Tag: Rats

  • ಸಾಕ್ಷಿಗೆ ಸಂಗ್ರಹಿಸಿದ್ದ 10 ಕೆಜಿ ಗಾಂಜಾ, 9 ಕೆಜಿ ಭಾಂಗ್‌ ಇಲಿಗಳೇ ತಿಂದಿವೆ – ಕೋರ್ಟ್‌ಗೆ ವರದಿ ಸಲ್ಲಿಕೆ!

    ಸಾಕ್ಷಿಗೆ ಸಂಗ್ರಹಿಸಿದ್ದ 10 ಕೆಜಿ ಗಾಂಜಾ, 9 ಕೆಜಿ ಭಾಂಗ್‌ ಇಲಿಗಳೇ ತಿಂದಿವೆ – ಕೋರ್ಟ್‌ಗೆ ವರದಿ ಸಲ್ಲಿಕೆ!

    – ಸಾಕ್ಷಿ ಇಲ್ಲವೆಂದು ಕಕ್ಷಿಗಾರನ ಬಿಡುಗಡೆಗೆ ವಕೀಲರ ಮನವಿ

    ರಾಂಚಿ: ಪ್ರಕರಣವೊಂದರಲ್ಲಿ ಇಲಿಗಳೇ (Rats) ಸಾಕ್ಷ್ಯವನ್ನು ನಾಶಪಡಿಸಿರುವುದಾಗಿ ಪೊಲೀಸ್‌ ಅಧಿಕಾರಿಗಳು (Dhanbad Police) ಕೋರ್ಟ್‌ಗೆ ತನಿಖಾ ವರದಿ ಸಲ್ಲಿಸಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಹೌದು. ವ್ಯಕ್ತಿಯೊಬ್ಬನಿಂದ ಜಪ್ತಿ ಮಾಡಿ ಗೋದಾಮಿನಲ್ಲಿ ಇರಿಸಲಾಗಿದ್ದ ಸುಮಾರು 10 ಕೆಜಿ ಗಾಂಜಾ (Ganja ), 9 ಕೆಜಿ ಭಾಂಗ್‌ ಅನ್ನು ಇಲಿಗಳೇ ತಿಂದುಬಿಟ್ಟಿವೆ ಎಂದು ಜಾರ್ಖಂಡ್‌ನ ಧನ್‌ಬಾದ್ ಪೊಲೀಸರು ನ್ಯಾಯಾಲಯಕ್ಕೆ (Jharkhand Court) ತನಿಖಾ ವರದಿ ಸಲ್ಲಿಸಿದ್ದಾರೆ. 2018ರ ಡಿಸೆಂಬರ್‌ 14 ರಂದು ಇಲ್ಲಿನ ಪೊಲೀಸರು ನಡೆಸಿದ ದಾಳಿಯಲ್ಲಿ ಶಂಭು ಅಗರ್ವಾಲ್ ಆರೋಪಿಯಿಂದ ಗಾಂಜಾ ಮತ್ತು ಭಾಂಗ್‌ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಮಾದಕ ವಸ್ತುಗಳನ್ನು ಹೊಂದಿದ್ದಕ್ಕಾಗಿ ಆರೋಪಿಯನ್ನ ಬಂಧಿಸಲಾಗಿತ್ತು. ಇದನ್ನೂ ಓದಿ: 9 ಸಾವಿರ ಲಂಚಕ್ಕೆ ಬೇಡಿಕೆ – ಲೋಕಾಯುಕ್ತಕ್ಕೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್

