Tag: rathothsava

  • ರಥೋತ್ಸವದ ಮೂಲಕ ನಾಡಿನ ಜನತೆಗೆ ಮತ್ತೊಮ್ಮೆ ದರ್ಶನ ನೀಡಿದ ತಾಯಿ ಚಾಮುಂಡೇಶ್ವರಿ

    ರಥೋತ್ಸವದ ಮೂಲಕ ನಾಡಿನ ಜನತೆಗೆ ಮತ್ತೊಮ್ಮೆ ದರ್ಶನ ನೀಡಿದ ತಾಯಿ ಚಾಮುಂಡೇಶ್ವರಿ

    ಮೈಸೂರು: ದಸರೆ ಮುಗಿದ ಬಳಿಕ ನಾಡಿನ ಅಧಿದೇವತೆಯನ್ನು ಕಣ್ತುಂಬಿಕೊಳ್ಳಲು ಭಕ್ತರಿಗೆ ಇಂದು ಮತ್ತೊಂದು ಅವಕಾಶ ಸಿಕಿದ್ದು, ಭಕ್ತರು ತಾಯಿಯ ದರ್ಶನವನ್ನು ಪಡೆದು ಉಘೇ ಉಘೇ ಚಾಮುಂಡಿ ಎಂದು ಜೈಕಾರ ಕೂಗಿದರು.

    ಹೌದು, ದಸರೆಯ ಬಳಿಕ ಚಾಮುಂಡಿ ಬೆಟ್ಟದಲ್ಲಿ ಅಧಿದೇವತೆ ಚಾಮುಂಡೇಶ್ವರಿಯ ರಥೋತ್ಸವವನ್ನು ಅದ್ಧೂರಿಯಾಗಿ ನೇರವೇರಿಸಲಾಗಿದೆ. ಮಂಗಳವಾರ ಬೆಳಗ್ಗೆ 8.10 ರಿಂದ 8.40 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಥೋತ್ಸವ ಕಾರ್ಯಕ್ರಮ ಜರುಗಿತು.

    ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡಿಯ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾದ ಅಂತಿಮ ಕಾರ್ಯಕ್ರಮವಾದ ತಾಯಿ ಚಾಮುಂಡೇಶ್ವರಿಯ ರಥೋತ್ಸವವು ಶಾಸ್ತ್ರೋಕ್ತವಾಗಿ ನೇರವೇರಿದ್ದು, ತಾಯಿ ಚಾಮುಂಡಿಯು ನಾಡಿನ ಜನತೆಗೆ ಆಶೀರ್ವಾದ ನೀಡಲಿ ಎಂದು ಹಾರೈಸಿದರು.

    ಮೆರವಣಿಗೆಗೂ ಮುನ್ನ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆಗಳೊಂದಿಗೆ ಹೊರಗೆ ತಂದು, ಪಲ್ಲಕ್ಕಿ ಮೇಲಿರಿಸಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ದೇವಿಯ ಮೂರ್ತಿಯನ್ನು ರಥೋತ್ಸವದಲ್ಲಿ ಇರಿಸಲಾಗಿತ್ತು. ಬೆಳಗ್ಗಿನಿಂದಲೂ ನಾಡ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಿದ್ದ ಆಗಮಿಕರು, ಶುಭ ಲಗ್ನದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಿದ್ದರು.

    ಮೆರವಣಿಗೆ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬೆಟ್ಟಕ್ಕೆ ಆಗಮಿಸಿದ ಭಕ್ತರು, ರಥಕ್ಕೆ ಹಣ್ಣು-ಜವನ ಎಸೆದು ತಮ್ಮ ಬೇಡಿಕೆ ಈಡೇರಿಸು ತಾಯಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೇ ವಿಶೇಷವಾಗಿ ಪೊಲೀಸ್ ಬ್ಯಾಂಡ್ ಹಾಗೂ ಕಲಾತಂಡಗಳು ರಥೋತ್ಸವದ ಸಂಭ್ರಮಕ್ಕೆ ಮೆರಗು ತಂದಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಥೋತ್ಸವದಲ್ಲಿ ಸಿಲುಕಿದ ದೇವೇಗೌಡ್ರು – ಓಡಿಬಂದು ತಂದೆಯನ್ನು ಹೊರತಂದ ರೇವಣ್ಣ

