Tag: Ration distribution

  • ಮನೆ, ಮನೆಗೆ ಪಡಿತರ ತಲುಪಿಸುವ ಯೋಜನೆಯನ್ನು ಕೈ ಬಿಡಲಾಗಿದೆ: ಉಮೇಶ್ ಕತ್ತಿ

    ಮನೆ, ಮನೆಗೆ ಪಡಿತರ ತಲುಪಿಸುವ ಯೋಜನೆಯನ್ನು ಕೈ ಬಿಡಲಾಗಿದೆ: ಉಮೇಶ್ ಕತ್ತಿ

    ಚಿಕ್ಕೋಡಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಮನೆ, ಮನೆಗೆ ಪಡಿತರ ತಲುಪಿಸುವ ಯೋಜನೆಯನ್ನು ಬಿಜೆಪಿ ಸರ್ಕಾರ ಕೈ ಬಿಟ್ಟಿದೆ ಎಂದು ಆಹಾರ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಯೋಜನೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಸಿಎಂ ಜೊತೆಗೆ ಚರ್ಚಿಸಿ ರಾಜ್ಯದಲ್ಲಿ ಈ ಯೋಜನೆಯನ್ನು ಕೈ ಬಿಡಲಾಗಿದೆ. ಈಗಿರುವ ಪಡಿತರ ಅಂಗಡಿಗಳ ಮೂಲಕವೇ ರೇಷನ್ ವಿತರಣೆ ಮಾಡಲಾಗುವುದು ಎಂದರು. ಇದನ್ನೂ ಓದಿ: ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿದ ರಾಜ್ಯ ಬಜೆಟ್: ಕೆ.ಗೋಪಾಲಯ್ಯ

    ಸಿಎಂ ಬಸವರಾಜ ಬೊಮ್ಮಾಯಿಯ ಚೊಚ್ಚಲ ಬಜೆಟ್ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಉಮೇಶ ಕತ್ತಿ, ಬಜೆಟ್‍ನಲ್ಲಿ ಕೃಷಿಗೆ 8 ಸಾವಿರ ಕೋಟಿ ರೂ. ನೀಡಿ ರೈತ ಪರ ಬಜೆಟ್ ಮಂಡಿಸಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರು ಬೋಗಸ್ ಬಜೆಟ್ ಎಂದಿದ್ದಾರೆ. ರಾಜ್ಯದಲ್ಲಿ ಜನ ಪರ ಬಜೆಟ್ ಹಾಗೂ ರಾಜ್ಯಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಬಜೆಟ್‍ನ್ನು ಸಿಎಂ ಮಂಡಿಸಿದ್ದಾರೆ. ನೀರಾವರಿ ಯೋಜನೆಗೆ 25 ಸಾವಿರ ಕೋಟಿ ರೂ. ಬಜೆಟ್‍ನಲ್ಲಿ ಮೀಸಲಿಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಗಗನಕ್ಕೇರಿದ ಅಡುಗೆ ಎಣ್ಣೆ ದರ

    ಹಿಡಕಲ್ ಜಲಾಶಯ ಅಭಿವೃದ್ದಿ ಪಡಿಸಲು 148 ಕೋಟಿ ರೂ. ನೀಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಾಲ ಮಾಡಿಲ್ಲ ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಲ ಮಾಡಲಾಗಿದೆ. ಕೊರೊನಾ ಸಂದರ್ಭದಲ್ಲಿ ಮಾತ್ರ ಬಿಜೆಪಿ ಅವಧಿಯಲ್ಲಿ ಸಾಲ ಮಾಡಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

  • ಸರ್ವರ್ ಡೌನ್, ಒಟಿಪಿ ಬರುತ್ತಿಲ್ಲ – ಉಡುಪಿಯಲ್ಲಿ ಪಡಿತರ ಗೊಂದಲ

    ಸರ್ವರ್ ಡೌನ್, ಒಟಿಪಿ ಬರುತ್ತಿಲ್ಲ – ಉಡುಪಿಯಲ್ಲಿ ಪಡಿತರ ಗೊಂದಲ

    ಉಡುಪಿ: ಕರ್ನಾಟಕದಲ್ಲಿ ಕೊರೊನಾ ಹಬ್ಬುತ್ತಿರುವ ರೀತಿ ಕಂಡು ರಾಜ್ಯದ ಜನರು ಆತಂಕಕ್ಕೀಡಾಗಿದ್ದಾರೆ. ಲಾಕ್‍ಡೌನ್ ಮತ್ತೆ ಮುಂದುವರೆಯಬಹುದು ಎಂದು ಅಂದುಕೊಂಡು ಪಡಿತರ ಅಂಗಡಿಗಳಿಗೆ ಜನ ಮುಗಿಬಿದ್ದಿದ್ದಾರೆ.

