ಕೋಲಾರ: ಟಾಲಿವುಡ್ ನಟ ಎನ್‍ಟಿಆರ್ ಹಾಡಿಗೆ ರಮೇಶ್ ಕುಮಾರ್ ನೃತ್ಯ ಮಾಡಿರಂಜಿಸಿದ್ದಾರೆ.
ಎನ್‍ಟಿಆರ್‌ನ ರೆಂಡು ವೇಲ ರೆಂಡುವರಕು ಚೂಡಲೇದು ಹಾಡಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದ ರಸ ಮಂಜರಿ ಕಾರ್ಯಕ್ರಮದಲ್ಲಿ ಬಿಂದಾಸ್ ಸ್ಟೆಪ್ ಹಾಕಿದ್ದಾರೆ.
ಶ್ರೀನಿವಾಸಪುರ ಹಬ್ಬ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ ಮಂಜರಿ ಕಾರ್ಯಕ್ರಮದ ವೇಳೆ ಅವರು ಇತ್ತೀಚಿನ ಯುವಕರನ್ನು ನಾಚಿಸುವಂತೆ ವಿವಿಧ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ.
ಕಳೆದ ರಾತ್ರಿ ನಡೆದ ಶ್ರೀನಿವಾಸಪುರ ಹಬ್ಬದ ಕೊನೆಯ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿತ್ತು. ಶ್ರೀನಿವಾಸಪುರ ಹಬ್ಬವು ರಮೇಶ್ ಕುಮಾರ್ ನೇತೃತ್ವದಲ್ಲಿ ನಡೆದಿದೆ.
ವಿಜಯಪುರ: ಹಿಂದಿ ಭಾಷೆ ವಿಚಾರವಾಗಿ ನಟ ಸುದೀಪ್ -ಅಜಯ್ ದೇವಗನ್ ಮಧ್ಯೆ ನಡೆಯುತ್ತಿರುವ ವಿವಾದದಿಂದ ಜನರಿಗೆ ಪ್ರಯೋಜನವಿಲ್ಲ. ಇವೆಲ್ಲ ಕಟ್ಟಿಕೊಂಡು ಏನ್ ಮಾಡ್ತೀರಾ? ಎಂದು ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, 108 ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಅವುಗಳಿಗೆ ನಾವು ಪರಿಹಾರ ಹುಡುಕೋಣ. ಇವೆಲ್ಲ ಕಟ್ಟಿಕೊಂಡು ಏನಾಗಬೇಕು. ಇದು ಜನರ ಗಮನ ಬೇರೆಡೆ ಸೆಳೆಯೋದಕ್ಕೆ ಸೃಷ್ಟಿ ಮಾಡುವಂತಹ ವಿವಾದ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ
ಇದೇ ವೇಳೆ ದಲಿತ ಸಿಎಂ ಬಗ್ಗೆ ರಮೇಶ್ ಜಿಗಜಿಣಗಿ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾಕಪ್ಪಾ ಅವೆಲ್ಲಾ ಚರ್ಚೆ? ಯಾವ ಪಾರ್ಟಿ ಆಯ್ಕೆ ಆಗುತ್ತೋ- ಆ ಪಾರ್ಟಿಯವರು ಏನು ತೀರ್ಮಾನ ಮಾಡ್ತಾರೋ? ಸುಮ್ಮನೆ ಅವೆಲ್ಲಾ ಮಾತನಾಡುವುದರಿಂದ ಏನು ಶಕ್ತಿ ಬರುತ್ತೆ? ನಾನು ಸಿಎಂ ಆಕಾಂಕ್ಷಿ ಅಲ್ಲದಿರುವುದರಿಂದ ದಲಿತ ಸಿಎಂ ಮಾಡಿದರೆ, ಖುಷಿ ಪಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್
ಬೆಂಗಳೂರು: ವಿಧಾನಸಭೆ ಕಲಾಪ ಇವತ್ತು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಪ್ರತಿಷ್ಠೆಗೆ ಬಲಿಯಾಯಿತು. ನಿನ್ನೆ ವಿಧಾನಸಭೆ ಕಲಾಪದಲ್ಲಿ ಸಚಿವ ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಶುರುವಾದ ಜಟಾಪಟಿ ಇವತ್ತೂ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಕಲಾಪವನ್ನು ಮೂರು ಬಾರಿ ಮುಂದೂಡಿದರೂ ಕಲಹ ನಿಲ್ಲದೇ ಇಡೀ ದಿನ ವ್ಯರ್ಥವಾಯಿತು.
