Tag: Rathotsava

  • ದಾವಣಗೆರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ರಥೋತ್ಸವ – ಇಲ್ಲಿ ಮಹಿಳೆಯರೇ ರಥ ಎಳೀತಾರೆ

    ದಾವಣಗೆರೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ರಥೋತ್ಸವ – ಇಲ್ಲಿ ಮಹಿಳೆಯರೇ ರಥ ಎಳೀತಾರೆ

    ದಾವಣಗೆರೆ: ಸಾಮಾನ್ಯವಾಗಿ ರಥೋತ್ಸವದಲ್ಲಿ ರಥ ಎಳೆಯುವವರು ಪುರುಷರಾಗಿರುತ್ತಾರೆ. ಅಷ್ಟೇ ಅಲ್ಲದೇ ರಥೋತ್ಸವ ನಡೆಯುವುದು ಹಿಂದೂ ಧರ್ಮದಲ್ಲಿ. ಆದರೆ ಜಿಲ್ಲೆಯ ಯರಗುಂಟೆ ಗ್ರಾಮದಲ್ಲಿ ರಾಜ್ಯದ ಯಾವುದೇ ಸ್ಥಳಗಳಲ್ಲಿ ನಡೆಯದಂತ ವಿಶಿಷ್ಟ ಮಹಿಳಾ ರಥೋತ್ಸವ ನಡೆಯುತ್ತೆ. ಇಲ್ಲಿ ಮಹಿಳೆಯರೇ ರಥ ಎಳೆಯೋದೇ ವೈಶಿಷ್ಟ್ಯವಾಗಿದೆ. ರಥವನ್ನು ಮಹಿಳೆಯರು ಎಳೆಯುವುದರ ಜೊತೆಗೆ ಮುಸ್ಲಿಮರು ಕೂಡ ರಥೋತ್ಸವದಲ್ಲಿ ಭಾಗವಹಿಸಿ ಏಕತೆಯನ್ನು ಮೆರೆದಿದ್ದಾರೆ.

    ಈ ಗ್ರಾಮದ ಕರಿಬಸವೇಶ್ವರ ರಥೋತ್ಸವವನ್ನು ವಿಜೃಂಭಣೆಯಿಂದ ಮಹಿಳೆಯರೇ ಮುಂದೆ ನಿಂತು ಆಚರಿಸುತ್ತಾರೆ. ಜೊತೆಗೆ ರಥವನ್ನೂ ಕೂಡ ಅವರೇ ಎಳೆಯುತ್ತಾರೆ. ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಪೂಜಾಕಾರ್ಯವಾಗಿದ್ದು, ಮಹಿಳೆಯರು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ದೇವರಿಗೆ ಪೂಜೆ ಸಲ್ಲಿಸುತ್ತಾರೆ.

    ಹೀಗೆ ರಥ ಎಳೆಯುವುದು ಹಾಗೂ ಕರಿಬಸವೇಶ್ವರನ ಪೂಜೆ ಮಾಡುವುದು ಹಾಗೂ ತೊಟ್ಟಿಲು ತೂಗುವುದರಿಂದ ತಾವು ಬೇಡಿಕೊಂಡ ಇಷ್ಟಾರ್ಥಗಳು ಈಡೇರುತ್ತವೆ ಎಂದು ಭಕ್ತೆಯರಾದ ಸುಮಾ ಮತ್ತು ಸುರೇಖಾ ಅವರು ಹೇಳಿದ್ದಾರೆ.

    ಈ ರಥೋತ್ಸವಕ್ಕೆ ಕೇವಲ ಯರಗುಂಟೆ ಗ್ರಾಮದವರಷ್ಟೇ ಅಲ್ಲ ದಾವಣಗೆರೆ ಸುತ್ತಮುತ್ತಲಿನ ಎಲ್ಲಾ ಗ್ರಾಮದ ಮಹಿಳೆಯರು ಬಂದು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ವಿಶೇಷ ಎಂದರೆ ಮುಸ್ಲಿಂ ಧರ್ಮಿಯರು ಬಂದು ಕರಿಬಸವೇಶ್ವರನ ರಥಕ್ಕೆ ಹೂ ಮಾಲೆ ಸಮರ್ಪಣೆ ಮಾಡುತ್ತಾರೆ. ಇದರ ಮೂಲಕ ದೇವನೊಬ್ಬ ನಾಮ ಹಲವು ಅನ್ನೋ ಸಂದೇಶವನ್ನು ಸಾರುತ್ತಾರೆ ಎಂದು ಮುಸ್ಲಿಂ ಭಕ್ತ ಸಯ್ಯದ್ ಖಾದರ್ ಷಾ ಅವರು ಹೇಳಿದ್ರು.

