Tag: Rathotsava

  • ಮೂಕಾಂಬಿಕೆಯ ಉತ್ಸವಕ್ಕೆ ಕೊರೊನಾ ಕರಿಛಾಯೆ

    ಮೂಕಾಂಬಿಕೆಯ ಉತ್ಸವಕ್ಕೆ ಕೊರೊನಾ ಕರಿಛಾಯೆ

    -ಕೊಲ್ಲೂರಲ್ಲಿ ಸಾಂಪ್ರದಾಯಿಕ ರಥಾರೋಹಣ ಸಂಪನ್ನ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿಯ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿದೆ. ಕರ್ನಾಟಕದಲ್ಲಿ ಕೊರೊನಾ ಹೈ ಅಲರ್ಟ್ ಇರುವುದರಿಂದ ಈ ಬಾರಿ ಅದ್ಧೂರಿ ರಥೋತ್ಸವ ನಡೆಯಲಿಲ್ಲ. ಸಾಂಪ್ರದಾಯಿಕ ಉತ್ಸವ ಮತ್ತು ರಥಾರೋಹಣ ನಡೆಸಿ ಈ ಬಾರಿ ವಾರ್ಷಿಕ ಜಾತ್ರೆಯನ್ನು ಮುಗಿಸಲಾಯಿತು.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮೂಕಾಂಬಿಕೆಯ ಕ್ಷೇತ್ರ ದಕ್ಷಿಣ ಭಾರತದ ದೇವಿ ದೇವಸ್ಥಾನಗಳಲ್ಲಿ ಬಹಳ ಪ್ರಸಿದ್ಧಿ ಕ್ಷೇತ್ರ. ಮೂಕಾಂಬಿಕೆಯ ವಾರ್ಷಿಕ ರಥೋತ್ಸವಕ್ಕೆ ಸಾವಿರಾರು ಮಂದಿ ಸ್ಥಳೀಯ, ರಾಜ್ಯದ ಬೇರೆ ಬೇರೆ ಭಾಗದ ಮತ್ತು ಹೊರ ರಾಜ್ಯದ ಭಕ್ತರು ಸೇರುತ್ತಾರೆ. ರಾಜ್ಯದಲ್ಲಿ ಕೊರೊನಾ ಎಮರ್ಜೆನ್ಸಿ ಇರೋದ್ರಿಂದ ಸರಳವಾಗಿ ದೇವಿಯ ಉತ್ಸವ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರಂತೆ ಇಂದು ಆರಂಭದಲ್ಲಿ ದೇಗುಲದ ಒಳ ಸುತ್ತುಪೌಳಿಯಲ್ಲಿ ಬಲಿ ಉತ್ಸವ, ನೆರವೇರಿಸಲಾಯಿತು.

    ದೇವಸ್ಥಾನದ ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸುತ್ತಮುತ್ತಲಿನ ಮನೆಯವರು ಸಾಂಪ್ರದಾಯಿಕ ಉತ್ಸವದಲ್ಲಿ ಪಾಲ್ಗೊಂಡರು. ದೇವಸ್ಥಾನಕ್ಕೆ ಇಂದು ಎಂದಿನಂತೆ ಎಲ್ಲರಿಗೂ ಪ್ರವೇಶ ಇರಲಿಲ್ಲ. ಸರ್ಕಾರದ ಸೂಚನೆಯಂತೆ ಕಡಿಮೆ ಜನ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡರು. ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿ ಆರತಿಯೆತ್ತಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಸಿಬ್ಬಂದಿ, ಭಕ್ತರು ನಿಲ್ಲಿಸಿದ್ದ ರಥವನ್ನು 20 ಮೀ.ನಷ್ಟು ದೂರ ಎಳೆದು ಸಾಂಪ್ರದಾಯಕ್ಕೆ ಚ್ಯುತಿ ಬಾರದಂತೆ ಉತ್ಸವ ನೆರವೇರಿಸಿದರು.

    ಭಗವದ್ಬಕ್ತರು ಮನೆಯಲ್ಲೇ ಇದ್ದು ಪ್ರಾರ್ಥನೆ ಮಾಡಿ ಭೂಮಿಗೆರಗಿದ ಕಂಟಕಗಳು ನಿವಾರಣೆಯಾದ ಮೇಲೆ ದೇವಸ್ಥಾನ ಪೂಜೆ, ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವಿನಂತಿಸಿದೆ. ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಶೆಟ್ಟಿ ಮಾತನಾಡಿ, ದೇವಸ್ಥಾನದ ಇತಿಹಾಸದಲ್ಲಿ ಹೀಗಾಗಿದ್ದಿಲ್ಲ ಎಂದು ತಿಳಿದಿದ್ದೇವೆ. ಸಂಪ್ರದಾಯ ಕಟ್ಟು ಕಟ್ಟಳೆಗೆ ಅಪಚಾರ ಆಗದಂತೆ ನಾವು ಉತ್ಸವಾದಿ ಪ್ರಕ್ರಿಯೆ ಮಾಡಿದ್ದೇವೆ. ಭಕ್ತರ ಸಹಕಾರಕ್ಕೆ ಪಬ್ಲಿಕ್ ಟಿವಿ ಮೂಲಕ ಧನ್ಯವಾದ ಅರ್ಪಿಸುತ್ತೇನೆ ಎಂದರು.