    ಉಡುಪಿ ಜಿಲ್ಲೆಯ 298 ಪಡಿತರ ಅಂಗಡಿಗಳಿಗೆ ಅಕ್ಕಿ ಮಾತ್ರ ಈವರೆಗೆ ಪೂರೈಕೆಯಾಗಿದೆ. ಗೋಧಿ, ಸಕ್ಕರೆ, ಎಣ್ಣೆ, ಬೇಳೆ ಕಾಳು ಯಾವುದು ಪೂರೈಕೆಯಾಗಿಲ್ಲ. ಬಿಪಿಎಲ್ ಕಾರ್ಡುದಾರರಿಗೆ ತಲಾ 14 ಕೆಜಿ ಅಕ್ಕಿ ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಉಡುಪಿಯಲ್ಲಿ ಒಬ್ಬೊಬ್ಬರಿಗೆ 10 ಕೆಜಿ ಅಕ್ಕಿ ಮಾತ್ರ ಪೂರೈಕೆಯಾಗುತ್ತಿದೆ. ಒಟಿಪಿ, ಹೆಬ್ಬೆಟ್ಟಿನ ಗುರುತು ಇಲ್ಲದೆ ಪಡಿತರ ವಿತರಿಸಬೇಕೆಂದು ಸರ್ಕಾರ ಆದೇಶ ಮಾಡಿದೆ. ಕಳೆದೆರಡು ದಿನಗಳಿಂದ ಸರ್ವರ್ ಡೌನ್ ಆದ ಹಿನ್ನೆಲೆ ನಿಗದಿತ ಪ್ರಮಾಣದಲ್ಲಿ ಅಕ್ಕಿ ವಿತರಣೆ ಆಗುತ್ತಿಲ್ಲ. ಹೀಗಾಗಿ ನ್ಯಾಯಬೆಲೆ ಅಂಗಡಿಯ ಮುಂದೆ ಗ್ರಾಮೀಣ ಪ್ರದೇಶದಲ್ಲಿ ಜನ ಜಾತ್ರೆಯೇ ಆಗಿದೆ.

    ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂದೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂದಿತ್ತು. ಸರ್ವರ್ ಡೌನ್ ಆಗಿರುವುದರಿಂದ ಜನ ಬಿಸಿಲಿನಲ್ಲಿ ಬೇಯಬೇಕಾಯಿತು. ದಿನಕ್ಕೆ 50 ಜನರಿಗೆ ಮಾತ್ರ ಪಡಿತರ ವಿತರಣೆ ಮಾಡುವ ಸುದ್ದಿ ಹರಿದಾಡುತ್ತಿರುವುದರಿಂದ ಜನ ಗೊಂದಲಕ್ಕೀಡಾಗಿ ಒಂದೇ ದಿನ ನ್ಯಾಯಬೆಲೆ ಅಂಗಡಿಯತ್ತ ಮುಖ ಮಾಡಿದ್ದರು.

    ಪಡಿತರ ಪಡೆದುಕೊಳ್ಳಲು ಬಂದ ಜನರು ಮಾತನಾಡಿ, ಎಲ್ಲಾ ದಿನಸಿ ಸಿಗುತ್ತಿಲ್ಲ. ಅಕ್ಕಿಗಾಗಿ ಮಧ್ಯಾಹ್ನದವರೆಗೆ ಕಾಯುವ ಸ್ಥಿತಿಯಿದೆ. ಅಧಿಕಾರಿಗಳು ಒಂದೊಂದು ಏರಿಯಾಕ್ಕೆ ಒಂದು ದಿನ ಅಂತ ನಿಗದಿಪಡಿಸಿದರೆ ಬಿಸಿಲಲ್ಲಿ ಕಾಯುವುದು ತಪ್ಪುತ್ತದೆ ಎಂದರು. ಅಲ್ಲದೇ ಸಾಮಾಜಿಕ ಹೋರಾಟಗಾರರು ನ್ಯಾಯಬೆಲೆ ಅಂಗಡಿ ಮಾಲೀಕರ ಜೊತೆ ವಾಗ್ವಾದ ನಡೆಸಿದ ಘಟನೆ ಕೂಡಾ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆದಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮೂರು ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರಣ ಅಮಾನತು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಮೂರು ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರಣ ಅಮಾನತು

