Tag: Rangayana Raghu

  • ಅಬ್ಬರಿಸಿದ ಅಥರ್ವ: ಪವರ್‌ಫುಲ್ ಹೀರೋ ಪವನ್ ತೇಜ!

    ಅಬ್ಬರಿಸಿದ ಅಥರ್ವ: ಪವರ್‌ಫುಲ್ ಹೀರೋ ಪವನ್ ತೇಜ!

    ಅರುಣ್ ನಿರ್ದೇಶನದ ಅಥರ್ವ ಚಿತ್ರದ ಮೂಲಕ ಚಿರಂಜೀವಿ ಸರ್ಜಾರ ಅಳಿಯ ಪವನ್ ತೇಜಾ ನಾಯಕನಾಗಿರುವ ಅಥರ್ವ ಇಂದು ತೆರೆಗೆ ಬಂದಿದೆ. ಹುಟ್ಟು ಸಾವುಗಳ ನಡುವೆ ಘಟಿಸೋ ಸೂಕ್ಷ್ಮ ಕಥಾ ಹಂದರ ಹೊಂದಿರೋ ಈ ಚಿತ್ರದ ಮೂಲಕ ಪವನ್ ತೇಜಾ ಮಾಸ್ ಲುಕ್ಕಿನಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ. ಇದರೊಂದಿಗೆ ಪವನ್ ಮತ್ತು ಯುವ ಖಳನಟ ಯಶವಂತ್ ಶೆಟ್ಟಿ ನಡುವೆ ಈ ಚಿತ್ರದಲ್ಲಿ ಭೀಕರ ಕಾಳಗ ಕೂಡಾ ಅನಾವರಣಗೊಂಡಿದೆ! ಅಥರ್ವ ಚಿತ್ರದಲ್ಲಿ ಪವನ್ ತೇಜಾ ಪಕ್ಕಾ ಮಾಸ್ ಲುಕ್ಕಿನಲ್ಲಿ ದಿಗ್ದರ್ಶನ ನೀಡಿದ್ದಾರೆ.

    ಅದಕ್ಕೆ ಸರಿಯಾಗಿ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಖಳನಟನಾಗಿ ನೆಲೆಯೂರುತ್ತಿರುವ ಯಶವಂತ್ ಶೆಟ್ಟಿ ಕೂಡಾ ಈ ಚಿತ್ರದಲ್ಲಿ ಅಬ್ಬರಿಸಿದ್ದಾರೆ.

    ಅಥರ್ವ ಎಂದರೆ ನರಸಿಂಹಸ್ವಾಮಿಯಂತೆ. ಹೀರೋ ಕೂಡಾ ನರಸಿಂಹದೇವರ ಪರಮಭಕ್ತ. ಆದರೆ ನಾಯಕಿಯ ದೃಷ್ಟಿಯಲ್ಲೇ ಹೀರೋನೇ ವಿಲನ್ನು. ಆಕೆ ಹಾಗೆ ತಿಳಿದುಕೊಳ್ಳಲು ಕಾರಣ ಸಂದರ್ಭ. ತಾಯಿಯಲ್ಲದ ಆಕೆಗೆ ತಂದೆಯೇ ಸರ್ವಸ್ವ. ಆಕೆ ಜೀವಕ್ಕೆ ಜೀವವಾಗಿ ಪ್ರೀತಿಸೋ ತಂದೆಯೇ ಇಲ್ಲವಾಗುತ್ತಾನೆ. ಯಾರೋ ಮಾಡಿದ ತಪ್ಪು ಮತ್ತೊಬ್ಬನ ಹೆಗಲಿಗೆ ನೇತುಬೀಳುತ್ತದೆ. ತನ್ನದಲ್ಲದ ತಪ್ಪನ್ನು ಸಾಬೀತು ಮಾಡಲು ನಾಯಕ ನಟ ನಾಯಕಿಯ ತಂದೆಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳಬೇಕಾಗುತ್ತದೆ. ಈ ನಡುವೆ ತನ್ನಪ್ಪನಿಗೆ ಕೊಟ್ಟ ಭಾಷೆಯ ಕಾರಣಕ್ಕೆ ಆಕೆ ಮತ್ತೊಬ್ಬನನ್ನು ಮದುವೆಯಾಗಬೇಕಾದ ಸಂದಿಗ್ಧ ಎದುರಾಗುತ್ತದೆ. ಕಡೆಗೂ ಪ್ರೀತಿಸಿದವನನ್ನೇ ಕೈ ಹಿಡಿಯುತ್ತಾಳಾ ಅಥವಾ ತಂದೆಗೆ ಕೊಟ್ಟ ಮಾತಿಗೆ ಒಪ್ಪಿ ಬೇರೊಬ್ಬನ ಜೊತೆಗಾತಿಯಾಗುತ್ತಾಳಾ ಅನ್ನೋದು ಕುತೂಹಲ ಹುಟ್ಟಿಸುವ ವಿಚಾರ.

    ನಿರ್ದೇಶಕ ಅರುಣ್ ಸಿನಿಮಾವನ್ನು ಸುಂದರವಾಗಿಸುವ ಭರದಲ್ಲಿ ಚಿತ್ರಕತೆಯ ಬಗ್ಗೆ ತಲೆಕೆಡಿಸಿಕೊಳ್ಳೋದನ್ನು ಮರೆತಂತೆ ಕಾಣುತ್ತದೆ. ರಂಗಭೂಮಿಯಲ್ಲಿ ಪಳಗಿರುವ ಪವನ್ ತೇಜ ಸಿನಿಮಾಗೆ ಬೇಕಿರುವ ಗ್ರಾಮರನ್ನು ಒಂಚೂರು ಒಗ್ಗಿಸಿಕೊಂಡರೂ ಕನ್ನಡ ಚಿತ್ರತಂಗದಲ್ಲಿ ಸಮರ್ಥ ನಾಯಕನಟನಾಗಿ ನೆಲೆ ನಿಲ್ಲಬಹುದು. ರಾಘವೇಂದ್ರ ನೀಡಿರುವ ಸಂಗೀತ ಹಿತವಾಗಿದೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಎಂದಿನಂತೆ ಲೀಲಾಜಾಲವಾಗಿ ನಟಿಸಿದ್ದಾರೆ. ಶಿವಸೇನ ಅವರ ಛಾಯಾಗ್ರಹಣ ಸಿನಿಮಾದ ದೊಡ್ಡ ಶಕ್ತಿಯಾಗಿದೆ. ಒಟ್ಟಾರೆ ಅಥರ್ವ ಖಡಕ್ಕಾದ ಕಮರ್ಷಿಲ್ ಚಿತ್ರವಾಗಿದೆ.

