Tag: Ranebennur

  • ಕಾರ್ ಕೆಳಗೆ ಸಿಲುಕಿ ಅಪ್ಪಚ್ಚಿಯಾದ ಸ್ಕೂಟಿ – ಸವಾರ ಸಾವು

    ಕಾರ್ ಕೆಳಗೆ ಸಿಲುಕಿ ಅಪ್ಪಚ್ಚಿಯಾದ ಸ್ಕೂಟಿ – ಸವಾರ ಸಾವು

    ಹಾವೇರಿ: ರಾಣೆಬೆನ್ನೂರು ನಗರದ ಪಿ.ಬಿ ರಸ್ತೆಯಲ್ಲಿ ಕಾರ್ ಹರಿದು ಸ್ಕೂಟಿ ಸವಾರ ಸಾವನ್ನಪ್ಪಿದ್ದಾರೆ. ಸ್ಕೂಟಿ ಮೇಲೆ ಕಾರ್ ಹರಿದ ಪರಿಣಾಮ ದ್ವಿಚಕ್ರ ಅಪ್ಪಚ್ಚಿಯಾಗಿದೆ.

    52 ವರ್ಷದ ಶಂಕರಗೌಡ ಪಾಟೀಲ್ ಮೃತ ದ್ವಿಚಕ್ರ ಸವಾರ. ಕಾರ್ ಬಿಜೆಪಿ ಮುಖಂಡ ವಿಶ್ವನಾಥ್ ಪಾಟೀಲ್ ಎಂಬವರಿಗೆ ಸೇರಿದ್ದು ಎನ್ನಲಾಗಿದೆ. ಪೊಲೀಸರು ಕಾರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

    ಸ್ಕೂಟಿಗೆ ಡಿಕ್ಕಿಯಾದ ಕಾರ್ ಡಿವೈಡರ್ ಮೇಲೆ ಬಂದು ನಿಂತಿದೆ. ಸ್ಥಳಕ್ಕೆ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ರಾಣೇಬೆನ್ನೂರು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ರಾಣೆಬೆನ್ನೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ,

  • ಶಿವಮೊಗ್ಗ-ರಾಣೇಬೆನ್ನೂರು ರೈಲ್ವೇ ಕಾಮಗಾರಿ ಶೀಘ್ರ ಪ್ರಾರಂಭ: ಸುರೇಶ್ ಅಂಗಡಿ

    ಶಿವಮೊಗ್ಗ-ರಾಣೇಬೆನ್ನೂರು ರೈಲ್ವೇ ಕಾಮಗಾರಿ ಶೀಘ್ರ ಪ್ರಾರಂಭ: ಸುರೇಶ್ ಅಂಗಡಿ

    ಶಿವಮೊಗ್ಗ: ಶಿವಮೊಗ್ಗ – ಶಿಕಾರಿಪುರ – ರಾಣಿಬೆನ್ನೂರು ರೈಲ್ವೇ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಮುಗಿದ ತಕ್ಷಣ ಯೋಜನೆ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.

    ಶಿವಮೊಗ್ಗ ಮುಖ್ಯ ರೈಲು ನಿಲ್ದಾಣದಲ್ಲಿ ಲಿಫ್ಟ್ ಹಾಗೂ ಅರಸಾಳು ನಿಲ್ದಾಣದಲ್ಲಿ ಮೂಲಸೌಕರ್ಯಗಳು, ಸ್ಟೇಷನ್ ಬಿಲ್ಡಿಂಗ್ (ಮ್ಯೂಸಿಯಂ ಬಿಲ್ಡಿಂಗ್) ಹಾಗೂ ವಿಸ್ತರಣೆಗೊಂಡ ರೈಲ್ವೆ ಫ್ಲಾಟ್ ಫಾರ್ಮ್ ಕಾಮಗಾರಿಗಳನ್ನು ವರ್ಚುವಲ್ ವೇದಿಕೆಯ ಮೂಲಕ ಬೆಳಗಾವಿಯ ತಮ್ಮ ಕಚೇರಿಯಿಂದಲೇ ಉದ್ಘಾಟಿಸಿ ಮಾತನಾಡಿದರು.