    ಚಿಕ್ಕಬಳ್ಳಾಪುರ: ಕೊರೊನಾ ಎಫೆಕ್ಟ್ ನಡುವೆ ಜನಸಾಮಾನ್ಯರಿಗೆ ಉಚಿತವಾಗಿ ಅಕ್ಕಿ, ಗೋಧಿ ವಿತರಣೆ ಮಾಡುವಂತೆ ಸರ್ಕಾರ ಆದೇಶ ಮಾಡಿದೆ. ಆದರೆ ಚಿಕ್ಕಬಳ್ಳಾಪುರದ ಕೆಲ ನ್ಯಾಯಬೆಲೆ ಅಂಗಡಿಗಳ ಪ್ರಾಧಿಕರಣದಾರರು ಗ್ರಾಹಕರಿಂದ 20 ರೂಪಾಯಿ ಹಣ ವಸೂಲಿ ಮಾಡುತ್ತಿರುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಿಂದ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಮೂರು ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರಣ ಅಮಾನತುಗೊಳಿಸಲಾಗಿದೆ.

    ಪಬ್ಲಿಕ್ ಟಿವಿ ತಂಡ ಕೆಲ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಖುದ್ದು ಪರೀಶಿಲನೆ ನಡೆಸಿದ್ದು, ಗ್ರಾಮೀಣ ಭಾಗದಲ್ಲಿ ಸ್ಥಳೀಯರಿಂದಲೇ ಮಾಹಿತಿ ಕಲೆ ಹಾಕಲಾಗುತ್ತಿತ್ತು. ಈ ವೇಳೆ ಗೌರಿಬಿದನೂರು ತಾಲೂಕು ಇಡಗೂರು ಗ್ರಾಮದ ಯುವಕ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ನಾಗರಾಜ್ ಗ್ರಾಹಕರಿಂದ 20 ರೂಪಾಯಿಯನ್ನ ವಸೂಲಿ ಮಾಡ್ತಿರೋ ದೃಶ್ಯ ಸೆರೆಹಿಡಿದು ಪಬ್ಲಿಕ್ ಟಿವಿಗೆ ಕಳುಹಿಸಿದ್ದರು. ಈ ಸಂಬಂಧ ಪಬ್ಲಿಕ ಟಿವಿ ವೆಬ್‌ಸೈಟ್ ನಲ್ಲಿ ಸುದ್ದಿ ಪ್ರಕಟ ಮಾಡಲಾಗಿತ್ತು. ಹಣ ಪಡೆಯುತ್ತಿದ್ದ ವಿಡಿಯೋವನ್ನ ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿದೇರ್ಶಕರಿಗೆ ಕಳುಹಿಸಲಾಗಿತ್ತು. ಇದನ್ನೂ ಓದಿ: ಪಡಿತರಕ್ಕಾಗಿ ಹಣ ವಸೂಲಿ – ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಯ್ತು ಸತ್ಯ

    ಇದರಿಂದ ಎಚ್ಚೆತ್ತಾ ಉಪನಿದೇರ್ಶಕರಾದ ಸೋಮಶಂಕರಪ್ಪ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಇಡಗೂರು ಗ್ರಾಮದ ನ್ಯಾಯಬೆಲೆಯ ಪ್ರಾಧಿಕಾರಣವನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಇದೇ ರೀತಿ ಗ್ರಾಹಕರಿಂದ 20 ರಿಂದ 30 ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರ ಗ್ರಾಮದ ನ್ಯಾಯಬೆಲೆ ಅಂಗಡಿ ಹಾಗೂ ಅಜ್ಜವಾರ ಗ್ರಾಮದ ನ್ಯಾಯಬೆಲೆ ಅಂಗಡಿಯ ಪ್ರಾಧಿಕಾರಣವನ್ನು ಸಹ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಈ ಮೂರು ನ್ಯಾಯಬೆಲೆ ಅಂಗಡಿಗಳ ಪ್ರಾಧಿಕಾರಣವನ್ನ ಅಮಾನತು ಮಾಡಿ, ಪಡಿತರ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಅಕ್ಕಿ ಹಾಗೂ ಗೋಧಿಗೆ ಯಾವುದೇ ಹಣ ಕೊಡಬಾರದು, ಯಾರಾದರೂ ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಪಡೆಯುವಂತಹ ಪ್ರಕರಣಗಳ ಕಂಡುಬಂದಲ್ಲಿ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಉಪನಿದೇರ್ಶಕರು ತಿಳಿಸಿದ್ದಾರೆ.

