Tag: Ravindra Jadeja

  • India vs Srilanka: ಆಡುವ 11ರ ಬಳಗದಲ್ಲಿ ಮಯಾಂಕ್ ಇನ್!

    India vs Srilanka: ಆಡುವ 11ರ ಬಳಗದಲ್ಲಿ ಮಯಾಂಕ್ ಇನ್!

    ಲಂಡನ್: ಬಾಂಗ್ಲಾದೇಶದ ವಿರುದ್ಧ ಗೆಲುವು ಪಡೆದು 2019 ವಿಶ್ವಕಪ್ ಟೂರ್ನಿ ಸೆಮಿ ಫೈನಲ್ ಪ್ರವೇಶ ಮಾಡಿರುವ ಟೀಂ ಇಂಡಿಯಾ ಶನಿವಾರ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

    ಟೀಂ ಇಂಡಿಯಾ ಸೆಮಿಫೈನಲ್‍ಗೆ ಪ್ರವೇಶ ಪಡೆದಿರುವ ಕಾರಣ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆ ಇದ್ದು, ಬಹುಮುಖ್ಯ ಟೂರ್ನಿಯಲ್ಲಿ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಬಾರದು ಎಂದು ಕೆಲ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

    ಇತ್ತ ತಂಡದಲ್ಲಿ ಬದಲಾವಣೆ ನಡೆದರೆ ಮಯಾಂಕ್ ಅಗರ್ವಾಲ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಮಯಾಂಕ್ ಆರಂಭಿಕರಾಗಿ ಕಣಕ್ಕೆ ಇಳಿದರೆ, ರಾಹುಲ್ 4ನೇ ಕ್ರಮಾಂಕದಲ್ಲಿ ರಿಷಬ್ ಪಂತ್ 5ನೇ ಸ್ಥಾನದಲ್ಲಿ ಆಡಲಿದ್ದಾರೆ. ಒಂದೊಮ್ಮೆ ನಾಳಿನ ಪಂದ್ಯದಲ್ಲಿ ಮಯಾಂಕ್ ಆಡುವುದು ಖಚಿತವಾದರೆ ವಿಶ್ವ ಕ್ರಿಕೆಟ್ ಇತಿಹಾಸಲ್ಲಿ ಮಯಾಂಕ್ ವಿಶೇಷ ದಾಖಲೆಯನ್ನು ಬರೆಯಲಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ನೇರವಾಗಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆಯಲಿದ್ದಾರೆ.

    ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅನುಭವಿ ಆಟಗಾರ ರವೀಂದ್ರ ಜಡೇಜಾ ಅವರಿಗೆ ತಂಡದಲ್ಲಿ ಸ್ಥಾನ ನೀಡಬೇಕು ಎಂದು ಕೆಲ ಮಾಜಿ ಕ್ರಿಕೆಟರ್ ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ತಲಾ ಇಬ್ಬರು ಸ್ಪಿನ್ ಹಾಗೂ ವೇಗದ ಬೌಲರ್ ಗಳೊಂದಿಗೆ ಕಣಕ್ಕೆ ಇಳಿದರೆ ಜಡೇಜಾಗೆ ಅವಕಾಶ ಸಿಗುವ ಸಾಧ್ಯತೆ ಇದೆ.

    ಶ್ರೀಲಂಕಾ ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ನೀಡಿದೆ. ಇದುವರೆಗೂ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ತಂಡದ ಆಟಗಾರರು ನಿರಾಸೆ ಮೂಡಿಸಿದ್ದಾರೆ. ಸೆಮಿ ಫೈನಲ್ ಪಂದ್ಯ ಸೇರಿದಂತೆ ವಿಶ್ವಕಪ್ ಗೆಲ್ಲುವ ದೃಷ್ಟಿಯಲ್ಲಿ ಟೀಂ ಇಂಡಿಯಾ ಆಟಗಾರರ ಫಾರ್ಮ್ ಬಹುಮುಖ್ಯವಾಗುತ್ತದೆ. ಅಲ್ಲದೇ ಸೆಮಿ ಫೈನಲ್‍ಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಆಡುವ ಅವಕಾಶ ಇದ್ದು, ಜುಲೈ 09 ರಂದು ಮೊದಲ ಸೆಮಿ ಫೈನಲ್ ಪಂದ್ಯ ಹಾಗೂ ಜುಲೈ 11 ರಂದು 2ನೇ ಸೆಮಿ ಫೈನಲ್ ಪಂದ್ಯ ನಡೆಯಲಿದೆ. ಜುಲೈ 14 ರಂದು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

  • ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯವಾಡಿದ್ದೇನೆ – ಮಂಜ್ರೇಕರ್‌ಗೆ ಜಡೇಜಾ ಖಡಕ್ ಮಾತು

    ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯವಾಡಿದ್ದೇನೆ – ಮಂಜ್ರೇಕರ್‌ಗೆ ಜಡೇಜಾ ಖಡಕ್ ಮಾತು

    ಬೆಂಗಳೂರು: ವಿಶ್ವಕಪ್ ಟೂರ್ನಿಯ ವೀಕ್ಷಕ ವಿವರಣೆಗಾರ, ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ವಿರುದ್ಧ ಆಲ್‍ರೌಂಡರ್ ರವೀಂದ್ರ ಜಡೇಜಾ ಗರಂ ಆಗಿದ್ದಾರೆ.

    ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುವ ಸಮಯದಲ್ಲಿ ಮಂಜ್ರೇಕರ್ ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಟೆಸ್ಟ್ ಪಂದ್ಯದಲ್ಲಿ ಜಡೇಜಾ ನಿಜವಾಗಿಯೂ ಬೌಲರ್. ಆದರೆ 50 ಓವರ್‌ಗಳ ಪಂದ್ಯದಲ್ಲಿ ಬ್ಯಾಟ್ಸ್ ಮನ್ ಮತ್ತು ಸ್ಪಿನ್ನರ್ ಆಗಿರುತ್ತಾರೆ ಎಂದು ಹೇಳಿದ್ದರು.

    ಮಂಜ್ರೇಕರ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಜಡೇಜಾ ಒಂದು ಪಂದ್ಯವನ್ನು ಆಡದೇ ಇದ್ದರೂ ಅವರ ಕೊಡುಗೆ ವಿಶ್ವಕಪ್‍ನಲ್ಲಿ ಸಾಕಷ್ಟಿದೆ. ಭಾರತದ ಗೆಲುವಿನ ಹಿಂದೆ ಅವರ ಕ್ಯಾಚ್ ಸಹ ಇದೆ ಎನ್ನುವದನ್ನು ಮರೆಯಬೇಡಿ ಎಂದು ಹೇಳಿ ಕ್ರಿಕೆಟ್ ಅಭಿಮಾನಿಗಳು ಮಂಜ್ರೇಕರ್ ವಿರುದ್ಧ ಕಿಡಿ ಕಾರುತ್ತಿದ್ದರು.

    ಚರ್ಚೆ ಜೋರು ಆಗುತ್ತಿದ್ದಂತೆ ಜಡೇಜಾ, ನೀವು ಆಡಿರುವ ಪಂದ್ಯಗಳಿಗಿಂತ ಎರಡು ಪಟ್ಟು ಪಂದ್ಯವಾಡಿದ್ದೇನೆ. ಈಗಲೂ ಆಡುತ್ತಿದ್ದೇನೆ. ಸಾಧನೆ ಮಾಡಿದವರನ್ನು ಗೌರವಿಸಲು ಕಲಿತುಕೊಳ್ಳಿ. ನಿಮ್ಮ ಅತಿಸಾರದ ಮಾತುಗಳನ್ನು ಸಾಕಷ್ಟು ಕೇಳಿದ್ದೇನೆ ಎಂದು ಖಾರವಾಗಿ ಬರೆದು ಮಂಜ್ರೇಕರ್ ಅವರಿಗೆ ಟ್ಯಾಗ್ ಮಾಡಿ ತಿರುಗೇಟು ನೀಡಿದ್ದಾರೆ.

    ಜಡೇಜಾ ಅವರ ಟ್ವೀಟ್ ಅನ್ನು 38 ಸಾವಿರಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿದ್ದರೆ 1.60 ಲಕ್ಷಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.

    ಮಂಜ್ರೇಕರ್ ಒಟ್ಟು 74 ಏಕದಿನ ಪಂದ್ಯವಾಡಿದ್ದು, 1994 ರನ್ ಗಳಿಸಿದ್ದಾರೆ. ಜಡೇಜಾ 151 ಏಕದಿನ ಪಂದ್ಯವಾಡಿದ್ದು 2035 ರನ್ ಗಳಿಸಿದ್ದಾರೆ. 41 ಟೆಸ್ಟ್ ಪಂದ್ಯಗಳಲ್ಲಿ 192 ವಿಕೆಟ್, 151 ಏಕದಿನ ಪಂದ್ಯಗಳ 147 ಇನ್ನಿಂಗ್ಸ್ ನಲ್ಲಿ ಜಡೇಜಾ 174 ವಿಕೆಟ್ ಕಿತ್ತಿದ್ದಾರೆ.

    ಮಂಜ್ರೇಕರ್ ಅವರು ಧೋನಿ ಅವರನ್ನು ಟೀಕೆ ಮಾಡಿದ್ದರು. ಸ್ಟ್ರೈಕ್ ರೇಟ್ ಮತ್ತು ಕೊನೆಯ ಓವರಿನಲ್ಲಿ ಒಂಟಿ ರನ್ ತೆಗೆದುಕೊಳ್ಳುತ್ತಿದ್ದಕ್ಕೆ ಅಸಮಾಧಾನ ಹೊರ ಹಾಕಿದ್ದರು. ಕಪ್ ಗೆಲ್ಲಲು ಹೊರಟ ಭಾರತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ತಂಡವೆಂದರೆ ಅದು ಇಂಗ್ಲೆಂಡ್ ಮಾತ್ರ. ಕೊನೆಯಲ್ಲಿ ಧೋನಿ ಆಟ ಭಾರತದ ಗೆಲುವಿಗೆ ಅಡ್ಡಿಯಾಯಿತು ಎಂದು ಮಂಜ್ರೇಕರ್ ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಸಿಟ್ಟಾದ ಧೋನಿ ಅಭಿಮಾನಿಗಳು ವೀಕ್ಷಕ ವಿವರಣೆಯ ಹುದ್ದೆ ನೀಡಿದ್ದಕ್ಕೆ ಆ ಹುದ್ದೆಗೆ ತಕ್ಕುದಾದ ಭಾಷೆಯನ್ನು ಬಳಸಿ. ಏನೋ ಗೊತ್ತಿದೆ ಎನ್ನುವ ಮಾತ್ರಕ್ಕೆ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