  • ಕೊಲ್ಲೂರಮ್ಮನಿಗೆ ಮನೆಯಲ್ಲೇ ಪ್ರಾರ್ಥಿಸಿ- ದೇವಸ್ಥಾನಕ್ಕೆ ಬರಬೇಡಿ

    ಕೊಲ್ಲೂರಮ್ಮನಿಗೆ ಮನೆಯಲ್ಲೇ ಪ್ರಾರ್ಥಿಸಿ- ದೇವಸ್ಥಾನಕ್ಕೆ ಬರಬೇಡಿ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿಯ ರಥೋತ್ಸವಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿದೆ. ಕರ್ನಾಟಕದಲ್ಲಿ ಕೊರೊನಾ ಹೈ ಅಲರ್ಟ್ ಇರುವುದರಿಂದ ಅದ್ಧೂರಿ ರಥೋತ್ಸವ ನಡೆಸದೇ ಇರಲು ದೇವಸ್ಥಾನ ತೀರ್ಮಾನಿಸಿದೆ.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮೂಕಾಂಬಿಕೆಯ ಕ್ಷೇತ್ರ ದಕ್ಷಿಣ ಭಾರತದ ದೇವಿ ದೇವಸ್ಥಾನಗಳಲ್ಲಿ ಬಹಳ ಪ್ರಸಿದ್ಧಿ ಕ್ಷೇತ್ರ. ಮೂಕಾಂಬಿಕೆಯ ವಾರ್ಷಿಕ ರಥೋತ್ಸವಕ್ಕೆ ಸಾವಿರಾರು ಮಂದಿ ಸ್ಥಳೀಯ, ರಾಜ್ಯದ ಬೇರೆ ಬೇರೆ ಭಾಗದ ಮತ್ತು ಹೊರ ರಾಜ್ಯದ ಭಕ್ತರು ಸೇರುತ್ತಾರೆ. ರಾಜ್ಯದಲ್ಲಿ ಕೊರೊನಾ ಎಮರ್ಜೆನ್ಸಿ ಇರುವುದರಿಂದ ಸರಳವಾಗಿ ದೇವಿಯ ಉತ್ಸವ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

    ದೇವಸ್ಥಾನದ ಆಡಳಿತ ಮಂಡಳಿ ಸಭೆ ಮಾಡಿ ಜಿಲ್ಲಾಧಿಕಾರಿ ಜಗದೀಶ್ ಅವರ ಸೂಚನೆಗೆ ಒಪ್ಪಿದೆ. ಅದ್ಧೂರಿ ರಥೋತ್ಸವ ಬದಲು ದೇವರ ರಥಾರೋಹಣ ಮಾತ್ರ ಮಾಡಲು ನಿಶ್ಚಯಿಸಿದೆ. ರಥಾರೋಹಣ ವೇಳೆ ದೇವಸ್ಥಾನದ ಸಿಬ್ಬಂದಿ ಮತ್ತು ಅರ್ಚಕರು ಮಾತ್ರ ಪಾಲ್ಗೊಳ್ಳುವಂತೆ ವಿನಂತಿ ಮಾಡಿಕೊಂಡಿದೆ.

    ಭಕ್ತರು ಮನೆಯಲ್ಲೇ ಇದ್ದು ಪ್ರಾರ್ಥನೆ ಮಾಡಿ ಸಮಸ್ಯೆಗಳು, ಕಂಟಕಗಳ ನಿವಾರಣೆಯಾದ ಮೇಲೆ ದೇವಸ್ಥಾನದಲ್ಲಿ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಇಒ ಅರವಿಂದ ಅಯ್ಯಪ್ಪ ಸುತಗುಂಡಿ ಪಬ್ಲಿಕ್ ಟಿವಿ ಮೂಲಕ ವಿನಂತಿ ಮಾಡಿದ್ದಾರೆ.

  • ರಥೋತ್ಸವಕ್ಕೆ ಬಾರದ ಭಕ್ತರು – ಮೈಸೂರು ಪ್ರವಾಸೋದ್ಯಮ ಸ್ತಬ್ಧ

    ರಥೋತ್ಸವಕ್ಕೆ ಬಾರದ ಭಕ್ತರು – ಮೈಸೂರು ಪ್ರವಾಸೋದ್ಯಮ ಸ್ತಬ್ಧ

    – ತರಕಾರಿ ದರ ಇಳಿದ್ರೂ ಜನ ಬರ್ತಿಲ್ಲ

    ಮೈಸೂರು: ಕೊರೊನಾ ಭೀತಿ ನಡುವೆ ಮೈಸೂರಿನ ಚಾಮುಂಡಿ ಬೆಟ್ಟದ ಮಹಾಬಲೇಶ್ವರ ಸ್ವಾಮಿಯ ರಥೋತ್ಸವ ನಡೆದಿದೆ. ಆದರೆ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿಲ್ಲ.

    ಪಾಲ್ಗುಣ ಮಾಸ ಕೃಷ್ಣ ಪಕ್ಷದಲ್ಲಿ ಈ ರಥೋತ್ಸವ ನಡೆಯುತ್ತದೆ. ಆದರೆ ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ರಥೋತ್ಸವದಲ್ಲಿ ಪಾಲ್ಗೊಳ್ಳಲು ಭಕ್ತರ ನಿರಾಸಕ್ತಿ ತೋರಿದ್ದಾರೆ. ರಥದ ಮುಂದೆ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ಇದ್ದರು.