ಇವತ್ತು ಬೆಳಗ್ಗೆ ವಿಧಾನಸಭೆ ಕಲಾಪ ಆರಂಭ ಆಗುತ್ತಿದ್ದಂತೆಯೇ ಮತ್ತೆ ರಮೇಶ್ ಕುಮಾರ್ ಮತ್ತು ಸುಧಾಕರ್ ನಿಂದನೆ ವಿಷಯ ಪ್ರಸ್ತಾಪವಾಗಿ ಗದ್ದಲ ಸೃಷ್ಟಿಯಾಯಿತು. ರಮೇಶ್ ಕುಮಾರ್ ಅವರನ್ನು ಅಮಾನತು ಮಾಡುವಂತೆ ಸಚಿವ ಈಶ್ವರಪ್ಪ ಅವರು ಸ್ಪೀಕರ್ ಕಾಗೇರಿಗೆ ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ಬೆಂಬಲ ನೀಡಿದರು. ಇತ್ತ ಕಾಂಗ್ರೆಸ್ ನಿಂದಲೂ ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಮೇಲಿನ ಚರ್ಚೆಗೆ ಸಿದ್ದರಾಮಯ್ಯ ಆಗ್ರಹ ಮಂಡಿಸಿದರು. ಈ ವೇಳೆ ಉಭಯ ಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಸದನ ಸಾಕ್ಷಿಯಾಯ್ತು.
ಗದ್ದಲದ ನಡುವೆಯೇ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಎರಡು ಹಕ್ಕುಚ್ಯುತಿ ನೋಟಿಸ್ ಕೊಟ್ಟಿರುವ ಬಗ್ಗೆ ಸ್ಪೀಕರ್ ಕಾಗೇರಿಯವರು ಸದನದ ಗಮನಕ್ಕೆ ತಂದರು. ಈ ನೋಟಿಸ್ ಗಳ ಮೇಲಿನ ಚರ್ಚೆಗೆ ಪ್ರಶ್ನೋತ್ತರ ವೇಳೆಯ ಬಳಿಕ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ಹೇಳಿದರು. ನಮ್ಮ ನೋಟಿಸ್ ಮೊದಲು ಚರ್ಚೆಯಾಗಬೇಕೆಂದು ಉಭಯ ಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಸದನದಲ್ಲಿ ಗದ್ದಲ, ಕೋಲಾಹಲ ನಿಲ್ಲದೇ ಮುಂದುವರಿದಿತ್ತು. ಪರಿಣಾಮ ಸ್ಪೀಕರ್ ಸದನವನ್ನು 15 ನಿಮಿಷ ಮುಂದೂಡಿದರು.
ಮತ್ತೆ ಕಲಾಪ ಆರಭವಾಗಿದ್ದು ಒಂದು ತಾಸಿನ ನಂತರ. ಕಲಾಪ ಪುನರಾರಂಭವಾದರೂ ಮತ್ತೆ ಗದ್ದಲ ಮುಂದುವರಿಯಿತು. ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಮೇಲೆ ಪ್ರಸ್ತಾವ ಮಂಡಿಸಲು ಸಿದ್ದರಾಮಯ್ಯ ಮುಂದಾದಾಗ ಸಚಿವ ಸುಧಾಕರ್ ವಿರೋಧ ವ್ಯಕ್ತಪಡಿಸಿದರು. ಸಂವಿಧಾನದ ಮೇಲೆ ತಮ್ಮ ಚರ್ಚೆ ಇನ್ನೂ ಮುಗಿದಿಲ್ಲ. ಚರ್ಚೆ ಮುಗಿದ ಮೇಲೆ ಪ್ರಸ್ತಾವದ ಚರ್ಚೆಗೆ ಅವಕಾಶ ಕೊಡಿ ಎಂದು ಸುಧಾಕರ್ ಪಟ್ಟು ಹಿಡಿದರು. ಎರಡೂ ಕಡೆಯೂ ಪ್ರತಿಷ್ಠೆ ಮುಂದುವರೆದು ಕಲಾಪ ಗದ್ದಲದ ಗೂಡಾಯಿತು.
