Tag: Rathnashree Arogyadhama

  • ಉಡುಪಿಯಲ್ಲಿ ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

    ಉಡುಪಿಯಲ್ಲಿ ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

    ಉಡುಪಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ರತ್ನಶ್ರೀ ಆರೋಗ್ಯಧಾಮ ಉಡುಪಿಯ ಆಯುರ್ವೇದ ಆಸ್ಪತ್ರೆಯನ್ನು ಕೇಂದ್ರ ಆಯುಷ್, ಬಂದರು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ ಉದ್ಘಾಟಿಸಿದರು.

    ಉಡುಪಿಯ ಕುತ್ಪಾಡಿ ಯಲ್ಲಿರುವ ಎಸ್‍ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವಠಾರದಲ್ಲಿ ನೂತನ ಸುಸಜ್ಜಿತ ಆಯುರ್ವೇದ ಆಸ್ಪತ್ರೆ ಸೇವಾರಂಭ ಆಗಿದೆ. ಆಸ್ಪತ್ರೆ ಉದ್ಘಾಟನೆ ನಂತರ ಸಭಾಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಯುಷ್ ಇಲಾಖೆ ಸಚಿವರು, ಪ್ರಧಾನಿ ಮೋದಿ ಆಯುಷ್ ಇಲಾಖೆಗೆ ಶಕ್ತಿಕೊಟ್ಟಿದ್ದಾರೆ. 2014ರ ನಂತರ ದೇಶಾದ್ಯಂತ ಆಯುಷ್ ಇಲಾಖೆ ವಿಸ್ತಾರಗೊಂಡಿದೆ. ಎಸ್‍ಡಿಎಂ ಸಂಸ್ಥೆ ಆಯುರ್ವೇದ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಶ್ರಮದ ಫಲದಿಂದ ಧರ್ಮಸ್ಥಳ ಸಂಸ್ಥೆ ಸಾಧನೆ ಮಾಡುತ್ತಿದೆ ಸೇವಾ ಸಮರ್ಪಣೆ ಮತ್ತು ವೀರೇಂದ್ರ ಹೆಗ್ಗಡೆಯವರ ಮನೋಭಾವದಿಂದ ಇಷ್ಟೆಲ್ಲಾ ಸಾಧನೆ ಸಾಧ್ಯ ಆಗಿದೆ ಎಂದು ಶ್ಲಾಘಿಸಿದರು.

    ಆಯುರ್ವೇದ ವೈದ್ಯ ಪದ್ಧತಿಯಿಂದ ಸ್ವಸ್ಥ ಸಮಾಜ ನಿರ್ಮಾಣ ಆಗಲಿದೆ. ಎಲ್ಲಾ ಚಿಕಿತ್ಸಾ ಪದ್ಧತಿಗಳ ದೇಹ ಒಂದೇ ಆಗಿರುತ್ತದೆ ಆದರೆ ಆಯುರ್ವೇದ ಚಿಕಿತ್ಸೆಯಲ್ಲಿ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಕಳೆದ ಏಳು ವರ್ಷದಲ್ಲಿ ಆಯುಷ್ ಇಲಾಖೆ ದೇಶಾದ್ಯಂತ ಬಹಳ ವಿಸ್ತಾರವಾಗಿ ಬೆಳೆದಿದೆ. ಎಲ್ಲಾ ರೋಗಗಳಿಗೂ ಆಯುರ್ವೇದ ಚಿಕಿತ್ಸೆ ಫಲಕಾರಿ. ದೇಶಾದ್ಯಂತ ಸಂಶೋಧನೆಗಳು, ಪ್ರಯೋಗಗಳು ಈ ನಿಟ್ಟಿನಲ್ಲಿ ನಡೆಯುತ್ತಿದೆ ಎಂದರು. ಇದನ್ನೂ ಓದಿ: ನೆಟ್ಟಿಗರ ಮನಗೆದ್ದ ನ್ಯೂಸ್‍ಪೇಪರ್ ಬಾಯ್

    ಆಯುರ್ವೇದದ ವಿಶ್ವಾಸಾರ್ಹತೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಜನರಿಗೆ ಆಯುರ್ವೇದದ ಮೇಲೆ ನಂಬಿಕೆ ಬರುತ್ತಿದೆ. ಆಯುರ್ವೇದ ಚಿಕಿತ್ಸೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ನವಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ. ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ದೇಶದ ಯೋಗ, ಆಯುರ್ವೇದ, ನ್ಯಾಚುರೋಪತಿ ವಿಶ್ವಕ್ಕೆ ಮಾದರಿಯಾಗುತ್ತಿದೆ. ಪ್ರಕೃತಿ ವಿರುದ್ಧವಾದ ಯಾವುದೇ ವೈದ್ಯಕೀಯ ಚಿಕಿತ್ಸೆಗಳಿಗೆ ಜನ ಒಳಗಾಗಬಾರದು. ಪ್ರಕೃತಿಗೆ ಪೂರಕವಾದ ಚಿಕಿತ್ಸೆಯ ಪಡೆಯೋಣ ಎಂದು ನುಡಿದರು.

    ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹರ್ಷೇಂದ್ರ ಕುಮಾರ್, ಡಾ. ಸುರೇಂದ್ರ ಕುಮಾರ್, ಡಾ. ಮಮತಾ ಮತ್ತು ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು. ಇದನ್ನೂ ಓದಿ: ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ ಟೆಕ್ಕಿ ಸಾವು