Tag: Ravi Shankar

  • ಅದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

    ಅದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

    ಬೆಂಗಳೂರು: ಡ್ರಗ್ಸ್ ಮಾಫಿಯಾದ ಪ್ರಮುಖ ಆರೋಪಿ ಆದಿತ್ಯ ಆಳ್ವಾ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

    ಬೆಂಗಳೂರಿನ ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೀವ್ಸ್ ಮನೆಯ ಮೇಲೆ ಇನ್‍ಸ್ಪೆಕ್ಟರ್ ಗಳಾದ ಅಂಜುಮಾಲಾ ನಾಯ್ಕ್, ಪನೀತ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿ ಆದಿತ್ಯ ಆಳ್ವಾ ಮಾಜಿ ಸಚಿವ ಜೀಬರಾಜ್ ಆಳ್ವಾ ಅವರ ಪುತ್ರನಾಗಿದ್ದಾನೆ. ನಟ ವಿವೇಕ್ ಓಬೇರಾಯ್ ಅವರ ಮೈದುನ. ಬರೋಬ್ಬರಿ ಆರು ಎಕರೆ ವಿಸ್ತೀರ್ಣದಲ್ಲಿ ಆದಿತ್ಯ ಆಳ್ವಾ ಮನೆ ಇದೆ. ಇದೇ ಮನೆಯಲ್ಲಿ ವೀಕೆಂಡ್ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ಆರೋಪಿ ರವಿಶಂಕರ್ ತಪ್ಪೊಪ್ಪಿಕೊಂಡಿದ್ದನು. ಸಿಸಿಬಿ ಬಂಧಿಸಿರುವ ಆರು ಆರೋಪಿಗಳು ಆದಿತ್ಯ ಆಳ್ವಾ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ತಿಳಿದು ಬಂದಿದೆ.

    ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈ ಅಥವಾ ದೆಹಲಿಯಲ್ಲಿರೋ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್ ಹೊಳೆ ಹರಿಯುತ್ತಿತ್ತು ಎಂದು ತಿಳಿದು ಬಂದಿದೆ.

    ಸದ್ಯ ಇಂದು ಬೆಳಗ್ಗೆ ಆದಿತ್ಯ ಆಳ್ವಾ ಮನೆಯಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮೊದಲು ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಮನೆಯ ಮೇಲೆಯೂ ಸಿಸಿಬಿ ದಾಳಿ ನಡೆಸಿತ್ತು.

    ರವಿಶಂಕರ್ ಹೇಳಿದ್ದೇನು?: ಪಾರ್ಟಿಗಳಿಗೆ ಬರುತ್ತಿದ್ದ ಶ್ರೀಮಂತ ಪರಿಚತರಿಗೆ ECSTASY PILL ಮಾತ್ರೆಗಳನ್ನು ವೈಭವ್ ಜೈನ್ ಸರಬರಾಜು ಮಾಡುತ್ತಿದ್ದನು. ಆದಿತ್ಯ ಆಳ್ವಾಗೆ ಸೇರಿದ ಹೌಸ್ ಆಫ್ ಲೈಫ್ ಮಾನ್ಯತಾ ಟೆಕ್ ಪಾರ್ಕ್ ಪಕ್ಕದ ಫಾರಂ ಹೌಸ್ ಮತ್ತು ಕಿಟಿಕೊ ಕ್ಲಬ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು. ಪಾರ್ಟಿ ಆಯೋಜನೆ ಸ್ಥಳ, ಬರೋರ ಹೆಸರುಗಳನ್ನ ವಾಟ್ಸಪ್ ಮೂಲಕ ಮೊದಲೇ ತಿಳಿಸಲಾಗುತ್ತಿತ್ತು ಎಂದು ಆರೋಪಿ ರವಿಶಂಕರ್ ಹೇಳಿದ್ದನು.

  • ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು: ರವಿಶಂಕರ್

    ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು: ರವಿಶಂಕರ್

    – ಸುದೀಪ್, ಗಣೇಶ್, ಸೃಜನ್‍ಗೆ ಧನ್ಯವಾದ

    ಬೆಂಗಳೂರು: ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು ಎಂದು ನಟ ರವಿ ಶಂಕರ್ ಅವರು ಟ್ವೀಟ್ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಸೋಂಕು ಹೆಚ್ಚುತ್ತಿದೆ. ಮಹಾಮಾರಿ ಕೊರೊನಾ ಬೆಂಗಳೂರಿನಲ್ಲಿ ಸಮುದಾಯದ ಮಟ್ಟದಲ್ಲಿ ಸ್ಫೋಟಗೊಂಡಿದೆ. ಹೊಸ ಹೊಸ ಏರಿಯಾಗಳಿಗೆ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ. ಈಗ ನಟ ರವಿ ಶಂಕರ್ ಅವರ ಮನೆಯ ಎದುರಿನ ಮನೆಯವರಿಗೆ ಕೊರೊನಾ ಬಂದಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರವಿ ಶಂಕರ್, ನನ್ನ ಅಪಾರ್ಟ್‍ಮೆಂಟ್‍ನಲ್ಲಿ ನನ್ನ ಎದುರು ಮನೆಗೆ ವಕ್ಕರಿಸಿತು ಕೊರೊನಾ. ನನ್ನ ಮಕ್ಕಳಿರುವ ಮನೆಯನ್ನು ದೇವರೇ ಕಾಪಾಡಬೇಕು. ಕ್ವಾರಂಟೈನ್ ಮಾಡಿದ್ದಾರೆ ಬಾಗಿಲನ್ನು 14 ದಿನ ತೆರೆಯುವಂತಿಲ್ಲ. ಸುದೀಪ, ಗಣಪ, ಸೃಜಾನ, ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಗೆಳೆತನ ಎಂದರೆ ಇದೆ ಅಲ್ಲವೆ. ನಮ್ಮ ಬಗ್ಗೆ ವಿಚಾರಿಸಿದ ಸಂತೋಷ್ ಆನಂದ್, ರಘುರಾಮ್, ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗಷ್ಟೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೊರೊನಾ ಸೋಂಕು ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಈ ವಿಚಾರವಾಗಿ ಬುಧವಾರವಷ್ಟೇ ಟ್ವೀಟ್ ಮಾಡಿದ್ದ ವಿಜಯಲಕ್ಷ್ಮಿ, ನನಗೆ ಕೊರೊನಾ ಸೋಂಕು ಇಲ್ಲ. ಇದು ಸುಳ್ಳು ಸುದ್ದಿ, ನಾನು ಚೆನ್ನಾಗಿದ್ದೇನೆ. ನೀವು ಮನೆಯಲ್ಲಿ ಕ್ಷೇಮವಾಗಿ ಇರಿ ಎಂದು ಗಾಪಿಪ್‍ಗಳಿಗೆ ತೆರೆ ಎಳೆದಿದ್ದರು.

    ಬೆಂಗಳೂರಿನಲ್ಲಿ ಕೊರೊನಾ ಸೋಂಕು ಹಿಡಿತಕ್ಕೆ ಬರುತ್ತಿಲ್ಲ. ದಿನೇ ದಿನೇ ಸಾವಿನ ಸಂಖ್ಯೆ ಜಾಸ್ತಿಯಾಗುತ್ತದೆ. ಈ ನಡುವೆ ಬೆಂಗಳೂರನ್ನು ಲಾಕ್‍ಡೌನ್ ಮಾಡಬೇಕು ಎಂಬ ಮಾತುಗಳು ಮುನ್ನೆಲೆಗೆ ಬರುತ್ತಿವೆ. ಆದರೆ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇಂದು ಇರುವ ಕ್ಯಾಬೆನೆಟ್ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ.

  • ಸಿಂಗನಿಗೆ ಟಾಂಗ್ ಕೊಡೋ ರವಿಶಂಕರ್ ನೀವಂದುಕೊಂಡಂತಿಲ್ಲ!