ಎರಡೂ ಕಡೆಯವರೂ ತಮ್ಮ ಪಟ್ಟು ಸಡಿಲಗೊಳಿಸಲಿಲ್ಲ. ಪರಿಣಾಮ ಸದನವನ್ನು ಮೂರು ಗಂಟೆಗೆ ಮುಂದೂಡಲಾಯ್ತು. ಮೂರು ಗಂಟೆ ಬಳಿಕ ಕಲಾಪ ಮತ್ತೆ ಸೇರಿದರೂ ಸದನದ ಸನ್ನಿವೇಶ ಬದಲಾಗಲಿಲ್ಲ. ಕಲಾಪದಲ್ಲಿ ಮತ್ತೆ ಕಲಹ, ಕೋಲಾಹಲ ಸೃಷ್ಟಿಯಾಯಿತು. ಕೊನೆಗೆ ಸ್ಪೀಕರ್ ಕಲಾಪವನ್ನು ನಾಳೆಗೆ ಮುಂದೂಡಿದರು. ಆ ಮೂಲಕ ಇಡೀ ದಿನದ ಕಲಾಪ ಉಭಯ ಪಕ್ಷಗಳ ಪ್ರತಿಷ್ಠೆಗೆ ಬಲಿಯಾಯಿತು. ಈ ಮಧ್ಯೆ ಸ್ಪೀಕರ್ ಆಡಳಿತ ಪಕ್ಷದವರ ಜೊತೆ ಸಭೆ ನಡೆಸಿದರೂ ಸುಗಮ ಕಲಾಪ ಸಾಧ್ಯವಾಗಲಿಲ್ಲ.
ರಮೇಶ್ ಕುಮಾರ್ ಗೈರು: ಈ ಮಧ್ಯೆ ರಮೇಶ್ ಕುಮಾರ್ ಸದನಕ್ಕೆ ಗೈರಾಗಿದ್ದು ಎದ್ದು ಕಾಣುತ್ತಿತ್ತು. ರಮೇಶ್ ಕುಮಾರ್ ಅವರು ವಿಧಾನಸೌಧಕ್ಕೆ ಬಂದಿದ್ದರೂ ಇವತ್ತಿನ ಕಲಾಪಕ್ಕೆ ಬಾರದೇ ಮೊಗಸಾಲೆಯಲ್ಲೇ ಕೂತಿದ್ರು. ರಮೇಶ್ ಕುಮಾರ್ ಗೈರಿಗೆ ಕಲಾಪದೊಳಗೆ ಬಿಜೆಪಿ ಸದಸ್ಯರು ಧ್ವನಿ ಜೋರು ಮಾಡಿ ತೀವ್ರ ಟೀಕೆ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು. ರಮೇಶ್ ಕುಮಾರ್ ಪಲಾಯನವಾದಿ. ಹಾಗಾಗಿ ಇವತ್ತು ಅವರು ಸದನಕ್ಕೆ ಬಂದಿಲ್ಲ. ಎಲ್ಲಿ ಪಲಾಯನವಾದಿ ರಮೇಶ್ ಕುಮಾರ್ ಎಂದು ಬಿಜೆಪಿಯ ರೇಣುಕಾಚಾರ್ಯ ಮತ್ತಿತರ ಸದಸ್ಯರು ಕೂಗಿದ ಪ್ರಸಂಗ ನಡೆಯಿತು.
ಬೆಂಗಳೂರು: ಎಚ್‍ಕೆ ಪಾಟೀಲ್ ಮಾತನಾಡುತ್ತಿದ್ದಾಗ ರಮೇಶ್ ಕುಮಾರ್ ಸ್ಪೀಕರ್ ಕೆಟ್ಟು ಹೋಗಿದೆ ಎಂದು ಹೇಳಿದ ಪ್ರಸಂಗ ಇಂದು ವಿಧಾನಸಭಾ ಕಲಾಪದಲ್ಲಿ ನಡೆಯಿತು.
