Tag: Rangoli Competition

  • ಪಬ್ಲಿಕ್ ಟಿವಿ ಆಹಾರ ಮೇಳಕ್ಕೆ ಚಾಲನೆ – ಬನ್ನಿ ಭಾಗವಹಿಸಿ, ಬಹುಮಾನ ಗೆಲ್ಲಿ

    ಪಬ್ಲಿಕ್ ಟಿವಿ ಆಹಾರ ಮೇಳಕ್ಕೆ ಚಾಲನೆ – ಬನ್ನಿ ಭಾಗವಹಿಸಿ, ಬಹುಮಾನ ಗೆಲ್ಲಿ

    ಬೆಂಗಳೂರು: ಪಬ್ಲಿಕ್ ಟಿವಿಯ ಎರಡನೇ ಆವೃತ್ತಿಯ ಆಹಾರ ಮೇಳಕ್ಕೆ ಯಶಸ್ವಿ ಚಾಲನೆ ಸಿಕ್ಕಿದೆ.

    ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಇಂದು ಮತ್ತು ನಾಳೆ ಆಹಾರ ಮೇಳ ನಡೆಯಲಿದ್ದು, ಅತಿಥಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

    ಈ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್. ಆರ್ ರಂಗನಾಥ್, ಪೆಪ್ಸ್ ಮ್ಯಾಟ್ರಿಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಕೆ. ಮಾಧವನ್, ಟೈಟಲ್ ಸ್ಪಾನ್ಸರ್ ನಿತ್ಯಾಮೃತ ನೋನಿಯ ಕಮಲಾಕರ್ ಭಟ್, ಎಂ.ಕೆ ಆಗ್ರೋಟೆಕ್ ಸನ್ ಫ್ಯೂರ್ ಸನ್ ಪ್ಲವರ್ ಆಯಿಲ್ ರಿಜಿನಲ್ ಮ್ಯಾನೇಜರ್ ಸುಹೇಲ್ ಎಂ.ಎನ್, ಕೆಎಂಎಫ್ ಎಂಡಿ ಬಿ.ಸಿ ಸತೀಶ್, ಥ್ಯಾಂಕೋಸ್ ನ್ಯಾಚುರಲ್ ಐಸ್ ಕ್ರೀಮ್ ಎಂಡಿ ರಾಘವೇಂದ್ರ ಥಾಣೆ, ಥಾಟ್ ಬಾಕ್ಸ್ ಡೈರೆಕ್ಟರ್ ಕರಣ್, ನಟ ಪ್ರಜ್ವಲ್ ದೇವರಾಜ್, ನಟಿ ನಿಶ್ವಿಕಾ ನಾಯ್ಡು, ನಿರ್ದೇಶಕ ಗುರು ದೇಶಪಾಂಡೆ ಉಪಸ್ಥಿತರಿದ್ದರು.

    ಆಹಾರ ಮೇಳದಲ್ಲಿ 30 ಬಗೆಯ ಆಹಾರ ಮಳಿಗೆಗಳು ಇದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ಪ್ರಸಿದ್ಧ ಆಹಾರ ಖಾದ್ಯಗಳು ಆಹಾರ ಮೇಳದಲ್ಲಿ ಲಭ್ಯವಿದೆ. ಒಂದೇ ಸೂರಿನಡಿ ನೂರಾರು ಆಹಾರ ಖಾದ್ಯಗಳು ದೊರೆಯಲಿದೆ. ಆಹಾರ ಮೇಳಕ್ಕೆ ಬರಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಆಹಾರ ಮೇಳಕ್ಕೆ ಬಂದು ಹೆಸರು ನೋಂದಾಯಿಸಿದ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಒಮ್ಮೆ ಲಕ್ಕಿ ಕೂಪನ್ ಬಹುಮಾನ ನೀಡಲಾಗುತ್ತದೆ. ಜೊತೆಗೆ ಇಂದು ಮಹಿಳೆಯರಿಗೆ ಪಾನಿಪೂರಿ ತಿನ್ನುವ ಸ್ಫರ್ಧೆ ಆಯೋಜಿಸಲಾಗಿದೆ. ಭಾನುವಾರ ಪುರುಷರಿಗೆ ಇಡ್ಲಿ ತಿನ್ನುವ ಸ್ಫರ್ಧೆ ಇರಲಿದ್ದು, ಆಹಾರ ಮೇಳಕ್ಕೆ ಭೇಟಿ ಕೊಟ್ಟು ಇಷ್ಟವಾದ ಖಾದ್ಯವನ್ನ ಸೇವನೆ ಮಾಡಿ, ಸ್ಪರ್ಧೆಗಳಲ್ಲೂ ಗ್ರಾಹಕರು ಭಾಗವಹಿಸಬಹುದು.