    ಸಿಂಗನಿಗೆ ಟಾಂಗ್ ಕೊಡೋ ರವಿಶಂಕರ್ ನೀವಂದುಕೊಂಡಂತಿಲ್ಲ!

    ಬೆಂಗಳೂರು: ಕನ್ನಡ ಚಿತ್ರರಂಗವನ್ನು ತನ್ನ ಅಗಾಧ ಪ್ರತಿಭೆಯ ಮೂಲಕವೇ ಆವರಿಸಿಕೊಂಡಿರುವ ಖ್ಯಾತ ಖಳನಟ ರವಿಶಂಕರ್. ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದ ಮೂಲಕ ಖಳನಾಗಿ ಅಬ್ಬರಿಸಲಾರಂಭಿಸಿದ್ದ ರವಿಶಂಕರ್ ಆ ನಂತರ ತಿರುಗಿ ನೋಡಿದ್ದೇ ಇಲ್ಲ. ಈ ಹಾದಿಯಲ್ಲಿ ವೈವಿಧ್ಯಮಯ ಪಾತ್ರಗಳ ರೂವಾರಿಯಾಗಿ ಸಾಗಿ ಬಂದಿರೋ ಅವರು ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರೋ ಸಿಂಗ ಚಿತ್ರದಲ್ಲಿಯೂ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರ ಪಾತ್ರ ಈ ಚಿತ್ರದಲ್ಲಿ ಖಂಡಿತಾ ನೀವಂದುಕೊಂಡಂತೆ ಇರೋದಿಲ್ಲ!

    ರವಿಶಂಕರ್ ಅಂದರೆ ಎಂಥವರೂ ಅದುರಿ ಹೋಗುವಂಥಾ ಅಬ್ಬರದ ನಟನಾ ಶಕ್ತಿ ಹೊಂದಿರೋ ಕಲಾವಿದ. ಹೀಗಿರೋದರಿಂದಲೇ ಅವರ ಹೆಸರು ಕೇಳಿದರೇನೇ ವಿಲನ್ ಪಾತ್ರಗಳು ಕಣ್ಮುಂದೆ ತೇಲಿ ಹೋಗುತ್ತವೆ. ಇನ್ನು ಪಕ್ಕಾ ಮಾಸ್ ಶೈಲಿಯ ಸಿಂಗ ಚಿತ್ರದಲ್ಲಿ ರವಿಶಂಕರ್ ನಟಿಸಿದ್ದಾರೆಂದ ಮೇಲೆ ಹೀರೋ ಚಿರುಗೆ ಟಕ್ಕರ್ ಕೊಡೋ ಪಾತ್ರದಲ್ಲಿಯೇ ನಟಿಸಿದ್ದಾರೆ ಅಂತಲೇ ಅರ್ಥ. ಇದಕ್ಕೆ ಪೂರಕವಾದ ದೃಶ್ಯಾವಳಿಗಳೇ ಟ್ರೈಲರ್‍ನಲ್ಲಿಯೂ ಸರಿದು ಹೋಗಿವೆ.