  • ಕ್ಷಣ ಕ್ಷಣಕ್ಕೂ ಕಾಡುವ ಕರಾಳ ರಾತ್ರಿ!

    ಕ್ಷಣ ಕ್ಷಣಕ್ಕೂ ಕಾಡುವ ಕರಾಳ ರಾತ್ರಿ!

    ರೇಟಿಂಗ್: 4/5
    ದಯಾಳ್ ಪದ್ಮನಾಭನ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಚತುರ ಸಿನಿಮಾ ತಂತ್ರಜ್ಞ. ಔಟ್ ಅಂಡ್ ಔಟ್ ಕಮರ್ಷಿಯಲ್ ಫಾರ್ಮುಲಾಗಳನ್ನು ಒಳಗೊಂಡ ಸಿನಿಮಾಗಳ ಬರಹಗಾರರಾಗಿ, ಸಂಭಾಷಣೆಕಾರರಾಗಿ ಚಿತ್ರರಂಗಕ್ಕೆ ಬಂದು ನಂತರ ನಿರ್ದೇಶನದಲ್ಲೂ ಹೆಸರು ಮಾಡಿದವರು. ವ್ಯಾಪಾರಿ ದೃಷ್ಟಿಯ ಸಿನಿಮಾಗಳನ್ನು ಮಾಡುತ್ತಿದ್ದ ದಯಾಳ್ ಇದ್ದಕ್ಕಿದ್ದಂತೆ ಹಗ್ಗದ ಕೊನೆ ಸಿನಿಮಾ ಮಾಡಿ, ಸೂಕ್ಷ್ಮ ಕಥಾಹಂದರವನ್ನು ಮುಟ್ಟಿ ಗೆದ್ದಾಗಲೇ ದಯಾಳ್ ಕ್ರಿಯಾಶೀಲ ಸಿನಿಮಾಗಳನ್ನು ಮಾಡಬಲ್ಲರು ಅನ್ನೋದು ಸಾಬೀತಾಗಿತ್ತು. ಈಗ ದಯಾಳ್ ಅವರ `ಆ ಕರಾಳ ರಾತ್ರಿ’ ಸಿನಿಮಾ ತೆರೆಗೆ ಬಂದಿದೆ. ಈ ಬಾರಿ ದಯಾಳ್ ಮತ್ತಷ್ಟು ಅಚ್ಚರಿ ಮೂಡಿಸಿದ್ದಾರೆ. ಕಲಾತ್ಮಕ ಚೌಕಟ್ಟಿನ ಕಥೆಯೊಂದನ್ನು ಕಮರ್ಷಿಯಲ್ ಸಿನಿಮಾವನ್ನಾಗಿಸುವ ಕೆಲಸ ನೆರೆಯ ತಮಿಳು, ಮಲಯಾಳಂ ಸಿನಿಮಾರಂಗದಲ್ಲಿ ನಡೆಯುತ್ತಿದೆ. ಆದರೆ ನಾವು ಕನ್ನಡದವರೂ ಏನು ಕಮ್ಮಿಯಿಲ್ಲ. ಕೇವಲ ಅವಾರ್ಡ್ ದೃಷ್ಟಿಯಲ್ಲಿಟ್ಟುಕೊಂಡು ಸದಭಿರುಚಿಯ ಸಿನಿಮಾಗಳನ್ನು ಮಾಡಿದರೆ ಏನು ಪ್ರಯೋಜನ? ಅದು ಜನ ನೋಡುವ ಸಿನಿಮಾಗಳಾಗಿಯೂ ಮಾರ್ಪಡಬೇಕು ಎನ್ನುವ ಕೊರಗನ್ನು ದಯಾಳ್ ನೀಗಿಸಿದ್ದಾರೆ.

     

    ಒಂದು ಗ್ರಾಮ, ಆ ಗ್ರಾಮದಿಂದ ಮೂರು ಕಿಲೋಮೀಟರು ದೂರದಲ್ಲೊಂದು ಮನೆ, ಆ ಮನೆಯಲ್ಲಿ ಗಂಡ, ಹೆಂಡತಿ ಮತ್ತು ಅವರ ಮುದ್ದಾದ ಮಗಳ ವಾಸ. ಅಲ್ಲಿಗೆ ಅಪರಿಚಿತ ವ್ಯಕ್ತಿಯೊಬ್ಬ ಎಂಟ್ರಿ ಕೊಡುತ್ತಾನೆ. ಆತ ಉಳಿದುಕೊಳ್ಳಲು ಈ ಮನೆಯಲ್ಲಿ ಜಾಗ ಸಿಗುತ್ತದೆ. ಹಾಗೆ ಸ್ಥಳಾವಕಾಶ ಪಡೆದವನ ಬಳಿ ಹೇರಳವಾದ ಸಂಪತ್ತೂ ಇರುತ್ತದೆ. ಒಬ್ಬಂಟಿಗನಲ್ಲಿರುವ ಐಶ್ವರ್ಯವನ್ನು ಕಂಡು ಕುಟುಂಬದ ಮೂವರು ಸದಸ್ಯರ ಕಣ್ಣು ಆಸೆಯಲ್ಲಿ ತೇಲಿಹೋದರೆ, ಮನಸ್ಸು ದುಷ್ಟತನದ ಹೊಂದಲ್ಲಿ ಮುಳುಗುತ್ತದೆ. ಆನಂತರ ಏನೇನು ನಡೆಯುತ್ತದೆ ಅನ್ನೋದು `ಆ ಕರಾಳ ರಾತ್ರಿ’ಯ ಅಂತಿಮ ಸೀಕ್ರೇಟು.

