸ್ಪಿನ್ನರ್ ಆಜಾಜ್ ಪಟೇಲ್ 14.1 ಓವರ್‌ಗಳಲ್ಲಿ 57 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಗ್ಲೆನ್ ಫಿಲಿಪ್ಸ್ 3 ವಿಕೆಟ್ ಹಾಗೂ ಮ್ಯಾಟ್ ಹೆನ್ರಿ 1 ವಿಕೆಟ್ ಕಿತ್ತರು.
147 ರನ್ ಗುರಿ ನೀಡಿದ್ದ ಕಿವೀಸ್:
2ನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಿವೀಸ್ 9 ವಿಕೆಟ್‌ಗೆ 171 ರನ್‌ಗಳಿಸಿತ್ತು. 3ನೇ ದಿನ 143 ರನ್‌ಗಳ ಮುನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ್ದ ನ್ಯೂಜಿಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ 174 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತಕ್ಕೆ 147 ರನ್‌ಗಳ ಗುರಿ ನೀಡಿತ್ತು.
2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 5 ವಿಕೆಟ್, ಅಶ್ವಿನ್ 3 ವಿಕೆಟ್, ಆಕಾಶ್ ದೀಪ್ ಮತ್ತು ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್: ಮೊದಲ ಇನ್ನಿಂಗ್ಸ್ ನ್ಯೂಜಿಲೆಂಡ್ – 235/10, ಭಾರತ – 236/10
2ನೇ ಇನ್ನಿಂಗ್ಸ್ ನ್ಯೂಜಿಲೆಂಡ್ – 174/10, ಭಾರತ – 121/10
ಮುಂಬೈ: ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ಸ್ಪಿನ್ ಮೋಡಿಯಿಂದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದೆ. ನ್ಯೂಜಿಲೆಂಡ್ 2ನೇ ದಿನದಾಟದ ಅಂತ್ಯಕ್ಕೆ 171 ರನ್ ಗಳಿಸಿದ್ದು, 9 ವಿಕೆಟ್ ಕಳೆದುಕೊಂಡಿದೆ. ಆ ಮೂಲಕ 143 ರನ್‌ಗಳ ಮುನ್ನಡೆ ಸಾಧಿಸಿದೆ.
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 28 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಅನ್ನು ಟೀಂ ಇಂಡಿಯಾ ಸಂಘಟಿತ ಬೌಲಿಂಗ್‌ನಿಂದ ಕಟ್ಟಿ ಹಾಕಿತು.
ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲೇಥಮ್‌ನನ್ನು (1 ರನ್) ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಟೀಂ ಇಂಡಿಯಾ ಬೌಲರ್ ಆಕಾಶ್ ದೀಪ್ ಪೆವಿಲಿಯನ್‌ಗೆ ಅಟ್ಟಿದರು. ಅವರ ಜೊತೆಗೆ ಡೆವೋನ್ ಕಾನ್ವೆ (22) ವಿಕೆಟ್ ಅನ್ನು 13ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಉರುಳಿಸಿದರು.
ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ಮೋಡಿ ಮಾಡಿದರು. ಜಡೇಜಾ ದಿನದಾಟದ ಅಂತ್ಯದ ಕೊನೆ ಬಾಲ್‌ನಲ್ಲಿ ವಿಕೆಟ್ ಬೀಳಿಸುವ ಮೂಲಕ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಗೊಂಚಲು ಪಡೆದರು. ಅಶ್ವಿನ್ ಮೂರು ವಿಕೆಟ್ ಕಿತ್ತು ನ್ಯೂಜಿಲೆಂಡ್ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು.
ಟೀಂ ಇಂಡಿಯಾದ ಉತ್ತಮ ಬೌಲಿಂಗ್ ಪ್ರದರ್ಶನದ ನಡುವೆಯೂ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆದ ವಿಲ್ ಯಂಗ್ (51) ಅರ್ಧಶತಕ ಗಳಿಸಿದರು. ಡೇರಿಲ್ ಮಿಚೆಲ್ (22), ಗ್ಲೆನ್ ಫಿಲಿಪ್ಸ್ (26) ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ಆ ಮೂಲಕ 143 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮೂರು ದಿನಗಳ ಆಟ ಬಾಕಿ ಇದೆ.
ಟೆಸ್ಟ್ ಸರಣಿಯ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 235 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಶುಭಮನ್ ಗಿಲ್ (90) ಮತ್ತು ರಿಷಭ್ ಪಂತ್ (60) ಬಲ ತುಂಬಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ (38 ರನ್) ಉಪಯುಕ್ತ ಆಟವಾಡಿದ್ದರಿಂದ ಭಾರತ 263 ರನ್ ಗಳಿಸಲು ಸಾಧ್ಯವಾಯಿತು. ಆ ಮೂಲಕ ನ್ಯೂಜಿಲೆಂಡ್ ಎದುರು ಅಲ್ಪ ಮುನ್ನಡೆ ಸಾಧಿಸಿತ್ತು.
