Tag: Ramjan

  • 500 ಮಂದಿ ಶಾಮಿಯಾನ ಕಾರ್ಮಿಕರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ರದ್ದು

    500 ಮಂದಿ ಶಾಮಿಯಾನ ಕಾರ್ಮಿಕರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ರದ್ದು

    – ಆಕ್ರೋಶ ವ್ಯಕ್ತವಾದ ಹಿನ್ನೆಲೆ ಕಾರ್ಯಕ್ರಮ ರದ್ದು

    ಹುಬ್ಬಳ್ಳಿ: ಧಾರವಾಡ ಜಿಲ್ಲಾಡಳಿತ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅನುಮತಿಯ ಪಾಸ್ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ 500 ಜನ ಶಾಮಿಯಾನ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

    ನಗರದ ಶ್ರೀನಿವಾಸ ಗಾರ್ಡನ್‍ನಲ್ಲಿ 500 ಜನ ಶಾಮಿಯಾನ ಕಾರ್ಮಿಕರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ 500 ಶಾಮಿಯಾನ ಕಾರ್ಮಿಕರನ್ನು ಒಂದೇ ಕಡೆ ಸೇರಿಸಿ, ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್‍ನಲ್ಲಿ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡುತ್ತಿದ್ದರು. ಆದರೆ ಇದೀಗ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

    ಸೋಮವಾರ ರಂಜಾನ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನಗಳಲ್ಲಿ ಕೇವಲ ಐದು ಜನರಿಗೆ ಮಾತ್ರ ಈದ್-ಉಲ್-ಫಿತರ್ ನಮಾಜ್ ಮಾಡಲು ಅನುಮತಿ ನೀಡಿ ಎಂದು ಸಮುದಾಯದವರು ಮನವಿ ಮಾಡಿದ್ದರು. ಈ ವಿಷಯ ನನ್ನ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ.

    ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ತಾಫ್ ಹುಸೇನ ಹಳ್ಳೂರ ಆಕ್ಷೇಪ ವ್ಯಕ್ತಪಡಿಸಿದ್ದು, ಕೇವಲ 5 ಜನರಿಗೆ ಸೇರಲು ಅನುಮತಿ ಕೊಡದ ಜಿಲ್ಲಾಡಳಿತ ಈಗ 500ಕ್ಕೂ ಹೆಚ್ಚು ಜನರನ್ನು ಸೇರಲು ಅನುಮತಿ ನೀಡಿದೆ. ಯಾವ ಮಾನದಂಡದ ಮೇಲೆ ಅನುಮತಿ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದರು. ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಈ ಕಾರ್ಯಕ್ರಮವನ್ನು ಇದೀಗ ರದ್ದು ಮಾಡಲಾಗಿದೆ.

  • ರಂಜಾನ್ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಂತೆ ಶ್ರೀರಾಮ ಸೇನಾ ಮನವಿ

    ರಂಜಾನ್ ವೇಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದಂತೆ ಶ್ರೀರಾಮ ಸೇನಾ ಮನವಿ

    ಹುಬ್ಬಳ್ಳಿ: ಕೊರೊನಾ ವೈರಸ್ ಹರಡುವಿಕೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನಲೆ ಮುಸ್ಲಿಂ ಬಾಂಧವರ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬಾರದು ಎಂದು ಶ್ರೀರಾಮ ಸೇನಾ ಮುಖಂಡರು ತಹಶಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

    ರಾಜ್ಯದಲ್ಲಿ ಹಾಗೂ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಚಿಂತಾಜನಕ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯಾವುದೇ ಸಾಮೂಹಿಕ ಪ್ರಾರ್ಥನೆ, ಸಭೆ ಸಮಾರಂಭ ನಡೆಸದಂತೆ ದೇವಸ್ಥಾನ, ಚರ್ಚ್, ಮಸೀದಿ ಬಂದ್ ಮಾಡಿಸಿದೆ. ಈ ಹಿನ್ನೆಲೆಯಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಸಹ ಯಾವುದೇ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸದೇ ಸಾರ್ವಜನಿಕ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದರು.

    ಈ ಹಿಂದೆ ಮುಸ್ಲಿಂ ಸಮುದಾಯದವರು ರಂಜಾನ್ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದರು. ಇದೀಗ ಶ್ರೀರಾಮ ಸೇನಾದಿಂದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಬಾರದು ಎಂದು ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ರಾಜು ಗಾಡಗೋಳಿ, ಅಣ್ಣಪ್ಪ ದಿವಟಿಗಿ, ಮಂಜು ಕಾಟಕರ, ಸಿದ್ದು ರಾಯನಾಳ, ಅಭಿಷೇಕ ಕಾಂಬಳೆ ಸೇರಿದಂತೆ ಇತರರು ಇದ್ದರು.