ವಿಧಾನಸಭೆಯಲ್ಲಿ ಎಚ್‍ಕೆ ಪಟೇಲ್ ಮಾತನಾಡುತ್ತಿದ್ದಾಗ ಸರಿಯಾಗಿ ಕೇಳಿಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ಸ್ಪೀಕರ್, “ಪಾಟೀಲ್ ಅವರ ಧ್ವನಿ ಕೇಳಿಸುತ್ತಿಲ್ಲ. ಇಲ್ಲಿ ಮೈಕ್ ಕೆಟ್ಟೋದರೆ, ಅಲ್ಲಿ ಸ್ಪೀಕರ್ ಕೆಟ್ಟೋಗಿದೆ ಅಂತಾರೆ. ಹಾಗಾಗಿ ಮೈಕ್ ಚೆಕ್ ಮಾಡಿಕೊಳ್ಳಿ” ಎಂದು ವ್ಯಂಗ್ಯವಾಡಿದರು. ಸ್ಪೀಕರ್ ಅವರ ಈ ಮಾತಿಗೆ ಸದನ ಒಮ್ಮೆ ನಗೆಗಡಲಲ್ಲಿ ತೇಲಾಡಿತು.
ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ನಿಮಗೆ ಇಲ್ಲಿ ಕೂತವರು ಯಾರಾದ್ರೂ ಸ್ಪೀಕರ್ ಕೆಟ್ಟೋಗಿದೆ ಎಂದು ಹೇಳಬಹುದು. ಆದರೆ ರಾಜ್ಯದ 6 ಕೋಟಿ ಜನ ಮಾತ್ರ ಸ್ಪೀಕರ್ ಸರಿಯಾಗಿದ್ದಾರೆ. ಅವರ ತಲೆ ಸರಿಯಾಗಿದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಆದರೆ ಇಲ್ಲಿ ಎಲ್ಲರೂ ನಿಮಗೆ ಹಾಗೆ ಅನ್ನಬೇಕು ಎಂದು ಅಪೇಕ್ಷೆ ಮಾಡಿದರೆ ಆಗುವುದಿಲ್ಲ, ನೀವು ಕೂಡ ಅಂತಹ ಅಪೇಕ್ಷೆ ಮಾಡೋದು ಬೇಡ. ಹೀಗಾಗಿ ಆ 6 ಕೋಟಿ ಜನರ ಪರವಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಅಂದರು.
ನಾನು ನಿಮ್ಮನ್ನು ಅಭಿನಂದಿಸಲು ಕಾರಣ ಪಕ್ಷಾಂತರದ ಮೂಲಕ ಸಂವಿಧಾನವನ್ನು ಯಾರೂ ತಿರಸ್ಕಾರ, ಅಗೌರವಿಸಿದ್ದಾರೆ, ಧಿಕ್ಕರಿಸಿದ್ದಾರೆಯೋ ಅವರಿಗೆ ನೀವು ತಕ್ಕುದಾದ ಶಾಸ್ತಿ ಮಾಡಿದ್ದೀರಿ. ಅದಕ್ಕೆ ನಿಮಗೆ ಅಭಿನಂದನೆಗಳು ಹೇಳಿ ತಮ್ಮ ಮಾತು ಮುಂದುವರಿಸಿದರು.
ಟ್ರೋಲ್‍ಗೊಳಗಾಗಿದ್ದ `ಸ್ಪೀಕರ್’..!
ಸಮ್ಮಿಶ್ರ ಸರ್ಕಾರ ಪತನಕ್ಕೂ ಮುನ್ನ ನಡೆದಿದ್ದ ರಾಜ್ಯ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ `ಸ್ಪೀಕರ್’ ಎಂಬ ಪದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‍ಗೊಳಗಾಗಿತ್ತು.
ವಿಧಾನಸಭೆ ಕಲಾಪ ಆರಂಭವಾದಾಗಿನಿಂದ ‘ಸ್ಪೀಕರ್’ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿತ್ತು. ಅಲ್ಲದೆ ಈ ವಿಚಾರದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಪರ ವಿರೋಧ ಚರ್ಚೆಗಳು ನಡೆಯುತ್ತಿತ್ತು. ಈ ಮಧ್ಯೆ ಯಕ್ಷಗಾನ ಸಂಘಟಕರೊಬ್ಬರು ನಮ್ಮ ಕಾರ್ಯಕ್ರಮದಲ್ಲಿ ‘ಸ್ಪೀಕರ್’ ಸರಿಯಿದೆ. ಸ್ಪೀಕರ್ ಸರಿ ಇಲ್ಲ ಎಂದು ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹೇಳಿ ಕಾರ್ಯಕ್ರಮದ ಪರ ಪ್ರಚಾರ ನಡೆಸಿದ್ದರು. ಈ ಪ್ರಚಾರ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಪತ್ರದಲ್ಲಿ ಏನಿತ್ತು?
ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪೆರ್ಡೂರು ಮೇಳದಿಂದ ‘ಶತಮಾನಂ ಭವತಿ’ ಯಕ್ಷಗಾನ ಪ್ರದರ್ಶನವಿದೆ. ಹಾಗಾಗಿ, ಸ್ಪೀಕರ್ ವಿಚಾರವನ್ನೇ ಇಟ್ಟುಕೊಂಡು ಹಾಸ್ಯ ರೀತಿಯಲ್ಲಿ ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ‘ಸ್ಪೀಕರ್’ ಸರಿ ಇಲ್ಲ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ರವೀಂದ್ರ ಕಲಾಕ್ಷೇತ್ರದ ಎಲ್ಲ ಸ್ಪೀಕರ್ ಗಳು ಸರಿ ಇವೆ ಎಂದು ನಾವು ತಿಳಿಸುತ್ತಿದ್ದೇವೆ. ಹಾಗಾಗಿ `ಶತಮಾನಂ ಭವತಿ’ ಯಕ್ಷಗಾನ ಪ್ರದರ್ಶನ ಸುಸೂತ್ರವಾಗಿ ಜರುಗಲಿದ್ದು, ವದಂತಿಗೆ ಕಿವಿಕೊಡದೆ ಬಂದು ಯಕ್ಷಗಾನ ವೀಕ್ಷಿಸಬೇಕು. ಮುಂದೆ ಇಂತಹ ವದಂತಿಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,’ ಎಂದು ಯಕ್ಷಗಾನ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದರು.
ಕೋಲಾರ: ಕೆಪಿಎಂಇ ಮಸೂದೆಗೆ ವಿರೋಧ ವ್ಯಕ್ತಪಡಿಸಿದವರ ವಿರುದ್ಧ ಅರೋಗ್ಯ ಸಚಿವ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದ ಡಿಸಿಸಿ ಬ್ಯಾಂಕ್ ನಿಂದ ಮಹಿಳಾ ಸಂಘಗಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಣ ಖರ್ಚು ಮಾಡಿ ರೋಗಿಯ ಚಿಕಿತ್ಸೆ ಫಲಿಸದೆ ಪ್ರಾಣ ಹೋದಾಗ ಶವ ನೀಡಲು ಖಾಸಗಿ ಆಸ್ಪತ್ರೆಯವರು ಹಣ ಕೇಳ್ತಾರೆ. ಇತ್ತ ಹಣನೂ ಹೊಯ್ತು. ಜೀವವು ಹೋಯ್ತು. ಇದನ್ನ ಸರ್ಕಾರ ಅಂತಾ ಕರೆತ್ತೀವಾ? ಇದು ಒಂದು ರಾಜ್ಯನಾ? ಈ ಸೌಭಾಗ್ಯಕ್ಕೆ ನಾನು ಮಂತ್ರಿಯಾಗಿರಬೇಕಾ? ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಇಂತಹ ನೋವನ್ನು ಕರ್ನಾಟಕದ ಆನೇಕ ಕುಟುಂಬಗಳು ಅನುಭವಿಸಿವೆ. ರೋಗಿಯನ್ನ ಬದುಕಿಸಿಕೊಳ್ಳಬೇಕು ಅಂತಾ ಪ್ರಾಣ ಒತ್ತೆ ಇಟ್ಟು ಸಾಲ ಮಾಡಿ ಭಿಕ್ಷೆ ಬೇಡಿ ಹಣ ಕೊಟ್ಟಿರುತ್ತೀರಾ. ಆದ್ರೆ ಶವದ ಎದುರು ಮೊದಲು ನಮ್ಮ ಹಣ ಕೊಡಿ ಎನ್ನುವುದು ಒಂದು ವೈದ್ಯ ವೃತ್ತಿನಾ? ದಯವಿಟ್ಟು ನಿಮ್ಮ ಕಾಲಿಗೆ ನಮಸ್ಕಾರ ಹಾಕುವೇ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ವೈದ್ಯ ವೃತ್ತಿಯ ಪಾವಿತ್ರತೆ ಕಾಪಾಡಿಕೊಳ್ಳಿ ಎಂದು ನೋವಿನಿಂದ ಸಚಿವರು ನುಡಿದರು.