    994 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗ-ರಾಣೇಬೆನ್ನೂರ ಹೊಸ ರೈಲು ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ಉಚಿತವಾಗಿ ಭೂಮಿ ಒದಗಿಸುವುದರ ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಶೇ.50 ರಷ್ಟು ಯೋಜನಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಅದೇ ರೀತಿ ದಾವಣಗೆರೆ-ಬೆಂಗಳೂರು ನಡುವೆ ಡಬಲ್ ಲೈನ್ ನಿರ್ಮಾಣಕ್ಕೂ ಜಮೀನು ಒದಗಿಸುವುದಾಗಿ ತಿಳಿಸಿದ್ದಾರೆ. ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದ ತಕ್ಷಣವೇ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮವನ್ನು ಇಲಾಖೆಯ ವತಿಯಿಂದ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    ಶಿವಮೊಗ್ಗ ಪೆಸಿಟ್ ಕಾಲೇಜು ಸಭಾಂಗಣದಲ್ಲಿ ಸಜ್ಜುಗೊಳಿಸಲಾಗಿದ್ದ ವರ್ಚುವಲ್ ವಿಡಿಯೋ ಮೂಲಕ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಮಾತನಾಡಿ, ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಎರಡು ಲಿಫ್ಟ್ ಗಳನ್ನು ನಿರ್ಮಿಸಲಾಗಿದ್ದು ಹಿರಿಯ ನಾಗರೀಕರಿಗೆ ಹಾಗೂ ಅಶಕ್ತ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

    ಇದೇ ರೀತಿ ಆರ್.ಕೆ.ನಾರಾಯಣ್ ಅವರ ಖ್ಯಾತ `ಮಾಲ್ಗುಡಿ ಡೇಸ್’ ಕೃತಿಯನ್ನು ಟೆಲಿವಿಷನ್ ಸೀರಿಯಲ್ ಆಗಿ ನಿರ್ಮಿಸಿದ ಚಿತ್ರನಟ ದಿವಂಗತ ಶಂಕರನಾಗ್ ಅವರು ಇದೇ ರೈಲ್ವೇ ನಿಲ್ದಾಣವನ್ನು ಪ್ರಮುಖವಾಗಿ ಬಳಸಿಕೊಂಡಿದ್ದಾರೆ. ಇದರ ನೆನಪಿಗಾಗಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಸ್ಟೇಷನನ್ನು ಮಾಲ್ಗುಡಿ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ. ಇಲ್ಲಿನ ಫ್ಲಾಟ್‍ಫಾರ್ಮ್ ವಿಸ್ತರಿಸಲಾಗಿದ್ದು, ಪ್ರಸ್ತುತ 12 ಕೋಚ್ ರೈಲುಗಳಿಗೆ ನಿಲುಗಡೆಗೆ ಅವಕಾಶವಿತ್ತು. ಇದೀಗ 28 ಕೋಚ್ ರೈಲುಗಳು ನಿಲ್ಲುವ ಸೌಲಭ್ಯ ಕಲ್ಪಿಸಲಾಗಿದೆ. ಇದೊಂದು ಪ್ರವಾಸಿ ತಾಣವಾಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗಲಿದೆ ಎಂದರು.

    ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಗೆ 245 ಕೋಟಿ ವೆಚ್ಚವಾಗಲಿದ್ದು, ಇನ್ನೆರಡು ತಿಂಗಳಲ್ಲಿ ಭೂಸ್ವಾಧೀನ ಪೂರ್ಣಗೊಳ್ಳಲಿದೆ. ಇದೇ ರೀತಿ ಶಿವಮೊಗ್ಗ-ಹರಿಹರ ರೈಲು ಮಾರ್ಗ, ಬೀರೂರು ಡಬ್ಲಿಂಗ್ ಕಾರ್ಯ, ತಾಳಗುಪ್ಪ- ಸಿದ್ದಾಪುರ ಹಾಗೂ ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ವರ್ಚುವಲ್ ವೇದಿಕೆಯ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದರು.

  • ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ವಿಭಾಗ ಪ್ರಾರಂಭಿಸಲು ಸ್ಥಳೀಯರ ವಿರೋಧ

    ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ವಿಭಾಗ ಪ್ರಾರಂಭಿಸಲು ಸ್ಥಳೀಯರ ವಿರೋಧ

    ಹಾವೇರಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ಹಿನ್ನೆಲೆ ತಾಲೂಕು ಮಟ್ಟದಲ್ಲಿ ಸಹ ಕೊರೊನಾ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಆದರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಕೊರೊನಾ ಆಸ್ಪತ್ರೆ ಪ್ರಾರಂಭಿಸಿದೆ. ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಆಸ್ಪತ್ರೆ ಆರಂಭಿಸಿದ್ದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ತಾಲೂಕು ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಕಳೆದ ಕೆಲವು ದಿನಗಳಿಂದ ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕೋವಿಡ್-19 ಆಸ್ಪತ್ರೆ ಆರಂಭವಾಗಿದೆ. ತಾಲೂಕು ಸರಕಾರಿ ಆಸ್ಪತ್ರೆ ಕಂಪೌಂಡ್‍ಗೆ ಹೊಂದಿಕೊಂಡು ಸಾಕಷ್ಟು ಮನೆಗಳು ಇರುವುದರಿಂದ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದ ಹೊರವಲಯದಲ್ಲಿರುವ ಸರ್ಕಾರಿ ವಸತಿ ನಿಲಯಗಳಿಗೆ ಕೊರೊನಾ ಸೋಂಕಿತರನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

    ಕೋವಿಡ್-19 ಸೋಂಕಿತರನ್ನು ಬೇರೆಡೆ ಸ್ಥಳಾಂತರಿಸಿ, ಇಲ್ಲವೇ ಆಸ್ಪತ್ರೆ ಸುತ್ತಮುತ್ತಲಿನ ಜನರಿಗೆ ಬೇರೆಡೆ ಮನೆಗಳ ವ್ಯವಸ್ಥೆ ಮಾಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಸ್ಥಳೀಯರ ಜೊತೆ ಮಾತುಕತೆ ನಡೆಸಿದ್ದಾರೆ. ಆದರೂ ಸಾಮಾಜಿಕ ಅಂತರ ಮರೆತು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

  • ಕೊರೊನಾಗೆ ದಾವಣಗೆರೆಯಲ್ಲಿ ವ್ಯಕ್ತಿ ಸಾವು – ರಾಣೇಬೆನ್ನೂರಿನಲ್ಲಿ ಹೆಚ್ಚಿದ ಆತಂಕ

    ಕೊರೊನಾಗೆ ದಾವಣಗೆರೆಯಲ್ಲಿ ವ್ಯಕ್ತಿ ಸಾವು – ರಾಣೇಬೆನ್ನೂರಿನಲ್ಲಿ ಹೆಚ್ಚಿದ ಆತಂಕ

    -ಮಗನ ಮದ್ವೆ, ಸತ್ಯನಾರಾಯಣ ಪೂಜೆಯಲ್ಲಿ ಸೋಂಕಿತ ಭಾಗಿ

    ಹಾವೇರಿ: ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಐವತ್ತೈದು ವರ್ಷದ ಕೊರೊನಾ ಸೋಂಕಿತ ಮೃತಪಟ್ಟಿದ್ದು, ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಆತಂಕ ಮನೆ ಮಾಡಿದೆ.

    ಸಾವನ್ನಪ್ಪಿದ್ದ ವ್ಯಕ್ತಿ ರಾಣೇಬೆನ್ನೂರು ಮೂಲದವರಾಗಿದ್ದು ಜೂನ್ 29ರಂದು ಮಗನ ಮದುವೆ ಮಾಡಿದ್ದರು. ಜುಲೈ 3ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು.

    ಜುಲೈ 4ರಂದು ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಜ್ವರ ಹೆಚ್ಚಾಗಿದ್ದರಿಂದ ಸೋಂಕಿತ ಜುಲೈ 5 ರಂದು ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ದಾವಣಗೆರೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತ ಸೋಂಕಿತನ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ 50ಕ್ಕೂ ಅಧಿಕ ಜನರಿಗೆ ಕ್ವಾರಂಟೈನ್ ಮಾಡಲಾಗಿದೆ.

