Tag: Ranganayaka

  • ಅದು ನನ್ನ ಸಿನಿಮಾವಲ್ಲ, ನನ್ನ ಕ್ಷಮಿಸಿ: ‘ರಂಗನಾಯಕ’ ಬಗ್ಗೆ ಜಗ್ಗೇಶ್ ಅಚ್ಚರಿ ಹೇಳಿಕೆ

    ಅದು ನನ್ನ ಸಿನಿಮಾವಲ್ಲ, ನನ್ನ ಕ್ಷಮಿಸಿ: ‘ರಂಗನಾಯಕ’ ಬಗ್ಗೆ ಜಗ್ಗೇಶ್ ಅಚ್ಚರಿ ಹೇಳಿಕೆ

    ರಂಗನಾಯಕ ಸಿನಿಮಾ ಕುರಿತಂತೆ ಸಾಕಷ್ಟು ಮೆಚ್ಚುಗೆ ಮಾತುಗಳನ್ನು ಆಡಿದ್ದ ನಟ ಜಗ್ಗೇಶ್ (Jaggesh), ಆ ಸಿನಿಮಾದ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಬರುತ್ತಿದ್ದಂತೆಯೇ ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ. ನಿನ್ನೆ ಅವರ ಹುಟ್ಟು ಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಅವರು ರಾಯರ ಸನ್ನಿಧಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ಅಲ್ಲಿಂದಲೇ ಫೇಸ್ ಬುಕ್ ಲೈವ್ ಮಾಡಿದ್ದಾರೆ. ಹಲವಾರು ವಿಚಾರಗಳನ್ನು ಮಾತನಾಡುತ್ತಾ, ರಂಗನಾಯಕ (Ranganayaka) ಬಗ್ಗೆಯೂ ಮಾತನಾಡಿದ್ದಾರೆ.

    ಮೊನ್ನೆಯಷ್ಟೇ ಒಂದು ಸಿನಿಮಾ ಮಾಡಿದ್ದೆ. ಅದು ನಿಮಗೆ ಇಷ್ಟವಾಗಿಲ್ಲ. ಅದು ನನ್ನ ಸಿನಿಮಾವಲ್ಲ, ಅದು ನಿರ್ದೇಶಕರ ಸಿನಿಮಾ. ಒಬ್ಬರನ್ನು ನಂಬಿ ನಾನು ಕೆಲಸ ಮಾಡುತ್ತೇನೆ. ಆ ನಿರ್ದೇಶಕರು ತಮ್ಮ ಆಸೆಯಂತೆ ಸಿನಿಮಾ ಮಾಡಿದ್ದಾರೆ. ಪ್ರಿಮಿಯರ್ ಪದ್ಮಿನಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದೇನೆ. ಹಾಗೆ ಸಿನಿಮಾ ಇಷ್ಟವಾಗದೇ ಇದ್ದಾಗ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಜಗ್ಗೇಶ್.

    ಲೈವ್‌ನಲ್ಲಿ ಜಗ್ಗೇಶ್, ತಮ್ಮ ಬೆಳವಣಿಗೆಗೆ ಮುಖ್ಯ ಕಾರಣ ನನ್ನ ಗುರುಗಳು ರಾಘವೇಂದ್ರ ಸ್ವಾಮಿಗಳು ಎಂದು ಹೇಳಿದ್ದಾರೆ. ಮುಖ್ಯ ವಿಚಾರಕ್ಕೆ ಬರುತ್ತೇನೆ ಎಂದ ಜಗ್ಗೇಶ್, ನಾನು ನೇರವಾಗಿ ಮಾತಾಡುವ ಮನುಷ್ಯ, ಹಳ್ಳಿಯ ಸೊಗಡಿನವನು, ನನ್ನ ಮಾತುಗಳಲ್ಲಿ ಹಳ್ಳಿ ಪದಗಳು ಬಂದು ಬಿಡುತ್ತವೆ ಎಂದು ಪರೋಕ್ಷವಾಗಿ ವರ್ತೂರು ಸಂತೋಷ್ ಅವರಿಗೆ ಬೈದದನ್ನೂ ನೆನಪಿಸಿಕೊಂಡಿದ್ದಾರೆ.

    ನಾನು ಎಂದಿಗೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ಮಾತನಾಡಿದ್ದಾರೆ. ಬಳಿಕ ಜಗ್ಗೇಶ್, ಮೈಕ್ ಹಿಡಿದ ಮಾತಾಡುವಾಗ ನನ್ನ ಮಾತಿನಿಂದ ಯಾರಿಗಾದ್ರೂ ಬೇಜಾರಾಗಿದ್ದರೆ ಕ್ಷಮಿಸಿಬಿಡಿ. ನಿಮ್ಮ ತಂದೆಯ ವಯಸ್ಸಿನವನು ಅಂದುಕೊಂಡು ಕ್ಷಮಿಸಿ ಎಂದು ಮಾತನಾಡಿದ್ದಾರೆ.