    ನಾಯಕ ನಟಿ ಅನುಪಮಾ ಗೌಡ ತೀರಾ ಸೊಗಸಾಗಿ ನಟಿಸಿದ್ದಾರೆ. ರಂಗಾಯಣ ರಘು, ವೀಣಾ ಸುಂದರ್ ಮತ್ತು ನವೀನ್ ಕೃಷ್ಣ ಪಾತ್ರಗಳಲ್ಲಿ ಮುಳುಗಿಹೋಗಿದ್ದಾರೆ. ಬರೀ ಹದಿಮೂರು ಪಾತ್ರಗಳ ಮೂಲಕ ಇಡೀ ಸಿನಿಮಾವನ್ನು ತೆರೆದಿಟ್ಟಿದ್ದಾರೆ ದಯಾಳ್. ಹೀಗೆ ಬಂದು ಹಾಗೆ ಹೋದರೂ ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನವರಸನ್ ಗಮನ ಸೆಳೆಯುತ್ತಾರೆ. ಪಿಕೆಎಚ್ ದಾಸ್ ಅವರ ಕ್ಯಾಮೆರಾ ಕೆಲಸ ನೋಡುಗರನ್ನು ಸೆಳೆಯುತ್ತದೆ. ಹಿನ್ನೆಲೆ ಸಂಗೀತ ಸಿನಿಮಾಗೆ ಪೂರಕವಾಗಿದೆ. ಒಟ್ಟಾರೆ ಈ ವರ್ಷದ ಕೆಲವೇ ಅತ್ಯುತ್ತಮ ಸಿನಿಮಾಗಳಲ್ಲಿ ಆ ಕರಾಳ ರಾತ್ರಿಯೂ ಸೇರಿಹೋಗಿದೆ.

  • ದಯಾಳ್ ಸೃಷ್ಟಿಸಿದ ‘ಆ ಕರಾಳ ರಾತ್ರಿ’ಯಲ್ಲಿ ದೆವ್ವಗಳಿರುತ್ತಾ…?

    ದಯಾಳ್ ಸೃಷ್ಟಿಸಿದ ‘ಆ ಕರಾಳ ರಾತ್ರಿ’ಯಲ್ಲಿ ದೆವ್ವಗಳಿರುತ್ತಾ…?

    ಬೆಂಗಳೂರು: ಆ ಕರಾಳ ರಾತ್ರಿ… ಎಂಬ ಹೆಸರು ಕೇಳಿದಾಕ್ಷಣವೇ ಮನಸಲ್ಲಿ ಹಾರರ್ ಕಲ್ಪನೆಗಳು ಹಾದು ಹೋಗೋದು ಸಹಜ. ಈಗಲೂ ಒಂದಷ್ಟು ಮಂದಿ ಪ್ರೇಕ್ಷಕರು ಇದನ್ನೊಂದು ಹಾರರ್ ಚಿತ್ರ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಈ ಬಗ್ಗೆ ದಯಾಳ್ ಪದ್ಮನಾಭನ್ ಅವರೇ ಕೆಲ ವಿಚಾರಗಳನ್ನು ತೆರೆದಿಟ್ಟಿದ್ದಾರೆ!

    ಜೆಕೆ ಮತ್ತು ಅನುಪಮಾ ಗೌಡ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಮೇಲು ನೋಟಕ್ಕೆ ಹಾರರ್ ಸಿನಿಮಾ ಎಂಬ ಫೀಲ್ ಹುಟ್ಟಿಸಿದರೂ ಇದರಲ್ಲಿ ದೆವ್ವದ ಸುಳಿವಿರೋದಿಲ್ಲವಂತೆ. ಎಂಭತ್ತರ ದಶಕದಲ್ಲಿ ನಡೆಯೋ ಕಥಾನಕವನ್ನು ಹೊಂದಿರುವ ಕರಾಳ ರಾತ್ರಿ ಮೈ ನವಿರೇಳಿಸುವಂಥಾ ಕ್ರೈಂ ಥ್ರಿಲ್ಲರ್ ಅಂಶಗಳನ್ನೊಳಗೊಂಡಿದೆಯಂತೆ. ಇದನ್ನೂ ಓದಿ: ‘ಆ ಕರಾಳ ರಾತ್ರಿ’ಯಲ್ಲಿ ಒಂದಾದ ಜೆಕೆ-ಅನುಪಮಾ ಗೌಡ!

    ಈ ಚಿತ್ರ ಸಾಹಿತಿ ಮೋಹನ್ ಹಬ್ಬು ರಚಿಸಿರುವ ಕರಾಳ ರಾತ್ರಿ ಎಂಬ ನಾಟಕವನ್ನಾಧರಿಸಿದ ಚಿತ್ರ. ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಇರುವ ಈ ಚಿತ್ರವನ್ನು ಈ ಹಿಂದೆ ಅರಿವು ಎಂಬ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಣ ಮಾಡಿದ್ದ ಅವಿನಾಶ್ ಶೆಟ್ಟಿಯವರೇ ನಿರ್ಮಿಸಿದ್ದಾರೆ. ಇನ್ನುಳಿದಂತೆ ಹಗ್ಗದ ಕೊನೆ ಚಿತ್ರದಲ್ಲಿ ನಟಿಸಿದ್ದ ನವೀನ್ ಕೃಷ್ಣ ಈ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ದಯಾಳ್ ಅವರಿಗೆ ಜೊತೆಯಾಗಿದ್ದಾರೆ. ಜೊತೆಗೆ ಒಂದು ಪಾತ್ರದಲ್ಲಿಯೂ ನಟಿಸಿದ್ದಾರೆ.