  • ಹಾವೇರಿಯಲ್ಲಿ ಮಗು, ತಂದೆ, ತಾಯಿ ಸೇರಿ ನಾಲ್ವರಿಗೆ ಕೊರೊನಾ

    ಹಾವೇರಿಯಲ್ಲಿ ಮಗು, ತಂದೆ, ತಾಯಿ ಸೇರಿ ನಾಲ್ವರಿಗೆ ಕೊರೊನಾ

    – ಹಾವೇರಿಗೆ ಮತ್ತೆ ವಕ್ಕರಿಸಿದ ಕೊರೊನಾ

    ಹಾವೇರಿ: ಜಿಲ್ಲೆಯಲ್ಲಿ ಇಂದು ಎರಡು ವರ್ಷದ ಮಗು ಹಾಗೂ ಮಗುವಿನ ತಂದೆ, ತಾಯಿ ಸೇರಿ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ 89 ಜನ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಾಂಡಪಾಡ್ವಾದ ಕಲ್ವಾದಲ್ಲಿ ಬೀದಿ ವ್ಯಾಪಾರ ಮಾಡಿಕೊಂಡಿದ್ದರು. 89 ಜನ ಸಹ ಮೇ 16 ರಂದು ಎರಡು ಬಸ್‍ಗಳಲ್ಲಿ ಅಲ್ಲಿಂದ ಹೊರಟು ಮೇ 17ರಂದು ಜಿಲ್ಲೆಗೆ ಬಂದಿದ್ದಾರೆ. ಇವರನ್ನು ರಾಣೆಬೆನ್ನೂರು ತಾಲೂಕಿನ ಮಾಕನೂರಿನ ಎರಡು ಸರ್ಕಾರಿ ವಸತಿ ನಿಲಯಗಳು ಹಾಗೂ ರಾಣೆಬೆನ್ನೂರು ನಗರದ ಒಂದು ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

    ಮಾಕನೂರಿನ ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ಎರಡು ವರ್ಷದ ಗಂಡು ಮಗು ರೋಗಿ ನಂ.2494, ಮಗುವಿನ 34 ವರ್ಷದ ತಂದೆ ರೋಗಿ ನಂ.2495 ಮತ್ತು 28 ವರ್ಷದ ತಾಯಿ ರೋಗಿ ನಂ.2496 ಹಾಗೂ 22 ವರ್ಷದ ಯುವಕ ರೋಗಿ ನಂ.2497 ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೇ 24ರಂದು ಇವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಲ್ಯಾಬ್‍ಗೆ ಕಳಿಸಲಾಗಿತ್ತು.

    ಇಂದು ಕೇವಲ ನಾಲ್ವರ ವರದಿ ಬಂದಿದ್ದು, ನಾಲ್ವರಲ್ಲೂ ಸೋಂಕು ದೃಢಪಟ್ಟಿದೆ. ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ನಾಲ್ವರನ್ನೂ ಕ್ವಾರಂಟೈನ್ ಕೇಂದ್ರದಿಂದ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದಾರೆ.

  • ಕೊರೊನಾ ವಿರುದ್ಧದ ಹೋರಾಟಕ್ಕೆ 16 ಲಕ್ಷ ರೂ. ದೇಣಿಗೆ ನೀಡಿದ ರಾಣೇಬೆನ್ನೂರು ಶಾಸಕ

    ಕೊರೊನಾ ವಿರುದ್ಧದ ಹೋರಾಟಕ್ಕೆ 16 ಲಕ್ಷ ರೂ. ದೇಣಿಗೆ ನೀಡಿದ ರಾಣೇಬೆನ್ನೂರು ಶಾಸಕ

    ಹಾವೇರಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ರಾಣೇಬೆನ್ನೂರು ಶಾಸಕ ಅರುಣ್‍ಕುಮಾರ ಪೂಜಾರ್ ಅವರು 16 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

    ಶಾಸಕ ಅರುಣ್‍ಕುಮಾರ್ ಅವರು ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 16.47 ಲಕ್ಷ ರೂ. ಚೆಕ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪರಿಹಾರ ನಿಧಿಗೆ ಚೆಕ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಗೃಹ ಸಚಿವ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಉಪಸ್ಥಿತರಿದ್ದರು.

    ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಅನೇಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೇಣಿಗೆ ನೀಡಿ ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಪುತ್ರಿ ಸೃಷ್ಟಿ ಪಾಟೀಲ್ ಅವರು ಕೂಡ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದ್ದರು.

    ಮಠಗಳಿಂದ ದೇಣಿಗೆ:
    ಹುಬ್ಬಳ್ಳಿಯ ಪ್ರಖ್ಯಾತ ಮೂರುಸಾವಿರ ಮಠದಿಂದ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಮೂರುಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು 10 ಲಕ್ಷ ರೂ. ಚೆಕ್ ಅನ್ನು ಸಚಿವ ಜಗದೀಶ್ ಶೆಟ್ಟರ್ ಅವರ ಮೂಲಕ ಸರ್ಕಾರಕ್ಕೆ ಏಪ್ರಿಲ್ 15ರಂದು ಹಸ್ತಾಂತರಿಸಿದ್ದರು.

    ಇದಕ್ಕೂ ಮುನ್ನ ಸಿದ್ದಗಂಗಾ ಮಠ ಹಾಗೂ ಸಿದ್ದಗಂಗಾ ವಿದ್ಯಾಸಂಸ್ಥೆ ವತಿಯಿಂದ 50 ಲಕ್ಷ ರೂ.ವನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನೀಡಲಾಗಿತ್ತು. ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಏಪ್ರಿಲ್ 4ರಂದು ಮಠದಿಂದ 25 ಲಕ್ಷ ರೂ. ಹಾಗೂ ವಿದ್ಯಾಸಂಸ್ಥೆಯಿಂದ 25 ಲಕ್ಷ ರೂ. ಸೇರಿ ಒಟ್ಟು 50 ಲಕ್ಷ ರೂ.ಗಳ ಡಿಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ಸಲ್ಲಿಸಿದ್ದರು.

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋರಿರುವ ಆರ್ಥಿಕ ನೆರವಿಗೆ ಮೈಸೂರಿನ ಶ್ರೀ ಸುತ್ತೂರು ಮಠವು ಏಪ್ರಿಲ್ 1ರಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂಪಾಯಿ ದೇಣಿಗೆ ನೀಡಿತ್ತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಇವತ್ತು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಸಂಸ್ಥೆಯ ನೌಕರರಿಂದ 50 ಲಕ್ಷ ರೂ.ಗಳ ದೇಣಿಗೆಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಸಚಿವರಿಗೆ ನೀಡಿದ್ದರು.

  • ಶೀಲ ಶಂಕಿಸಿ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿದ್ದ ಪತಿ ಅಂದರ್

    ಶೀಲ ಶಂಕಿಸಿ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿದ್ದ ಪತಿ ಅಂದರ್

    ಹಾವೇರಿ: ಪತ್ನಿಯ ಶೀಲ ಶಂಕಿಸಿ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿದ್ದ ಪಾಪಿ ಪತಿಯನ್ನು ರಾಣೆಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ರಾಣೆಬೆನ್ನೂರು ನಗರದ ಅಡವಿ ಆಂಜನೇಯ ಬಡಾವಣೆಯ ನಿವಾಸಿ ದುರಗಮ್ಮ ಕೊರವರ (55) ಮೃತ ದುರ್ದೈವಿ. ವಿರೂಪಾಕ್ಷಪ್ಪ ಕೊರವರ (58) ಕೊಲೆಗೈದ ಪಾಪಿ ಪತಿ.