    ಈ ಪ್ರಕರಣದ ವಿಚಾರಣೆ ಸಂದರ್ಭಧಲ್ಲಿ ಪ್ರಿನ್ಸಿಪಾಲ್ ಮತ್ತು ಸೆಷನ್ ನ್ಯಾಯಾಧೀಶರಾದ ರಾಮ್ ಶರ್ಮಾ ಅವರು, ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸುವಂತೆ ತನಿಖಾಧಿಕಾರಿ ಜೈ ಪ್ರಕಾಶ್‌ ಪ್ರಸಾದ್‌ ಅವರಿಗೆ ಸೂಚಿಸಿದ್ದರು. ಆದ್ರೆ ನ್ಯಾಯಾಲಯದ ಆದೇಶದ ಹೊರತಾಗಿಯೂ ಪೊಲೀಸರು ಸಾಕ್ಷ್ಯಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಈ ವಸ್ತುಗಳನ್ನು ಇಲಿಗಳು ಸೇವಿಸಿ ನಾಶಪಡಿಸಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದರು. ಏಪ್ರಿಲ್ 6 ರಂದು ವರದಿ ಸಲ್ಲಿಸಿದರು.

    ಏತನ್ಮಧ್ಯೆ, ಶಂಭು ಅಗರ್ವಾಲ್‌ ಪರ ವಕೀಲರು, ತಮ್ಮ ಕಕ್ಷಿದಾರರನ್ನು ತಪ್ಪಾಗಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಕೋರ್ಟ್‌ಗೆ ಸಾಕ್ಷಿ ಮುಖ್ಯ, ಅದರ ಆಧಾರದ ಮೇಲೆಯೇ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಪೊಲೀಸರು ವಸ್ತುಗಳನ್ನು ಜಪ್ತಿ ಮಾಡಿರುವುದು ನಿಜವೇ ಆದಲ್ಲಿ, ಏಕೆ ಕೋರ್ಟ್‌ಗೆ ಸಲ್ಲಿಸಲು ಆಗಲಿಲ್ಲ. ನನ್ನ ಕಕ್ಷಿಗಾರರನ್ನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಸದ್ಯ ಈ ಪ್ರಕರಣದ ತೀರ್ಪನ್ನು ಕೋರ್ಟ್‌ ಕಾಯ್ದಿರಿಸಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕಾಲರಾ ಪತ್ತೆ ಬೆನ್ನಲ್ಲೇ ಪಿಜಿ ಅಸೋಸಿಯೇಷನ್‍ನಿಂದ ಪ್ರತ್ಯೇಕ ಗೈಡ್‍ಲೈನ್ಸ್

  • ಆಪರೇಷನ್‍ಗೆಂದು ಕೂಡಿಟ್ಟಿದ್ದ ಬಡ ತರಕಾರಿ ವ್ಯಾಪಾರಿಯ ಹಣವನ್ನು ಕಡಿದ ಇಲಿಗಳು

    ಆಪರೇಷನ್‍ಗೆಂದು ಕೂಡಿಟ್ಟಿದ್ದ ಬಡ ತರಕಾರಿ ವ್ಯಾಪಾರಿಯ ಹಣವನ್ನು ಕಡಿದ ಇಲಿಗಳು

    ಹೈದರಾಬಾದ್: ಬಡ ತರಕಾರಿ ವ್ಯಾಪಾರಿ ಕಷ್ಟಪಟ್ಟು ದುಡಿದ ಹಣವನ್ನು ತಮ್ಮ ಆಪರೇಷನ್‍ಗೆಂದು ಕೂಡಿಟ್ಟಿದ್ದರು. ಆದರೆ ಇಲಿಗಳು ಸುಮಾರು 2 ಲಕ್ಷ ರೂ.ಗಳನ್ನು ಕಚ್ಚಿ ಹಾಳು ಮಾಡಿದ್ದವು. ಇದರಿಂದ ಆಘಾತಕ್ಕೊಳಗಾದ ವ್ಯಾಪಾರಿ ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತ್ತಿದ್ದರು. ಬಳಿಕ ಅಚ್ಚರಿ ರೀತಿಯಲ್ಲಿ ಅವರ ಶಸ್ತ್ರಚಿಕಿತ್ಸೆಗೆ ಸಹಾಯ ದೊರೆತಿದೆ.