    ಕಾರ್ಯಕ್ರಮ ಉದ್ಘಾಟನೆ ಬಳಿಕ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್. ಆರ್ ರಂಗನಾಥ್ ಅವರು ಮಾತನಾಡಿ, ಎಲ್ಲ ರೋಗಗಳು ಆಹಾರದಿಂದಲೇ ಆರಂಭವಾಗುತ್ತದೆ. ಆದರೆ ಸರಿಯಾಗಿ ತಿನ್ನಿ, ಎಂಜಾಯ್ ಮಾಡಿ. ರಂಗೋಲಿ ಸ್ಫರ್ಧೆಗೆ ಬಂದವರಿಗೆ ಧನ್ಯವಾದ, ಚೆನ್ನಾಗಿ ರಂಗೋಲಿ ಬಿಡಿಸಿದ್ದೀರಿ. ಹಾಗೆಯೇ ಭಾಗವಹಿಸಿದ ಎಲ್ಲ ಸ್ಟಾಲ್ ನವರಿಗೆ ಧನ್ಯವಾದ ಎಂದರು.

    ಆಹಾರ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಎಂಎಫ್ ಎಂಡಿ ಬಿ.ಸಿ ಸತೀಶ್ ಅವರು ಮಾತನಾಡಿ, ಈ ಕಾರ್ಯಕ್ರಮ ಆಯೋಜಿಸಿದಕ್ಕೆ ಧನ್ಯವಾದ. ಇಪ್ಪತ್ತೈದು ಲಕ್ಷ ರೈತ ಸಮೂದಾಯ ಹಾಗೂ ಐದು ಕೋಟಿಗೂ ಅಧಿಕ ಗ್ರಾಹಕರನ್ನು ಕೆಎಂಎಫ್ ಹೊಂದಿದೆ. ನಾವು ಗ್ರಾಹಕರಿಗೆ ಉತ್ಕೃಷ್ಟ ಉತ್ಪನ್ನ ನೀಡುತ್ತಿದ್ದೇವೆ. ನಮ್ಮನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದಕ್ಕೆ ಪಬ್ಲಿಕ್ ಟಿವಿಗೆ ಧನ್ಯವಾದ. ರಂಗೋಲಿ ಸ್ಫರ್ಧೆ ಏರ್ಪಡಿಸಿರುವುದು ಉತ್ತಮವಾದದ್ದು, ನಮ್ಮ ಸಂಸ್ಕøತಿ, ಸಂಸ್ಕಾರವನ್ನು ಈ ರಂಗೋಲಿಯಲ್ಲಿ ಬಿಡಿಸಿದಂತಹ ಎಲ್ಲಾ ಹೆಣ್ಣು ಮಕ್ಕಳಿಗೆ ಧನ್ಯವಾದ ಹೇಳುತ್ತೇನೆ ಎಂದು ಖುಷಿಯನ್ನು ಹಂಚಿಕೊಂಡರು.

    ಕಮಲಾಕರ್ ಭಟ್ ಅವರು ಮಾತನಾಡಿ, ಆಹಾರ ಮೇಳ ಬೆಂಗಳೂರು ನಗರಕ್ಕೆ ಹಬ್ಬ. ಆಹಾರಕ್ಕೆ ಮಾತ್ರ ಇಲ್ಲಿ ಪ್ರಾಮುಖ್ಯತೆ ಕೊಟ್ಟಿಲ್ಲ. ರಂಗೋಲಿ ಸ್ವರ್ಧೆಯ ಮೂಲಕ ಸಂಸ್ಕಾರ, ಪರಂಪರೆ ನೆನಪಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಹಾಗೆಯೇ ಎಂ.ಕೆ ಆಗ್ರೋಟೆಕ್‍ನ ರಿಜಿನಲ್ ಮ್ಯಾನೇಜರ್ ಸೊಹೈಲ್ ಅವರು ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿ ಕಾರ್ಯಕ್ರಮ ಹೆಚ್ಚು ಹೆಚ್ಚು ಆಗಲಿ. ಸದಾ ನಾವು ನಿಮ್ಮೊಂದಿಗೆ ಇರುತ್ತೇವೆ. ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಧನ್ಯವಾದಗಳು ಎಂದರು.

