Tag: rank

  • ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

    ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

    ಪುಣೆ: ಸಸ್ಯಹಾರಿ ಆಗಿರುವ, ಮದ್ಯಪಾನ ಮಾಡದ ವಿದ್ಯಾರ್ಥಿಗೆ ಮಾತ್ರ ರ‍್ಯಾಂಕ್‌ ನೀಡುವುದಾಗಿ ಪುಣೆ ವಿಶ್ವವಿದ್ಯಾಲಯ ನಿಯಮ ರೂಪಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಹೌದು, ಪುಣೆಯ ಸಾವಿತ್ರಿಭಾಯಿ ಪುಲೆ ವಿಶ್ವವಿದ್ಯಾಲಯ ಚಿನ್ನದ ಪದಕ ನೀಡುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ ಕೆಲ ನಿಯಮಗಳನ್ನು ರೂಪಿಸಿ ಸುತ್ತೋಲೆ ಹೊರಡಿಸಿದೆ.

    ಸುತ್ತೋಲೆಯಲ್ಲಿ ಮಹರ್ಷಿ ಕೀರ್ತಂಕರ್ ಶೀರಲ್ ಮಾಮ ಚಿನ್ನದ ಪದಕ ಪಡೆಯುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ 10 ನಿಯಮಗಳನ್ನು ಪ್ರಕಟಿಸಿದ್ದು ಈ ನಿಯಮಗಳಲ್ಲಿ ವಿದ್ಯಾರ್ಥಿ ಸಸ್ಯಹಾರಿ ಆಗಿರಬೇಕು ಮತ್ತು ಮದ್ಯಪಾನ ಮಾಡಿರಬಾರದು ಎಂದು ತಿಳಿಸಲಾಗಿದೆ.

    ಸುತ್ತೋಲೆಯಲ್ಲಿ ಏನಿದೆ?
    ಸಸ್ಯಹಾರಿ ಮತ್ತು ಮದ್ಯ ಸೇವನೆ ಅಲ್ಲದೇ ಈ ಪದಕವನ್ನು ಪಡೆಯುವ ವಿದ್ಯಾರ್ಥಿ ರಕ್ತದಾನ ಶಿಬಿರ, ಶ್ರಮದಾನ, ಪರಿಸರ ರಕ್ಷಣೆ, ಮಲಿನ್ಯ ನಿಯಂತ್ರಣ ಕೆಲಸ, ಸಾಹಿತ್ಯ, ಶುಚಿತ್ವ, ಏಡ್ಸ್ ಜಾಗೃತಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರಬೇಕು ಎನ್ನುವ ಅಂಶ ಸುತ್ತೋಲೆಯಲ್ಲಿದೆ.

    ಯಾಕೆ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಕೇಳಿದ್ದಕ್ಕೆ ವಿವಿ, ಈ ಚಿನ್ನದ ಪದಕವನ್ನು ಟ್ರಸ್ಟ್ ಒಂದು ಪ್ರಯೋಜನೆ ಮಾಡಿದ್ದು, ಟ್ರಸ್ಟ್ ಈ ಪದಕವನ್ನು ಪಡೆಯುವ ವಿದ್ಯಾರ್ಥಿ ಈ ಎಲ್ಲ ಅರ್ಹತೆಯನ್ನು ಹೊಂದಿರಬೇಕು ಎಂದು ಷರತ್ತು ವಿಧಿಸಿತ್ತು. ಹೀಗಾಗಿ ನಾವು ಈ ನಿಯಮವನ್ನು ಸುತ್ತೋಲೆಯಲ್ಲಿ ಸೇರಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿತ್ತು.

    ಪುಣೆ ವಿವಿಯ ಈ ವಿಶೇಷ ನಿಯಮಕ್ಕೆ ಶಿವಸೇನೆ ಮತ್ತು ಎನ್‍ಸಿಪಿ ಆಕ್ಷೇಪ ವ್ಯಕ್ತಪಡಿಸಿತ್ತು. ವಿವಾದವಾಗುತ್ತಿದ್ದಂತೆ ವಿಶ್ವವಿದ್ಯಾಲಯ ಈಗ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.

    ವಿವಿಯ ರಿಜಿಸ್ಟ್ರರ್ ಅರವಿಂದ್ ಶಾಲಿಗ್ರಮ್ ಪ್ರತಿಕ್ರಿಯಿಸಿ, 2006ರಲ್ಲಿ ಮೊದಲ ಬಾರಿಗೆ ಈ ರೀತಿಯ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಈಗ ಪ್ರತಿ ವರ್ಷ ಹೊರಡಿಸಲಾಗುತ್ತಿದೆ. ಯೋಗಿ ಮಹರ್ಷಿ ಶೀಲರ್‍ಮಾಮ ಟ್ರಸ್ಟ್ ವತಿಯಿಂದ ಚಿನ್ನದ ಪದಕ ನೀಡಲಾಗುತ್ತಿದೆ. ಅವರು ಸೂಚಿಸಿದ ಷರತ್ತುಗಳನ್ನು ವಿಧಿಸಿ ವಿವಿ ಪ್ರತಿವರ್ಷ ಈ ಸುತ್ತೋಲೆಯನ್ನು ಹೊರಡಿಸಲಾಗುತ್ತಿದೆ ಹೊರತು ವಿವಿಯ ಪಾತ್ರ ಇದರಲ್ಲಿ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈಗ ಮಾಧ್ಯಮಗಳಿಗೆ ಸಿಕ್ಕಿರುವ ಸುತ್ತೋಲೆ ಇದೇ ಅಕ್ಟೋಬರ್ 31 ರಂದು ಹೊರಡಿಸಲಾಗಿದೆ.

    ಎನ್‍ಸಿಪಿ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿ, ಪುಣೆ ವಿವಿ ನಿರ್ಧಾರ ನಿಜಕ್ಕೂ ಶಾಕಿಂಗ್. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೇ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.