ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿವಾದಾತ್ಮಕ ಹೇಳಿಕೆ ಕುರಿತು ಆಕ್ರೋಶ ಭುಗಿಲೆದ್ದಿದ್ದು, ವೀರ್ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
ಹಿಂದುತ್ವದ ಪ್ರತೀಕಪಾದಕರಾಗಿರುವ ವೀರ್ ಸಾವರ್ಕರ್ ಕುರಿತು ರಾಹುಲ್ ಗಾಂಧಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಾನು ರಾಹುಲ್ ಗಾಂಧಿಯೇ ಹೊರತು ರಾಹುಲ್ ಸಾವರ್ಕರ್ ಅಲ್ಲ ಎಂದು ಹೇಳಿದ್ದರು. ಇದಕ್ಕೆ ಆಡಳಿತ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದೀಗ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ನಂತರ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ. ಇಂತಹ ಹೇಳಿಕೆಗಳನ್ನು ನೀಡುವುದನ್ನೇ ಅಭ್ಯಾಸವನ್ನಾಗಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜವಾಹರ್‍ಲಾಲ್ ನೆಹರು ಅವರು ಶಿವಾಜಿ ಮಹಾರಾಜರನ್ನು ಲೂಟಿಕೋರ ಎಂದು ಕರೆದಿದ್ದರು. ನಂತರ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದರು. ಇದೀಗ ಅವರ ಕುಟುಂಬದ ತಪ್ಪನ್ನು ಮತ್ತೆ ಪುನರಾವರ್ತಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಅಲ್ಪಸಂಖ್ಯಾತ ಸರ್ಕಾರವನ್ನು ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾವು ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುವುದಿಲ್ಲ. ಆದರೆ ಕಾಂಗ್ರೆಸ್ ಸಾವರ್ಕರ್ ಅವರಿಗೆ ಅವಮಾನ ಮಾಡುತ್ತಿದೆ. ಶಿವ ಸೇನೆ ಕಾಂಗ್ರೆಸ್‍ನ ಸಚಿವರನ್ನು ತೆಗೆದು ಹಾಕಬೇಕು ಎಂದು ರಂಜಿತ್ ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
ರಾಮಲೀಲಾ ಮೈದಾನದಲ್ಲಿ ನಡೆದ ಭಾರತ್ ಬಚಾವೋ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ನನ್ನ ಹೆಸರು ರಾಹುಲ್ ಗಾಂಧಿಯೇ ಹೊರತು, ರಾಹುಲ್ ಸಾವರ್ಕರ್ ಅಲ್ಲ. ಸತ್ಯ ಹೇಳಿದ್ದೇನೆ ಹೀಗಾಗಿ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಆಡಳಿತ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.
ಸತ್ಯ ಹೇಳಿದ್ದರ ಕುರಿತು ನಾನೆಂದೂ ಕ್ಷಮೆಯಾಚಿಸುವುದಿಲ್ಲ. ನನ್ನ ಹೆಸರು ರಾಹುಲ್ ಗಾಂಧಿಯೇ ಹೊರತು ರಾಹುಲ್ ಸಾವರ್ಕರ್ ಅಲ್ಲ. ನಾನು ಕ್ಷಮೆಯಾಚಿಸುವುದಿಲ್ಲ, ಕಾಂಗ್ರೆಸ್‍ನ ಯಾವ ನಾಯಕರೂ ಈ ರೀತಿ ಕ್ಷಮೆಯಚಿಸುವುದಿಲ್ಲ. ಅಲ್ಲದೆ ಕ್ಷಮೆ ಕೇಳಬೇಕಿರುವುದು ನಾನಲ್ಲ. ದೇಶದ ಆರ್ಥಿಕತೆಯನ್ನು ನಾಶಪಡಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಹಾಯಕ ಅಮಿತ್ ಶಾ ಕ್ಷಮೆಯಾಚಿಸಬೇಕು. ಲೋಕಸಭೆಯ ಅಧಿವೇಶನದಲ್ಲಿಯೂ ನಾನು ಈ ಕುರಿತು ಸ್ಪಷ್ಟಪಡಿಸಿದ್ದೇನೆ. ನಾನು ಸತ್ಯ ಹೇಳಿದ್ದೇನೆ ಹೀಗಾಗಿ ಕ್ಷಮೆ ಕೇಳುವುದಿಲ್ಲ ತಿರಸ್ಕರಿಸಿದರು.
ತಮ್ಮ ಹೇಳಿಕೆ ಕುರಿತು ಲೋಕಸಭೆಯ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಆದರೆ ಯಾವುದೇ ಪತ್ರಿಕೆಗಳನ್ನು ತೆರೆದು ನೋಡಿದರೂ ಅದರಲ್ಲಿ ಬಹುತೇಕ ಅತ್ಯಾಚಾರದ ಸುದ್ದಿಗಳೇ ಕಣ್ಣಿಗೆ ಕಾಣುತ್ತವೆ. ಹೀಗಾಗಿ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಆಗಿದೆ ಎಂದು ಹೇಳಿಕೆ ನೀಡಿದೆ ಎಂದರು.
ಜಾರ್ಖಂಡ್‍ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಮೇಕ್ ಇಂಡಿಯಾ ಎಂದು ಹೇಳುತ್ತಾರೆ. ಆದರೆ ದೇಶದಲ್ಲಿ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಆಡಳಿತ ಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿ, ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದವು. ಅಲ್ಲದೆ ಈ ಕುರಿತು ಲೋಕಸಭೆಯಲ್ಲಿ ಸಹ ಪಟ್ಟು ಹಿಡಿಯುವ ಮೂಲಕ ಗದ್ದಲ ಎಬ್ಬಿಸಲಾಗಿತ್ತು. ಅಲ್ಲದೆ ಈ ಹಿಂದೆ ವೈಯನಾಡಿಗೆ ಭೇಟಿ ನೀಡಿದ ವೇಳೆ ಭಾರತ ರೇಪ್ ರಾಜಧಾನಿಯಾಗಿದೆ ಎಂದು ಹೇಳಿಕೆ ನೀಡಿ ಚರ್ಚೆಗೆ ಕಾರಣರಾಗಿದ್ದರು.