     

    ಸಿನಿಮಾವೊಂದರ ಪ್ರಚಾರದ ವೇಳೆ, ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ, ಬಿಗ್ ಬಾಸ್ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ ಅವರನ್ನು ‘ಕಿತ್ತೋದ್ ನನ್ ಮಗ’ ಎಂಬ ಪದ ಬಳಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಜಗ್ಗೇಶ್, ವರ್ತೂರು ಸಂತೋಷ್ (Varthur Santhosh) ಹೆಸರು ಹೇಳದೇ ಕ್ಷಮೆ ಕೇಳಿದ್ದಾರೆ.

  • ‘ರಂಗನಾಯಕ’ ಟ್ರೈಲರ್ ನಲ್ಲಿ ಯಶ್, ದರ್ಶನ್, ಸುದೀಪ್ ರನ್ನು ಎಳೆತಂದ ಗುರುಪ್ರಸಾದ್

    ‘ರಂಗನಾಯಕ’ ಟ್ರೈಲರ್ ನಲ್ಲಿ ಯಶ್, ದರ್ಶನ್, ಸುದೀಪ್ ರನ್ನು ಎಳೆತಂದ ಗುರುಪ್ರಸಾದ್

    ನಿನ್ನೆಯಷ್ಟೇ ಜಗ್ಗೇಶ್ (Jaggesh) ನಟನೆಯ ‘ರಂಗನಾಯಕ’ (Ranganayaka) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಎಂದಿನಂತೆ ಈ ಟ್ರೈಲರ್ ಅನ್ನು ವಿಡಂಬನೆಗೆ ಮೀಸಲಿಟ್ಟಿದ್ದಾರೆ ನಿರ್ದೇಶಕ ಗುರುಪ್ರಸಾದ್. ನಟ ಜಗ್ಗೇಶ್ ಮತ್ತು ಗುರುಪ್ರಸಾದ್ (Guruprasad)  ಕಾಂಬಿನೇಷನ್ ನಲ್ಲಿ ಈ ಹಿಂದೆ ಬಂದ ಎರಡೂ ಸಿನಿಮಾಗಳಲ್ಲೂ ವಿಡಂಬನೆಗೆ ಹೆಚ್ಚು ಒತ್ತು ನೀಡಲಾಗಿತ್ತು. ರಂಗನಾಯಕದಲ್ಲೂ ಅದು ಮುಂದುವರೆದಿದೆ.

    ಇದೇ ಚಿತ್ರದ ಹಾಡೊಂದು ಇತ್ತೀಚೆಗೆ ರಿಲೀಸ್ ಆಗಿತ್ತು. ಆ ಹಾಡಿನಲ್ಲಿ ಮೀಟೂ ಶ್ರುತಿ, ಬಿಗ್ ಬಾಸ್ ಶ್ರುತಿ ಎಂದು ಇಬ್ಬರು ನಟಿಯರ ಕಾಲೆಳೆದಿದ್ದರು ಗುರುಪ್ರಸಾದ್. ಈಗ ಬಿಡುಗಡೆ ಆಗಿರುವ ಟ್ರೈಲರ್ ನಲ್ಲಿ ಶಿವಣ್ಣ, ಯಶ್, ಸುದೀಪ್, ದರ್ಶನ್, ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಕಲ್ಪನಾ, ಗಿರೀಶ್ ಕಾಸರವಳ್ಳಿ ಹೀಗೆ ಅನೇಕ ಕಲಾವಿದರು ಬಂದು ಹೋಗುತ್ತಾರೆ.

    ಕನ್ನಡಕ್ಕೆ ತೊಂದರೆ ಆಗ್ತಿದೆ ಬನ್ನಿರಿ ಎಂದು ಕರೆಯುವ ಡೈಲಾಗ್ ನಲ್ಲಿ ಶಿವಣ್ಣ, ಯಶ್, ಸುದೀಪ್, ದರ್ಶನ್ ಅವರ ಹೆಸರನ್ನು ಬಳಸಿಕೊಂಡಿದ್ದಾರೆ ಗುರುಪ್ರಸಾದ್. ಐಟಂ ಸಾಂಗ್ ವಿಚಾರವಾಗಿ ಗಿರೀಶ್ ಕಾಸರವಳ್ಳಿ ಅವರ ಹೆಸರನ್ನೂ ನಿರ್ದೇಶಕರು ಬಳಸಿಕೊಂಡಿದ್ದು, ಗಿರೀಶ್ ಕಾಸರವಳ್ಳಿ ಸಿನಿಮಾದಲ್ಲಿ ಐಟಂ ಸಾಂಗ್ ಕೇಳಿದಂಗಾತು ಎಂದು ಡೈಲಾಗ್ ಬಿಡ್ತಾರೆ.