    https://twitter.com/keith_zta/status/1145541916072665088

  • ಜಡೇಜಾ ತಂದೆ, ಸಹೋದರಿ ಕಾಂಗ್ರೆಸ್ ಸೇರ್ಪಡೆ – ಪತ್ನಿ ಬಿಜೆಪಿಯಲ್ಲಿ

    ಜಡೇಜಾ ತಂದೆ, ಸಹೋದರಿ ಕಾಂಗ್ರೆಸ್ ಸೇರ್ಪಡೆ – ಪತ್ನಿ ಬಿಜೆಪಿಯಲ್ಲಿ

    ಗಾಂಧಿನಗರ: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ಕೆಲವು ದಿನಗಳ ಹಿಂದೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಜಡೇಜಾ ಅವರ ತಂದೆ ಹಾಗೂ ಸಹೋದರಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

    ಜಡೆಜಾ ಅವರ ತಂದೆ ಅನಿರುದ್ಧ ಸಿನ್ಹಾ, ಹಾಗೂ ಸಹೋದರಿ ನೈನಬಾ ಗುಜರಾತ್‍ನ ಜಾಮ್‍ನಗರ ಜಿಲ್ಲೆಯ ಕಲವಾಡ್ ನಗರದಲ್ಲಿ ನಡೆದ ಒಂದು ರ‍್ಯಾಲಿ ವೇಳೆ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

    ಕೆಲವು ದಿನಗಳ ಹಿಂದೆ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಕರ್ಣಿ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ರಿವಾಬಾ ಜಡೇಜಾ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಿವಾಬಾ ಜಡೇಜಾ, ಬಿಜೆಪಿ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸ್ಫೂರ್ತಿ. ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನನ್ನ ಸೇವೆ ಸಲ್ಲಿಸಲು ಬಿಜೆಪಿ ಸೇರಿದ್ದರಿಂದ ನನಗೆ ಅವಕಾಶ ದೊರಕಿದೆ ಅಂತ ನಾನು ನಂಬಿದ್ದೇನೆ ಎಂದಿದ್ದರು.

    ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಜಡೇಜಾ ಹಾಗೂ ಅವರ ಪತ್ನಿ ರಿವಾಬಾ ಪ್ರಧಾನಿ ಮೋದಿ ಅವರನ್ನು ಭೇಟಿ ಆಗಿದ್ದರು. ಈ ವೇಳೆ ನರೇಂದ್ರ ಮೋದಿ ಜಡೇಜಾ ಅವರ ಫೋಟೋ ಹಾಕಿ ಟ್ವೀಟ್ ಮಾಡಿದ್ದರು.

  • ಸುಗಮವಾಯ್ತ ವಿಜಯ್ ಶಂಕರ್ ವಿಶ್ವಕಪ್ ಹಾದಿ?

    ಸುಗಮವಾಯ್ತ ವಿಜಯ್ ಶಂಕರ್ ವಿಶ್ವಕಪ್ ಹಾದಿ?

    ನಾಗ್ಪುರ: ಆಸೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಲ್ಲೂ ಮಿಂಚಿದ ಯುವ ಆಟಗಾರ ವಿಜಯ್ ಶಂಕರ್ ಈ ಮೂಲಕ ತಮ್ಮ ವಿಶ್ವಕಪ್ ಹಾದಿಯನ್ನ ಸುಗಮ ಮಾಡಿಕೊಂಡಿದ್ದಾರೆ.

    ಇಂದಿನ ಪಂದ್ಯದಲ್ಲಿ ಅವರು ನೀಡಿದ ಪ್ರದರ್ಶನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಶಂಸೆಗೆ ಕಾರಣವಾಗಿದೆ. ಟೀಂ ಇಂಡಿಯಾಗೆ 500ನೇ ಗೆಲುವಿನ ಸವಿ ಪಡೆಯಲು ಕೂಡ ಶಂಕರ್ ಕಾರಣರಾದರು.

    ಅಂತಿಮ ಓವರಿನಲ್ಲಿ ಮ್ಯಾಜಿಕ್ ಮಾಡಿದ ಶಂಕರ್ ತಾವು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರು ಎಂಬ ಸಂದೇಶವನ್ನು ಆಯ್ಕೆ ಸಮಿತಿಗೆ ರವಾನಿಸಿದರು. ಅರ್ಧ ಶತಕ ಸಿಡಿಸಿ ಸೆಟ್ ಬ್ಯಾಟ್ಸ್ ಮನ್ ಆಗಿದ್ದ ಸ್ಟೋಯಿನ್ಸ್ ಹಾಗೂ ಜಂಪಾ ವಿಕೆಟ್ ಪಡೆದ ಶಂಕರ್ ಪ್ರಶಂಸೆಗೆ ಪಡೆದಿದ್ದಾರೆ.