  • ಮೇ 3ರವರೆಗೆ ಭಟ್ಕಳದಲ್ಲಿ ನಿಯಮ ಸಡಿಲಿಕೆ ಇಲ್ಲ: ಶಿವರಾಮ್ ಹೆಬ್ಬಾರ್

    ಮೇ 3ರವರೆಗೆ ಭಟ್ಕಳದಲ್ಲಿ ನಿಯಮ ಸಡಿಲಿಕೆ ಇಲ್ಲ: ಶಿವರಾಮ್ ಹೆಬ್ಬಾರ್

    – ರಂಜಾನ್‍ಗೂ ಯಾವುದೇ ವಿನಾಯಿತಿ ಇಲ್ಲ

    ಕಾರವಾರ: ಮೇ 3ರ ತನಕ ಭಟ್ಕಳದಲ್ಲಿ ಕಟ್ಟುನಿಟ್ಟಿನ ನಿಯಮ ಮುಂದುವರಿಯಲ್ಲಿದ್ದು, ರಂಜಾನ್ ಹಬ್ಬಕ್ಕೂ ಇದರಿಂದ ವಿನಾಯಿತಿ ಇಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

    ಇಂದು ಸಂಜೆ ಭಟ್ಕಳಕ್ಕೆ ಆಗಮಿಸಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಭಟ್ಕಳದ ತಂಜೀಂ ಸಂಸ್ಥೆ ರಂಜಾನ್ ಹಬ್ಬಕ್ಕಾಗಿ ತಮಗೆ ದಿನದಲ್ಲಿ ಕನಿಷ್ಟ 2 ಗಂಟೆಯಾದರೂ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಮನವಿಯನ್ನು ನಯವಾಗಿ ತಿರಸ್ಕರಿಸಿದ ಸಚಿವರು ಮೇ 3ರ ತನಕ ನಿಯಮದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಮುಸ್ಲಿಂ ಮಾತ್ರವಲ್ಲದೇ ಹಿಂದೂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಯಾವುದೇ ಧರ್ಮದ ಸಾರ್ವಜನಿಕವಾಗಿ ಧಾರ್ಮಿಕ ಹಬ್ಬಗಳ ಆಚರಣೆಗೆ ಅವಕಾಶವಿಲ್ಲ ಎಂದರು.

    ಮೇ 3ರವರೆಗೂ ಈ ಹಿಂದಿನ ನಿಯಮಗಳೇ ಜಾರಿಯಲ್ಲಿರಲಿವೆ. ನಂತರದ ದಿನಗಳಲ್ಲಿ ಜಿಲ್ಲೆಯ ಮತ್ತು ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿ, ರಾಜ್ಯ ಮತ್ತು ಜಿಲ್ಲೆಗಳ ಬೆಳವಣಿಗೆಗಳನ್ನು ಗಮನಿಸಿ ಚರ್ಚೆ ನಡೆಸಿ ತಿಳಿಸಲಾಗುವುದು. ಏಪ್ರಿಲ್ 26, 27ರೊಳಗೆ ನಮ್ಮ ಉತ್ತರ ಕನ್ನಡ ಜಿಲ್ಲೆ ಕೊರೊನಾ ಮುಕ್ತವಾಗಲು ಎಲ್ಲಾ ಹೋರಾಟ ನಡೆಸುತ್ತಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಕೇಳಿಕೊಂಡರು.

    ಡಿಸ್ಚಾರ್ಜ್ ಸಮ್ಮರಿ ವಿತರಣೆ
    ಭಟ್ಕಳದಲ್ಲಿ ಪತ್ತೆಯಾದ ಮೊದಲ 3 ಪ್ರಕರಣಗಳ ಸೋಂಕಿತರು ಗುಣಮುಖರಾಗಿ ಬಂದಿದ್ದು, ಅವರಿಗೆ ಸಚಿವ ಶಿವರಾಮ್ ಹೆಬ್ಬಾರ್ ಡಿಸ್ಚಾರ್ಜ್ ಸಮ್ಮರಿ ವಿತರಿಸಿ ಅಭಿನಂದಿಸಿದರು. ಮನೆಯಲ್ಲಿದ್ದು ಇತರರಲ್ಲೂ ಜಾಗೃತಿ ಮೂಡಿಸುವಂತೆ ಮನವಿ ಮಾಡಿ ಆಸ್ಪತ್ರೆಯಿಂದ ಬೀಳ್ಕೊಟ್ಟರು.

    ಈ ವೇಳೆ ಶಾಸಕ ಸುನೀಲ್ ನಾಯ್ಕ, ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಆರೋಗ್ಯಾಧಿಕಾರಿ ಅಶೋಕ ಕುಮಾರ್, ನೊಡಲ್ ಅಧಿಕಾರಿ ಡಾ. ಶರದ್ ನಾಯಕ, ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಡಿಎಚ್‍ಒ ಡಾ.ಮೂರ್ತಿರಾಜ್ ಭಟ್, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇದ್ದರು.