     

    ಇದಷ್ಟೇ ಅಲ್ಲ, ನಟಿ ಸುಮಲತಾ ಅವರ ರಾಜಕೀಯದ ಕುರಿತಾಗಿಯೂ ಡೈಲಾಗ್ ಸುಳಿಯುತ್ತದೆ. ಅಂಬರೀಶ್ ಅವರು ಸುಮಲತಾ ಅವರನ್ನು ಸೆಂಟ್ರಲ್ ಕೂಡಿಸಿಲ್ಲವಾ ಎನ್ನುವ ಮಾತು ಬರುತ್ತದೆ. ಇವೆಲ್ಲ ಮಾತುಗಳು ಯಾಕೆ? ಹೇಗೆ? ಎನ್ನುವುದಕ್ಕಾಗಿ ಟ್ರೈಲರ್ ಒಂದ ಸಲ ನೋಡಿಬಿಡಿ.

  • ಜಗ್ಗೇಶ್-ಗುರುಪ್ರಸಾದ್ ಜುಗಲ್ ಬಂದಿ: ರಂಗನಾಯಕ

    ಜಗ್ಗೇಶ್-ಗುರುಪ್ರಸಾದ್ ಜುಗಲ್ ಬಂದಿ: ರಂಗನಾಯಕ

    ವರಸ ನಾಯಕ ಜಗ್ಗೇಶ್ (Jaggesh) ಅಭಿನಯದ,  ಮಠ ಗುರುಪ್ರಸಾದ್ (Guruprasad) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ  ರಂಗನಾಯಕ (Ranganayaka) ಮಾರ್ಚ್ ರಲ್ಲಿ ರಾಜ್ಯಾದ್ಯಂತ ಅದ್ದೂರಿಯಾಗಿ  ತೆರೆಗೆ ಬರಲಿದೆ. ಪುಷ್ಪಕ ವಿಮಾನ ಖ್ಯಾತಿಯ ನಿರ್ಮಾಪಕ‌ ವಿಖ್ಯಾತ್ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಮಠ, ಎದ್ದೇಳು ಮಂಜುನಾಥ ಚಿತ್ರಗಳ ಮೂಲಕ ಹೊಸ ದಾಖಲೆಯನ್ನೇ‌‌  ಸೃಷ್ಟಿಸಿದ್ದ ‌ಗುರುಪ್ರಸಾದ್ ಜಗ್ಗೇಶ್  ಜೋಡಿ  ನಗುವಿನ ಅಲೆ ಎಬ್ಬಿಸಲು ಮತ್ತೊಮ್ಮೆ  ಪ್ರೇಕ್ಷಕರೆದುರು ಬರುತ್ತಿದ್ದಾರೆ.

    ಶಿವರಾತ್ರಿಯ ವಿಶೇಷವಾಗಿ ಈ ಚಿತ್ರ ಮಾರ್ಚ್ 8ರಂದು ಬಿಡುಗಡೆಯಾಗುತ್ತಿದೆ.15 ವರ್ಷಗಳ  ನಂತರ ಮತ್ತೆ  ಒಂದಾದ ಜಗ್ಗಣ್ಣ ಮತ್ತು ಗುರುಪ್ರಸಾದ್ ಜೋಡಿ  ಈ ಸಲ ಪ್ರೇಕ್ಷಕರಿಗೆ ಯಾವ‌ರೀತಿ ಮೋಡಿ ಮಾಡುತ್ತಾರೆಂದು ಕಾದು ನೋಡಬೇಕಿದೆ. ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.

    ಜಗ್ಗೇಶ್, ಚೈತ್ರ ಕೊಟ್ಟೂರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನಾಯಕನಟ ಜಗ್ಗೇಶ್ ಮಾತನಾಡುತ್ತ ಈ ಸಿನಿಮಾ ಸಂಪೂರ್ಣವಾಗಿ ಗುರುಪ್ರಸಾದ್ ಅವರ ಪ್ರಸಾದ ಎನ್ನುತ್ತ ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾದ ನೆನಪುಗಳನ್ನ ಮೆಲುಕು ಹಾಕಿದರು.  ಗುರುಪ್ರಸಾದ್ ಜಗಮೊಂಡ, ಆತ ಯಾರು ಮಾತನ್ನೂ  ಕೇಳೋನಲ್ಲ.  ಮದವೇರಿದ ಒಂಟಿ ಸಲಗನಂತೆ ಎಂದು ನಿರ್ದೇಶಕರ ಕಾರ್ಯವೈಖರಿಯನ್ನು ಮೆಚ್ಚುಕೊಂಡರು.

    ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಕಂಡಿತಾ ಒಳ್ಳೆದಾಗತ್ತೆ ಎಂದು ಮಾತನಾಡಿದ ಜಗ್ಗೇಶ್, ಡಬ್ಬಿಂಗ್ ಸ್ಟುಡಿಯೋ ನಂಗೆ ತುಂಬಾ ಇಷ್ಟವಾದ ಜಾಗ ಎಂದರು.ಇಂಡಸ್ಟ್ರಿಯಲ್ಲಿ  ಮತ್ತೊಂದು ಹೆಜ್ಜೆ ಮುಂದಿಟ್ಟ ನವರಸನಾಯಕ ಜಗ್ಗೇಶ್ ಫೈನ್ ಓನ್ ಅನ್ನೋ ಡಬ್ಬಿಂಗ್ ಸ್ಟುಡಿಯೋವನ್ನು  ಶುರು ಮಾಡ್ತಿದ್ದಾರೆ.

     

    ರಂಗನಾಯಕ ಒಂದು ಎಂಟರ್ ಟೈನಿಂಗ್ ಚಿತ್ರ. ಜನ ಥಿಯೇಟರ್ ಗೆ ಬಂದು ಬಾಯಿ ತುಂಬಾ ನಕ್ಬಿಟ್ರೆ ನಮಗೆ  ಖುಷಿಯಾಗತ್ತೆ ಎಂದು  ಡೋಲೊ 650 ಡೈಲಾಗ್ ಹೇಳಿದರು.

  • ಕೊನೆಗೂ ನಿಕ್ಕಿ ಆಯಿತು ಗುರು-ಜಗ್ಗೇಶ್ ಚಿತ್ರದ ರಿಲೀಸ್ ಡೇಟ್

    ಕೊನೆಗೂ ನಿಕ್ಕಿ ಆಯಿತು ಗುರು-ಜಗ್ಗೇಶ್ ಚಿತ್ರದ ರಿಲೀಸ್ ಡೇಟ್

    ಠ ಖ್ಯಾತಿಯ ಗುರು ಪ್ರಸಾದ್ ಮತ್ತು ನವರಸ ನಾಯಕ ಜಗ್ಗೇಶ್ (Jaggesh) ಕಾಂಬಿನೇಷನ್ ನ ರಂಗನಾಯಕ (Ranganayaka) ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಮಾರ್ಚ್ 8 ರಂದು ಶಿವರಾತ್ರಿಗೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. 15 ವರ್ಷಗಳ ನಂತರ ಗುರು ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ಚಿತ್ರವೊಂದು ಬಿಡುಗಡೆ ಆಗುತ್ತಿದೆ.

    ನಿರ್ದೇಶಕ ಮಠದ ಗುರುಪ್ರಸಾದ್ (Guruprasad) ಸಿನಿಮಾ ಕೈಗೆತ್ತಿಕೊಂಡರೇ ಅದು ಯಾವತ್ತು ಶುರುವಾಗತ್ತೋ, ಯಾವತ್ತು ಮುಗಿಯತ್ತೋ ಅವರಿಗೇ ಗೊತ್ತಿರುವುದಿಲ್ಲ. ಆದರೆ, ಈ ಬಾರಿ ಹಾಗಾಗಿಲ್ಲ. ‘ರಂಗನಾಯಕ’ ಚಿತ್ರವನ್ನು ಅತೀ ವೇಗದಲ್ಲಿ ಚಿತ್ರೀಕರಣ ಮುಗಿಸಿ ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ ಇವರ ನಿರ್ದೇಶನದಲ್ಲಿ ಮೂಡಿ ಬಂದ ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ ಅವಧಿಗೂ ಮೀರಿ ತಯಾರಾಗಿದ್ದವು. ಇವುಗಳ ನಂತರ ಸೆಟ್ಟೇರಿದ ‘ಅದೇಮಾ’ ನಾಲ್ಕು ವರ್ಷಗಳಾದರೂ ಇನ್ನೂ ಮುಗಿದಿಲ್ಲ. ಈ ನಡುವೆ ಮುಹೂರ್ತ ಕಂಡ ‘ರಂಗನಾಯಕ’ ಚಿತ್ರ ಕೂಡ ಬೇಗ ಬರುವುದು ಅನುಮಾನ ಎನ್ನಲಾಗಿತ್ತು. ಆದರೆ, ಅನುಮಾನವನ್ನು ದೂರು ಮಾಡಿದ್ದರು ಗುರು.

    ‘ರಂಗನಾಯಕ’ ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಮೂರನೇ ಚಿತ್ರ. ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳು ಗೆದ್ದಿವೆ. ನಿರ್ಮಾಪಕರಿಗೂ ಹಣ ತಂದು ಕೊಟ್ಟಿವೆ. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿವೆ. ಹೀಗಾಗಿ ಮೂರನೇ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಮೂಡಿದೆ.