    ತೆಲಂಗಾಣದ ಮೆಹಬೂಬಬಾದ್ ವೇಮನೂರ್ ಗ್ರಾಮದ ರೆದ್ಯಾ ನಾಯಕ್ ಅವರು ತಿಂಗಳುಗಟ್ಟಲೇ ಕಷ್ಟಪಟ್ಟು ದುಡಿದು ಕಿಬ್ಬೊಟ್ಟೆ ಚಿಕಿತ್ಸೆಗಾಗಿ 2 ಲಕ್ಷ ರೂ.ಗಳನ್ನು ಸಂಗ್ರಹಿಸಿಟ್ಟಿದ್ದರು. ನಾಲ್ಕು ವರ್ಷಗಳ ಹಿಂದೆ ಇವರಿಗೆ ಕಿಬ್ಬೊಟ್ಟೆಯ ಗಡ್ಡೆ ಕಾಣಿಸಿಕೊಂಡಿತ್ತು. ಆಗಿನಿಂದ ಶಸ್ತ್ರಚಿಕಿತ್ಸೆಗಾಗಿ ನಿತ್ಯ ಹಣವನ್ನು ಕೂಡಿಡುತ್ತ ಬಂದಿದ್ದರು.

    ಬಳಿಕ ಆಪರೇಷನ್ ದಿನದಂದು ನೋಟುಗಳನ್ನು ಸಂಗ್ರಹಿಸಿಟ್ಟಿದ್ದ ಕಾಟನ್ ಬ್ಯಾಗ್‍ನ್ನು ಅಲ್ಮೆರಾದಿಂದ ಹೊರ ತೆಗೆದಿದ್ದು, ಈ ವೇಳೆ ಇಲಿಗಳು ನೋಟುಗಳನ್ನು ಹಾಳು ಮಾಡಿರುವುದು ಬೆಳಕಿಗೆ ಬಂದಿದೆ. ಇದನ್ನು ಕಂಡ ತರಕಾರಿ ವ್ಯಾಪಾರಿಗೆ ತಲೆ ಮೇಲೆ ಆಕಾಶ ಕಳಚಿ ಬಿದ್ದಂತಾಗಿದೆ. ಹೇಗೋ ಬೀರು ಒಳಗೆ ನುಗ್ಗಿದ್ದ ಇಲಿಗಳು ನೋಟುಗಳನ್ನು ಹಾಳು ಮಾಡಿದ್ದವು.

    ಇದರಿಂದ ಆತಂಕಕ್ಕೊಳಗಾದ ನಾಯಕ್ ಅವರು, ಹಲವು ಸ್ಥಳೀಯ ಬ್ಯಾಂಕ್‍ಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆದರೆ ಬ್ಯಾಂಕ್‍ನವರು ನೋಟುಗಳು ಹಾಳಾಗಿವೆ. ಇವುಗಳನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

    ಇದಕ್ಕೆ ಪರಿಹಾರ ಕಂಡುಕೊಳ್ಳಲು ತರಕಾರಿ ವ್ಯಾಪಾರಿ ಹೋರಾಟ ನಡೆಸುತ್ತಿರುವಾಗಲೇ ಈ ವಿಷಯ ತೆಲಂಗಾಣದ ಬುಡಕಟ್ಟು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸತ್ಯವತಿ ರಾಠೋಡ್ ಅವರ ಗಮನಕ್ಕೆ ಬರುತ್ತದೆ. ತಕ್ಷಣ ಎಚ್ಚೆತ್ತ ಸಚಿವರು, ಮಹಬೂಬಬಾದ್ ಡಿಸಿಯವರೊಂದಿಗೆ ನಾಯಕ್ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ಆಸ್ಪತ್ರೆ ಸೇರಿದಂತೆ ಶಸ್ತ್ರಚಿಕಿತ್ಸೆ ಬೇಕಾಗುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

  • ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಕಾಲು ಕಚ್ಚಿ ತಿಂದ ಇಲಿಗಳು..!

    ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಕಾಲು ಕಚ್ಚಿ ತಿಂದ ಇಲಿಗಳು..!

