Tag: Ranganatittu

  • ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ರದ್ದು

    ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ರದ್ದು

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದ ಹಿನ್ನೆಲೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ.

    ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್‌ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹೋಗುತ್ತಿರುತ್ತಾರೆ. ಆದರೆ ಸದ್ಯ ಕೆಆರ್‌ಎಸ್ ಡ್ಯಾಂನಲ್ಲಿ ಒಳಹರಿವು ಹಾಗೂ ಹೊರಹರಿವು ಹೆಚ್ಚಾಗಿದ್ದು, ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಇದರಿಂದಾಗಿ ಬೋಟಿಂಗ್ ರದ್ದು ಮಾಡಲಾಗಿದೆ.

    ಕಾವೇರಿ ನದಿ ರಭಸವಾಗಿ ಹರಿಯುತ್ತಿದ್ದು, ಬೋಟ್ ಮೂಲಕ ನಡುಗಡ್ಡೆ ಬಳಿ ಹೋಗುವುದಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ದೂರದಲ್ಲೇ ನಿಂತು ಪಕ್ಷಿ ನೋಡಿ ಪ್ರವಾಸಿಗರು ವಾಪಸ್ ಹೋಗುತ್ತಿದ್ದಾರೆ. ಒಳಹರಿವು 10 ಸಾವಿರ ಕ್ಯೂಸೆಕ್‌ಗೆ ಇಳಿಯುವ ತನಕ ಬೋಟಿಂಗ್‌ಗೆ ಬ್ರೇಕ್ ಹಾಕಲಾಗಿದೆ. ಹೊರಹರಿವು ಮತ್ತಷ್ಟು ಹೆಚ್ಚಾದ್ರೆ ಪಕ್ಷಿ ಸಂಕುಲಕ್ಕೂ ಎಫೆಕ್ಟ್ ಆಗುವ ಸಾಧ್ಯತೆಯಿದೆ.

    ಈಗಾಗಲೇ ನದಿ ಮಧ್ಯೆ ಇರುವ ನಡುಗಡ್ಡೆಗಳು ಅರ್ಧದಷ್ಟು ಮುಳುಗಡೆಯಾಗಿವೆ. ಒಂದು ಲಕ್ಷ ಕ್ಯೂಸೆಕ್‌ಗೆ ಹೊರಹರಿವು ಏರಿಕೆಯಾದರೆ ಭಾಗಶಃ ನಡುಗಡ್ಡೆಗಳು ಮುಳುಗುವ ಭೀತಿ ಶುರುವಾಗಿದೆ. ಆ ಸಮಯದಲ್ಲಿ ಪಕ್ಷಿಗಳ ಗೂಡು, ಮೊಟ್ಟೆಗಳು ಕೊಚ್ಚಿ ಹೋಗುವ ಆತಂಕ ಎದುರಾಗಿದೆ.

  • ರಂಗನತಿಟ್ಟು ಪಕ್ಷಿಧಾಮದಲ್ಲಿ ಮತ್ತೆ ಬೋಟಿಂಗ್ ಸ್ಥಗಿತ!

    ರಂಗನತಿಟ್ಟು ಪಕ್ಷಿಧಾಮದಲ್ಲಿ ಮತ್ತೆ ಬೋಟಿಂಗ್ ಸ್ಥಗಿತ!

    ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರ ಹರಿವು 26 ಸಾವಿರ ಕ್ಯೂಸೆಕ್‍ಗೆ ಏರಿಕೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ.

    ಕಳೆದ ಹಲವು ದಿನಗಳ ಹಿಂದೆ ಕಾವೇರಿ ನದಿಯಲ್ಲಿ ಪ್ರವಾಹದ ಭೀತಿ ಉಂಟಾಗಿದ್ದರಿಂದ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಿ, ಬೋಟಿಂಗ್ ಸ್ಥಗಿತಗೊಳಿಸಲಾಗಿತ್ತು. ಆದರೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಎರಡು ದಿನಗಳ ಹಿಂದಷ್ಟೆ ಬೋಟಿಂಗ್ ಪುನರಾರಂಭ ಮಾಡಲಾಗಿತ್ತು.