    ರಥೋತ್ಸವದಲ್ಲಿ ಸಿಲುಕಿದ ದೇವೇಗೌಡ್ರು – ಓಡಿಬಂದು ತಂದೆಯನ್ನು ಹೊರತಂದ ರೇವಣ್ಣ

    ಹಾಸನ: ಹೊಳೆನರಸೀಪುರದಲ್ಲಿ ನಡೆದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದಲ್ಲಿ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಮತ್ತು ಅವರ ಪತ್ನಿ ಚನ್ನಮ್ಮ ಸಿಲುಕಿಕೊಂಡು ಪರದಾಡಿದ ಘಟನೆ ನಡೆದಿದೆ.

    ಹೆಚ್.ಡಿ.ದೇವೇಗೌಡ, ಪತ್ನಿ ಚನ್ನಮ್ಮ ಹಾಗೂ ಶಾಸಕ ಹೆಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ, ಪುತ್ರ ಸೂರಜ್ ಉತ್ಸವ ಮೂರ್ತಿಗೆ ರಥದ ಮೇಲೆ ಪೂಜೆ ಸಲ್ಲಿಸಿದರು.

    ರಥ ಎಳೆಯುವ ಸಂದರ್ಭದಲ್ಲಿ ದೇವೇಗೌಡರು ಚಾಲನೆ ನೀಡಿದ ನಂತರ ಭಕ್ತರು ಏಕಾಏಕಿ ರಥವನ್ನು ಎಳೆದರು. ಹೀಗಾಗಿ ಭಕ್ತರ ನೂಕುನುಗ್ಗಲು ಉಂಟಾಗಿ 85 ವರ್ಷದ ದೇವೇಗೌಡರು ಮತ್ತು ಚನ್ನಮ್ಮ ಜನಸಂದಣಿಯಲ್ಲಿ ಸಿಲುಕಿಕೊಂಡಿದ್ರು.

    ಆಗ ಅಲ್ಲೇ ಇದ್ದ ಹಿರಿಯ ಮಗ ರೇವಣ್ಣ ಓಡಿಬಂದು ದೇವೇಗೌಡರ ಅಂಗರಕ್ಷಕರ ಸಹಾಯದಿಂದ ತಮ್ಮ ತಂದೆ-ತಾಯಿಯನ್ನು ನೂಕುನುಗ್ಗಲಿಂದ ಬಚಾವ್ ಮಾಡಿದ್ರು.

    ಆದ್ರೆ ನನಗೆ ಏನೂ ಆಗಿಲ್ಲ ಅಂತ ಗೊರೂರಲ್ಲಿ ದೇವೇಗೌಡರು ಸ್ಪಷ್ಟಪಡಿಸಿದ್ರು.

  • ನಂಜನಗೂಡು ಪಂಚಮಹಾರಥೋತ್ಸವದ ವೇಳೆ ಅವಘಡ- ರಸ್ತೆಯಲ್ಲಿ ಹೂತು ಹೋದ ರಥದ ಚಕ್ರ

    ನಂಜನಗೂಡು ಪಂಚಮಹಾರಥೋತ್ಸವದ ವೇಳೆ ಅವಘಡ- ರಸ್ತೆಯಲ್ಲಿ ಹೂತು ಹೋದ ರಥದ ಚಕ್ರ

    – ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು

    ಮೈಸೂರು: ಮೈಸೂರು: ಬಳ್ಳಾರಿ ಕೊಟ್ಟೂರೇಶ್ವರ ರಥ ಮಗುಚಿ ಬಿದ್ದ ಪ್ರಕರಣ ಮಾಸುವ ಮುನ್ನವೇ ನಂಜನಗೂಡು ಪಂಚ ಮಹಾರಥೋತ್ಸವದ ವೇಳೆ ಅವಘಡ ಸಂಭವಿಸಿದೆ.