  • ರಂಜಾನ್ ಸ್ಪೆಷಲ್ – ಬ್ರೆಡ್ ಚಿಕನ್ ರೋಲ್ ಮಾಡೋದು ಹೇಗೆ?

    ರಂಜಾನ್ ಸ್ಪೆಷಲ್ – ಬ್ರೆಡ್ ಚಿಕನ್ ರೋಲ್ ಮಾಡೋದು ಹೇಗೆ?

    ಇದೇ ತಿಂಗಳು ರಂಜಾನ್ ಹಬ್ಬವಿದೆ. ಪ್ರತಿ ವರ್ಷ ರಂಜಾನ್ ಗೆ ಚಿಕನ್, ಬಿರಿಯಾನಿ, ಕಬಾಬ್, ಚಿಕನ್ ಫ್ರೈ ಮಾಡುತ್ತಾರೆ. ಪ್ರತಿವರ್ಷ ಒಂದೇ ತರಹದ ಅಡುಗೆ ಮಾಡಿ ನಿಮಗೂ ಬೇಸರವಾಗಿರಬಹುದು. ಹೀಗಾಗಿ ಈ ವರ್ಷ ರಂಜಾನ್ ಸ್ಪೆಷಲ್ ಅಡುಗೆ ಬ್ರೆಡ್ ಚಿಕನ್ ರೋಲ್ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು
    1. ಬೋನ್ ಲೆಸ್ ಚಿಕನ್ – 300 ಗ್ರಾಂ
    2. ಮೊಸರು – ಅರ್ಧ ಕಪ್
    3. ಬೆಳ್ಳುಳ್ಳಿ ಪೇಸ್ಟ್ – 1 ಚಮಚ
    4. ಕೆಂಪು ಮೆಣಸಿನಕಾಯಿ ತರಿ – 1 ಚಮಚ
    5. ತಂದೂರಿ ಮಸಾಲ ಪುಡಿ – 1 ಚಮಚ
    6. ಹಾಲಿನ ಗಟ್ಟಿ ಕೆನೆ
    7. ಎಣ್ಣೆ – ಕರಿಯಲು
    8. ಉಪ್ಪು – ರುಚಿಗೆ ತಕ್ಕಷ್ಟು
    9. ಬ್ರೆಡ್ ಸ್ಲೈಸ್ – ಬೇಕಾದಷ್ಟು
    10. ಮೊಟ್ಟೆ – 2
    11. ಬ್ರೆಡ್ ಕ್ರಮ್ಸ್ – ಅರ್ಧ ಕಪ್

    ಮಾಡುವ ವಿಧಾನ
    * ಸಣ್ಣಗೆ ಕತ್ತರಿಸಿದ ಅಥವಾ ಕ್ಯೂಬ್ ಆಕಾರದಲ್ಲಿ ಕತ್ತರಿಸಿದ ಬೋನ್‍ಲೆಸ್ ಚಿಕನ್, ಮೊಸರು, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೆಂಪು ಮೆಣಸಿನಕಾಯಿ ತರಿ, ತಂದೂರಿ ಮಸಾಲಾ ಪುಡಿ ಎಲ್ಲವನ್ನು ಸೇರಿಸಿ ಕಲಸಿರಿ.
    * ಕಲಸಿದ ಚಿಕನ್ ಮಸಾಲಾವನ್ನು 30 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಲು ಫೀಸರ್‍ನಲ್ಲಿಡಿ.
    * ನಂತರ 1 ಪ್ಯಾನ್ ಗೆ 2 ಚಮಚ ಎಣ್ಣೆ ಹಾಕಿ ಮ್ಯಾರಿನೇಟ್ ಆದ ಚಿಕನ್ ಹಾಕಿ ಫ್ರೈ ಮಾಡಿ.
    * ಬಳಿಕ ಬ್ರೆಡ್ ಸ್ಲೈಸ್ ನ ಅಂಚು ಕತ್ತರಿಸಿ ಸ್ವಲ್ಪ ಗಟ್ಟಿ ಕೆನೆಯನ್ನು ಸವರಿ ಫ್ರೈ ಮಾಡಿದ ಚಿಕನ್ ಫಿಲ್ ಮಾಡಿ ರೋಲ್ ಮಾಡಿ.
    * 2 ಮೊಟ್ಟೆ ಒಡೆದು ಬೀಟ್ ಮಾಡಿ ಅದರಲ್ಲಿ ರೋಲ್ ಡಿಪ್ ಮಾಡಿ.
    * ಬ್ರೆಡ್ ಕ್ರಮ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
    * ಸಾಸ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬ್ರೆಡ್ ಚಿಕನ್ ರೋಲ್ ಸವಿಯಿರಿ.