Tag: Ranganatha Swamy Temple

  • ಬೆಳೆಗೆರೆ ಲಕ್ಷ್ಮಿರಂಗನಾಥಸ್ವಾಮಿ ದೇಗುಲಕ್ಕೆ ಕನ್ನ – ಬೀಗ ಮುರಿದು ದೇವರ ಆಭರಣ ಕದ್ದ ಖದೀಮರು

    ಬೆಳೆಗೆರೆ ಲಕ್ಷ್ಮಿರಂಗನಾಥಸ್ವಾಮಿ ದೇಗುಲಕ್ಕೆ ಕನ್ನ – ಬೀಗ ಮುರಿದು ದೇವರ ಆಭರಣ ಕದ್ದ ಖದೀಮರು

    ಚಿತ್ರದುರ್ಗ: ದೇಗುಲದ ಬೀಗ ಮುರಿದು ದೇವರಿಗೆ ಹಾಕಿದ್ದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಚಳ್ಳಕೆರೆಯ (Challakere) ಬೆಳಗೆರೆ (Belagere) ಲಕ್ಷ್ಮಿರಂಗನಾಥಸ್ವಾಮಿ ದೇವಾಲಯದಲ್ಲಿ (Ranganatha Swamy Temple) ಶನಿವಾರ ತಡರಾತ್ರಿ ನಡೆದಿದೆ.

    ವಿಗ್ರಹದ ಮೇಲಿದ್ದ ಬೆಲೆಬಾಳುವ ಆಭರಣಗಳಾದ ಕಿರೀಟ, ಕಣ್ಣು, ಮೀಸೆ ಸೇರಿದಂತೆ ಬೆಳ್ಳಿ ಕುದುರೆಯನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಊರಿನ ಹೊರ ವಲಯದಲ್ಲಿ ದೇವಾಲಯ ಇರುವುದರಿಂದ ರಾತ್ರಿ ವೇಳೆ ಯಾರು ಅಲ್ಲಿ ಓಡಾಡುವುದಿಲ್ಲ. ಇದನ್ನೇ ಬಳಸಿಕೊಂಡು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತರ ಜೊತೆ ಪಾರ್ಟಿ ವೇಳೆ ಗಲಾಟೆ – ಬೆಂಗಳೂರಲ್ಲಿ ಯುವಕನ ಬರ್ಬರ ಹತ್ಯೆ

    ಒಂದು ವರ್ಷದ ಹಿಂದೆ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿತ್ತು. ಈ ವೇಳೆ ಹಳೆಯ ಆಭರಣಗಳ ಜೊತೆಗೆ ದೇವರಿಗೆ ಹೊಸ ಆಭರಣಗಳನ್ನು ಮಾಡಿಸಿ ಹಾಕಲಾಗಿತ್ತು. ಈಗ ಎಲ್ಲಾ ಕಳ್ಳರ ಪಾಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

    ಈ ಘಟನೆಯಿಂದಾಗಿ ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ದೇಗುಲಕ್ಕೆ ಕನ್ನ ಹಾಕಿರುವ ಕಳ್ಳರ ವಿರುದ್ಧ ಆಕ್ರೋಶ ಹೊರಹಾಕಿರುವ ಗ್ರಾಮಸ್ಥರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಷ್ಯಾ ದಂಗೆ ಮಾತುಕತೆ ಮೂಲಕ ದಮನ – ಬೆಲಾರಸ್ ಅಧ್ಯಕ್ಷ ಮಧ್ಯಸ್ತಿಕೆಯಿಂದ ಮಾರ್ಗ ಮಧ್ಯೆಯೇ ಹೋರಾಟ ಕೈಬಿಟ್ಟ ಪ್ರಿಗೋಜಿನ್

  • ಬಿಳಿಗಿರಿರಂಗನಿಗೆ ಈ ಬಾರಿಯೂ ಹಳೇನೋಟಿನ ಕಾಣಿಕೆ

    ಬಿಳಿಗಿರಿರಂಗನಿಗೆ ಈ ಬಾರಿಯೂ ಹಳೇನೋಟಿನ ಕಾಣಿಕೆ

    ಚಾಮರಾಜನಗರ: ಹಸಿರ ಕಾನನದಲ್ಲಿ ನೆಲೆನಿಂತಿರುವ ಯಳಂದೂರು ತಾಲೂಕಿನ ಬಿಳಿಗಿರರಂಗನಾಥನಿಗೆ 5 ತಿಂಗಳಿನಲ್ಲಿ 25 ಲಕ್ಷ ರೂ. ಕಾಣಿಕೆ ಹರಿದುಬಂದಿದೆ. ಆದರೆ ಇದರಲ್ಲಿ 60,500 ಚಲಾವಣೆಯಾಗದ ಹಳೇ ನೋಟುಗಳು ದೊರೆತಿವೆ.