    ಪ್ರಜ್ವಲ್ ದೇವರಾಜ್ ಅವರು ಪ್ರತಿಕ್ರಿಯಿಸಿ, ಈ ಫುಡ್ ನೋಡಿದರೆ ನಂಗೆ ಡಯೆಟ್ ಮರಿಬೇಕು ಅನಿಸುತ್ತಿದೆ. ದಾರಿಯುದ್ದಕ್ಕೂ ರಂಗೋಲಿ ತುಂಬಾ ಚೆನ್ನಾಗಿತ್ತು. ಶನಿವಾರ, ಭಾನುವಾರ ಡಯೆಟ್ ಮರೆತು ಇಲ್ಲಿ ಬಂದು ಫುಡ್ ತಿಂದು ಎಂಜಾಯ್ ಮಾಡಿ ಎಂದು ಹೇಳಿದರು. ಇತ್ತ ನಟಿ ನಿಶ್ವಿಕಾ ನಾಯ್ಡು ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದಕ್ಕೆ ಪಬ್ಲಿಕ್ ಟಿವಿಗೆ ಧನ್ಯವಾದ. ಡಯೆಟ್ ಎಲ್ಲಾ ಮರೆತು ಫುಡ್ ಫೆಸ್ಟ್ ನಲ್ಲಿ ಭಾಗಿಯಾಗಿ ಎಂದರು. ಹಾಗೆಯೇ ನಿರ್ದೇಶಕ ಗುರು ದೇಶಪಾಂಡೆ ಅವರು ಮಾತನಾಡಿ, ಆಹಾರವನ್ನು ವ್ಯರ್ಥ ಮಾಡಬೇಡಿ, ಹೆಚ್ಚು ಉಪಯೋಗ ಮಾಡಿಕೊಳ್ಳೋಣ. ಇಲ್ಲದೇ ಇರೋರಿಗೆ ಆಹಾರ ಕೊಡೋಣ. ಇದು ಎರಡನೇ ವರ್ಷ ನಾನು ಆಹಾರ ಮೇಳಕ್ಕೆ ಬರುತ್ತಿರೋದು. ಇಲ್ಲಿ ಆಹಾರ ರುಚಿ ಚೆನ್ನಾಗಿ ಇರುತ್ತೆ. ಎಲ್ಲರೂ ಬಂದು ಆಹಾರ ಸವಿಯಿರಿ ಎಂದು ಹೇಳಿದರು.

    ಆಹಾರ ಮೇಳಕ್ಕೆ ಚಾಲನೆಗೂ ಮುನ್ನ ರಂಗೋಲಿ ಸ್ಫರ್ಧೆ ನಡೆದಿದ್ದು, 120 ನಿಮಿಷದ ಒಳಗೆ ರಂಗೋಲಿಯನ್ನ ಬಿಡಿಸಿದ್ದಾರೆ. ರಂಗೋಲಿ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಈ ಸ್ಪರ್ಧೆಯ ತೃತೀಯ ಬಹುಮಾನ ವಿಜೇತೆ ಭಾಗ್ಯ, ದ್ವೀತಿಯ ಬಹುಮಾನ ವಿಜೇತೆ ಪ್ರತಿಮಾ ಉಡುಪ, ಪ್ರಥಮ ಬಹುಮಾನ ವಿಜೇತೆ ನಿರ್ಮಲ ಅವರಿಗೆ ಪೆಪ್ಸ್ ಮ್ಯಾಟ್ರಿಸ್ ವತಿಯಿಂದ ಹಾಸಿಗೆ ನೀಡಲಾಯ್ತು. ಇದೇ ವೇಳೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೂ ಪೆಪ್ಸ್ ಮ್ಯಾಟ್ರಿಸ್ ದಿಂಬುಗಳನ್ನು ಸಮಾಧಾನಕರ ಬಹುಮಾನವಾಗಿ ನೀಡಿ ಅಭಿನಂದಿಸಲಾಯಿತು.