  • ಚಾಮುಂಡಿ ಬೆಟ್ಟದಲ್ಲಿ ಮಹಾರಥೋತ್ಸವ- ರಥ ಎಳೆದ ಮಹಾರಾಜ ಯದುವೀರ್

    ಚಾಮುಂಡಿ ಬೆಟ್ಟದಲ್ಲಿ ಮಹಾರಥೋತ್ಸವ- ರಥ ಎಳೆದ ಮಹಾರಾಜ ಯದುವೀರ್

    ಮೈಸೂರು: ಚಾಮುಂಡಿಬೆಟ್ಟದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಿಯ ಮಹಾರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಇಂದು ಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿ ಯದುವಂಶದ ರಾಜ ಯದುವೀರ್ ದೇವಿಯ ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

    ರಥೋತ್ಸವ ಬಳಿಕ ಮಾತನಾಡಿದ ರಾಜಮಾತೆ ಪ್ರಮೋದಾ ದೇವಿ, ಸುಸೂತ್ರವಾಗಿ ದಸರಾ ಆಚರಣೆ ನಂತರ ಚಾಮುಂಡಿಗೆ ಪೂಜೆ ಸಲ್ಲಿಸುವ ಸಲುವಾಗಿ ನಡೆಯುವ ರಥೋತ್ಸವ ಇದಾಗಿದೆ. ಈ ಬಾರಿ ದಸರಾ ಉತ್ಸವ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನೆರವೇರಿದೆ. ಸಂಪ್ರದಾಯದಂತೆ ಇಂದು ಮಹಾರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ. ಬೆಟ್ಟದಲ್ಲಿ ದೀಪೋತ್ಸವ ನಡೆದ ಮೇಲೆ ನಮ್ಮ ದಸರಾ ಸಮಾಪ್ತಿಯಾಗಲಿದೆ ಎಂದು ಹೇಳಿದರು.

    ಇನ್ನು ಈ ಬಾರಿ ದಸರಾಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ. ಹೀಗಾಗಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದೇವೆ. ತಾಯಿ ಚಾಮುಂಡಿ ಆಶೀರ್ವಾದ ಪಡೆಯಲು ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗುತ್ತಾರೆ. ಈ ಪೂಜೆಯ ಮೂಲಕ ರಾಜ್ಯದಲ್ಲಿ ಮಳೆ ಬೆಳೆಯಾಗಿ ರಾಜ್ಯದ ಜನರು ಉತ್ತಮವಾದ ಜೀವನ ನಡೆಸಲಿ ಎಂದರು.

    ಇನ್ನು ರಾಣಿ ತ್ರಿಷಿಕಾ ಸೀಮಂತ ಕಾರ್ಯದ ಬಗ್ಗೆ ಮಾತನಾಡಿದ ಪ್ರಮೋದಾ ದೇವಿ, ಸೀಮಂತ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ರಾಜಮನೆತದ ಸೀಮಂತ ಕಾರ್ಯದ ಬಗ್ಗೆ ಒಂದಷ್ಟು ಜನರು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ಸಂಪ್ರದಾಯಗಳ ಪ್ರಕಾರ ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮ ನಡೆಯುವುದಿಲ್ಲ. ಅದು ತೀರಾ ಖಾಸಗಿಯಾಗಿರುವುದರಿಂದ ಇಲ್ಲಿ ಆ ಬಗ್ಗೆ ಚರ್ಚೆ ಬೇಡ ಎಂದರು.

    ಬಳಿಕ ಮಾತನಾಡಿದ ರಾಜ ಯದುವೀರ್, ಈ ಬಾರಿ ದಸರಾ ಯಶಸ್ವಿಯಾಗಿ ಆಚರಣೆ ಮಾಡಲಾಗಿದ್ದು, ಎಲ್ಲಾ ಕಾರ್ಯಕ್ರಮಗಳು ಕೂಡ ಸಮಯಕ್ಕೆ ಸರಿಯಾಗಿ ನೇರವೇರಿವೆ. ಯಾವುದೇ ಅಡಚಣೆಗಳಿಲ್ಲದೇ ನೆರವೇರಿದೆ. ವಿಶ್ವವಿಖ್ಯಾತ ದಸರಾ ಸುಸೂತ್ರವಾಗಿ ನೆರವೇರಿದ್ದು ನಮಗೆ ಸಂತೋಷ ತಂದಿದೆ. ದಸರಾ ಬಳಿಕ ಚಾಮುಂಡಿ ಬೆಟ್ಟದಲ್ಲಿರುವ ದೇವಿಗೆ ರಥೋತ್ಸವದ ಮೂಲಕ ಗೌರವ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ ಎಂದರು.

    ಇನ್ನು ರಥೋತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಭಕ್ತರು ರಥ ಚಲಿಸುತ್ತಿದ್ದಂತೆ ಹರ್ಷೋದ್ಗಾರದಿಂದ ಜೈಕಾರ ಹಾಕಿ ಸಂಭ್ರಮಿಸಿದರು. ಜೊತೆಗೆ ರಥ ದೇವಾಲಯದ ಸುತ್ತಾ ಒಂದು ಸುತ್ತು ಹಾಕಿತು. ಇದೇ ವೇಳೆ ರಥೋತ್ಸವ ಆರಂಭವಾಗುತ್ತಿದ್ದಂತೆ ಪೊಲೀಸರು 21 ಸುತ್ತು ಕುಶಾಲತೋಪು ಸಿಡಿಸಿ ಚಾಮುಂಡೇಶ್ವರಿಗೆ ಗೌರವ ಸಲ್ಲಿಸಿದರು.