    ನಂಜನಗೂಡಿನ ಅಂಗಡಿ ಬೀದಿಯಲ್ಲಿ ಸಾಗುತ್ತಿದ್ದ ವೇಳೆ ರಥದ ಚಕ್ರ ಹೂತು ಹೋಗಿದೆ. ಶ್ರೀಕಂಠೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಗೌತಮ ರಥದ ಮುಂಭಾಗದಲ್ಲಿರುವ ಎಡಬದಿಯ ಚಕ್ರ ರಸ್ತೆಯಲ್ಲಿ ಹೂತು ಹೋದ ಪರಿಣಾಮ ಗೌತಮ ರಥ ಮುಂದೆ ಚಲಿಸದೆ ನಿಂತಿದೆ. 1 ಕ್ರೇನ್ ಹಾಗೂ 2 ಜೆಸಿಬಿಗಳಿಂದ ರಥದ ಚಕ್ರವನ್ನು ಮೇಲೆತ್ತಲು ಹರಸಾಹಸ ಪಡ್ತಿದ್ದಾರೆ. ಘಟನಾ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

    ಅಲ್ಲದೆ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 42 ವರ್ಷದ ಜಗದೀಶ್ ಮೃತ ದುರ್ದೈವಿ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಾಳಶಾಸನ ಗ್ರಾಮದ ನಿವಾಸಿ. ತಮ್ಮ ಕುಟುಂಬ, ಪರಿವಾರದೊಂದಿಗೆ ಜಗದೀಶ್ ಜಾತ್ರೆಗೆ ಆಗಮಿಸಿದ್ದರು. ಭಕ್ತರಿಗೆ ಅನ್ನದಾನ ಮಾಡಲು ರಾತ್ರಿ ಅಡುಗೆ ತಯಾರು ಮಾಡಲಾಗುತ್ತಿತ್ತು. ಆಗ ಬಲ್ಬ್ ಬದಲಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಜಗದೀಶ್ ಸ್ಥಳದಲ್ಲೇ ಅಸುನೀಗಿದ್ದಾರೆ. ಜಾತ್ರೆಗೆ ಅಡ್ಡಿ ಆಗದಂತೆ ಪೊಲೀಸರು ಶವವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಇಂದು ಬೆಳಗ್ಗೆ 5.20ರಿಂದ 6.20ರ ಮಖಾ ನಕ್ಷತ್ರದ ಮೀನ ಲಗ್ನದಲ್ಲಿ ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯ್ತು. ಗೌತಮ, ಪಾರ್ವತಿದೇವಿ, ಗಣಪತಿ, ಸುಬ್ರಹ್ಮಣ್ಯೇಶ್ವರ, ಚಂಡಿಕೇಶ್ವರ ದೇವರುಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. 89 ಅಡಿ ಎತ್ತರದ ಅಲಂಕೃತ ಗೌತಮ ರಥ ಶ್ರೀಕಂಠೇಶ್ವರ ಜಾತ್ರೆಯ ಕೇಂದ್ರ ಬಿಂದು. 100 ಟನ್ ತೂಕದ ರಥ ಎಳೆಯಲು 240 ಅಡಿ ಉದ್ದದ ಹಗ್ಗ ಬಳಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ರಥೋತ್ಸವದಲ್ಲಿ ಭಾಗವಹಿಸುವ 112 ಸಿಬ್ಬಂದಿಗೆ ಮುಜರಾಯಿ ಇಲಾಖೆಯಿಂದ ವಿಮಾ ಸೌಲಭ್ಯ ಕಲ್ಪಿಸಲಾಗಿದೆ.

    ಭದ್ರತೆಗಾಗಿ ಜಿಲ್ಲಾ ಪೊಲೀಸರು ವಿಶೇಷ ಕ್ರಮ ವಹಿಸಿದ್ದು, ತಾತ್ಕಾಲಿಕವಾಗಿ 35 ಸಿಸಿ ಕ್ಯಾಮೆರಾ, 7 ಮೊಬೈಲ್ ವಾಚ್ ಟವರ್ ಅಳವಡಿಸಲಾಗಿದೆ.