    ಎಂಭತ್ತರ ದಶಕದಲ್ಲಿ ನಡೆಯೋ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಜೆಕೆ, ಅನುಪಮಾ ಗೌಡ ಸೇರಿದಂತೆ ಎಲ್ಲರೂ ರೆಟ್ರೋ ಲುಕ್ಕಿನಲ್ಲಿ ಕಾಣಿಸಿಕೊಳ್ಳಲಿರೋದು ಪ್ರಮುಖ ಆಕರ್ಷಣೆ. ರಂಗಾಯಣ ರಘು ಮತ್ತು ವೀಣಾ ಸುಂದರ್ ಮುಖ್ಯ ಪಾತ್ರಗಳಲ್ಲಿ ನಟಿಸಿರೋ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲು ಕ್ಷಣಗಣನೆ ಆರಂಭವಾಗಿದೆ.

  • ಮುಂದಿನ ವಾರ ಹೈಪರ್ ಎಂಟ್ರಿ!

    ಮುಂದಿನ ವಾರ ಹೈಪರ್ ಎಂಟ್ರಿ!

    ಬೆಂಗಳೂರು: ಶೀರ್ಷಿಕೆಗೆ ತಕ್ಕುದಾಗಿಯೇ ಟ್ರೈಲರ್, ಹಾಡು ಸೇರಿದಂತೆ ಪ್ರತಿಯೊಂದರಲ್ಲಿಯೂ ಅಬ್ಬರಿಸುತ್ತಾ ಬಂದಿದ್ದ ಹೈಪರ್ ಚಿತ್ರ ಇದೇ 29ರಂದು ತೆರೆ ಕಾಣಲಿದೆ. ಎಂ ಕಾರ್ತಿಕ್ ನಿರ್ಮಾಣದ, ಗಣೇಶ್ ವಿನಾಯಕ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಬಿಡುಗಡೆಯ ಸರದಿಯಲ್ಲಿರುವ ಸಿನಿಮಾಗಳಲ್ಲಿ ಬಹು ನಿರೀಕ್ಷಿತ ಚಿತ್ರವಾಗಿ ಮುಂಚೂಣಿ ಕಾಯ್ದುಕೊಂಡಿದೆ.

    ಈ ಚಿತ್ರದ ಮೂಲಕ ಕಟ್ಟುಮಸ್ತಾದ ಮತ್ತೋರ್ವ ನಾಯಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿದೆ. ಈಗಾಗಲೇ ಹೈಪರ್ ನಾಯಕ ಅರ್ಜುನ್ ಆರ್ಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ. ಟ್ರೈಲರ್‍ನಲ್ಲಿನ ದೃಷ್ಯಾವಳಿಗಳಲ್ಲಿಯೇ ಫಿಟ್ನೆಸ್ ಮೂಲಕ ಒಂದಷ್ಟು ಕ್ರೇಜನ್ನೂ ಹುಟ್ಟು ಹಾಕಿದ್ದಾರೆ. ಅಂದಹಾಗೆ ಈ ಚಿತ್ರದ ಕಥೆಯನ್ನೂ ಕೂಡಾ ಅರ್ಜುನ್ ಆರ್ಯ ಅವರೇ ರಚಿಸಿದ್ದಾರೆ.

    ಎಂ ಬಿ ಪಿಕ್ಚರ್ಸ್ ಲಾಂಛನದಡಿಯಲ್ಲಿ ಎಂ ಕಾರ್ತಿಕ್ ನಿರ್ಮಾಣ ಮಾಡಿರುವ ಈ ಚಿತ್ರ ನಿರ್ದೇಶಕ ಗಣೇಶ್ ವಿನಾಯಕ ಅವರಿಗೆ ಮೊದಲ ಚಿತ್ರ. ಆದರೆ ಅವರು ಈಗಾಗಲೇ ತಮಿಳಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ. ಈ ಚಿತ್ರ ಪ್ರೇಕ್ಕರಲ್ಲಿ ನಿರೀಕ್ಷೆ ಮೂಡಿಸಿರೋದೇ ಟ್ರೈಲರ್‍ನಿಂದ. ಆ ನಂತರ ಬಿಡುಗಡೆಯಾದ ಹಾಡುಗಳಂತೂ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿವೆ.

    ಇಮ್ಮಾನ್ ಡಿ ಮತ್ತು ಎಲ್ವಿನ್ ಸಂಗೀತ ನೀಡಿರೋ ಹಾಡುಗಳೇ ಹೈಪರ್ ಚಿತ್ರದ ಗೆಲುವಿನ ಮುನ್ಸೂಚನೆಯನ್ನೂ ನೀಡಿವೆ. ಕಾಲೇಜಿನ ಸುತ್ತಾ ನಡೆಯುವ ಥ್ರಿಲ್ಲರ್ ಕಥಾನಕ ಹೊಂದಿರುವ ಹೈಪರ್ ಬದುಕಿನ ಬೇರೆ ಬೇರೆ ಹಾದಿಗಳತ್ತಲೂ ಹೊರಳಿಕೊಳ್ಳುವ ಮೂಲಕ ಎಲ್ಲ ವರ್ಗದ ಪ್ರೇಕ್ಷಕರನ್ನೂ ಖುಷಿಪಡಿಸುವಂತಿದೆ ಎಂಬುದು ಚಿತ್ರ ತಂಡದ ಭರವಸೆ.

    ರಂಗಾಯಣ ರಘು, ಶೋಭರಾಜ್, ಅಚ್ಯುತ ಕುಮಾರ್, ಬುಲ್ಲೆಟ್ ಪ್ರಕಾಶ್ ಸೇರಿದಂತೆ ಬಹು ದೊಡ್ಡ ತಾರಾಗಣ ಹೊಂದಿರೋ ಈ ಚಿತ್ರ ಇದೇ 29ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

  • ಟ್ರೈಲರ್ ಮೂಲಕ ಹವಾ ಎಬ್ಬಿಸಿದ್ದ ಹೈಪರ್ ಬರ್ತಿದೆ!

    ಟ್ರೈಲರ್ ಮೂಲಕ ಹವಾ ಎಬ್ಬಿಸಿದ್ದ ಹೈಪರ್ ಬರ್ತಿದೆ!