    ಇದಕ್ಕೂ ಮುನ್ನ ಬ್ಯಾಟಿಂಗ್‍ನಲ್ಲೂ ಮಿಂಚಿದ ಶಂಕರ್ ನಾಯಕ ಕೊಹ್ಲಿ ಅವರೊಂದಿಗೆ ಉಪಯುಕ್ತ ಇನ್ನಿಂಗ್ಸ್ ನಿರ್ಮಿಸಿದರು. ಒಂದಂತದಲ್ಲಿ ಕೊಹ್ಲಿಗಿಂತ ವೇಗವಾಗಿ ರನ್ ಗಳಿಸಿದ ಶಂಕರ್ 46 ರನ್ ಗಳಿಸಿದ್ದ ವೇಳೆ ದುದೃಷ್ಟವಶಾತ್ ರನೌಟ್ ಆದ್ರು. ಆದರೆ ಈ ಪಂದ್ಯದಲ್ಲಿ ಶಂಕರ್ ಅರ್ಧ ಶತಕ ಸಿಡಿಸಲು ಅರ್ಹರಾಗಿದ್ದರು.

    ಪಂದ್ಯ ಆರಂಭಕ್ಕೂ ಮುನ್ನವೇ ಅನುಭವಿ ಜಡೇಜಾ ಹಾಗು ಶಂಕರ್ ನಡುವೇ ವಿಶ್ವಕಪ್ ಆಯ್ಕೆಗೆ ಪೈಪೋಟಿ ನಡೆಯುತ್ತಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು. ಆಯ್ಕೆ ಸಮಿತಿ ಬೌಲಿಂಗ್ ವಿಭಾಗದಲ್ಲಿ ಬುಮ್ರಾ, ಭುವನೇಶ್ವರ್, ಶಮಿ ಮುಂದಾಳತ್ವದಲ್ಲಿ ಹೆಜ್ಜೆ ಇಟ್ಟಿರುವುದು ಸ್ಪಷ್ಟವಾಗುತ್ತಿದೆ. ಇತ್ತ ಗಾಯದ ಸಮಸ್ಯೆಯಿಂದ ಆಸೀಸ್ ಟೂರ್ನಿಗೆ ಅಲಭ್ಯವಾಗಿರುವ ಹಾರ್ದಿಕ್ ವಿಶ್ವಕಪ್‍ಗೆ ಚೇತರಿಕೊಳ್ಳುವ ವಿಶ್ವಾಸ ಇದೆ. ಇದರಂತೆ ಹೆಚ್ಚಿನ ಆಯ್ಕೆಯಾಗಿ ಶಂಕರ್ ಹಾಗೂ ರವೀಂದ್ರ ಜಡೇಜಾ ಪ್ರದರ್ಶನ ಮೇಲೆ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಒಂದು ಪ್ರದರ್ಶನ ಮೇಲೆ ಆಟಗಾರರ ಆಯ್ಕೆ ಖಚಿತ ಪಡಿಸುವುದು ಕಷ್ಟಸಾಧ್ಯವಾದರು. ಇಂದಿನ ಪಂದ್ಯದಲ್ಲಿ ಶಂಕರ್ ಆಯ್ಕೆ ಸಮಿತಿಯ ಗಮನ ಸೆಳೆದಿರುವುದು ಪಕ್ಕ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಬಿಜೆಪಿಗೆ ಸೇರ್ಪಡೆ

    ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಬಿಜೆಪಿಗೆ ಸೇರ್ಪಡೆ

    ಅಹಮದಾಬಾದ್: ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಕರ್ಣಿ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ರಿವಾಬಾ ಜಡೇಜಾ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಿವಾಬಾ ಜಡೇಜಾ, ಬಿಜೆಪಿ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸ್ಫೂರ್ತಿ. ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನನ್ನ ಸೇವೆಸಲ್ಲಿಸಲು ಬಿಜೆಪಿ ಸೇರಿದ್ದರಿಂದ ನನಗೆ ಅವಕಾಶ ದೊರಕಿದೆ ಅಂತ ನಾನು ನಂಬಿದ್ದೇನೆ ಎಂದಿದ್ದಾರೆ.

    ಈ ಸಂದರ್ಭದಲ್ಲಿ ಗುಜರಾತಿನ ಕೃಷಿ ಸಚಿವ ಆರ್.ಸಿ ಫಾಲ್ದು ಹಾಗೂ ಸಂಸದರಾದ ಪೂನಮ್ ಮದಂ ಅವರು ಉಪಸ್ಥಿತರಿದ್ದರು. ಕರ್ಣಿ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ರಿವಾಬಾ ಅವರು ಬಹಳಷ್ಟು ಹೆಸರು ಗಳಿಸಿದ್ದು, ಈಗ ರಾಜಕೀಯಕ್ಕೆ ಕಾಲಿಟ್ಟು ದೇಶಕ್ಕೆ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.

