Tag: Rava Chakli

  • ತಿಂಗಳಾದರೂ ಗರಿಗರಿಯಾಗಿರುವ ರವೆ ಚಕ್ಕುಲಿ ಮಾಡುವ ವಿಧಾನ

    ತಿಂಗಳಾದರೂ ಗರಿಗರಿಯಾಗಿರುವ ರವೆ ಚಕ್ಕುಲಿ ಮಾಡುವ ವಿಧಾನ

    ಕ್ಕುಲಿ ಎಂದರೆ ಯಾರಿಗೆ ತಾನೇ ಇಷ್ಟವಾಗೋಲ್ಲ ಹೇಳಿ? ಸಂಜೆಯಾಯ್ತು ಎಂದರೆ ಒಂದು ಕಪ್ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆಗೆ ಏನಾದರು ಕುರುಕಲು ಇದ್ದರೆ ಅದರ ಮಜಾನೇ ಬೇರೆ. ಅದರಲ್ಲೂ ಚಕ್ಕುಲಿ ಇದ್ದರಂತೂ ಇನ್ನಷ್ಟು ಸೊಗಸು. ಆದರೆ ಎಣ್ಣೆಯಲ್ಲಿ ಕರೆದಂತಹ ಚಕ್ಕಲಿಯನ್ನು ಹೆಚ್ಚೆಂದರೆ ಒಂದು ವಾರ ಇಟ್ಟುಕೊಂಡು ತಿನ್ನಬಹುದಷ್ಟೆ, ಒಂದು ವಾರ ಕಳೆದ ಮೇಲೆ ಅದು ವಾಸನೇ ಬಂದೋ ಅಥವಾ ಮೆತ್ತಗೆ ಆಗಿನೋ ಹಾಳಾಗಿಬಿಡುತ್ತದೆ. ಹೀಗಾಗಿ ತಿಂಗಳಾದರೂ ಕೆಡದೆ ಮೆತ್ತಗಾಗದೆ ಗರಿಗರಿಯಾಗಿಯೇ ಇರುವ ರವೆ ಚಕ್ಕುಲಿ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಚಿರೋಟಿ ರವೆ- 1 ಕಪ್
    2. ಹುರಿಗಡ್ಲೆ ಪುಡಿ – 1 ಕಪ್
    3. ಅಕ್ಕಿಹಿಟ್ಟು – 3 ಕಪ್
    4. ಬಿಳಿ ಎಳ್ಳು – 1 ಚಮಚ
    5. ಜೀರಿಗೆ – 1 ಚಮಚ
    6. ಕರಿಮೆಣಸಿನ ಪುಡಿ/ಖಾರದ ಪುಡಿ – ಅರ್ಧ ಚಮಚ
    7. ಬೆಣ್ಣೆ – 2 ಚಮಚ
    8. ಉಪ್ಪು- ರುಚಿಗೆ ತಕ್ಕಷ್ಟು
    9. ಎಣ್ಣೆ- ಕರಿಯಲು