  • ಪಬ್ಲಿಕ್ ಟಿವಿ ಆಹಾರ ಮೇಳಕ್ಕೆ ಬನ್ನಿ – ಸ್ಪರ್ಧೆಯಲ್ಲಿ ಭಾಗವಹಿಸಿ

    ಪಬ್ಲಿಕ್ ಟಿವಿ ಆಹಾರ ಮೇಳಕ್ಕೆ ಬನ್ನಿ – ಸ್ಪರ್ಧೆಯಲ್ಲಿ ಭಾಗವಹಿಸಿ

    ಬೆಂಗಳೂರು: ಒಂದನೇ ವರ್ಷದ ಆಹಾರ ಮೇಳ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎರಡನೇ ವರ್ಷದ ಆಹಾರ ಮೇಳವನ್ನು ಆಯೋಜಿಸುತ್ತಿದೆ.

    ಜನವರಿ 25 ಮತ್ತು 26ರಂದು ಆಹಾರ ಮೇಳವನ್ನು ಆಯೋಜಿಸಲಾಗಿದೆ. ಆಹಾರ ಮೇಳ ಮಲ್ಲೇಶ್ವರಂ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಒಂದೇ ಸೂರಿನಡಿಯಲ್ಲಿ 30ಕ್ಕೂ ಹೆಚ್ಚು ಆಹಾರ ಮಳಿಗೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಆಹಾರ ಮೇಳದಲ್ಲಿ ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.

    ಈ ಮೇಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಇಷ್ಟವಾಗುವ ಆಹಾರಗಳನ್ನು ತಯಾರಿಸಿ ಸರ್ವ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ರೀತಿಯ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10:30 ರಿಂದ ರಾತ್ರಿ 9 ಗಂಟೆಯವರೆಗೆ ಈ ಆಹಾರ ಮೇಳಕ್ಕೆ ಭೇಟಿ ನೀಡಬಹುದು. ಆಹಾರ ಮೇಳ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರ ಜೊತೆಯಲ್ಲಿ ಜ.25 ರಂದು ಮಹಿಳೆಯರಿಗೆ ಪಾನಿಪುರಿ, ಜ.26 ರಂದು ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉಚಿತ ಪ್ರವೇಶ ಇರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಮತ್ತು ಗಿಫ್ಟ್ ಹ್ಯಾಂಪರ್ ಗಳನ್ನು ಗೆಲ್ಲಬಹುದಾಗಿದೆ.

    ಆಹಾರ ಮೇಳದಲ್ಲಿ ಏನಿರಲಿದೆ?
    * 30 ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಆಹಾರಗಳ ಪ್ರದರ್ಶನ
    * ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳ ಪ್ರದರ್ಶನ
    * ಸ್ಥಳದಲ್ಲೇ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯದ ಲೈವ್ ಕೌಂಟರ್
    * ಪ್ರತಿ 30 ನಿಮಿಷಕ್ಕೆ ನೋಂದಾಯಿತ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಸಿಗಲಿದೆ ಗಿಫ್ಟ್

    ರಂಗೋಲಿ ಸ್ಪರ್ಧೆ:
    * ರಂಗೋಲಿ ಸ್ಪರ್ಧೆ ಮಲ್ಲೇಶ್ವರದ 6ನೇ ಕ್ರಾಸ್‍ನಲ್ಲಿ ಜನವರಿ 25 ಶನಿವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ
    * ಸ್ಪರ್ಧೆಯಲ್ಲಿ ಭಾಗವಹಿಸುವವರು 96209 40365 ನಂಬರಿಗೆ ಎಸ್‍ಎಂಎಸ್ ಅಥವಾ ವಾಟ್ಸಪ್ ಮೆಸೇಜ್ ಮಾಡಿ ಹೆಸರು ನೋಂದಾಯಿಸಬೇಕು
    * ಮೊದಲು ಹೆಸರು ನೋಂದಾಯಿಸಿದವರಿಗೆ ಮತ್ತು 100 ಮಂದಿಗೆ ಮಾತ್ರ ಸ್ಪರ್ಧಿಸಲು ಅವಕಾಶ
    * ವಿಜೇತರಾದವರಿಗೆ ಸಿಗಲಿದೆ ಬಹುಮಾನ