    – ತನಿಖೆಗೆ ಆಡಳಿತ ಮಂಡಳಿ ಆದೇಶ

    ಭೋಪಾಲ್: ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಇಲಿಗಳು ನವಜಾತ ಶಿಶುಗಳ ಪಾದಗಳನ್ನು ಕಚ್ಚಿ ತಿಂದ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆಗೆ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.

    ಈ ಸಂಬಂಧ ಆಸ್ಪತ್ರೆಯ ಅಧೀಕ್ಷಕ ಡಾ. ಪ್ರಮೇಂದ್ರ ಠಾಕೂರ್ ಪ್ರತಿಕ್ರಿಯಿಸಿ, ಸರ್ಕಾರದ ಅಧೀನದಲ್ಲಿರುವ ಮಹಾರಾಜ ಯಶವಂತರಾವ್(ಎಂವೈ) ಆಸ್ಪತ್ರೆಯಲ್ಲಿ ಇಲಿಗಳು ನವಜಾತ ಶಿಶುಗಳ ಕಾಲುಗಳನ್ನು ಕಚ್ಚಿ ತಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಆದರೆ ಹೆಚ್ಚಿನ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ಈ ಸಂಬಂಧ ತನಿಖೆ ಮಾಡುವುದಾಗಿ ಠಾಕೂರ್ ಹೇಳಿದ್ದಾರೆ.

    ಇಬ್ಬರು ವೈದ್ಯರು ಮತ್ತು ಆಡಳಿತಾಧಿಕಾರಿಯನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಠಾಕೂರ್ ತಿಳಿಸಿದ್ದಾರೆ.

  • 300ಕ್ಕೂ ಹೆಚ್ಚು ಇಲಿಗಳೊಂದಿಗೆ ಮಹಿಳೆ ವ್ಯಾನ್‍ನಲ್ಲೇ ವಾಸ

    300ಕ್ಕೂ ಹೆಚ್ಚು ಇಲಿಗಳೊಂದಿಗೆ ಮಹಿಳೆ ವ್ಯಾನ್‍ನಲ್ಲೇ ವಾಸ

    ವಾಷಿಂಗ್ಟನ್: ಒಂದು ಇಲಿ ಮನೆಯಲ್ಲಿದ್ದರೇನೆ ಪರದಾಡುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ಸುಮಾರು 300ಕ್ಕೂ ಹೆಚ್ಚು ಇಲಿಗಳ ಜೊತೆ ವ್ಯಾನ್‍ನಲ್ಲಿ ವಾಸಿಸುತ್ತಿದ್ದಾರೆ.

    ಈ ಮಹಿಳೆಯ ಹೆಸರು ಕಾರ್ಲಾ ಇವರು 300ಕ್ಕೂ ಹೆಚ್ಚು ಇಲಿಗಳನ್ನು ಸಾಕಿದ್ದಾರೆ. ಮಾತ್ರವಲ್ಲ ಈ ಇಲಿಗಳೊಟ್ಟಿಗೆ ಮಹಿಳೆಯು ಸಹ ವಾಸಿಸುತ್ತಿದ್ದಾಳೆ ಎಂಬುದು ಅಚ್ಚರಿಯ ವಿಷಯವಾಗಿದೆ. ಇಲಿಗಳೊಂದಿಗೆ ವಾಸಿಸುವುದು ಕುಟುಂಬದೊಂದಿಗೆ ವಾಸಿಸುವಷ್ಟೇ ಸಾಮಾನ್ಯ ಎಂದು ಈ ಮಹಿಳೆ ಭಾವಿಸಿದ್ದಾರೆ.