    ಆದರೆ ಈ ಚಿತ್ರದಲ್ಲಿ ರವಿಶಂಕರ್ ಪಾತ್ರ ಅಷ್ಟು ಸಲೀಸಾಗಿ ಊಹಿಸುವಂಥಾದ್ದಲ್ಲ. ಬಹುಶಃ ಇದುವರೆಗೂ ಕಾಣಿಸಿಕೊಳ್ಳದ ಪಾತ್ರದ ಮೂಲಕ ಸಿಂಗನ ಜೊತೆಗೆ ಅವರು ಪ್ರೇಕ್ಷಕರನ್ನು ತಲುಪಲಿದ್ದಾರೆ. ಕಥೆ ರೆಡಿ ಮಾಡುವ ಕ್ಷಣದಲ್ಲಿಯೇ ಪ್ರೇಕ್ಷಕರಿಗೊಂದು ಸರ್‍ಪ್ರೈಸ್ ಕೊಡಬೇಕೆಂಬ ಉದ್ದೇಶದಿಂದ ವಿಜಯ್ ಕಿರಣ್ ಈ ಪಾತ್ರವನ್ನು ಸೃಷ್ಟಿಸಿದ್ದರಂತೆ. ಇದು ಹೀಗೆಯೇ ಬರಬೇಕೆಂಬ ಕಲ್ಪನೆಯೊಂದು ನಿರ್ದೇಶಕರಲ್ಲಿತ್ತಲ್ಲಾ? ಅದನ್ನು ಮೀರಿಸುವಂತೆ ರವಿಶಂಕರ್ ಈ ಪಾತ್ರವನ್ನು ಮಿರುಗಿಸಿದ್ದಾರಂತೆ. ಅಷ್ಟಕ್ಕೂ ರವಿಶಂಕರ್ ಆ ಥರದ ಯಾವ ಪಾತ್ರವನ್ನು ನಿರ್ವಹಿಸಿದ್ದಾರೆಂಬ ಕುತೂಹಲ ನಿಮ್ಮಲ್ಲಿದ್ದರೆ, ಇದೇ ತಿಂಗಳ ಹತ್ತೊಂಬತ್ತರಂದು ಅದಕ್ಕೆ ನಿಖರ ಉತ್ತರ ಸಿಗಲಿದೆ.

  • ಲೋಕಸಭೆಯಲ್ಲಿ ಮತ್ತೆ ಸದ್ದು ಮಾಡಿದ ತ್ರಿವಳಿ ತಲಾಖ್

    ಲೋಕಸಭೆಯಲ್ಲಿ ಮತ್ತೆ ಸದ್ದು ಮಾಡಿದ ತ್ರಿವಳಿ ತಲಾಖ್

    – ಬಿಜೆಪಿಗೆ ಮುಸ್ಲಿಂ ಮಹಿಳೆಯರ ಮೇಲೆ ಎಷ್ಟು ಪ್ರೀತಿಯಿದೆ: ಓವೈಸಿ ವ್ಯಂಗ್ಯ

    ನವದೆಹಲಿ: ಸಂಸತ್‍ನ ಕಲಾಪದಲ್ಲಿ ತ್ರಿವಳಿ ತಲಾಖ್ ಮತ್ತು ಶಬರಿಮಲೆ ಪ್ರಕರಣಗಳು ಭಾರೀ ಸದ್ದು ಮಾಡಿವೆ. ಈ ವಿಚಾರವಾಗಿ ಪರ ಹಾಗೂ ವಿರೋಧ ವ್ಯಕ್ತವಾಗಿದೆ.

    ವಿಪಕ್ಷಗಳ ವಿರೋಧದ ನಡುವೆಯೂ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ತ್ರಿವಳಿ ತಲಾಖ್ ನಿಷೇಧಿಸುವ ತಿದ್ದುಪಡಿ ವಿಧೇಯಕ ಮಂಡಿಸಿದರು. ಲಿಂಗ ಸಮಾನತೆ ಹಾಗೂ ನ್ಯಾಯದ ದೃಷ್ಟಿಯಿಂದ ಈ ಶಾಸನವು ಅತ್ಯಗತ್ಯ. ಇದು ಧರ್ಮದ ಪ್ರಶ್ನೆಯಲ್ಲ. ಮಹಿಳೆಯರ ಹಕ್ಕಿನ ಪ್ರಶ್ನೆ ಎಂದು ಹೇಳಿದರು.

    ದೇಶದಲ್ಲಿ ತ್ರಿವಳಿ ತಲಾಖ್‍ನ 543 ಕೇಸುಗಳು ಈಗಾಗಲೇ ವರದಿಯಾಗಿವೆ. ತ್ರಿವಳಿ ತಲಾಖ್ ಅನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ ಬಳಿಕವೂ 200ರಷ್ಟು ಕೇಸುಗಳು ದಾಖಲಾಗಿವೆ. ಇದು ಮಹಿಳೆಯರ ಘನತೆಯ ಪ್ರಶ್ನೆ ಮತ್ತು ಅವರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ರವಿಶಂಕರ್ ತಿಳಿಸಿದರು.