    ಮೈಸೂರಿನ ಪ್ರಮುಖ ಪ್ರವಾಸಿತಾಣಗಳಾದ ಮೈಸೂರು ಅರಮನೆ, ಮೈಸೂರು ಮೃಗಾಲಯ ಇವತ್ತಿನಿಂದ ಮಾರ್ಚ್ 23 ರವರೆಗೆ ಬಂದ್ ಆಗಲಿದೆ. ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ಇನ್ನೂ ಭಾನುವಾರ ಬಂತು ಎಂದರೆ ಸಾಮಾನ್ಯವಾಗಿ ಮಾಂಸಹಾರ ಸೇವನೆ ಮಾಡುವವರು ಕಡ್ಡಾಯವಾಗಿ ಮಾಂಸದೂಟ ಮನೆಯಲ್ಲಿ ಮಾಡುತ್ತಾರೆ. ಹೀಗಾಗಿ ಮಾಂಸದ ಮಾರುಕಟ್ಟೆ ತುಂಬಾ ಡಿಮ್ಯಾಂಡ್ ಇರುತ್ತೆ. ಆದರೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮಾಂಸಮಾರಾಟ ಕುಸಿದು ಹೋಗಿದೆ. ಮಾಂಸದ ಮಾರುಕಟ್ಟೆಯಲ್ಲಿ ಜನವೇ ಇಲ್ಲ. ಇದರಿಂದ ವ್ಯಾಪಾರ ಸಂಪೂರ್ಣ ಡಲ್ ಆಗಿದೆ.

    ಇತ್ತ ತರಕಾರಿ ಬೆಲೆಗಳು ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದ್ದರೂ ಕೊರೊನಾ ಭಯದಿಂದ ತರಕಾರಿ ಖರೀದಿಗೆ ಜನ ಬರುತ್ತಿಲ್ಲ. ಮೈಸೂರಿನ ದೇವರಾಜ ಮಾರುಕಟ್ಟೆಯ ತರಕಾರಿ ಬೀದಿಯಲ್ಲಿ ಬಹಳ ಕಡಿಮೆ ಗ್ರಾಹಕರು ಇದ್ದರು. ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯ ಗ್ರಾಹಕರು ಇಲ್ಲಿ ಇರುತ್ತಾರೆ. ಆದರೆ ಇವತ್ತು ಗ್ರಾಹಕರ ಸಂಖ್ಯೆ ಬಹಳ ಕಡಿಮೆ ಆಗಿ ವ್ಯಾಪಾರ ಕುಸಿದಿದೆ.

  • ಚುಂಚನಗಿರಿಯಲ್ಲಿ ಅದ್ಧೂರಿ ರಥೋತ್ಸವ

    ಚುಂಚನಗಿರಿಯಲ್ಲಿ ಅದ್ಧೂರಿ ರಥೋತ್ಸವ

    ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಚುಂಚನಗಿರಿಯಲ್ಲಿ ಇಂದು ಮುಂಜಾನೆ ಅದ್ಧೂರಿಯಾಗಿ ಕಾಲಭೈರವೇಶ್ವರ ರಥೋತ್ಸವ ನಡೆಯಿತು.

    ಮುಂಜಾನೆ ಸೂರ್ಯೋದಯಕ್ಕೂ ಮೊದಲು ಶ್ರೀ ಕ್ಷೇತ್ರದಲ್ಲಿ ಬ್ರಹ್ಮರಥೋತ್ಸವಕ್ಕೆ ನಿರ್ಮಲನಂದಾನಾಥ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ರಥವೂ ಚುಂಚನಗಿರಿಯ ಪ್ರಮುಖ ಬೀದಿಗಳಲ್ಲಿ ಚಲಿಸಿತು. ವಿಜೃಂಭಣೆಯಿಂದ ನಡೆದ ಕಾಲಭೈರವೇಶ್ವರ ಸ್ವಾಮಿ ರಥೋತ್ಸದಲ್ಲಿ ಮುಂಜಾನೆಯೇ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

    ವಿಶೇಷ ವರ್ಣರಂಜಿತ ದೀಪಾಲಂಕಾರ, ಪುಷ್ಪಾಲಂಕಾರದಿಂದ ಸಿಂಗರಿಸಿದ್ದ ರಥಕ್ಕೆ ಭಕ್ತರು ಹಣ್ಣು, ಜವನ ಎಸೆಯುವ ಮೂಲಕ ಕಾಲಭೈರವೇಶ್ವರನ ಕೃಪೆಗೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಚುಂಚನಗಿರಿ ಶ್ರೀಗಳ ಪಲ್ಲಕ್ಕಿ ಉತ್ಸವವೂ ಜೊತೆ ಜೊತೆಯಾಗಿ ನಡೆದು, ಭಕ್ತರು ಭಕ್ತಿಯಿಂದ ಸ್ವಾಮೀಜಿಗೆ ನಮಿಸಿದರು.

  • ಅಬ್ಬರದ ಮುಂಗಾರು ಮಳೆಯಲ್ಲಿ ಉಡುಪಿ ಕೃಷ್ಣನಿಗೆ ಚಿನ್ನದ ರಥೋತ್ಸವ

    ಅಬ್ಬರದ ಮುಂಗಾರು ಮಳೆಯಲ್ಲಿ ಉಡುಪಿ ಕೃಷ್ಣನಿಗೆ ಚಿನ್ನದ ರಥೋತ್ಸವ

    ಉಡುಪಿ: ಮುಂಗಾರು ಮಳೆಯ ಅಬ್ಬರದ ನಡುವಲ್ಲೇ ಉಡುಪಿ ಕೃಷ್ಣನ ಉತ್ಸವ ನಡೆದಿದೆ. ರಥಬೀದಿಯಲ್ಲಿ ಮೊಣಕಾಲುವರೆಗೆ ನೀರು ತುಂಬಿಕೊಂಡಿದ್ದು ಮಳೆನೀರಿನ ನಡುವೆ ಶ್ರೀಕೃಷ್ಣನನ್ನು ಚಿನ್ನದ ರಥದಲ್ಲಿ ಕುಳ್ಳಿರಿಸಿ ಉತ್ಸವ ಮಾಡಲಾಯಿತು.