    ಇವರು ಕ್ಯಾಲಿಫೋರ್ನಿಯಾದ ಬೀಚ್ ಬಳಿ ಇರುವ ಸ್ಯಾನ್ ಡಿಯಾಗೋದ ಸಮುದಾಯದಲ್ಲಿ ವಾಸಿಸುತ್ತಿದ್ದು, ಅಂಗಡಿಯ ಪಕ್ಕದಲ್ಲೇ ನಿಲ್ಲಿಸಿರುವ ಮಿನಿ ವ್ಯಾನ್‍ನೊಳಗೆ ಸುಮಾರು 300 ಸಾಕು ಇಲಿಗಳೊಂದಿಗೆ ವಾಸಿಸುತ್ತಿದ್ದಾರೆ. ಇದಕ್ಕೆ ‘ರೊಡೆಂಟ್ ವಿಲ್ಲೆ’ ಎಂದು ಹೆಸರಿಟ್ಟಿದ್ದಾರೆ.

    ವರದಿಗಳ ಪ್ರಕಾರ, ರೊಡೆಂಟ್ ವಿಲ್ಲೆ ಕೇವಲ ಎರಡು ಇಲಿಗಳಿಂದ ಪ್ರಾರಂಭವಾಯಿತು. ಆದರೆ ಸ್ವಲ್ಪ ಸಮಯದಲ್ಲೇ 300ಕ್ಕೂ ಹೆಚ್ಚು ಇಲಿಗಳು ಸೇರಿಕೊಂಡವು. ಈ 300 ಇಲಿಗಳ ಪೈಕಿ 140 ಇಲಿಗಳನ್ನು ಈ ಮಹಿಳೆ ದತ್ತು ಪಡೆಯಲು ಮುಂದಾಗಿದ್ದಾರೆ.

    ಅಕ್ಟೋಬರ್ 8ರಂದು ಸ್ಯಾನ್ ಡಿಯಾಗೋ ಹ್ಯೂಮನ್ ಸೊಸೈಟಿಗೆ ಕರೆ ಮಾಡಿ ಕರ್ಲಾ ಈ ಕುರಿತು ಮಾಹಿತಿ ನೀಡಿದ್ದಾರೆ. ಲೆಕ್ಕವಿಲ್ಲದಷ್ಟು ಇಲಿಗಳು ನನ್ನ ಆರೈಕೆಯಲ್ಲಿವೆ. ಹೀಗಾಗಿ ನಿಮ್ಮ ಸಹಾಯ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ.

    ಕರೆಯ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ವ್ಯಾನ್‍ನಲ್ಲಿರುವ ಇಲಿಗಳನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ಭಾರೀ ಪ್ರಮಾಣದ ಇಲಿಗಳಿವೆ. ಇವು ಕೇವಲ ವ್ಯಾನ್‍ನಲ್ಲಿ ವಾಸಿಸುತ್ತಿಲ್ಲ, ಹೊರಗಡೆಯೂ ಇವೆ. ಆದರೆ ವ್ಯಾನ್ ಒಳಗೆ ಬರುವುದು, ಹೋಗುವುದನ್ನು ಮಾಡುತ್ತಿವೆ. ಅಷ್ಟು ಪ್ರಮಾಣದ ಇಲಿಗಳನ್ನು ಕಂಡು ನಮಗೆ ಆಶ್ಚರ್ಯವಾಗಿದೆ ಎಂದು ಹ್ಯೂಮನ್ ಸೊಸೈಟಿಯ ಕಾನೂನು ಜಾರಿ ವಿಭಾಗದ ಕ್ಯಾಪ್ಟನ್ ಡೇನಿ ಕುಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಅಧಿಕಾರಿಗಳು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ವಿಡಿಯೋದಲ್ಲಿ ಇಲಿಗಳು ವ್ಯಾನ್ ಸೀಟ್, ಮೇಲ್ಭಾಗ ಹಾಗೂ ಡೋರ್ ಬಳಿ ಓಡಾಡುತ್ತಿವೆ. ಅಲ್ಲದೆ ವ್ಯಾನ್‍ನಲ್ಲಿಯೇ ಬಿಲಗಳನ್ನು ಮಾಡಿಕೊಂಡು ವಾಸಿಸುತ್ತಿವೆ.

