Tag: Ranil Vikramasinghe

  • ಶ್ರೀಲಂಕಾದಲ್ಲಿ ಜನಾಕ್ರೋಶ ಉಲ್ಬಣ – ಪ್ರಧಾನಿ ಸ್ಥಾನಕ್ಕೆ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ

    ಶ್ರೀಲಂಕಾದಲ್ಲಿ ಜನಾಕ್ರೋಶ ಉಲ್ಬಣ – ಪ್ರಧಾನಿ ಸ್ಥಾನಕ್ಕೆ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ

    ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾದಲ್ಲಿ ಜನತೆ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದು, ದೇಶದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ದ್ವೀಪ ರಾಷ್ಟ್ರ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಅಧ್ಯಕ್ಷರ ಭವನಕ್ಕೆ ನುಗ್ಗಿ ಜನರು ದಾಂಧಲೆ ನಡೆಸಿದರು. ಇದರ ಬೆನ್ನಲ್ಲೇ ರನಿಲ್‌ ವಿಕ್ರಮಸಿಂಘೆ ಅವರು ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಲ್ಲಿ ಅರಾಜಕತೆ ವಾತಾವರಣ ಸೃಷ್ಟಿಯಾಗಿದೆ. ದೇಶದ ಜನತೆ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಪರಿಣಾಮವಾಗಿ ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ನಂತರ ರನಿಲ್‌ ವಿಕ್ರಮಸಿಂಘೆ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆರ್ಥಿಕ ದುಸ್ಥಿತಿಯಿಂದ ಕಂಗೆಟ್ಟಿರುವ ದೇಶಕ್ಕೆ ಅನೇಕ ಕಡೆಯಿಂದ ಸಾಲ ಹಾಗೂ ಇನ್ನಿತರ ಸೌಲಭ್ಯಕ್ಕಾಗಿ ರನಿಲ್‌ ಪ್ರಯತ್ನಿಸಿದರು. ಆದರೆ ಆಡಳಿತದಲ್ಲಿ ಸುಧಾರಣೆ ತರುವುದು ಕಷ್ಟ ಎಂಬುದನ್ನು ಅರಿತು ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

    ರಾಜಪಕ್ಸೆ ಮನೆತನದ ಆಡಳಿತದ ವಿರುದ್ಧ ಶ್ರೀಲಂಕಾದಲ್ಲಿ ಜನಾಕ್ರೋಶ ವ್ಯಕ್ತವಾಗಿದೆ. ಪರಿಣಾಮವಾಗಿ ಇಂದು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ನಿವಾಸಕ್ಕೆ ನುಗ್ಗಿ ಜನ ದಾಂಧಲೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ನಿವಾಸಕ್ಕೆ ಲಗ್ಗೆಯಿಟ್ಟ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡಿದರು. ಅಧ್ಯಕ್ಷರ ನಿವಾಸದ ಸೋಫಾ, ಬೆಡ್‌ ಮೇಲೆ ಬಿದ್ದು ಹೊರಳಾಡಿದರು. ಅಡುಗೆ ಮನೆಗೆ ನುಗ್ಗಿ ದಾಂಧಲೆ ಸೃಷ್ಟಿಸಿದರು.

    ಪ್ರತಿಭಟನಾಕಾರರ ಆಕ್ರೋಶದಿಂದ ಹೆದರಿದ ಗೊಟಬಯ ಅವರು ಪರಾರಿಯಾದರು. ಈ ಎಲ್ಲಾ ಘಟನೆಗಳು ನಡೆದ ನಂತರ ರನಿಲ್‌ ವಿಕ್ರಮಸಿಂಘೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಉಡುಪಿ: ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಭಾನುವಾರದ ಉಡುಪಿ ಪ್ರವಾಸ ರದ್ದಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಲಂಕಾ ಪ್ರಧಾನಿಯವರ ಪ್ರವಾಸ ರದ್ದಾಗಿದೆ.

