Tag: Ramvilas paswan

  • ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಆಸ್ಪತ್ರೆಗೆ ದಾಖಲು

    ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಆಸ್ಪತ್ರೆಗೆ ದಾಖಲು

    ನವದೆಹಲಿ: ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಚಿವರು ಶ್ವಾಸಕೋಶ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಫೋರ್ಟಿಸ್ ಎಸ್ಕೋರ್ಟ್ಸ್ ಹಾರ್ಟ್ ಇನ್ಸ್ ಸ್ಟಿಟ್ಯೂಟ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿ ಸುಧಾರಿಸಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಪಾಸ್ವಾನ್ ಅವರಿಗೆ ಈ ಮೊದಲೇ ಹೃದಯ ಸಮಸ್ಯೆ ಕಾಣಿಸಿಕೊಂಡಿದ್ದು, 2017ರಲ್ಲಿ ಲಂಡನ್ ನಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಚಿವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ಅಕ್ರಮ ತಡೆಗೆ ಬರಲಿದೆ ಒಂದೇ ದೇಶ ಒಂದೇ ರೇಷನ್ ಕಾರ್ಡ್

    ನವದೆಹಲಿ: ಬಡವರಿಗೆ ಕಡಿಮೆ ದರದಲ್ಲಿ ಆಹಾರಧಾನ್ಯವನ್ನು ದೇಶದ ಎಲ್ಲಾ ಕಡೆ ಪೂರೈಸುವ ನಿಟ್ಟಿನಲ್ಲಿ “ಒಂದು ದೇಶ, ಒಂದು ರೇಷನ್ ಕಾರ್ಡ್” ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

    ಕೇಂದ್ರ ಆಹಾರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಅಧ್ಯಕ್ಷತೆಯಲ್ಲಿ ರಾಜ್ಯ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ ಬಡ ಜನರು ಉದ್ಯೋಗ ಅಥವಾ ಇತರ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋದಾಗ ಆಹಾರಕ್ಕೆ ಸಮಸ್ಯೆ ಆಗದೇ ಇರಲು ಈ ಬದಲಾವಣೆ ಮಾಡಲಾಗಿದೆ.

    ಈ ಯೋಜನೆಯಿಂದ ಒಬ್ಬ ವ್ಯಕ್ತಿ ಅಥವಾ ಕುಟುಂಬ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೇಶನ್ ಕಾರ್ಡ್‍ಗಳನ್ನು ಹೊಂದಿದ್ದರೆ ತಡೆಯಬಹುದು. ಈ ನಿಯಮದಿಂದ ಸರ್ಕಾರದ ಬೊಕ್ಕಸಕ್ಕೂ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲದೇ ಪಿಡಿಎಸ್ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ನೆರವಾಗಲಿದೆ.

    ಸಚಿವ ರಾಮ್‍ವಿಲಾಸ್ ಪಾಸ್ವಾನ್ ಮಾತನಾಡಿ, ಇದರಿಂದ ವಲಸೆ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅವರಿಗೆ ಪೂರ್ಣ ಆಹಾರ ಭದ್ರತೆ ದೊರೆಯಲಿದೆ. ಈ ರೀತಿಯ ಕಾರ್ಮಿಕರು ಯಾವುದೇ ನಿರ್ಧಿಷ್ಟ ಪಡಿತರ ಅಂಗಡಿಯಿಂದ ಆಹಾರ ಧಾನ್ಯಗಳನ್ನು ಖರೀದಿಸಬೇಕಾಗಿಲ್ಲ. ಬದಲಾಗಿ ತಮಗೆ ಸಮೀಪದ ಯಾವುದೇ ಪಡಿತರ ಅಂಗಡಿಯಿಂದಲೂ ಖರೀದಿಸಬಹುದಾಗಿದೆ. ಇದರ ಜೊತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.

    ಈ ಯೋಜನೆಯನ್ನು ಜಾರಿ ಮಾಡಲು ಕೇಂದ್ರ ಆಹಾರ ಸಚಿವಾಲಯ ದೇಶದ ಎಲ್ಲ ರೇಷನ್ ಕಾರ್ಡ್‍ಗಳನ್ನು ಒಂದೇ ವ್ಯವಸ್ಥೆಯಡಿಗೆ ತರಲಿದೆ. ಕೇಂದ್ರ ಸರ್ಕಾರ ಇದಕ್ಕಾಗಿ ಇಂಟಿಗ್ರೇಡೆಸ್ ಮ್ಯಾನೇಜ್‍ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಂ (ಐಎಂಪಿಡಿಎಸ್) ಮೂಲಕ ಆನ್‍ಲೈನ್ ಡೇಟಾಬೇಸ್ ಮಾಡಲು ಸಿದ್ಧತೆ ನಡೆಸಿದೆ.

    ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಗುಜರಾತ್, ಹರ್ಯಾಣ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ತ್ರಿಪುರಾದಲ್ಲಿ ಈಗಾಗಲೇ ಐಎಂಪಿಡಿಎಸ್ ಜಾರಿಯಲ್ಲಿದೆ. ಈ ರಾಜ್ಯಗಳ ಫಲಾನುಭವಿಗಳು ತಮ್ಮ ಜಿಲ್ಲೆಯ ಯಾವುದೇ ಪಡಿತರ ಅಂಗಡಿಗಳಿಂದ ಆಹಾರ ಧಾನ್ಯ ಖರೀದಿಸಬಹುದಾಗಿದೆ.