    ವಿಧೇಯಕ ಮಂಡಿಸುವಂತೆ ಸ್ಪೀಕರ್ ಓಂ ಬಿರ್ಲಾ ಹೇಳಿದ ತಕ್ಷಣ ಪ್ರತಿಪಕ್ಷದವರು ಗದ್ದಲ ಆರಂಭಿಸಿದರು. ವಿಧೇಯಕವನ್ನು ನಾನು ವಿರೋಧಿಸುತ್ತೇನೆ ಎಂದ ಕಾಂಗ್ರೆಸ್ ಮುಖಂಡ ಶಶಿ ತರೂರ್, ಇದು ಮುಸ್ಲಿಮರಿಗೆ ಮಾತ್ರವೇ ಅಲ್ಲ, ಪತ್ನಿಯರನ್ನು ತೊರೆಯುವ ಎಲ್ಲ ಪ್ರಕರಣಗಳಿಗೂ ಅನ್ವಯವಾಗಬೇಕು ಎಂದು ಆಗ್ರಹಿಸಿದರು.

    ಬಿಜೆಪಿಗೆ ಮುಸ್ಲಿಂ ಮಹಿಳೆಯರ ಮೇಲೆ ಎಷ್ಟು ಪ್ರೀತಿಯಿದೆ ಎಂದು ವ್ಯಂಗ್ಯವಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕೇರಳದ ಶಬರಿಮಲೆ ಪ್ರವೇಶಿಸುವ ಹಿಂದೂ ಮಹಿಳೆಯರ ಹಕ್ಕನ್ನು ವಿರೋಧಿಸಿತು ಎಂದು ಟೀಕಿಸಿದರು.

    ತಪ್ಪಿತಸ್ಥ ಮುಸ್ಲಿಂ ಪುರುಷರಿಗೆ 3 ವರ್ಷ ಜೈಲು ಶಿಕ್ಷೆ ತ್ರಿವಳಿ ತಲಾಖ್ ವಿಧೇಯಕದಲ್ಲಿದೆ. ಆದರೆ ಮುಸಲ್ಮಾನೇತರರು ಇದೇ ತಪ್ಪು ಮಾಡಿದರೆ ಕೇವಲ ಒಂದು ವರ್ಷ ಜೈಲು ಶಿಕ್ಷೆ. ಇದು ಸಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಸಾದುದ್ದೀನ್ ಓವೈಸಿ ಕಿಡಿಕಾರಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ‘ತ್ರಿ’ ಬ್ರದರ್ಸ್ ಸಂಗಮ

    ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ‘ತ್ರಿ’ ಬ್ರದರ್ಸ್ ಸಂಗಮ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇದೇ ಮೊದಲ ಬಾರಿಗೆ ಮೂವರು ಸಹೋದರರು ಒಂದೇ ಸಿನಿಮಾ ಅಭಿನಯಿಸುತ್ತಿದ್ದು, ಕಮಾಲ್ ಮಾಡಲು ಬರುತ್ತಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಮೂವರು ಸಹೋದರರಿದ್ದು, ಇದುವರೆಗೂ ಒಂದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ಆದರೆ ಡೈಲಾಗ್ ಕಿಂಗ್ ಸಾಯಿ ಕುಮಾರ್, ಆರ್ಮುಗಂ ಖ್ಯಾತಿಯ ರವಿ ಶಂಕರ್ ಹಾಗೂ ಡೈರೆಕ್ಟರ್ ಕಮ್ ಆ್ಯಕ್ಟರ್ ಅಯ್ಯಪ್ಪ ಪಿ ಶರ್ಮ ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಭರಾಟೆ’ ಸಿನಿಮಾದಲ್ಲಿ ಈ ಮೂವರು ಸಹೋದರರು ಅಭಿನಯಿಸುತ್ತಿದ್ದಾರೆ. ಭರಾಟೆ ಸಿನಿಮಾದ ಮುಖ್ಯ ಪಾತ್ರದಲ್ಲಿ ರವಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಾಯಿಕುಮಾರ್ ಹಾಗೂ ಅಯ್ಯಪ್ಪ ಕೂಡ ಇಬ್ಬರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ರವಿ ಶಂಕರ್ ಹಾಗೂ ಅಯ್ಯಪ್ಪ ಇಬ್ಬರ ಶೂಟಿಂಗ್ ಸಿನಿಮಾದಲ್ಲಿ ಸಂಪೂರ್ಣಗೊಂಡಿದೆ. ಇನ್ನೂ ನಟ ಸಾಯಿ ಕುಮಾರ್ ಪಾತ್ರದ ಸಿನಿಮಾ ಚಿತ್ರೀಕರಣ ನಡೆಯಬೇಕಿದೆ.