    ಈ ಬಾರಿಯ ಬರಗಾಲದ ಬಿಸಿ ಶ್ರೀ ಕೃಷ್ಣ ಮಠಕ್ಕೂ ತಟ್ಟಿತ್ತು. ಮಠದ ಮಧ್ವ ಸರೋವರ ಬತ್ತಿ ಹೋಗಿತ್ತು. ಇಂದು ಬೆಳಗ್ಗೆ ಬೀಸಿದ ಭಾರೀ ಗಾಳಿ ಮಳೆ, ಕೃಷ್ಣ ದೇವರಿಗೂ ಹಿತಾನುಭವ ನೀಡಿದೆ. ರಾತ್ರಿಯ ಉತ್ಸವ ಆರಂಭವಾಗುವ ವೇಳೆಯಲ್ಲೇ ಭಾರೀ ಮಳೆ ಸುರಿಯಿತು. ಚಿನ್ನದ ರಥವೇರಿದ ಕೃಷ್ಣ ಮುಂಗಾರು ಮಳೆಗೆ ಮೈಯ್ಯೊಡ್ಡಿ ಮೆರಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

    ಮೊದಲ ಮಳೆಯ ರೋಮಾಂಚನವನ್ನು ಶ್ರೀಕೃಷ್ಣನ ಜೊತೆ ನೂರಾರು ಭಕ್ತರು ಕೂಡಾ ಅನುಭವಿಸಿದರು. ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥರು ಮಳೆಯಲ್ಲಿ ನೆನೆಯುತ್ತಲೇ ಕೃಷ್ಣ ನನ್ನು ನೆನೆದರು. ಭಕ್ತರು ಮಳೆಯಲ್ಲಿ ತೋಯುತ್ತಲೇ ಕೃಷ್ಣಜಪ ಮಾಡಿ ರಥವೆಳೆದರು.

    ಮೊದಲ ಮಳೆಯಾದ ಕಾರಣ ರಥಬೀದಿಯಲ್ಲಿ ಕಾಲು ಮುಳುಗುವಷ್ಟು ನೀರಿತ್ತು. ಹರಿಯುವ ಜಲದ ನಡುವೆ ಹರಿಯ ರಥೋತ್ಸವ ಉತ್ಸವ ನಡೆದದ್ದು ವಿಶೇಷವೆನಿಸಿತು. ಇನ್ನಾದರೂ ಬರಗಾಲ ಕಳೆದು ಮುಂಗಾರು ಜನರನ್ನು ಹರಸಲಿ ಎಂದು ಭಕ್ತರು ಕೃಷ್ಣನನ್ನು ಬೇಡಿಕೊಂಡರು.

    ಈ ಸಂದರ್ಭ ಮಾತನಾಡಿದ ಪರ್ಯಾಯ ಪಲಿಮಾರು ಸ್ವಾಮೀಜಿ, ಭಾಗೀರತಿ ಜನ್ಮದಿನದ ಈ ಉತ್ಸವ ಸದಾ ನೆನಪುಳಿಯುವಂತದ್ದು. ಜಲಧಾರೆ ದೇವರ ನೆತ್ತಿ ಮೇಲೆ ಸುರಿಯುತ್ತಿತ್ತು. ದೇವರು ರಥಬೀದಿಯಲ್ಲಿ ಉತ್ಸವ ಹೊರಟಿದ್ದ. ಈ ಬಾರಿ ಯಾರೂ ಚಿಂತಿಸುವ ಅಗತ್ಯವಿಲ್ಲ. ಜನ ಜಾನುವಾರುಗಳಿಗೆ ನೀರು. ರೈತರಿಗೆ ಉತ್ತಮ ಬೆಳೆ ಸಿಗಲಿದೆ. ಮಳೆಗಾಲದಲ್ಲಿ ನಿರಂತರ ಮಳೆಯಾಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

  • ಪೊಲೀಸರು ಬರದೆ ರಥ ಹೊರಡಲ್ಲ- ಇದು ಬ್ರಹ್ಮಾವರದ ಮಹಾಲಿಂಗೇಶ್ವರ ದೇವರ ಮಹಿಮೆ

    ಪೊಲೀಸರು ಬರದೆ ರಥ ಹೊರಡಲ್ಲ- ಇದು ಬ್ರಹ್ಮಾವರದ ಮಹಾಲಿಂಗೇಶ್ವರ ದೇವರ ಮಹಿಮೆ

    ಉಡುಪಿ: ಒಂದು ಜಾತ್ರೆ ನಡೆಯಬೇಕಾದ್ರೆ ಅಲ್ಲಿ ರಥ, ಒಂದಷ್ಟು ಜನ ಜಂಗುಳಿ ಮಧ್ಯೆ ಶಾಸ್ತ್ರೋಕ್ತವಾಗಿ ಪೂಜೆ ನಡೆಯಬೇಕು. ಆದ್ರೆ ಉಡುಪಿಯ ಬ್ರಹ್ಮಾವರದಲ್ಲಿ ಅಪರೂಪದ ಜಾತ್ರೆ ನಡೆಯುತ್ತೆ. ಇಲ್ಲಿ ಯುನಿಫಾರ್ಮ್ ತೊಟ್ಟು ಪೊಲೀಸರು ದೇವಸ್ಥಾನದ ಮುಂದೆ ಬಂದಿಲ್ಲವೆಂದರೆ ರಥೋತ್ಸವ ಶುರುವಾಗಲ್ಲ.