     

    ಈ ಹಿಂದಿನ ಎರಡೂ ಸಿನಿಮಾಗಳಲ್ಲಿಯೂ ಗುರುಪ್ರಸಾದ್ ವಿಡಂಬನೆಯನ್ನೇ ಪ್ರಧಾನವಾಗಿಟ್ಟುಕೊಂಡು ಚಿತ್ರಕಥೆ ಬರೆದಿದ್ದರು. ರಂಗನಾಯಕ ಸಿನಿಮಾ ಕೂಡ ಅದೇ ಮಾದರಿಯಲ್ಲಿದೆಯಂತೆ. ಕಲಾವಿದರ ಬದುಕಿನ ಮತ್ತೊಂದು ಮುಖವನ್ನು ತೆರೆದಿಡುವ ಪ್ರಯತ್ನವನ್ನು ಗುರು ಪ್ರಸಾದ್ ಮಾಡಿದ್ದಾರಂತೆ.

  • ನಟ ಜಗ್ಗೇಶ್ ಹುಟ್ಟು ಹಬ್ಬಕ್ಕೆ ಡಬಲ್ ಧಮಾಕಾ

    ನಟ ಜಗ್ಗೇಶ್ ಹುಟ್ಟು ಹಬ್ಬಕ್ಕೆ ಡಬಲ್ ಧಮಾಕಾ

    ನ್ನಡ ಸಿನಿಮಾ ರಂಗದ ಹೆಸರಾಂತ ಹಾಸ್ಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಅವರ ಹುಟ್ಟು ಹಬ್ಬಕ್ಕೆ (Birthday) ನಾಡಿನ ಅನೇಕ ದಿಗ್ಗಜರು, ಕಲಾವಿದರು, ರಾಜಕಾರಣಿಗಳು ಶುಭಾಶಯ ಕೋರಿದ್ದಾರೆ. ಜೊತೆಗೆ ಅವರು ನಟಿಸಿದ ಸಿನಿಮಾ ತಂಡದವರು ಸರ್  ಪ್ರೈಸ್ ರೀತಿಯಲ್ಲಿ ಉಡುಗೊರೆಯನ್ನು ನೀಡಿದ್ದಾರೆ. ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದ ‘ರಂಗನಾಯಕ’ (Ranganayaka) ಚಿತ್ರ ತಂಡ ಮತ್ತು ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ (Raghavendra Stores) ಚಿತ್ರತಂಡ ಇಂದು ವಿಭಿನ್ನ ರೀತಿಯಲ್ಲಿ ಜಗ್ಗೇಶ್ ಹುಟ್ಟು ಹಬ್ಬ ಆಚರಿಸಿವೆ.

    ಗುರು ಪ್ರಸಾದ್ ನಿರ್ದೇಶನದಲ್ಲಿ ತಯಾರಾದ ‘ರಂಗನಾಯಕ’ ಚಿತ್ರದ ಹೊಸ ಪೋಸ್ಟರ್ ಅನ್ನು ಜಗ್ಗೇಶ್ ಹುಟ್ಟು ಹಬ್ಬಕ್ಕಾಗಿಯೇ ರಿಲೀಸ್ ಮಾಡಿದ್ದು, ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾದ ರಿಲೀಸ್ ಡೇಟ್ ಘೋಷಣೆಯಾಗಿದೆ. ಏಪ್ರಿಲ್ 28 ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದನ್ನೂ ಓದಿ: ಇಂದು ಜಿನಿವಾ ನಗರದಲ್ಲಿ ‘ಕಾಂತಾರ’ ಚಿತ್ರದ ಪ್ರದರ್ಶನ

    ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು ಜಗ್ಗೇಶ್. ಕುಟುಂಬ ಸಮೇತ ಪ್ರಧಾನಿಯನ್ನು ಭೇಟಿ ಮಾಡಿ, ಅವರ ಆರ್ಶಿವಾದ ಪಡೆದಿದ್ದರು. ತಾವು ಆರಾಧಿಸುವ ರಾಯರ ಮೂರ್ತಿಯನ್ನು ಮೋದಿಗೆ ಉಡುಗೊರೆಯಾಗಿ ನೀಡಿ ಬಂದಿದ್ದರು. ಆ ಕ್ಷಣವನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದರು.

    ಈ ಬಾರಿಯ ಹುಟ್ಟು ಹಬ್ಬದ ಮತ್ತೊಂದು ವಿಶೇಷ ಎಂದರೆ ಜಗ್ಗೇಶ್ ಇದೀಗ 60ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅರವತ್ತನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರು ವಿಶೇಷ ಪೂಜೆ ಮತ್ತು ರಾಯರ ದರ್ಶನಕ್ಕೂ ಹೋಗಿ ಬಂದಿದ್ದಾರೆ. ಜಗ್ಗೇಶ್ ಅವರಿಗೆ ಇಡೀ ಚಿತ್ರತಂಡ ಶುಭಾಶಯ ತಿಳಿಸಿದೆ.