    ರಂಗೋಲಿ ಸ್ಪರ್ಧೆಯ ನಿಯಮಗಳು:
    * ಮಹಿಳೆಯರಿಗೆ ಮಾತ್ರ ಅವಕಾಶ
    * 120 ನಿಮಿಷದಲ್ಲಿ ರಂಗೋಲಿ ಬಿಡಿಸಬೇಕು
    * ಸ್ಪರ್ಧೆಗೆ ಹೆಸರು ನೋಂದಾಯಿಸಿದವರು ಬೆಳಗ್ಗೆ 7.30ಕ್ಕೆ ಸ್ಥಳದಲ್ಲಿ ಹಾಜರಿರಬೇಕು
    * ನಾವು ರಂಗೋಲಿ ಪುಡಿಯನ್ನು ಮಾತ್ರ ನೀಡುತ್ತೇವೆ
    * ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ವಿಷಯವನ್ನು ರಂಗೋಲಿಯಲ್ಲಿ ಬಿಡಿಸಬೇಕು
    * ಸ್ಪರ್ಧೆಯಲ್ಲಿ ಭಾಗವಹಿಸುವರು ತಾವೇ ತಮಗೆ ಬೇಕಾದ ವಸ್ತುಗಳನ್ನು ತರಬೇಕು ಮತ್ತು ಒಂದೇ ಮಾದರಿಯನ್ನು ಬಳಸಬೇಕು. ಬಣ್ಣಗಳು/ ಪುಷ್ಪ ದಳಗಳು/ ಪುಡಿ/ ಧಾನ್ಯಗಳು/ ಅಕ್ಕಿ ಇತ್ಯಾದಿಗಳ ಪೈಕಿ ಒಂದು ವಸ್ತುವನ್ನು ಮಾತ್ರ ಬಳಸಿ ರಂಗೋಲಿ ಹಾಕಬೇಕು
    * ಸಂಘಟಕರು ನೀಡುವ ಸ್ಥಳದಲ್ಲಿ ಸ್ಪರ್ಧಿಗಳು ರಂಗೋಲಿಯನ್ನು ಸಿದ್ಧ ಪಡಿಸಬೇಕು
    * ಕೊರೆಯಚ್ಚನ್ನು ಬಳಸುವಂತಿಲ್ಲ
    * ಒಬ್ಬರಿಗೆ ಮಾತ್ರ ಅವಕಾಶ
    * ಸ್ಪರ್ಧೆ ಒಂದೇ ಸುತ್ತಿನಲ್ಲಿ ಮುಗಿಯಲಿದೆ
    * ಸ್ಪರ್ಧಿಗಳು ರಂಗೋಲಿ ಬಿಡಿಸಲು ಯಾವುದೇ ಮುದ್ರಿತ ವಸ್ತುಗಳನ್ನು ಬಳಸುವಂತಿಲ್ಲ
    * ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ
    ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಎಸ್‍ಎಂಎಸ್ ಅಥವಾ ವಾಟ್ಸಪ್ ಮೂಲಕ 96209 40365 ಮಸೇಜ್ ಕಳುಹಿಸಿ ಹೆಸರು ನೋಂದಾಯಿಸಬೇಕು.

  • ರಂಗೋಲಿ ಸ್ಪರ್ಧೆ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ

    ರಂಗೋಲಿ ಸ್ಪರ್ಧೆ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ

    ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಗಾಗಲೇ ಹಿಂಸಾತ್ಮಕ ಹಾಗೂ ನಾನಾ ರೀತಿಯಲ್ಲಿ ಪ್ರತಿಭಟನೆಗಳು ನಡೆದಿವೆ. ಅದರ ಮುಂದುವರಿದ ಭಾಗವಾಗಿ ಮೈಸೂರಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸುವ ಮೂಲಕ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

    ಕೆಪಿಸಿಸಿ ಮಹಿಳಾ ಘಟಕದಿಂದ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಈ ರಂಗೋಲಿ ಸ್ಪರ್ಧೆ ನಡೆಯಿತು. 20ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ರಂಗೋಲಿ ಮೂಲಕ ಪ್ರತಿಭಟನಾ ಸಂದೇಶ ಸಾರಿದರು.