    ಇದೀಗ ಕಾವೇರಿ ನದಿಯಲ್ಲಿ ಮತ್ತೆ ಹೊರಹರಿವು 26 ಸಾವಿರ ಕ್ಯೂಸೆಕ್‍ಗೆ ಹೆಚ್ಚಳವಾಗಿರುವುದರಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್‍ಗೆ ಮಾತ್ರ ನಿಷೇಧ ಹೇರಲಾಗಿದೆ. ಹೀಗಾಗಿ ಮುಂಜಾಗ್ರತವಾಗಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಆದರೆ ಎಂದಿನಂತೆ ಪಕ್ಷಿಧಾಮ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೆಆರ್‌ಎಸ್‌ನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ- ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿ

    ಕೆಆರ್‌ಎಸ್‌ನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ- ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿ

    ಮಂಡ್ಯ: ಕೆಆರ್‌ಎಸ್‌ ನಿಂದ 1 ಲಕ್ಷದ 30 ಸಾವಿರ ಕ್ಯೂಸೆಕ್‍ಗೂ ಭಾರೀ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಐತಿಹಾಸಿ ವೆಲ್ಲೆಸ್ಲಿ ಸೇತುವೆಯನ್ನು ಸ್ಪರ್ಶಿಸಿ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದ್ದು, ಸೇತುವೆ ಮುಳುಗುವ ಭೀತಿಯಲ್ಲಿದೆ.

    ಪರಿಣಾಮ ಜಾಗೃತರಾದ ಅಧಿಕಾರಿಗಳು ಹಾಗೂ ಪೊಲೀಸರು ಸೇತುವೆಯ ಎರಡೂ ಬದಿ ಕಾವಲು ನಿಂತು ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಿದ್ದಾರೆ. ಇತ್ತ ರಂಗನತಿಟ್ಟು ಪಕ್ಷಿಧಾಮ ಜಲಾವೃತವಾಗಿ ಪಕ್ಷಿ ಸಂಕುಲಕ್ಕೆ ಆತಂಕ ಎದುರಾಗಿದೆ.

    ಕಾವೇರಿ ಜಲಾನಯನದಲ್ಲಿ ಮಳೆ ಆರ್ಭಟಿಸುತ್ತಿದ್ದು, ಕೆಆರ್‌ಎಸ್‌ ಜಲಾಶಯಕ್ಕೆ ಒಂದು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ಅಪಾಯದ ಮಟ್ಟ ಮೀರುತ್ತಿದ್ದು, ಅನಿವಾರ್ಯವಾಗಿ ಅಧಿಕ ಪ್ರಮಾಣದ ನೀರನ್ನು ಹೊರ ಬಿಡಬೇಕಾಗಿದೆ. ಇದರಿಂದಾಗಿ ಕಾವೇರಿ ನದಿಪಾತ್ರದ ದೇವಾಲಯ, ಜಮೀನು ಜಲಾವೃತವಾಗಿ ಪ್ರವಾಹದ ಭೀತಿ ಎದುರಾಗಿದೆ.

    ಪಶ್ಚಿಮವಾಹಿನಿ ಬಳಿ ಶ್ರೀರಾಮ, ಶ್ರೀಕೃಷ್ಣ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಜಲಾವೃತವಾಗಿದೆ. ನಿಮಿಷಾಂಭ ದೇವಾಲಯದ ಮೆಟ್ಟಿಲುಗಳವರೆಗೂ ನೀರು ಆವರಿಸಿಕೊಂಡಿದೆ. ಇತ್ತ ಪ್ರವಾಹ ಮಟ್ಟ ಹೆಚ್ಚಾಗಿದ್ದರಿಂದ ನದಿಗೆ ಇಳಿಯದಂತೆ ಬ್ಯಾರಿಕೇಡ್ ಹಾಕಿ ಪೊಲೀಸ್ ಕಾವಲು ನಿಂತಿದ್ದಾರೆ.

    ಕಾವೇರಿ ನದಿ ಪಾತ್ರದ ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಎಡಮುರಿ, ಬಲಮುರಿ, ರಂಗನತಿಟ್ಟು, ಮುತ್ತತ್ತಿ ಸೇರಿದಂತೆ ಹಲವೆಡೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೆಆರ್‌ಎಸ್‌ ಜಲಾಶಯ ತುಂಬದೆ ಸತತ ಬರಗಾಲದಿಂದ ಕಂಗೆಟ್ಟ ಮಂಡ್ಯ ಜನ ಇದೀಗ ಕಾವೇರಿ ನದಿ ಹರಿಯುತ್ತಿರುವ ರಭಸಕ್ಕೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಪ್ರವಾಹದ ಭೀತಿ ಎದುರಾಗಿದ್ದರಿಂದ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಗೆ ನೀಡಲಾಗಿದೆ. ಸ್ವತಃ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಕಾವೇರಿ ನದಿ ಪಾತ್ರದ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಳುಗಡೆ ಭೀತಿಯಲ್ಲಿ ರಂಗನತಿಟ್ಟು, ಕೆಆರ್ ಎಸ್ ಉದ್ಯಾನವನಕ್ಕೆ ನಿಷೇಧ