    ಪ್ರಾಣಿಗಳನ್ನು ಕ್ರೂರವಾಗಿ ನೋಡಿಕೊಳ್ಳುತ್ತಿಲ್ಲ, ಅಲ್ಲದೆ ಕುರ್ಲಾ ಇಲಿಗಳನ್ನು ಸಂಗ್ರಹಿಸುತ್ತಿಲ್ಲ ಎಂದು ಕುಕ್ ತಿಳಿಸಿದ್ದಾರೆ. ಇದು ಕ್ರೂರತೆಯ ಪ್ರಕರಣವಲ್ಲ, ಆದರೆ ಮಾಲೀಕರು ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿದ್ದಾರೆ. ಕುರ್ಲಾ ಇಲಿಗಳಿಗೆ ಉತ್ತಮವಾಗಿಯೇ ಆಹಾರ, ನೀರು ನೀಡುತ್ತಿದ್ದಾರೆ ಎಂದು ಕುಕ್ ಮಾಹಿತಿ ನೀಡಿದ್ದಾರೆ.

    ವ್ಯಾನ್ ತಪಾಸಣೆ ನಂತರ, ಕುರ್ಲಾ ಅವರ ಮನವಿ ಮೇರೆಗೆ ಇಲಿಗಳನ್ನು ಬೇರೆ ಕಡೆ ಓಡಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಸ್ಯಾನ್ ಡಿಯಾಗೋ ಹ್ಯೂಮ್ಯಾನ್ ಸೊಸೈಟಿಯ ಅಧಿಕಾರಿಗಳು ವಾಹನದ ಪ್ರತಿ ಮೂಲೆಯಲ್ಲಿದ್ದ ಇಲಿಗಳನ್ನು ಸಂಗ್ರಹಿಸಲು ಹಲವಾರು ದಿನಗಳ ಕಾಲ ಪರದಾಡಿದ್ದಾರೆ. ಅಧಿಕಾರಿಗಳು ಒಟ್ಟು 320 ಇಲಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದು, ಅವುಗಳಲ್ಲಿ ಹೆಚ್ಚಿನವು ಚಿಕ್ಕ ಇಲಿಗಳಾಗಿವೆ ಎಂದು ತಿಳಿದು ಬಂದಿದೆ.

  • 1,000 ಲೀಟರ್ ಮದ್ಯ ಕುಡಿದ ಇಲಿಗಳು!

    1,000 ಲೀಟರ್ ಮದ್ಯ ಕುಡಿದ ಇಲಿಗಳು!

    – ಪೊಲೀಸರ ಆರೋಪಕ್ಕೆ ವ್ಯಂಗ್ಯವಾಡಿದ ನೆಟ್ಟಿಗರು

    ಲಕ್ನೋ: ಕಳ್ಳ ಭಟ್ಟಿ ದಂಧೆಕೋರರಿಂದ ವಶಕ್ಕೆ ಪಡೆದಿದ್ದ ಒಂದು ಸಾವಿರ ಲೀಟರ್ ಮದ್ಯವನ್ನು ಇಲಿಗಳು ಕುಡಿದು ಖಾಲಿ ಮಾಡಿವೆ ಎಂದು ಪೊಲೀಸರು ದೂರಿದ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದ್ದು, ನೆಟ್ಟಿಗರು ಅಧಿಕಾರಿಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಉತ್ತರ ಪ್ರದೇಶದ ಬರೇಲಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಬುಧವಾರ ಈ ಪ್ರಕರಣ ಬೆಳಕಿಗೆ ಬಂದಿದೆ. ಠಾಣೆಯಲ್ಲಿ ಮದ್ಯ ಖಾಲಿಯಾಗಿ ಕ್ಯಾನ್‍ಗಳು ಮಾತ್ರವೇ ಉಳಿದಿವೆ. ಬಿಹಾರ, ಅಸ್ಸಾಂನಲ್ಲಿಯೂ ಇಂತಹದ್ದೇ ಆರೋಪ ಕೇಳಿ ಬಂದಿತ್ತು. ಈಗ ಬರೇಲಿಯ ಪೊಲೀಸರು ಕೂಡ ಠಾಣೆಯ ಕೊಠಡಿಯಲ್ಲಿ ಇಟ್ಟಿದ್ದ ಮದ್ಯ ಖಾಲಿಯಾಗಲು ಇಲಿಗಳೇ ಕಾರಣ ಎಂದು ಆರೋಪಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‍ಪಿ ಅಭಿನಂದನ್ ಸಿಂಗ್ ಅವರು, ಠಾಣೆಯ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿ 1,000 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿತ್ತು. ಅದನ್ನು ಠಾಣೆಯ ಕೊಠಡಿಯೊಂದರಲ್ಲಿ ಇಡಲಾಗಿತ್ತು. ಠಾಣೆಯ ಮುಖ್ಯ ಕ್ಲರ್ಕ್ ನರೇಶ್ ಪಾಲ್ ಬುಧವಾರ ಕೊಠಡಿ ತೆರೆದು ನೋಡಿದಾಗ ಮದ್ಯ ಖಾಲಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