    ಹೌದು. ಏನಿದು ವಿಚಿತ್ರ ಎನಿಸಬಹುದು, ಆದರೂ ಇದು ಸತ್ಯ. ಬ್ರಹ್ಮಾವರದ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಂಪ್ರತಿ ಉತ್ಸವ ಸಂಭ್ರಮದಿಂದ ನೆರವೇರಿದ್ದು, ಇಲ್ಲಿನ ರಥೋತ್ಸವ ನಡೆಯಬೇಕು ಅಂದರೆ ಯಾರು ಇರುತ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದ್ರೆ ಪೊಲೀಸರಂತೂ ಜಾತ್ರೆಗೆ ಬಾರದಿದ್ದರೇ ಉತ್ಸವ ಶುರುವಾಗೋದೇ ಇಲ್ಲ. ಅಲ್ಲದೇ ಠಾಣೆಯಿಂದ ದೇವಸ್ಥಾನದವರೆಗೆ ಪೊಲೀಸರನ್ನು ಮೆರವಣಿಗೆಯಲ್ಲೇ ಕರೆತರಲಾಗುತ್ತದೆ. ಹಾಗೆಯೇ ವಿವಿಧ ವಾದ್ಯಘೋಷಗಳೊಂದಿಗೆ ಪೊಲೀಸರು ದೇವಸ್ಥಾನಕ್ಕೆ ಬರುವುದನ್ನೇ ಭಕ್ತರು ಕಾಯುತ್ತಿರುತ್ತಾರೆ. ಖಾಕಿಧಾರಿಗಳು ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ. ಈ ರೀತಿಯ ಸಂಪ್ರದಾಯದಿಂದ ಪೊಲೀಸರು ಹಾಗೂ ಊರ ಜನರ ಮಧ್ಯೆ ಅವಿನಾಭಾವ ಸಂಬಂಧ ನಿರ್ಮಾಣವಾಗಿದೆ.

    ರಥೋತ್ಸವದ ದಿನ ಒಂದೆಡೆ ಬ್ರಹ್ಮಾವರ ಪೊಲೀಸ್ ಠಾಣೆಯ ಮುಂದೆ ಪೊಲೀಸ್ ಸಿಬ್ಬಂದಿ ಲಡ್ಡು, ಬಾಳೆಹಣ್ಣು, ಜ್ಯೂಸ್ ಜೋಡಿಸೋದರಲ್ಲಿ ಬ್ಯುಸಿಯಾಗಿದ್ದಾರೆ, ಎಸ್‍ಐ, ಎಎಸ್‍ಐ ತಮ್ಮ ಮನೆಯ ಕಾರ್ಯಕ್ರಮದ ತರ ಓಡಾಡುತ್ತಿರುತ್ತಾರೆ. ಇನ್ನೊಂದೆಡೆ ಠಾಣೆಯ ಅಂಗಳಕ್ಕೆ ಬಿರುದಾವಳಿಗಳ ಜೊತೆ ಬ್ಯಾಂಡು, ವಾದ್ಯ, ಕಹಳೆ ಜೊತೆಗೆ ದೇವಸ್ಥಾನಕ್ಕೆ ಸಂಬಂಧಪಟ್ಟವರು, ಊರ ಮುಖ್ಯಸ್ಥರು ಪೊಲೀಸ್ ಠಾಣೆಗೆ ಮೆರವಣಿಗೆಯ ಮೂಲಕ ಬರುತ್ತಾರೆ. ಜಾತ್ರೋತ್ಸವಕ್ಕೆ ಬರುವಂತೆ ಪೊಲೀಸರಿಗೆ ಮಲ್ಲಿಗೆ ಹೂವು ಕೊಟ್ಟು ಆಹ್ವಾನ ನೀಡುತ್ತಾರೆ. ಈ ವೇಳೆ ಪೊಲೀಸರು ದೇವಸ್ಥಾನಕ್ಕೆ ಹಣ್ಣುಕಾಯಿ ಕೊಡುತ್ತಾರೆ. ನೂರಾರು ಭಕ್ತರಿಗೆ ಸಿಹಿತಿಂಡಿ- ಹಣ್ಣು ಪಾನೀಯ ನೀಡಿ ಆತಿಥ್ಯ ವಹಿಸುತ್ತಾರೆ.

    ಈ ಬಗ್ಗೆ ಮಹಾಲಿಂಗೇಶ್ವರ ದೇವಸ್ಥಾನದ ಅನಂತ ಪದ್ಮನಾಭ ಅವರು ಮಾತನಾಡಿ, ನಾವು ಬಹಳ ಸಂಭ್ರಮದಿಂದ ಈ ದಿನವನ್ನು ಎದುರು ನೋಡುತ್ತೇವೆ. ಪೊಲೀಸರಿಗೆ ಮೊದಲ ಗೌರವ ಕೊಡುವಾಗ ಹೆಮ್ಮೆಯಾಗುತ್ತದೆ. ರಕ್ಷಕರಾಗಿರುವ ಪೊಲೀಸರಿಗೆ ಎಲ್ಲಾ ಕಡೆ ಗೌರವ ಕೊಡುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಎಸ್ .ಪಿ ನಿಶಾ ಜೇಮ್ಸ್ ಮಾತನಾಡಿ, ಇದೊಂದು ಎಲ್ಲೂ ಇಲ್ಲದ ಸಂಪ್ರದಾಯ. ಜನರ ಜೊತೆ ಪೊಲೀಸರಿಗೆ ಬೆರೆಯಲು ಅವಕಾಶ. ನಾನೆಲ್ಲೂ ಇಂತಹ ಆಚರಣೆ ನೋಡಿಲ್ಲ ಅಂತ ಅವರು ಹೇಳಿದರು.