    ಬೆಂಗಳೂರು: ಎಂ ಕಾರ್ತಿಕ್ ನಿರ್ಮಾಣದ ಹೈಪರ್ ಚಿತ್ರ ಸದ್ಯ ಪ್ರೇಕ್ಷಕರ ವಲಯದಲ್ಲೊಂದು ಸಂಚಲನ ಸೃಷ್ಟಿಸಿದೆ. ಜೋಗಿ ಪ್ರೇಮ್ ಇತ್ತೀಚೆಗೆ ಈ ಚಿತ್ರದ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡಿದ್ದರು. ಅದಾಗಿ ಕೆಲವೇ ದಿನ ಕಳೆಯುವಷ್ಟರಲ್ಲಿಯೇ ಮೂರು ಲಕ್ಷಕ್ಕೂ ಅಧಿಕ ಜನ ನೋಡಿ ಮೆಚ್ಚಿಕೊಳ್ಳುವ ಮೂಲಕ ಹೈಪರ್ ಚಿತ್ರದ ಬಗ್ಗೆ ಎಲ್ಲೆಡೆ ನಿರೀಕ್ಷೆ ಹುಟ್ಟಿಕೊಂಡಿತ್ತು.

    ಸದ್ಯ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಇದೇ ತಿಂಗಳ 29ಕ್ಕೆ ತೆರೆ ಕಾಣಲು ಸಜ್ಜಾಗಿ ನಿಂತಿರೋ ಈ ಚಿತ್ರ ಎಂ ಬಿಗ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿದೆ. ಈಗಾಗಲೇ ತಮಿಳಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿರುವ ಗಣೇಶ್ ವಿನಾಯಕ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಾಯಕ ನಟರಾದ ಅರ್ಜುನ್ ಆರ್ಯ ಅವರೇ ಕಥೆಯನ್ನೂ ಬರೆದಿರೋದು ವಿಶೇಷ.

    ಇದೊಂದು ಕಾಲೇಜ್ ಲವ್ ಚಿತ್ರ. ಆದರೆ ಅದರಾಚೆಗಿನ ಊಹಿಸಲಸಾಧ್ಯವಾದ ತಿರುವು, ಸಾಹಸ, ಅಪ್ಪ ಮಗಳ ಸೆಂಟಿಮೆಂಟು ಸೇರಿದಂತೆ ಇಡೀ ಚಿತ್ರವನ್ನು ಸಮೃದ್ಧವಾಗಿ ರೂಪಿಸಿದ ಖುಷಿ ಚಿತ್ರತಂಡದ್ದು. ಕಥೆಗೆ ಪೂರಕವಾಗಿ ಈ ಚಿತ್ರದಲ್ಲಿ ಐದು ಚೆಂದದ ಹಾಡುಗಳಿವೆ. ಇಮ್ಮಾನ್ ಡಿ ಹಾಗೂ ಎಲ್ವಿನ್ ಆ ಐದೂ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಈ ಹಾಡುಗಳು ಮತ್ತು ಟ್ರೈಲರ್ ಗೆ ಗಣ್ಯರ ಕಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರವಿಶಂಕರ್ ಮತ್ತು ಚಿಕ್ಕಣ್ಣ ಮುಂತಾದ ನಟರೂ ಕೂಡಾ ಈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ಶಕ್ತಿವೇಲ್ ಅವರ ಛಾಯಾಗ್ರಹಣ, ರುಬಾನ್ ಸಂಕಲನ, ಥ್ರಿಲ್ಲರ್ ಮಂಜು, ಮಾಸ್ ಮಾದ, ವಿಕ್ರಂ, ಹೈಪರ್ ಸೂರಿ ಸಾಹಸ ನಿರ್ದೇಶನ, ಕಲೈ ನೃತ್ಯ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಎ.ಪಿ.ಅರ್ಜುನ್, ಬಹದ್ದೂರ್ ಚೇತನ್, ದಿಲ್‍ವಾಲ ಅನಿಲ್ ಹಾಗೂ ಗೌಸ್‍ಫಿರ್ ಬರೆದಿದ್ದಾರೆ. ಅರ್ಜುನ್ ಆರ್ಯ, ಶೀಲ, ರಂಗಾಯಣ ರಘು, ಶೋಭ್ ರಾಜ್, ಬುಲೆಟ್ ಪ್ರಕಾಶ್, ಅಚ್ಯುತ ಕುಮಾರ್, ಶ್ರೀನಿವಾಸಪ್ರಭು, ಬ್ಯಾಂಕ್ ಜನಾರ್ದನ್, ವೀಣಾಸುಂದರ್, ಲಕ್ಷ್ಮೀಸಿದ್ದಯ್ಯ, ಉಮೇಶ್ ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಮಜಾ ಕೊಡಲು ಬರ್ತಿದೆ ಜಾನಿ ಜಾನಿ ಯೆಸ್ ಪಪ್ಪಾ..!

    ಮಜಾ ಕೊಡಲು ಬರ್ತಿದೆ ಜಾನಿ ಜಾನಿ ಯೆಸ್ ಪಪ್ಪಾ..!

    ಬೆಂಗಳೂರು: ಜಾನಿ ಮೇರಾ ನಾಮ್ ಚಿತ್ರದ ನಂತರ ದುನಿಯಾ ವಿಜಯ್ ಮತ್ತು ಪ್ರೀತಂ ಗುಬ್ಬಿ ‘ಜಾನಿ ಜಾನಿ ಯೆಸ್ ಪಪ್ಪಾ’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ರಚಿತಾ ರಾಮ್ ಮತ್ತು ವಿಜಿ ಒಟ್ಟಾಗಿ ನಟಿಸಿರೋ ಈ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

    ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬೇರೊಂದು ಲೋಕವನ್ನೇ ಸೃಷ್ಟಿಸಿದ್ದ ಚಿತ್ರ ತಂಡ ಅಲ್ಲಿಯೇ ಐವತ್ತು ದಿನಗಳ ಚಿತ್ರೀಕರಣವನ್ನೂ ಪೂರೈಸಿಕೊಂಡಿತ್ತು. ಅಂದಹಾಗೆ ಈ ಚಿತ್ರ ದುನಿಯಾ ಟಾಕೀಸ್ ಲಾಂಛನದಲ್ಲಿ ದುನಿಯಾ ವಿಜಯ್ ಸ್ವತಃ ನಿರ್ಮಾಣ ಮಾಡುತ್ತಿರೋ ಮೊದಲ ಚಿತ್ರ. ಇದೊಂದು ತೆರನಾಗಿ ಜಾನಿ ಮೇರಾ ನಾಮ್ ಚಿತ್ರದ ಮುಂದುವರೆದ ಭಾಗವಿದ್ದಂತೆ. ಈ ಚಿತ್ರದಲ್ಲಿಯೂ ರಂಗಾಯಣ ರಘು ಮತ್ತು ವಿಜಿ ಕಾಂಬಿನೇಷನ್ ಪ್ರಮುಖ ಆಕರ್ಷಣೆ. ಇನ್ನುಳಿದಂತೆ ರಚಿತಾ ರಾಮ್ ವಿಜಯ್ ಜೋಡಿಯಾಗಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

    ರಚಿತಾ ರಾಮ್ ಈ ಚಿತ್ರದ ಮೂಲಕ ಮೊದಲ ಸಲ ದುನಿಯಾ ವಿಜಿ ಜೊತೆ ನಟಿಸಿದ್ದಾರೆ. ರಚಿತಾ ಇಲ್ಲಿ ಇಂಗ್ಲಿಷ್ ಮತ್ತು ಕನ್ನಡವನ್ನು ಮಿಕ್ಸ್ ಮಾಡಿ ಮಾತಾಡೋ ವೆಸ್ಟರ್ನ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರಂತೆ. ಒಂದು ವಿಶೇಷವಾದ ಹಾಡಿನಲ್ಲಿ ವಿಜಯ್ ದೇಹವನ್ನು ಸಜ್ಜುಗೊಳಿಸಿಕೊಂಡು ನಟಿಸಿದ್ದಾರಂತೆ. ನಿರ್ದೇಶಕ ಪ್ರೀತಂ ಗುಬ್ಬಿ ಕನಸಿನಂತೆ ವಿಶೇಷವಾದ ಸೆಟ್ ಹಾಕಲೆಂದೇ ಒಂದೂವರೆ ಕೋಟಿ ವ್ಯಯಿಸಲಾಗಿತ್ತು. ವಿಜಯ್ ಮತ್ತು ರಂಗಾಯಣ ರಘು ಕಾಂಬಿನೇಷನ್ನು ಈ ಚಿತ್ರದ ಆಕರ್ಷಣೆಗಳಲ್ಲಿ ಮುಖ್ಯ ವಿಚಾರ ಎಂಬುದು ಚಿತ್ರತಂಡದ ಭರವಸೆ. ಇದಲ್ಲದೇ ರಂಗಾಯಣ ರಘು ಮತ್ತು ವಿಜಿ ಎಂಟು ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಿರೋದು ಅಸಲೀ ವಿಶೇಷ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಹಾಡುಗಳು ಈಗಾಗಲೇ ಟ್ರೆಂಡ್ ಕ್ರಿಯೇಟ್ ಮಾಡಿದೆ.

  • ಸದ್ದಿಲ್ಲದೆ ಸೆಟ್ಟೇರಿದ ದುನಿಯಾ ವಿಜಯ್ ಹೋಮ್ ಪ್ರೊಡಕ್ಷನ್ ಸಿನಿಮಾ

    ಸದ್ದಿಲ್ಲದೆ ಸೆಟ್ಟೇರಿದ ದುನಿಯಾ ವಿಜಯ್ ಹೋಮ್ ಪ್ರೊಡಕ್ಷನ್ ಸಿನಿಮಾ

    ನೆಲಮಂಗಲ: ಸದ್ದಿಲ್ಲದೆ ದುನಿಯಾ ವಿಜಯ್ ಹೋಮ್ ಪ್ರೊಡಕ್ಷನ್ ನಲ್ಲೊಂದು ಹೊಸ ಸಿನಿಮಾ ಸೆಟ್ಟೇರಿದೆ. ದುನಿಯಾ ಟಾಕೀಸ್ ನ ಚೊಚ್ಚಲ ಸಿನಿಮಾ ‘ಜಾನಿ ಜಾನಿ ಎಸ್ ಪಪ್ಪ’. ಕಾಮಿಡಿ ಜೊತೆಗೆ ಆಕ್ಷನ್ ಹೊಂದಿರುವ ಈ ಚಿತ್ರವನ್ನು ಪ್ರೀತಮ್ ಗುಬ್ಬಿ ನಿರ್ದೇಶನ ಮಾಡುತ್ತಿದ್ದಾರೆ.

    ದುನಿಯಾ ವಿಜಿ, ರಂಗಾಯಣ ರಘು ಹಾಗೂ ಪ್ರೀತಮ್ ಗುಬ್ಬಿರವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಚಿತ್ರ ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಚಿತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಇದೀಗ ಮತ್ತೊಂದು ಚಿತ್ರವನ್ನು ತೆರೆಗೇರಿಸಲು ಸದ್ದಿಲ್ಲದೇ ಈ ಟೀಮ್ ಸಜ್ಜಾಗಿದೆ. ದುನಿಯಾ ವಿಜಿಯವರ ಸ್ವಂತ ಬ್ಯಾನರ್ ಆದ ದುನಿಯಾ ಪ್ರೋಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಜಾನಿ ಜಾನಿ ಎಸ್ ಪಪ್ಪ ಚಿತ್ರ ಜಾನಿ ಮೇರಾ ನಾಮ್ ಟೈಟಲ್ ನ ಮುಂದುವರಿದ ಭಾಗ ಎಂದು ಹೇಳಲಾಗಿದೆ.

