Tag: Ranebennur MLA

  • ಕೊರೊನಾ ಭೀತಿ ನಡುವೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ಬಿಜೆಪಿ ಶಾಸಕ

    ಕೊರೊನಾ ಭೀತಿ ನಡುವೆ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡ ಬಿಜೆಪಿ ಶಾಸಕ

    -ಶಾಸಕರನ್ನ ಹೊತ್ತು ಕುಣಿದಾಡಿ ಬರ್ತ್ ಡೇ ಸಂಭ್ರಮ

    ಹಾವೇರಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾದ ರೌದ್ರನರ್ತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ನಿಯಮಗಳನ್ನು ಪಾಲಿಸಿ ಎಂದು ಹೇಳಬೇಕಾಗಿದ್ದ ಬಿಜೆಪಿ ಶಾಸಕ ಅರುಣ್ ಕುಮಾರ್ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರುಣ್ ಕುಮಾರ್ ಅಪಾರ ಬೆಂಬಲಿಗರ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ರಾಣೆಬೆನ್ನೂರು ನಗರದಲ್ಲಿರುವ ಶಾಸಕರ ನಿವಾಸದ ಬಳಿ ಸೇರಿದ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಎಲ್‍ಇಡಿ ಟಿವಿ, ಸೌಂಡ್ ಸಿಸ್ಟಮ್ ಹಾಕಿ ಶಾಸಕರನ್ನ ಹೊತ್ತು ಕುಣಿದಾಡಿದ್ದಾರೆ.

    ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದ ಅಭಿಮಾನಿಗಳು ಮಾಸ್ಕ್ ಸಹ ಧರಿಸಿರಲಿಲ್ಲ. ಸಾಮಾಜಿಕ ಅಂತರ ಪದಕ್ಕೆ ಪಾರ್ಟಿಯಲ್ಲಿ ಅರ್ಥವೇ ಇಲ್ಲದಂತಾಗಿತ್ತು. ಜನರಿಗೆ ತಿಳಿವಳಿಕೆ ಹಾಗೂ ಮಾದರಿಯಾಗಬೇಕಾಗಿದ್ದ ಶಾಸಕರು ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.