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಉಸಿರು ಆಗಿರುವ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ (MS Dhoni) 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಮುಂದುವರಿಯುವುದು ಪಕ್ಕಾ ಆಗಿದೆ. ನಿರೀಕ್ಷೆಯಂತೆ ಎಂ.ಎಸ್ ಧೋನಿ ಅವರನ್ನ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಸಿಎಸ್‌ಕೆ ಫ್ರಾಂಚೈಸಿ ಉಳಿಸಿಕೊಂಡಿದ್ದು, ಧೋನಿ ಅಭಿಮಾನಿಗಳು ಫುಲ್‌ಖುಷ್ ಆಗಿದ್ದಾರೆ.
ನಾಯಕ ರುತುರಾಜ್, ಜಡ್ಡುಗೆ ಬಂಪರ್:
2024ರ ಐಪಿಎಲ್ ಆವೃತ್ತಿಯಲ್ಲಿ ಅಲ್ಪ ಮೊತ್ತಕ್ಕೆ ತಂಡದಲ್ಲಿ ಉಳಿದುಕೊಂಡಿದ್ದ ಸಿಎಸ್‌ಕೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ (Ruturaj Gaikwad), ಮತೀಶ ಪಥಿರಣ, ಶಿವಂ ದುಬೆ, ರವೀಂದ್ರ ಜಡೇಜಾ (Ravindra Jadeja) ಅವರ ಸಂಭಾವನೆಯಲ್ಲಿ ಭಾರಿ ಏರಿಕೆ ಕಂಡಿದೆ.
ನಿರೀಕ್ಷೆಗೂ ಮೀರಿದಂತೆ ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ರವೀಂದ್ರ ಜಡೇಜಾ ಅವರನ್ನು ತಲಾ 18 ಕೋಟಿ ರೂ.ಗಳಿಗೆ ಚೆನ್ನೈ ತಂಡ ಉಳಿಸಿಕೊಂಡಿದೆ. ಇನ್ನುಳಿದಂತೆ ಮತೀಶ ಪಥಿರಣ 13 ಕೋಟಿ ರೂ., ಶಿವಂ ದುಬೆ 12 ಕೋಟಿ ರೂ.ಗೆ ರಿಟೇನ್ ಆದ್ರೆ, ಎಂ.ಎಸ್ ಧೋನಿ ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಕೇವಲ 4 ಕೋಟಿ ರೂ.ಗಳಿಗೆ ರೀಟೇನ್ ಆಗಿದ್ದಾರೆ.
ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ನಾಯಕ ರುತುರಾಜ್ 6 ಕೋಟಿ ರೂ., ಮತೀಶ ಪಥಿರಣ 20 ಲಕ್ಷ ರೂ., ರವೀಂದ್ರ ಜಡೇಜಾ 16 ಕೋಟಿ ರೂ., ಶಿವಂ ದುಬೆ 4 ಕೋಟಿ ರೂ. ಹಾಗೂ ಎಂ.ಎಸ್ ಧೋನಿ 12 ಕೋಟಿ ರೂ. ಸಂಭಾವನೆ ಪಡೆದಿದ್ದರು.
ಯಾರ ಸಂಭಾವನೆ ಎಷ್ಟು?
* ರುತುರಾಜ್ ಗಾಯಕ್ವಾಡ್ – 18 ಕೋಟಿ ರೂ.
* ರವೀಂದ್ರ ಜಡೇಜಾ – 18 ಕೋಟಿ ರೂ.
* ಮತೀಶ ಪಥಿರಣ – 13 ಕೋಟಿ ರೂ.
* ಶಿವಂ ದುಬೆ – 12 ಕೋಟಿ ರೂ.
* ಎಂ.ಎಸ್ ಧೋನಿ – 4 ಕೋಟಿ ರೂ. (ಅನ್‌ಕ್ಯಾಪ್ಡ್ ಪ್ಲೇಯರ್)
ಮಹಿ ಏಕೆ ಅನ್‌ಕ್ಯಾಪ್ಡ್ ಪ್ಲೇಯರ್?
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದ ಆಟಗಾರರನ್ನು ಅನ್‌ಕ್ಯಾಪ್ಡ್ ಪ್ಲೇಯರ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅವರು ನಿಯಮದಂತೆ 4 ಕೋಟಿ ರೂ. ಮಾತ್ರವೇ ಸಂಭಾವನೆ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಮುಂದಿನ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಮೆಗಾ ಹರಾಜು ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳು ಬಿಡುಗಡೆ ಮಾಡಿವೆ.
ಚೆನ್ನೈ: ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರ ಆಲ್‌ರೌಂಡರ್ ಪ್ರದರ್ಶನದಿಂದಾಗಿ ಭಾರತ ಕ್ರಿಕೆಟ್ ತಂಡವು ಬಾಂಗ್ಲಾದೇಶ (Bangladesh) ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 280 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ದಿನದಾಟದಲ್ಲಿ ಕಠಿಣ ಗುರಿ ಬೆನ್ನಟ್ಟಿದ ಬಾಂಗ್ಲಾ ಭಾರತದ ಸ್ಪಿನ್ ಮಾಂತ್ರಿಕರ ದಾಳಿಗೆ ಮಕಾಡೆ ಮಲಗಿದರು. 158 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ 357 ರನ್‌ಗಳ ಹಿನ್ನಡೆಯೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿತು. 200 ರನ್ ದಾಟುತ್ತಿದ್ದಂತೆ ಪೆವಿಲಿಯನ್ ಪರೇಡ್ ನಡೆಸಿತು. ಪರಿಣಾಮ 234 ರನ್‌ಗಳಿಗೆ ಬಾಂಗ್ಲಾ ಸರ್ವಪತನ ಕಂಡಿತು.
ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಬಾಂಗ್ಲಾ ಪರ 5ನೇ ವಿಕೆಟ್‌ಗೆ ಶಕೀಬ್ ಮತ್ತು ನಾಯಕ ನಜ್ಮುಲ್ ಹೊಸೈನ್ ಸ್ಯಾಂಟೋ (Najmul Hossain Shanto) ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ್ದರು. 108 ಎಸೆತಗಳಲ್ಲಿ ಈ ಜೋಡಿ 48 ರನ್ ಗಳಿಸಿತ್ತು. ಶಕೀಬ್ (Shakib Al Hasan) ಔಟಾಗುತ್ತಿದ್ದಂತೆ ಬಾಂಗ್ಲಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಲು ಶುರು ಮಾಡಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ ಸ್ಯಾಂಟೋ 82 ರನ್, ಜಾಕಿರ್ ಹಸನ್ 33 ರನ್, ಶದಾಮನ್ ಇಸ್ಲಾಮ್ 35 ರನ್, ಮಮಿನ್ಮುಲ್ ಹಾಕಿ ಹಾಗೂ ರಹೀಂ ತಲಾ 13 ರನ್ ಗಳಿಸಿದ್ರೆ, ಶಕೀಬ್ 25 ರನ್ ಗಳಿಸಿದರು. ಉಳಿದ ಆಟಗಾರರು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ, ಭಾರತದ ಎದುರು ಮಂಡಿಯೂರಬೇಕಾಯಿತು.
ಭಾರತ 287ಕ್ಕೆ ಡಿಕ್ಲೆರ್:
ಇದರ ನಡುವೆ ಭಾರತ ತಂಡ 287/4 ಸ್ಕೋರ್‌ಗೆ ಎರಡನೇ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ನಲ್ಲಿ 227 ರನ್‌ಗಳ ಮುನ್ನಡೆ ಸೇರಿದಂತೆ ಬಾಂಗ್ಲಾದೇಶಕ್ಕೆ ಭಾರತ, 515 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಪಂತ್ ಜೊತೆಗೆ ಶುಭಮನ್ ಗಿಲ್ (ಔಟಾಗದೆ 119; 176 ಎಸೆತ, 10 ಬೌಂಡರಿ, 4 ಸಿಕ್ಸರ್) ಕೂಡ ಶತಕ ಗಳಿಸಿದರು. ಕೆಎಲ್ ರಾಹುಲ್ (ಔಟಾಗದೆ 22; 19 ಎಸೆತ, 4 ಬೌಂಡರಿ) ಅಜೇಯರಾಗಿ ಉಳಿದರು.
ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 376 ರನ್:
ಬಾಂಗ್ಲಾದೇಶ ಬೌಲರ್‌ಗಳಲ್ಲಿ ಮೆಹದಿ ಹಸನ್ ಮಿರಾಜ್ ತಲಾ ಎರಡು, ಟಾಸ್ಕಿನ್ ಅಹ್ಮದ್ ಮತ್ತು ನಹಿದ್ ತಲಾ ಒಂದೊಂದು ವಿಕೆಟ್ ಪಡೆದರು. ಇದರ ನಡುವೆ ಭಾರತ ಮೊದಲ ಇನಿಂಗ್ಸ್ನಲ್ಲಿ 376 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ರವಿಚಂದ್ರನ್ ಅಶ್ವಿನ್ (113) ಮತ್ತು ರವೀಂದ್ರ ಜಡೇಜಾ (86) ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಹಸನ್ ಮಹ್ಮೂದ್ (5/83) ಐದು ವಿಕೆಟ್ ಪಡೆದಿದ್ದರು.
ಬಾಂಗ್ಲಾ 149ಕ್ಕೆ ಆಲ್‌ಔಟ್
ಜಸ್‌ಪ್ರೀತ್ ಬುಮ್ರಾ (4/50), ಆಕಾಶ ದೀಪ್ (2/19), ರವೀಂದ್ರ ಜಡೇಜಾ (2/19) ಮತ್ತು ಮೊಹಮ್ಮದ್ ಸಿರಾಜ್ (2/30) ನೆರವಿನಿಂದ ಭಾರತ ತಂಡ, ಪ್ರಥಮ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ ತಂಡವನ್ನು 149 ರನ್‌ಗಳಿಗೆ ಆಲ್‌ಔಟ್ ಮಾಡಿತ್ತು. ಶಕಿಬ್ ಅಲ್ ಹಸನ್ (32) ಗರಿಷ್ಠ ಸ್ಕೋರರ್ ಆಗಿದ್ದರು.