  • ಕಸದ ಆಟೋದಲ್ಲಿ ಅಕ್ಕಿ ವಿತರಣೆ – ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

    ಕಸದ ಆಟೋದಲ್ಲಿ ಅಕ್ಕಿ ವಿತರಣೆ – ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

    ಚಿಕ್ಕಮಗಳೂರು: ಪ್ರತಿನಿತ್ಯ ಊರಿನ ಕಸವನ್ನ ಕೊಂಡೊಯ್ಯುವ ಆಟೋದಲ್ಲಿ ಪಡಿತರ ಅಕ್ಕಿಯನ್ನ ಸಾಗಿಸಿದ್ದಕ್ಕೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.

    ಕೊರೊನಾ ವೈರಸ್ ಕಾಟ ಆರಂಭವಾದಾಗಿನಿಂದ ದೇಶ ಸೇರಿದಂತೆ ಜಗತ್ತೇ ತತ್ತರಿಸಿ ಹೋಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ಮಧ್ಯೆ ರಾಜ್ಯದಲ್ಲಿ ಜನಸಾಮಾನ್ಯರಿಗೆ ಪಡಿತರ ಸಮಸ್ಯೆ ಉದ್ಭವಿಸದಂತೆ ಸರ್ಕಾರ ಮುಂಗಡವಾಗಿ ಮೂರು ತಿಂಗಳ ಪಡಿತರ ಸಾಮಾಗ್ರಿಗಳನ್ನು ನೀಡಲು ತೀರ್ಮಾನಿಸಿ, ಅಕ್ಕಿಯನ್ನ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಿದೆ.

    ಕೊಪ್ಪದ ಜಯಪುರದಲ್ಲಿ ಪಡಿತರ ನೀಡಲು ಆರಂಭಿಸಿದ್ದರು. ಕಾರ್ಡ್ ಇರುವವರು ರೇಷನ್ ಕಾರ್ಡ್ ಮತ್ತು ಓಟಿಪಿಗಾಗಿ ಮೊಬೈಲ್ ತಂದು ಬಿಲ್ ಮಾಡಿಸಿಕೊಂಡಿದ್ದು, ಸೊಸೈಟಿ ಆಡಳಿತ ಮಂಡಳಿ ಮನೆ-ಮನೆಗೆ ಪಡಿತರ ತಲುಪಿಸಲು ನಿರ್ಧರಿಸಿತ್ತು. ಆದರೆ ಅಧಿಕಾರಿಗಳು ದಿನನಿತ್ಯ ಊರಿನ ಕಸವನ್ನ ಕೊಂಡೊಯ್ಯುವ ವಾಹನಕ್ಕೆ ಪ್ಲಾಸ್ಟಿಕ್ ಚೀಲ ಹಾಸಿ ಅಕ್ಕಿಯನ್ನ ಸರಬರಾಜು ಮಾಡಿದ್ದಾರೆಂದು ಆರೋಪಿಸಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಪಡಿತರವನ್ನ ಸಾಗಿಸಲು ಯಾರಿಗೆ ವಾಹನ ಕೇಳಿದರೂ ಗ್ರಾಮಸ್ಥರು ವಾಹನ ನೀಡುತ್ತಿದ್ದರು. ಆಟೋ ಹಾಗೂ ಗೂಡ್ಸ್ ಗಾಡಿಯವರು ತಾವೇ ಪಡಿತರ ಸಾಗಿಸಲು ಸಹಕರಿಸುತ್ತಿದ್ದರು. ಆದರೆ ಪಂಚಾಯ್ತಿ ಹಾಗೂ ಸೊಸೈಟಿಯವರು ಬಡವರ ಮನೆಗೆ ಅಕ್ಕಿ ಸಾಗಿಸಲು ಇಂತಹ ಕೆಲಸ ಮಾಡಬಾರದಿತ್ತು ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