  • ರಾಜಕೀಯ- ಇಂಗ್ಲಿಷ್ ಬಳಕೆ, ರಂಗನಾಯಕನಿಗೆ ಕರಾವಳಿಯಿಂದ ಆರಂಭಿಕ ವಿರೋಧ

    ರಾಜಕೀಯ- ಇಂಗ್ಲಿಷ್ ಬಳಕೆ, ರಂಗನಾಯಕನಿಗೆ ಕರಾವಳಿಯಿಂದ ಆರಂಭಿಕ ವಿರೋಧ

    ಉಡುಪಿ: ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ದ ಜೋಡಿ ‘ರಂಗನಾಯಕ’ನಾಗಿ ರೀ ಎಂಟ್ರಿ ಕೊಡುತ್ತಿದ್ದಾರೆ. 2020ರಲ್ಲಿ ಗುರುಪ್ರಸಾದ್ ಡೈರೆಕ್ಷನ್, ಜಗ್ಗೇಶ್ ಅಭಿನಯದ ಚಿತ್ರ ರಿಲೀಸ್ ಆಗಲಿದ್ದು, ಟೀಸರ್ ಗದ್ದಲ ಎಬ್ಬಿಸಿದೆ. ಯಕ್ಷಗಾನಕ್ಕೆ ಅಪಮಾನ ಮಾಡಿದ್ದಾರೆ ಎಂಬುದು ಕರಾವಳಿಯ ಯಕ್ಷ ಪ್ರೇಮಿಗಳ ಆರೋಪ.

    ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಮೂಲಕ ಸೂಪರ್ ಹಿಟ್ ಜೋಡಿಯಾಗಿರುವ ಜಗ್ಗೇಶ್ ಮತ್ತು ಗುರುಪ್ರಸಾದ್ ಮತ್ತೆ ಒಂದಾಗುತ್ತಿದ್ದಾರೆ. ಚಿತ್ರಕ್ಕೆ ರಂಗನಾಯಕ ಎನ್ನುವ ನಾಮಕರಣವಾಗಿದೆ. ಟೀಸರ್ ಬಿಡುಗಡೆಯಾಗಿ ಬಹಳ ಪ್ರಚಾರ ಗಿಟ್ಟಿಸಿದೆ. ಹೊಸ ಚಿತ್ರ ರಂಗನಾಯಕದ ಟೀಸರ್ ಯಕ್ಷಗಾನ ಅಭಿಮಾನಿಗಳ ಮತ್ತು ಕಲಾವಿದರ ಕಣ್ಣು ಕೆಂಪು ಮಾಡಿದೆ. ಯಕ್ಷಗಾನ ಶೈಲಿಯ ಟೀಸರಿನಲ್ಲಿ ಇಂಗ್ಲಿಷ್ ಮಿಕ್ಸ್ ಆಗಿದೆ. ಆರಂಭದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಚಿಹ್ನೆ ಬಳಸಲಾಗಿದ್ದು, ಯಕ್ಷಗಾನವನ್ನು ಅಪಭ್ರಂಶ ಮಾಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾಗವತಿಕೆಯ ಹಲವೆಡೆ ಇಂಗ್ಲಿಷ್ ಶಬ್ದ ಪ್ರಯೋಗ ಮಾಡಲಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬಹಳ ವಿರೋಧಿ ಚರ್ಚೆಯಾಗುತ್ತಿದೆ. ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಯಕ್ಷಗಾನ ಪ್ರೇಮಿಗಳು, ಪ್ರಸಂಗಕರ್ತರು, ಹಿಮ್ಮೇಳ ಮುಮ್ಮೇಳ ಕಲಾವಿದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಕ್ಷಗಾನಕ್ಕೆ ತನ್ನದೇ ಆದ ಮಹತ್ವ ಇದೆ. ದೇವಸ್ಥಾನಗಳ ಮೂಲಕ ಮೇಳಗಳನ್ನು ಕಟ್ಟಿ ಪುರಾಣದ ಕಥೆಗಳನ್ನು ಮತ್ತು ಸಾಮಾಜಿಕ ಕಾಳಜಿಯಿರುವ ಪ್ರಸಂಗಗಳನ್ನು ಮೇಳಗಳು ಪ್ರದರ್ಶನ ಮಾಡುತ್ತದೆ. ಆದರೆ ರಂಗನಾಯಕ ಚಿತ್ರ ತಂಡ ಎಲ್ಲಾ ಸಂಪ್ರದಾಯ ಚೌಕಟ್ಟನ್ನು ಗಾಳಿಗೆ ತೂರಿದೆ ಎಂದು ಯಕ್ಷಾರಾಧಕರು ಗಂಭೀರವಾಗಿ ಆರೋಪಿಸುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹವ್ಯಾಸಿ ಕಲಾವಿದ ಸಂದೇಶ್ ಶೆಟ್ಟಿ ಆರ್ಡಿ, ಯಕ್ಷಗಾನದ ಪದ್ಯದಲ್ಲಿ ಆಂಗ್ಲ ಪದ ಬಳಕೆ ಮತ್ತು ರಾಜಕೀಯ ತೂರಿಕೊಂಡಿರುವುದಕ್ಕೆ ನಮ್ಮ ಆಕ್ಷೇಪ. ಕಾಂಗ್ರೆಸ್, ಬಿಜೆಪಿಯ ಚಿಹ್ನೆ ಬಳಸಿರುವುದು ಸರಿಯಲ್ಲ. ಯಕ್ಷಗಾನ ದೇವರ ಹೆಸರಿನಲ್ಲಿ, ನಂಬಿಕೆಯ ಆಧಾರದಲ್ಲಿ ನಡೆಯುತ್ತಿದೆ. ಹರಕೆಯ ರೂಪದಲ್ಲಿ ಆಟ ಆಡಿಸುವವರು ಯಕ್ಷಗಾನವನ್ನು ದೇವರ ಸೇವೆಯಂತೆ ಕಾಣುತ್ತಾರೆ. ಹೀಗಿರುವಾಗ ಜನರ ಭಾವನೆಗಳ, ನಂಬಿಕೆ ಶ್ರದ್ಧೆಯ ಜೊತೆ ಆಟವಾಡುವುದು ಸರಿಯಲ್ಲ ಎಂದು ಹೇಳಿದರು.

