Tag: ration Store

  • ಮದ್ಯದಂಗಡಿ ಮುಂದೆ ಪುರುಷರು, ರೇಷನ್ ಅಂಗಡಿ ಎದುರು ಮಹಿಳೆಯರು ಫುಲ್ ಕ್ಯೂ

    ಮದ್ಯದಂಗಡಿ ಮುಂದೆ ಪುರುಷರು, ರೇಷನ್ ಅಂಗಡಿ ಎದುರು ಮಹಿಳೆಯರು ಫುಲ್ ಕ್ಯೂ

    – ಮದ್ಯದಂಗಡಿ ಪಕ್ಕದಲ್ಲೇ ರೇಷನ್ ಅಂಗಡಿ
    – ರಾಯಚೂರಲ್ಲಿ ಸಿಕ್ಕಸಿಕ್ಕಲ್ಲೇ ಮದ್ಯಪಾನ

    ಧಾರವಾಡ/ರಾಯಚೂರು: ಇಂದು ಎಣ್ಣೆ ಅಂಗಡಿ ಮುಂದೆ ಎಲ್ಲಿ ನೋಡಿದರೂ ಉದ್ದದ್ದೂ ಕ್ಯೂ ಕಂಡುಬರುತ್ತಿದೆ. ಆದ್ರೆ ಧಾರವಾಡದಲ್ಲಿ ಒಂದೆಡೆ ಮದ್ಯದಂಗಡಿ ಇನ್ನೊಂದೆಡೆ ರೇಷನ್ ಅಂಗಡಿಗೆ ಕ್ಯೂ ಹಚ್ಚಿದ ಅಪರೂಪದ ದೃಶ್ಯಗಳು ಕಂಡುಬಂದಿವೆ.

    ಧಾರವಾಡದ ತೇಜಸ್ವಿ ನಗರದಲ್ಲಿರುವ ಖಾಸಗಿ ವೈನ್ ಶಾಪ್ ಪಕ್ಕವೇ ರೇಷನ್ ಅಂಗಡಿ ಸಹ ಇರುವುದರಿಂದ ಎಣ್ಣೆ ಅಂಗಡಿ ಮುಂದೆ ಪುರುಷರು ಕ್ಯೂ ನಿಂತಿದ್ದರೆ, ರೇಷನ್ ಅಂಗಡಿ ಮುಂದೆ ಮಹಿಳೆಯರು ಕ್ಯೂ ಹಚ್ಚಿದ್ದಾರೆ. ಎರಡು ಅಂಗಡಿಗಳು ಅಕ್ಕಪಕ್ಕದಲ್ಲಿರುವುದರಿಂದ ಈ ಅಪರೂಪ ದೃಶ್ಯ ಕಂಡು ಬಂದಿದೆ. ಒಂದು ಕಡೆ ಮಹಿಳೆಯರು ರೇಷನ್‍ಗೆ ಕ್ಯೂ ನಿಂತರೆ, ಮತ್ತೊಂದು ಕಡೆ ಮದ್ಯ ಖರೀದಿಗೆ ಪುರುಷರು ಕ್ಯೂ ನಿಂತಿದ್ದಾರೆ.

    ಇತ್ತ ರಾಯಚೂರಿನಲ್ಲಿ ಲಾಕ್‍ಡೌನ್ ಹಿನ್ನೆಲೆ ಕಂಗೆಟ್ಟಿದ್ದ ಮದ್ಯ ವ್ಯಸನಿಗಳು ಮದ್ಯದಂಗಡಿಗಳು ಆರಂಭಿಸುತ್ತಿದ್ದಂತೆ ಸಿಕ್ಕ ಸಿಕ್ಕಲ್ಲೇ ಮದ್ಯಪಾನ ಮಾಡುತ್ತಿದ್ದಾರೆ. ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮದ್ಯವ್ಯಸನಿಗಳು ಎಣ್ಣೆ ಪಾರ್ಟಿ ನಡೆಸಿದ್ದಾರೆ. ಕಟ್ಟಡದ ಹಿಂಭಾಗ, ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ಕೆಳಗೆ ಮದ್ಯ ಸೇವನೆ ಮಾಡುತ್ತಿದ್ದಾರೆ.

    ಕ್ರೀಡಾಂಗಣದಲ್ಲಿ ನೆರಳಿರುವ ಜಾಗದಲ್ಲಿ ಅಲ್ಲಲ್ಲೇ ಕುಳಿತು ಮದ್ಯ ಸೇವನೆ ಮಾಡುತ್ತಿದ್ದಾರೆ. ಮದ್ಯ ಕೇವಲ ಪಾರ್ಸಲ್ ಸಿಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯಲು ಸ್ಥಳವಿಲ್ಲದೆ ಸಿಕ್ಕಸಿಕ್ಕಲ್ಲೇ ಸೇವನೆ ಮಾಡಲು ಮುಂದಾಗಿದ್ದಾರೆ. ಸಿಎಲ್ 2 ಹಾಗೂ ಎಂಎಸ್‍ಐಎಲ್ ಮದ್ಯದಂಗಡಿಗಳಿಗೆ ಮಾತ್ರ ಅನುಮತಿಯನ್ನು ನೀಡಿರುವುದಿರಿಂದ ಮದ್ಯಸೇವನೆಗೆ ಸ್ಥಳದ ತೊಂದರೆಯಾಗಿದೆ. ಹೀಗಾಗಿ ನಿರ್ಜನ ಪ್ರದೇಶಗಳಲ್ಲಿ ಮದ್ಯಪಾನ ಜೋರಾಗಿ ನಡೆದಿದೆ.

    ಗ್ರೀನ್ ಝೋನಿನಲ್ಲಿ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ರಾಯಚೂರು ನಗರದಲ್ಲಿ ಎಲ್ಲಿ ನೋಡಿದರೂ ಜನರ ಓಡಾಟ ಜೋರಾಗಿದೆ. ಸಂಪೂರ್ಣ ಲಾಕ್‍ಡೌನ್ ತೆಗೆದಿರುವಂತೆ ವರ್ತಿಸುತ್ತಿರುವ ಜನ ಗುಂಪುಗುಂಪಾಗಿ ಓಡಾಡುತ್ತಿದ್ದಾರೆ. ಬೇರೆ ಬೇರೆ ಊರುಗಳಿಗೆ ತೆರಳಲು ಜನ ಪಾಸ್‍ಗಾಗಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಮುಗಿಬಿದ್ದಿದ್ದು, ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.

  • ಮಾಸ್ಕ್, ಸ್ಯಾನಿಟೈಸರ್ ದರ ಹೆಚ್ಚಳ- ಔಷಧಿ ಅಂಗಡಿಗಳ ವಿರುದ್ಧ ಮೊಕದ್ದಮೆ

    ಮಾಸ್ಕ್, ಸ್ಯಾನಿಟೈಸರ್ ದರ ಹೆಚ್ಚಳ- ಔಷಧಿ ಅಂಗಡಿಗಳ ವಿರುದ್ಧ ಮೊಕದ್ದಮೆ

    – ನ್ಯಾಯಬೆಲೆ ಅಂಗಡಿಗಳ ಮೇಲೂ ದಾಳಿ, ದಂಡ ವಸೂಲಿ

    ಹುಬ್ಬಳ್ಳಿ: ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ದರವನ್ನು ಬೇಕಾಬಿಟ್ಟಿಯಾಗಿ ಹೆಚ್ಚಳ ಮಾಡಿದ್ದ ಔಷಧಿ ಅಂಗಡಿಗಳ ಮೇಲೆ ಕಾನೂನು ಮಾಪನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಮೊಕದ್ದಮೆ ದಾಖಲಿಸಿ 75 ಸಾವಿರ ರೂ. ದಂಡ ವಿಧಿಸಿದ್ದಾರೆ.

    ಹುಬ್ಬಳ್ಳಿ ನಗರ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ದಾಳಿ ನಡೆಸಿದ್ದು, ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ದರ ಹೆಚ್ಚಳ ಮಾಡಿದ್ದು ಕಂಡು ಬಂದ ಹಿನ್ನೆಲೆ ಔಷಧಿ ಅಂಗಡಿಗಳಿಗೆ ದಂಡ ವಿಧಿಸಿ, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಒಟ್ಟು 236 ಅಂಗಡಿಗಳನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದು, 10 ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಅಲ್ಲದೆ 20 ಸಾವಿರ ದಂಡ ವಸೂಲಿ ಮಾಡಿದ್ದಾರೆ.

    ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಸರ್ಕಾರ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ 179 ನ್ಯಾಯಬೆಲೆ ಅಂಗಡಿಗಳನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ವಿವಿಧ ನಿಯಮಗಳನ್ನು ಉಲಂಘಸಿದ ನ್ಯಾಯಬೆಲೆ ಅಂಗಡಿಗಳ ಮೇಲೆ 62 ಮೊಕದ್ದಮೆ ದಾಖಲಿಸಿ 75 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ನಿಯಂತ್ರಕರಾದ ಮಧುಕರ.ಆರ್.ಘೋಡಕೆ, ನೀರಿಕ್ಷಕರಾದ ಸಿದ್ದಪ್ಪ ಪೂಜಾರಿ, ವೆಂಕಟೇಶ ತಿಳಗೊಳ, ಎಸ್.ಎಸ್.ಹಿರೇಮಠ ಭಾಗವಹಿಸಿದ್ದರು.

  • ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ- ಗ್ರಾಮಸ್ಥರ ಆಕ್ರೋಶ

    ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ- ಗ್ರಾಮಸ್ಥರ ಆಕ್ರೋಶ

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಸಂದ್ರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿಯನ್ನು ನೀಡಲು ಆದೇಶ ನೀಡಿದೆ. ಆದರೆ ಮಲ್ಲಸಂದ್ರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ 30 ಕೆಜಿ ಅಕ್ಕಿ ನೀಡಬೇಕಾಗಿದ್ದ ಅಳತೆಯಲ್ಲಿ 25 ಕೆಜಿ ನೀಡುತ್ತಿದ್ದು ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ನ್ಯಾಯಬೆಲೆ ಅಂಗಡಿಯಲ್ಲಿ ಮಲ್ಲಸಂದ್ರ, ಕದಿರನ್ನಾಗಾರಪಲ್ಲಿ, ಊಗಲನಾಗೇಪಲ್ಲಿ ಗ್ರಾಮಗಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ.

    ಈ ರೀತಿ ಪ್ರತಿಯೊಬ್ಬರಿಗೂ 1 ಕೆಜಿ, 2 ಕೆಜಿ, ಮತ್ತು 3 ಕೆಜಿ ತೂಕದಲ್ಲಿ ಕಡಿತ ಮಾಡಿ ಕಡಿಮೆ ನೀಡುತ್ತಿದ್ದರೆ. ಇದೇ ರೀತಿ ಮಾಲೀಕ ಉಳಿತಾಯ ಮಾಡಿ ಲಾಭಗಳಿಸುತ್ತಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಿ ಮಾಲೀಕನಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಇನ್ನು ಮುಂದೆ ಈ ರೀತಿ ನಡೆಯದಂತೆ ನಮಗೆ ಸೂಕ್ತ ನ್ಯಾಯಕೊಡಿಸಬೇಕೆಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನ್ಯಾಯಬೆಲೆ ಅಂಗಡಿಗೆ ಸಚಿವ ಗೋಪಾಲಯ್ಯ ದಿಢೀರ್ ಭೇಟಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನ್ಯಾಯಬೆಲೆ ಅಂಗಡಿಗೆ ಸಚಿವ ಗೋಪಾಲಯ್ಯ ದಿಢೀರ್ ಭೇಟಿ

    ನೆಲಮಂಗಲ: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಇಂದು ಬೆಂಗಳೂರು ಹೊರವಲಯ ನೆಲಮಂಗಲ ನಗರಕ್ಕೆ ದಿಢೀರ್ ಭೇಟಿ ನೀಡಿದರು.