    ಮುಳುಗಡೆ ಭೀತಿಯಲ್ಲಿ ರಂಗನತಿಟ್ಟು, ಕೆಆರ್ ಎಸ್ ಉದ್ಯಾನವನಕ್ಕೆ ನಿಷೇಧ

    – ವೈಮಾನಿಕ ಕ್ಯಾಮೆರಾದಲ್ಲಿ ಜೀವನದಿ ಕಾವೇರಿ ನದಿ ಸೆರೆ

    ಮಂಡ್ಯ: ಅನೇಕ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗುತ್ತಿದೆ. ಮತ್ತೊಂದೆಡೆ ಪ್ರವಾಹದ ಭೀತಿಯಿಂದ ಜನರು ಭಯಗೊಂಡಿದ್ದಾರೆ.

    ಜಿಲ್ಲೆಯ ಕನ್ನಂಬಾಡಿ ಅಣೆಕಟ್ಟಿನಿಂದ ಬೃಹತ್ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ಬೃಂದಾವನ ಬೋಟಿಂಗ್ ಸ್ಥಳದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು, ರಂಗನತಿಟ್ಟು ಪಕ್ಷಿಧಾಮ ಮುಳುಗಡೆಯಾಗಿದೆ.

    ವೈಮಾನಿಕ ಕ್ಯಾಮರಾದ ದೃಶ್ಯ

    ಮಳೆಯಿಂದ ಭರ್ತಿಯಾಗಿದ್ದ ಕೆಆರ್ ಎಸ್ ಡ್ಯಾಂನಿಂದ ಕಳೆದ ಎರಡು ದಿನಗಳಿಂದ ಅಧಿಕ ಪ್ರಮಾಣದ ನೀರನ್ನು ಬಿಡಲಾಗುತ್ತಿದೆ. ಒಟ್ಟು 56,000 ಕ್ಯೂಸೆಕ್ ನೀರು ಕೆಆರ್‍ಎಸ್ ಜಲಾಶಯದಿಂದ ಹೊರ ಹೋಗುತ್ತಿದೆ. ಆದ್ದರಿಂದ ಜಲಾಶಯದ ಸುತ್ತಮುತ್ತಲಿನ ಪ್ರದೇಶಗಳು ಮುಳುಗುವ ಹಂತಕ್ಕೆ ಬಂದಿದ್ದು, ಇದರಿಂದ ಬೃಂದಾವನ ಬೋಟಿಂಗ್ ಸ್ಥಳದಲ್ಲಿ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ.

    ಭಾರೀ ಪ್ರಮಾಣದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಉದ್ಯಾನವನಕ್ಕೆ ಸಾರ್ವಜನಿಕರಿಗೆ ನಿಷೇಧವನ್ನು ಮಾಡಲಾಗಿದೆ. ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾದ್ದರಿಂದ ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮ ಮುಳುಗಡೆ ಭೀತಿಯಲ್ಲಿದೆ. ಆದ್ದರಿಂದ ಪಕ್ಷಿಧಾಮಕ್ಕೆ ಡಿಸಿಎಫ್ ಸಿದ್ದರಾಮಪ್ಪ ಭೇಟಿ ನೀಡಿದ್ದು, ಪ್ರವಾಸಿಗರ ಸುರಕ್ಷತಾ ಕ್ರಮಗಳ ಬಗೆಗೆ ಪರಿಶೀಲನೆ ನಡೆಸಿದ್ದಾರೆ.

    ವೈಮಾನಿಕ ಕ್ಯಾಮರಾದ ದೃಶ್ಯ

    ಕನ್ನಡ ನಾಡಿನ ಜೀವನದಿ ಕಾವೇರಿ ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಬ್ರಿಟಿಷರ ಕಾಲದ ವೆಲ್ಲೆಸ್ಲಿ ಸೇತುವೆ ಮೂಲಕ ಹರಿಯುತ್ತಿರುವ ದೃಶ್ಯ ವೈಮಾನಿಕ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈದುಂಬಿ ಹರಿಯುತ್ತಿರುವ ಕಾವೇರಿಯನ್ನು ನೋಡಲು ಜನಸಾಗರವೇ ಸೇರಿದೆ.