    ಜಾತ್ರೆ ನಡೆಯಬೇಕಾದ್ರೆ ಪೊಲೀಸರ ಉಪಸ್ಥಿತಿ ಇರಲೇಬೇಕೆಂಬ ಸಂಪ್ರದಾಯ ಶುರುವಾಗಿದ್ದರ ಹಿನ್ನೆಲೆ ಸದ್ಯ ಯಾರಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಇದೊಂದು ವಿಶಿಷ್ಟ ಸಂಪ್ರದಾಯ ಆಗಿರೋದಂತೂ ಸತ್ಯ. ಭಧ್ರತೆಯ ಕಾರಣಕ್ಕೆ ಆರಂಭವಾದ ಈ ಆಚರಣೆ ಮುಂದೆ ಸಂಪ್ರದಾಯವಾಗಿ ಮಾರ್ಪಾಡಾಗಿರಬಹುದು. ಊರಿಗೆ, ಊರಿನ ಜನರಿಗೆ ರಕ್ಷಣೆ ಕೊಡುವ ಪೊಲೀಸರಿಗೆ ಉಡುಪಿಯ ಬ್ರಹ್ಮಾವರದಲ್ಲಿ ವಿಶೇಷ ರೀತಿಯಲ್ಲಿ ಸ್ಥಳೀಯರು ಗೌರವ ನೀಡುತ್ತಿದ್ದಾರೆ.

  • ರಥದ ಚಕ್ರ ಇರಿಸು ಮುರಿದು ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ

    ರಥದ ಚಕ್ರ ಇರಿಸು ಮುರಿದು ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ

    ಕೊಪ್ಪಳ: ರಥದ ಚಕ್ರ ಮಧ್ಯದ ಕಟ್ಟಿಗೆಯ ಇರಿಸು ಮುರಿದು ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ ಘಟನೆ ಕೊಪ್ಪಳದಲ್ಲಿ ನೆಡದಿದೆ.

    ಐತಿಹಾಸಿ ರಥೋತ್ಸವ ಎಂದೇ ಪ್ರಖ್ಯಾತಿ ಪಡೆದ ಕನಕಗಿರಿ ಕನಕರಾಯನ ರಥೋತ್ಸವದಲ್ಲಿ ಇಂದು ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡ ಕೆಲವರು ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

    ಆಗಿದ್ದೇನು?:
    ಕನಕರಾಯನ ಜಾತ್ರೆ ನಿಮ್ಮಿತ್ತ ಅದ್ಧೂರಿ ರಥೋತ್ಸವ ನಡೆದಿತ್ತು. ದಾರಿಯ ಮಧ್ಯದಲ್ಲಿ ರಥದ ಒಂದು ಗಾಲಿಯ ಕಟ್ಟಿಗೆ ಇರಿಸು ಮುರಿದಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಕೆಲವರು ರಥಕ್ಕೆ ಭಾರೀ ಅನಾಹುತವನ್ನು ತಡೆದಿದ್ದಾರೆ. ಬಳಿಕ ರಥದಲ್ಲಿದ್ದ ಪೂಜಾರಿಗಳನ್ನು ಕೆಳಗೆ ಇಳಿಸಿ, ರಥಕ್ಕೆ ಆಸರೆಯಾಗಿ ಕಂಬಗಳನ್ನು ಇಟ್ಟು ಯಾವುದೇ ದುರಂತ ನಡೆಯದಂತೆ ಕ್ರಮಕೈಗೊಂಡಿದ್ದಾರೆ. ಆದರೆ ರಥೋತ್ಸವ ನೋಡಲು ಬಂದ ಸಾವಿರಾರು ಭಕ್ತರಿಗೆ ಘಟನೆ ನಿರಾಶೆ ಮೂಡಿಸಿದೆ.

    ಅರ್ಧ ದಾರಿಯಲ್ಲೇ ನಿಂತ ರಥಕ್ಕೆ ನಾಳೆ ಬೆಳಗ್ಗೆ ಹೋಮ ಹವನ ಮಾಡಿಸಲಾಗುವುದು. ನಂತರ ಭಕ್ತರು ರಥವನ್ನು ಎಳೆದು ಪಾದಗಟ್ಟಿ ಮುಟ್ಟಿಸಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

    ಅನಾಹುತದ ಬಗ್ಗೆ ಮೊದಲೇ ತಿಳಿದಿತ್ತು?:
    ಕನಕರಾಯನ ರಥವು ಬಹಳ ವರ್ಷಗಳದ್ದಾಗಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ರಥೋತ್ಸವದ ವೇಳೆ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆದರೂ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸುವ ಬಗ್ಗೆ ನಿರ್ಲಕ್ಷ್ಯವಹಿಸಿದ್ದರು. ರಥ ಬಹಳ ಹಳೆಯದಾಗಿದ್ದರಿಂದ ಅವಘಡ ಸಂಭವಿಸುತ್ತದೆ ಎಂದು ದೇವಸ್ಥಾನದ ಆಡಳಿತಕ್ಕೆ ಮೊದಲೇ ಗೊತ್ತಿತ್ತು. ಹೀಗಾಗಿ ರಥಕ್ಕೆ ಇನ್ಸೂರೆನ್ಸ್ ಮಾಡಿಸುವ ಚಿಂತನೆ ಕೂಡ ನಡೆಸಿದ್ದರಂತೆ.