    ಬೆಂಗಳೂರಿನಲ್ಲಿ ಶನಿವಾರದಿಂದ ತಂಗಿರುವ ರಾನಿಲ್ ವಿಕ್ರಮಸಿಂಘೆ ಅವರು ಇಂದು ಕೊಲ್ಲೂರು ದೇವಿಯ ದರ್ಶನ ಮಾಡಿ, ನವಚಂಡಿ ಮಹಾಯಾಗದಲ್ಲಿ ಪಾಲ್ಗೊಳ್ಳಬೇಕಿತ್ತು. ಕಳೆದ ರಾತ್ರಿ ನವಚಂಡಿಯಾಗಕ್ಕೆ ದೇವಳದ ಅರ್ಚಕರು ಸಿದ್ಧತೆ ಮಾಡಿದ್ದು ಪಾರಾಯಣ- ಹೋಮಗಳನ್ನು ತಯಾರಿ ಮಾಡಿದ್ದರು.

    ಇಂದು ಪೂರ್ಣಾಹುತಿಗೆ ಎಲ್ಲಾ ಸಿದ್ಧತೆ ನಡೆದಿತ್ತು. ಹೆಲಿಪ್ಯಾಡ್‍ನಿಂದ 15 ಕಿಮೀ ದೂರದ ಕೊಲ್ಲೂರಿನವರೆಗೆ ಹೈ ಸೆಕ್ಯೂರಿಟಿ ನೀಡಲಾಗಿತ್ತು. ಆದರೆ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಕುಂದಾಪುರದ ಅರೆ ಶಿರೂರಿನಲ್ಲಿ ಹೆಲಿಕಾಪ್ಟರ್ ಇಳಿಯಲು ಏರ್ ಫೋರ್ಸ್ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಹೀಗಾಗಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಟೇಕ್ ಆಫ್ ಆಗಿರಲಿಲ್ಲ.

    ಇತ್ತ ಕೊಲ್ಲೂರಿನಲ್ಲಿ ಪ್ರಧಾನ ಅರ್ಚಕರೇ ಶ್ರೀಲಂಕಾ ಪ್ರಧಾನಿಗಳ ಹೆಸರಿನಲ್ಲಿ ಪೂರ್ಣಾಹುತಿ ಮಾಡಿದರು. ರಾನಿಲ್ ವಿಕ್ರಮ್‍ಸಿಂಘೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದು ಸೋಮವಾರ ಕೊಲ್ಲೂರಿಗೆ ಬರುವ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಳಿದ್ದಾರೆ ಎನ್ನಲಾಗಿದೆ.

    ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಕಳೆದೆರಡು ದಿನಗಳಿಂದ ಸಿದ್ಧತೆ ಮಾಡಿ ಇಂದು ಮಧ್ಯಾಹ್ನದವರೆಗೆ ಕಾದು ವಾಪಸ್ ಆದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ನಾವು ಎಲ್ಲಾ ಭದ್ರತಾ ವ್ಯವಸ್ಥೆ ಮಾಡಿದ್ದೆವು. ಮೋಡ, ಮಳೆಯ ಕಾರಣ ಏರ್ ಫೋರ್ಸ್ ಅಧಿಕಾರಿಗಳು ಸಮ್ಮತಿ ಸೂಚಿಸಲಿಲ್ಲ ಎಂದರು.

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಉಪ್ಪುಂದ ಮಾತನಾಡಿ, ಪ್ರಧಾನಿಗಳ ಪರವಾಗಿ ಹೋಮ, ನವಚಂಡಿ ಮಹಾಯಾಗ ದೇವಿಗೆ ಸಲ್ಲಿಕೆಯಾಗಿದೆ. ವಿಶೇಷ ಪೂಜೆಯನ್ನೂ ಸಮರ್ಪಿಸಲಾಗಿದೆ ಎಂದು ಹೇಳಿದರು.