Tag: Ranjeep Surjewala

  • ರಾಮಮಂದಿರಲ್ಲಿ ರಾಜಕೀಯ ಮಾಡಲು ಹೊರಟ ಬಿಜೆಪಿ, ಇತರರ ಬಾಗಿಲು ಬಂದ್: ಸುರ್ಜೇವಾಲಾ

    ರಾಮಮಂದಿರಲ್ಲಿ ರಾಜಕೀಯ ಮಾಡಲು ಹೊರಟ ಬಿಜೆಪಿ, ಇತರರ ಬಾಗಿಲು ಬಂದ್: ಸುರ್ಜೇವಾಲಾ

    ನವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ನೀಡಿರುವ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ನಾವು ರಾಮಮಂದಿರ ನಿರ್ಮಾಣದ ಪರವಿದ್ದೇವೆ. ನ್ಯಾಯಾಲಯದ ಈ ತೀರ್ಪು ಕೇವಲ ರಾಮಮಂದಿರ ನಿರ್ಮಾಣಕ್ಕೆ ಬಾಗಿಲನ್ನು ತೆರೆದಿದ್ದು ಮಾತ್ರವಲ್ಲದೇ ಈ ವಿಚಾರವನ್ನು ರಾಜಕೀಯ ಮಾಡುವ ಬಿಜೆಪಿ ಹಾಗೂ ಇತರರ ಬಾಗಿಲನ್ನು ಬಂದ್ ಮಾಡಿದೆ ಎಂದರು.

    ನ್ಯಾಯಾಲಯದ ತೀರ್ಪನ್ನು ಗೌರವಿಸಿ ನಾವು ನಡೆಯಬೇಕಿದ್ದು, ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಹಾಗೂ ಸಮಯದಾಯಗಳಿಗೂ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತ ಮೌಲ್ಯಗಳು, ಸೋದರತ್ವ ಮನೋಭಾವಕ್ಕೆ ಬದ್ಧರಾಗಿರುವಂತೆ ಮನವಿ ಮಾಡುತ್ತೇವೆ. ಅಲ್ಲದೇ ಶಾಂತಿಯನ್ನು ಕಾಪಾಡುವ ಮೂಲಕ ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಪಾಲಿಸಬೇಕಿದೆ ಎಂದು ಸುರ್ಜೇವಾಲಾ ಕರೆ ನೀಡಿದರು.

    ನ್ಯಾಯಾಲಯ ಜನರ ನಂಬಿಕೆಯನ್ನು ಗೌರವಿಸಿದೆ. ಈ ತೀರ್ಪು ಜನರ ನಂಬಿಕೆಗಳ ಮೇಲೆ ರಾಜಕೀಯ ಮಾಡಲು ಮುಂದಾದ ಬಿಜೆಪಿಯ ಬಾಗಿಲನ್ನು ಬಂದ್ ಮಾಡಿದೆ. ಕಾಂಗ್ರೆಸ್ ಪಕ್ಷ ರಾಮಮಂದಿರ ನಿರ್ಮಾಣದ ಪರವಿದೆ. ಎಲ್ಲರೂ ನ್ಯಾಯಾಲದ ತೀರ್ಪನ್ನು ಗೌರವಿಸಬೇಕಿದೆ ಎಂದರು.