    ಮೂವರು ಸಹೋದರರು ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಬೇರೆ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಅಯ್ಯಪ್ಪ ಅವರು ಇತ್ತೀಚೆಗೆ ಬಿಡುಗಡೆಯಾದ ನಟ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    ಭರಾಟೆ ಸಿನಿಮಾ ‘ಬಹದ್ದೂರ್’ ಸಿನಿಮಾದ ನಿರ್ದೇಶಕ ಚೇತನ್ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಸಿನಿಮಾದಲ್ಲಿ ನಟ ಶ್ರೀಮುರಳಿ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿದ್ದು, ಡೈಲಾಗ್ ಮೂಲಕವೇ ಸಾಕಷ್ಟು ಸದ್ದು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಜನಿಪುತ್ರದ ವಿರುದ್ಧ ನಾನು ದೂರು ನೀಡಿದ್ದು ಯಾಕೆ? ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದು ಹೀಗೆ

    ಅಂಜನಿಪುತ್ರದ ವಿರುದ್ಧ ನಾನು ದೂರು ನೀಡಿದ್ದು ಯಾಕೆ? ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದು ಹೀಗೆ

    ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಮೂರು ದಿನಗಳ ಹಿಂದೆ ಬಿಡುಗಡೆಗೊಂಡಿದೆ. ಸಿನಿಮಾ ರಿಲೀಸ್ ಆದ ಬಳಿಕ ಒಂದಿಲ್ಲೊಂದು ತೊಂದರೆಗಳನ್ನು ಅನುಭವಿಸುತ್ತಾ ಬಂದಿದೆ. ಈಗ ಸಿನಿಮಾದಲ್ಲಿ ವಕೀಲರ ಬಗ್ಗೆ ವಿವಾದಾತ್ಮಕ ಹೇಳಿಕೆ ಇದೆ ಎಂದು ಆರೋಪಿಸಿ ವಕೀಲ ನಾರಾಯಣಸ್ವಾಮಿ ಚಿತ್ರ ಪ್ರದರ್ಶನಕ್ಕೆ ತಡೆ ತಂದಿದ್ದಾರೆ.

    ಸಿನಿಮಾ ವಿರುದ್ಧ ನಾನು ದೂರು ನೀಡಿದ್ದು ಯಾಕೆ ಎನ್ನುವುದಕ್ಕೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ ನಾರಾಯಣಸ್ವಾಮಿ, ಚಿತ್ರದಲ್ಲಿ ನಟ ರವಿಶಂಕರ್ ಪೊಲೀಸ್ ಪಾತ್ರಧಾರಿಯಲ್ಲಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಅವರ ಕಡೆಯಿಂದ ವಕೀಲರೊಬ್ಬರ ಎದುರು ಪಂಚಿಂಗ್ ಡೈಲಾಗ್ ಹೇಳಿಸಲಾಗಿದೆ. ಈ ಡೈಲಾಗ್ ನಿಂದ ಎಲ್ಲ ವಕೀಲರಿಗೂ ಅವಮಾನವಾಗಿದ್ದು, ಚಿತ್ರದ ಬಗ್ಗೆ ಎಲ್ಲ ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕೋರ್ಟ್ ನಲ್ಲಿ ಸಿನಿಮಾದಲ್ಲಿರುವ ವಿವಾದಾತ್ಮಕ ಡೈಲಾಗ್ ತೆಗೆಯುವರೆಗೂ ತಡೆಕೋರುವಂತೆ ದೂರು ಸಲ್ಲಿಸಲಾಗಿತ್ತು. ಇಂದು ಕೋರ್ಟ್ ತನ್ನ ಆದೇಶ ನೀಡಿದ್ದು, ಈ ಕೂಡಲೇ ಸಿನಿಮಾದ ಪ್ರದರ್ಶನ ನಿಲ್ಲಿಸಬೇಕಾಗುತ್ತದೆ ಎಂದು ಆದೇಶಿಸಿದೆ ಎಂದು ತಿಳಿಸಿದರು.

    ಸಿನಿಮಾದ ದೂರಿನ ಬಗ್ಗೆ ವಕೀಲರ ಸಂಘದ ಅಧ್ಯಕ್ಷ ಶಿವರಾಮ್ ಪ್ರತಿಕ್ರಿಯಿಸಿದ್ದು, ಚಿತ್ರದ ಒಂದು ಭಾಗದಲ್ಲಿ ಪೊಲೀಸ್ ಪಾತ್ರಧಾರಿ ರವಿಶಂಕರ್, ವಕೀಲರ ಬಗ್ಗೆ ಅವಹೇಳನಾಕಶರಿ ಹೇಳಿಕೆ ನೀಡಿದ್ದಾರೆ. ಪೊಲೀಸರು ಮಾತನಾಡುತ್ತಿರುವ ಈ ಡೈಲಾಗ್ ಇರುವ ದೃಶ್ಯವನ್ನು ತೆಗೆದು ಹಾಕುವಂತೆ ಮನವಿ ಮಾಡಲಾಗಿದೆ. ಸದ್ಯ ಈ ಕ್ಷಣದಲ್ಲಿ ಆದೇಶ ಬಂದಿದ್ದು, ಎಲ್ಲಾ ಶೋಗಳನ್ನು ರದ್ದು ಮಾಡಬೇಕಾಗುತ್ತದೆ. ಸಿನಿಮಾದಲ್ಲಿ ಬಳಸಿದ ಆ ಪದವನ್ನು ತೆಗೆದರೆ ನಮ್ಮ ಅಭ್ಯಂತರವಿಲ್ಲ. ಕೋರ್ಟ್ ಆರ್ಡರ್ ಕಾಪಿ ಇಂದು ಸಿಗೋದು ಅನುಮಾನ. ಆದ್ರೆ ನಮ್ಮ ಕೋರ್ಟ್ ವೆಬ್ ಸೈಟ್ ನಲ್ಲಿ ಆದೇಶದ ಪ್ರತಿ ಸಿಗಲಿದೆ. ಇದೂವರೆಗೂ ಚಿತ್ರದ ನಿರ್ಮಾಪಕರು, ನಿರ್ದೇಶಕರು ನಮ್ಮನ್ನು ಸಂಪರ್ಕಿಸಿಲ್ಲ. ಆ ಒಂದು ಪಂಚಿಂಗ್ ಡೈಲಾಗ್ ಡಿಲೀಟ್ ಮಾಡಬೇಕು ಎನ್ನುವುದೇ ನಮ್ಮ ಒತ್ತಾಯವಾಗಿದೆ. ಚಿತ್ರತಂಡ ಜನವರಿ 2 ರವರೆಗೆ ಕಾಯುವ ಅಗತ್ಯವಿಲ್ಲ, ಸಿನಿಮಾದಿಂದ ಎಷ್ಟು ಬೇಗ ಆ ಪದವನ್ನು ತೆಗೆಯುತ್ತಾರೋ ಅಷ್ಟು ಬೇಗ ಪುನಃ ಪ್ರದರ್ಶನ ಮಾಡಬಹುದಾಗಿದೆ. ಪುನೀತ್ ಈ ರೀತಿಯ ಸಿನಿಮಾ ಮಾಡುವವವರಲ್ಲ ಎಲ್ಲೋ ಏನೋ ತಪ್ಪಾಗಿರಬಹುದು ಎಂದು ಹೇಳಿದರು.

    ಏನದು ವಿವಾದಾತ್ಮಕ ಡೈಲಾಗ್? “ನೀನು ಗಂಟೆ ಅಲ್ಲಾಡಿಸೋ ಹಾಗಿದ್ರೆ, ಕೋರ್ಟ್ ನಲ್ಲಿ ಅಲ್ಲಾಡ್ಸು. ಇಲ್ಲಿ ಅಲ್ಲಾಡಿಸಿದ್ರೆ ಕಟ್ ಮಾಡಿ ಬಿಡ್ತೀನಿ” ಎಂದು ರವಿ ಶಂಕರ್ ಇನ್ಸ್ ಪೆಕ್ಟರ್ ಆಗಿ ವಕೀಲರಿಗೆ ಹೇಳುವ ದೃಶ್ಯ ಸಿನಿಮಾದಲ್ಲಿದೆ. ಈ ಸಂಭಾಷಣೆಯಿಂದ ವಕೀಲರಿಗೆ ಅವಮಾನವಾಗಿದೆ. ಹೀಗಾಗಿ ಒಂದೋ ಸಿನಿಮಾ ಪ್ರದರ್ಶನ ರದ್ದು ಮಾಡಿ, ಇಲ್ಲವೇ ವಕೀಲರ ಬಗೆಗಿನ ಅವಹೇಳನಕಾರಿ ಮಾತನ್ನು ತೆಗೆಯುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಅಂಜನಿಪುತ್ರ ಸಿನಿಮಾಗೆ ಅಭಿಮಾನಿಯಿಂದ ಬಿಗ್ ಶಾಕ್!

    ಸಿನಿಮಾದಲ್ಲಿ ವಕೀಲರ ಬಗ್ಗೆ ವಹೇಳನಕಾರಿ ಸಂಭಾಷಣೆ ಇರುವ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನಕ್ಕೆ ಸಿವಿಲ್ ಕೋರ್ಟ್ ತಡೆ ನೀಡಿದ್ದು, ಸ್ಯಾಂಡಲ್‍ವುಡ್ ನ ದೊಡ್ಮನೆ ಹುಡುಗ ಪುನೀತ್ ರಾಜ್‍ಕುಮಾರ್ ಅಭಿನಯದ ‘ಅಂಜನಿಪುತ್ರದ’ ಸಿನಿಮಾ ಇನ್ನೂ 10 ದಿನಗಳ ಕಾಲ ರದ್ದಾಗಿದೆ. ವಕೀಲ ಜಿ. ನಾರಾಯಣಸ್ವಾಮಿ ಅವರು ನಿರ್ದೇಶಕ, ನಿರ್ಮಾಪಕ, ಸೆನ್ಸಾರ್ ಬೋರ್ಡ್, ಫಿಲಂ ಚೇಂಬರ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಅರ್ಜಿ ವಿಚಾರಣೆಯನ್ನು ಶನಿವಾರ ನಡೆಸಿದ ಕೋರ್ಟ್ ಅಂಜನಿಪುತ್ರ ಸಿನಿಮಾ ಪ್ರದರ್ಶನ ಮಾಡದಂತೆ ಆದೇಶಿಸಿ ಜ. 2ಕ್ಕೆ ವಿಚಾರಣೆ ಮುಂದೂಡಿದೆ.

    https://www.youtube.com/watch?v=f7IZoviKUvA

    ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದ್ದು ಗುರುವಾರ ಬಿಡುಗಡೆಯಾಗಿತ್ತು. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.