    ರಂಗೋಲಿ ಬಿಡಿಸಿ ಅದರ ಒಳಗಡೆ ನೋ ಸಿಎಎ, ನೋ ಎನ್‍ಆರ್‍ಸಿ ಎಂದು ಬರೆದಿದ್ದರು. ಈ ಮೂಲಕ ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯೆಯರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಈ ಸ್ಪರ್ಧೆ ನಡೆಯಿತು.

  • ಮಕ್ಕಳ ಕೈಚಳಕದ ಮೂಲಕ ರಂಗೋಲಿಯಲ್ಲಿ ಅರಳಿದ ಪಠ್ಯಾಧಾರಿತ ಚಿತ್ರಗಳು

    ಮಕ್ಕಳ ಕೈಚಳಕದ ಮೂಲಕ ರಂಗೋಲಿಯಲ್ಲಿ ಅರಳಿದ ಪಠ್ಯಾಧಾರಿತ ಚಿತ್ರಗಳು

    ಗದಗ: ಕಲೆ ಎನ್ನುವುದು ಆರಾಧಕನನ್ನು ಮಾತ್ರ ಕೈಬೀಸಿ ಕರೆಯುತ್ತಂತೆ. ಆದರೆ ಗದಗ ತೋಂಟದಾರ್ಯ ಶಾಲಾ ಮಕ್ಕಳ ಕೈಚಳಕದಲ್ಲಿ ವಿವಿಧ ತರನಾದ ರಂಗೋಲಿ ಎಲ್ಲರನ್ನೂ ಕೈಬಿಸಿ ಕರೆಯುವಂತಿದೆ. ಮಕ್ಕಳು ರಂಗೋಲಿ ರೂಪದಲ್ಲಿ ಬಿಡಿಸಿದ ಪಠ್ಯಕ್ರಮದ ಚಿತ್ರಗಳು ನೋಡುಗರ ಕಣ್ಮನ ಸೇಳೆಯುವಂತಿದ್ದವು.

    ನಗರದ ತೋಂಟದಾರ್ಯ ಶಾಲೆಯಲ್ಲಿ 5ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ರಂಗೋಲಿ ಮೂಲಕ ಪಠ್ಯಕ್ರಮ ಆಧಾರಿತ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಿಂದಾಗಿ ಶಾಲಾ ಆವರಣ ಸಂಪೂರ್ಣ ಬಣ್ಣ ಬಣ್ಣದ ರಂಗೋಲಿ ಚಿತ್ತಾರದಿಂದ ಶೃಂಗಾರ ಗೊಂಡಿತ್ತು. ನಾ ಮುಂದೂ ತಾ ಮುಂದೂ ಅಂತ ಸುಮಾರು 400 ವಿದ್ಯಾರ್ಥಿಗಳು ಈ ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

    ಪರೀಕ್ಷೆಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ಚೆನ್ನಾಗಿ ಚಿತ್ರಬಿಡಿಸಿದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸೇರಿದಂತೆ ಸೂಕ್ತ ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನ 501 ರೂಪಾಯಿ ಮೊತ್ತದ ಪುಸ್ತಕಗಳು, ಪ್ರಮಾಣಪತ್ರ, ದ್ವಿತೀಯ ಬಹುಮಾನ 301 ರೂ. ಮೊತ್ತದ ಪುಸ್ತಕ, ಪ್ರಮಾಣಪತ್ರ ಹಾಗೂ ತೃತೀಯ ಬಹುಮಾನ 101 ರೂ. ಮೊತ್ತರ ಪುಸ್ತಕ ಹಾಗೂ ಪ್ರಶಸ್ತಿ ನೀಡಿ ಗೌರವಿಲಾಗುತ್ತದೆ. ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮದ ಇಬ್ಬರು ವಿದ್ಯಾರ್ಥಿಗಳಿಗೆ ಉತ್ತಮ ಪ್ರಶಸ್ತಿ ನೀಡಲಾಗುತ್ತೆ. ಮಕ್ಕಳ ಪ್ರತಿಭೆ ಹೊರಹಾಕಲು ಇದೊಂದು ವೇದಿಕೆಯಾಗಿತ್ತು ಎಂದು ಶಾಲಾ ಮುಖೋಪಾಧ್ಯಾಯರು ತಿಳಿಸಿದ್ದಾರೆ.