    ಮದ್ಯ ಖಾಲಿಯಾಗಿ ಕ್ಯಾನ್‍ಗಳು ಮಾತ್ರ ಬಿದ್ದಿದ್ದು ಹಾಗೂ ಅಲ್ಲಿ ಇಲಿಗಳು ಇದ್ದಿರುವುದನ್ನು ನರೇಶ್ ಪಾಲ್ ನೋಡಿದ್ದಾರೆ. ಹೀಗಾಗಿ ಮದ್ಯವನ್ನು ಇಲಿಗಳೇ ಖಾಲಿ ಮಾಡಿವೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

    ಈ ಕುರಿತು ತನಿಖೆ ನಡೆಸಲಾಗುತ್ತದೆ. ಆದರೆ ಮದ್ಯ ವಶಕ್ಕೆ ಪಡೆದ ಬಳಿಕ ಮಾದರಿಯನ್ನು ತನಿಖೆಗೆ ಒಪ್ಪಿಸಿ ಉಳಿದಿರುವುದನ್ನು ನಾಶಪಡಿಸಲಾಗುತ್ತದೆ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವೆಂದು ಮದ್ಯವನ್ನು ಕೊಠಡಿಯಲ್ಲಿಯೇ ಇರಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

    ಬಿಹಾರದಲ್ಲಿ 1,500 ಲೀಟರ್, ಅಸ್ಸಾಂನಲ್ಲಿ 650 ಲೀಟರ್, ಈಗ ಬರೇಲಿಯಲ್ಲಿ 1,000 ಲೀಟರ್! ಇಲಿಗಳು ನಿಜವಾಗಿಯೂ ದೊಡ್ಡಮಟ್ಟದ ಕುಡಿತಕ್ಕೆ ಒಳಗಾಗಿವೆ ಹಾಗೂ ಸ್ವಾದೀನಪಡಿಸಿಕೊಂಡ ಮದ್ಯ ಮಾತ್ರ ಕಾಣೆಯಾಗುತ್ತಿದೆ ಎಂದು ಗಿರೀಶ್ ಜೋಹಾರ್ ಎಂಬವರು ಟ್ವೀಟ್ ಮಾಡಿದ್ದಾರೆ. ಪೊಲೀಸರು ಉತ್ತಮ ಜೋಕ್ ಮಾಡುತ್ತಿದ್ದಾರೆ ಎಂದು ಶಿಲ್ಪಾ ಎಂಬವರು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನಸೌಧಕ್ಕೆ ಮತ್ತೆ ಇಲಿ, ಹೆಗ್ಗಣ ಕಾಟ- ಇಲಿ ಹಿಡಿಯೋಕೆ ಕೊಡ್ತಾರಂತೆ 18 ಲಕ್ಷ ರೂ.!

    ವಿಧಾನಸೌಧಕ್ಕೆ ಮತ್ತೆ ಇಲಿ, ಹೆಗ್ಗಣ ಕಾಟ- ಇಲಿ ಹಿಡಿಯೋಕೆ ಕೊಡ್ತಾರಂತೆ 18 ಲಕ್ಷ ರೂ.!