    ದುರಗಮ್ಮ ಹಾಗೂ ವಿರೂಪಾಕ್ಷಪ್ಪ ದಂಪತಿ ಮಧ್ಯೆ ಫೆಬ್ರುವರಿ 23ರಂದು ಜಗಳವಾಗಿತ್ತು. ಈ ವೇಳೆ ಪಾಪಿ ಪತಿ ದುರಗಮ್ಮ ಅವರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ದುರುಗಮ್ಮ ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ದುರಗಮ್ಮ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಿಸದೆ ಮಂಗಳವಾರ ಸಾವನ್ನಪ್ಪಿದ್ದಾರೆ. ಈ ಸಂಬಂಧ ದುರಗಮ್ಮ ಸಂಬಂಧಿಕರು ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು ಆರೋಪಿ ವಿರೂಪಾಕ್ಷನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಚುನಾವಣೆ ವೇಳೆ ಸೀಜ್ ಆಗಿದ್ದ ರಿವಾಲ್ವರ್ ಆನಂದ್ ಅಸ್ನೋಟಿಕರ್‌ಗೆ ವಾಪಸ್

    ಚುನಾವಣೆ ವೇಳೆ ಸೀಜ್ ಆಗಿದ್ದ ರಿವಾಲ್ವರ್ ಆನಂದ್ ಅಸ್ನೋಟಿಕರ್‌ಗೆ ವಾಪಸ್

    ಹಾವೇರಿ: ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಇಂದು ಜಿಲ್ಲೆ ರಾಣೇಬೆನ್ನೂರಿನ ಜೆಎಂಎಫ್‍ಸಿ ಕೋರ್ಟಿಗೆ ಹಾಜರಾಗಿದ್ದರು.

    2019ರ ಲೋಕಸಭಾ ಚುನಾವಣೆ ವೇಳೆ ನೀತಿ ಸಂಹಿತೆ ಜಾರಿ ಮಾಡಿದ್ದ ಸಂದರ್ಭದಲ್ಲಿ ಪರವಾನಗಿ ನವೀಕರಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಅಲ್ಲದೇ ಮಾಜಿ ಸಚಿವರ ಕಾರು ಮತ್ತು ರಿವಾಲ್ವರ್ ಅನ್ನು ಸೀಜ್ ಮಾಡಲಾಗಿತ್ತು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ಅಧಿಕಾರಿಗಳು ಮಾಕನೂರು ಚೆಕ್‍ಪೋಸ್ಟ್ ನಲ್ಲಿ ಬಳಿ ರಿವಾಲ್ವರ್ ಮತ್ತು ಕಾರನ್ನು ವಶಕ್ಕೆ ಪಡೆದಿದ್ದರು.

    ಪ್ರಕರಣ ಸಂಬಂಧ ಇಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ಸಂಬಂಧಿಸಿದ ದಾಖಲೆಗಳನ್ನು ಖುದ್ದು ಕೋರ್ಟಿಗೆ ಹಾಜರು ಪಡಿಸಿದ್ದರು. ಅಲ್ಲದೇ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದರಿಂದ ನ್ಯಾಯ ಸಿಕ್ಕಿದೆ. ಅಂದಿನ ದಿನ ಕಾರು ಚಾಲಕ ರಿವಾಲ್ವರ್ ಗೆ  ಸಂಬಂಧಿಸಿದ ದಾಖಲೆ ಬಿಟ್ಟು ಬಂದಿದ್ದು ತೊಂದರೆಯಾಗಿತ್ತು. ಈಗ ನ್ಯಾಯ ಸಿಕ್ಕಿದೆ ಎಂದು ಅಸ್ನೋಟಿಕರ್ ಪ್ರತಿಕ್ರಿಯೆ ನೀಡಿದರು.

  • ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ವಸ್ತುಪ್ರದರ್ಶನ

    ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ವಸ್ತುಪ್ರದರ್ಶನ

    ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕು ಕುಮಾರಪಟ್ಟಣದ ಅಮೃತ ವರ್ಷಿಣಿ ವಿದ್ಯಾಲಯದ ಪ್ರಾಥಮಿಕ ತರಗತಿಗಳ ಸುಮಾರು 650 ಮಕ್ಕಳು ವಿಜ್ಞಾನ, ಸಮಾಜ, ಗಣಿತ, ಭಾಷೆ ಹಾಗೂ ಕಲೆಗಳಿಗೆ ಸಂಬಂಧಿಸಿದಂತೆ ವೈವಿಧ್ಯಮಯ ಪ್ರದರ್ಶಿಕೆಗಳೊಂದಿಗೆ ಶೈಕ್ಷಣಿಕ ವಸ್ತು ಪ್ರದರ್ಶನವನ್ನು ಇಂದು ಅಣಿಗೊಳಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾಪಂಚಾಯತ್ ಸದಸ್ಯರಾದ ಶ್ರೀಮತಿ ಸರ್ವಮಂಗಳ ಅರುಣಕುಮಾರ್ ಪೂಜಾರ ಅವರು ಕಾರ್ಯಕ್ರಮವನ್ನ ಉದ್ಘಾಟಿಸಿದರು.

    ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ಪಿ.ಕೆ. ಪ್ರಕಾಶರಾವ್ ರವರು ಮಾತನಾಡಿ, ಇಂದಿನ ಮಕ್ಕಳು ಬರೀ ಪಠ್ಯ ಪುಸ್ತಕಗಳ ವಾಚನ ಮಾಡಿದರೆ ಸಾಲದು ಜೊತೆ ಜೊತೆಗೆ ಆಟ, ಪ್ರದರ್ಶನ, ಮನರಂಜನೆ ಕೂಡಾ ಮುಖ್ಯವಾದುದು. ಇಂದಿನ ವಸ್ತು ಪ್ರದರ್ಶನ ಮಕ್ಕಳಿಗೆ ಅನೇಕ ಕೂತೂಹಲಕಾರಕ ಪ್ರಯೋಗಗಳು, ಬಗೆ ಬಗೆಯ ಪೇಪರ ಕಟಿಂಗ್ ಗಳ ಬಗೆಗೂ ಬೆಳಕು ಚಲ್ಲಿದವು. ಮಕ್ಕಳಲ್ಲಿ ನಾವು ಕುತೂಹಲತೆಯನ್ನು ಬೆಳೆಸಬೇಕು. ಅವರಲ್ಲಿ ಅದು ಹೇಗೆ? ಇದು ಹೇಗಾಗುತ್ತದೆ? ಅದರಿಂದ ಏನು ಪ್ರಯೋಜನ? ಎಂಬಂತೆ ಕೂತೂಹಲಕಾರಿಕ ಪ್ರಶ್ನೆಗಳು ಎದ್ದರೆ ಅವರಿಗೆ ಪಠ್ಯ ಪುಸ್ತಕಗಳ ಕಡೆಗೆ ಗಮನ ನೀಡುವರು. ಆ ನಿಟ್ಟಿನಲ್ಲಿ ಈ ತರದ ಪ್ರಯೋಗಾತ್ಮಕ ಪ್ರದರ್ಶನಗಳು ವೀಕ್ಷಿಸುವದು ಮಕ್ಕಳಿಗೆ ಬಹು ಉಪಯೋಗ. ಅವರಲ್ಲಿ ಉತ್ಸುಕತೆ ಬೆಳೆಯುವದಲ್ಲದೇ ಸಾಂಸ್ಕøತಿಕವಾಗಿಯೂ ಕೂಡ ಬೆಳೆಯಬಲ್ಲರು ಎಂದು ಅಭಿಪ್ರಾಯಪಟ್ಟರು.

    ಪ್ರದರ್ಶನದಲ್ಲಿ ಶಿಲಾಯುಗದ ಗುಹೆ, ಶಕ್ತಿಯ ಬಳಕೆ, ನೀರಿನ ಸದುಪಯೋಗ, ಜಾಗತಿಕ ಉಷ್ಣತೆಯಲ್ಲಿ ಏರಿಕೆ, ಪ್ರಕೃತಿಯಲ್ಲಿ ಸಮತೋಲನ, ಕರ್ನಾಟಕದ ಸಂಗೀತೋಪಕರಣಗಳು ಹಾಗೂ ಮಹಾನ್ ಗಾಯಕರು ಮೊದಲಾದ ವಿಷಯಗಳನ್ನು ಪ್ರಸ್ತುತಗೊಳಿಸಲಾಯಿತು. ದಿನವಿಡೀ ಯೋಜಿತಗೊಂಡಿದ್ದ ವಸ್ತುಪ್ರದರ್ಶನಕ್ಕೆ ಪೋಷಕರು ಹಾಗೂ ಆಮಂತ್ರಿತರು ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡಿದರು.

    ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ಪಿ.ಕೆ. ಪ್ರಕಾಶರಾವ್, ಕಾರ್ಯದರ್ಶಿ ವಿನಯ್ ರಾವ್, ಪ್ರಾಂಶುಪಾಲೆ ಶ್ರೀಮತಿ ಚೇತನಾ ವಿ. ರಾವ್, ಅಲ್ಲದೆ ಶಾಲಾ ಶಿಕ್ಷಕ ಶಿಕ್ಷಕಿಯರು ಪರಿಸರ ಪ್ರೇಮಿ ಡಾ. ಜಿ ಜೆ ಮೆಹೆಂದಳೆ, ಪಂಚಾಯತ್ ಉಪಾಧ್ಯಕ್ಷರಾದ ದಿನೇಶ ಹರಳಳೆಪ್ಪನವರು ಉಪಸ್ಥಿತರಿದ್ದರು.

  • ರಾಣೆಬೆನ್ನೂರು ಕೈ ಅಭ್ಯರ್ಥಿ ಕೋಳಿವಾಡ ಮನೆ ಮೇಲೆ ಐಟಿ ರೇಡ್

    ರಾಣೆಬೆನ್ನೂರು ಕೈ ಅಭ್ಯರ್ಥಿ ಕೋಳಿವಾಡ ಮನೆ ಮೇಲೆ ಐಟಿ ರೇಡ್

    ಹಾವೇರಿ: ಮತದಾನ ಮುನ್ನವೇ ರಾಣೆಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡಗೆ ಐಟಿ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ.

    ಅಕ್ರಮ ಹಣ, ಮದ್ಯ ಇರುವ ಮಾಹಿತಿ ಮೇರೆಗೆ ರಾತ್ರಿ 10 ಗಂಟೆ ಸುಮಾರಿಗೆ ವಾಗೀಶ್ ನಗರ 6ನೇ ಕ್ರಾಸ್ ಬಳಿ ಇರುವ ಕೋಳಿವಾಡ ಮನೆಗೆ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಒಂದು ಗಂಟೆಗಳ ಕಾಲ ಮನೆಯಲ್ಲಾ ಜಾಲಾಡಿ ಪರಿಶೀಲನೆ ನಡೆಸಿದರು. ಕೋಳಿವಾಡ ಅವರ ಮನೆಯಲ್ಲಿ 10 ಕೋಟಿ ಹಣ, ಮದ್ಯ ಇಟ್ಟಿರುವ ಶಂಕೆ ಮೇಲೆ ದಾಳಿ ನಡೆಸಲಾಗಿತ್ತು.

    ಸಾರ್ವಜನಿಕರ ದೂರು ಆಧರಿಸಿ ಅಬಕಾರಿ ಹಾಗೂ ಐಟಿ ತಂಡ ದಾಳಿ ನಡೆಸಿ ತನಿಖೆ ಕೈಗೊಂಡರು. ದಾಳಿ ವೇಳೆ ನಯಾಪೈಸೆ ಹಣ, ಮದ್ಯ ಸಿಗದೇ ಅಧಿಕಾರಿಗಳು ವಾಪಸ್ ಹೋದರು. ಐಟಿ ದಾಳಿಯಿಂದ ರೊಚ್ಚಿಗೆದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕೋಳಿವಾಡ ಮನೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದು ಬಿಜೆಪಿ ಪ್ರಯೋಜಿತ ದಾಳಿಯಾಗಿದೆ ಎಂದು ಕೋಳಿವಾಡ ಆರೋಪಿಸಿದರು. ರೇಡ್ ವೇಳೆ ಏನೂ ಸಿಕ್ಕಿಲ್ಲ, ಜಿಲ್ಲಾಧಿಕಾರಿಗೆ ಮಾಹಿತಿ ನೀಡುತ್ತೇವೆ ಅಂತ ಅಬಕಾರಿ ಆಯುಕ್ತ ಆರ್.ನಾಗಶಯನ ಹೇಳಿದರು.