    ರಂಗೋಲಿ ಮೂಲಕ ಬಿಡಿಸಿದ ನರಕೋಶ, ದಾಸವಾಳ ಹೂ, ಸಸ್ಯಜೀವ ಕೋಶ, ಕಣ್ಣು, ಮೆದುಳು, ಹೃದಯ ಭಾಗ, ದೊಡ್ಡ ಕರಳು, ಸಣ್ಣ ಕರಳು, ಮಾನವನ ಜೀರ್ಣಾಂಗ, ಜೈವಿಕ ಅನಿಲ ಸ್ಥಾವರ, ವಂಶವೃಕ್ಷ, ಸೂಕ್ಷದರ್ಶಕ ಸೇರಿದಂತೆ ಗಣಿತ, ವಿಜ್ಞಾನ ಹಾಗೂ ಸಮಾಜ-ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನ ಬಿಡಿಸಲಾಗಿತ್ತು. ಮಕ್ಕಳ ಈ ಚಿತ್ರಗಳು ಒಂದಕ್ಕಿಂತ ಮತ್ತೊಂದು ಆಕರ್ಷಣೀಯವಾಗಿ ಕಣ್ಮನ ಸೆಳೆಯುವಂತಿದ್ದವು. ಮಕ್ಕಳ ಕೈ ಚಳಕದಲ್ಲಿ ಅರಳಿದ ಈ ಚಿತ್ರಗಳು ವರ್ಣರಂಜಿತವಾಗಿದ್ದವು. ಈ ಚಿತ್ರಗಳು ಜನರನ್ನ ತನ್ನತ್ತ ಕೈಬಿಸಿ ಕರೆಯುವಂತಿದ್ದವು.

    ಕೆಲವು ಮಕ್ಕಳು ಡ್ರಾಯಿಂಗ್ ಸೀಟ್‍ನಲ್ಲಿ ಚಿತ್ರಗಳನ್ನ ಬಿಡಿಸಿದ್ದರು. ಇತರನಾಗಿ ಸ್ಪರ್ಧೆ ಹಮ್ಮಿಕೊಂಡಿರುವುದು ನಮಗೆ ತುಂಬಾನೆ ಖುಷಿ ತಂದಿದೆ. ಕಲರ್ ಕಲರ್ ರಂಗೋಲಿ ತಂದು ಚಿತ್ರ ಬಿಡಿಸಿದ್ದೇವೆ. ಇದು ಕೇವಲ ಸ್ಪರ್ಧೆಗೆ ಅಷ್ಟೇ ಅಲ್ಲ, ಮುಂಬರುವ ಪರೀಕ್ಷೆಯಲ್ಲೂ ತುಂಬಾನೆ ಅನುಕೂಲವಾಗಲಿದೆ. ಈ ಚಟುವಟಿಕೆ ನಮಗೆ ಖುಷಿ ತಂದಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

    ಕಲರ್ ಫುಲ್ ರಂಗೋಲಿ ಮೂಲಕ ಶಾಲಾ ಮೈದಾನ ಕಣ್ಮನ ಸೆಳೆಯಿತು. ಶಾಲಾ ಮಕ್ಕಳು ರಂಗೋಲಿ ಮೂಲಕ ಪಠ್ಯಕ್ರಮ ಆಧಾರಿತ ಚಿತ್ರಗಳನ್ನ ನೋಡಿ ಪಾಲಕರು, ಹಾಗೂ ಶಿಕ್ಷಕವೃಂದ ಫಿದಾ ಆದರು. ಗದಗ ತೋಂಟದಾರ್ಯ ಶಾಲಾ ಮೈದಾನ ಬಣ್ಣ ಬಣ್ಣದ ರಂಗೋಲಿ ಚಿತ್ರಗಳ ಮೂಲಕ ಬಣ್ಣದ ಲೋಕವಾಗಿ ಮಾರ್ಪಟ್ಟಿತು. ಮಕ್ಕಳನ್ನ ಕೇವಲ ಆಟ-ಪಾಠಕ್ಕೆ ಸಿಮೀತಗೊಳಿಸದೇ ಕಲಿಕೆಯಲ್ಲಿ ಖುಷಿಪಡಿಸವ ಇಂತಹ ಕಾರ್ಯ ಇತರರು ಅಳವಡಿಸಿಕೊಳ್ಳಲಿ ಎಂಬುದು ನಮ್ಮ ಆಸೆಯ ಎಂದು ವಿದ್ಯಾರ್ಥಿಗಳ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.