ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮ ಒಂದರಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಆಗಿರುವ ರತ್ನಪ್ರಭಾ ಅವರನ್ನು ಹೊಗಳಿದ್ದಾರೆ.
ಜನವರಿ 5ರಂದು ನೀತಿ ಆಯೋಗದ ವತಿಯಿಂದ ನವದೆಹಲಿ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಾಳಿನ ಜಿಲ್ಲೆಗಳು ಹೇಗಿರಬೇಕು ಎನ್ನುವ ವಿಚಾರದ ಬಗ್ಗೆ ಸಮ್ಮೇಳನ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ನಾನು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪಡೆಯುತ್ತಿದ್ದ ವೇಳೆ ಮಹಿಳಾ ಐಎಎಸ್ ಅಧಿಕಾರಿಯೊಬ್ಬರ ಟ್ವೀಟ್ ಗಮನಿಸಿದೆ. ಆದರಲ್ಲಿ ಮಹಿಳಾ ಅಧಿಕಾರಿ ತಮ್ಮ ಜೀವನದ ಅಚ್ಚರಿಯ ಘಟನೆಯನ್ನು ಹಂಚಿಕೊಂಡಿದ್ದರು. ನಾನು ಅವರ ಹೆಸರನ್ನು ಮರೆತುಬಿಟ್ಟಿದ್ದೇನೆ. ಈ ವಿಷಯ ಓದಿ ನನಗೆ ತುಂಬಾ ಸಂತೋಷವಾಯಿತು ಎಂದು ತಾವು ಓದಿದ ಟ್ವೀಟ್ ಕುರಿತು ಮಾಹಿತಿ ನೀಡಿದರು.
ಮಹಿಳಾ ಅಧಿಕಾರಿ 25 ವರ್ಷಗಳ ಹಿಂದೆ ಬಾಲಕನೊಬ್ಬನನ್ನು ಶಾಲೆಗೆ ಸೇರಿಸಿದ್ದರು. ಆತ ಉತ್ತಮ ಶಿಕ್ಷಣ ಪಡೆದು ಇಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಅಧಿಕಾರಿಯೊಬ್ಬರ ಸಣ್ಣ ಕಾರ್ಯ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಎಂತಹ ಬದಲಾವಣೆ ತಂದಿದೆ. ಇಂತಹ ಸಂತೋಷದ ಕ್ಷಣ ಯಾವ ಅಧಿಕಾರಿಗೂ ಸಿಗುವುದಿಲ್ಲ. ಅಲ್ಲದೇ ಇವರು ಎಲ್ಲಾ ಅಧಿಕಾರಿಗಳಿಗೂ ಮಾದರಿ ಎಂದು ರತ್ನಪ್ರಭಾ ಅವರ ಕಾರ್ಯವನ್ನು ಶ್ಲಾಘಿಸಿದರು.

ರತ್ನಪ್ರಭಾ ಅವರ ಟ್ವೀಟ್‍ನಲ್ಲಿ ಏನಿತ್ತು?
ನಾನು ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಒಂದು ದಿನ ಕಾರಿನಲ್ಲಿ ಹೋಗುತ್ತಿದ್ದಾಗ ಒಬ್ಬ ಹುಡುಗನೊಬ್ಬ ಕುರಿ ಮೇಯಿಸುತ್ತಿದ್ದ. ಈ ದೃಶ್ಯವನ್ನು ನೋಡಿ ಕಾರು ನಿಲ್ಲಿಸಿದೆ. ನಂತರ ಸಮೀಪದಲ್ಲೇ ಇದ್ದ ಶಾಲೆಯ ಶಿಕ್ಷಕರನ್ನು ಕರೆದು ಈ ಹುಡುಗನನ್ನು ಶಾಲೆಗೆ ಸೇರಿಸಿಕೊಳ್ಳಿ ಎಂದು ಹೇಳಿದ್ದೆ. ಈ ಘಟನೆಯಾಗಿ 27 ವರ್ಷವಾಗಿದ್ದು, ಇತ್ತೀಚೆಗೆ ಒಂದು ದಿನ ನರಸಪ್ಪ ಎಂಬ ಪೊಲೀಸ್ ಪೇದೆ ನನ್ನ ಕಚೇರಿಗೆ ಬಂದು ಸೆಲ್ಯೂಟ್ ಮಾಡಿ, ಅಂದು ನೀವು ಅಂದು ಕುರಿಗಾಹಿಯಾಗಿದ್ದ ನನ್ನ ಶಾಲೆಗೆ ಸೇರಿಸಿದ್ದರಿಂದ ಇಂದು ನಾನು ಪೊಲೀಸ್ ಪೇದೆ ಆಗಿದ್ದೇನೆ ಎಂದು ಹೇಳಿಕೊಂಡಿದ್ದ. ಸಣ್ಣ ಉಪಕಾರವೂ ಹೇಗೆ ಉತ್ತಮ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದು ಸಾಕ್ಷಿ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

ರತ್ನಪ್ರಭಾ ಅವರು ಜನವರಿ 3 ರಂದು ಈ ಟ್ವೀಟ್ ಮಾಡಿದ್ದರೆ, 5ನೇ ತಾರೀಖಿನಂದು ಬಳಕೆದಾರರೊಬ್ಬರು, ಪ್ರಧಾನಿ ಮೋದಿ ಅವರು ತಮ್ಮ ಇತ್ತೀಚಿನ ಭಾಷಣದಲ್ಲಿ ನೀವು ಟ್ವೀಟ್ ನಲ್ಲಿ ಹೇಳಿದ ವಿಚಾರವನ್ನು ಪ್ರಸ್ತಾಪ ಮಾಡಿದ್ದರು, ಇದೊಂದು ದೊಡ್ಡ ಪ್ರೇರಣೆ ಎಂದು ತಿಳಿಸಿದ್ದರು.
ಈ ಟ್ವೀಟ್ ಗೆ ರತ್ನಪ್ರಭಾ ಅವರು ಪ್ರತಿಕ್ರಿಯಿಸಿ, ನಾನು ಭಾಷಣವನ್ನು ಕೇಳಿದೆ. ನಾನು ನನ್ನ ಟ್ವೀಟ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹೊಗಳಿಕೆ ಕಾರಣವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಪ್ರಧಾನಿ ಮೋದಿ ಅವರು ನನ್ನ ಬಗ್ಗೆ ಆಡಿರುವ ಮಾತನ್ನು ಕೇಳಿ ನನಗೆ ಬಹಳ ಸಂತೋಷವಾಗುತ್ತಿದೆ. ಇದರಿಂದಾಗಿ ಜನರ ಸೇವೆ ಮತ್ತಷ್ಟು ಮಾಡಲು ಪ್ರೇರಣೆ ಸಿಕ್ಕಿದೆ ಎಂದು ಬರೆದು ಕೊನೆಯಲ್ಲಿ ಕೈಮುಗಿದು ನಮಸ್ಕರಿಸುತ್ತಿರುವ ಇಮೋಜಿ ಹಾಕಿ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಮೋದಿ


https://www.youtube.com/watch?v=yGzHg3prwAo