    ಘಟನೆ ಬಗ್ಗೆ ಗೊತ್ತಿದ್ದರೂ ರಥೋತ್ಸವ ನಡೆಸಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ನಿರ್ಲಕ್ಷ್ಯೆ ತೋರಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಹಸ್ರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನಡೆದ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ

    ಸಹಸ್ರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನಡೆದ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ

    ಹಾಸನ: ಶಾಂತಿ, ಸಹಬಾಳ್ವೆ ಜೊತೆಗೆ ಸರ್ವಧರ್ಮ ಸಮನ್ವಯ ಸಾರುವ ಜಿಲ್ಲೆಯ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿದೆ.

    ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸೇರಿದಂತೆ ಸಹಸ್ರಾರು ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ರಥೋತ್ಸವದ ವಿಶೇಷತೆ ಎಂದರೆ ಶಾಂತಿ-ಸಹಬಾಳ್ವೆ ಸಾರುವ ಸದುದ್ದೇಶದಿಂದ ದೊಡ್ಡ ಮೇದೂರಿನ ಖಾದ್ರಿ ವಂಶಸ್ಥರು ಖುರಾನ್ ಪಠಣ ಒಂದೆಡೆಯಾದ್ರೆ, ನಭದಲ್ಲಿ ಹದ್ದು ಹಾರುವುದು ಮತ್ತೊಂದೆಡೆ. ಈ ಕ್ರಿಯೆ ನಡೆದ ನಂತರವೇ ಅಲಂಕೃತ ರಥ ಮುಂದೆ ಸಾಗುತ್ತದೆ. ವಿಶ್ವಪ್ರಸಿದ್ಧ ಬೇಲೂರಿನ ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿದೆ.

    ಗುರುವಾರ ಬೆಳಗ್ಗೆ ಸುಮಾರು 11.15 ಕ್ಕೆ ವಿಶೇಷ ಪೂಜೆ ನಂತರ ಸಿಂಗಾರಗೊಂಡಿದ್ದ ದೊಡ್ಡ ರಥ, ಉತ್ಸವ ಮೂರ್ತಿ ಹೊತ್ತು ಮುಂದೆ ಸಾಗುತ್ತಿದ್ದಂತೆಯೇ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಜಯಘೋಷ ಮೊಳಗಿಸಿ ಭಾವ ಪರವಶರಾದರಾಗಿದ್ದಾರೆ.

  • ಉಡುಪಿಯಲ್ಲಿ ವಿಜೃಂಭಣೆಯಿಂದ ನಡೆಯಿತು ಮಕರ ಸಂಕ್ರಾಂತಿ ತೇರುಗಳ ಉತ್ಸವ

    ಉಡುಪಿಯಲ್ಲಿ ವಿಜೃಂಭಣೆಯಿಂದ ನಡೆಯಿತು ಮಕರ ಸಂಕ್ರಾಂತಿ ತೇರುಗಳ ಉತ್ಸವ

    ಉಡುಪಿ: 800 ವರ್ಷಗಳ ಹಿಂದೆ ಮಧ್ವಾಚಾರ್ಯ ರಿಂದ ಸ್ಥಾಪನೆಯಾದ ಶ್ರೀಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿಯ ದಿನದಂದು ಸಂಭ್ರ ಏಕಕಾಲದಲ್ಲಿ ಮೂರು ತೇರುಗಳ ಉತ್ಸವ ನಡೆಯಿತು.

    ಆರಂಭದಲ್ಲಿ ತೆಪ್ಪೋತ್ಸವ, ನಂತರ ಪಲ್ಲಕ್ಕಿಯಲ್ಲಿ ದೇವರನ್ನು ತಂದು ಮೂರು ರಥಗಳಲ್ಲಿ ಉತ್ಸವ ಮಾಡಲಾಯ್ತು. ಸಾವಿರಾರು ಮಂದಿ ಈ ದಿನದ ಆಚರಣೆಗೆ ಸಾಕ್ಷಿಯಾದರು. ಎಂಟು ಮಠದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ವಿದ್ಯುದ್ದೀಪಾಲಂಕಾರ, ಸಾಂಪ್ರದಾಯಿಕ ಪಟಾಕಿ, ವೈಭವದ ಮೆರವಣಿಗೆ ಸಂಕ್ರಾಂತಿಯ ವಿಶೇಷವಾಗಿತ್ತು.

    ಈ ಬಾರಿ ತೆಪ್ಪವನ್ನು ರಥದ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಸಂಕ್ರಾಂತಿ ಸಂದರ್ಭದಲ್ಲಿ ನಡೆದ ತೆಪ್ಪೋತ್ಸವದಲ್ಲಿ ಸ್ವಾಮೀಜಿಗಳು ತೆಪ್ಪ ನಡೆಸಿದ್ದು ವಿಶೇಷವಾಗಿತ್ತು. ಪರ್ಯಾಯ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಮಧ್ವ ಸರೋವರದಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿದರು. ಮಧ್ವ ಸರೋವರದಲ್ಲಿ ನಡೆದ ದೇವರ ತೆಪ್ಪೋತ್ಸವಕ್ಕೆ ಸ್ವಾಮೀಜಿಗಳೇ ದೋಣಿ ಚಲಾಯಿಸಿದ್ದು ವಿಶೇಷವಾಗಿತ್ತು.