    ಮಾಡುವ ವಿಧಾನ:
    * ಒಂದು ಪ್ಯಾನ್‍ನಲ್ಲಿ ಎರಡೂವರೆ ಕಪ್‍ನಷ್ಟು ನೀರು ಹಾಕಿ ಒಲೆಯ ಮೇಲಿಟ್ಟು ಕಾಯಲು ಬಿಡಿ.
    * ನೀರು ಕುದಿಯುವಾಗ ಅದಕ್ಕೆ ಒಂದು ಕಪ್ ಚಿರೋಟಿ ರವೆ ಸೇರಿಸಿ ಚೆನ್ನಾಗಿ ತಿರುಗಿಸಿ. ನಂತರ ಅದನ್ನು ಮುಚ್ಚಿ 2-3 ನಿಮಿಷಗಳವರೆಗೆ ಬೇಯಲು ಬಿಡಿ. ಅದು ಬೆಂದ ನಂತರ ಕೈಯಾಡಿಸಿ ಪಕ್ಕಕ್ಕಿಡಿ.
    * ಒಂದು ದೊಡ್ಡ ಮಿಕ್ಸಿಂಗ್ ಬೌಲ್‍ನಲ್ಲಿ ಒಂದು ಕಪ್ ಹುರಿಗಡ್ಲೆ ಹಿಟ್ಟಿಗೆ ಮೂರು ಕಪ್ ಅಕ್ಕಿಹಿಟ್ಟು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಎಳ್ಳು, ಜೀರಿಗೆ, ಖಾರದಪುಡಿ/ ಮೆಣಸಿನ ಪುಡಿ ಹಾಗೂ ಬೆಣ್ಣೆ (ಬೆಣ್ಣೆ ಇಲ್ಲವಾದರೆ ಕಾಯಿಸಿದ  ತುಪ್ಪವನ್ನು ಸೇರಿಸಿ) ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ.
    * ಮಿಕ್ಸ್ ಮಾಡಿದ ಹಿಟ್ಟಿಗೆ ಬೇಯಿಸಿ ಇಟ್ಟಿದ್ದ ರವ ಮುದ್ದೆಯನ್ನು ಸೇರಿಸಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿಡಿ.(ತುಂಬಾ ಗಟ್ಟಿಯೂ ಬೇಡ, ತೆಳ್ಳಗೂ ಬೇಡ ಹದವಾಗಿರಬೇಕು)
    * ಹೀಗೆ ಕಲಸಿದ ಹಿಟ್ಟನ್ನು ಸ್ವಲ್ಪ ಎಣ್ಣೆಯೊಂದಿಗೆ ನಾದಿಕೊಳ್ಳಿ.


    * ನಾದಿದ ಹಿಟ್ಟನ್ನು ಚಕ್ಕುಲಿ ಹೊರಳಿಗೆ ಎಣ್ಣೆ ಸವರಿ ಹಿಟ್ಟನ್ನು ತುಂಬಿ ಚಕ್ಕುಲಿಯನ್ನು ಒತ್ತಿ ಇಡಿ.
    * ಒಂದು ಬಾಣಲೆಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಕಾಯಲು ಇಡಿ. (ಎಣ್ಣೆಯನ್ನು ಹೊಗೆ ಬರುವಷ್ಟು ಕಾಯಿಸಬಾರದು).
    * ಮಧ್ಯಮ ಉರಿಯಲ್ಲಿಟ್ಟು ಬಾಣಲೆಯಲ್ಲಿ ಬೇಯುವಷ್ಟು ಚಕ್ಕುಲಿಗಳನ್ನು ಹಾಕಿ, ಎಣ್ಣೆಯಲ್ಲಿ ಬಂದ ಗುಳ್ಳೆಗಳು ಹೋದ ನಂತರ ಚಕ್ಕುಲಿಗಳನ್ನು ಮಗುಚಿ ಬೇಯಿಸಿ.
    * ಚಕ್ಕಲಿಯ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿ. ತಣ್ಣಗಾದ ಚಕ್ಕುಲಿಗಳನ್ನು ಏರ್ ಕಂಟೈನರ್ ಬಾಕ್ಸ್ ನಲ್ಲಿ ಹಾಕಿ ಮುಚ್ಚಿಡಿ.

    ವಿಶೇಷ ಸೂಷನೆ: * 2 ಚಮಚಕ್ಕಿಂತ ಹೆಚ್ಚಿನ ಬೆಣ್ಣೆ ಹಾಕಬೇಡಿ
    * ಚಿರೋಟಿ ರವೆಯನ್ನು ಮಾತ್ರ ಬಳಸಿ
    * ತಣ್ಣಗಾಗುವವರೆಗೆ ಚಕ್ಕಲಿಯನ್ನು ಡಬ್ಬಿಯಲ್ಲಿ ಹಾಕಬೇಡಿ