    ಮೋದಿ ಪ್ರಧಾನಿಯಾದರೆ ಯಕ್ಷಗಾನ ಮಾಡಿಸುವ ಹರಕೆ ಹೊತ್ತಿರುವ ಉದಾಹರಣೆ ಕರಾವಳಿಯಲ್ಲಿದೆ. ಯಕ್ಷಗಾನ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ತರ್ಜುಮೆಗೊಂಡು ಪ್ರದರ್ಶನವಾಗಿದ್ದೂ ಇದೆ. ಇಷ್ಟಕ್ಕೂ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಾಡಿನ ಗಂಡುಕಲೆಗೆ ಅಪಮಾನ ಮಾಡಬೇಡಿ ಎಂದು ಚಿತ್ರದ ಡೈರೆಕ್ಟರ್ ಗುರುಪ್ರಸಾದ್ ಅವರಲ್ಲಿ ಕರಾವಳಿಯ ಯಕ್ಷಗಾನ ಕಲಾವಿದರು ವಿನಂತಿ ಮಾಡಿಕೊಂಡಿದ್ದಾರೆ.

    https://www.youtube.com/watch?v=iQjHpDHxnf8

  • ದಸರಾಗೆ ‘ರಂಗನಾಯಕ’ನ ಟೀಸರ್ ಉಡುಗೊರೆ!

    ದಸರಾಗೆ ‘ರಂಗನಾಯಕ’ನ ಟೀಸರ್ ಉಡುಗೊರೆ!

    ಬೆಂಗಳೂರು: ಕೆಲದಿನಗಳ ಹಿಂದಷ್ಟೇ ನವರಸ ನಾಯಕ ಜಗ್ಗೇಶ್ ಮತ್ತು ಮಠ ಗುರುಪ್ರಸಾದ್ ಕಾಂಬಿನೇಷನ್ನಿನಲ್ಲೊಂದು ಸಿನಿಮಾ ಬರುವ ಸುಳಿವು ಸಿಕ್ಕಿತ್ತು. ಇಬ್ಬರೂ ಸಹ ಸಾಮಾಜಿಕ ಜಾಲತಾಣದ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದರು. ಇವರಿಬ್ಬರ ಕಾಂಬಿನೇಷನ್ನಿನ ಚಿತ್ರಕ್ಕೆ ಬಿರುಸಿನಿಂದ ತಯಾರಿ ಆರಂಭವಾಗಿದೆ. ಇದಕ್ಕೆ ‘ರಂಗನಾಯಕ’ ಎಂಬ ಟೈಟಲ್ ಕೂಡಾ ಫಿಕ್ಸಾಗಿದೆ. ಇದೇ ಹೊತ್ತಿನಲ್ಲಿ ಜಗ್ಗೇಶ್, ದಸರಾಗೆ ರಂಗನಾಯಕನ ಟೀಸರ್ ಉಡುಗೊರೆ ಕೊಡುವ ವಿಚಾರವನ್ನೂ ಕೂಡಾ ಸೋಶಿಯಲ್ ಮೀಡಿಯಾ ಮೂಲಕವೇ ಹೇಳಿಕೊಂಡಿದ್ದಾರೆ.