    ಬೆಂಗಳೂರು: ವಿಧಾನಸೌಧದಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ಹಿಡಿಯಲು ಸರ್ಕಾರ ವಾರ್ಷಿಕ 15ರಿಂದ 18 ಲಕ್ಷ ರೂ. ಪ್ರತ್ಯೇಕ ಅನುದಾನ ನೀಡಲು ನಿರ್ಧರಿಸಿದೆಯಂತೆ. ಅಷ್ಟೇ ಅಲ್ಲ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ವಹಿಸಲಾಗಿದೆ.

    ಇಲಿ ಶಿಕಾರಿಗೆ ಮಾಡಿರೋ ವೆಚ್ಚ:
    ಇಲಿಗಳ ಶಿಕಾರಿಗೆ 2013-14ರಲ್ಲಿ 3.49 ಲಕ್ಷ ರೂ. ವೆಚ್ಚ ಮಾಡಿದರೆ. 2014-15ರಲ್ಲಿ ಸುಮಾರು 4.96 ಲಕ್ಷ ರೂ., 2015-16ನೇ ಸಾಲಿನಲ್ಲಿ 4.96 ಲಕ್ಷ ರೂ., ಈ ವರ್ಷ ಉಗ್ರಾಣ ಇಲಾಖೆಗೆ 15ರಿಂದ 18 ಲಕ್ಷ ರೂ. ಅನುದಾನ ನೀಡಲು ತೀರ್ಮಾನ ಮಾಡಲಾಗಿದ್ದು, 5 ವರ್ಷಗಳಲ್ಲಿ ಒಟ್ಟು 25 ಲಕ್ಷ ರೂ. ಖರ್ಚು ಮಾಡಲಾಗಿದೆ.

    ಆಪರೇಷನ್ ಮೂಷಿಕ ನಡೆಸೋದಕ್ಕೆ ಈಗ ವಿಧಾನಸೌಧದಲ್ಲಿ ಭಾರೀ ಕಸರತ್ತು ನಡೆಯುತ್ತಿದೆ. ಒಟ್ಟು 900 ಸರ್ಕಾರಿ ಕೊಠಡಿಯಲ್ಲಿ ಮೈಕು -ಡಾಕ್ಯುಮೆಂಟುಗಳನ್ನು ಹರಿದುಹಾಕುವ ಇಲಿಗಳ ಉಪಟಳಕ್ಕೆ ಎಲ್ಲರೂ ಕಂಗಾಲಾಗಿದ್ದಾರೆ. ವಿಧಾನಸೌಧ ಅಷ್ಟೇ ಅಲ್ಲದೆ ವಿಕಾಸಸೌಧ ಸೇರಿದಂತೆ ಬಹುಮಹಡಿ ಕಟ್ಟಡದಲ್ಲಿ ಇಲಿಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಅವುಗಳನ್ನು ಹಿಡಿಯುವ ಕೆಲಸವನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ವಹಿಸಲು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಹೊರಡಿಸಿದ್ದಾರೆ.

    ಈಗಾಗಲೇ ಖಾಸಗಿ ಏಜೆನ್ಸಿಗಳಿಂದ ಕಾರ್ಯ ಪೂರ್ಣವಾಗಿಲ್ಲ. ಈಗ ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ವಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಉಗ್ರಾಣ ಇಲಾಖೆ ಅಧಿಕಾರಿಗಳು ನಮ್ಮ ಕೈಯಲ್ಲಿ ಈ ಕೆಲಸ ಆಗುವುದಿಲ್ಲ ಬಿಟ್ಟು ಬಿಡಿ ಅಂತಾ ಬೇಡಿಕೊಂಡಿದ್ದಾರಂತೆ. ಇದಕ್ಕೆ ಕ್ಯಾರೆ ಎನ್ನದ ಸರ್ಕಾರ ಜವಾಬ್ದಾರಿ ನೀಡಿ, ಪ್ರತ್ಯೇಕ ಅನುದಾನ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv