Tag: Ration Kit

  • ಮಂಗಳಮುಖಿಯರಿಗೆ ಪಡಿತರ, ಮೆಡಿಕಲ್ ಕಿಟ್ ವಿತರಣೆ

    ಮಂಗಳಮುಖಿಯರಿಗೆ ಪಡಿತರ, ಮೆಡಿಕಲ್ ಕಿಟ್ ವಿತರಣೆ

    ಬೆಂಗಳೂರು: ಕೋವಿಡ್-19 ಸಂಕಷ್ಟದಲ್ಲಿರುವ 150ಕ್ಕೂ ಹೆಚ್ಚು ಮಂಗಳಮುಖಿಯರಿಗೆ ದಿನಸಿ ಸಾಮಾಗ್ರಿಗಳ ಪಡಿತರ ಕಿಟ್ ಹಾಗೂ ಮೆಡಿಕಲ್ ಕಿಟ್‍ಗಳನ್ನು ಅಗರವಾಲ್ ಸಮಾಜ (ಕರ್ನಾಟಕ)ದ ಅಧ್ಯಕ್ಷ ಸಂಜಯ್ ಗರ್ಗ್ ವಿತರಿಸಿದರು.

    ಬೆಂಗಳೂರು ಪ್ರೆಸ್‍ಕ್ಲಬ್‍ನಲ್ಲಿಂದು ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಆಫ್ ಬೆಂಗಳೂರು ಮತ್ತು ಅಗರವಾಲ್ ಸಮಾಜ (ಕರ್ನಾಟಕ) ಜಂಟಿಯಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಫುಡ್ ಕಿಟ್ ವಿತರಿಸಲಾಯಿತು.

    ಈ ವೇಳೆ ಮಾತನಾಡಿದ ಸಂಜಯ್ ಗರ್ಗ್ ಅವರು, ಮಂಗಳಮುಖಿಯರಿಗೆ ಪಡಿತರ ಕಿಟ್ ನೀಡುತ್ತಿರುವುದು ಸಂತಸ ಉಂಟುಮಾಡಿದೆ. ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗದ ಈ ವರ್ಗದವರ ಬಗ್ಗೆ ಕಾಳಜಿ ಹೊಂದಿರುವ ಬೆಂಗಳೂರು ಛಾಯಾಚಿತ್ರ ಸಂಸ್ಥೆ ಅವರ ಮುಂದಾಳತ್ವ ಪ್ರಶಂಸನೀಯ. ಕೊರೊನಾ ವಾರಿಯರ್ಸ್ ಆಗಿ, ಕೊರೊನಾ ಜಾಗೃತಿ ಮೂಡಿಸುವಲ್ಲಿ ಇವರ ಕಾರ್ಯ ಶ್ಲಾಘನೀಯ. ಇವರ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುವಂತೆ ಮನವಿ ಮಾಡಿಕೊಂಡರು.

    ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಅಧ್ಯಕ್ಷ ಬಿ.ಎನ್.ಮೋಹನ್ ಕುಮಾರ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಅಗರವಾಲ್ ಸಮಾಜ ಹೆಚ್ಚು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ನಮ್ಮ ಸಂಘದ ಜೊತೆ ಕೈ ಜೋಡಿಸಿ ಪಡಿತರ ಕಿಟ್ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

    ಅಗರವಾಲ್ ಸಮಾಜ (ಕರ್ನಾಟಕ)ದ ಕಾರ್ಯದರ್ಶಿ ವಿಜಯ್ ಸರಫ್, ಜಂಟಿ ಕಾರ್ಯದರ್ಶಿ ಸಂಜಯ್ ಮೊಹತ್, ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಆಫ್ ಬೆಂಗಳೂರು ಅಧ್ಯಕ್ಷ ಬಿ.ಎನ್.ಮೋಹನ್ ಕುಮಾರ್, ಉಪಾಧ್ಯಕ್ಷ ಶೈಲೆಂದ್ರ ಭೋಜಕ್, ಕಾರ್ಯದರ್ಶಿ ಕೆ.ಎಸ್.ಗಣೇಶ್ ಉಪಸ್ಥಿತಿರಿದ್ದರು.

  • ಕಂಟೈನ್‍ಮೆಂಟ್ ಏರಿಯಾದಲ್ಲಿ ಶಾಸಕ ನಾಗೇಂದ್ರ ರೇಷನ್ ಕಿಟ್ ವಿತರಣೆ

    ಕಂಟೈನ್‍ಮೆಂಟ್ ಏರಿಯಾದಲ್ಲಿ ಶಾಸಕ ನಾಗೇಂದ್ರ ರೇಷನ್ ಕಿಟ್ ವಿತರಣೆ

    ಬಳ್ಳಾರಿ: ನಗರದ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯ 26ನೇ ವಾರ್ಡಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾಡಳಿತ ಇಡೀ ಪ್ರದೇಶವನ್ನ ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಿದೆ. ಹೀಗಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ರೇಷನ್ ಕಿಟ್ ವಿತರಿಸಿದ್ದಾರೆ.

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಈ ದಿನ ಕಂಟೈನ್‍ಮೆಂಟ್ ಏರಿಯಾದ ನೂರಾರು ಕುಟುಂಬ ಸದಸ್ಯರಿಗೆ ರೇಷನ್ ಕಿಟ್‍ಗಳನ್ನ ಶಾಸಕ ನಾಗೇಂದ್ರ ವಿತರಿಸಿದರು.

    ಕೌಲ್ ಬಜಾರ್ ವ್ಯಾಪ್ತಿಯ 26ನೇಯ ವಾರ್ಡಿನ ಪ್ರತಿಯೊಂದು ಮನೆಗಳಿಗೆ ತೆರಳಿದ ಶಾಸಕ ಬಿ.ನಾಗೇಂದ್ರ ಅವರು, ರೇಷನ್ ಕಿಟ್, ತರಕಾರಿ, ಹಾಲು, ಮೊಸರನ್ನ ವಿತರಿಸಿದರು. ಒಂದು ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳ ಶಾಸಕ ನಾಗೇಂದ್ರ ಪೂರೈಸಿದ್ದಾರೆ.

    ಈ ವೇಳೆ ಮಾತನಾಡಿದ ಶಾಸಕ ನಾಗೇಂದ್ರ, ಅಂದಾಜು ಸಾವಿರಕ್ಕೂ ಅಧಿಕ ಕಿಟ್‍ಗಳನ್ನ ವಿತರಿಸಲಾಯಿತು. ಅದರೊಂದಿಗೆ ತರಕಾರಿ, ಹಾಲು, ಮೊಸರನ್ನ ವಿತರಿಸಲಾಗಿದೆ. ಕಂಟೈನ್‍ಮೆಂಟ್ ಝೋನ್ ಎಂದು ಈ ಪ್ರದೇಶವನ್ನು ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಕೊರತೆಯಾಗಬಾರದೆಂಬ ಸದುದ್ದೇಶದೊಂದಿಗೆ ಈ ನಿರ್ಧಾರಕ್ಕೆ ಬರಲಾಗಿದೆ. ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳನ್ನ ವಿತರಿಸಲಾಗಿದೆ. ವಾರದ ನಂತರ ಬೇಡಿಕೆಯಿದ್ದರೆ ಪೂರೈಕೆಗೂ ಸದಾ ಸಿದ್ಧವಿರುವುದಾಗಿ ಶಾಸಕ ನಾಗೇಂದ್ರ ತಿಳಿಸಿದ್ದಾರೆ.