    ನಾಲ್ಕು ದಿನದ ಹಿಂದೆ ಪಬ್ಲಿಕ್ ಟಿವಿಯಲ್ಲಿ ಪಡಿತರ ಅಂಗಡಿಯ ದಿನಸಿಯಲ್ಲಿ ದೂಳು ಮತ್ತು ಹುಳ ಇದ್ದ ಪ್ರಕರಣದ ಹಿನ್ನಲೆ ಸುದ್ದಿ ಪ್ರಸಾರವಾಗಿತ್ತು. ಈ ಸಂಬಂಧ ಇಂದು ಸಚಿವರು ಭೇಟಿ ನೀಡಿದರು. ನೆಲಮಂಗಲ ನಗರದ ನ್ಯಾಯ ಬೆಲೆ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿ ಅಕ್ಕಿ ಗೋಧಿಯನ್ನು ವೀಕ್ಷಿಸಿದರು. ತೂಕ ಹಾಗೂ ಗುಣಮಟ್ಟ ಪರಿಶೀಲನೆ ನಡೆಸಿದ ಸಚಿವ ಗೋಪಾಲಯ್ಯ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಯ್ಯ, ಇದು ದಿಢೀರ್ ಭೇಟಿಯಲ್ಲ. ರಾಜ್ಯದ ಹಲವು ಕಡೆ ಪಡಿತರ ವಿತರಣಾ ಮಳಿಗೆಗಳಿಗೆ ತೆರಳುತ್ತೇನೆ. ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿ ಮತ್ತು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಸಹ ಮೂರು ತಿಂಗಳ ಪಡಿತರ ಜೊತೆಗೆ ತೊಗರಿ ಬೇಳೆ ಸಹ ನೀಡಲಿದೆ. ಇದೀಗ ಬಿಪಿಎಲ್ ಕಾರ್ಡ್ ಕೇಳಿರುವ ಕುಟಂಬಗಳಿಗೂ ಕಾರ್ಡ್ ವಿತರಿಸಲಿದ್ದೇವೆ ಎಂದರು.

    ಬಯೋಮೆಟ್ರಿಕ್ ಇಲ್ಲದ ಕುಟುಂಬಗಳಿಗೂ ಆಹಾರ ವಿತರಿಸಲು ಚಿಂತನೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ತೆರಳುತ್ತೇನೆ ಎಂದು ತಿಳಿಸಿದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಆಯುಕ್ತರು, ಹಿರಿಯ ಅಧಿಕಾರಿಗಳು ಸೇರಿದಂತೆ ನೆಲಮಂಗಲ ಶಾಸಕ ಡಾ.ಶ್ರೀನಿವಾಸ ಮೂರ್ತಿ, ತಹಶೀಲ್ದಾರ್ ಶ್ರೀನಿವಾಸಯ್ಯ ಮತ್ತು ಪೊಲೀಸ್ ಅಧಿಕಾರಿಗಳು ಜೊತೆಯಲ್ಲಿ ಇದ್ದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮೂರು ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರಣ ಅಮಾನತು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮೂರು ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರಣ ಅಮಾನತು