    ಸೋಮವಾರ ತಡರಾತ್ರಿವರೆಗೆ ನಡೆದ ದೇಗುಲ ಹುಂಡಿ ಎಣಿಕೆಯಲ್ಲಿ 25,29,383 ರೂ. ಸಂಗ್ರಹವಾಗಿದ್ದು, ಈ ಬಾರಿಯೂ ಚಲಾವಣೆಯಾಗದ ಕಂತೆ – ಕಂತೆ ಹಣ ರಂಗಪ್ಪನ ಪಾಲಾಗಿದೆ. 500 ರೂ. ನೋಟಿನ ಕಂತೆಗಳಲ್ಲಿ ಒಟ್ಟು 60,500 ರೂ. ಹಳೇ ನೋಟ್‍ಗಳನ್ನು ಭಕ್ತನೊಬ್ಬ ಹಾಕಿದ್ದಾನೆ. ಈ ಹಿಂದೆ ಸೆಪ್ಟೆಂಬರ್ ನಲ್ಲಿ ನಡೆದ ಹುಂಡಿ ಎಣಿಕೆಯಲ್ಲೂ 55 ಸಾವಿರ ರೂ. ಚಲಾವಣೆಯಾಗದ ನೋಟುಗಳು ಹುಂಡಿಯಲ್ಲಿ ಸಿಕ್ಕಿದ್ದವು.

    ಒಟ್ಟು ಎರಡು ಬಾರಿ ಹುಂಡಿ ಎಣಿಕೆಯಿಂದ 1,15,000 ಹಳೇ ನೋಟುಗಳನ್ನು ಗಿರಿಜನರ ಆರಾಧ್ಯದೈವ ರಂಗನಾಥ ಪಡೆದಿದ್ದಾನೆ. ಒಟ್ಟಿನಲ್ಲಿ ಕೂಡಿಟ್ಟ ಕಪ್ಪು ಹಣವನ್ನು ಭಕ್ತರು ಗೋವಿಂದನ ಪಾದಕ್ಕೆ ಸಮರ್ಪಿಸುತ್ತಿದ್ದಾರೆ.

  • 2 ವರ್ಷಗಳ ಕಾಲ ಬಿಳಿರಂಗನ ಬೆಟ್ಟದ ರಂಗನಾಥ ಸ್ವಾಮಿ ದೇವಾಸ್ಥಾನ ಬಂದ್

    2 ವರ್ಷಗಳ ಕಾಲ ಬಿಳಿರಂಗನ ಬೆಟ್ಟದ ರಂಗನಾಥ ಸ್ವಾಮಿ ದೇವಾಸ್ಥಾನ ಬಂದ್

    ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ್ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಈ ತಿಂಗಳ 15 ರಿಂದ ಮುಂದಿನ ಎರಡು ವರ್ಷಗಳ ಕಾಲ ದೇವಾಲಯವನ್ನು ಮುಚ್ಚಲಾಗುತ್ತಿದೆ.

    ಸುಮಾರು 500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ದೇವಾಲಯ ಶಿಥಿಲಗೊಂಡಿರುವುದರಿಂದ ದೇವಾಲಯವನ್ನು ಸದ್ಯ 2.90 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ಥಿ ಮಾಡಲಾಗುತ್ತಿದೆ. ರಾಜ್ಯ ಪುರಾತತ್ವ ಇಲಾಖೆಯಿಂದ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಮುಂದಿನ ವಾರದಿಂದ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಾರಂಭವಾಗಲಿದೆ.

    ದೇವಸ್ಥಾನದ ಕಾಮಗಾರಿ ಹಿನ್ನೆಲೆಯಲ್ಲಿ ಭಕ್ತಾದಿಗಳು ಮಾರ್ಚ್ 15 ರವರೆಗೆ ರಂಗನಾಥ್ ಸ್ವಾಮಿಯ ದರ್ಶನವನ್ನು ಪಡೆಯಬಹುದಾಗಿದೆ. ಮಾರ್ಚ್ 15ರ ನಂತರ ಪೂಜೆ ವಿಧಿವಿಧಾನಗಳ ಮೂಲಕ ದೇವರ ಹಾಗೂ ಅಮ್ಮನವರ ವಿಗ್ರಹಗಳನ್ನು ಮುಚ್ಚಿಡಲಾಗುತ್ತದೆ. ಮಾರ್ಚ್ 18 ರಂದು ಧಾರ್ಮಿಕ ದತ್ತಿ ಇಲಾಖೆಗೆ ದೇವಾಲಯವನ್ನು ಹಸ್ತಾಂತರ ಮಾಡಲಾಗುತ್ತದೆ. ಈ ಹಿಂದೆ ಇದ್ದ ಪ್ರಾಚೀನ ಶೈಲಿಯ ಮಾದರಿಯಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತದೆ. ಮುಂದಿನ ಎರಡು ವರ್ಷಗಳ ಕಾಲ ದೇವಾಲಯದಲ್ಲಿ ನಡೆಯುವ ಚಿಕ್ಕ ಮತ್ತು ದೊಡ್ಡ ರಥೋತ್ಸವಗಳನ್ನು ಕೂಡ ರದ್ದುಗೊಳಿಸಲಾಗಿದೆ.