    ಜಡೇಜಾ ಅವರ ಜನಪ್ರಿಯತೆ ನಿಮಗೆ ಚುನಾವಣೆಗೆ ಲಾಭವಾಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಡೇಜಾ ಅವರು ನಮ್ಮ ರಜಪೂತ್ ಸಮುದಾಯಕ್ಕೆ ಮಾತ್ರ ಹೆಮ್ಮೆಯಲ್ಲ, ಯುವ ಜನಾಂಗಕ್ಕೂ ಹೆಮ್ಮೆ. ಆದ್ರೆ ಬಿಜೆಪಿ ಸೇಪಡೆಯಾಗುವ ವಿಚಾರ ನನ್ನ ವೈಯಕ್ತಿಕ ನಿರ್ಧಾರ. ಇದರಿಂದ ಸಮಾಜದಲ್ಲಿ ನನ್ನನ್ನು ನಾನು ಗುರುತಿಸುಕೊಳ್ಳುವುದಕ್ಕೆ ನೆರವಾಗುತ್ತದೆ. ಮಹಿಳಾ ಸಬಲಿಕರಣಕ್ಕೆ ಒಂದು ಉದಾಹರಣೆಯಾಗುತ್ತದೆ. ನಾನು ದೇಶಕ್ಕೆ ಮತ್ತು ನನ್ನ ಸಮುದಾಯಕ್ಕೆ ಸೇವೆ ಸಲ್ಲಿಸಲು ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ.

    ಆದ್ರೆ ನನ್ನ ಪತಿ ಸೆಲೆಬ್ರಿಟಿಯಾಗಿರುವುದರಿಂದ ಅವರು ಯುತ್ ಐಕಾನ್. ಇದರಿಂದ ಬಹಳಷ್ಟು ಯುವಕರು ಕೂಡ ಬಿಜೆಪಿಯತ್ತ ಮುಖಮಾಡುವ ಸಾಧ್ಯತೆಯಿದೆ ಎಂದು ರಿವಾಬಾ ಅಭಿಪ್ರಾಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಮಂದ ಬೆಳಕು, ಮಳೆ ಅಡ್ಡಿ – ಫಾಲೋಆನ್ ಭೀತಿಯಲ್ಲಿ ಆಸೀಸ್

    ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಮಂದ ಬೆಳಕು, ಮಳೆ ಅಡ್ಡಿ – ಫಾಲೋಆನ್ ಭೀತಿಯಲ್ಲಿ ಆಸೀಸ್

    ಸಿಡ್ನಿ ಟೆಸ್ಟ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಟೀಂ ಇಂಡಿಯಾ ಮೈಲುಗೈ ಸಾಧಿಸಿದ್ದು, ಆದರೆ ಮಂದ ಬೆಳಕು ಹಾಗೂ ಕೆಲ ಸಮಯದ ಹಂತದಲ್ಲಿ ಸುರಿದ ಮಳೆಯ ಪರಿಣಾಮ 3ನೇ ದಿನದಾಟ ರದ್ದಾಗಿದೆ.

    ಭಾರತದ 622 ರನ್‍ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 83.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿ ಫಾಲೋಆನ್ ಎದುರಿಸುವ ಆತಂಕದಲ್ಲಿದೆ.

    10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿ 2ನೇ ದಿನದಾಟ ಅಂತ್ಯಗೊಳಿಸಿದ್ದ ಆಸೀಸ್‍ಗೆ 3ನೇ ದಿನದಾಟದಲ್ಲಿ ಉತ್ತಮ ಆರಂಭ ಲಭಿಸಿತ್ತು. ದಿನದ ಮೊದಲ ಅವಧಿಯಲ್ಲಿ ಟೀಂ ಇಂಡಿಯಾ ಬೌಲರ್ ಗಳು ವಿಕೆಟ್ ಪಡೆಯಲು ಪರಿಣಾಮಕಾರಿಯಾಗಲಿಲ್ಲ. ಆದರೆ 2ನೇ ಅವಧಿಯಲ್ಲಿ ಕುಲ್ದೀಪ್ ಯಾದವ್, ಜಡೇಜಾ ಉತ್ತಮ ಬೌಲಿಂಗ್ ನಡೆಸಿ ಆಸೀಸ್ ಬ್ಯಾಟ್ಸ್ ಮನ್‍ಗಳ ವಿಕೆಟ್ ಪಡೆದರು.

    ಆಸೀಸ್ ಪರ ಹ್ಯಾರಿಸ್ 78 ರನ್, ಲ್ಯಾಬುಶಾನೆ 38 ರನ್, ಖುವಾಜಾ 27 ರನ್, ಹೇಡ್ 20 ರನ್ ಗಳಿಸಲಷ್ಟೇ ಶಕ್ತರಾದರು. ಆಸೀಸ್ ನೆಲದಲ್ಲಿ ಸರಣಿ ಗೆಲುವಿನ ಗುರಿ ಹೊಂದಿರುವ ಟೀಂ ಇಂಡಿಯಾ ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಆದರೆ ಮಳೆ ಹಾಗೂ ಮಂದ ಬೆಳಕು ಪಂದ್ಯದ ಫಲಿತಾಂಶ ಮೇಲೆ ಪ್ರಭಾವ ಬೀರುವ ಆತಂಕವನ್ನು ಎದುರಿಸಿದೆ.

    3ನೇ ದಿನದಾಟದ ಅಂತ್ಯಕ್ಕೆ ಆಸೀಸ್ 386 ರನ್‍ಗಳ ಭಾರೀ ರನ್‍ಗಳ ಹಿನ್ನಡೆಯಲ್ಲಿದ್ದು, ಫಾಲೋಆನ್ ತಪ್ಪಿಸಿಕೊಳ್ಳಲು ಇನ್ನು 186 ರನ್ ಗಳಿಸಬೇಕಾದ ಅಗತ್ಯವಿದೆ. ಸದ್ಯ ಆಸೀಸ್‍ನ ಹ್ಯಾಂಡ್ಸ್ ಕೋಮ್ 28 ರನ್, ಕಮಿನ್ಸ್ 25 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈದಾನದಲ್ಲಿಯೇ ಕಿತ್ತಾಡಿಕೊಂಡ ಇಶಾಂತ್, ಜಡೇಜಾ – ವಿಡಿಯೋ ವೈರಲ್

    ಮೈದಾನದಲ್ಲಿಯೇ ಕಿತ್ತಾಡಿಕೊಂಡ ಇಶಾಂತ್, ಜಡೇಜಾ – ವಿಡಿಯೋ ವೈರಲ್

    ಪರ್ತ್: ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಆಲ್‍ರೌಂಡರ್ ರವಿಂದ್ರ ಜಡೇಜಾ ಹಾಗೂ ವೇಗಿ ಇಶಾಂತ್ ಶರ್ಮಾ ಪರಸ್ಪರ ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಎರಡನೇ ಟೆಸ್ಟ್ ಪಂದ್ಯದಲ್ಲಿ ಜಡೇಜಾಗೆ ಅಂತಿಮ 11ರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ನಾಲ್ಕನೇಯ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದಾಗ ಜಡೇಜಾ ಮತ್ತು ಇಶಾಂತ್ ಶರ್ಮಾ ಮೈದಾನದಲ್ಲಿಯೇ ಜಗಳವಾಡಿಕೊಂಡಿದ್ದಾರೆ. ಅನುಭವಿ ಹಾಗೂ ಹಿರಿಯ ಆಟಗಾರರು ಮೈದಾನದಲ್ಲಿಯೇ ಕಿತ್ತಾಡಿಕೊಂಡಿದ್ದು ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.

    ವಿಡಿಯೋದಲ್ಲಿ ಏನಿದೆ?:
    ಎರಡನೇ ಇನ್ನಿಂಗ್ಸ್ ಫೀಲ್ಡಿಂಗ್ ವೇಳೆ ಅಂಪೈರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವರು ಚರ್ಚೆಯಲ್ಲಿ ನಿರತರಾಗಿದ್ದರು. ಆದರೆ ಕ್ಷೇತ್ರ ರಕ್ಷಣೆ ವಿಚಾರವಾಗಿ ಇಶಾಂತ್ ಶರ್ಮಾ ಮತ್ತು ಜಡೇಜಾ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತು ಮುಗಿಸಿ ಮುಂದೆ ಹೋಗಿದ್ದ ಇಶಾಂತ್ ಮತ್ತೆ ಜಡೇಜಾ ಕಡೆ ಮರಳಿ ಬೆರಳು ಮಾಡಿ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಕೂಡಲೇ ಮೊಹಮ್ಮದ್ ಶಮಿ ಹಾಗೂ ಕುಲದೀಪ್ ನೋಡಿ ತಕ್ಷಣವೇ ಅಲ್ಲಿಗೆ ಆಗಮಿಸಿ ಇಬ್ಬರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 146 ರನ್ ಗಳಿಂದ ಗೆದ್ದುಕೊಂಡಿದೆ. 287 ರನ್ ಗುರಿ ಪಡೆದ ಟೀಂ ಇಂಡಿಯಾ 56 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಗಿತ್ತು. 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದ್ದ ಭಾರತ ನಿನ್ನೆಯ ತನ್ನ ಖಾತೆಗೆ 38 ರನ್ ಮಾತ್ರ ಸೇರಿಸಿತು. ಹನುಮ ವಿಹಾರಿ 28 ರನ್, ರಿಷಬ್ ಪಂತ್ 30, ಉಮೇಶ್ ಯಾದವ್ 2 ರನ್ ಗಳಿಸಿ ಔಟಾದರು. ಇಶಾಂತ್ ಶರ್ಮಾ ಮತ್ತು ಬುಮ್ರಾ 0 ಸುತ್ತಿದರು. ಕೊನೆಯ ನಾಲ್ಕು ವಿಕೆಟ್ 3 ರನ್‍ಗಳ ಅಂತರದಲ್ಲಿ ಕಳೆದುಕೊಂಡ ಪರಿಣಾಮ ಭಾರತ ಹೀನಾಯವಾಗಿ ಸೋಲು ಕಂಡಿದೆ.