  • ಇನ್ಮುಂದೆ ಹೋಟೆಲ್, ಏರ್‍ಪೋರ್ಟ್, ಮಾಲ್‍ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್‍ಪಿ ಹಣವನ್ನು ಮಾತ್ರ ಕೊಡಿ

    ಇನ್ಮುಂದೆ ಹೋಟೆಲ್, ಏರ್‍ಪೋರ್ಟ್, ಮಾಲ್‍ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್‍ಪಿ ಹಣವನ್ನು ಮಾತ್ರ ಕೊಡಿ

    ನವದೆಹಲಿ: ಇನ್ಮುಂದೆ ಹೋಟೆಲ್, ಏರ್‍ಪೋರ್ಟ್ ಹಾಗೂ ಮಾಲ್‍ಗಳಲ್ಲಿ ನೀರಿನ ಬಾಟಲಿಗಳು ಒಂದೇ ಬೆಲೆಯಲ್ಲಿ ಲಭ್ಯವಿರಲಿದೆ ಎಂದು ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

    ಈ ಬಗ್ಗೆ ಸೋಮವಾರದಂದು ಟ್ವೀಟ್ ಮಾಡಿರೋ ಪಾಸ್ವಾನ್, ವಿವಿಧ ಕಡೆ ನೀರಿನ ಬಾಟಲಿಯನ್ನು ಬೇರೆ ಬೇರೆ ದರಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಇಲಾಖೆಯಡಿ ಬರುವ ಗ್ರಾಹಕರ ವೇದಿಕೆಗೆ ಅನೇಕ ದೂರುಗಳು ಬರುತ್ತಿವೆ. ಕಂಪೆನಿಗಳು ಒಂದೇ ರೀತಿಯ ಮಿನರಲ್ ವಾಟರ್ ಬಾಟಲಿಗಳನ್ನು ಏರ್‍ಪೋರ್ಟ್ ಮಾಲ್‍ಗಳಂತಹ ವಿವಿಧ ಸ್ಥಳಗಳಲ್ಲಿ ವಿವಿಧ ದರದಲ್ಲಿ ಮಾರಲು ಅವುಗಳ ಮೇಲೆ ಬೇರೆ ಬೇರೆ ಎಂಆರ್‍ಪಿಯನ್ನ ಮುದ್ರಿಸಿವೆ. ಈ ಬಗ್ಗೆ ವಿವರಣೆ ನೀಡುವಂತೆ ಕಂಪೆನಿಗಳಿಗೆ ಇಲಾಖೆ ಸೂಚಿಸಿದೆ ಎಂದು ಹೇಳಿದ್ದಾರೆ.

    ಅಲ್ಲದೆ ಇನ್ಮುಂದೆ ಏರ್‍ಪೋರ್ಟ್, ಮಾಲ್‍ಗಳು ಹಾಗೂ ಹೋಟೆಲ್‍ಗಳಲ್ಲಿ ಮಿನರಲ್ ವಾಟರ್ ಬಾಟಲಿಗಳು ಒಂದೇ ದರದಲ್ಲಿ ಸಿಗಲಿವೆ ಎಂದು ಪಾಸ್ವಾನ್ ಹೇಳಿದ್ದಾರೆ.

    ಕಳೆದ ವರ್ಷ ಅಕ್ಟೋಬರ್‍ನಲ್ಲಿ ಪಾಸ್ವಾನ್, ಏರ್‍ಪೋರ್ಟ್, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‍ಗಳಲ್ಲಿ ಎಂಆರ್‍ಪಿಗಿಂತ ಹೆಚ್ಚಿನ ದರದಲ್ಲಿ ತಂಪು ಪಾನೀಯ ಹಾಗು ನೀರಿನ ಬಾಟಲಿಗಳನ್ನು ಮಾರಾಟ ಮಾಡಿದರೆ ಜೈಲು ಶಿಕ್ಷೆ ಹಾಗೂ ದಂಡ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದರು. ಎಂಆರ್‍ಪಿ ಗಿಂತ ಹೆಚ್ಚಿನ ಹಣ ಪಡೆಯುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಆದ್ರೂ ಏರ್‍ಪೋರ್ಟ್, ಮಲ್ಟಿಪ್ಲೆಕ್ಸ್ ಹಾಗೂ ಹೋಟೆಲ್‍ಗಳಲ್ಲಿ ನೀರಿನ ಬಾಟಲಿಗಳನ್ನ ಎಂಆರ್‍ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಹೇಳಿದ್ದರು.

    ನೀರಿನ ಬಾಟಲಿಗಳನ್ನು ನಿಗದಿತ ದರಕ್ಕಿಂತ ಶೇ.10 ರಿಂದ ಶೇ.20 ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗ್ತಿದೆ. ಕೆಲವೊಮ್ಮೆ ನೀರಿನ ಬಾಟಲಿಗಳ ಮೇಲೆ ಎಂಆರ್‍ಪಿಯನ್ನು ನಮೂದಿಸಿರುವುದಿಲ್ಲ. ಅಲ್ಲದೆ ತಂಪು ಪಾನೀಯವನ್ನು ಹೆಚ್ಚಿನ ಬೆಲೆಗೆ ಮಾರ್ತಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ನಮಗೆ ಎಲ್ಲಾ ರೀತಿಯ ಅಧಿಕಾರವಿದೆ. ಗ್ರಾಹಕರು ಈ ಬಗ್ಗೆ ದೂರು ನೀಡಿದ್ರೆ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ. ಅವರಿಗೆ ದಂಡ ಹಾಕಲಾಗುತ್ತದೆ. ಅಲ್ಲದೆ ಜೈಲು ಶಿಕ್ಷೆ ಕೂಡ ಇದೆ ಎಂದು ಪಾಸ್ವಾನ್ ಹೇಳಿದ್ದರು.