    ಈ ಸಿನಿಮಾದಲ್ಲಿ ವಿವಿಧ ಧರ್ಮದವರನ್ನು ಒಳಗೊಂಡ ಕಾಲೋನಿಯಲ್ಲಿ ಪ್ರತಿದಿನ ನಡೆಯುವ ಸನ್ನಿವೇಶಗಳ ಚಿತ್ರಣವಾಗಿದೆ. ರಂಗಾಯಣ ರಘು ಹಾಗು ದುನಿಯಾ ವಿಜಿಯವರ ಕಾಮಿಡಿ ಕೆಮಿಸ್ಟ್ರಿ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ರಂಜಿಸಲಿದ್ದು, ವಿದೇಶಕ್ಕೆ ಹೋಗಲು ಆತುರದಲ್ಲಿರುವ ಕ್ಲಾಸ್ ಹೀರೋಯಿನ್ ರಚಿತಾ ರಾಮ್ ಹಾಗು ಮಾಸ್ ಹೀರೋ ದುನಿಯಾ ವಿಜಿ ರವರ ಪ್ರೇಮ ಕಥೆ ಅದ್ಭುತವಾಗಿದೆ ಎಂದು ಚಿತ್ರತಂಡ ಹೇಳಿದೆ.

    ಇನ್ನೂ ಚಿತ್ರಕ್ಕಾಗಿ ಬೆಂಗಳೂರು ಹೊರವಲಯ ನೆಲಮಂಗಲದ ಮೋಹನ್ ಸ್ಟುಡಿಯೋದಲ್ಲಿ 2 ಕೋಟಿ ರೂ. ಮೊತ್ತದಷ್ಟು ಅದ್ಧೂರಿ ಸೆಟ್ ರೆಡಿಯಾಗಿದ್ದು, ದೇವಸ್ಥಾನ, ಮಸೀದಿ, ಚರ್ಚ್ ಒಳಗೊಂಡ ರೈನ್‍ಬೋ ಕಾಲೋನಿಯೇ ಚಿತ್ರದ ಪ್ರಮುಖ ಆಕರ್ಷಣೆ. ಈಗಾಗಲ್ಲೇ ಶೇ. 50ರಷ್ಟು ಶೂಟಿಂಗ್ ಹಾಗೂ 2 ಸಾಂಗ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಶೂಟಿಂಗ್ ಕೆಲಸ ಭರ್ಜರಿಯಾಗಿ ಸಾಗುತ್ತಿದೆ. ಚಿತ್ರಕ್ಕೆ ಅಜಿನೀಶ್ ರವರ ಸಂಗೀತವಿದ್ದು, ಯಶಸ್ವಿ ನಿರ್ದೇಶಕ ಪ್ರೀತಮ್ ಗುಬ್ಬಿಯವರು ಆಕ್ಷನ್ ಕಟ್ ಹೇಳಿದ್ದಾರೆ.

    ಖ್ಯಾತ ಗಾಯಕ ವಿಜಯ ಪ್ರಕಾಶ್ ಎರಡು ಹಾಡುಗಳಿಗೆ ಧ್ವನಿ ನೀಡಿದ್ದಾರೆ ಹಾಗೂ ಮತ್ತೆರಡು ಹಾಡುಗಳ ರೆಕಾರ್ಡಿಂಗ್ ಬಾಕಿ ಇದೆ ಎನ್ನಲಾಗಿದೆ. ಊರಿಗೊಬ್ಳೆ ಪದ್ಮಾವತಿ ಶೈಲಿಯಲ್ಲೇ ಈ ಚಿತ್ರದಲ್ಲಿ ಪದ್ಮಾವತಿ ಹೆಸರಿನಲ್ಲಿ ಮತ್ತೊಂದು ಸಾಂಗ್ ಇದ್ದು, ರಚಿತಾ ರಾಮ್ ಸಖತ್ ಸ್ಟೆಪ್ ಹಾಕಿದ್ದಾರಂತೆ. ದುನಿಯಾ ವಿಜಿಯವರ ಜನ್ಮದಿನದಂದು ಆಡಿಯೋ ರಿಲೀಸ್ ಪ್ಲಾನ್ ಮಾಡಿದ್ದು, ಮಾರ್ಚ್ ನಂತರ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಒಟ್ಟಾರೆ ಯಶಸ್ವಿ ಚಿತ್ರಗಳನ್ನು ನೀಡಿದ್ದ ದುನಿಯಾ ವಿಜಿ ಹಾಗೂ ರಂಗಾಯಣ ರಘು ಕಾಂಬಿನೇಶನ್ ನ ಜಾನಿ ಜಾನಿ ಎಸ್ ಪಪ್ಪ ಚಿತ್ರ ಈಗಾಗಲೇ ಪ್ರೋಡಕ್ಷನ್ ನಲ್ಲಿ ಬ್ಯುಸಿಯಾಗಿದ್ದು, ದುನಿಯಾ ವಿಜಿ ಸ್ವಂತ ಬ್ಯಾನರ್ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿರೋದು ಸಂತಸದ ವಿಚಾರ.

  • ಹಾಸ್ಯನಟನಿಂದ ರಾಜಕೀಯ ಅದೃಷ್ಟ ಪರೀಕ್ಷೆ: ಮುಂದಿನ ವರ್ಷ ತೆನೆ ಹೊರಲಿದ್ದಾರೆ ರಂಗಾಯಣ ರಘು!

    ಹಾಸ್ಯನಟನಿಂದ ರಾಜಕೀಯ ಅದೃಷ್ಟ ಪರೀಕ್ಷೆ: ಮುಂದಿನ ವರ್ಷ ತೆನೆ ಹೊರಲಿದ್ದಾರೆ ರಂಗಾಯಣ ರಘು!

    ಬೆಂಗಳೂರು: ಸ್ಯಾಂಡಲ್‍ ವುಡ್ ನಲ್ಲಿ ಮತ್ತೊಬ್ಬ ಖ್ಯಾತ ನಟ ರಾಜಕೀಯ ರಂಗದಲ್ಲಿ ತನ್ನ ರಂಗನ್ನು ಪಸರಿಸಲು ಮುಂದಾಗಿದ್ದಾರೆ. ಇಷ್ಟು ದಿನ ಫೇಮಸ್ ಹೀರೋ ಅಥವಾ ಹೀರೋಯಿನ್ಸ್ ಹೆಸರುಗಳು ಕೇಳಿ ಬರುತಿತ್ತು. ಆದರೆ ಈ ಬಾರಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕ ನಟ ರಂಗಾಯಣ ರಘು ಅವರ ಹೆಸರು ಕೇಳಿ ಬರುತ್ತಿದೆ.