    https://twitter.com/abhishek2526/status/1074922189990707200

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ಭೇಟಿ ಮಾಡಿ ಕುತೂಹಲ ಮೂಡಿಸಿದ ಜಡೇಜಾ ದಂಪತಿ

    ಮೋದಿ ಭೇಟಿ ಮಾಡಿ ಕುತೂಹಲ ಮೂಡಿಸಿದ ಜಡೇಜಾ ದಂಪತಿ

    ನವದೆಹಲಿ: ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಪತ್ನಿ ಸಮೇತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

    ಆಸೀಸ್ ಟೂರ್ನಿಯ ಪ್ರವಾಸದ ಸಿದ್ಧತೆಯಲ್ಲಿರುವ ಜಡೇಜಾ ಮಂಗಳವಾರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಕೂಡ ಟ್ವೀಟ್ ಮಾಡಿ ಜಡೇಜಾ ಹಾಗೂ ರಿವಾಬಾ ಸೋಲಂಕಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.

    ಮೋದಿ ಅವರ ಭೇಟಿಯ ಫೋಟೋವನ್ನು ರವೀಂದ್ರ ಜಡೇಜಾ ಕೂಡ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಪುಷ್ಪಗುಚ್ಛ ನೀಡಿ ಶುಭಾಶಯ ತಿಳಿಸಿದ್ದಾರೆ.

    ಏಷ್ಯಾಕಪ್ ಟೂರ್ನಿಯಲ್ಲಿ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ್ದ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಆಸೀಸ್ ವಿರುದ್ಧದ ಸಿಮೀತ ಓವರ್‍ಗಳ ಪಂದ್ಯಗಳ ಟೂರ್ನಿಗೆ ಆಯ್ಕೆಯಾಗಲು ವಿಫಲರಾಗಿದ್ದರು. ಸದ್ಯ ಟೆಸ್ಟ್ ತಂಡದಲ್ಲಿ ಮಾತ್ರ ಸ್ಥಾನ ಪಡೆದಿರುವ ರವೀಂದ್ರ ಜಡೇಜಾ ಸದ್ಯದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇತ್ತ ಲೋಕಸಭಾ ಚುನಾವಣೆ ವೇಳೆಯೇ ಜಡೇಜಾ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟೀಂ ಇಂಡಿಯಾ ಬೌಲರ್‌ಗಳ ಆರ್ಭಟ: 104 ರನ್‍ಗಳಿಗೆ ವಿಂಡೀಸ್ ಆಲೌಟ್

    ಟೀಂ ಇಂಡಿಯಾ ಬೌಲರ್‌ಗಳ ಆರ್ಭಟ: 104 ರನ್‍ಗಳಿಗೆ ವಿಂಡೀಸ್ ಆಲೌಟ್

    ತಿರುವನಂತಪುರಂ: 5ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳ ಆರ್ಭಟಕ್ಕೆ ವಿಂಡೀಸ್ 104 ರನ್ ಗಳಿಸಿ ಆಲೌಟ್ ಆಗಿದೆ.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಪತನ ಮೊದಲ ಓವರ್ ನಿಂದಲೇ ಆರಂಭಗೊಂಡಿತ್ತು. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್ ನಲ್ಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದ ವಿಂಡೀಸ್ ಅಂತಿಮವಾಗಿ 31.5 ಓವರ್ ಗಳಲ್ಲಿ 104 ರನ್ ಗಳಿಗೆ ಆಲೌಟ್ ಆಯ್ತು.

    ರವೀಂದ್ರ ಜಡೇಜಾ 9.5 ಓವರ್ ಎಸೆದು 34 ರನ್ ನೀಡಿ 4 ವಿಕೆಟ್ ಕಿತ್ತರು. ಜಸ್ ಪ್ರೀತ್ ಬುಮ್ರಾ ಮತ್ತು ಖಲೀಲ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ವಿಂಡೀಸ್ ಪರವಾಗಿ ಮರ್ಲಾನ್ ಸಮ್ಯೂಯೆಲ್ಸ್ 24 ರನ್, ಹೋಲ್ಡರ್ 25 ರನ್ ಗಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರನೌಟ್ ಮಾಡಿದ ಜಡೇಜಾ ಸ್ಟೈಲ್ ನೋಡಿ ಅಶ್ವಿನ್‍ಗೆ ಆತಂಕ, ಕೊಹ್ಲಿಗೆ ಮುನಿಸು – ವಿಡಿಯೋ ನೋಡಿ

    ರನೌಟ್ ಮಾಡಿದ ಜಡೇಜಾ ಸ್ಟೈಲ್ ನೋಡಿ ಅಶ್ವಿನ್‍ಗೆ ಆತಂಕ, ಕೊಹ್ಲಿಗೆ ಮುನಿಸು – ವಿಡಿಯೋ ನೋಡಿ

    ರಾಜ್ ಕೋಟ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಎದುರಾಳಿ ತಂಡದ ಆಟಗಾರನನ್ನು ರನೌಟ್ ಮಾಡಿದ ಶೈಲಿಯನ್ನು ಕಂಡ ನಾಯಕ ಕೊಹ್ಲಿ, ಅಶ್ವಿನ್ ಆತಂಕಗೊಂಡು ಮುನಿಸು ತೋರಿಸಿ ಆಮೇಲೆ ನಗೆ ಬೀರಿದ ಘಟನೆಗೆ ರಾಜ್‍ಕೋಟ್ ಮೈದಾನ ಇಂದು ಸಾಕ್ಷಿಯಾಯಿತು.

    ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನ 12ನೇ ಓವರ್ ವೇಳೆ ಘಟನೆ ನಡೆದಿದ್ದು, ಈ ಸಮಯದಲ್ಲಿ ಸ್ಟ್ರೈಕ್ ನಲ್ಲಿದ್ದ ಶಿವೊನ್ ಹೇಟ್ಮೆಯರ್, ಅಶ್ವಿನ್ ಬೌಲಿಂಗ್‍ನಲ್ಲಿ ರನ್ ಕದಿಯಲು ಯತ್ನಿಸಿದರು. ಮತ್ತೊಂದು ಬದಿಯಲ್ಲಿದ್ದ ಸುನಿಲ್ ಅಂಬ್ರಿಸ್ ರನ್ ಗಾಗಿ ವೇಗವಾಗಿ ಓಡಿ ಕ್ರೀಸ್ ಮುಟ್ಟಿದ್ದರು. ಆದರೆ ಆ ವೇಳೆಗೆ ಬಾಲ್ ಜಡೇಜಾ ಕೈ ಸೇರಿದ್ದನ್ನು ಕಂಡ ಹೇಟ್ಮೆಯರ್ ಮತ್ತೆ ಹಿಂದಕ್ಕೆ ಓಡಿ ಟೀಂ ಇಂಡಿಯಾಗೆ ರನೌಟ್ ವಿಕೆಟ್ ಪಡೆಯುವ ಅವಕಾಶ ನೀಡಿದ್ದರು.

    ಈ ಹಂತದಲ್ಲಿ ಚಮಕ್ ಮಾಡಲು ಮುಂದಾದ ಜಡೇಜಾ ಚೆಂಡನ್ನು ಬೌಲರ್ ಕೈಗೆ ಎಸೆಯದೇ ತಾವೇ ಓಡಿ ಬರಲು ಮುಂದಾದರು. ಇದನ್ನು ಗಮನಿಸಿದ ಹೇಟ್ಮೆಯರ್ ಓಡಿ ಮತ್ತೆ ಕ್ರೀಸ್ ತಲುಪಬೇಕೆನ್ನುವ ವೇಳೆಗೆ ಜಡೇಜಾ ರನೌಟ್ ಮಾಡಿದರು. ಇದನ್ನು ಗಮನಿಸುತ್ತಿದ್ದ ಕೊಹ್ಲಿ ಹಾಗೂ ಅಶ್ವಿನ್ ಒಂದು ಕ್ಷಣ ಆತಂಕಗೊಂಡು ಹುಬ್ಬೇರಿಸಿದ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

    https://twitter.com/shivacharan006/status/1048154921118314496?

    ಮೊದಲ ಶತಕವನ್ನ ಅಮ್ಮನಿಗೆ ಅರ್ಪಿಸಿದ ಜಡೇಜಾ: ಇದಕ್ಕೂ ಮುನ್ನ ಮೊದಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದ್ದ ಜಡೇಜಾ ತಮ್ಮ ಮೊದಲ ಶತಕವನ್ನು ಅಮ್ಮನಿಗೆ ಅರ್ಪಿಸಿದ್ದಾರೆ. 2ನೇ ದಿನದಾಟದ ಅಂತ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಡೇಜಾ, ನಾನು ಭಾರತದ ಪರ ಆಡಬೇಕು ಎಂದು ಅಮ್ಮ ಕನಸು ಕಂಡಿದ್ದರು. ಅವರಿಗೆ ನಾನು ಯಾವುದೇ ಬಹುಮಾನ ಕೊಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ನನ್ನ ಪ್ರದರ್ಶನವನ್ನು ನೋಡಲು ಅಮ್ಮ ಇಲ್ಲ. ಅದ್ದರಿಂದ ನನ್ನ ಈ ವಿಶೇಷ ದಿನವನ್ನು ಅವರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

    ಉಳಿದಂತೆ 2ನೇ ದಿನದಾಟದಲ್ಲಿ ಭಾರತದ 649 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿರುವ ವೆಸ್ಟ್‍ಇಂಡೀಸ್ ತಂಡ 2ನೇ ದಿನದಾಟದ ಅಂತ್ಯಕ್ಕೆ 29 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿದೆ. ವೆಸ್ಟ್ ಇಂಡೀಸ್ ಸದ್ಯ 555 ರನ್‍ಗಳ ಬೃಹತ್ ಹಿನ್ನಡೆಯಲ್ಲಿದ್ದು, ಫಾಲೋ ಆನ್ ಭೀತಿ ಎದುರಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv