Tag: ravi hongal

  • ಕನಸಿನಂತೆ ಕ್ಯಾಮರಾ ಶೈಲಿಯ ಮನೆ ನಿರ್ಮಿಸಿದ ಬೆಳಗಾವಿ ಫೋಟೋಗ್ರಾಫರ್

    ಕನಸಿನಂತೆ ಕ್ಯಾಮರಾ ಶೈಲಿಯ ಮನೆ ನಿರ್ಮಿಸಿದ ಬೆಳಗಾವಿ ಫೋಟೋಗ್ರಾಫರ್

    – ಮಕ್ಕಳಿಗೂ ಕ್ಯಾಮರಾ ಕಂಪನಿಗಳ ಹೆಸರಿಟ್ಟ ರವಿ

    ಬೆಳಗಾವಿ: ಸಾಮಾನ್ಯವಾಗಿ ಎಲ್ಲರಲ್ಲೂ ತಾನೊಂದು ದೊಡ್ಡ ಮನೆ ಕಟ್ಟಬೇಕೆಂಬ ಕನಸು ಇದ್ದೇ ಇರುತ್ತದೆ. ಆದರೆ ಬೆಳಗಾವಿಯಲ್ಲಿ ಫೋಟೋಗ್ರಾಫರ್ ಒಬ್ಬರು ವಿಭಿನ್ನವಾಗಿ ಕನಸು ಕಂಡಿದ್ದು, ಇದೀಗ ತನ್ನ ಕನಸಿನಂತೆ ಕ್ಯಾಮರಾ ಶೈಲಿಯ ಮನೆ ನಿರ್ಮಾಣ ಮಾಡುವ ಮೂಲಕ ಜನರ ಗಮನಸೆಳೆದಿದ್ದಾರೆ.

    ಹೌದು. ರವಿ ಹೊಂಗಲ್ ಅವರಿಗೆ ಬಾಲ್ಯದಿಂದಲೇ ಫೋಟೋಗ್ರಫಿ ಅಂದ್ರೆ ಪಂಚಪ್ರಾಣ. ಹೀಗಾಗಿ ಅವರು ಚಿಕ್ಕಂದಿನಿಂದಲೇ ಹತ್ತಿರದ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೆಲವೊಂದು ಫೋಟೋಗಳನ್ನು ತೆಗೆಯುವ ಹವ್ಯಾಸ ಬೆಳೆಸಿಕೊಂಡಿದ್ದರು.

    ರವಿ ಅವರಿಗಿದ್ದ ಛಾಯಾಗ್ರಹಣದ ಮೇಲಿನ ಪ್ರೀತಿ ಇಂದು ಕ್ಯಾಮರಾದಂತಹ ಮನೆ ಕಟ್ಟುವಲ್ಲಿವರೆಗೆ ಕೊಂಡೊಯ್ದಿದೆ. ಇಷ್ಟು ಮಾತ್ರವಲ್ಲದೆ 49 ವರ್ಷದ ರವಿ ಅವರು ತಮ್ಮ ಮಕ್ಕಳಿಗೆ ಕ್ಯಾಮರಾ ಕಂಪನಿಗಳಾದ ಕೆನಾನ್, ನಿಕಾನ್ ಹಾಗೂ ಎಪ್ಸಾನ್ ಎಂದು ಹೆಸರು ಕೂಡ ಇಟ್ಟಿರುವುದು ಕೂಡ ಅಚ್ಚರಿಯ ಸಂಗತಿಯಾಗಿದೆ.

    ಸದ್ಯ ರವಿ ಅವರ ಕ್ಯಾಮರಾದಂತಹ ಮನೆಯ ಫೋಟೋಗಳು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಆಗಿದ್ದು, ಟ್ರೆಂಡಿಂಗ್ ನಲ್ಲಿದೆ. ಟ್ವೀಟ್ ಗಳ ಪ್ರಕಾರ, ರವಿ ಅವರು ಈ ಮೂರು ಅಂತಸ್ತಿನ ಕ್ಯಾಮರಾ ಶೈಲಿಯ ಮನೆ ನಿರ್ಮಿಸಲು ಸುಮಾರು 71,63,048 ಲಕ್ಷ ಖರ್ಚು ಮಾಡಿದ್ದಾರೆ. ಅಲ್ಲದೆ ಈ ಮನೆ ಕ್ಯಾಮರಾದಲ್ಲಿ ಇರಬಹುದಾದ ಎಲ್ಲಾ ಭಾಗಗಳನ್ನು ಒಳಗೊಂಡಿದೆ. ಕ್ಯಾಮರಾ ಲೆನ್ಸ್ ಅನ್ನು ಕಿಟಕಿಯಾಗಿ ಮಾಡಿದ್ದು, ಮನೆಗೆ ಕ್ಲಿಕ್ ಎಂದು ಹೆಸರಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    https://twitter.com/RitwikSharan/status/1282812008409247748

    ಒಟ್ಟಿನಲ್ಲಿ ಬದುಕು ರೂಪಿಸಿದ ವೃತ್ತಿ ಹಾಗೂ ತುತ್ತು ಅನ್ನ ನೀಡಿದ ಕಾಯಕವನ್ನೇ ತನ್ನ ಮನೆಯನ್ನಾಗಿಸಿದ ರವಿ ಅವರ ಗೌರವಕ್ಕೆ ಜನ ಶಹಬ್ಬಾಸ್ ಎಂದು ಹೇಳುತ್ತಿದ್ದಾರೆ.