    ತುಮಕೂರಿನ ಮಧುಗಿರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ರಂಗಾಯಣ ರಘು ನಿಲ್ಲುತ್ತಾರೆ ಎನ್ನುವ ಬಲವಾದ ಮಾತುಗಳು ಕೇಳಿ ಬರುತ್ತಿವೆ. ಮೂಲತಃ ತುಮಕೂರಿನ ಪಾವಗಡ ತಾಲೂಕಿನವರಾಗಿರುವ ರಂಗಾಯಣ ರಘು ಮಧುಗಿರಿ ಕ್ಷೇತ್ರದ ಜನರ ವಿಶ್ವಾಸ ಪಡೆದಿದ್ದಾರೆ. ಅಲ್ಲಿನ ಕೆಲ ಹಿರಿಯ ಮುಖಂಡರು ರಂಗಾಯಣ ರಘು ಅವರನ್ನು ಈ ಬಾರಿ ಎಲೆಕ್ಷನ್ ನಿಲ್ಲುವಂತೆ ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ.

    ರಂಗಾಯಣ ಜೀವನ ಚರಿತ್ರೆ: ರಂಗಾಯಣ ರಘು ಎಂದೇ ಖ್ಯಾತಿ ಗಳಿಸಿರುವ ಕೊಟ್ಟೂರು ಚಿಕ್ಕರಂಗಪ್ಪ ರಘುನಾಥ್ ಇವರು ಚಿಕ್ಕರಂಗಯ್ಯ ಮತ್ತು ವೀರಮ್ಮ ದಂಪತಿಗಳ ಪುತ್ರನಾಗಿ 17 ಏಪ್ರಿಲ್ 1965 ರಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಜನಿಸಿದ್ದಾರೆ.

    ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿ ನಂತರ ಇವರು ಮೈಸೂರಿನಲ್ಲಿರುವ ರಂಗಾಯಣ ರಂಗಭೂಮಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆ ಸಮಯದಲ್ಲಿ ಇವರು ತಿಂಗಳಿಗೆ 800 ರೂ. ಗಳನ್ನು ಪಡೆದಕೊಂಡು ಜೀವನ ಸಾಗಿಸುತ್ತಿದ್ದರು.

    ಮೈಸೂರಿನ ರಂಗಾಯಣದಲ್ಲಿ ಕೆಲ ಪಾತ್ರಗಳಲ್ಲಿ ನಟಿಸಲು ಪ್ರಾರಂಭಿಸಿ ನಂತರ ಇವರಿಗೆ 1995 ರಲ್ಲಿ ತೆರೆ ಕಂಡ ಸುಗ್ಗಿ ಚಿತ್ರದಲ್ಲಿ ನಟಿಸುವ ಭಾಗ್ಯ ಇವರಿಗೆ ದೊರೆಯಿತು. ಇವರು ಮಾಡುತ್ತಿದ್ದ ಆಕ್ಟಿಂಗ್ ಗೆ ಕನ್ನಡ ಚಿತ್ರರಂಗದಲ್ಲಿ ನಟಿಸುವ ಅವಕಾಶಗಳು ದೊರೆತವು. 2007 ರಲ್ಲಿ ಬಿಡುಗಡೆಗೊಂಡಿರುವ ದುನಿಯಾ ಚಿತ್ರ ರಾಜ್ಯದಲ್ಲಿ ಅಭೂತ ಪೂರ್ವ ಯಶಸ್ಸು ಗಳಿಸಿತು. ಈ ಚಿತ್ರದಲ್ಲಿ ಇವರು ಸಹಾಯಕಪಾತ್ರದಲ್ಲಿ ಕಾಣಿಸಿಕೊಂಡು ವಿಭಿನ್ನ ರೀತಿಯಲ್ಲಿ ನಟಿಸಿ ಸೈ ಎನಿಸಿಕೊಂಡರು. ಈ ಚಿತ್ರ ಇವರಿಗೆ ಒಳ್ಳೆ ಇಮೇಜ್ ತಂದುಕೊಟ್ಟಿತು.

    ದುನಿಯಾ ಯಶಸ್ಸಿನ ನಂತರ ಇವರಿಗೆ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಸಿಕ್ಕವು. ಸಿಕ್ಕ ಅವಕಾಶಗಳನ್ನು ಬಳಸಿಕೊಂಡ ಇವರು ವಿವಿಧ ಪಾತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರು.

    ರಂಗಾಯಣ ರಘು ಅವರಿಗೆ ಲಭಿಸಿದ ಪ್ರಶಸ್ತಿಗಳು:-
    * ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಮಣಿ(2003-04)
    * ಕರ್ನಾಟಕ ರಾಜ್ಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ದುನಿಯಾ(2006-07).
    * ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ-2008.
    * ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ-ರಾಮ್(2009).
    * ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ-ಮೊದಲ ಸಲ(2010).
    * ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಒಲವೇ ಮಂದಾರ(2011).
    * ಸೌತ್ ಫಿಲ್ಮ್ ಫೇರ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಜಯಮ್ಮನ ಮಗ(2013).
    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಖಳ ನಟ ಸಂಜು ವೆಡ್ಸ್ ಗೀತಾ(2011).
    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಪೋಷಕ ನಟ ರೋಮಿಯೊ(2012).
    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಹಾಸ್ಯ ನಟ-ಶಿವ(2012).
    * ದಕ್ಷಿಣ ಭಾರತ ಅಂತರಾಷ್ಟ್ರೀಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಹಾಸ್ಯ ನಟ-ಜಯಮ್ಮನ ಮಗ(2013).
    * ಉದಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- 2010.
    * ಉದಯ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಹಾಸ್ಯ ನಟ- ಮಿಸ್ಟರ್ 420(2012).
    * ಸುವರ್ಣ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ದುನಿಯಾ(2007).
    * ಸುವರ್ಣ ಫಿಲ್ಮ್ ಪ್ರಶಸ್ತಿ- ಅತ್ಯುತ್ತಮ ಸಹಾಯಕ ನಟ- ಮೊದಲ ಸಲ(2009).