Tag: Rapid Test Kit

  • ಕೊರೊನಾ ಶಾಕ್ – ಚೀನಾದ ರ‌್ಯಾಪಿಡ್ ಟೆಸ್ಟ್ ಕಿಟ್ ಬಳಕೆಗೆ ಬ್ರೇಕ್

    ಕೊರೊನಾ ಶಾಕ್ – ಚೀನಾದ ರ‌್ಯಾಪಿಡ್ ಟೆಸ್ಟ್ ಕಿಟ್ ಬಳಕೆಗೆ ಬ್ರೇಕ್

    ನವದೆಹಲಿ: ಚೀನಾದಿಂದ ಆಮದಾಗಿದ್ದ ಕೊರೊನಾ ರ‌್ಯಾಪಿಡ್ ಟೆಸ್ಟ್ ಕಿಟ್ ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

    ನಿಖರ ಫಲಿತಾಂಶ ಪಡೆಯುವ ವಿಚಾರದಲ್ಲಿ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ 2 ದಿನದ ಮಟ್ಟಿಗೆ ಈ ಕಿಟ್ ಗಳನ್ನು ಬಳಸದಂತೆ ಐಸಿಎಂಆರ್ ಸೂಚಿಸಿದೆ.

    ಐಸಿಎಂಆರ್ ಹಿರಿಯ ವಿಜ್ಞಾನಿ ರಮನ್ ಆರ್ ಗಂಗಾಖೇಡ್ಕರ್ ಪ್ರತಿಕ್ರಿಯಿಸಿ, ಒಂದು ರಾಜ್ಯದಿಂದ ಈ ಫಲಿತಾಂಶದ ಬಗ್ಗೆ ದೂರು ಬಂದಿದೆ. ಇದಾದ ಬಳಿಕ ನಾವು ಮೂರು ರಾಜ್ಯದವರ ಜೊತೆ ಮಾತನಾಡಿದಾಗ ನಿಖರವಾಗಿ ಪಾಸಿಟಿವ್ ಫಲಿತಾಂಶ ಬರುತ್ತಿಲ್ಲ. ಕೆಲವೊಂದು ಕಡೆ ಶೇ.6 ರಷ್ಟು ಬಂದರೆ ಕೆಲವೊಂದು ಶೇ.71 ರಷ್ಟು ಫಲಿತಾಂಶ ಬಂದಿದೆ ಎಂದು ತಿಳಿಸಿದರು.

    ಕೇವಲ 3.5 ತಿಂಗಳ ರೋಗದ ಪರೀಕ್ಷೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣ ವ್ಯತ್ಯಾಸ ಬರಕೂಡದು. ಹೀಗಾಗಿ ಮುಂದಿನ 2 ದಿನಗಳಲ್ಲಿ 8 ಮಂದಿ ಇರುವ ತಜ್ಞರ ತಂಡವನ್ನು ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

    ನಿಖರವಾದ ಫಲಿತಾಂಶಗಳು ಪ್ರಕಟವಾಗದ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ರ‌್ಯಾಪಿಡ್ ಟೆಸ್ಟ್ ಪರೀಕ್ಷೆಯನ್ನು ನಿಲ್ಲಿಸಿ ಐಸಿಎಂಆರ್ ಗಮನಕ್ಕೆ ತಂದಿತ್ತು. ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಪ್ರತಿಕ್ರಿಯಿಸಿ, ಶೇ.90 ರಷ್ಟು ನಿಖರ ಫಲಿತಾಂಶ ನೀಡಬೇಕಾದ ಕಿಟ್ ಕೇವಲ ಶೇ.5.4 ಫಲಿತಾಂಶ ನೀಡುತ್ತಿದ್ದು, ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದ್ದರು. ರಾಜಸ್ಥಾನದ ಬಳಿಕ ಪಶ್ಚಿಮ ಬಂಗಾಳ ಸಹ ಈ ಕಿಟ್ ಬಗ್ಗೆ ಐಸಿಎಂಆರ್ ಗೆ ದೂರು ನೀಡಿತ್ತು.

    ಕೊರೊನಾ ಪರೀಕ್ಷೆ ಹೆಚ್ಚಿಸಲು ಭಾರತ ಸರ್ಕಾರ ಚೀನಾದಿಂದ 5 ಲಕ್ಷ ರ‌್ಯಾಪಿಡ್ ಟೆಸ್ಟ್ ಕಿಟ್ ಗಳನ್ನು ಆಮದು ಮಾಡಿಕೊಂಡಿತ್ತು. ಕಳೆದ ವಾರ ಬಂದಿಳಿದ ಕಿಟ್ ಗಳನ್ನು ಅತಿ ಹೆಚ್ಚು ಕೊರೊನಾ ಸೋಂಕಿತರು ಕಂಡು ಬಂದಿದ್ದ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲು ರಾಜ್ಯಗಳಿಗೆ ಕಳುಹಿಸಲಾಗಿತ್ತು.

    ಈ ಮೊದಲು ಶಂಕಿತರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಆದರೆ ಇದರಲ್ಲಿ ರಕ್ತದ ಮಾದರಿಯನ್ನು ಪಡೆಯುವ ಮೂಲಕ ಬಹಳ ವೇಗವಾಗಿ ಫಲಿತಾಂಶ ಪಡೆಯಬಹುದಾಗಿದೆ.

    ಕರ್ನಾಟಕಕ್ಕೆ 20 ಸಾವಿರ ಕಿಟ್ ಗಳು ಬಂದಿದ್ದು ಬುಧವಾರ ಅಥವಾ ಗುರುವಾರ ಪರೀಕ್ಷೆ ನಡೆಯಬೇಕಿತ್ತು. ಬೆಂಗಳೂರಿಗೆ 2,500 ಕಿಟ್ ಗಳು ಮೀಸಲಾಗಿದ್ದು ನಿಮ್ಹಾನ್ಸ್ ನಲ್ಲಿ ಪ್ರಯೋಗಿಕ ಪರೀಕ್ಷೆ ನಡೆಯಬೇಕಿತ್ತು.