Tag: Rana Dagubati

  • ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ

    ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ

    ಮುಂಬೈ: ರಾಜಮೌಳಿ ನಿರ್ದೇಶನದ ಬಾಹುಬಲಿ-2 ಏಪ್ರಿಲ್ 28 ರಂದು ಜಗತ್ತಿನಾದ್ಯಂತ ತೆರೆಕಂಡು ಅಭೂತಪೂರ್ವ ಯಶ್ವಸಿನೊಂದಿಗೆ ಮುನ್ನಡೆಯುತ್ತಿದೆ. ಕೇವಲ ಒಂದೇ ದಿನದಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗು ಹಾಲಿವುಡ್ ಚಿತ್ರರಂಗದ ದಾಖಲೆಗಳು ಮುರಿದು ಮುನ್ನುಗುತ್ತಿದೆ.

    2015ರಲ್ಲಿ ಬಿಡುಗಡೆಯಾದ ಬಾಹುಬಲಿ ಚಿತ್ರದ ಮುಂದುವರೆದ ಭಾಗವಾದ ಬಾಹುಬಲಿ-2 ದಿ ಕನ್ ಕನ್‍ಕ್ಲೂಷನ್ ಸಿನಿಮಾ ಚಿತ್ರಲೋಕದಲ್ಲೊಂದು ತನ್ನದೇ ಬಿರುಗಾಳಿಯ ಅಲೆಯನ್ನು ಎಬ್ಬಿಸಿದೆ. ತೆಲುಗು, ತಮಿಳು, ಮಲಯಾಳಿ ಹಾಗು ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆಕಂಡಿದೆ. ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ ಮುಂತಾದ ದೊಡ್ಡ ಕಲಾವಿದರ ತಾರಾಗಣವನ್ನು ಚಿತ್ರತಂಡ ಹೊಂದಿದೆ.

    ಸಿನಿಮಾ ಬಿಡುಗಡೆಯಾದ ಒಂದೇ ದಿನದಲ್ಲಿ ಬಾಹುಬಲಿ ಹಲವು ದಿಗ್ಗಜ ನಟರ ದಾಖಲೆಗಳನ್ನು ಬ್ರೇಕ್ ಮಾಡುವದರೊಂದಿಗೆ 10 ದಾಖಲೆಗಳನ್ನು ಬರೆದಿದೆ.

    1. ಮುಂಗಡ ಟಿಕೆಟ್ ಕಾಯ್ದುರಿಸುವಿಕೆ: ಬಾಹುಬಲಿ-2 ಚಿತ್ರದ ಮುಂಗಡ ಟಿಕೆಟ್ ಬುಕಿಂಗ್‍ನಲ್ಲಿ 36 ಕೋಟಿ ರೂ.ಯನ್ನು ಗಳಿಸಿದೆ. ಇದಕ್ಕೂ ಮುಂಚೆ ಬಾಲಿವುಡ್‍ನ ಅಮೀರ್‍ಖಾನ್ ಅಭಿನಯದ `ದಂಗಲ್’ ಸಿನಿಮಾ 18 ಕೋಟಿ ರೂ. ಗಳಿಸಿ ಮುಂಗಡ ಟಿಕೆಟ್‍ನಲ್ಲಿ ದಾಖಲೆ ಬರೆದಿತ್ತು. ಬುಕ್ ಮೈ ಶೋದಲ್ಲಿ ಬುಕ್ಕಿಂಗ್ ಒಪನ್ ಆದ ಕೇವಲ 24 ಗಂಟೆಯಲ್ಲೇ ಬಾಹುಬಲಿಯ 10 ಲಕ್ಷ ಟಿಕೆಟ್ಟುಗಳು ಮಾರಾಟವಾಗಿತ್ತು.