    ಶ್ರೀ ಕೃಷ್ಣ ಮಠದಲ್ಲಿ ನಡೆದ ಮಕರ ಸಂಕ್ರಮಣದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶಿರೂರು ಮಠಾಧೀಶರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಮಂತ್ರಾಲಯದ ಮಠಾಧೀಶರಾದ ಶ್ರೀ ವಿಬುಧೇಂದ್ರ ತೀರ್ಥ ಶ್ರೀಪಾದರು, ರಾಮೋಹಳ್ಳಿಯ ಶ್ರೀ ವಿಶ್ವಭೂಷಣ ಶ್ರೀಪಾದರು ಉಪಸ್ಥಿತರಿದ್ದರು.

  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದ್ಧೂರಿಯಾಗಿ ನೆರವೇರಿದ ಪಂಚಮಿ ರಥೋತ್ಸವ

    ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದ್ಧೂರಿಯಾಗಿ ನೆರವೇರಿದ ಪಂಚಮಿ ರಥೋತ್ಸವ

    ಮಂಗಳೂರು: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ಉತ್ಸವದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಪಂಚಮಿ ರಥೋತ್ಸವ ನೆರವೇರಿದೆ.

    ಪಂಚಮಿಯ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆಯಾಗಿದೆ. ದೇವಳದೊಳಗೆ ವಿಶೇಷ ಬಲಿ ಸೇವೆ ನಡೆದಿದ್ದು, ತದನಂತರ ಪಂಚಮಿ ರಥೋತ್ಸವ ನಡೆದಿದೆ. ಮಧ್ಯರಾತ್ರಿ ರಥೋತ್ಸವ ನಡೆದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಆ ಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.

    ವೈಭವೋಪೇತವಾಗಿ ಸುಬ್ರಹ್ಮಣ್ಯನ ಪಂಚಮಿ ರಥೋತ್ಸವ ನಡೆದಿದ್ದು, ಸುಬ್ರಹ್ಮಣ್ಯನ ಉತ್ಸವ ಮೂರ್ತಿಯನ್ನು ರಥದಲ್ಲಿ ಇಟ್ಟು ವಿವಿಧ ಫಲಪುಷ್ಪದಿಂದ ಅಲಂಕಾರ ಮಾಡಲಾಗಿತ್ತು. ರಥವನ್ನು ದೇವಳದ ರಥಬೀದಿಯಲ್ಲಿ ಎಳೆಯಲಾಯಿತು. ಷಷ್ಠಿಯ ಹಿನ್ನಲೆಯಲ್ಲಿ ಇಂದು ಬೆಳಗ್ಗೆ 8.37ರ ಧನು ಲಗ್ನದಲ್ಲಿ ಸುಬ್ರಹ್ಮಣ್ಯ ನ ಬ್ರಹ್ಮರಥೋತ್ಸವ ನಡೆಯಲಿದೆ.

    ಕಳೆದ ದಿನ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಪಂಚಮಿಯ ಹಿನ್ನಲೆಯಲ್ಲಿ ಎಡೆಮಡಸ್ನಾನ ನಡೆಯಿತು. ಸುಮಾರು 333 ಭಕ್ತರು ಎಡೆಮಡಸ್ನಾನ ಸೇವೆ ಸಲ್ಲಿಸಿದ್ದಾರೆ. ಮಧ್ಯಾಹ್ನ ಸುಬ್ರಹ್ಮಣ್ಯ ನಿಗೆ ವಿಶೇಷ ಪೂಜೆ ಬಳಿಕ ಆಗಮ ಪಂಡಿತರು ಮತ್ತು ದೇವಳದ ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ದೇವರ ನೈವೇದ್ಯವನ್ನು ಬಾಳೆ ಎಲೆಯ ಮೇಲೆ ಬಡಿಸಲಾಗಿತ್ತು. ದೇವರ ನೈವೇದ್ಯವನ್ನು ಗೋವಿಗೆ ತಿನ್ನಿಸಿ ಎಡೆಮಡೆಸ್ನಾನಕ್ಕೆ ಚಾಲನೆ ನೀಡಲಾಯಿತು.

    ಬೆಳಗ್ಗೆ 10 ಗಂಟೆಯಿಂದಲೇ ಕುಮಾರಧಾರೆಯಲ್ಲಿ ಮಿಂದು, ಎಡೆಮಡಸ್ನಾನ ಸೇವೆ ಸಲ್ಲಿಸಲು ಕಾದು ಕುಳಿತ್ತಿದ್ದ ಭಕ್ತರು ದೇವರ ನೈವೇದ್ಯದಲ್ಲಿ ಉರುಳು ಸೇವೆ ಸಲ್ಲಿಸಿದರು. ಇದರಿಂದ ಯಾವುದೇ ಗೊಂದಲವಾಗದಂತೆ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಆಗಮ ಪಂಡಿತರು ಎಲ್ಲಾ ಸಿದ್ಧತೆಯನ್ನು ನಡೆಸಿದ್ದರು. ಯಾವುದೇ ಲಿಂಗಬೇಧ ಇಲ್ಲದೆ ಚರ್ಮರೋಗ ಪೀಡಿತರಿಂದ ಹಿಡಿದು ಮಕ್ಕಳ ತನಕ ಎಡೆಮಡಸ್ನಾನ ಹರಕೆಯನ್ನು ಭಕ್ತಿಯಿಂದ ಸಲ್ಲಿಸಿದರು.