ಬೆಂಗಳೂರು: ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ ಮಂಡನೆಯಾಗಲೇಬೇಕು. ವಿಧೇಯಕ ಮಂಡನೆಯಾಗದಿದ್ದರೆ ನಾನು ಸಚಿವ ಸ್ಥಾನದಲ್ಲಿ ಇರಲ್ಲ ಅಂತ ಸಿಎಂ ಎದುರೇ ಅಸಮಾಧಾನಗೊಂಡ ಆರೋಗ್ಯ ಸಚಿವ ರಮೇಶ್ ಕುಮಾರ್ ರಾಜೀನಾಮೆ ಬೆದರಿಕೆ ಹಾಕಿದ್ದಾರೆ.
ಯಾರದ್ದೋ ಪ್ರತಿಭಟನೆಗೆ ಹೆದರಿ ವಿಧೇಯಕ ಮಂಡನೆ ಆಗದಿದ್ದರೆ ಸರಿ ಹೋಗುವುದಿಲ್ಲ. ಜನಸಾಮಾನ್ಯರನ್ನ ನೋಡಿಕೊಂಡು ವಿಧೇಯಕ ಸಿದ್ಧಗೊಳಿಸಿರೋದು. ಸ್ಥಿತಿವಂತರ ಪರ ಸರ್ಕಾರ ನಿಲ್ಲಬಾರದು. ಮುಂದಿನ ವಾರ ವಿಧೇಯಕ ಮಂಡಿಸುವ ಬಗ್ಗೆ ಚರ್ಚೆ ಮಾಡೋಣ ಎಂದು ಸಿಎಂ ರಮೇಶ್ ಕುಮಾರ್ ಅವರನ್ನ ಸಮಾಧಾನಪಡಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಕನ್ನಡ ಸೌಧದ ಮುಂದೆ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಸಚಿವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ರು. ನೋ ರಿಯಾಕ್ಷನ್ ಎಂದು ಕೈ ಸನ್ನೆ ಮಾಡಿ ಹೊರಟು ಹೋದ್ರು. ವಿಧಾನಸಭೆ ಸಭಾಂಗಣದಲ್ಲಿ ಕಲಾಪ ಆರಂಭಕ್ಕೂ ಮುನ್ನ ಬಿಜೆಪಿ ಶಾಸಕರಾದ ಲಕ್ಷ್ಮಣ್ ಸವದಿ, ಸುರೇಶ್ ಕುಮಾರ್, ನಾರಾಯಣಸ್ವಾಮಿ, ಸತೀಶ್ ರೆಡ್ಡಿ, ತಿಪ್ಪಾರೆಡ್ಡಿ ಸಚಿವ ರಮೇಶ್ ಕುಮಾರ್ ಅವರನ್ನು ಸುತ್ತುವರಿದು ಮಾತುಕತೆ ನಡೆಸಿದ್ರು.
ಕೋಲಾರ: ಆರೋಗ್ಯ ಸಚಿವ ರಮೇಶ್‍ಕುಮಾರ್ ಅವರ ತವರು ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಜಿಲ್ಲಾಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಜನ ಮಕ್ಕಳು ಬಲಿಯಾಗಿದ್ದಾರೆ.
ಬರದ ನಾಡು ಕೋಲಾರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ, ಮಕ್ಕಳ ಬೆಳವಣಿಗೆ ಕುಂಠಿತ, ಪೋಷಕಾಂಶಗಳ ಕೊರತೆ, ತೂಕ ಕಡಿಮೆ ಸೇರಿ ವಿವಿಧ ಅನಾರೋಗ್ಯದಿಂದ ಶಿಶುಗಳು ಸಾವನ್ನಪ್ಪಿವೆ.
ಸೋಮವಾರ ಒಂದೇ ದಿನ ಮೂರು ಹಸುಗೂಸುಗಳ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿರುವ ಬಾಣಂತಿಯರು ಹಾಗೂ ಮಕ್ಕಳ ಪೋಷಕರಲ್ಲಿ ಆತಂಕ ಶುರುವಾಗಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಹೋಗಲು ಬಾಣಂತಿ ಮಹಿಳೆಯರು ಹಾಗೂ ಪೋಷಕರು ಚಿಂತನೆ ನಡೆಸಿದ್ದು, ಆಸ್ಪತ್ರೆ ವೈದ್ಯರ ವಿರುದ್ಧ ನವಜಾತ ಶಿಶುಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Would like to inform – sufficient pediatricians (4 nos) working in the hospital & no dearth of meds & equipment