  • ರೇಷನ್ ಅಂಗಡಿಯಲ್ಲಿ ಸಿಗೋ ಅಡುಗೆ ಎಣ್ಣೆ ಬಳಸೋ ಮುನ್ನ ಎಚ್ಚರವಾಗಿರಿ

    ರೇಷನ್ ಅಂಗಡಿಯಲ್ಲಿ ಸಿಗೋ ಅಡುಗೆ ಎಣ್ಣೆ ಬಳಸೋ ಮುನ್ನ ಎಚ್ಚರವಾಗಿರಿ

    ಕಲಬುರಗಿ: ರಾಜ್ಯ ಸರ್ಕಾರ ಪಡಿತರ ಚೀಟಿಯಡಿ ನೀಡುವ ಅಡುಗೆ ಎಣ್ಣೆಯನ್ನ ಸೇವನೆ ಮಾಡೋದಕ್ಕಿಂತ ಮೊದಲು ನೂರು ಸಲ ಯೋಚಿಸಿ. ಕಡಿಮೆ ಬೆಲೆಗೆ ಸಿಗ್ತಿದೆ ಅಂತಾ ಅದ್ರಲ್ಲಿ ಅಡುಗೆ ಮಾಡಿದ್ರೆ ಆಮೇಲೆ ಆಸ್ಪತ್ರೆ ಸೇರಬೇಕಾಗುತ್ತೆ. ಅವಧಿ ಮೀರಿದ ಎಣ್ಣೆ ಪ್ಯಾಕೆಟ್‍ಗಳು ವಿತರಣೆಯಾಗ್ತಿವೆ.

    ಬಿಪಿಎಲ್ ಕಾರ್ಡ್‍ದಾರರಿಗೆ ವಿಟಮಿನ್ ಎ, ವಿಟಮಿನ್ ಡಿ ಅಂಶವುಳ್ಳ ತಾಳೆಯೆಣ್ಣೆಯನ್ನು ವಿತರಿಸುತ್ತಿದೆ. ಆದ್ರೆ ಕಲಬುರಗಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಅವಧಿ ಮುಗಿದ ತಾಳೆ ಎಣ್ಣೆ ಮಾರಾಟ ಆಗ್ತಿರೋದು ಬೆಳಕಿಗೆ ಬಂದಿದೆ. ಸದ್ಯ ಅವಧಿ ಮೀರಿದ 15 ಸಾವಿರಕ್ಕೂ ಅಧಿಕ ಎಣ್ಣೆ ಪ್ಯಾಕೆಟ್‍ಗಳು ಪತ್ತೆಯಾಗಿವೆ.

     

     

    ಅವಧಿ ಮೀರಿದ ಎಣ್ಣೆ ಪ್ಯಾಕೆಟ್‍ಗಳನ್ನು ಮಾರಾಟ ಮಾಡದಂತೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಆದ್ರೆ ಅಧಿಕಾರಿಗಳ ಮಾತು ಕಡೆಗಣಿಸಿ ಆಹಾರ ಇಲಾಖೆ ಅಧಿಕಾರಿಗಳು ಅದೇ ತಾಳೆ ಎಣ್ಣೆಯನ್ನ ಬಡವರಿಗೆ ವಿತರಿಸುವ ಮೂಲಕ ಬಡಜನರ ಆರೋಗ್ಯದ ಜೊತೆ ಚೆಲ್ಲಾಟವಾಡ್ತಿದ್ದಾರೆ.

    ಈ ಬಗ್ಗೆ ಎಚ್ಚೆತ್ತಿಕೊಂಡಿರೋ ಕಲಬುರಗಿ ಜನ ಅವಧಿ ಮೀರಿದ ತಾಳೆ ಎಣ್ಣೆ ಪ್ಯಾಕೆಟ್‍ಗಳನ್ನ ಮೊದಲು ಸೀಜ್ ಮಾಡುವಂತೆ ಆಹಾರ ಇಲಾಖೆಗೆ ಆಗ್ರಹಿಸಿದ್ದಾರೆ.