  • ‘ನನಗೆ ವೋಟ್ ಹಾಕಲ್ಲ, ನಾನ್ಯಾಕೆ ರೇಷನ್ ಕಿಟ್ ಕೊಡ್ಲಿ’- ವಿಧವೆಯ ಮೇಲೆ ಹಲ್ಲೆ

    ‘ನನಗೆ ವೋಟ್ ಹಾಕಲ್ಲ, ನಾನ್ಯಾಕೆ ರೇಷನ್ ಕಿಟ್ ಕೊಡ್ಲಿ’- ವಿಧವೆಯ ಮೇಲೆ ಹಲ್ಲೆ

    ಬಳ್ಳಾರಿ: ರೇಷನ್ ಕಿಟ್ ಕೇಳಿದ್ದಕ್ಕೆ ವಿಧವೆಯೊಬ್ಬರಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬಳ್ಳಾರಿ ತಾಲೂಕಿನ ಬೆಳಗಲ್ಲು ತಾಂಡಾದ ಮೋತಿ ಬಾಯಿ (38) ಹಲ್ಲೆಗೆ ಒಳಗಾದ ವಿಧವೆ. ಬೆಳಗಲ್ಲು ತಾಂಡಾದ ನಿವಾಸಿಗಳಾದ ಲೇಬರ್ ಕಂಟ್ರಾಕ್ಟರ್ ರಾಮುನಾಯ್ಕ, ಲಾರಿ ಮಾಲೀಕರಾದ ಬಾಬು ನಾಯ್ಕ, ವೆಂಕಟೇಶ ನಾಯ್ಕ, ಲಕ್ಷ್ಮಣ ನಾಯ್ಕ ಹಾಗೂ ತೇಜು ನಾಯ್ಕ ಹಲ್ಲೆಗೈದವರು.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಡ ಜನರಿಗೆ ಬೆಳಗಲ್ಲು ತಾಂಡಾ ಸಮೀಪ ಕಾರ್ಖಾನೆಗಳು ರೇಷನ್ ಕಿಟ್ ವಿತರಿಸುತ್ತಿದ್ದವು. ಆದರೆ ಆರೋಪಿ ಲೇಬರ್ ಕಂಟ್ರಾಕ್ಟರ್ ರಾಮುನಾಯ್ಕ ಕಾರ್ಖಾನೆಯ ಮಾಲೀಕರಿಂದ ರೇಷನ್ ಕಿಟ್ ಪಡೆದುಕೊಂಡಿದ್ದ. ಬಳಿಕ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಾನು ಚುನಾವಣೆಗೆ ನಿಲ್ಲುವ ವಾರ್ಡ್ ನಲ್ಲಿ ಮಾತ್ರ ರೇಷನ್ ಕಿಟ್‍ಗಳನ್ನು ಶನಿವಾರ ವಿತರಿಸುತ್ತಿದ್ದ. ಈ ವೇಳೆ ಬೇರೆ ವಾರ್ಡಿನ ನಿವಾಸಿ ಮೋತಿ ಬಾಯಿ ಅವರು ಬಂದು ನಮಗೂ ರೇಷನ್ ಕಿಟ್ ಕೊಡಿ ಎಂದು ಕೇಳಿದ್ದಾರೆ.

    ನೀನು ನನಗೆ ವೋಟ್ ಹಾಕಲ್ಲ, ನಾನ್ಯಾಕೆ ನಿಂಗ ರೇಷನ್ ಕಿಟ್ ಕೊಡಬೇಕು? ಕೊಡಲ್ಲ ಹೋಗು ಎಂದು ರಾಮುನಾಯ್ಕ ಅವಾಜ್ ಹಾಕಿದ್ದಾನೆ. ಆದರೆ ಮಹಿಳೆ, ನನಗೆ ಗಂಡ ಇಲ್ಲ, ಇಬ್ಬರು ಮಕ್ಕಳಿದ್ದಾರೆ. ದಯವಿಟ್ಟು ಕಿಟ್ ಕೊಡಿ ಎಂದು ಬೇಡಿಕೊಂಡಿದ್ದಾರೆ. ಕೊನೆಗೆ ಇಬ್ಬರ ಮಧ್ಯೆ ವಾಗ್ದಾಳಿ ನಡೆದಿದೆ. ಇದರಿಂದಾಗಿ ಮೋತಿ ಬಾಯಿ ಅವರ ಮೇಲೆ ಆರೋಪಿ ಕೋಪಗೊಂಡಿದ್ದ.

    ರಾಮು ನಾಯ್ಕ ಸೇರಿದಂತೆ ಐವರು ಶನಿವಾರ ರಾತ್ರಿ ಮೋತಿಬಾಯಿ ಅವರ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡು ಅರೆ ಪ್ರಜ್ಞಾಸ್ಥಿತಿಯಲ್ಲಿದ್ದ ಮೋತಿಬಾಯಿ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

    ಈ ಸಂಬಂಧ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.