    ಚಿಕ್ಕಬಳ್ಳಾಪುರ: ಕೊರೊನಾ ಎಫೆಕ್ಟ್ ನಡುವೆ ಜನಸಾಮಾನ್ಯರಿಗೆ ಉಚಿತವಾಗಿ ಅಕ್ಕಿ, ಗೋಧಿ ವಿತರಣೆ ಮಾಡುವಂತೆ ಸರ್ಕಾರ ಆದೇಶ ಮಾಡಿದೆ. ಆದರೆ ಚಿಕ್ಕಬಳ್ಳಾಪುರದ ಕೆಲ ನ್ಯಾಯಬೆಲೆ ಅಂಗಡಿಗಳ ಪ್ರಾಧಿಕರಣದಾರರು ಗ್ರಾಹಕರಿಂದ 20 ರೂಪಾಯಿ ಹಣ ವಸೂಲಿ ಮಾಡುತ್ತಿರುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಿಂದ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಮೂರು ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರಣ ಅಮಾನತುಗೊಳಿಸಲಾಗಿದೆ.

    ಪಬ್ಲಿಕ್ ಟಿವಿ ತಂಡ ಕೆಲ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಖುದ್ದು ಪರೀಶಿಲನೆ ನಡೆಸಿದ್ದು, ಗ್ರಾಮೀಣ ಭಾಗದಲ್ಲಿ ಸ್ಥಳೀಯರಿಂದಲೇ ಮಾಹಿತಿ ಕಲೆ ಹಾಕಲಾಗುತ್ತಿತ್ತು. ಈ ವೇಳೆ ಗೌರಿಬಿದನೂರು ತಾಲೂಕು ಇಡಗೂರು ಗ್ರಾಮದ ಯುವಕ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ನಾಗರಾಜ್ ಗ್ರಾಹಕರಿಂದ 20 ರೂಪಾಯಿಯನ್ನ ವಸೂಲಿ ಮಾಡ್ತಿರೋ ದೃಶ್ಯ ಸೆರೆಹಿಡಿದು ಪಬ್ಲಿಕ್ ಟಿವಿಗೆ ಕಳುಹಿಸಿದ್ದರು. ಈ ಸಂಬಂಧ ಪಬ್ಲಿಕ ಟಿವಿ ವೆಬ್‌ಸೈಟ್ ನಲ್ಲಿ ಸುದ್ದಿ ಪ್ರಕಟ ಮಾಡಲಾಗಿತ್ತು. ಹಣ ಪಡೆಯುತ್ತಿದ್ದ ವಿಡಿಯೋವನ್ನ ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿದೇರ್ಶಕರಿಗೆ ಕಳುಹಿಸಲಾಗಿತ್ತು. ಇದನ್ನೂ ಓದಿ: ಪಡಿತರಕ್ಕಾಗಿ ಹಣ ವಸೂಲಿ – ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಯ್ತು ಸತ್ಯ

    ಇದರಿಂದ ಎಚ್ಚೆತ್ತಾ ಉಪನಿದೇರ್ಶಕರಾದ ಸೋಮಶಂಕರಪ್ಪ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಇಡಗೂರು ಗ್ರಾಮದ ನ್ಯಾಯಬೆಲೆಯ ಪ್ರಾಧಿಕಾರಣವನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಇದೇ ರೀತಿ ಗ್ರಾಹಕರಿಂದ 20 ರಿಂದ 30 ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರ ಗ್ರಾಮದ ನ್ಯಾಯಬೆಲೆ ಅಂಗಡಿ ಹಾಗೂ ಅಜ್ಜವಾರ ಗ್ರಾಮದ ನ್ಯಾಯಬೆಲೆ ಅಂಗಡಿಯ ಪ್ರಾಧಿಕಾರಣವನ್ನು ಸಹ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಈ ಮೂರು ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರಣವನ್ನ ಅಮಾನತು ಮಾಡಿ, ಪಡಿತರ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಅಕ್ಕಿ ಹಾಗೂ ಗೋಧಿಗೆ ಯಾವುದೇ ಹಣ ಕೊಡಬಾರದು, ಯಾರಾದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಪಡೆಯುವಂತಹ ಪ್ರಕರಣಗಳ ಕಂಡುಬಂದಲ್ಲಿ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಉಪನಿದೇರ್ಶಕರು ತಿಳಿಸಿದ್ದಾರೆ.