    ಗುರು ರಾಘವೇಂದ್ರ ಸ್ವಾಮಿಯ ಪರಮ ಭಕ್ತರಾಗಿರುವ ಜಗ್ಗೇಶ್ ರಾಯರ ಬೃಂದಾವನದ ಮುಂದೆಯೇ ಈ ಚಿತ್ರಕ್ಕೆ ಆಶೀರ್ವಾದ ಪಡೆಯೋ ಮೂಲಕ ಶುಭಾರಂಭ ಮಾಡಿರೋದಾಗಿ ಹೇಳಿಕೊಂಡಿದ್ದಾರೆ. ಇದರ ಜೊತೆಗೇ ಜೋರಾಗಿಯೇ ತಯಾರಿ ನಡೆಸುತ್ತಿರೋ ಜಗ್ಗೇಶ್ ಮತ್ತು ಗುರು ಇದೇ ತಿಂಗಳ 8ನೇ ತಾರೀಕಿನಂದು ಟೀಸರ್ ಬಿಡುಗಡೆ ಮಾಡಲು ತಯಾರಾಗಿದ್ದಾರೆ. ಸಂಜೆ 7 ಗಂಟೆಗೆ ಸರಿಯಾಗಿ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ರಂಗನಾಯಕನ ಟೀಸರ್ ಬಿಡುಗಡೆಯಾಗಲಿದೆ.

    ಇದು ಅಖಂಡ ಹತ್ತು ವರ್ಷಗಳ ನಂತರದ ಪುನರ್ಮಿಲನ. ಮಠ ಮತ್ತು ಎದ್ದೇಳು ಮಂಜುನಾಥದಂಥಾ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು ಗುರುಪ್ರಸಾದ್ ಮತ್ತು ಜಗ್ಗೇಶ್ ಜೋಡಿ. ಈ ಎರಡು ಚಿತ್ರಗಳು ಅದೆಂಥಾ ಕ್ರೇಜ್ ಸೃಷ್ಟಿಸಿದ್ದವೆಂದರೆ, ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮತ್ತೊಂದು ಚಿತ್ರಕ್ಕಾಗಿ ಪ್ರೇಕ್ಷಕರೇ ಬೇಡಿಕೆ ಇಡಲಾರಂಭಿಸಿದ್ದರು. ಆದರೆ ಈ ಎರಡು ಚಿತ್ರಗಳ ನಂತರದಲ್ಲಿ ಗುರು ಮತ್ತು ಜಗ್ಗಣ್ಣನ ನಡುವೆ ವೈಮನಸ್ಯ ಹೊಗೆಯಾಡಿತ್ತೆಂಬ ರೂಮರುಗಳೂ ತೇಲಿ ಬರುತ್ತಾ ಹತ್ತು ವರ್ಷಗಳ ಕಾಲ ಇಬ್ಬರೂ ದೂರಾಗಿದ್ದರು. ಇದೀಗ ರಂಗನಾಯಕ ಮೂಲಕ ಅವರು ಮತ್ತೆ ಒಂದಾಗಿರೋದೇ ಪ್ರೇಕ್ಷಕರಲ್ಲಿ ಖುಷಿ ಮೂಡಿಸಿದೆ.

    ರಂಗನಾಯಕ ಮೂಲಕ ಈ ಜೋಡಿ ಮತ್ತೊಂದು ಸೂಪರ್ ಹಿಟ್ ಚಿತ್ರ ಕೊಡುವ ಎಲ್ಲ ಲಕ್ಷಣಗಳೂ ಆರಂಭಿಕವಾಗಿಯೇ ಕಾಣಿಸಲಾರಂಭಿಸಿದೆ. ಅಂದಹಾಗೆ ಇದು ಸಂಪೂರ್ಣವಾಗಿ ಮನೋರಂಜನಾತ್ಮಕ ಚಿತ್ರ. ಗುರು ಮತ್ತು ಜಗ್ಗೇಶ್ ಜೊತೆಯಾಗುತ್ತಾರೆಂದರೆ ಹೊಟ್ಟೆ ಹುಣ್ಣಾಗುವಂತೆ ನಗಿಸೋ ನಿರೀಕ್ಷೆ ಎಲ್ಲರಲ್ಲಿಯೂ ಮೂಡಿಕೊಳ್ಳುತ್ತೆ. ಅದಕ್ಕೆ ತಕ್ಕುದಾದ ಕಥೆಯನ್ನೇ ಗುರುಪ್ರಸಾದ್ ಕೂಡಾ ಹೊಸೆದಿದ್ದಾರಂತೆ. ಅದರ ಗುಣ ಲಕ್ಷಣಗಳು ಟೀಸರ್ ಮೂಲಕ ಜಾಹೀರಾಗಲಿದೆ.