    ಮತ್ತಷ್ಟು ಓದಿ: ಕನ್ನಡದ ಉತ್ತಮ ಹಾಡುಗಳು

    2. ಅತಿಹೆಚ್ಚು ಥಿಯೇಟರ್‍ನಲ್ಲಿ ಬಿಡುಗಡೆ: ಬಾಹುಬಲಿ ಎರಡನೇ ಆವೃತ್ತಿ ಸಿನಿಮಾ ಭಾರತದಲ್ಲಿ 6500ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಬಿಡುಗಡೆಗೊಂಡಿದೆ. ಸಲ್ಮಾನ್‍ಖಾನ್ ಅಭಿನಯದ ಸುಲ್ತಾನ್ ದೇಶಾದ್ಯಂತ 4,350 ಸ್ಕ್ರೀನ್‍ಗಳಲ್ಲಿ ತೆರೆಕಂಡಿತ್ತು. ಅಮೆರಿಕದಲ್ಲಿ ಅತಿಹೆಚ್ಚು ಸಂಖ್ಯೆಯ ಸ್ಕ್ರೀನ್ ನಲ್ಲಿ ರಿಲೀಸ್ ಆಗಿರುವ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಗೆ ಬಾಹುಬಲಿ ಪಾತ್ರವಾಗಿದ್ದು, ಮಾಹಿತಿಗಳ ಪ್ರಕಾರ ತಮಿಳು, ತೆಲುಗು, ಹಿಂದಿ ಸೇರಿ ಒಟ್ಟು 1,100 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದೆ.

    3. ದೇಶದೆಲ್ಲೆಡೆ ಕಮಾಲ್: ಬಾಹುಬಲಿ ದೇಶದ ಶೇ.95ರಷ್ಟು ಭಾಗದಲ್ಲಿ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ಶಾರೂಖ್ ಖಾನ್ ನಟನೆಯ ರಾಯಿಸ್ ದೇಶದ ಶೇ.70 ರಷ್ಟು ಭಾಗದಲ್ಲಿ ಬಿಡುಗಡೆಯಾಗಿತ್ತು.

    4. ಖಾನ್‍ತ್ರಯರ ದಾಖಲೆ ಪೀಸ್ ಪೀಸ್: ಇದೂವರೆಗೂ ಖಾನ್‍ತ್ರಯರಾದ ಸಿನಿಮಾಗಳು ದೇಶದ ಅತಿಹೆಚ್ಚು ಭಾಗಗಳಲ್ಲಿ ತೆರೆಕಾಣುತ್ತಿದ್ದವು. ಆದರೆ ಪ್ರಭಾಸ್ ಅಭಿನಯದ ಬಾಹುಬಲಿ-2 ದೇಶದ ಶೇ.95 ರಷ್ಟು ಭಾಗಗಳಲ್ಲಿ ಬಿಡುಗಡೆಗೊಂಡಿದೆ. ಇದುವರೆಗೂ ದಾಖಲೆ ಬರೆದಿದ್ದ `ಪ್ರೇಮ್ ರತನ್ ಧನ್ ಪಾಯೋ’, ಧೂಮ್-3 ಮತ್ತು ಹ್ಯಾಪಿ ನ್ಯೂ ಇಯರ್ ಬಾಲಿವುಡ್ ಹಿಟ್ ಚಿತ್ರಗಳ ದಾಖಲೆ ಪುಡಿಪುಡಿಯಾಗಿದೆ.

    5. 2017ರ ಅತಿಹೆಚ್ಚು ಗಳಿಕೆಯ ಹಿಂದಿ ಸಿನಿಮಾ: ಒಂದೇ ದಿನದಲ್ಲಿ ಬಾಹುಬಲಿ ಹಿಂದಿ ಸಿನಿಮಾ 41 ಕೋಟಿ ರೂ. ಹಣ ಗಳಿಸಿದೆ. ಶಾರೂಖ್ ಖಾನ್ ಅಭಿನಯದ ರಾಯಿಸ್ ಈ ಹಿಂದೆ 20.42 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

    6. ಒಂದೇ ದಿನದಲ್ಲಿ ಅತಿ ಹೆಚ್ಚು ಕಲೆಕ್ಷನ್: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಬಾಹುಬಲಿ ಒಂದೇ ದಿನದಲ್ಲಿ 121 ಕೋಟಿ ರೂ. ಕಲೆಕ್ಷನ್ ಮಾಡಿದೆ. 2015ರಲ್ಲಿ ಬಿಡುಗಡೆಯಾದ ಬಾಹುಬಲಿ-ದಿ ಬಿಗಿನಿಂಗ್ 50 ಕೋಟಿ ರೂ. ಗಳಿಸಿ ದಾಖಲೆಯಾಗಿತ್ತು. ರಜನೀಕಾಂತ್ ನಟನೆಯ ಕಬಾಲಿ (47.20 ಕೋಟಿ. ರೂ), ಶಾರುಖ್ ಖಾನ್ ನಟನೆಯ ಹ್ಯಾಪಿ ನ್ಯೂ ಇಯರ್ (44.97 ಕೋಟಿ ರೂ.) ಬಾಕ್ಸ್ ಆಫೀಸ್‍ನಲ್ಲಿ ದಾಖಲೆ ಬರೆದಿದ್ದವು.

    7. ವೇಗವಾಗಿ 100 ಕೋಟಿಯ ಕ್ಲಬ್ ಸೇರಿದ  ಮೊದಲ ಸಿನಿಮಾ: ಬಾಹುಬಲಿ-2 ಸಿನಿಮಾ ಅತಿ ವೇಗವಾಗಿ 100 ಕೋಟಿ ಕ್ಲಬ್ ಸೇರಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    8. ಹಿಂದಿ ಡಬ್ ಸಿನಿಮಾ ಅತಿಹೆಚ್ಚು ಹಣಗಳಿಸಿದ ಸಿನಿಮಾ: ಬಾಹುಬಲಿ-2 ಸಿನಿಮಾ ಮೂಲ ತೆಲುಗು ಭಾಷೆಯಲ್ಲಿ ಮೂಡಿಬಂದಿದೆ. ಆದರೆ ತಮಿಳು, ಹಿಂದಿ ಮತ್ತು ಮಲಯಾಳಿ ಭಾಷೆಗೆ ಸಿನಿಮಾವನ್ನು ಡಬ್ ಮಾಡಲಾಗಿದೆ. ಇದೂವರೆಗೂ ಡಬ್ಬಿಂಗ್‍ಗೊಂಡ ಸಿನಿಮಾಗಳ ಎಲ್ಲ ದಾಖಲೆಗಳನ್ನು ಮುರಿದಿದೆ.

    9. ಟಾಲಿವುಡ್‍ನ ಅತಿಹೆಚ್ಚು ಗಳಿಕೆಯ ಮೊದಲ ಸಿನಿಮಾ: ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಒಂದೇ ದಿನದಲ್ಲಿ ಬಾಹುಬಲಿ-2 ಒಟ್ಟು 53 ಕೋಟಿ ರೂ. ಹಣಗಳಿಕೆ ಮಾಡುವುದರೊಂದಿಗೆ ದಾಖಲೆ ಬರೆದಿದೆ.

    10. ತಮಿಳು, ತೆಲಗು ಮತ್ತು ಮಲೆಯಾಳಂ ಮೂರೂ ಭಾಷೆಗಳಲ್ಲಿ ಅತಿಹೆಚ್ಚು ಹಣ ಕೊಳ್ಳೆಹೊಡೆದ ಸಿನಿಮಾ: ಪ್ರಭಾಸ್ ಮತ್ತು ರಾಣಾ ದಗ್ಗುಭಾಟಿಯ ಅಭಿನಯದ ಬಾಹುಬಲಿ-2 ಮೇಲಿನ ಮೂರು ಭಾಷೆಗಳಲ್ಲಿ ಒಟ್ಟು 80 ಕೋಟಿ ರೂ. ಹಣ ಗಳಿಕೆ ಮಾಡಿದೆ.

    ಒಟ್ಟಾರೆಯಾಗಿ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರ ಜಗತ್ತಿನಾದ್ಯಂತ ತನ್ನ ಹೊಸ ದಾಖಲೆಗಳನ್ನು ಬರೆಯುತ್ತಾ ಮುನ್ನುಗುತ್ತಿದೆ.

    https://twitter.com/karanjohar/status/858576227845767168

    https://twitter.com/karanjohar/status/858336056810381312